ಶನಿವಾರ, ಮಾರ್ಚ್ 31, 2012

ಹಸಿವಿನ ಬೆಂಕಿಗೆ ಸೆರಗಿನ ಗಾಳಿ ಹಾಯಿಸಿದಾಗ...!


-ರವಿ ಮೂರ್ನಾಡು.
ಈ ದಿನದ ಸುದಿನಕ್ಕೆ ಕಾಯುತ್ತಿದ್ದೆ. ಮನೆಯವರೆಲ್ಲರೂ ಬರುವಾಗ ಸಂಜೆಯಾಗಬಹುದು. ಏನಿದು ಸುಡುತ್ತಿದೆ ಬೆಂಕಿಯ ದೇಹ ?. ಬಹುಕಾಲದ ನಿರೀಕ್ಷೆಗೆ ಕಾದು ಗಾಳಿಗೆ ತೇಲುತ್ತಿದೆ ಪಾದಗಳು. ಮನೆಯೆಲ್ಲಾ ಓಡಾಡುತ್ತಿದೆ ಮನಸ್ಸು. ಯಾರೂ ಇಲ್ಲ.. ಖಾಲಿ ಖಾಲಿ. ಇದೊಂದು ದಿನವನ್ನು ಸಾಕಾರಗೊಳಿಸುತ್ತೇನೆ. 
ದೇಹ ನರ ಸೆಟೆದು ಬಿಗಿಯಾಗುತ್ತಿದೆ. ಇವತ್ತು ಮುಗಿಸಿ ಬಿಡಲೇಬೇಕು.ಎಲ್ಲಿ ಅವನ ಮೊಬೈಲ್ ಸಂಖ್ಯೆ ?.... ಅಹಾ.!  ರಿಂಗಣಿಸುತ್ತಿದೆ. ಎದುರುಸಿರು ಮಾತಿಗಿಂತ ಮೊದಲೇ ನಡುಗುತ್ತಿತ್ತು.
" ಹಲೋ ಮಾರ್ಟಿನ್, ಇವತ್ತು ಅದು ನಡೆಯಬೇಕು ಸಂಜೆಯೊಳಗೆ,"
" ಅಹಾ ! ಹೌದಾ ? ಮೊನ್ನೆ ನೋಡಿದ್ದು ನಡೆಯಬಹುದು. ಸಂಜೆವರೆಗೆ "
" ಬೇಗ ಬರಬೇಕು"
" ಈಗಲೇ ಬರುತ್ತೇವೆ, ಅರ್ಧ ಗಂಟೆಯಲಿ "
ಬೆವತ ಕೈ ನಡುಗುತ್ತಲೇ ಮೊಬೈಲ್ ಜೇಬಿಗಿಳಿಸಿತು. ಹೊರ ಕೋಣೆಯಗಳನ್ನೊಮ್ಮೆ ಸರಿಪಡಿಸಿ, ಮಡಚಿಟ್ಟ ಬೆಡ್‍ಶೀಟುಗಳನ್ನು ಮತ್ತೊಮ್ಮೆ ಮಡಚುತ್ತೇನೆ.ದಿಂಬುಗಳಲ್ಲಿ  ಮೆತ್ತನೆಯನ್ನು ಒತ್ತಿ ನೋಡಿದೆ.ಇನ್ನಷ್ಟು ಮೆತ್ತಗೆ ಇದೆ. ಮನೆಯ ಹೊರೆಗೆ ಒಮ್ಮೆ ಇಣುಕುತ್ತೇನೆ. ಇವತ್ತು ಭಾನುವಾರ. ಅಕ್ಕಪಕ್ಕದ ಮನೆಯಲ್ಲಿ ಟೀವಿ ಸೀರಿಯಲ್ ನೋಡುವವರ ತಾಳ್ಮೆಗೆ ಖುಷಿಯಾಗುತ್ತಿದೆ. ಗಾಳಿಯೊಂದು ಕಸ ಕಡ್ದಿಗಳ ಗುಡಿಸುತ್ತಿದೆ ಬೀದಿಗೆ. ಮೊನ್ನೆ ತಂದಿದ್ದ ಸುಗಂಧ ದ್ರವ್ಯ ಮೈಗೆ ಬಳಿದು, ಮತ್ತೆ ಮತ್ತೆ ಕನ್ನಡಿಯಲ್ಲಿ ತಲೆ ಬಾಚುತ್ತೇನೆ. ಕುಡಿ ಮೀಸೆ ತೀಡಿಕೊಳ್ಳುತ್ತೇನೆ. ಅಹಾ..! ಈಗ ಸುಗಂಧ ದ್ರವ್ಯಕ್ಕೆ ಇನ್ನಷ್ಟು ಪರಿಮಳ ಬಂತು. ಕೋಣೆಯೆಲ್ಲ ಅದೇ ಸೊಗಡು.ಮತ್ತೊಂದಷ್ಟು ಸಿಂಪಡಿಸಿದೆ ಬಟ್ಟೆಗೆ.  ಯಾರಿಗೂ ಗೊತ್ತಾಗದಿದ್ದರೆ ಸಾಕು ಮನೆಯ ಗೇಟೊಂದನ್ನು ಬಿಟ್ಟು. ಅದೋ ರಿಕ್ಷಾ ಬರುತ್ತಿರುವ ಶಬ್ಧ  !.ಯಾರದು ? ಅವರು ಬಂದರು. ಮೂಟೆ ಕಟ್ಟಿದ ಕನಸು ಒಂದೊಂದಾಗಿ ಬಿಚ್ಚ ತೊಡಗಿತು ಮನೆಯೊಳಗೆ.
ಇಬ್ಬರು ಬಂದರು. ಹೊರ ಕೋಣೆಗೆ ನಿಂತವಳಿಗೆ ಕುರ್ಚಿ ತೋರಿಸಿದ್ದೆ. ತಗ್ಗಿದ ಮುಖ ಮೇಲೆತ್ತದೆ ನೆಲವನ್ನೇ ನೋಡುತ್ತಾ ಕುರ್ಚಿಗೆ ಸೌಂದರ್ಯ ಹೆಚ್ಚಿಸಿತು. ಮುಂದಿದ್ದನ್ನು ನಿರೀಕ್ಷಿಸುತ್ತಿತ್ತು.
ತಲೆ ತಗ್ಗಿಸಿ ಬರುತ್ತಿದ್ದಾಳೆ ಇವನೊಂದಿಗೆ. ಬೆಳ್ಳಗಿನ ದೇಹ. ಕುರುಡು ಕಣ್ಣಿಗೆ ಮುಚ್ಚಿಟ್ಟು. ನನ್ನ ಸುಗಂಧ ದ್ರವ್ಯಕೆ ಮೂಗು ಮುಚ್ಚಿ  ಹಾರಿ ಬಂದ ಚಿಟ್ಟೆಗೆ ರೆಕ್ಕೆ ಮುದುರಿದಂತೆ.
" ಚೆನ್ನಾಗಿದೆ, ನಿನಗೆ ಖುಷಿಯಾಗುತ್ತದೆ. ಮುಗಿದ ಮೇಲೆ ಫೋನ್ ಮಾಡು"
ಹೇಳಬೇಕಾದದ್ದನ್ನು ಹೇಳುತ್ತಲೇ ಹೊರಟು ಹೋದ.ಈಗ ಕದ ಮುಚ್ಚುವ ಸರದಿ. ಒಮ್ಮೆ ಅವಳನ್ನು ನೋಡಿದ್ದೆ. ನೋಡುತ್ತಿದ್ದ ನೆಲದಿಂದ ನಡುಕವೊಂದು ನನ್ನ ಪಾದದವರೆಗೆ ತೆವಳಿಕೊಂಡು ಬರುತ್ತಿದೆ. ಬಾಗಿಲ ಚಿಲಕವನ್ನೊಮ್ಮೆ ಪರೀಕ್ಷಿಸಿದೆ. ಮುಚ್ಚಿ ಮತ್ತೊಮ್ಮೆ ತೆರೆದು ಭದ್ರಪಡಿಸಿಕೊಂಡೆ. ಈಗ ಭದ್ರವಾಗಿದೆ.
ಇದೇಕೆ ನಡುಗುತ್ತಿದೆ ಕೈ !, ಚಪ್ಪಲಿಯಿಲ್ಲದ ಪಾದಗಳಿಗೂ ಏನೋ ಮೆಟ್ಟಿಕೊಂಡ ಭಾರ...! ಅವಳನ್ನು ನೋಡುತ್ತಲೇ ಪಕ್ಕದ ಸೋಫಾದಲ್ಲಿ ಕುಳಿತೆ. ಏನು ಮಾತಾಡಬೇಕು ?, ಇಲ್ಲ.. ಹೇಗೆ ಶುರು ಹಚ್ಚಬೇಕು? ಅವಳ ತಗ್ಗಿದ ಮುಖ ಮೇಲೆತ್ತಲು ಕೊಂಚ ದೂರವಿದ್ದೇನೆ. ಅಬ್ಬಾ..! ಬಟ್ಟೆಯೆಲ್ಲಾ ಒದ್ದೆ. ಪಕ್ಕದಲ್ಲಿ  ಮಂಚದ ತಲೆಗೆ ತಗುಲಿದ್ದ ಟವಲ್ ತೆಗೆದು ಬೆವರೊರೆಸಿಕೊಂಡೆ. ನೀರಿನ ಜಾರ್ ಬಗ್ಗಿಸಿ ಹಾಗೇ ಎತ್ತಿ  ಖಾಲಿಯಾಗುವಂತೆ ಕುಡಿದೆ. ಖಾಲಿಯಾಯಿತು, ಮೇಜಿಗೆ ಗೊತ್ತಿಲ್ಲದಂತೆ ಇಟ್ಟುಬಿಟ್ಟೆ. ನನ್ನ ಏರು ಉಸಿರ ಸದ್ದಿಗೆ ಅದು ಶೂನ್ಯವಾಯಿತು.  ಈಗ ಮಾತಾಡುತ್ತೇನೆ......
" ನಿಮ್ಮ ಹೆಸರು?"
ತಗ್ಗಿದ ಧ್ವನಿಗೆ ಗಲಿಬಿಲಿಗೊಂಡು ಮೇಲೆತ್ತಿದ ಮುಖ ಸರಕ್ಕನೇ ಹೆಸರು ಹೇಳಿತು.ಮತ್ತಷ್ಟು ಪುಳಕಿತಗೊಂಡ ದೇಹ ಮತ್ತೊಮ್ಮೆ ಬೆಂಕಿಯಂತೆ ಸುಡುತ್ತ ಬೆವರು ಸುರಿಸುತ್ತಲೇ ಇದೆ. ಮತ್ತೊಮ್ಮೆ ಒರೆಸಿಕೊಂಡೆ. ಸಾಕಾಗಲಿಲ್ಲ , ಮತ್ತೊಮ್ಮೆ ಕೇಳಬೇಕು.
" ನಿಮ್ಮ ಊರು?"
" ಅಹಾ..! ಇದೇ ಊರು?"
ಈಗ ಸ್ವಲ್ಪ ಸಡಿಲವಾಯಿತು. ಹತ್ತಿರವಾದಂತಿದೆ. " ಅವತ್ತು ನೋಡಿದಾಗ ಚೂಡಿದಾರ್ ಹಾಕಿದ್ದೀರಿ?"
ಕಸಿವಿಸಿ ಎನಿಸಿತೇನೋ . ಮರುತ್ತರವಿಲ್ಲ. ಸೆರೆಗಿನಿಂದ ಬೆವರು ಒರೆಸಿ, ಮತ್ತೊಮ್ಮೆ ಮುಖ ಕೆಳಗೆ ಮಾಡಿದಳು.
ಮಂಚದಿಂದ ಎದ್ದವನು " ಸ್ವಲ್ಪ ಇರಿ, ಈಗ ಬಂದೆ"
ಅಡುಗೆ ಮನೆಯಿಂದ ತುಂಬಿದ ಲೋಟ ತಂದು ಕೊಟ್ಟೆ. ವಿಚಲಿತಗೊಂಡ ಅವಳು " ಇದೇನಿದು?"
" ನೀರು. ಕುಡಿಯಿರಿ"  ಮನೆಗೆ ಯಾರೂ ಬಂದರೂ ನೀರು ಕೊಡುವುದನ್ನು ಕಲಿತಿದ್ದೇನೆ ಅನ್ನಬೇಕಿತ್ತು.
ಸರಕ್ಕನೇ ಕೈಯಿಂದ ಲೋಟ ಕಿತ್ತು ಒಂದೇ ಗುಟುಕಿಗೆ ಮುಗಿಸಿದಳು. ಲೋಟ ನನ್ನ ಕೈಗಿತ್ತು, ಸೆರೆಗಿನಿಂದ ತುಟಿ ಒರೆಸಿ " ಹೋಗುವ" ಅಂದಳು.
"ಅಹಾ..! ಬನ್ನಿ"
" ಇಲ್ಲೇ ಆಗಬಹುದುದಲ್ಲ?"
"ಬೇಡ, ಇದು  ಅಪ್ಪ ಮಲಗುವ ಮಂಚ, ನನ್ನ ಕೋಣೆಗೆ ಹೋಗುವ"
ಬೆವರು ಕಿತ್ತು ಬರುತ್ತಿದೆ. ಕೈ ಕಾಲು ನಡುಗುತ್ತಲೇ ಇದೆ, " ಇದೇನು  ಬೆವರುತ್ತಿದ್ದೀರಿ?"
