("ಸಂಗೀತ ಕಲಿಸಿ ಕೊಡಿ ಎಂದ ಬಾಲಕ’ ಮುಂದುವರೆದ ಭಾಗ-೩)
ಆ ರಾತ್ರಿ ಇಬ್ಬರು ಮಾತಾಡುತ್ತಿದ್ದಾರೆ. " ಧರ್ಮಸ್ಥಳದಿಂದ ಪತ್ರ ಬಂದಿತಾ?"
" ಅಹಾ..! ಬಂತು"
ತೆರೆದ ಕಣ್ಣು ತೆರೆದಂತೆ ಹೊದಿಕೆಯೊಳಗೆ ಒಬ್ಬ " ಹೋಗಬೇಡ" ಎಂದ. ಹಾಗೇ ನಿದ್ದೆಗೆ ಜಾರಿದ. . " ಸಂಗೀತ ಕಲಿಸಿಕೊಡಿ" ಎಂದ ಇನ್ನೊಬ್ಬನ ಕಣ್ಣುಗಳೆರಡು ತೆರೆತೆರೆದು ಕನಸುಗಳ ತೆರೆಯುತ್ತಲೇ ಇತ್ತು.....! ಅಲ್ಲೇ ಅದೋ ಒಂದು ಹಾಡು ಜೋಗುಳ ಹಾಡುತ್ತಿದೆ...."ಪಂಚಮ ವೇದ.... ವೇದದ ನಾಧ...ಸರಿಗಮಪದನಿಸ ಭಾವಾನಂದಾ..’
ಬೆಳಿಗ್ಗೆ ಎದ್ದವನು ಅಂಗಡಿಯ ಆಚೆ ಬದಿಯ ಪಂಚಾಯಿತಿ ನಲ್ಲಿಯ ಮುಂದೆ ಬೀದಿ ಜನರ ಸಾಲುಗಳಲ್ಲಿ ಬಿಂದಿಗೆ ಹಿಡಿದು ನಿಂತ. ಮನೆಗೆ ಬೇಕಾದಷ್ಟು ನೀರು ತುಂಬಿಸುತ್ತಿದ್ದಾನೆ.
" ಹೋಂ ವರ್ಕ್ ಎಲ್ಲಾ ಮಾಡಿದ್ದೀಯಾ?"
" ಮಾಡಿದ್ದೇನೆ ಮಾಮ ?"
ಶಾಲೆಯ ಚೀಲ ಎತ್ತಿದವ... ಎರಡು ಚಡ್ಡಿ, ಎರಡು ಅಂಗಿ.." ಧರ್ಮಸ್ಥಳದ ಕಾರ್ಡು" , "ಚಲನಚಿತ್ರ ಗೀತೆಗಳು" ಪುಸ್ತಕವನ್ನು ಪಠ್ಯ ಪುಸ್ತಕಗಳ ಮಧ್ಯಕ್ಕಿಟ್ಟು ಭಾರವಾದ ಕತ್ತೆತ್ತಿದ.
" ಬಾ ಕಾಫಿ ಕುಡಿ"... ಅಜ್ಜಿ ಕರೆದರು.
ಗಡಿಯಾರ ನೋಡಿದ. ಶಾಲೆಗೆ ಹೋಗುವ ಸರಿಯಾಗಿ 9 ಗಂಟೆಗೆ ಮನೆಯಿಂದ ಹೊರಗೆ ಹೆಜ್ಜೆಯಿಡುತ್ತಿದ್ದಾನೆ. ಸ್ವಲ್ಪ ದೂರದಿಂದ ತಿರುಗಿ ನೋಡಬೇಕೆನಿಸಿತು. ತಿರುಗಿ ನೋಡಿದ.
"ನಾನು ಸಂಗೀತ ಕಲಿಯಲು ಹೋಗುತ್ತಿದ್ದೇನೆ ಅಜ್ಜಿ."
