ಗುರುವಾರ, ಜೂನ್ 28, 2012

ಚಿಗುರೆಲೆಯ ಹಾಲ ಧ್ವನಿ



ಅವನ ನಗುವಿನ ಉರಿ
ಇವಳ ಪ್ರಾಣದ ಪರಿ
ಗರ್ಭದಲಿ ಚಿಗುರೆಲೆಗೆ
ಹಾಲ ಧ್ವನಿ !

ಮೋಡಗಳ ಗುದ್ದುತ್ತಿದೆ
ಮಳೆ ಬಿತ್ತು ಹುಡುಕುತ್ತೇನೆ
ಇಳೆಯ ಸುಕ್ಕು ಗೆರೆಗೆ
ಬೆವರ ಹನಿ !

ಬಾಯಾರಿ ತುಟಿ ಹರಿದು
ಬೆವರೇರಿ ಗಬ್ಬೆದ್ದು
ನಾಲೆಯಲ್ಲಿ ನೀರಿಲ್ಲ
ಗಂಟಲವರೆಗೆ !

ಈ ಖಾಲಿ ಕಮ್ಮಟದಿ
ಹನಿದು ರಕುತಕೆ ಜೀವ
ಸಿಕ್ಕಿಲ್ಲ ಸವರಿ ರುಚಿ
ತುಟಿಯವರೆಗೆ !

ಬಾನಾಡಿ ಹೆಜ್ಜೆಗೆ ನೀನು
ಬೀಡಾಡಿ ಜಗತ್ತಿನ ಅವನಿ
ಮಡಿಲಲ್ಲಿ ಮಕ್ಕಳ ಕತೆಗೆ
ತಾಯಿ ನಾನು !

ಸುರಿಯಲಿದೋ ತಾಪಕೆ ವೀರ್ಯ
ಬಿರುಕಿಟ್ಟು ಅಳುತ್ತಿದೆ ಹನಿ
ಉಪ್ಪು ನೀರಿನ ಕಣ್ಣಿಗೆ
ನಿನ್ನ ಕನಸು !

ಬಿರುಸು ಮೋಡಕೆ ತೆರೆದು
ಮೈಯೆದ್ದು ಮೊರೆಯುತಿದೆ
ಗುಡುಗು ಮಿಂಚಿಗೆ ಮರೆತು
ಸುಳಿದ ಮನಸು !
-ರವಿ ಮೂರ್ನಾಡು, ಕ್ಯಾಮರೂನ್

ಸೋಮವಾರ, ಜೂನ್ 18, 2012

ಹಸಿರ ಹಸಿವಿಗೆ ನೆರೆದ ಮೈಯಿದು

ಯಾರು ಕರೆದರೋ, ಎನ್ನ ತೆರೆದರೋ

ಬೆರಳ ರೇಖೆಗೆ ತಬ್ಬಿ

ಉಸಿರ ಗಾಳಿಗೆ ಬಿಸಿಯ ಸುರಿಯುತಾ

ಬೆಟ್ಟ ಸ್ಪರ್ಶಕೆ ಉಬ್ಬಿ


ಲಜ್ಜೆ ಮರೆತಿದೆ,ರಾಗ ಮೌನಕೆ

ಭಾನು ಭೂಮಿಗೆ ಬಗ್ಗಿ

ಜಲವ ತೆರೆಯುತಾ ತೊರೆಯ ಉಕ್ಕಿಸಿ

ನೊರೆಯ ಜಳಕಕೆ ಹಿಗ್ಗಿ


ಹಸಿರ ಹಸಿವಿಗೆ ನೆರೆದ ಮೈಯಿದು

ಹಕ್ಕಿ ಊಟಕೆ ಹಣ್ಣು

ಹಗಲು ಲಯದಲಿ, ರಾತ್ರಿ ಸೃಷ್ಠಿಗೆ

ಮುಚ್ಚಿ ತೆರೆದಿದೆ ಕಣ್ಣು.

ಬುಧವಾರ, ಜೂನ್ 6, 2012

ಇದೊ೦ದು ರೇಖೆ

Art By.M.S.Moorty
ಏನನ್ನೋ ಹುಡುಕಿ ಬಾಡಿವೆ ಕಂಗಳು

ಅನುಭವಕ್ಕೆ ಸಿಕ್ಕ ಸುಕ್ಕುಗಳಲಿ

ಕೆದರಿ ಸೋತಿವೆ ಬಿಳಿ ಕೂದಲು


ತಬ್ಬಿಕೊಂಡ ಜೋಡಿ ಬೈತಲೆ ಮೈಗಳು

ಆಗಾಗ್ಗೆ ಬೆದರಿ ನೋಡುತ್ತಿವೆ

ಹಿಂಬದಿ ತಬ್ಬಿದ ನೆರಳುಗಳು

ಬೆತ್ತಲೆ ಬೆನ್ನಿನ ಹುಟ್ಟು ನರಗಳಲಿ

ಮೆಟ್ಟಿಲ ಹುಡುಕಿವೆ ಜಡೆಗಳು


ಇದೀಗ ಮೂರ್ತವಾಯಿತು

ಮಲಗಿ ಸಪೂರ ಬೆಟ್ಟದೆಗಲಿಗೆ

ಚಾಚಿ ಎಡೆಮುರಿ ಕಟ್ಟಿ ಕೈಕಾಲು

ಇದೊಂದು ರೇಖೆ

ಮೂರಡಿಗೆ ಅಳೆದ ಕೋಲು

ಬಿಳಿಗೂದಲು-ಬೆತ್ತಲೆ ಮೈ

ಸಾವಧಾನಕೆ ಕುಳಿತಿದೆ

ಕುಳಿತಂತಿದೆ..

ಇನ್ನೇನು ಎತ್ತೊಯ್ಯುವರು

http://avadhimag.com/?p=54701