ಸೆಕೆ... ತುಂಬಾ ಸೆಕೆ ! ಫ್ಯಾನ್ ಇಲ್ಲದಿದ್ದದ್ದು ಒಳ್ಳೆಯದಾಯಿತು. ನಿಜ ಗೊತ್ತಾದರೆ ಮತ್ತಷ್ಟು ಬೆವರಿಗೆ ಕೆಲಸವಾಗುತ್ತಿತ್ತು. ನನ್ನ ಕೋಣೆಯ ಕಡೆಗೆ ನಡೆಯುತ್ತಲೇ ಇದ್ದೇವೆ. ಅಡುಗೆ ಕೋಣೆಗೆ ಸಮೀಪಿಸುತ್ತಿದ್ದಂತೆ ಅಮ್ಮ ಮಾಡಿದ ಸಾರಿನ ಘಮಘಮ ಮೂಗಿಗೆ ಬಡಿಯುತ್ತಿದೆ. ಪಕ್ಕನೇ ನಿಂತು ಅಡುಗೆ ಕೋಣೆಗೆ ಒಮ್ಮೆ ಕಣ್ಣಾಯಿಸಿದ್ದಳು.
" ಇಲ್ಲಲ್ಲ. ಅಲ್ಲಿ " 
ಪಕ್ಕದಲ್ಲೇ ನನ್ನ ಕೋಣೆಯ ಹೊರಭಾಗದಲ್ಲಿ ನಾಚಿಕೆಯಿಂದ ಯೋಚಿಸುತ್ತಾ ನಿಂತೆ. ಅಲ್ಲಲ್ಲಿ ಕಾಗದಗಳ ಚೂರು, ಮುದ್ದೆ ಬಿದ್ದ ಬೆಡ್ ಶೀಟ್, ಇರಬಾರದ ಸ್ಥಳದಲ್ಲಿ ಕುಕ್ಕುರು ಬಡಿದ ದಿಂಬು.ಅಲ್ಲೇ ಕೆಳಗೆ ಬಿದ್ದ ಟವಲ್ಲು.
" ಇಲ್ಲೇ ಇರಿ, ಸ್ವಲ್ಪ ಸರಿಪಡಿಸುತ್ತೇನೆ"
ಕೋಣೆಗೊಂದಿಷ್ಟು ಹೊಸ ಅತಿಥಿಯ ಸತ್ಕಾರ. ಗೋಡೆಗಳೆಲ್ಲ ಉಸಿರು ಬಿಗಿ ಹಿಡಿದು ಮುಂದಿನದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಂಡಂತಿವೆ. ನನಗೊಂದು ನಗು ! ಬೆಡ್ ಶೀಟ್ ಮಂಚದಲ್ಲಿ  ಅಚ್ಚುಕಟ್ಟಾಗಿ ಹರವಿದೆ. ಮಲ್ಲಿಗೆ ಪರಿಮಳದ ಕನಸು. ದಿಂಬು ಮೆಲ್ಲನೇ ಎತ್ತಿ ಇರಬೇಕಾದ ಸ್ಥಳದಲ್ಲಿ ಇಟ್ಟೆ. ಇಲ್ಲ ಮಂಚದ ಮಧ್ಯಕ್ಕೆ ಇಟ್ಟೆ. ಅಹಾ..! ಈಗ ಎಲ್ಲಾ ಸರಿಯಾಗಿದೆ. ಮುಂದಿನ ಕ್ಷಣಗಳಿಗೆ ಅವಳ ಕೈ ಹಿಡಿದು ಕರೆಯಲು ಹೊರ ಬಂದೆ.
ಅರೆ...! ಇವಳೆಲ್ಲಿ ?. ಮತ್ತೊಮ್ಮೆ ಬಾಗಿಲನ್ನು ಚೆನ್ನಾಗಿ ತೆರೆದು ಹೊರಬಂದೆ. ಅವಳಿಲ್ಲ. ಆಚೆ- ಈಚೆ ಸರ ಸರನೇ ಕತ್ತು ತಿರುಗಿಸಿದೆ.  ಎಲ್ಲಿ ಹೋದಳು?. ಅಮ್ಮನ ಕೋಣೆಗೆ ಕುಳಿತುಕೊಂಡಳೋ ?. ಅಲ್ಲಿಯೂ ಇಲ್ಲ. ಓಡಿ ಹೋದಳೋ? ಇಲ್ಲ. ಸಾಧ್ಯವಿಲ್ಲ. ಬಾಗಿಲ ಕೀಲಿ ಕೈ ನನ್ನಲ್ಲೇ ಇದೆ. ನನ್ನ ಸ್ಥಿತಿಗೆ ಬೇಸರಿಸಿಕೊಂಡಳೋ ? ಎಲ್ಲಿಯೂ ಇಲ್ಲ.  ಅಮ್ಮನ ಕೋಣೆಯಿಂದ ಹೊರಬರುತ್ತಿದ್ದೇನೆ.
ಇಲ್ಲಿಯೇ..  ಇಲ್ಲಿಯೇ ..! ಏನೋ ಒಂದು ಧ್ವನಿ ಕೇಳಿಸುತ್ತಿದೆ ಮನೆಯೊಳಗೆ.
ಅದೋ ಹೆಣ್ಣಿನ ಧ್ವನಿ...! ಕೈಬಳೆ ಸದ್ದು, ತಾಳಬದ್ದವಾಗಿ ಕೇಳುತ್ತಿದೆ ಉಸಿರು. ಯಾರಾದರೂ ಗೊತ್ತಿಲ್ಲದೆ ಇವಳೊಂದಿಗೆ ಇದ್ದಾರೋ? ಇಲ್ಲ, ಗಂಡಸಿನ ಧ್ವನಿಯಿಲ್ಲ. ಒಂಟಿ ಹೆಣ್ಣಿನ ಧ್ವನಿ. ಅನುಮಾನಗಳು ಸಾವಿರ ಕಾಡುತ್ತಿವೆ. ಇಷ್ಟರವರೆಗೆ ಕತ್ತೆತ್ತಿ ನೋಡದ ಮನೆಯ ಮೂಲೆ ಮೂಲೆಗಳ ಪರಿಚಯವಾಗುತ್ತಿದೆ. ಎಲ್ಲಿಂದ ಬರುತ್ತಿದೆ ಈ ಧ್ವನಿ..? ಇವಳೆಲ್ಲಿ ಕುಳಿತಿದ್ದಾಳೆ ? ಒಂದೇ ಉಸಿರಿಗೆ ವೇಗವಾಗಿ  ಮೊದಲು ಕುಳಿತಿದ್ದ ಅಪ್ಪನ ಕೋಣೆಗೆ ಓಡಿ ಬರುತ್ತಿದ್ದೇನೆ. . ಅಹಾ ..! ಅದೋ ಹೆಣ್ಣಿನ ನೀರಾಡಿಕೆಯ ಶಬ್ಧ ...! ಇಲ್ಲೇ ಅಡುಗೆ ಕೋಣೆಯಿಂದ ಬರುತ್ತಿದೆ.
ಒಳ ನುಗ್ಗಿದ ರಭಸಕ್ಕೆ ಕಾಲುಗಳು ವೇಗ ಕಳೆದುಕೊಂಡವು. ಏನೂ ತೋಚದೆ ಗಕ್ಕನೇ ನಿಂತು ಕುಸಿದು ಹೋಗಿದೆ. ಎರಡೂ ಕೈಗಳೂ ಕೋಣೆಯ ಬಾಗಿಲಿಗೆ ಅಧಾರಕ್ಕೆ ನಿಂತವು. ಮತ್ತಷ್ಟೂ ಬೆವರು. ದೇಹ- ಮನಸ್ಸು ಕರಗಿ  ಹೋಗುತ್ತಿದೆ....
ನೋಡುತ್ತಲೇ ಇದ್ದೆ . ಅಡುಗೆ ಕೋಣೆಯ ಮೂಲೆಯಲಿ ಕುಳಿತಿದ್ದಾಳೆ.  ಸೆರೆಗಿನಿಂದ ಅನ್ನವನ್ನು ಒಂದೇ ಸಮನೇ ತಿನ್ನುತ್ತಿದ್ದಾಳೆ. ಒಂದು ಘಳಿಗೆಯೂ ಬಿಡುವಿಲ್ಲದೆ ಅನ್ನ- ಕೈ- ಬಾಯಿ ಒಂದಾಗುತ್ತಿದೆ. ತಟಕ್ಕನೇ ಕೈಯಲ್ಲಿದ್ದ ಅನ್ನ ಬಾಯಿಗೆ ಹೋಗದೇ ಅರ್ಧದಲ್ಲೇ ನಿಂತಿತು. ಯಾರೋ ನೋಡುತ್ತಿದ್ದಾರೆ ಅನ್ನುವ ಅನುಮಾನ. ನಿಧಾನವಾಗಿ ನನ್ನೆಡೆಗೆ ಕತ್ತು ತಿರುಗಿಸಿದಳು.
" ನನ್ನನ್ನು ಕ್ಷಮಿಸಿಬಿಡಿ", ಬಾಯಲ್ಲಿದ್ದ ಅನ್ನ ಗಂಟಲಲ್ಲಿ ಸಿಕ್ಕಿಸಿ ಒಂದು ದಯಾನೀಯ ವಿಷಾಧದ ಮಾತು.
"ಅನ್ನ ನೋಡುವಾಗ ಎಲ್ಲವನ್ನೂ ಮರೆತು ಬಿಟ್ಟೆ. ಒಂದಷ್ಟು ತಿಂದು ನಿಮ್ಮ ಕೆಲಸಕ್ಕೆ ಕೋಣೆಗೆ ಬರುತ್ತೇನೆ".
          ಹೇಳುತ್ತಲೇ ಮತ್ತಷ್ಟು ಅನ್ನ ಬಾಯಿಗಿಟ್ಟಳು, ತುತ್ತು ಅನ್ನ ಗಂಟಲಿಗೆ ಸಿಕ್ಕಿ ಒಂದಷ್ಟು ಕೆಮ್ಮ ತೊಡಗಿದಳು. ಕ್ಷಣ ಒಂದು ಚೆಂಬು ನೀರು, ಲೋಟ ಮುಂದಿಟ್ಟೆ. ತಿನ್ನುತ್ತಲೇ ಇದ್ದಳು. ಭಾರವಾಗಿ ನೆಲಕ್ಕೆ ಕಾಲು ತಿಕ್ಕುತ್ತಾ, ಕೋಣೆಗೆ ಹೆಣದಂತೆ ಬಂದು ಕುಳಿತಿದ್ದೇನೆ. ಹತ್ತು ನಿಮಿಷ ಜಗವ ಮರೆತಿದ್ದೇನೆ.
ಸೆರಗಿಗೆ ಕೈ ಒರಸಿ, ಮುಖವನ್ನೊಮ್ಮೆ ತಿಕ್ಕಿ ನನ್ನ ಮುಂದೆ ನಿಂತಿದ್ದಾಳೆ. ಮುಖದಲ್ಲಿ ಈಗ ಇನ್ನಿಲ್ಲದ ರಂಗು.
" ಊಟ ಮಾಡಲಿಲ್ಲ ಅಂತ ನೀವು ಹೇಳಲಿಲ್ಲ"
ಮಾತಿಲ್ಲದ ಹಸಿವಿಗೆ ಕ್ರೀಯೆಯ ಸ್ವರವೆಲ್ಲಿ ಅನ್ನುವ ಪ್ರಶ್ನೆ ಅಲ್ಲಿದ್ದಂತಿದೆ. " ನಾನು ಈಗ ಸಿದ್ದಳಾಗಿದ್ದೇನೆ"
" ಹೊಟ್ಟೆ ತುಂಬಿತೇ ? ಅಮ್ಮ ರುಚಿಯಾದ ಸಾರು ಮಾಡಿದ್ದಾರೆ. ತಟ್ಟೆಯಲ್ಲಿ ಇನ್ನೊಂದಷ್ಟು ಬಡಿಸಿ ತರಲೇ?"
"ನಿಮ್ಮೊಂದಿಗೆ ಕಳೆಯಲು ಈಗಿನ ಬೆಂಕಿಯನ್ನು ಆರಿಸಿದ್ದೇನೆ. ಈ ಹೊತ್ತಿಗೆ ಸಾಕು "
ಮುಖ ಎತ್ತಿ ನೋಡುತ್ತಲೇ ಇದ್ದೆ, ಅವಳ ಮುಖದಲ್ಲಿ ಸಾವಿರ ಜಗತ್ತು ತಿರುಗುತ್ತಿದೆ. ಈರ್ವರ ಹಸಿವಿನ ಬೆಂಕಿಗೆ ಸಾಕ್ಷಿಯಾಗಿ ಬೂದಿ ಮಾತ್ರ ಉಳಿದಿದೆ. ಗಾಳಿ ಹೊಗೆಯಾಡುತ್ತಿತ್ತು.
" ಮನೆಯಲ್ಲಿ ಮಗು ಅಳುತ್ತಿರುವ ಸ್ವರ ಕೇಳಿಸುತ್ತಿದೆ. ಬೇಗ ಹೋಗಬೇಕು" ಮತ್ತೊಮ್ಮೆ ಹಸಿವಿನ ಗಾಳಿ ಮಿಸುಕಾಡಿತು.
" ಬೆಳಿಗ್ಗೆ ಏನೂ ಇರಲಿಲ್ಲ. ಮಗುವಿನ ಹಸಿವು ಹಿಂಗಿಸುವಷ್ಟು ಹಾಲು ನನ್ನಲ್ಲಿರಲಿಲ್ಲ. ರಾತ್ರಿಯ ನಮ್ಮ ಊಟಕ್ಕೆ  ನನ್ನನ್ನು ಸ್ವೀಕರಿಸಿ"
ಅವಳು ಸೆರಗು ಬಿಚ್ಚಿದಳು. ಹಸಿವಿನ ಬೆಂಕಿಯ ಬಾಣಲೆಯಲ್ಲಿ ಬಿದ್ದಿದ್ದೇನೆ. ಬೆಳಗ್ಗಿನ ತಿಂಡಿ ತಟ್ಟೆಗಿಟ್ಟು ಗಡಿಬಿಡಿಯಲ್ಲಿ  ಹೊರಗೆ ಹೋದ ಅಮ್ಮ ಮನೆಗೆ ಬರುವುದನ್ನೇ ಯೋಚಿಸುತ್ತಿದ್ದೇನೆ.
(Photo from: Google)