ಏನಿದು ರಣ ಬಿಸಿಲು..? .ಮೂರ್ನಾಡಿನಿಂದ 15 ಕಿ.ಮೀ. ಮಡಿಕೇರಿಗೆ ಕಾಲ್ನಡಿಯಲಿ ಬಂದವನಿಗೆ ಬಸ್ ನಿಲ್ದಾಣದಲ್ಲಿ ಅಮ್ಮ ನೆನಪಾಗುತ್ತಿದ್ದಾಳೆ. ನೇರವಾಗಿ ಕಡಗದಾಳು ಕ್ಲೋಸ್‍ಬರ್ನ್ ಕಾಫಿ ಎಷ್ಟೇಟಿಗೆ 8 ಕಿ.ಮೀ. ಮತ್ತೆ ನಡೆಯ ತೊಡಗಿದ. ಹೊಟ್ಟೆ ಹಸಿಯುತ್ತಿದೆ. ಕೈಗಳು ಚೀಲದೊಳಗೆ ಇಳಿದು ತಡಕಾಡಿತು. ಅಹಾ..! ಮಧ್ಯಾಹ್ನಕ್ಕೆ ಅಜ್ಜಿ ಹಾಕಿದ್ದ ಶಾಲೆಯ ಬುತ್ತಿ ಸಿಕ್ಕಿತು..ಅಲ್ಲೇ ದಾರಿ ಬದಿಯಲ್ಲಿ ಮುಚ್ಚಳ ತೆರೆದ. ಗೊತ್ತಿಲ್ಲದೇ ಕಣ್ಣು ಬುತ್ತಿ ಮುಚ್ಚಳದೊಂದಿಗೆ ತೆರೆತೆರೆದು ತೇವಗೊಳ್ಳುತ್ತಿದೆ . ಅಜ್ಜಿ ಮತ್ತೊಮ್ಮೆ ಮಧ್ಯಾಹ್ನಕ್ಕೆ ಕರೆದಳು. " ಬಾ ಊಟ ಮಾಡು". ತೊಟ್ಟಿಕ್ಕುತ್ತಲೇ ತಿಂದವನು ಮತ್ತೆ ನಡೆಯ ತೊಡಗಿದ.
" ಅಮ್ಮ ನೀನೇಕೆ ತೋಟಕ್ಕೆ ಹೋಗಿಲ್ಲ?"
" ಇಲ್ಲ, ಮೈ ಹುಷಾರಿಲ್ಲಪ್ಪ... ಇದೇನೋ ಇವತ್ತು ಶಾಲೆಯಿಲ್ಲವೇ?"
ಅಷ್ಟರವರೆಗೇ ದಾರಿಯುದ್ದಕ್ಕೂ ಭಾರವಾದ ದುಃಖ್ಖ ಅಮ್ಮನನ್ನು ಬಾಚಿ ಬಿಗಿದು ತಬ್ಬಿಕೊಂಡಿತು..ಬಿಕ್ಕಿ ಬಿಕ್ಕಿ ಹೇಳುತ್ತಿದ್ದಾನೆ
" ನಾನು ಸಂಗೀತ ಕಲಿಯಬೇಕು... ನಾನಿನ್ನು ಮೂರ್ನಾಡು ಶಾಲೆಗೆ ಹೋಗುವುದಿಲ್ಲ ಅಮ್ಮ"
ಬಿಸಿಲು ಬಿಸಿಯೇರಿದೆ. ಕೆನ್ನೆ-ಹಣೆಗೆ ಕಪ್ಪಿಟ್ಟ ಬೆವರು ಒರೆಸಿ,ತಲೆಗೂದಲಿಗೆ ಬೆರಳುಗಳು ನಿಧಾನವಾಗಿ ಓಡಾಡುತ್ತಿವೆ. ಒಳಗಿಳಿದ ಕಣ್ಣುಗಳಲ್ಲಿ ಮೇಲೆ ನೀರು ತುಂಬುತ್ತಿದೆ. ಎದೆಗವುಚಿ ಹೇಳುತ್ತಿದ್ದಾಳೆ.
