ಬುಧವಾರ, ಡಿಸೆಂಬರ್ 7, 2011

ಒಮ್ಮೊಮ್ಮೆ ಸೂರ್ಯ



ನಿನ್ನೆ ಬಿದ್ದ ದಟ್ಟ ದರಿದ್ರ ಮಳೆಗೆ ಬಸವಳಿದು
ಈ ದಿನ ಸೂರ್ಯ ಕಾಲಿಗೆ ಗೆಜ್ಜೆ ಕಟ್ಟುವುದಿಲ್ಲ
ದಣಿದ ಇವನ ಹೃದಯ ಪಿಸುಗುಟ್ಟುವುದಿಲ್ಲ

ಒಮ್ಮೊಮ್ಮೆ ಹೀಗೆ ಸೂರ್ಯ ನಿರಾಢಂಬರ
ರಂಗೇರುವುದಿಲ್ಲ ನೀಲಾಂಬರ
ಸುತ್ತಮುತ್ತ ಕೆಂಪು ಬಳಿಯುವುದಿಲ್ಲ
ಗಾಳಿಯೊಂದಿಗೆ ತಂಪು ಸುರಿಯುವುದಿಲ್ಲ
ಭೂರಮೆಯ ರಮಿಸುವುದಿಲ್ಲ.

ಮೌನದಲಿ ಕಡಲ ಮಂಚಕೆ ಒರಗುತ್ತಾ
ಭೂರಮೆಗೆ ಕಪ್ಪು ಹೊದಿಕೆ ಹೊದೆಸುತ್ತಾನೆ
ಹಕ್ಕಿಗಳ ತಟ್ಟಿ ಮಲಗಿಸುತ್ತಾ
ಗಾಳಿಗೆ ಚಾಮರ ಬೀಸಲು ಆದೇಶಿಸುತ್ತಾನೆ

ಇತ್ತ, ಬೇಗ ಮಲಗಿದ ಸೂರ್ಯನಿಗೆ
ಚಂದ್ರ ಸಹಕರಿಸುತ್ತಾ
ನಕ್ಷತ್ರಗಳ ಮನೆ ಕದ ತಟ್ಟಿದ

ಅರ್ಭಟಿಸುತ್ತಿದೆ ಸೂರ್ಯನ ಗೊರಕೆ ಸದ್ದು
ಬೆಚ್ಚಿದ ಭೂರಮೆ ಕಣ್ಣುಜ್ಜಿ ನೋಡುತ್ತಾಳೆ ಮೇಲೆದ್ದು
ನೀಲ ನಭದಲ್ಲಿ ಚಂದ್ರ ನಗುತ್ತ ಬೆಳದಿಂಗಳ ಚೆಲ್ಲುತ್ತಾ
ಇಣುಕುತ್ತಿದ್ದ ನಕ್ಷತ್ರ ವಿಚಿತ್ರ ಸುತ್ತಮುತ್ತ
ಆಕಳಿಸುತ್ತಾ ರಮೆ ಗಾಳಿಯೊಂದಿಗೆ ನೆಲ ಗುಡಿಸಿದ್ದಾಳೆ
ಬಿಂದಿಗೆ ಸೊಂಟದಲ್ಲಿಟ್ಟು ನೀರಿಗೆ ಹೊರಟಿದ್ದಾಳೆ.

ರಮೆಯ ಕಾಲ್ಗೆಜ್ಜೆಗೆ ಸೂರ್ಯ ಥಟ್ಟನೇ ಎಚ್ಚರವಾದ
ಸುತ್ತಮುತ್ತ ಕೆಂಪು ನದಿಯ ಜುಳುಜುಳು ನಾದ
ಚಡಪಡಿಸುತ್ತ ಮೇಲೆದ್ದು ಮೈಮುರಿದ
ಬೆಚ್ಚಗೆ ಮಲಗಿದ್ದ ಕೋಳಿಗಳ ಕೂಗಿಸುತ್ತಾ
ಗೂಡಿಗೆ ಕೈ ಹಾಕಿ ಹಕ್ಕಿಗಳ ತಟ್ಟಿ ಎಚ್ಚರಿಸುತ್ತಾ
ಕೋಗಿಲೆಗೆ ಸುಪ್ರಭಾತ ಹಾಡಲು ಹೇಳುತ್ತಾ
ರಂಗೇರುತ್ತಾ ಮೇಲೆದ್ದ ರಮೆಯ ಹುಡುಕುತ್ತಾ

ನೀರು ತಂದ ರಮೆಗೆ ಸಿಹಿಮುತ್ತ ನೀಡುತ್ತಾ
ಸಂಜೆ ಮಧುಮಂಚದ ಸಿದ್ಧತೆಗೆ ಸೂಚನೆಯಿತ್ತ
ಸೂರ್ಯನ ಮುತ್ತಿಗೆ ರಮೆಯ ಮೈ ಬೆವರಿ
ಹಣೆಯ ತುಂಬಾ ಬೆವರ ಹನಿ
ಹಸಿರ ನೆಲದ ತುಂಬೆಲ್ಲಾ ಇಬ್ಬನಿ..!
-ರವಿ ಮೂರ್ನಾಡು.


