ಸಾಹಿತ್ಯದಲ್ಲಿ ಯಾವುದೇ ಬಡ್ತಿ, ಮಾನ್ಯತೆ ಇಲ್ಲ. ಒಂದು ಕವಿತೆ-ಕಥೆ- ಕಾದಂಬರಿ- ಸೃಜನಶೀಲ ಬರಹ ಬರೆದು ಉದ್ಯೋಗ ಗಿಟ್ಟಿಸುವ ಯಾವುದೇ ಸರ್ಟಿಫಿಕೇಟಿನ ಭರವಸೆಯೂ ಇಲ್ಲ. ಕುಂಚ ಹಿಡಿದು ಚಿತ್ರ ಬರೆಯುವುದಕ್ಕೆ , ತಾಳಕ್ಕೆ ಹೆಜ್ಜೆ ಹಾಕಿ ನೃತ್ಯ ಮಾಡುವ ತರಗತಿಗಳಿವೆ, ರಾಗಕ್ಕೆ ಲಯ ಸೇರಿಸುವ ಸಂಗೀತ ಪಾಠ ಶಾಲೆಗಳಿವೆ. ನಟ-ನಟಿಯರಾಗಲು ಡಿಪ್ಲೋಮಾ ಕೋರ್ಸುಗಳಿವೆ. ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ತಿನ್ನುವ ಅನ್ನದ ಕೃಷಿ ಕ್ಷೇತ್ರಕ್ಕೆ,ಆರೋಗ್ಯ ಕ್ಷೇತ್ರಕ್ಕೆ, ಕ್ರೀಡೆಗಳಿಗೆ, ಸುದ್ದಿ ಮುಟ್ಟಿಸುವ ಸುದ್ದಿ ಮಾಧ್ಯಮದ ವಿವಿಧ ಮುಖಗಳಿಗೆ, ಮನುಷ್ಯ ದೌರ್ಬಲ್ಯಗಳನ್ನು ಬಂಡವಾಳವಾಗಿಸಿ ಕೊಂಡ ವಾಣಿಜ್ಯಕರಣದ ಹಲವು ಮನೋ ವಿಕಲ್ಪಗಳಿಗೆ ಇವತ್ತು ಒಂದು ತಿಂಗಳಿನಿಂದ ಹಿಡಿದು ಹಲವು ವರ್ಷಗಳವರೆಗಿನ ಪ್ರವಚನ ನೀಡಿ ಕೈಗೊಂದು ಸರ್ಟಿಫಿಕೇಟು ಕೊಡುವ ಸಂಸ್ಥೆಗಳಿವೆ.
ಹಾಗೇ ಎಲ್ಲೆಂದರಲ್ಲಿ ಕಣ್ಣು ಹಾಯಿಸಿದಾಗ ಈ ವ್ಯವಹಾರಿಕ ಪ್ರಪಂಚದಲ್ಲಿ ಎಲ್ಲಾ ಕಲೆಗಳಿಗೂ, ನೈಪುಣ್ಯತೆಗಳಿಗೆ ಒಂದೊಂದು ತರಗತಿ ಪಾಠಶಾಲೆ, ಕಾಲೇಜುಗಳ ಡಿಗ್ರಿ ಸರ್ಟಿಪಿಕೇಟುಗಳು ಸಿಗುತ್ತವೆ. ಆದರೆ, ಸಾಹಿತ್ಯಕ್ಕೆ ಇಲ್ಲ. ಹಾಗಾದರೆ, ಓರ್ವ ಬರಹಗಾರ ಸಾಹಿತ್ಯ ಪ್ರಪಂಚಕ್ಕೆ ಹೇಗೆ ಮತ್ತು ಏಕೆ ಪ್ರವೇಶಿಸುತ್ತಾನೆ ಅನ್ನೋದು ಪ್ರಶ್ನೆ.