ಮಂಗಳವಾರ, ಮಾರ್ಚ್ 27, 2012

ವಾರದ ಆ ಸಂತೆ - ೨


ಆ ಅಂಗಡಿ ಮುಂಗಟ್ಟಿಗೆ
ಈ ಸಂತೆಗೆ ಉಳಿದವರ
ಎಲುಬುಗಳ ನೋಡುತ್ತಿದ್ದೇನೆ !
ಕೇಜಿಗೊಂದಿಷ್ಟು ಮಾಂಸಖಂಡಗಳಿಗೆ
ಅಲ್ಲೇ ಗಟಾರಕೆ ಹನಿದ ರಕ್ತ
ನಿಸ್ತೇಜ ಇವುಗಳ ಅಪ್ಪಿ
ಮೈ ಅದುರಿಸುವುದ ಕಾಯುತ್ತಿದ್ದೇನೆ !

ಯಾರಿಗೂ ಬೇಡದ ಸೊಪ್ಪು
ಒಂದಷ್ಟು ನೆರತ ಹುಲ್ಲು
ತಿನ್ನುತ್ತಾ ಕುರಿ-ಕೋಳಿ- ಆಡು !
ನೋಡುತ್ತಾ ಸುಳಿವ ಈ ಜನರ
ಹಿಡಿದು ತಿಂದು 
ನಾವೊಂದಷ್ಟು ಓಡಾಡಬೇಕು
ಬಂದರೆ ಒಂದು ತೇಗು !

ತರಕಾರಿಗೆ ರುಚಿ ತಪ್ಪಿ
ಅಂಗಡಿಗೆ ಸಾಲುಗಟ್ಟಿದವರ
ನೋಡುತ್ತಿವೆ ಹುಲ್ಲು ತಿನ್ನುತ್ತಾ ಕುರಿಗಳು !
ದೇಹವಿಲ್ಲದ  ತಲೆಯಲಿ 
ಹುಲ್ಲು ಹಾಗೇ ಇದೆ, ಕಚ್ಚಿ ನಾಲಗೆ ಬಾಯಲ್ಲಿ !

ಪೊಟ್ಟಣ ಕಟ್ಟುತ್ತಿದ್ದಾರೆ
ತಾಯಿ ಕುರಿಗಳ ಕೆಚ್ಚಲು
ಬೇಯಿಸುವಾಗ ರುಚಿಗೆ ಕೆನೆ ಹಾಲು !
ಛಂಗನೇ ನೆಗೆದು ಮಂಡಿಯೂರಿ
ಮೊಲೆಯಿಕ್ಕುವ ಕುರಿಮರಿಗಳ
ಕಾಲು ಎರಡೇ ಇವೆ
ಇನ್ನೆರಡು ಭಿಕರಿಯಾಗಿವೆ  !

ಎದೆ ತೆರೆದಿದೆ ತಿನ್ನಿರೋ
ಪಕ್ಕೆಲುಬು ಬಿಚ್ಚಿದೆ ಕುರಿ !
ತೊಡೆಗಳು ಮೂಳೆಯಿಲ್ಲದ ನಾಲಗೆಗೆ !
ಮೂಳೆ ಮೂವತ್ತೆರಡು ಹಲ್ಲಿಗೆ
ತಮ್ಮ ತಮ್ಮಲ್ಲೇ ನೋಡುತ್ತಾ
ನಿದ್ದೆಗೆ ಬಿದ್ದಿದೆ ಆಡು-ಕುರಿ ತಲೆ  !

ಗೂಡೊಳಗೆ ಒಂದಷ್ಟು  ಮೊಟ್ಟೆಗಳು
ಕಾಪಿಟ್ಟ ಬಿಸಿಗೆ ಕರಗಿ
ನೇಣಿನ ಕುಣಿಕೆಯಲ್ಲೆ
ಮುಖ ಮಾಡಿದೆ ಕೋಳಿ !
ಮತ್ತೊಮ್ಮೆ ತರಗುಟ್ಟುತ್ತಿದೆ 
ನೆತ್ತರು ನೆಕ್ಕಿದ ವ್ಯಾಪಾರಿಯ ಕತ್ತಿ !

ಅರರೇ....ನಾಯಿ ಏಕೆ
ಮಾಂಸ ಕೊಂಡವನ  ಚೀಲಕೆ
ಮೂಗನ್ನಿಟ್ಟು ಓಡುತ್ತಿದೆ  ?
ಮಾ೦ಸವೀಗ ಹುಲಿಯಾಗಬೇಕು !
-ರವಿ ಮೂರ್ನಾಡು


ಸೋಮವಾರ, ಮಾರ್ಚ್ 26, 2012

"ದಡ ಬಿಟ್ಟ ದೋಣಿ"ಯ ಒಂದಷ್ಟು ಪ್ರಯಾಣದ ಪದ್ಯಗಳು !