" ಮಾವನಿಗೆ ಏನು ಹೇಳಿದೆ"
" ಯಾರಿಗೂ ಹೇಳಲಿಲ್ಲ. ಹಾಗೇ ಬಂದೆ. ನಾನು ಸಂಗೀತ ಕಲಿಯಬೇಕು ಅಮ್ಮ "
ಏನಿದು ಕೆನ್ನೆ- ಅಂಗಿ ಬಿಸಿಬಿಸಿಯಾಗುತ್ತಿದೆ? ಕತ್ತೆತ್ತಿದವನ ಕೆನ್ನೆಗೆ ಅವಳ ಕಣ್ಣ ಹನಿಗಳು ಮತ್ತೊಮ್ಮೆ ಹನಿದು ಬಿಸಿಯಾದವು. ಮೈ ನಡುಗಿ ಪುಳಕಿತನಾಗುತ್ತಿದ್ದಾನೆ.
"ಅಳಬೇಡಪ್ಪ... ಊಟ ಮಾಡಿದೆಯಾ?"
" ಹೂಂ"
ಬಂದವನೇ ಮನೆ ಒಳನುಗ್ಗಿ ಅಲ್ಲೇ ಗೋಡೆ ಬದಿಗೆಸೆದ ಶಾಲಾ ಚೀಲಕ್ಕೆ ಕೈ ಹಾಕುತ್ತಿದ್ದಾಳೆ. ಸಿಕ್ಕಿದ ಖಾಲಿ ಬುತ್ತಿ ಬಟ್ಟಲು ತೊಳೆದಿಟ್ಟು...
" ಬಾ ಗಂಜಿ ಅನ್ನ ತಿನ್ನು, ತೆಂಗಿನಕಾಯಿ ಚಟ್ನಿಯಿದೆ" ಅಡುಗೆ ಕೋಣೆಗೆ ಕರೆದಳು.
" ಶಾಲೆ ಬಿಡಬೇಡ ಮಗನೇ. ಶಾಲೆಗೆ ಹೋಗು"
ಬಾಯ್ಬಿಟ್ಟಿದೆ ಅಲುಮಿನೀಯಂ ತಟ್ಟೆ. ಬಾಚಿ ತಿನ್ನುತ್ತಿದ್ದ ಅನ್ನಕೆ ಹರಿದು ಹೋಗುತ್ತಿದ್ದ ಗಂಜಿ ನೀರನ್ನು ಬಾಯ್ಗಿಟ್ಟು ತಡೆದ. ಮತ್ತೊಮ್ಮೆ ಬಾಯ್ಗಿಟ್ಟು ಹೇಳಿದ...
"ಇಲ್ಲ.. ಮಡಿಕೇರಿಯಲ್ಲಿ ಸೇರಿಸು. ಸಂಗೀತ ಕಲಿಸುವವರು ಇದ್ದಾರೆ"
"ಯಾರೂ ಕಲಿಸುತ್ತಾರೆ...ಅಷ್ಟೊಂದು ದುಡ್ಡು ಬೇಡವೇ ಮಗನೇ ?"
ಮುಖ ಎತ್ತಲಿಲ್ಲ. ಗಂಜಿ ಅನ್ನ ತಿಂದ ಅವನು ಹೊರಗೆ ತಟ್ಟೆಗೆ ಮತ್ತೆ ಮತ್ತೆ ನೀರು ಸುರಿದು ತೊಳೆಯ ತೊಡಗಿದ. ಒಳಗೆ ಅವಳು ಹಳೆ ಪೆಟ್ಟಿಗೆ ತಡಕಾಡುತ್ತಿದ್ದಳು.
" ತೆಗೆದುಕೋ... ಬರುವ ವರ್ಷ ತೋಟಕ್ಕೆ ರಜೆ ಸಿಕ್ಕಿದಾಗ ಬಂದು ಮಾವನಿಗೆ ಮಾತಾಡುತ್ತೇನೆ"
ಎರಡು ರೂಪಾಯಿ ಕೊಟ್ಟಳು. ತೋಟದಲ್ಲಿ ಟೀ ಕುಡಿಯಲು ಬಚ್ಚಿಟ್ಟ ಹಣ.