ಜನಮಾನಸವನ್ನು ಅತ್ಯಂತ ವೇಗವಾಗಿ ಸೆಳೆಯುವ ಸ್ಪರ್ಧೆಯೆಂದರೆ ಒಂದು ನೃತ್ಯ, ಇನ್ನೊಂದು ಸಂಗೀತ-ಸಿನೇಮಾ. ಇಂದಿನ ಮಾಧ್ಯಮ ವ್ಯವಸ್ಥೆಯಲ್ಲಿ ಇದರ ಅನುಭವವನ್ನು ಕಂಡುಕೊಂಡಿದ್ದೇವೆ. ನಿರಂತರ ಅಭ್ಯಾಸದ ತಾಲೀಮಿನಿಂದ, ದೃಢ ಮನಸ್ಸಿನಿಂದ ಇಂತಹ ಕಲೆಗಳನ್ನು ಸಾಧಿಸಬಹುದು. ಹಾಗಾದರೆ, ಸಾಹಿತ್ಯದ ಗುರಿ ಹೇಗೆ ಮತ್ತು ಎಲ್ಲಿಗೆ? ಇದಕ್ಕೊಂದು ಅಭ್ಯಾಸ ಮತ್ತು ತಾಲೀಮು ಒದಗಿಸಿ ಭರ್ಜರಿ ಪ್ರಚಾರ ಕೊಡುವ ಟೀವಿ ಮಾಧ್ಯಮಗಳ ಕೊಡುಗೆ ಇದೆಯೇ?
"ನಿಮಗೆ ಸಾಹಿತ್ಯದ ರಚನೆಗೆ ಆಸಕ್ತಿ ಇದೆಯೇ.. ಹಾಗಾದರೆ ಬನ್ನಿ ಒಂದು ತಿಂಗಳ ಕೋರ್ಸಿನಲ್ಲಿ ನೀವೊಂದು ಕವಿತೆ-ಕಥೆ ಬರೆಯಬಹುದು" ಎನ್ನುವ ಜಾಹೀರಾತನ್ನು ಎಲ್ಲಾದರೂ ಗಮನಿಸಿದ್ದೀರಾ?, ಇಂತಿಷ್ಟು ತಿಂಗಳ ಹಣ ಸಂಗ್ರಹಿಸಿ ತರಬೇತಿ ಕೊಡುವ ಸಂಸ್ಥೆಗಳನ್ನು ನೋಡಿದ್ದೀರಾ? ಸಿನೇಮಾಗಳಿಗೆ ಸಾಹಿತ್ಯ ಬೇಕು, ಕತೆ ಬೇಕು. ನಟ-ನಟಿಗೆ ಸಿಗುವ ಸಂಭಾವನೆಯಲ್ಲಿ ಸಿನೇಮಾ ಸಾಹಿತ್ಯದ ಕತೆಗಾರ, ಕವಿಗೆ ಕವಡೆ ಕಾಸಿನ ಸಂಭಾವನೆಯೂ ಸಿಗುವುದಿಲ್ಲ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಇಂಡಿಯನ್ ಐಡಿಯಾಲ್ ಅನ್ನುವ ಸ್ಪರ್ಧಾ ಕಣದಂತಹ ವೇದಿಕೆಯನ್ನು ಸಾಹಿತ್ಯಕ್ಕಾಗಿ ಯಾರಾದರೂ ಮಾಡಿದ್ದಾರೆಯೇ? ಏಕಿಲ್ಲ ಅನ್ನೋದು ಸಾವಿರ ಪ್ರಶ್ನೆ. ! . ಸಾಹಿತ್ಯವೂ ಒಂದು ಕಲೆ....ನೃತ್ಯ, ಸಂಗೀತ,ಬದುಕಿನ ನಾಟಕದ ನಟನೆ ಇದರಲ್ಲಿ ಮಿಳಿತವಾಗಿದೆ. ಹಾಗಾದರೆ ಸಾಹಿತ್ಯ ಏಕೆ ಓರ್ವ ಮನುಷ್ಯನನ್ನು ಆರ್ಥಿಕವಾಗಿ ಮೇಲೆತ್ತುವುದಿಲ್ಲ ಅನ್ನೋದು ಅನುಮಾನವನ್ನು ಕಾಡಿದೆ.
