ಭಾನುವಾರ, ಅಕ್ಟೋಬರ್ 7, 2012

ಮಂಕು ತಿಮ್ಮನ ಕಗ್ಗ ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದರೆ..?!


-ರವಿ ಮೂರ್ನಾಡು
ಸೃಜನಶೀಲತೆ ಅಂದರೆ ಸೃಷ್ಟಿಯ ನಿಯಮದಲ್ಲಿ ಹೊಸತೊಂದು ಮಗುವನ್ನು ಹುಟ್ಟಿಸುವ ಚೇತನದಷ್ಟೇ ಸತ್ಯ. ಅದಿಲ್ಲದೆ ಹೊಸತನ ಅನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.  ಸುಖಾ ಸುಮ್ಮನೆ ಕುಳಿತವನನ್ನೂ ಕವಿತೆಯ ಜಾಗಟೆಗೆ ಎಚ್ಚರಿಸುವ ಪದ ವಿನ್ಯಾಸವನ್ನು ಎದೆಗೆ ಸುರಿದು ಹೋದರು ಕುವೆಂಪು. ಮಾಸ್ತಿ ಕನ್ನಡ ಆಸ್ತಿ, ಇದೊಂದು ಪ್ರಾಸಬದ್ಧ ಗೌರವಕ್ಕೆ ಸೀಮಿತಗೊಳಿಸುವ ಕನ್ನಡದ ಜನತೆ, ಮಾಸ್ತಿಯ ಸಾಹಿತ್ಯ ಸ್ಥಿತಿಯನ್ನು ವಿಸ್ತೃತಗೊಳಿಸಲಿಲ್ಲ ಅನ್ನುವ ಅನುಮಾನಗಳ ಹುತ್ತವನ್ನು ಕೆದಕತೊಡಕುತ್ತೇವೆ. ಕನ್ನಡದ ನೆಲದಲ್ಲಿ ಇದರ ಸಂಸ್ಕಾರಕ್ಕೆ ನೆಲೆ ಹುಡುಕುತ್ತಿದ್ದೇವೆ. ನಮ್ಮನ್ನು ನಾವು ತೆರೆಯುತ್ತಾ ಹೋದಂತೆ, ಅದರ ಮಾನವೀಯ ಮೌಲ್ಯಗಳಲಿ ಕೆಲವನ್ನು ಕಳೆದುಕೊಂಡಿದ್ದೇವೆ ಅನ್ನುತ್ತಲೇ ಅದರ ಒಂದಷ್ಟು ಬೆಲೆಗಳು ಅಭಿಮಾನದ ಸೆಲೆಗಳಲ್ಲಿ ಸುಳಿಯುತ್ತಿವೆ. ಅದು ನಡೆಯಲಿಲ್ಲ ಅಂತ ಬೊಟ್ಟು ಮಾಡುತ್ತೇವೆ.

ಇವತ್ತು ಡಿವಿಜಿಯವರು ಬರೆದ ಮಂಕು ತಿಮ್ಮನ ಕಗ್ಗ ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದರೆ " ನೊಬೆಲ್ ಪ್ರಶಸ್ತಿ" ಅನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವ ಹಣೆಬರಹ ಕನ್ನಡಿಗರಾದ ನಮ್ಮಲ್ಲಿತ್ತು. ತಮ್ಮ ಮನೆಯಲ್ಲಿರುವ ಮನುಷ್ಯರ ಅಳಲನ್ನು ಆಲಿಸದ ಕನ್ನಡಿಗ ಸಮಾಜದಲ್ಲಿ ನಾಲ್ಕು ಜನರ ಚಪ್ಪಾಳೆಗೆ ಸಮಾರಂಭದಲ್ಲಿ ಭಾಗವಹಿಸಿ ಮುಖಬೆಲೆಯನ್ನು ಆಶಿಸುತ್ತಾನೆ. ಬಹಳ ದೊಡ್ಡ ಸಾಮಾಜಿಕ ದೌರ್ಬಲ್ಯದ ಈ ಸ್ಥಿತಿಯಲ್ಲಿ ಭಾರತದೊಳಗೇ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗದ ಮಂಕುತಿಮ್ಮನ ಕಗ್ಗ ಯಾವ ಮನಸ್ಸಿನ ಪ್ರಶಸ್ತಿಯನ್ನೂ ಮೀರಿ ನಿಂತ ಕಾವ್ಯ ಪ್ರತಿಮೆ. ಅದನ್ನು ಡಿವಿಜಿಯವರು ಅಪೇಕ್ಷಿಸಲಿಲ್ಲ ಅನ್ನುವಾಗ ಸಾಹಿತ್ಯದ ಯಾವುದೇ ಮುಖಬೆಲೆಗೆ ಮನುಷ್ಯ ಬದುಕುವುದಿಲ್ಲ ಅನ್ನಿಸಿತು. ಅದು ನಿಜವಾದ ಸಾಹಿತ್ಯದ ಸತ್ಯ. ಇಂತಹ ಸಾಹಿತ್ಯಗಳು ಈ ಭೂಮಿಯ ಅಂತ್ಯದವರೆಗೆ ಬದುಕುತ್ತವೆ ಮತ್ತು ಮನಸ್ಸಿದ್ದ ಮನುಷ್ಯರನ್ನು ಬದುಕಿಸುತ್ತವೆ.
         