"5 ಗಂಟೆಗೆ ಮೂರ್ನಾಡಿಗೆ ಯೂನಿಯನ್ ಬಸ್ಸಿದೆ"
ಏನು ತಲೆ ಇಷ್ಟೊಂದು ಬಿಸಿಯಿದೆ ? ಕೂದಲಿಗೆ ತೆಂಗಿನೆಣ್ಣೆ ಹಾಕಿ ತಿಕ್ಕುತ್ತಿದ್ದಾಳೆ. ಮಾತಾಡದೆ ಶಾಲೆಯ ಚೀಲ ಹೆಗಲಿಗೇರಿಸಿದ ಭಾರಕೆ ಮತ್ತೆ ಕಡಗದಾಳಿಗೆ ನಡೆಯತೊಡಗಿದ. " ಚೆನ್ನಾಗಿ ಓದು, " . ಏನೇನೋ ಹೇಳುತ್ತಲೇ ಇದ್ದಳು, ಮರು ಮಾತನಾಡದೆ ನಡೆದ. ಮರೆಯಾಗುವವರೆಗೆ ತಿರುಗಿ ತಿರುಗಿ ನೋಡುತ್ತಲೇ ಇದ್ದ, ತಲೆ ಕಾಣುವವರೆಗೆ ನೋಡುತ್ತಲೇ ಇದ್ದಳು. ಅಲ್ಲೊಂದು ಕನಸು ಅವನನ್ನೇ ನೋಡುತ್ತಾ ಬಣ್ಣ ಹಚ್ಚುತ್ತಿತ್ತು. ಹೆಜ್ಜೆ ಬಿರುಸಾಗುತ್ತಿದ್ದಂತೆ ಅವಳಂತೆ ಕಾಣದಾಯಿತು. ಮತ್ತೊಮ್ಮೆ ದಾರಿಗಳು ಅಮ್ಮನನ್ನು ನೋಡಲೆತ್ನಿಸಿದವು.
ನೆನಪುಗಳು ಬಿಕ್ಕುತ್ತಲೇ ಇದ್ದವನಿಗೆ ರಸ್ತೆ ಬದಿಗೆ ಬಸ್ ಸಿಕ್ಕಿತು. ಹೆಸರು- ಊರಿನ ಪರಿಚಯ ಓದದೇ ಹತ್ತಿದವ , ಗೊತ್ತಿಲ್ಲದವರ ಪಕ್ಕದಲ್ಲಿ ಕುಳಿತುಕೊಂಡ. ಮತ್ತೆ ಮಾವ ನೆನಪಾಗುತ್ತಿದ್ದಾರೆ. ಅದೇ ಸ್ಕೇಲು !. ಕೆನ್ನೆ ಸವರಿಕೊಂಡ. ಮಡಿಕೇರಿ ಖಾಸಗಿ ಬಸ್ ನಿಲ್ದಾಣದಲ್ಲಿ ಇಳಿದು ಸುತ್ತಲೂ ಒಮ್ಮೆ ಕಣ್ಣಾಡಿಸುತ್ತಿದ್ದಾನೆ. ಪಟ್ಟಣದ ಸುತ್ತ ಆವರಿಸಿದ ನೀಲಿ ತುಂಬಿದ ಬೆಟ್ಟಗಳು. ದೊಡ್ಡ ದೊಡ್ಡ ಕಟ್ಟಡಗಳು, ಓಡುತ್ತಿದ್ದ ಕಾರು-ಬಸ್ಸುಗಳು. ಅಲ್ಲೇ ರಸ್ತೆ ಬದಿಗೆ ಜನರು ಹಿಂಡು ಹಿಂಡಾಗಿ ನಡೆಯುತ್ತಿದ್ದರು. ಅವರೊಂದಿಗೆ ಜೊತೆ ಸೇರಿ ನಡೆಯ ತೊಡಗಿದ. " ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು? ಕಣ್ಣು- ಮೂಗು ಕಾಣದ ಹಾಗೆ ಬಣ್ಣ ಹಚ್ಚಿದ ಅಕ್ಕ-ತಂಗಿ.. ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು ?