ಯಾವುದೋ ಮೂಲೆಯಲ್ಲಿ ಸಾಹಿತ್ಯ ಸ್ಪರ್ಧೆ ನಡೆಯುತ್ತಿದೆ. ಎಲ್ಲೋ ಮೂಲೆಯಲ್ಲಿ ಅತ್ಯಲ್ಪ ಪ್ರೇಕ್ಷಕರನ್ನು ಸೆಳೆದು ಕವಿಗೋಷ್ಟಿ, ಕಾವ್ಯಕಮ್ಮಟ, ಸಾಹಿತ್ಯ ಸಮಾರಂಭ ನಡೆಯುತ್ತಿದೆ. ಏಕಾಗಿ ನಡೆಯುತ್ತಿದೆ ಅಂದರೆ ಉತ್ತರ ಶೂನ್ಯ.! ಓರ್ವ ಬರಹಗಾರ, ಸಾಹಿತಿ ತನ್ನ ಜೀವಮಾನ ಪೂರ್ತಿ ಬರೆದ ಸಾಹಿತ್ಯಕ್ಕೆ ಇವತ್ತು ಭಾರತ ಸರಕಾರ ಕೊಡುವ ಜ್ಞಾನಪೀಠವೆಂಬ ಪ್ರಶಸ್ತಿಯ ಮೌಲ್ಯ ಐದು ಲಕ್ಷ ರೂಪಾಯಿಯನ್ನು ದಾಟುವುದಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಒಂದು ಕವನ ಸಂಕಲನಕ್ಕೆ, ಕಥಾಸಂಕಲನಕ್ಕೆ, ಇನ್ನಿತರ ಸೃಜನಶೀಲ ಸಾಹಿತ್ಯ ಪ್ರಾಕಾರದ ಪುಸ್ತಕಗಳಿಗೆ ಕೆಲ ದಿನಗಳ ನಂತರ ತುಕ್ಕು ಹಿಡಿಯವ ಸ್ಮರಣಿಕೆ, ಹತ್ತು ಸಾವಿರ ದಾಟದ ಪ್ರಶಸ್ತಿ ಮೊತ್ತವನ್ನು ಕೊಟ್ಟು ಕೈತೊಳೆದುಕೊಳ್ಳುತ್ತವೆ. ಇದು ಸಾಹಿತಿಯ ಜೀವಮಾನದ ಸಾಧನೆಗೆ ಕಟ್ಟಿದ ಬೆಲೆ. ಅದೇ ಇಂಡಿಯನ್ ಐಡಿಯಲ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲಿ ವಿಜೇತರಾದರೆ ಪ್ರಶಸ್ತಿಯ ಮೊತ್ತ ಕೇವಲ ಒಂದು ವರ್ಷದ ಪ್ರದರ್ಶನದಲ್ಲಿ ಒಂದು ಕೋಟಿ ರೂಪಾಯಿಯನ್ನು ದಾಟುತ್ತದೆ. ಭೌತಿಕವಾಗಿ, ತಾಂತ್ರಿಕವಾಗಿ,ವೈಜ್ಞಾನಿಕವಾಗಿ ಮುಂದುವರೆದ ಸಮಾಜದಲ್ಲಿ ಇಂತಹ ಬೇಧವೇಕೆ ಬಂತು? ಹಾಗಾದರೆ ವಾಣಿಜ್ಯಕರಣದ ಪ್ರಭಲ ಪ್ರಲೋಭನೆಯ ಈ ಜಗತ್ತಿನಲ್ಲಿ ಸಾಹಿತ್ಯಕ್ಕೆ ಏಕೆ ಓರ್ವ ಮನುಷ್ಯ ಜೀವನವನ್ನು ಕೊಡುತ್ತಾನೆ ಮತ್ತು ಏಕೆ ಮುಡಿಪಾಗಿ ಇಡುತ್ತಾನೆ ಅನ್ನೋದು ಪ್ರಶ್ನೆ.