ಇವತ್ತು ಹೇಳುವ ಸಾಹಿತ್ಯದ ಮಾತಿದು. ಸಾಹಿತ್ಯ ರಾಜಕೀಯಕ್ಕೆ ಒಗ್ಗಿಕೊಂಡಾಗ ಕ್ರಮೇಣ ನಶಿಸುತ್ತದೆ. ಬರಹ-ಸಾಹಿತ್ಯದದ ಆಳಕ್ಕೆ ಇಳಿಯದಿದ್ದರೆ, ಪ್ರಶಸ್ತಿಯ ಮಾನದಂಡಕ್ಕೆ ಗುಮಾನಿಗಳು ಹುಟ್ಟುತ್ತವೆ. ಕನ್ನಡ ಸಾಹಿತ್ಯ ವಿಶ್ವದ ನೊಬೆಲ್ ಪ್ರಶಸ್ತಿಯ ಅಡ್ಡಗೋಡೆಗೆ ಸವಾಲು. ಭಾಷೆಯ ತಳಪಾಯದಲ್ಲಿ ಮುಖ ತಿರುಗಿಸಿಕೊಂಡ ಇಂತಹ ಖ್ಯಾತ ಪ್ರಶಸ್ತಿಗಳು ಮಾನವೀಯ ಮೌಲ್ಯಗಳನ್ನು ಎಷ್ಟು ಎತ್ತಿ ಹಿಡಿಯಬಹುದು? ಸಾಹಿತ್ಯದ ಹೂರಣಕ್ಕೆ ಬಾಧ್ಯಸ್ಥವಾಗದ ಪ್ರಶಸ್ತಿಯ ಮಾನದಂಡ ಯಾವುದನ್ನೂ ಪ್ರತಿನಿಧಿಸುವುದೇ ಇಲ್ಲ. ಅದನ್ನು ಇಂದಿನ ಸಮಾಜ ಮಾಡಿತು. ಅದರಲ್ಲಿ ಕೆಲವು ಆಳದ ಹವಳದ ಸಾಹಿತ್ಯದ ಪ್ರಾಕಾರಗಳು ನಶಿಸಿದವು. ಡಿವಿಜಿಯ ಮಂಕು ತಿಮ್ಮನ ಕಗ್ಗ ,ಬಸವಣ್ಣ- ಅಕ್ಕಮಹಾದೇವಿಯ ವಚನಗಳು, ದಾಸರ ಪದಗಳು, ಸರ್ವಜ್ಞನ ವಾಕ್ಯಗಳು,ಶಿಶುನಾಳ ಷರೀಫರು, ಗುರುನಾನಕರ ವಾಕ್ಯಗಳಲ್ಲದೆ, ಹೆಸರಿನ ಮುಖಬೆಲೆಗೆ ಸಿಗದೆ ಪದ ಹಾಡಿದ ಕನ್ನಡದ ಜಾನಪದಗಳು ಪ್ರಶಸ್ತಿಯನ್ನು ಮೆಟ್ಟಿ ನಿಂತವು. ಕನ್ನಡದ ಜಾನಪದ ವಿಶ್ವವನ್ನು ಆಳುವಂತವು.ಅದನ್ನು ಕನ್ನಡದಲ್ಲಿ ನಾವು ಆಳಿಸಿಕೊಂಡಿದ್ದೇವೆ. ಅವುಗಳಿಗೆ ವಿಶ್ವದ ಯಾವುದೆ ಪ್ರಶಸ್ತಿಗಳು ಸರಿ ಸಾಟಿಯಲ್ಲ ಅನ್ನಿಸಿತು. ಹಾಗಾಗಿ ಯಾವುದೇ ಪ್ರಶಸ್ತಿಗಳು ಇವುಗಳ ಜವಾಬ್ದಾರಿಯನ್ನು ಪ್ರಶ್ನಿಸಲೇ ಇಲ್ಲ.