ಸಂಜೆ 6 ಗಂಟೆಯಿಂದ ಮಡಿಕೇರಿ ಸಿನಿಯರ್ ಕಾಲೇಜು ರಸ್ತೆಗೆ ಮೂರು ಬಾರಿ ಸುತ್ತು ಹಾಕಿದ. ರಾತ್ರಿ 9 ಗಂಟೆಗೆ ಅಲ್ಲೇ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಪಾಪ್ಯುಲರ‍್ ಹೋಟೆಲ್‍ನಲ್ಲಿ ಜನರು ಒಳ ಹೋಗಿ- ಹೊರ ಬರುತ್ತಿದ್ದರು.ಬದಿಯಲ್ಲೇ ನಿಂತು ನೋಡತೊಡಗಿದ. ಹೋಟೆಲ್ ಮಾಲೀಕ ಒಮ್ಮೆ ನೋಡಿದ. ಅರ್ಧ ಗಂಟೆಯ ನಂತರ ಕ್ಯಾಶ್ ಕೌಂಟರಿಗೆ ಕರೆದ.
" ಏನು ಮಾಡುತ್ತಿದ್ದೀಯ ಇಲ್ಲಿ ?"
ಮಾತಾಡಲಿಲ್ಲ.
"ಶಾಲೆಗೆ ಹೋಗುವವನೋ?"
"ಶಾಲೆಗೆ ಹೋಗುವುದಿಲ್ಲ..ಇಲ್ಲೇ ಇರುತ್ತೇನೆ"
ಊರು-ಕೇರಿ-ಶಾಲೆ, ಅಪ್ಪ-ಅಮ್ಮ ಎಲ್ಲಾ ಕೇಳಿದ. ಎಲ್ಲವನ್ನೂ ಸುಳ್ಳು ಹೇಳಿದ.
"ರಂಗಾ ಇಲ್ಲಿ ಬಾ.... ಈ ಹುಡುಗ ಹೊಸದಾಗಿ ಬಂದಿದ್ದಾನೆ.. ಒಳಗೆ ಕರೆದುಕೋ"
"ನಿನ್ನ ಹೆಸರು?"
ಹೆಸರು ಹೇಳಿದ. " ನಿನಗೆ ಓದಲು- ಬರೆಯಲು ಬರುತ್ತಾ?"
"ಅಹಾ..! ಬರುತ್ತೆ"
"ನಾಳೆ ಅಪ್ಪ-ಅಮ್ಮನಿಗೆ ನನಗೊಂದು ಕಾಗದ ಬರೆದುಕೊಡುತ್ತೀಯಾ?"
ಈರುಳ್ಳಿ ಚೀಲಗಳ ರಾಶಿ, ಎಣ್ಣೆ ಕಮಟು ವಾಸನೆಯ ಕೋಣೆ ತೋರಿಸುತ್ತಿದ್ದಾನೆ ರಂಗ.ಶಾಲೆಯ ಚೀಲ ಅಲ್ಲಿಟ್ಟು, ಅಡುಗೆ ಕೋಣೆಗೆ ಕರೆತಂದು ಬಿಟ್ಟು ಹೊರ ಹೋದ. ಕೆಲವು ಜನರು ರುಬ್ಬುತ್ತಿದ್ದರು, ಕೆಲವರು ದೊಡ್ಡ ದೊಡ್ಡ ಒಲೆಯ ಮುಂದೆ ಬೆಂಕಿಯಂತೆ ಉರಿಯುತ್ತಿದ್ದರು. ರಾಶಿ ತರಕಾರಿಗಳನ್ನು ಮಚ್ಚು-ಚಾಕುಗಳು ಕೊಚ್ಚಿ ಕೊಚ್ಚಿ ಹಾಕುತ್ತಿದ್ದವು. ಮೆಲ್ಲನೇ ಅಡುಗೆ ಕೋಣೆಯ ಹೊರಗೆ ಕಣ್ಣಾಯಿಸಿದ, ರಾಶಿ ಎಂಜಲು ತಟ್ಟೆಗಳ ಮಧ್ಯೆ ಕುಳಿತು ಒಬ್ಬಾತ ಬಾಚಿ ಬಾಚಿ ತೊಳೆದು ನೀರಿಗೆ ಪಾತ್ರೆಗಳನ್ನು ಮುಳುಗಿಸುತ್ತಿದ್ದ. ಕೋಣೆಯ ಬೆಂಕಿಗೆ ತಾನೂ ಸ್ವಲ್ಪ ಬೆವರು ಒರೆಸುತ್ತಾ ನಿಂತ.