ಸಾಹಿತ್ಯ ಮನಸ್ಸಿನ ಕಲೆ, ಹಾಗಾಗಿ ಅದಕ್ಕೆ ತಯಾರಾಗಲು ತನಗೆ ತಾನೇ ಓರ್ವ ಮನುಷ್ಯ ಸಿದ್ದವಾಗಬೇಕಾಗುತ್ತದೆ. ಈ ಸಮಾಜದ ದೌರ್ಬಲ್ಯಗಳ ಸಂತೆಯಲ್ಲಿ ಅವನೇ ವ್ಯಾಪಾರಿ, ದಲ್ಲಾಳಿ ಮತ್ತು ಗ್ರಾಹಕ. ತನಗೇ ತಾನೇ ಓರ್ವ ಬರಹಗಾರ ಸರ್ಟಿಫಿಕೇಟು ಗಿಟ್ಟಿಸುವ ಏಕೈಕ ಕಲೆ ಎಂದರೆ ಮನಸ್ಸಿನ ಸ್ವಯಂ ನಿರ್ದೇಶಿತ ಸಾಹಿತ್ಯ ಬರಹದ ಭಾಷೆ. ಇವತ್ತು ಈ ಸಾಹಿತ್ಯ ಎಲ್ಲೆಂದರಲ್ಲಿ ಅನಾದಿ ಕಾಲದಿಂದ ತನ್ನ ಛಾಪನ್ನು ಮೂಡಿಸಿರಬಹುದು. ಈ ರೋಗಗ್ರಸ್ತ ಸಮಾಜವನ್ನು ತನ್ನ ಒಂದು ಬರಹದಿಂದ ತಿದ್ದಲು ಸಾಧ್ಯವಿಲ್ಲವೆಂದು ಬರಹಗಾರನಿಗೆ ಗೊತ್ತಿದೆ. ಅಡ್ಡಾದಿಡ್ಡಿಯಾಗಿ ಚಲಿಸುವ ಎಲ್ಲೋ ಯಾವುದೋ ಒಂದು ಮನಸ್ಸಿಗೆ ತನ್ನ ಮಾತು ಕೇಳಬಹುದು ಎಂದು ಅರಿತುಕೊಳ್ಳುತ್ತಾನೆ. ಅದರಂತೆ ಬರೆದು ತಲುಪಿಸುತ್ತಾನೆ. ತನ್ನ ಬರಹ ಅಂತಹ ಎದೆಗೆ ನಾಟುತ್ತದೆ ಎಂಬ ಒಂದೇ ಒಂದು ಆಶಾಭಾವನೆ ಓರ್ವ ಮನುಷ್ಯನನ್ನು ಸಾಹಿತ್ಯ ಪ್ರಪಂಚಕ್ಕೆ ಎಳೆದು ತರುತ್ತದೆ. ಆಗ ಸಮಾಜದ ಮನಸ್ಸುಗಳು ಮತ್ತು ಸಾಹಿತ್ಯ ಬರಹಗಾರ ಮಾತಾಡುತ್ತಾರೆ. ಇದು ಸಾಹಿತ್ಯ. ಇದನ್ನು ಸೂಕ್ತ ರೀತಿಯಲ್ಲಿ ತಲಪಿಸುವ ಕಾರ್ಯವನ್ನು ಸಾಹಿತ್ಯ ವೇದಿಕೆಗಳು ಮಾಡಿದವು. ಇಲ್ಲಿ ಸಾಹಿತಿ ಮತ್ತು ಸಾಹಿತ್ಯ ಪ್ರೇಮಿಗಳು ಭಾಷೆಯ ಕಾರ್ಯದಲ್ಲಿ ಮೇಲ್ಪಂಕ್ತಿಯಲ್ಲಿ ನಿಂತರು. ಹಾಗಾಗಿ, ಓರ್ವ ಮನುಷ್ಯ ತನಗೇ ತಾನೇ ಕಲಿತು,ವಿಶಿಷ್ಟ ರೀತಿಯಲ್ಲಿ ಪದಗಳ ನಿರೂಪಣೆಯನ್ನು ರೂಢಿಸಿಕೊಂಡ ಫಲವಾಗಿ ತನಗೇ ತಾನೇ ಸಾಹಿತ್ಯದ ಒಂದು ಸರ್ಟಿಫಿಕೇಟು ಗಿಟ್ಟಿಸಿಕೊಳ್ಳುತ್ತಾನೆ.ಆಗ ಓರ್ವ ಬರಹಗಾರ ಹುಟ್ಟಿಕೊಳ್ಳುತ್ತಾನೆ ಮತ್ತು ಹುಟ್ಟಿಸಿಕೊಳ್ಳುತ್ತಾನೆ.