-ರವಿ ಮೂರ್ನಾಡು.
ಆ ಕೊಂಬೆಗೆ ನೇತವನು, ಹಣ್ಣೆ ತೂಗಿದ೦ತಿಹನು... !  ತನ್ನ ಊರಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊ೦ಡವನ ಪ್ರತಿಮೆ ಕಂಡಾಗ ,ಭಾವ ಹೀಗೂ ಆಗಬಹುದಲ್ಲ? ನೇರವಾಗಿ ನಿಂತು ಅನುಕಂಪ ಸೂಚಿಸುವಾಗ, ಶವ ತೂಗುತ್ತಿದ್ದ  ಮರದಲ್ಲಿ ಹಣ್ಣುಗಳು ಇದ್ದವೋ ? ಇಲ್ಲದಿದ್ದರೂ ಶವವನ್ನು ಹಣ್ಣಿಗೆ ಹೋಲಿಸಿ, ಕೊಂಚ ಬೀಸುವ ಗಾಳಿಗೆ ಅದುರಿಸಿ , ಶ್ರೇಷ್ಠತೆ ಮುಟ್ಟಿಸುವ ಕವಿ ನಮ್ಮೆಲ್ಲರ ನಡುವೆ ಸರಿದಾಡಿದರೂ ಎತ್ತರಕ್ಕೆ ಕುಳಿತು ಬಿಡುತ್ತಾರೆ. ಕೆ.ಪಿ. ಸುರೇಶರ ಕವಿತೆ ಇದು. ಸುಳ್ಯದ  ಕುಕ್ಕುಜಡ್ಕ ಗ್ರಾಮದಲ್ಲಿ  ಮರವೊಂದಕ್ಕೆ ಹಗ್ಗದ ಕುಣಿಕೆಗೆ ನೇತು ಹಾಕಿಕೊಂಡವನ ಕತ್ತು ಒಂದಷ್ಟು ಓರೆಯಾಗಿ ನೋಡುತ್ತಿದ್ದಾಗ ಜಗತ್ತನ್ನೇ ಅಳೆದ ದೃಷ್ಠಿ  ಪ್ರತಿಮೆಯ ಆಳೆತ್ತರವನ್ನು ಪರೀಕ್ಷಿಸುತ್ತಿದೆ.
ನಾನು ಮೊದಲ ಬಾರಿಗೆ ಬಂಟಮಲೆಯಲ್ಲಿ ಇವರ ಮನೆಗೆ ಹೋದಾಗ,ಮರದ ಕುರ್ಚಿಗೆ ಕುಳಿತು ಎಲೆ ಅಡಿಕೆ ಮೆಲ್ಲುತ್ತಿದ್ದರು. ಗೆಳೆಯ ದಿನೇಶ್ ಕುಕ್ಕುಜಡ್ಕ ,ಹರೀಶ್ ಕೇರ ಮತ್ತು ನನ್ನನ್ನು ನೋಡಿದ್ದೇ ತಡ ಬಾಯಿ ಕೆಂಪಗೆ ಮಾಡಿ ನಕ್ಕಿದ್ದು ಬಿಟ್ಟರೆ, ಅಲ್ಲಿ ಅಪರಿಚಿತ ಎಂಬ ಲವಶೇಷವೂ ಇರಲಿಲ್ಲ. ಭಾವವನ್ನು ಸಲೀಸಾಗಿ ಸ್ವಾಗತಿಸುವ ರೀತಿ ಅದು. ಬದುಕಿನ ಪಯಣದಲ್ಲಿ ತೇಲುತ್ತಿರುವ ದೋಣಿಯ ತಳಪಾಯದಲ್ಲಿ ಹುದುಗಿಸಿಕೊಂಡ ಭಾವ ಸ್ಥಿರತೆಯನ್ನು ಕಂಡುಕೊಂಡಿದ್ದೇನೆ. ಕೃತಿಗೆ ಎದುರಾಗಿ, ನನ್ನನ್ನೇ ಕೃತಿಯಾಗಿ, ನನ್ನನ್ನೇ ಓದಿಸಿದೆ. ಅಲ್ಲಿಂದ ಹೊರಡುವಾಗ ನನ್ನ ಅರಿವಿಗೆ ಒಂದಷ್ಟು ಚುರುಕುಗಳನ್ನು ತಿಕ್ಕಿದ " ದಡ ಬಿಟ್ಟ ದೋಣಿ" ಪುಸ್ತಕ ಕೊಟ್ಟಿದ್ದರು. ಅದರಲ್ಲಿ ಶುಭಾಶಯಗಳೊಂದಿಗೆ  ಕೆ.ಪಿ .ಸುರೇಶ ಅಂತ ಬರೆದಿದ್ದಾರೆ. ನಾನು ಹೋದಲ್ಲೆಲ್ಲಾ ಈ ಪುಟ ತೆರೆದಾಗ ,ಮತ್ತೆ ಮತ್ತೆ ಶುಭಾಶಯ ಹೇಳುತ್ತಿರುವ ಮೊದಲ ಪುಸ್ತಕ ಅಂತ ಒತ್ತಿ ಹೇಳುತ್ತಿದ್ದೇನೆ. ಏಕೆಂದರೆ ಅಲ್ಲಿ ಜಗದ ತಿಗರಿ ಮಣ್ಣಿಂದ ರೂಪುಗೊಂಡ ಮನುಷ್ಯನ ಓರೆಕೋರೆಗಳನ್ನು ತಿದ್ದುವ ಬದುಕಿನ ಪ್ರಾರ್ಥನೆಯನ್ನು ಆಲಿಸುತ್ತಿದ್ದೇನೆ.
ಡಾ.ಯು.ಆರ್.ಅನಂತಮೂರ್ತಿಯವರು ಒಂದಷ್ಟು ಮಾತಾಡಿದ್ದಾರೆ. ಹೇಗೆಂದರೆ ಕಂಜರ್ಪಣೆ ಪಿ. ಸುರೇಶರ  ಕವಿತೆಗಳನ್ನು ಮತ್ತು  ಒಟ್ಟು ಸೇರಿಸಿದ ಎಲ್ಲರ ಕವಿತೆಗಳು ಶಬ್ಧಗಳ ಆಕೃತಿಯೋ  ಅಥವಾ ಮಾತಿನ ಆಗ್ರಹವೋ ಎಂದು. ಏಕೆಂದರೆ, ಓದುವಾಗ ಹಾಗೇ ಅನ್ನಿಸುತ್ತದೆ. ಕೃತಿಗೆ ಎದುರಾಗಿ ಗಾಳಿಗೆ ತೇಲಿಸಿದಂತೆ ಓದುವುದು ಮತ್ತು ತಾನೇ ಕೃತಿಯಾಗಿ ಓದುವುದು ಎರಡು ವಿಧ. ವಿಭಿನ್ನ ನೋಟವಿಲ್ಲದಿದ್ದಲ್ಲಿ  ಅಭಾಸವೆನಿಸುವ ಆಸ್ವಾಧನೆಗೆ ದಾರಿಯಾಗುವುದು ಅನ್ನುವ ಮಾತನ್ನು ಕವಿತೆಗಳಿಗೆ ಪ್ರಶ್ನೆಗಳನ್ನು ಕಟ್ಟಿಕೊಡಬೇಕಾಗುವುದು. ಇದಕ್ಕೆ ಉತ್ತರವಾಗಿ ಕೆ. ಪಿ. ಸುರೇಶರ ಕವಿತೆಯಲ್ಲಿ ನಿತ್ಯರೂಡಿಯ ಕ್ಷಣಗಳಲ್ಲಿ ಅಸಾಧಾರಣವನ್ನು ಎತ್ತಿ ಕೊಡುವಂತಹದ್ದು. "ನನ್ನೆದುರು ಬಾಹುಬಲಿ" ಕವಿತೆಯಲ್ಲಿ  ಕಂಬಳಿ ಹುಳು ಕೋಶವಾಗುವ ಮುಂಚೆ, ತಪಸ್ಸಿಗೆ ಕುಳಿತ ಯೋಗಾಸನದ ಭಂಗಿಯ ಚಿತ್ರಣವನ್ನು ಕಾಣುತ್ತದೆ. ಕಂಬಳಿ ಹುಳುಗಳನ್ನು ನಾವೆಲ್ಲರೂ ನೋಡಿದ್ದೇವೆ. ಕಲ್ಲು ಬಂಡೆಗಳ ಮೇಲೆ , ನಮ್ಮ ಮನೆಯ ಗೋಡೆಯಗಳ ಮೇಲೆ ಇವುಗಳನ್ನು ಕಂಡ ನಾವುಗಳು, ಕೋಶವಾಗುವ ಮುಂಚೆ ಅದರ ಆಧ್ಯಾತ್ಮಿಕ ಭಂಗಿಯನ್ನು ಕಾಣಲೇ ಇಲ್ಲ. ಅನಂತಮೂರ್ತಿಯವರ  ಒಟ್ಟು ಮಾತು ಕವಿತೆಯ ಲಯದ ಬಗ್ಗೆ . ಅದಕ್ಕೆ ಫ್ರೆಂಚ್ ಲೇಖಕ ಫ್ಲಾಬೇ ತನ್ನ ಬರಹಗಳಲ್ಲಿ ಮೇಜು ಕುಟ್ಟಿ ಲಯ ಪರೀಕ್ಷಿಸುವ ತಾಳ್ಮೆಯ ಬಗ್ಗೆ ಮಾತಾಡುತ್ತಾರೆ.  "ಕೊಂಬೆಗೆ ನೇತ ಶವ" ಕವಿತೆಯಲ್ಲಿ ಪದಗಳು ತೂಗುತ್ತಿದೆ ಹೀಗೆ :
ಈ ಮರದ ಕೊಂಬೆಗೆ ನೇತವನು
ಹಣ್ಣೇ ತೂಗಿದಂತಿಹನು !
ಕತ್ತಷ್ಟು ಓರೆಯಾಗಿ
ಅದಾವ ಕೋನದಲೋ
ಜಗವ ಅಳೆವಂತಿಹನು !
ಗಾಳಿ ತುಯ್ದಂತೆಲ್ಲಾ
ಜೀವವದೆಷ್ಟು ಭಾರ ?
ಅದು ಚಿವ್ವನೆ ಶುಕ್ರದೋಪಾದಿಯಲಿ ಚಿಮ್ಮಿ
ಹೆಣವೂ ಅದೆಷ್ಟು ಗಾಳಿ ಹಗುರ !
ಒಂದೋ ಶವ ನೋಡುವಾಗ ಕೊಂಚ ಬೀಸಿದ ಗಾಳಿಗೆ ಶವದೊಂದಿಗೆ ಹಣ್ಣು- ಎಲೆಗಳು ಅದುರಿರಬೇಕು. ಇಲ್ಲಿ  ಶವ ನೋಡಿದಾಗ ಸತ್ತವನನ್ನೇ ನೋಡಿದ ಕಣ್ಣು , ಅವನ ಜೊತೆಗಿದ್ದ ಹಣ್ಣು- ಎಲೆಗಳನ್ನು ನೋಡಿದ್ದು ಒಳಗಣ್ಣು. ಅದು ಕವಿತೆಯಾಗುವುದು. ನಿತ್ಯ ನಮ್ಮನ್ನೇ ಕಾಡುವ ವಿಚಾರಗಳು, ಕಾಣುವ- ಸಲಹುವ ಸಂತಸಗಳು, ದುಃಖ್ಖಗಳು ಮತ್ತೆ ಮತ್ತೆ ಓದುವ ಬರಹಗಳಲ್ಲಿ ರೂಪ ಪಡೆದಾಗ ಮತ್ತಷ್ಟು ಕಾಡದೆ ಇರದು. ಹಾಗೇ ಕಾಡಿದ 2003 ರ ಸಾಲಿನ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪ್ರಶಸ್ತಿ ವಿಜೇತ "ದಡ ಬಿಟ್ಟ ದೋಣಿ" ಸಂಕಲನ. ಬಿಡುಗಡೆ ಮಾಡಿದ ನಂತರ ಕೆ. ಪಿ. ಸುರೇಶರನ್ನೂ ಅಷ್ಟಾಗಿ ಕಾಡಲಿಲ್ಲ ಅನ್ನುತ್ತೇನೆ.
ಭೂಮಿಯನ್ನು ಅವಕಾಶದಾಕಾಶಕ್ಕೆ ಹೋಲಿಸಿ ನಾನು ಕಂಡುಕೊಂಡ ಬಗೆ, ಕೊಲ್ಲಿ ರಾಷ್ಟ್ರ ಬಹರೈನ್‍ನಲ್ಲಿ ಐದು ತಿಂಗಳು ಈ ಕವಿತೆಗಳು ಮಾತಾಡಿದ್ದವು. ಜೀವನದ ವ್ಯಾಪಾರಕ್ಕೆ ಮುಂಬೈಗೆ ಬಂದಾಗಲೂ ಒಂದೂವರೆ ವರ್ಷಗಳ ಕಾಲ " ಆ ಮುದುಕಿ" ಕವಿತೆ ,ಈ ಎಲ್ಲ ಎಲ್ಲಗಳನ್ನು ಮರು ಹುಟ್ಟು ಪಡೆಯುವ ನಾಳೆಗಳಿಗೆ ,ಸುಳಿವ ಜನ-ಇಳಿವ ಮಳೆಗೆ ತೂಗಿಸಿ, ಹಲವು ಬೀದಿ ಬದಿಯ ವ್ಯಾಪಾರಿ ಜೀವಗಳನ್ನು ಕಂಡಿದ್ದವು.  2004 ರಿಂದ ನನ್ನೊಂದಿಗೆ ಜಗತ್ತು ಸುತ್ತಾಡಿದ ಈ ದೋಣಿ, ಆಫ್ರೀಕಾದ ಕ್ಯಾಮರೂನಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮತ್ತೆ ಮತ್ತೆ ಪುಟ ತೆರೆದಾಗ ಒಂದಷ್ಟು ಪ್ರಯಾಣದ ಪದ್ಯಗಳಾಗಿ ಗುನುಗಿಸುತ್ತಿದೆ.
ಯಾಕೆ ಹೀಗೆ , ನಮ್ಮ ಮುಂದೆಯೇ ಹಾದು ಹೋಗುವ ವಿಷಯಗಳು ಇಲ್ಲಿ ಕವಿತೆಗಳಾದವು?. ವಿದೇಶಕ್ಕೆ ಬಂದಾಗ ಕಾಡಿದ  ತಾಯ್ನೆಲದ ನೆನಪೆಲ್ಲವೂ ಒಟ್ಟಾಗಿ ತೆರೆದು ಈ ಕವಿತೆಗಳನ್ನು ಓದುವಾಗ ಜೊತೆ ಸೇರಿದವೋ ಅಂತ ಕೆದಕಿದಾಗ ಸಿಗುವ ಕವಿತೆಗಳೆ ಬೇರೆ. ಮುಂಗಾರು ಮಳೆಯ ಕವಿ ಜಯಂತ ಕಾಯ್ಕಿಣಿ ಯಾವುದೇ ಸಿಲೆಬಸ್‍ ಇಟ್ಟುಕೊಳ್ಳದೇ  ನಿಜ ಬದುಕಿನ ಸೋಜಿಗಗಳನ್ನು ಉತ್ತಿ ಬಿತ್ತಿ ಹದ ಮಾಡಿದ ನಿಜ ಸಾರದ ಕವಿತೆಗಳು ಅಂತ ಒಂದು ಕಡೆ ಬರೆದಿದ್ದಾರೆ. ದೇವನೂರು ಮಹಾದೇವರು ನಗರ-ಪಟ್ಟಣದ ಜೀವನಕ್ಕೆ ತಿಲಾಂಜಲಿಯಿತ್ತು , ದೇವನೂರು ಎಂಬ ಗ್ರಾಮ್ಯ ಸೊಗಡಿಗೆ ಜೀವನವನ್ನು ಒಪ್ಪಿಸಿ " ಕುಸುಮ ಬಾಲೆ" ಬರೆದಾಗ , ಕೆ.ಪಿ.ಸುರೇಶರ ಬಗ್ಗೆಯೂ ಒಂದಷ್ಟು ಮಾತುಗಳು ಬದುಕಿನ ಪಯಣವನ್ನು ಅವಲೋಕಿಸುತ್ತದೆ. ಬದುಕಿನ ನೂರಾಂಶ ಕೃಷಿಗೆ ಒಗ್ಗಿಸಿಕೊಂಡ ಈ ಕವಿಯ ಕವಿತೆಗಳು ನಿಜಕ್ಕೂ ಸಹಜ ಕೃಷಿಯ ಫಲಗಳೇ. ಗ್ರಾಮದ ಜನ ಸಾಮಾನ್ಯರ ಸಹಜ ಜೀವನದಲ್ಲಿ ಜಗತ್ತನ್ನು ಅನಾವರಣಗೊಳಿಸಿದ ಪರಿ ಕಾಯ್ಕಿಣಿ ಹೇಳಿದಂತೆ ಸ್ವಾಧಭರಿತ ಕೃಷಿ ಪದಾರ್ಥಗಳು. ಇದು ಹೊಗಳುವುದಲ್ಲ. ನಿಜವನ್ನು ತೆರೆದಿಟ್ಟು, ಅದನ್ನು ಮೀರಿದ ಸತ್ಯಗಳು ಅವರ ಕವಿತೆಯ ಮೂಸೆಯಲ್ಲರಳಿದ ಸಾವು  ಅನ್ನುವ ಅನುಭವಿಸುವ ಸತ್ಯ. ಅದನ್ನು ಹೇಳಲೇ ಬೇಕು. ಏಕೆಂದರೆ ಸಾವು ನಮ್ಮನ್ನು ಕಾಡದೇ ಬಿಡದು. ಅದು ಯಾರಾದರೂ ಸರಿ. ಇಲ್ಲಿ ಸಾವು-೨ ಎಂಬ ಪದ್ಯ ಹೀಗೆ ಸಾಗುತ್ತದೆ.
ಸಾವಂಥ ಸಾವೂ
ಇವನ ಒಳ ಹೊಕ್ಕು
ಹೊರಡಿಲಿಂಬಿಲ್ಲದಂತೆ
ಒಳಗೆ ಹೂತಿದೆ !
ಊರಜನ,ಕಾಗೆ-ನಾಯಿಗಳು
ಬಂದು
ಸಾವ ಬಿಡುಗಡೆಗೊಳಿಸಿ-
ಇದೇ ದೇಹದಲಿ ಬಂಧಿಯಾದರೆ
ಇನ್ನುಳಿದವರ ಸೇರುವುದೆಂತು?
ಶವದಲ್ಲಿ ಕುಳಿತಿದೆ ಸಾವು. ಆ ಸತ್ಯ ಹೊರ ಬಿದ್ದಿದ್ದೆ.  ಅದನ್ನು ಬಿಡುಗಡೆ ಮಾಡಬೇಕು ಹೇಗೆ? ಕಾಣುವ ಸಾಧಾರಣದಲ್ಲಿ ವಿಶೇಷಣಗಳನ್ನು ಕಾಣುವ ಈ ಕವಿತೆ, ಅಂಗಾತ ಬಿದ್ದ ಹೆಣದಲ್ಲಿ ಏನನ್ನೋ ಹುಡುಕುತ್ತಿದೆ. ಸಾವಂಥ ಸಾವನ್ನು  ಬಿಡುಗಡೆಗೊಳಿಸಿದಾಗ ಮಾತ್ರ ಶವಕ್ಕೆ ನಿಜವಾದ ಮುಕ್ತಿ ಸಿಗುವುದು ಅನ್ನೋದು ಇನ್ನೊಂದು ಮಾತು. ಮನುಷ್ಯ ಜೀವನದ ಬಹುಮುಖ್ಯ ದೃಶ್ಯ ಈ ಸಾವು. ಅದರ ಒಳ ಹೊಕ್ಕಿ ಹುಡುಕಾಡಿದಾಗ ಸಿಗುವ ಇನ್ನೊಂದು  ವಿಚಾರ ಹೆಣದೊಳಗೆ ಕುಳಿತ ಸಾವು ಎನ್ನುವ ನೆರಳು ! ಇಷ್ಟು ಸಾಕು ನಮ್ಮನ್ನು ನಾವೇ ಚುರುಕುಗೊಳಿಸಲು. ಹಗಲೆಂಥ ಸರಳ ವಿವರಗಳ ಪಟ್ಟಿ  ಅನ್ನುವ ಕವಿ, ಹೆಜ್ಜೆ ಹೆಜ್ಜೆಗಳನ್ನು ಅರಿವಿನ ಸೊಕ್ಕಿನೊಳಗೆ ತೆರೆದು ಮನುಷ್ಯ ಸದಾ ಕತ್ತಲೆಯ ಪ್ರವೇಶಿಸುತ್ತಿರಲಿ ಅನ್ನುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಕವಿತೆ ಓದುವಾಗ ಪ್ರತಿಮೆ ಕಟ್ಟಿದ ರೀತ್ಯವನ್ನು ಹಲವರು ಹುಡುಕುತ್ತಾರೆ. ಕೆಲವರು ಪ್ರತಿಮೆಯನ್ನು, ಉಪಮೆ , ಅಲಂಕಾರವನ್ನು ಹುಡುಕುತ್ತಾರೆ. ಅಲ್ಲಿರುವ ಸಂದೇಶವನ್ನು  ಮತ್ತು ಕವಿತೆ ಲಯ-ಸಂಗೀತಕ್ಕೆ ಒಗ್ಗಿ ಗುನುಗಿಸುವುದನ್ನು ಹುಡುಕುತ್ತಾರೆ. ಇದೆಲ್ಲವನ್ನೂ ಬದಿಗಿಟ್ಟು ಮಾತ್ರೆಗಳನ್ನು ಹುಡುಕುತ್ತಾರೆ. ನಮ್ಮ ಪರಿಚಯಸ್ಥರು ಅನ್ನುವ ಕಾರಣಕ್ಕೆ ಶಹಬ್ಬಾಶ್‍ಗಿರಿ ಕೊಡುತ್ತಾರೆ. ಇದಕ್ಕಿಂತ ದೊಡ್ಡ ಅಪಾಯ ಇನ್ನೊಂದಿಲ್ಲ.  ನನ್ನ ಪ್ರಕಾರ  ಇವೆಲ್ಲವನ್ನೂ ಅರಗಿಸಿ ಕುಡಿದ ನಂತರ ಪದ ಬಳಕೆ, ಅನುಭಗಳನ್ನು ಹಿಗ್ಗಿಸಿ, ನಿಜ ಭಾವಗಳ ಒಳ ಹೊಕ್ಕಿ ವಿಸ್ತಾರಗೊಳಿಸಿ , ಹೊಸ ಅಂದಾಜನ್ನು ಕರುಣಿಸುವ ಕವಿತೆ ಗಮನ ಸೆಳೆಯುತ್ತವೆ. ಮತ್ತು ಕವಿತೆಯಾಗುತ್ತದೆ, ಕಥೆಯಾಗುತ್ತದೆ. ಏಕೆಂದರೆ ಅದು ನಿಜದ ಅನುಭವ.ಅದು ಬೇಕು. ಅದಿಲ್ಲದೆ ಸಮಯ ವ್ಯರ್ಥದ ಬದುಕಿನಲ್ಲಿ ಪದಗಳು ಮಕ್ಕಳಾಟಕ್ಕೆ ಸಿಲುಕಿ ,ಇಂದು ಇದ್ದು ನಾಳೆ ಸಾಯಬಹುದು. ಇವತ್ತು ಪತ್ರಿಕೆಗಳಲ್ಲಿ ಬರುವ ಕವಿತೆಗಳ ಬಗ್ಗೆ  ಕೆ. ಎಸ್. ನರಸಿಂಹ ಸ್ವಾಮಿಯವರು ಹೇಳಿದ ಮಾತು ನೆನಪಿಗೆ ಬರುತ್ತವೆ. ಭಾವಾವೇಷವಿಲ್ಲದೆ ನಾವು ಇಂದಿನ ಕೆಲವು ಮಿತಿಗಳಲ್ಲಿ ಕಳೆದುಹೋಗಿದ್ದೇವೆ. ಇವತ್ತಿನ ಸಾಪ್ತಾಹಿಕಗಳಲ್ಲಿ ಪ್ರಕಟವಾಗುತ್ತಿರುವ ಕವಿತೆ ಜೀವವಿಲ್ಲದಂತಾಗಿದೆ. ಅನಂತ ಮೂರ್ತಿಯವರ ಮಾತುಗಳನ್ನು ಪುಷ್ಠಿಕರಿಸಿ ಹೇಳಿದಂತೆ " ಸಂಡೇ ಪದ್ಯ"ಗಳಾಗಿ ಇವತ್ತು ಕೊಟ್ಟ ಕವಿಯ ಸಂತಸಕ್ಕೆ ನಾಳೆಗೆ ಇನ್ನಿಲ್ಲದ ಹುಡುಕಾಟದ ಅನಾಥ ಪ್ರಜ್ಞೆಗಳನ್ನು ಮೂಡಿಸುತ್ತಿವೆ.
ನಾವು ನಮ್ಮ ನಮ್ಮ ಸ್ವಾಭಿಮಾನದ ಗತ್ತಿನಲ್ಲಿ ನಮ್ಮತನವನ್ನು ಕಳೆದುಕೊಂಡಾಗ ಸಮಾಜದಲ್ಲಿ ಹೊಸತನ್ನು ಹುಡುಕಿ ಕೊಡುವುದಾದರೂ ಏನು? ಇದು ನರಸಿಂಹ ಸ್ವಾಮಿ ಅವರ ಪ್ರಶ್ನೆ. ಹಾಗೇ ಆಗಿದೆ ಇಂದಿನ ಕವಿತೆ ಕಟ್ಟುವ ಪರಿ. ಸೋಷಿಯಲ್ ಐಡೆಂಟಿಗಾಗಿ ಹುಟ್ಟಿದ ಕವಿತೆ  ಯಾವುದನ್ನೂ ಉಳಿಸಲಾರದು. ಅನಂತ ಮೂರ್ತಿಯವರು  ಹೇಳಿದಂತೆ ಮನುಷ್ಯನಿಗಿರುವುದು  ದೊಡ್ಡ  ಅಪಾಯ ಅಂಹಕಾರ..  ಅವನ ನಾನೆಂಬ ಗತ್ತಿನಲ್ಲಿ  ಕೃತಕವಾದ ಘನತೆ ಸತ್ಯವನ್ನು ಮರೆಮಾಚುತ್ತದೆ.