"ನಿನಗೆ ಪಾತ್ರೆ ತೊಳೆಯಲು ಬರುತ್ತಾ?" ಅಡುಗೆ ಕೋಣೆಯಿಂದ ಒಬ್ಬಾತ ಕೇಳಿದ.
"ಆಹಾ..!"
ಹೋಟೆಲಿನಲ್ಲಿ ಗಿರಾಕಿಗಳು ತಿಂದುಂಡ ಎಂಜಲು ತಟ್ಟೆಗಳ ರಾಶಿಗೆ ಅವನು ಕೈ ಹಾಕಿದ. ಒಂದೊಂದೇ ಎತ್ತಿ ತೊಳೆದು ಇತ್ತ ಇಡುತ್ತಲೇ ,ಅತ್ತ ತೊಳೆದಷ್ಟು ಪಾತ್ರೆಗಳು ಮತ್ತಷ್ಟು ತುಂಬುತ್ತಲೇ ಇದ್ದವು. ಅದಷ್ಟು ಎಂಜಲುಗಳು ರಾಶಿ ಬೀಳುತ್ತಿದ್ದವು. ಕೆಳಗೆ ಕುಳಿತವನು ತಟ್ಟೆಗಳ ರಾಶಿಯಲ್ಲಿ ಕಾಣದಾದ. ಕ್ಯಾಶ್ ಕೌಂಟರಿನಲ್ಲಿ ಯಾವುದೋ ಹಾಡು ಕಿವಿಗೆ ಬಡಿಯುತ್ತಿದೆ. ಎಂಜಲು ತಟ್ಟೆಗಳಲ್ಲಿ ಎರಡನ್ನು ಎತ್ತಿ ಮೆಲ್ಲನೆ ತಟ್ಟಿ ನೋಡಿದ.. ಹೌದು..! ತಾಳ ಸರಿಯಾಗಿಯೇ ಇದೆ. ಹಾಗೇ ಮುಂದುವರೆಸಿದ..
"ಏನೋ ಊಟದ ತಟ್ಟೆ ತಟ್ಟುತ್ತಿದ್ದೀಯಾ?"
ಒಳಗಿನಿಂದ ಯಾರೋ ಗದರಿಸಿದಂತಾಯಿತು. ತಾಳ ಬಿಟ್ಟು ಮತ್ತೆ ತೊಳೆಯ ತೊಡಗಿದ.
"ಹೇ ಹೊರಗೆ ಹೋಗಿ ಟೇಬಲ್ ಕ್ಲೀನ್ ಮಾಡು"
ಪ್ಲಾಸ್ಟಿಕ್ಕಿನ ಇಷ್ಟಗಲದ ಬಕೇಟು-ಕೈಬಟ್ಟೆ ತೆಗೆದುಕೊಂಡ. ಹೊರಗೆ ಬಂದು ಗೋಡೆಗೆ ಒರಗಿ ತಿನ್ನುತ್ತಿದ್ದವರ ಕೈ-ಬಾಯಿ ನೋಡುತ್ತಾ ನಿಂತ. ಗಿರಾಕಿಗಳು ತಿಂದುಂಡು ಟೇಬಲ್ಲಿನಲ್ಲಿ ತಟ್ಟೆ ಬಿಟ್ಟೇಳುವುದನ್ನೇ ಕಾಯುತ್ತಿದ್ದ. " ಮಾವ ಇಲ್ಲಿಗೆ ಬಂದರೋ..? ", ಸಣ್ಣಗೆ ಬೆವರುತ್ತಿದೆ, ಮತ್ತೊಮ್ಮೆ ಕೆನ್ನೆ ಮುಟ್ಟಿ ನೋಡಿದ. ಮೂರ್ನಾಡಿನ ಚಂದ್ರಣ್ಣ, ಬಾಬಣ್ಣ, ಪಕ್ಕದ ಮನೆಯ ಹಂಸಕಾಕ, ಲತೀಫ್ ಬಂದರೋ ? ". ಆ ರಾತ್ರಿ ಕಣ್ಣು ಮುಚ್ಚಿದವನಿಗೆ ಚಿನ್ನದ ಅಂಗಡಿ ಪಳನಿ ಸಾಮಿ, ಮರಗೆಲಸದ ಕುಟ್ಟೇಟ, ಕಬ್ಬಿಣ ಕೆಲಸದ ಡಾಲಿ ಸಾಮಿ ಹೋಟೆಲಿನಲ್ಲಿ ಕಣ್ಣೆದುರು ಬರುತ್ತಿದ್ದಾರೆ. ಎಲ್ಲರೂ ಮಲಗಿದ ಮೇಲೆ ರಂಗನನ್ನು ಮೆಲ್ಲಗೇ ಎಬ್ಬಿಸಿದ.