ಬಹಳಾ ಸಂತೋಷ. ವಿಶ್ವ ಮಾನ್ಯವಾಗಿರುವ ವಚನಗಳು ನೊಬೆಲ್ ಪ್ರಶಸ್ತಿ ಆಯ್ಕೆದಾರರ ಕಣ್ಣಿಗೆ ಕಾಣಲೇ ಇಲ್ಲ. ಡಿವಿಜಿಯ ಮಂಕು ತಿಮ್ಮನ ಕಗ್ಗ ಕಾಣಲೇ ಇಲ್ಲ. ಅದನ್ನು ಭಾರತೀಯರು,ವಿಶ್ವ ಪಂಡಿತರು ಮಾಡಲೇ ಇಲ್ಲ. ಎಂತಹ ಅಭಾಸ..!? ಇವತ್ತು ಅಮೇರಿಕಾದಲ್ಲಿ ಹುಟ್ಟಿದ ಕವಡೆ ಕಾಸಿನ ಬರವಣಿಗೆಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಗೆ ವಿಶ್ವದ ಜನತೆ ಚಪ್ಪಾಳೆ ತಟ್ಟುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದೇವೆ. ಪ್ರಶಸ್ತಿಗಳು ಕನ್ನಡ ಸಾಹಿತ್ಯವನ್ನು ಬೆಳಸಲೇ ಇಲ್ಲ. ಅದರ ಅಗತ್ಯವೂ ಇಲ್ಲ. ಕನ್ನಡ ಸಾಹಿತ್ಯ ಇಡೀ ಮಾನವ ಜಗತ್ತಿಗೆ ಬದುಕಿನ ಭಾಷ್ಯ ಬರೆದವು.
         
ನಾವು ಅವಸರದ ಈ ತಂತ್ರಜ್ಞಾನದ ಯುಗದಲ್ಲಿ ಕೆಲವಷ್ಟನ್ನು ಮರೆತಿದ್ದೇವೆ. ಉಳಿಸಿಕೊಳ್ಳುವ ಭರದಲ್ಲಿ ಕೆಲವನ್ನು ನಾಶಪಡಿಸಿದ್ದೇವೆ. ಕೆಲವು ಯಾರಿಗೂ ಗೋಚರಿಸದೆ ಕಣ್ಮರೆಯಾಗಿವೆ. ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವ ಕಾಲ ಪರಿಜ್ಞಾನದಲ್ಲಿ ಕೆಲವಷ್ಟನ್ನು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ನಡೆಯುವ ಕನ್ನಡದ ಕಾರ್ಯಕ್ರಮ ನವೆಂಬರ್ ಒಂದು ತಿಂಗಳಲ್ಲಿ ಮರೆತು ಹೋಗುವಂತಹವು. ಕನ್ನಡ ಅನ್ನುತ ಇಂಗ್ಲೀಷ್-ಹಿಂದಿ-ತಮಿಳು ಪದ್ಯದ ಆವೇಶಕ್ಕೆ ಮೈ ಕುಲುಕಿಸುವವರಾಗಿದ್ದೇವೆ. ತಮ್ಮ ನೆಲದ ಜತನದಿಂದ ಬಂದ ಅಮೂಲ್ಯ ಸಂಸ್ಕೃತಿಗಳು ಎಲ್ಲಾ ಎಲ್ಲಗಳನ್ನು ಮೀರಿ ಅಚಲ ವಿಶ್ವಾಸಗಳ ಮೇಲೆ ಇವತ್ತು ವಿದೇಶದಲ್ಲಿ ಕನ್ನಡಿಗರು ಮತ್ತು ಭಾರತ ದೇಶದಲ್ಲಿ ಹೊರರಾಜ್ಯದಲ್ಲಿದ್ದು ಮಾಡುತ್ತಿದ್ದಾರೆ. ಹಾಗೇ ನಡೆಯುತ್ತಿದೆ ಅನ್ನುವಾಗ ಕನ್ನಡದ ನೆಲದಲ್ಲಿ ನಡೆಯುವ ಕನ್ನಡದ ಸಮಾರಂಭಗಳಿಗಿಂತ ಶ್ರೇಷ್ಠವೆನ್ನುತ್ತವೆ. ಕನ್ನಡದ ಅಭಿಮಾನಕ್ಕೆ ಸಲ್ಲಿಕೆಯಾಗುವ ನಿಸ್ವಾರ್ಥ ಸೇವೆ ಇದು. ಆತ್ಮಾವಲೋಕನ ಮಾಡಿಕೊಳ್ಳುವ ಕಾಲದ ಮಾತಿದು.

