ಭಾನುವಾರ, ಏಪ್ರಿಲ್ 17, 2011

ಮಗುವಿನ ನಿದ್ರೆ..!


ಅದು ಹೇಗೆ ಮಲಗಿದೆ
ನೋಡಿ...
ಅರೆಬಿರಿದ ಕಂಗಳಲಿ
ಅರ್ಧ ಲೋಕವ ತೆರೆದು !
ಚಂದಮಾಮನ ಕರೆಯುತ್ತಿದೆ
ಕೈಬೆರಳು !


ಹಾಗೇ ಕೇಳುತ್ತಿದೆ
ತಟ್ಟಿ ಮಲಗಿಸುವ
ಜೀಕುವ ಮರಗಳ ತೀಡನ
ಭೂಮಿಯ ತೊಟ್ಟಿಲಲ್ಲಿ
ಹಕ್ಕಿ ಚಿಲಿಪಿಲಿಯ
ಜೋಗುಳದ ಗಾನ
ಎಚ್ಚರವಿರದ ಕನಸುಗಳ
ಹಗಲು-ರಾತ್ರಿಯ ಪಯಣ


ಗಾಳಿ ಚಾಮರವಾಗಲಿ
ಸೋಕದಿರಲಿ...
ಹಾಲ್ದುಟಿಗೆ ನೋಣಗಳು !
ಆಗಸಕೆ ಸೆರಗು ಬರಲಿ !
ಮುತ್ತದಿರಲಿ..
ನಾಯಿ-ರಣಹದ್ದಿನ ಕಂಗಳು !
ಹೂವಾಗಲಿ.....
ಧೋ ಎಂದು ಸುರಿವ ಮಳೆಹನಿಗಳು


ಅವುಚಿಕೊಳ್ಳಲಿ ಭೂಮಿ !
ಬುಸುಗುಟ್ಟದಿರಲಿ ಬಿರುಗಾಳಿ !
ಹಠಮಾರಿ ಸುನಾಮಿ !
ಮಲಗಿದ ಮಗು ಮಲಗಿಯೇ ಇರಲಿ
ಬಣ್ಣವಿರಲಿ..
ಅಮ್ಮನಿಗೆ ಮಗುವಿನ ಕನಸಿರಲಿ !
 
-ರವಿ ಮೂರ್ನಾಡ್‍
--------------------------------------------------------------------------------------------------

ಅವಧಿ ಮಾಗ್:

5 ಕಾಮೆಂಟ್‌ಗಳು:

  1. ರವಿಯಣ್ಣ, ಬೀದಿಯಲಿ ಊಳಿಡುವ ನಾಯಿಗಳೂ ಕೂಡ ಕೆಲವೊಮ್ಮೆ ಅಮ್ಮನ ಮಡಿಲಲ್ಲಿ ತೂಕಡಿಸುವ ಪುಟ್ಟ ಹೃದಯದ 'ಕನಸು' ಹೊತ್ತ 'ನಿದ್ರೆ'(ಬೆಳವಣಿಗೆ)ಗೆ ಭಂಗ ತರಬಹುದೇನೋ ಅನಿಸುತ್ತದೆ. ಆದರೆ ಆ 'ಅಮ್ಮ' ಹಾಗಾಗಲು ಬಿಡಲಾರಳು. ಅದಂತೂ ನಿಜ. ಪೊರೆವ ಕೈಗಳೂ ಕೂಡ ಎಂಥಾ ಸುನಾಮಿಯನ್ನಾದರೂ ಎದುರಿಸಬಲ್ಲ ತಾಕತ್ತನ್ನು ಹೊಂದಿರುತ್ತವೆ, ಇದು ದಿಟ. ಹಕ್ಕಿಯ ಚಿಲಿಪಿಲಿಗಳೂ ಮಗುವಿನ ನಿದ್ರೆಗೆ ಜೋಗುಳ ಹಾಡಲಿ.
    ಮತ್ತೊಂದು ಅದ್ಭುತ ಕವನ ನಿಮ್ಮಿಂದ.

    ಪ್ರತ್ಯುತ್ತರಅಳಿಸಿ
  2. ಇದು ರಚ್ಚೆ ಹಿಡಿವ ಎಂಥ ಕಟುಕರಿಗೂ ಜೋಗುಳದ ಹಾಡು.

    ಬಡತನವೇ ಮೈ ಹೊದ್ದ ನಾಡ ಮೂಲ ಜೀವಿಯ ಪಾಡು.

    ಭಾಷಾ ಚತುರ, ಭಾವ ಸಂಕುರ, ಲಾಲಿತ್ಯ ಮೂರ್ನಾಡು!