" ನನಗೆ ಒಂದು ಕಾರ್ಡು ಕೊಡು, ಮನೆಗೆ ಕಾಗದ ಬರೆಯುತ್ತೇನೆ." .
"ಹಣ ಕೊಟ್ಟರೆ ಕೊಡುತ್ತೇನೆ." . 25 ಪೈಸೆಯ ಕಾರ್ಡಿಗೆ ಉಳಿಸಿದ್ದ 50 ಪೈಸೆ ಕಸಿದುಕೊಂಡ. ಮಾವನಿಗೆ ಒಂದು ಕಾಗದ ಬರೆಯುತ್ತಿದ್ದಾನೆ....
"ಮಾಮ ನಾನು ಮಡಿಕೇರಿಯಲ್ಲಿದ್ದೇನೆ. ಸಂಗೀತ ಕಲಿತು ಬರುತ್ತೇನೆ .ನನಗೆ ಹೊಡೆಯಬೇಡಿ... "
ಒಂದು ಭಾನುವಾರದ ರಜೆಗೆ ಸಂಜೆ ರಂಗನೊಂದಿಗೆ ರಸ್ತೆಗಿಳಿದ. ಅಲ್ಲೇ ಸಿಕ್ಕಿದ ಟಪಾಲು ಪೆಟ್ಟಿಗೆಗೆ ಕಾರ್ಡು ಹಾಕಿದವನ ಕಾಲುಗಳು ಭಾರ ಕಳೆದುಕೊಂಡು ಹೆಜ್ಜೆಯಿಡತೊಡಗಿದವು. ದಿನಕ್ಕೆ ಒಂದು ರೂಪಾಯಿ ಸಿಕ್ಕಿದರೆ ಸಾಕು. ಸಂಗೀತ ಮೇಷ್ಟ್ರಿಗೆ ಫೀಜು ಕಟ್ಟಬಹುದು. ದಣಿಗಳು ಎಷ್ಟು ಕೊಡುವರೋ?
"ರಂಗ ನಿನಗೆ ದಣಿಗಳು ಎಷ್ಟು ದುಡ್ಡು ಕೊಡುತ್ತಾರೆ?"
ಐಸ್‍ಕ್ಯಾಂಡಿ ತಿನ್ನುತ್ತಿದ್ದವ ಹೇಳಿದ " ಹತ್ತು ರೂಪಾಯಿ ಕೊಡುತ್ತಾರೆ"
ರಾತ್ರಿ ಹೋಟೆಲಿನಲ್ಲಿ ಬೆಳಿಗ್ಗೆಗೆ ಬೇಕಾದ ಇಡ್ಲಿಗೆ ಅಕ್ಕಿ ರುಬ್ಬುತ್ತಿದ್ದ ಕೈಗಳು ಒಮ್ಮೆ ಮುಖದಲ್ಲಿದ್ದ ಬೆವರು ಒರೆಸಿತು. ದಣಿದು ಗೋಣಿ ಚೀಲಗಳ ರಾಶಿಯ ಮೇಲೆ ಮಲಗಿ ಕಣ್ಣು ಮುಚ್ಚಿದ. ಕತ್ತಲು ರೆಪ್ಪೆಯೊಳಗೆ ಸಂಗೀತ ಮೇಷ್ಟ್ರ ಕನಸು ಮಬ್ಬಾಗ ತೊಡಗಿದವು. ಒಂದು ದೀರ್ಘವಾದ ಸಂಗೀತದ ನಿಟ್ಟುಸಿರು.
" ಇಲ್ಲಿಂದ ಓಡಿ ಹೋದರೋ?"
-----------------------------------------------------------------------