ಶನಿವಾರ, ಡಿಸೆಂಬರ್ 22, 2012

ಹುಡುಗಿ ಕಾಮದ ಬಗ್ಗೆ ಬರೆಯುತ್ತಾಳೆಂದರೆ...!



ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ..
ಗಂಡಸರಿಗೆ ಮೈಯೆಲ್ಲ ಮಿಂಚು
ತಿದ್ದಿ ತೀಡಿ ಕ್ರಾಪು
ಅಲ್ಲಲ್ಲಿ ಬಿಳಿಗೆ ಮೆತ್ತಿ ಕಪ್ಪು
ಹೆಂಡತಿಗೆ ಒಗ್ಗರಣೆ ಮಾತು !

ಹೆಂಗಸರಿಗೆ ಆತಂಕ !
ಒಂದಷ್ಟು ಕನ್ನಡಿ ಮುಂದೆ ಕೆಲಸ
ಅಡುಗೆಗೆ ರುಚಿ ವ್ಯತ್ಯಾಸ
ಗಂಡಸರ ಹೆಜ್ಜೆಗೆ ಹದ್ದಿನ ಕಣ್ಣು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ...
ಹುಡುಗಿಯರಿಗೆ ಹೊಟ್ಟೆಕಿಚ್ಚು
ಕೈಬಳೆ ಸದ್ದು, ಫ್ಯಾಷನ್ ಬಿರುಸು
ಗೆಳತಿಯೊಂದಿಗೆ ತೆಗಳಿ ಪಿಸುಪಿಸು ಮಾತು !

ಹುಡುಗರಿಗೆ ಇನ್ನಿಲ್ಲದ ರಂಗು
ಬೀದಿಗೆ ಬಗೆಬಗೆ ನಡಿಗೆ ನಗು
ಹುಡುಗಿಯರ ಮೇಲೆ ಮತ್ತೆ ಮತ್ತೆ ಕಣ್ಣು
ಖಾಲಿ ಎದೆಗೆ ಪ್ರೇಮ ನಿವೇಧನೆ ಗುಂಗು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ
ಅಪ್ಪಂದಿರಿಗೆ ಇನ್ನಿಲ್ಲದ ಮೌನ
ಅಣ್ಣ-ತಮ್ಮಂದಿರಿಗೆ ಕೋಪ
ಹುಡುಗಿಗೆ ಸಿಗುವುದೇ ಮದುವೆ ಗಂಡು ?

ತಾಯಂದಿರಿಗೆ ಒಳಗೊಳಗೆ ಅಳು
ಅಪ್ಪ-ಅಣ್ಣಂದಿರ ಕಟು ಮಾತು
ನಿನ್ನದಲ್ಲವೇ ಸಲಿಗೆಯೆಂಬ ಕೊಂಕು
ಹೆಜ್ಜೆಹೆಜ್ಜೆಗೆ ಕಾಯುವುದೇ ಅವಳ ದಿನಗಳು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ
ಮುದುಕಿಯರ ಎದೆಗೆ ಕೊರಗು
ಇವಳಿಗೇನು ರೋಗ?
ಲೋಕ ಹಾಳಾಯಿತು ಮಗಾ....
ಮನೆ ಹುಡುಗಿಯರಿಗೆ ಹಿತೋಪದೇಶ !

ಮುದುಕರಿಗೆ ತೊಡೆ ಬಲಿತ ಉಮ್ಮಸ್ಸು
ಕೆದಕಿ ನೆನಪು ಸುಕ್ಕು ರಟ್ಟೆ ಸಲೀಸು
ನಡೆಗೆ ಲಗುಬಗೆ ಸೊಗಸು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆ
ಭೂಮಿಯೇ ಅವಳು
ಭೂತಾಯಿ ಮಗಳು
ಸೂರ್ಯನೇ ಅವಳ ಬದುಕಿನ ತಿರುಳು !
-ರವಿ ಮೂರ್ನಾಡು.

1 ಕಾಮೆಂಟ್‌:

  1. ಆಕೆ ಬರೆದದ್ದೆಲ್ಲ ಆಪ್ತ ಆಲೋಚನಾ ಸರಣಿ. ಇದ್ದದ್ದು ಇದ್ದ ಹಾಗೇ ಆಕೆ ಬರೆಯಬಲ್ಲಳು.
    ಅವಳ ಬರವಣಿಗೆಯ ಬೇಲಿ ಸುತ್ತಲೂ ಇಣುಕೋ ಪಾತ್ರಗಳ ಒಳ ತೋಟಿಯೂ ಬಿಂಬಿತವಾಗಿದೆ.

    ಪ್ರತ್ಯುತ್ತರಅಳಿಸಿ