ಒಂದು ಭಾವಚಿತ್ರ ನೋಡಿದಾಗ ಮೂರ್ತಗೊಳ್ಳುವ ಭಾವ, ಭಾವಚಿತ್ರವಿಲ್ಲದೆಯೂ ಭಾವಚಿತ್ರದಂತೆ ಮೂರ್ತಗೊಳ್ಳುವುದು ಹೇಗೆ? ಅದು ಪದ ಬಳಕೆ. ಅದಕ್ಕೆ ಉದಾಹರಣೆಯಾಗಿ ಕಂಬಳಿ ಹುಳು ಕೋಶಾವಸ್ಥೆಗೆ ಜಾರುವ ಮುನ್ನ ಬರುವ ಸ್ಥಿತಿಗಳು, ಅದರ ನಂತರದ ತನ್ನ ಕಣ್ಣು ಮುಚ್ಚಿ, ಕೈಕಾಲುಗಳನ್ನು ಕಟ್ಟಿ ಹಾಕಿ ಯೋಗಾಸನದ ಭಂಗಿಗೆ ಬಂದ ಆಧ್ಯಾತ್ಮಿಕ ನಿಜ ಸ್ವರೂಪವನ್ನು ವ್ಯಕ್ತಗೊಳಿಸಿದ ಭಾವಸ್ರಾವದ ಪದ ಬಳಕೆ ಕವಿತೆಯಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಚಪ್ಪಾಳೆ ತಟ್ಟಬೇಕಾಗಿರುವುದು ಕಂಬಳಿ ಹುಳುವಿನ ಬಗ್ಗೆ ಸಾಹಿತ್ಯಕ ಅನ್ವೇಷಣೆ. ಅದು ಭಾವಚಿತ್ರವನ್ನು ಅನಾವರಣಗೊಳಿಸುತ್ತವೆ. ಕೆ. ಪಿ. ಸುರೇಶರ ಕವಿತೆ ಹೀಗೆ ತೆರೆದು ನಿಲ್ಲುವುದನ್ನು ಅವಲೋಕಿಸಿದಾಗ  ಡಾ.ಅನಂತಮೂರ್ತಿಯವರ ಓದಿನ ಪಟ್ಟಿಗೆ ಸಿಗದ ಕವಿತೆಗಳ ಒಳ ಹೊಕ್ಕುತ್ತೇನೆ. ಏನದು?
ಹಳೆ ಕೊಡೆಗಳ ಬಗ್ಗೆ ಒಂದು ಕವಿತೆ ಬಂದಿದೆ. ಮಳೆಗೆ ನಾವುಗಳು ಕೊಡೆ ಹಿಡಿಯುತ್ತೇವೆ, ಬಿಸಿಲು ಬಂದಾಗ ಹೆಂಗಸರು ಬಣ್ಣದ ಕೊಡೆ ಹಿಡಿದು ಹೋಗುವುದು ವಾಡಿಕೆ. ಕೊಡೆ ತೆರೆದು ಅದರ ಮೇಲ್ಭಾಗ ನೋಡಿದಾಗ
ಎಂಟು ದಿಕ್ಕುಗಳಿಗೂ ಚಾಚಿ ಕೊಕ್ಕೆ
ಕಡ್ಡಿಗಳೊಳಗೆ ಎಂಥ ಅರಳಿದ ಕಮಲ !
ಕಮಲದ ಹೂವೇ ಈ ಕವಿತೆ ಅಂತ ಕೊಡೆಯೊಳಗೆ ಕುಳಿತು ಮತ್ತಷ್ಟು ಒಳ ಹೊಕ್ಕಿ ಇಣುಕಿದ್ದೇನೆ. ಆಗಸದ ಚಪ್ಪರದಲಿ ಏಳು ಬಣ್ಣಗಳ ಕಾಮನ ಬಿಲ್ಲನ್ನು ಕಂಡ ಕಣ್ಣು, ಕೊಡೆಯೊಳೆಗೆ  ಕಾಣುವುದು ಸರಿ. ಏಕೆಂದರೆ ಕೊಡೆಯನ್ನು ಹಿಡಿದು ಅದರ ಕೇಂದ್ರ ದಂಡದಲ್ಲಿ ಮಳೆಯನ್ನು  ತಡೆದಿದ್ದೇನೆ ಅನ್ನುವ ಹಂಬಾಕು..! ಅದು ಸತ್ಯ ಅಲ್ಲ ಅಂತ ಗೊತ್ತಿತ್ತು. ಮಡಿಸಿಟ್ಟು ಕಂಕುಳಿಗಿಸಿ ನಡೆದಾಗ ಅರಿವಾಗಿದ್ದು , ಮಸಣದ ಯಾತ್ರೆಗೆ ಈ ಕೊಡೆ  ಪ್ರೇತಾತ್ಮಕ್ಕು ಹಿಡಿದಿತ್ತು ಅನ್ನೋದು. ದುಃಖ್ಖ ಮಡುಗಟ್ಟುತ್ತದೆ ಅಲ್ಲಿರುವ ಮನುಷ್ಯನ ಮಸಣ ಯಾತ್ರೆಯ ಸೌಭಾಗ್ಯಕೆ. ಹೌದಲ್ವ..! ಆಗಸದ ಕೊಡೆಗೆ ಎಂಟು ದಿಕ್ಕುಗಳನ್ನು ಹೆಣೆದರೂ ಭೂಮಿಗೆ ಕೊಡೆ ಹಿಡಿದ ಅಂಭರದ ಬಗ್ಗೆ ಯಾರೂ ವಿಚಾರಿಸಲಿಲ್ಲ..ಸೂರ್ಯನಾದರೂ ಬಿರು ಬೇಸಿಗೆಯಲ್ಲೂ  ಬೆವರು ಸುರಿಸಿದ ಪರಿ ಚದುರಿ ನಿಂತಿರುವ ಬಣ್ಣದ ಕೊಡೆಯೊಳಗೆ ಧರಣಿಯ ಲಾವಣ್ಯಕ್ಕೆ ಸಡ್ಡು ಹೊಡೆದು ಕೊಂಚ ಸೌಂದರ್ಯವೆಚ್ಚಿಸಿದೆ. ಅಂತೂ ಸೂರ್ಯ ಬಿಸಿ ಮುಟ್ಟಿಸದೇ ಇರಲಾರ. ಹೇಗಾದರೂ ಕೊಡೆಯ ಅಡ್ಡಗೋಡೆಯನ್ನೂ ಮೀರಿ. !
ಕವಿತೆಗಳನ್ನು ಲೆಕ್ಕವಿಲ್ಲದಷ್ಟೂ ಬಾರಿ ಕಳೆದೆ ಎಂಟು ವರ್ಷಗಳಲ್ಲಿ ಓದಿದ್ದೇನೆ. ಬಾಳೆ ಹಣ್ಣು ತಿನ್ನುವಾಗಲೆಲ್ಲ ಬಾನೆತ್ತರಕೆ ಅಡರಿ ,ಹೀಗೆ ಚಿಗಿತು, ಕೈಚಾಚಿ, ಗೊನೆ ಹೆರಿಗೆಗಾಗಿ ಬಾಗಿದ ಬಾಳೆ ಗಿಡದ  ಬಗ್ಗೆ ಆಲೋಚಿಸಿದ್ದೇನೆ. ಬಾಳೆಗೇಕೆ ರೆಂಬೆಗಳಿಲ್ಲ ? ದ್ರಾಕ್ಷಿ ಹಣ್ಣುಗಳು, ಕಾಫಿ ಹಣ್ಣುಗಳು, ಕರಿಮೆಣಸು ಬಳ್ಳಿಗಳು, ಬಾಳೆ ಹಣ್ಣುಗಳ ಶಿಸ್ತನ್ನು ಕಂಡು ಅಚ್ಚರಿಸಿಗೊಂಡಿದ್ದೇನೆ. ಚಿಪ್ಪಲ್ಲಿ ಶಿಸ್ತಾಗಿ ನಿಂತ ಬಾಳೆ ಹಣ್ಣುಗಳಿಗೆ " ಕದಳಿಗೊಂದು ಕವನ" ಬರೆದ  ಕೆ. ಪಿ. ಸುರೇಶರು ತಾವೇ ಬಾಳೆಯಾಗಿ, ಮಾತಾಡುತ್ತಾರೆ.
ಒಂದು ಪಿಳ್ಳೆ
ನೆಲವ ಭೇದಿಸಿ ಮತ್ತೆ....
ಎಲ್ಲ ಹೀಗೆ, ಮೃದು ಸಾತ್ವಕತೆಯೆಂದೂ
ಸ್ವಭಾವ ಬಿಡದು
ಇನ್ನೇಕೆ ರೆಂಬೆಗಳು?
ಬೆಳಿಗ್ಗೆ ಎದ್ದು  ಮನೆಯ ಹೊರಗೆ ಬಂದಾಗ ಅಂಗಳದಲ್ಲಿ ಹಲವು ಸೋಜಿಗಗಳು , ಮನೆಯ ಹಿತ್ತಲಿಗೆ ಬಂದಾಗ ಇನ್ನಷ್ಟು ಅವಿತು ಕುಳಿತ ವಿಸ್ಮಯಗಳು ಎದೆಯೊಳಗೆ ಕುಳಿತು ಒಂಟಿಯಾಗಿ ಮರ್ಮರವಾದಾಗ ಒಂದಷ್ಟು ಖಾಲಿ ಮಾಡುವ ಅಥವಾ ಇನ್ನಷ್ಟು ಅಂದಗೊಳಿಸುವ ಇರಾದೆಯಿತ್ತು.  ಅಸ್ತವ್ಯಸ್ತ ಮನಸ್ಸಿನ ಕಿಟಕಿಗಳ ಕದ ತೆರೆದು ಭಾವಗಳನ್ನು ಸ್ವಾಗತಿಸಿದ ಪರಿಗೆ ವಿಸ್ಮಯಗೊಂಡಿದ್ದೇನೆ. ಸುರೇಶರಿಗೆ ಒಂದೇ ಒಂದು ದಾರಿಯಿದ್ದದ್ದು ಪದಗಳ ಲಾಲಿತ್ಯ. ದುಃಖ್ಖಗಳನ್ನು  ಪದಗಳಲ್ಲಿ ಅವರ ಕೈಗಳು ತೊಟ್ಟಿಲು ತೂಗಿದವು. ಈ ಪದಗಳಲ್ಲಿ ಲಾಲಿತ್ಯ ಹಾಡಿದ ಬೆರಳುಗಳ ಬಗ್ಗೆ  ಅಚ್ಚರಿಗೊಂಡಿದ್ದಾರೆ. ಈ ಬೆರಳೇಕೆ ಹೀಗೆ? ಮುಷ್ಠಿ ಬಿಗಿಯುವಾಗ ನರ ಸೆಟೆಯುವುದು. ಮಡಚಿದ ನಾಲ್ಕು ಬೆರಳುಗಳು ಹೆಬ್ಬರಳಿನ ಅಜ್ಞೆಗೆ ಸೋಲುತ್ತವೆ. ಕೊಂಚ ಸಡಿಲಿಸಿದರೆ ಬೆರಳುಗಳು ಸಂತಸಗೊಳ್ಳುತ್ತವೆ. ಇದೇ ಸಂತಸದಲ್ಲಿ  ದೂರದ ಚಂದಿರನನ್ನು ಕರೆಯುತ್ತವೆ, ಹಾಗೇ ಮೂರು ಬೆರಳುಗಳು ಗುಲಾಬಿ ಹೂವನ್ನು ಎತ್ತಿ ಮೂಗಿಗೆ ತಂದಾಗ ಇನ್ನೊಂದಷ್ಟು ವಿಸ್ತಾರಗೊಳ್ಳುತ್ತವೆ ಭಾವಗಳು
ನಾಲ್ಕು ಸೇರಿ ಹೆಬ್ಬೆಟ್ಟು ಬಾಗಿದತ್ತ
ತರ್ಪಣ ಬಿಡಲಿ ಸಂದ ಹಿರಿಯರಿಗೆ !