    ಪ್ರತ್ಯುತ್ತರಅಳಿಸಿ
  3. ಭಾವಪರವಶರನ್ನಾಗಿಸುವ ಮುದ್ದಾದ ಕವಿತೆ.ಚಿರನಿದ್ರೆಗೆ ಹೋಗುವ ಮಗುವಿಗೂ ಜೀವ ಚೈತನ್ಯ ನೀಡಿ ಅದರ ನೋವು ನಲಿವುಗಳನ್ನು ಅನಾವರಣಮಾಡಿರುವುದು ಇಂಥ ಕವಿಗೆ ಮಾರ್ತವೇ ಸಾಧ್ಯವೇನೋ ಅನಿಸುವುದು.ಮನ ಕಲುಕುವ ಇಂಥ ಹತ್ತಾರು ಲಯಬದ್ಧ ಸಾಹಿತ್ಯಸೃಷ್ಟಿಯು ರವಿ ಸರ್ ಅವರಿಂದ ಆಗಿದ್ದು ಓದಿ ಆಸ್ವಾದನೆಗಳಿಸುತ್ತವೆ.ತಾಯೊಡಲಿಗೆ ಮಾತ್ರವೇ ಕಂದಮ್ಮನ ನೆನಪು,ಕನಸು,ಯಾತನೆ ಎಲ್ಲವೂ.ಮೂರ್ನಾಡು ಅವರ ಇಂಥ ಮಿಂಚಿನ ಕವಿತೆಗಳೆಂದರೆ ಪ್ರಾಣ ಜೀವಾಳ.ತುಂಬಾ ಇಷ್ಟವಾಯಿತು.ಅಳು ಭರಿಸಿತು.

    ಪ್ರತ್ಯುತ್ತರಅಳಿಸಿ
  4. ನನಗೊಮ್ಮೊಮ್ಮೆ ಒಂದೇ ಸಲಕ್ಕೆ ಕವಿತೆಯನ್ನು ಓದಲಾಗುವುದಿಲ್ಲ, ಏಕೆಂದರೆ ಭಾವುಕತೆಗೆ ಮನಸ್ಸಿನಿಂದ ಕಣ್ಣೀರು ತೊಟ್ಟಿಕ್ಕಿ ಮತ್ತೆ ಕವಿತೆಯ ಪ್ರಾರಂಭದಿಂದ ಓದಲು ಪ್ರಾರಂಭಿಸುತ್ತೇನೆ.. ಆ ರೀತಿಯ ಅನುಭವಗಳನ್ನು ಕೊಡುವ ಕವಿಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತೀರಿ ನೀವು, ರವಿಯಣ್ಣ ಅದ್ಭುತವಾದ ಕವಿತೆ.. ನಿಮ್ಮೊಳಗಿನ ಕಾವ್ಯ ಸರಸ್ವತಿಗೆ ಇಗೋ ನನ್ನ ಸಾಸ್ಟಾಂಗ ಪ್ರಣಾಮಗಳು.. ಭಾವಗಳನ್ನು ಹರಿಯಬಿಟ್ಟಿರುವ ಪರಿ ಹೃದಯಸ್ಪರ್ಶಿ.. ಆ ಮಗುವಿನ ಮುಗ್ಧತೆಯ ಚಿತ್ರಣ ಮೂಡಿಸುವ ಮೊದಲಾರ್ಧ ನಂತರದ ಭಾವಗಳಲ್ಲಿ ಕವಿತೆಯನ್ನು ಶೀರ್ಷಿಕೆಗೆ ಅಣಿ ಮಾಡಿಸಿ ನಿಲ್ಲಿಸುತ್ತದೆ.. ಆ ಮಗುವಿನ ಚಿರನಿಧ್ರೆಯನ್ನು ಚಿತ್ರಿಸಿರುವ ಪರಿ ಓದುಗನ ಕರುಳನ್ನು ಹಿಂಡಿದಂತೆನಿಸುತ್ತದೆ.. ಓದುಗ ಆ ಮಗುವಿನ ಅಮ್ಮನಾಗಿ ಆ ದುಃಖವನ್ನನುಭವಿಸುತ್ತಾನೆ ಅಲ್ಲಲ್ಲವೆ ಕವಿಯ ಸಾಮರ್ಥ್ಯ ಮೇರೆ ಮೀರುವುದು.. ಕಡೆಗೆ ಈ ಸಾಲು ’ಅಮ್ಮನಿಗೆ ಮಗುವಿನ ಕನಸಿರಲಿ !’ ಓದಿ ಮುಗಿಸುವಷ್ಟರಲ್ಲಿ ಕಣ್ಣೀರು ಇಣುಕಿ ಮನಸ್ಸನ್ನು ತೇವವಾಗಿಸುತ್ತದೆ.. ಅದ್ಭುತವಾದ ಕವಿತೆ..

    ಪ್ರತ್ಯುತ್ತರಅಳಿಸಿ