7 ಕಾಮೆಂಟ್‌ಗಳು:

  1. ಪ್ರಕೃತಿಯ ರಸದಾಟವನ್ನು ಅದ್ಭುತ ಪದ ಲಾಲಿತ್ಯದಿಂದ ಪೋಣಿಸಿಕೊಟ್ಟಿದ್ದೀರಿ ರವಿ ಸಾರ್!

    ಪಂಚ ಭೂತಗಳನ್ನು ಸಮರ್ಥವಾಗಿ ಬಳಸಿಕೊಂಡು ಕಾವ್ಯವಾಗಿಸುವ ಕಲೆ ನಿಮ್ಮಿಂದ ಮಾತ್ರ ಸಾಧ್ಯ.

    ಪ್ರತ್ಯುತ್ತರಅಳಿಸಿ
  2. ಎಂತಹ ಮನೋಹರ ರಚನೆ.. ಎಂತಹ ಉಪಮೆ..

    ನೀರು ತಂದ ರಮೆಗೆ ಸಿಹಿಮುತ್ತ ನೀಡುತ್ತಾ
    ಸಂಜೆ ಮಧುಮಂಚದ ಸಿದ್ಧತೆಗೆ ಸೂಚನೆಯಿತ್ತ
    ಸೂರ್ಯನ ಮುತ್ತಿಗೆ ರಮೆಯ ಮೈ ಬೆವರಿ
    ಹಣೆಯ ತುಂಬಾ ಬೆವರ ಹನಿ
    ಹಸಿರ ನೆಲದ ತುಂಬೆಲ್ಲಾ ಇಬ್ಬನಿ..!

    ಈ ಸಾಲುಗಳು ನನ್ನನ್ನೇ ಮರೆಸಿಬಿಟ್ಟವು..ಆ ರವಿ ಮತ್ತೆ ಗೆಜ್ಜೆ ಕಟ್ಟಿ ಬಂದು ಭೂರಮೆಯ ಜೊತೆ ರಮ್ಯ ನರ್ತನ ಮಾಡಲಿ.. ಅದರೊಂದಿಗೆ ಭುವಿ ರಮ್ಯ ತಾಣವಾಗಲಿ..

    ಪ್ರತ್ಯುತ್ತರಅಳಿಸಿ
  3. ಚೆನ್ನಾಗಿದೆ ಉಪಮೆಗಳು, ಕವಿತೆ ಮೂರ್ನಾಡರೇ.. ನಿರಾಢಂಬರ=ನಿರಾಡಂಬರ ಆಗಬೇಕಿತ್ತೇ ಅನಿಸಿತು.. ಆಡಂಬರ ಎಂದು ಓದಿದ ನೆನಪು

    ಪ್ರತ್ಯುತ್ತರಅಳಿಸಿ
  4. [ಹಗಲು-ರಾತ್​ರಿಯ ರೆಕ್ಕೆ] ಒಮ್ಮೊಮ್ಮೆ ಸೂರ್ಯ ನಲ್ಲಿ ಹೊಸ ಪ್ರತಿಕ್ರಿಯೆ​.
    Reply |Uma Bhat umabhat.n@gmail.com via blogger.bounces.google.com to me
    show details 4:15 PM (57 minutes ago)

    Uma Bhat ನಿಮ್ಮ ಪೋಸ್ಟ್‌ನಲ್ಲಿ ಹೊಸ ಕಮೆಂಟ್ ಮಾಡಿದ್ದಾರೆ "ಒಮ್ಮೊಮ್ಮೆ ಸೂರ್ಯ":

    ನಿಮ್ಮ ಕಲ್ಪನೆ ಎಷ್ಟು ಸುಂದರವಾಗಿದೆ.....

    ಪ್ರಕಟಿಸು
    ಅಳಿಸು
    ಸ್ಪ್ಯಾಮ್ ಎಂದು ಗುರುತಿಸಿ

    ಈ ಬ್ಲಾಗ್‌ಗಾಗಿ ಮಾಡರೇಟ್ ಕಾಮೆಂಟ್‌ಗಳು.

    Uma Bhat ಹಗಲು-ರಾತ್ರಿಯ ರೆಕ್ಕೆ ಗೆ ೮ ಡಿಸೆಂಬರ್ ೨೦೧೧ ೦೭:೧೫ AM ರಂದು ಪೋಸ್ಟ್ ಮಾಡಿದ್ದಾರೆ

    ಪ್ರತ್ಯುತ್ತರಅಳಿಸಿ