ಮನುಷ್ಯನನ್ನು ಅವನ ಕನಸುಗಳು, ಆಸೆಗಳು ಗುರಿಯೆಡೆಗೆ ತಲಪಿಸುತ್ತವೆ. ಆದಿಲ್ಲದೆ ಮನಸ್ಸಿಗೊಂದು ಅರ್ಥವಿಲ್ಲ. ತನ್ನ ಈ ಜೀವಮಾನದಲ್ಲಿ ತನ್ನ ಕಾಲದ ನಂತರ ಇನ್ನೊಂದು ಜೀವನ ಇದೇ ಎನ್ನುವ ಕಲ್ಪನೆಯನ್ನು ಅಳವಡಿಸಿಕೊಂಡವನು ಮತ್ತೊಂದು ಜೀವ ಜೀವನ ಮೌಲ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಬಹುದು. ಹಾಗಂತ, ಎಲ್ಲರಿಗೂ ಒಂದೇ ಜೀವನ, ಇದೇ ಒಂದು ಜೀವನದ ವರ್ತುಲದಲ್ಲಿ ಸಂತಸವನ್ನು ಕಂಡುಕೊಳ್ಳುವುದು ಅವನ ಮೂಲಧ್ಯೇಯವಾಗಿದೆ ಎಂದು ಸಾಹಿತ್ಯದಲ್ಲಿ ಅವನು ಪ್ರತಿಪಾದಿಸುತ್ತಾನೆ. ಅಲ್ಲಿ ಕನಸುಗಳು ಮಾತಾಡುತ್ತವೆ, ಆಸೆಗಳು ಏನನ್ನೋ ಹೇಳಲು ಉದ್ಯುಕ್ತವಾಗುತ್ತವೆ. ಮನಸ್ಸಿನ ನ್ಯಾಯ ಕಮ್ಮಟದಲ್ಲಿ ಪ್ರತಿಪಾದಿಸುವ ಪ್ರತಿಯೊಂದು ಮಾತನ್ನು ನವೀನ ಭಾಷಾ ವೈಖರಿಯಲ್ಲಿ ಸಾಹಿತಿ ವಿವರಿಸುತ್ತಾನೆ. ಅದನ್ನು ಜಗತ್ತಿನ ನಾವು ಓದಿದ ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲಿ ಕಾಣಬಹುದು. ಕನ್ನಡದಲ್ಲಿ ನಮಗೆ ಪರಿಚಯವಿರುವ ಪಂಪನಿಂದ ಹಿಡಿದು ನಮ್ಮ ನೆನಪಿನಲ್ಲಿರುವ ಈಗಿನ ತಲೆಮಾರಿನ ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ,ಬಸವಣ್ಣ, ಅಕ್ಕ, ಸರ್ವಜ್ಞ, ದಾಸ ಸಾಹಿತ್ಯ, ಜಾನಪದಗಳು ಅಜರಾಮರವಾಗಿವೆ. ಇಂತಹ ಸಾಹಿತ್ಯ ಹುಟ್ಟಿಕೊಂಡಿದ್ದೆ ಅವರ ಕಾಲಕ್ಕೆ ಮತ್ತು ನಂತರದ ಬದುಕಿಗೆ. ಇಲ್ಲವಾದ ಪರಿಕಲ್ಪನೆಯಲ್ಲಿ ಮತ್ತೊಮ್ಮೆ ಇರುವಂತೆಯೇ. ಅವರು ಕಟ್ಟಿದ ಕಟ್ಟು ಕಥೆಯೇ ಇರಬಹುದು. ಅದು ವಾಸ್ತವ ಪ್ರಪಂಚಕ್ಕೆ ಮತ್ತೆ ಮತ್ತೆ ಎಡತಾಕುತ್ತವೆ. ಇಲ್ಲಿ ಎಲ್ಲವೂ ಸತ್ಯವಾಗಿದೆ. ಕವಿ ಕಲ್ಪನೆ ನಿಜ ಬದುಕಿನಲ್ಲಿ ಹೊಸ ಅಂದಾಜನ್ನು ಹೊರ ಹಾಕಿವೆ. ಹಾಗಾಗಿ, ಸಾಹಿತ್ಯಕ್ಕೆಂದೇ ಬರೆದುಕೊಂಡ ಸತ್ಯಗಳು ಇತಿಹಾಸದ ಮಜಲನ್ನು ದಾಟಿ ನಮ್ಮ ಈಗಿನ ಸಮಾಜದ ಮನುಷ್ಯರೊಂದಿಗೆ ಮಾತಾಡುತ್ತಿವೆ.ಅದು ಈಗಿನ ಸಾಹಿತಿಗಳ ಬರಹಗಳು ಮುಂದಿನ ಪೀಳಿಗೆಯಲ್ಲಿ ಸಂಭವಿಸುತ್ತವೆ.
ಉತ್ಕೃಷ್ಟ ಸಾಹಿತ್ಯ ಹುಟ್ಟುವುದೇ ಹುಲ್ಲು ಗುಡಿಸಲ ಜೋಪಡಿಯಲ್ಲಿ, ನೋವು-ನಲಿವಿನ ಅನುಭವದಲ್ಲಿ, ಮಾನವೀಯತೆ ಅಂತಃಕರಣದಲ್ಲಿ, ಮನುಷ್ಯ ಜೀವನದ ಸಕಲ ದಿಕ್ಕುಗಳ ಅನುಭವವಿಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ. ಪ್ರೀತಿಯ ನೋವು ಮತ್ತು ನಲಿವು ಅರಿಯದ ಮನಸ್ಸು ಯಾರೊಂದಿಗೂ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ, ಮಾನವೀಯತೆಯೇ ಇಲ್ಲದ ಮನಸ್ಸಿನಿಂದ ಹುಟ್ಟಿದ ನಾಟಕೀಯ ಪದಗಳು ಬದುಕುವುದೇ ಇಲ್ಲ.ಆದ್ದರಿಂದ ಬರಹಗಾರ ಮಿಕ್ಕೆಲ್ಲ ಕಲೆಯ ಶ್ರೀಮಂತಿಕೆಯಿಂದ ಬಡವನಾಗಿ ಉಳಿದಿದ್ದಾನೆ. ಸಕಲ ನಲಿವಿನ ಭೋಗಗಳು ಕನಸುಗಳು ಮಾತ್ರ ಅವನ ಪಿಸುಮಾತಾಗಿರುತ್ತವೆ..ಆದ್ದರಿಂದ ಅವನಿಂದ ತನ್ನ ಪೀಳಿಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಉಳಿಯುವ ಬರಹದ ಮಾತುಗಳು ಉಳಿಯುತ್ತವೆ. ಸಾಹಿತ್ಯ ಜಗತ್ತಿನ ಎಲ್ಲಾ ಕಲೆಗಳ ಅನುಭವದ ಪಟ್ಟಿ. ಅದು ಅವನ ಮನಸ್ಸಿನ ಭಾಷೆಯ ಅಳೆತೆಗೋಲು. ಅದಕ್ಕೆ ಯಾವುದೇ ಸಮ್ಮಾನವೂ ಸರಿಸಮಾನವಲ್ಲ. ಮನಸ್ಸಿನ ಅಸ್ತವ್ಯಸ್ತ ಭಾರಗಳು ಇಂದು ಮತ್ತು ನಾಳೆಗಳಿಗೆ ಬದುಕುವ ಪಾತ್ರಗಳು ಸಾಹಿತ್ಯವಾಗುತ್ತವೆ.
-ರವಿ ಮೂರ್ನಾಡು.