3 ಕಾಮೆಂಟ್‌ಗಳು:

 1. ನಿಮ್ಮ ಮಾತು ನಿಜ ಸರ್.. ಹಾಗೂ ನಮಗೇನು ಸಿಕ್ಕುತ್ತದೆಯೋ ಅದನ್ನೇ ನಾವು ಓದುತ್ತೇವೆ ಮತ್ತು ಸಾಧ್ಯವಾದಷ್ಟು ಅದರಿಂದ ಕಲಿಯುತ್ತೇವೆ.. ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಬಯಸಿದಾಗ , ಅದು ಸಿಕ್ಕಿಲ್ಲ ಎಂದರೆ , ಆ ವಿಷಯದ ಬಗ್ಗೆ ಒಲವು , ಆಕರ್ಷಣೆ ಕ್ರಮೇಣ ಕಡಿಮೆ ಆಗುತ್ತದೆ .. ಮತ್ತೊಂದು ವಿಚಾರವು ನಮ್ಮ ಮನ ಸೆಳೆಯಲು ಆರಂಭವಾಗುತ್ತದೆ .. ಇದಕ್ಕೆ ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಸಂಗ ಸಹವಾಸಗಳು ಸಹ ಒಂದು ರೀತಿಯ ಪರಿಣಾಮವನ್ನುಂಟು ಮಾಡುತ್ತವೆ .. :)

  ಪ್ರತ್ಯುತ್ತರಅಳಿಸಿ
 2. ಕನ್ನಡದಲ್ಲಿ ನೊಬೆಲ್ ಪ್ರಶಸ್ತಿಗೆ ತಕ್ಕುದಾದ ಹಲವು ಕೃತಿಗಳಿವೆ. ನಮಗೆ ಲಾಬಿ ಮಾಡಲು ಬರುವುದೇ ಇಲ್ಲ, ನಮ್ಮ ಕೃತಿಗಳೂ ಕೃತಿಕಾರರು ಈ ಕಾರಣದಿಂದಲೇ ಜಗದ್ವಿಖ್ಯಾತರಾಗಲೇ ಇಲ್ಲ ಅನಿಸುತ್ತದೆ.

  ತೀವ್ರ ವಿಷಾದದ ಮಾತೆಂದರೆ, ನೀವೇ ಹೇಳಿದಂತೆ ನಾವು ನವೆಂಬರ್ ಕನ್ನಡಿಗರು.

  ಮೊನ್ನೆ ಬಂದ್ ಹಿಂದಿನ ಮತ್ತು ಮುಂದಿನ ದಿನ ಮಾತ್ರ, ಕಛೇರಿಗಳ ಮೇಲೆ, ಗಾಡಿಗಳಿಗಿಗೆ ಕಟ್ಟಿ ಕನ್ನಡ ಬಾವುಟ ಮೆರೆಸಿದೆವು. ಮಿಕ್ಕೆಲ್ಲ ಹೊತ್ತಲ್ಲಿ ಭರ್ತಿ ನಿದ್ರೆ!

  ಕನ್ನಡ ನೆಲದಲ್ಲಿ ಕನ್ನಡವು ಮರೀಚಿಕೆಯಾಗುತ್ತಿದ್ದರೂ, ಹೊರನಾಡ ಮತ್ತು ಹೊರ ರಾಜ್ಯದ ಕನ್ನಡಿಗರು ಈಗಲೂ ಅಮಿತೋತ್ಸಾಹದಿಂದಲೇ ನಿಸ್ವಾರ್ಥವಾಗಿ ಕನ್ನಡ ಸೇವೆ ಮಾಡುತ್ತಿದ್ದಾರೆ.

  ಕಣ್ಣು ತೆರೆಸಿದ ಇಂತಹ ಲೇಖನಗಳು ನಮಗೆ ಮಾದರಿಯಾಗಲಿ.

  ಪ್ರತ್ಯುತ್ತರಅಳಿಸಿ