ಬೆರಳುಗಳು ಈಗ ಬೆಲೆ ಕಂಡುಕೊಂಡಂತಾಗಿದೆ ಈ ಕವಿತೆಯಲ್ಲಿ. ನೂರಂಶ ಕೃಷಿಕರಾದ ಕವಿ  ಹಾಗೇ ಮತ್ತೆ ಅದೇ ಐದೂ ಬೆರಳುಗಳನ್ನು ಸೇರಿಸಿ ಹಸಿ ಮಣ್ಣಲ್ಲಿ  ಬೀಜ ಬಿತ್ತಿದ್ದಾರೆ, ಬಿಸಿಲಿಗೆ ದುಡಿದು ಬೆವರು ಸುರಿದು ದೇಹ ತುರಿಸಿದಾಗ, ಅದೇ ಬೆರಳುಗಳಿಂದ ನಿರುದ್ದಿಶ್ಯ ಸುಖಕೆ ತನ್ನ ಬೆನ್ನನ್ನು ಕೆರೆದುಕೊಂಡಿದ್ದಾರೆ. ಅದೇ ಹೊಲದಿಂದ ಮನೆಗೆ ಬಂದು ಕಾಫಿ ಕುಡಿಯುವಾಗ, ಲೋಟದ ಬಾಯಿಗೆ ಮುತ್ತಿಟ್ಟ ನೊಣವನ್ನು " ಬಾ"  ಎಂದು ಕರೆದು  ಮೀಸೆಯನ್ನಷ್ಟೇ ಇಳಿಸು, ಕಾಲು ಕುಣಿಸು ಎಂದು ಹೇಳಿದವರು, ನೀನೇಷ್ಟು ಹಗುರ ಜೀವಿ ಎಂದು ಮತ್ತೆ ಅದನ್ನೇ ಪ್ರಶ್ನಿಸುತ್ತಾರೆ.  ಮತ್ತೆ  ತಮ್ಮ ಊಟವಾದ ಮೇಲೆ  ಕುಡಿವ ದ್ರಾಕ್ಷಿ ರಸದ ಲೋಟದ ಮೇಲೆ ಕುಳಿತ ಅದೇ ನೊಣ, ಆಯಾ ತಪ್ಪಿ ಬಿದ್ದು ಸತ್ತು ತೇಲುತ್ತಿದ್ದಾಗ ಹೀಗೆ ಮಾತಾಡುತ್ತಾರೆ " ನಾನು ಈ ಕಪ್ಪಿನಂಚನಷ್ಟೇ ತುಟಿಗೆ ತಾಗಿಸಿ ಕುಡಿಯುವೆನು, ಅರಿವಿನ ನಿಧಾನದಲಿ ಸಾವ ಅಷ್ಟಷ್ಟೇ ತಬ್ಬಲು...!
ಕವನ ಇದರ ಬಗ್ಗೆ ಬೇಕಾದಷ್ಟು ಗ್ರಂಥಗಳುಹಿರಿಯರ ಮಾತುಗಳು ನಮಗೆ ಪಾಠ ಮಾಡುತ್ತವೆ. ಸಣ್ಣ ಕಥೆಗಳೂ ಕವಿತೆಗಳಲ್ಲಿ ಅಡಗಿಸಿಕೊಳ್ಳಲಾಗದ್ದನ್ನು  ಎದೆಗೆ ನುಗ್ಗಿಸುತ್ತವೆ. ನನಗೆ ಕವಿತೆಯ ಬಗ್ಗೆ ಅಚ್ಚರಿಸಿ ಮೂಡಿಸಿದ ವಿಚಾರ, ಈ ಕವಿತೆ ಅಂದರೆ ಏನದು ಅಂತ. ಹಲವು ಕವಿತೆಗಳನ್ನು ಓದುವಾಗ ನಾನೇ ಅಲ್ಲಿದ್ದೇನೆ ಅನ್ನಿಸಿತು. ಅದೇ ಕವಿತೆಯ ಶಕ್ತಿಯೋ ? ಅಂದರೆ ಹತ್ತು ಕೋನಗಳಲ್ಲಿ ಉತ್ತರವಾಗುವುದು.ಓದುತ್ತಿದ್ದಂತೆ ಸಂಗೀತದಂತೆ  ಭಾಸವಾಗುತ್ತವೆ. ನಾವು ನಡೆದ ಬದುಕಿನ ಹತ್ತು ಹಲವು ಘಟ್ಟಗಳಲ್ಲಿ ಅರೋಹಣಗಳು ಅಲ್ಲಿ ಕಂಡು ಬರುತ್ತವೆ.ಕೆಲವು ಗೊತ್ತಿಲ್ಲದಂತೆ , ಗೊತ್ತಿದ್ದಂತೆ ಹೇಳುತ್ತಿರುತ್ತವೆ. ನನಗನ್ನಿಸಿತು ಕವಿತೆ ಗೊತ್ತಿದ್ದು ಗೊತ್ತಿಲ್ಲದೆ ಭಾಸವಾಗುವ ಭಾವ. ಒಮ್ಮೆ ತೆರೆದು ಮತ್ತೊಮ್ಮೆ ಒಳಗಣ್ಣನ್ನು ತೆರೆದು  ಪಲ್ಲಟವಾಗುತ್ತಲೇ ಇರುವಂತಹವು. ಕವಿತೆಗೆ ಒಂದಷ್ಟು ಭಾಷ್ಯ ಬರೆದಾಗ ಕನ್ನಡಿಯ ಮುಂದೆ ನಿಂತು, ಅಲ್ಲಿರುವ ಪ್ರತಿಮೆ ನಾವಾಡಿಸಿದಂತೆ ಆಡುತ್ತಿದೆ. ಎಷ್ಟೇ ತುಳಿದರೂ ರಚ್ಚೆ ಹಿಡಿದು ಹಿಂಬಾಲಿಸಿ ಕಾಡುತ್ತಿರುವ ನೆರಳು.ಅದು ಕವಿತೆ. ಹತ್ತು ಕೋನಗಳಲ್ಲಿ ಎದೆ ತೆರೆದು ಬಿಡುವಂತಹದ್ದು.
2006 ರಲ್ಲಿ ಕೊಲ್ಲಿ ರಾಷ್ಟ್ರ ಬಹರೈನ್‍ಗೆ  ಕೇರಳದ ಮಾರ್ಗದಲ್ಲಿ ಹೋಗುವಾಗ ಕ್ಯಾಲಿಕಟ್‍ನಲ್ಲಿ ಎರಡು ದಿನ ಉಳಿದುಕೊಂಡಿದ್ದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಎಂ.ಟಿ. ವಾಸುದೇವನ್ ನಾಯರ್ ಅವರು ಇದೇ ಸ್ಥಳದಲ್ಲಿ ಇದ್ದಾರೆ ಅನ್ನುವ ವಿಚಾರ ಗೊತ್ತಿತ್ತು. ಸಿಕ್ಕಿದ ಅವಕಾಶಕ್ಕಾಗಿ ಅವರನ್ನು ಭೇಟಿ ಮಾಡಿದ್ದು ಒಂದು ನೆನಪಿಗೆ  ಉತ್ತರವನ್ನು  ಮೇರು ಮಟ್ಟಕ್ಕೆ ಏರಿಸುತ್ತೇನೆ. ಅವರನ್ನು ಭೇಟಿಯಾಗಿದ್ದೇ ತಡ "ನೀವು ಕನ್ನಡದವರು, ನಿಮಗೆ ಮಲಯಾಳಂ ಹೇಗೆ ಬರುತ್ತದೆ" ಅನ್ನುವುದು ಅವರ ನೇರ ಪ್ರಶ್ನೆಯಾಗಿತ್ತು . ಶ್ರೇಷ್ಠ ಕಾದಂಬರಿ "ಕಾಲ" ದ  ಕೆಲವು ಘಟ್ಟಗಳ ಸಾಲಿನಲ್ಲಿ ಪಾತ್ರಧಾರಿ ಕೇಳುವ ಧಾಟಿ ಅಲ್ಲಿದೆಯೋ ಅನ್ನಿಸಿತು.ಏಕೆಂದರೆ, ಅಲ್ಲಿ ನಾನೇ ಇದ್ದೆ. ಕೊಡಗಿನ ವೀರಾಜಪೇಟೆಯ ಹೆಸರು ಹೇಳಿದಾಗ ತಲೆಯಾಡಿಸಿದ್ದರು. ಅಕೃತಿ ಸಣ್ಣದಾಗಿ ಕಂಡಿತು. ಅಷ್ಟೇ ಇರುವುದು ಕೇರಳ ಸಂಸ್ಥಾನದ ಹಲವು ಮೂಕ ಜೀವಿಗಳ ಮನ ಹೊಕ್ಕು ಮಾತಾಡಿದ ಕಥೆಗಾರ. ನನ್ನಲ್ಲಿ ಕೇಳಿದ್ದರು " ನೀವೆಲ್ಲಾ ಕವಿತೆ ಹೇಗೆ ಬರೆಯುತ್ತೀರಿ? " ಅಂತ. ಒಂದೆರಡು ಮಲೆಯಾಳಂ ಭಾಷೆಯಲ್ಲಿ ಭಾವ ವಿಸ್ತರಿಸಿ ಕವಿತೆಗಳನ್ನು ಹೇಳಿದ್ದೇ ತಡ, ಬಾಳೆ ಹಣ್ಣುಚಹಾದೊಂದಿಗೆ ಕೈ ಬಾಯಿ ಒಂದಾಗಿಸಿ ಮಾತಾಡಿದ್ದಾರೆ. " ನನಗೆ ಕವಿತೆ ಬರೆಯುವವರನ್ನು ಕಂಡರೆ ಹೊಟ್ಟೆಕಿಚ್ಚು " ಅಂತ ನಗು ಉಕ್ಕಿಸಿದರು. ಹಲವು ಬಾರಿ ಪ್ರಯತ್ನ ಪಟ್ಟೆ, ಅದು ಸಾಧ್ಯವಾಗದ ವಿಚಾರವಾದಾಗ ಸಣ್ಣ ಕಥೆಗಳು ನನಗೆ ಸಾಥ್‍ ನೀಡಿದವು ಅಂತ ಎಂಟಿವಿ  ತೆರೆದು ಹೇಳಿದರು. ಕೇರಳದ ಅಳಿಯಕಟ್ಟು ಸಂಪ್ರದಾಯದ  ಉಸಿರು ಬಿಗಿದು ಬದುಕಿದ ಹಲವು ಜೀವಗಳ ಮನಸ್ಸಿಗೆ ನುಗ್ಗಿ ಮರ್ಮರಗಳನ್ನು ಅನಾವರಣಗೊಳಿಸಿದ ಪಾತ್ರಗಳು ಇಂದು ಸಮಾಜದಲ್ಲಿ ಕಾಣುತ್ತಿದ್ದೇನೆ. ಇಲ್ಲಿ ಇರುವ ಒಂದೇ ವ್ಯತ್ಯಾಸ, ಇದೇ ಮನುಷ್ಯರ ನಿತ್ಯ ಚಟುವಟಿಕೆಗಳಲ್ಲಿ  ಹಾಸುಹೊಕ್ಕಾದ  ಹಲವು ಪುನರಾವರ್ತನೆಯಾಗುವ ಸಂದರ್ಭಗಳನ್ನು ಒಂದೂ ಬಿಡದೆ ತೆರೆದಿಟ್ಟ  ಕೆ. ಪಿ.ಸುರೇಶರು ನೆನಪಾಗುತ್ತಾರೆ.ಬರೆದ ಬರವಣಿಗೆ ಓದುಗನಿಗೆ ಇಷ್ಟು ಕೊಟ್ಟರೆ ಸಾಕು. ಸದಾ ಸಮಾಜದ ಪಾತ್ರಗಳಲ್ಲಿ ಎದ್ದು ಕಾಣುತ್ತಾರೆ.
ಮಳೆಗೆ ಗೊರಬೆ ಹೊತ್ತ ಆ ಮುದುಕಿಯನ್ನು ಕೂರ್ಮಾವತಾರಿ ಎಂದಾಗ, ಅವಳ ನಡೆಗೆ ಜಗತ್ತನ್ನೇ ಝಲ್ಲೆನಿಸಿದ  ಭಾವ ವಿಧಾನ, ಹಲವು ಬಾರಿ  ಪುಟ ತೆರೆದಾಗಲೆಲ್ಲಾ  ಅಲ್ಲಿರುವ ಹೂವಗಳನ್ನು ಬೆರಳ ಸ್ಪರ್ಶಕ್ಕದ್ದಿ ಗಂಧವಿಲ್ಲದ್ದಲ್ಲಿ, ಗಂಧ ಲೇಪಿಸಿ, ಇಲ್ಲದಿದ್ದರೆ ಬರೇ ಬಣ್ಣಗಳಲ್ಲಿ ಹನಿ ತೊಟ್ಟಿಕ್ಕಿಸಿದ  ಕ್ಷಣಗಳು ಕಾಲ ಕಾಲಕ್ಕೂ ನಿಲ್ಲುವಂತಹದ್ದು. ಈಗ " ದಡ ಬಿಟ್ಟ ದೋಣಿ" ಯ ಪ್ರಯಾಣವನ್ನು ಕಣ್ಣೆತ್ತಿ ಮತ್ತೊಮ್ಮೆ ನೋಡುತ್ತಿದ್ದೇನೆ. ಅಲ್ಲಿಯ ನಾವಿಕ ನಾನೇ ಆಗುತ್ತೇನೆ, ದಡ ಸಿಗುವವರೆಗೆ...! 
-----------------------------------------------------------------------------------------


