ಹರೆಯದ ಹುಡುಗಿ ನಡೆಯುವುದೆಂದರೆ....
ಮೌನದಿ ಹರಿವ ನದಿ
ಜೊತೆಯಲ್ಲೇ ಬಂದಂತೆ !
ರಭಸವಾಗಿ ಹರಿಯುವಾಗ
ಜಲಪಾತವಾಗಬೇಕು !
ಪ್ರವಾಹವಾಗಿ ಉಕ್ಕುವಾಗ
ತೇಲಾಡಬೇಕು !
ಹರೆಯದ ಹುಡುಗಿ ಮಾತನಾಡುವುದೆಂದರೆ.....
ಹರಿವ ನದಿ ಕ್ಷಣ ನಿಂತು
ಮುಗುಳ್ನಕ್ಕಂತೆ !
ಕಡಲ ಕಿನಾರೆಯ ತೆರೆಗಳು
ಕಾಲ ಚುಂಬಿಸಿ ಮಾತನಾಡಿಸಿದಂತೆ !
ಹರೆಯದ ಹುಡುಗಿಯ ಸ್ಪರ್ಶಿಸುವುದೆಂದರೆ....
ಸುಡು ಸುಡುವ ಕೆಂಡದ
ಹತ್ತಿರ ಸುಳಿದಂತೆ !
ಸುಡು ಸುಡುತ್ತ ತಣ್ಣಗಾಗುತ್ತಾರೆ
ಚಳಿ ಚಳಿ ಎಂದು ಬಡಬಡಿಸುತ್ತಾರೆ !
ಹರೆಯದ ಹುಡುಗಿಯ ಜೊತೆಯಿರುವುದೆಂದರೆ...
ಮಲ್ಲಿಗೆಯ ಮಡಿಲಲ್ಲಿಟ್ಟು
ಸುವಾಸನೆಯ ಬಳಿದುಕೊಂಡಂತೆ !
ಅನುರಾಗದ ವ್ಯಾಧಿಗೆ ಮದ್ದಾಗುತ್ತಾರೆ
ಮುತ್ತಿಕ್ಕಿದಂತೆ ಮತ್ತೇರಿಸುವ ಮದ್ಯೆಯಾಗುತ್ತಾರೆ.
ಹರೆಯದ ಹುಡುಗಿಯ ಯೋಚಿಸುವುದೆಂದರೆ...
ಸಿಕ್ಕು ಸಿಕ್ಕುಗಳ ಬಿಡಿಸಿದಂತೆ !
ಯೋಚಿಸಿದಂತೆಲ್ಲಾ ಸಿಕ್ಕುಗಳಾಗಿ
ಬಿಡಿಸಿದಂತೆಲ್ಲಾ ಸಮಸ್ಯೆಯಾಗುತ್ತಾರೆ.!
ಮನೆಯಂಗಳದ ರಂಗೋಲಿಯ
ಸಿಗದಿರುವ ಚುಕ್ಕಿಯಾಗುತ್ತಾರೆ !
---------------------------------------------------------
-ರವಿ ಮೂರ್ನಾಡ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