'ದಡ ಬಿಟ್ಟ ದೋಣಿ' ಯ ಪ್ರಯಾಣದ ಪದ್ಯಗಳು !

ನಾನು ಮೊದಲ ಬಾರಿಗೆ ಬಂಟಮಲೆಯಲ್ಲಿ ಇವರ ಮನೆಗೆ ಹೋದಾಗ,ಮರದ ಕುರ್ಚಿಗೆ ಕುಳಿತು ಎಲೆ ಅಡಿಕೆ ಮೆಲ್ಲುತ್ತಿದ್ದರು.ಗೆಳೆಯ ದಿನೇಶ್ ಕುಕ್ಕುಜಡ್ಕ ,ಹರೀಶ್ ಕೇರ ಮತ್ತು ನನ್ನನ್ನು ನೋಡಿದ್ದೇ ತಡ ಬಾಯಿ ಕೆಂಪಗೆ ಮಾಡಿ ನಕ್ಕಿದ್ದು ಬಿಟ್ಟರೆ, ಅಲ್ಲಿ ಅಪರಿಚಿತ ಎಂಬ ಲವಶೇಷವೂ ಇರಲಿಲ್ಲ. ಭಾವವನ್ನು ಸಲೀಸಾಗಿ ಸ್ವಾಗತಿಸುವ ರೀತಿ ಅದು.ಬದುಕಿನ ಪಯಣದಲ್ಲಿ ತೇಲುತ್ತಿರುವ ದೋಣಿಯ ತಳಪಾಯದಲ್ಲಿ ಹುದುಗಿಸಿಕೊಂಡ ಭಾವ ಸ್ಥಿರತೆಯನ್ನು ಕಂಡುಕೊಂಡಿದ್ದೇನೆ.

ಶುಕ್ರವಾರ, ಮಾರ್ಚ್ 16, 2012

ವಾರದ ಈ ಸಂತೆ - ೧


ಈ ಸಂತೆಯಲಿ ಎಷ್ಟೊಂದು ಜನರು
ಕೊಳ್ಳುವರು, ಮಾರುವರು
ಅವರಿಗವರಿಗಾಗಿ..!
ಕರೆದು ಪುಸಲಾಯಿಸಿದಷ್ಟು
ಚೌಕಾಸಿ ಇಕ್ಕಳಕೆ ಸಿಕ್ಕಿ
ಚೀಲ ತುಂಬಿಸುವರು !

ತರ ತರ ತರಕಾರಿಗಳಿಗೆ
ಯಾರು ಹಚ್ಚಿದರೋ ಬಣ್ಣ !
ಕಣ್ಣನ್ನೇ ಕೀಳುತ್ತಿವೆ
ಕೆನ್ನೆಗೆಂಪು ಟೊಮ್ಯಾಟೋ
ಆಫ್ರೀಕಾದ ಬೆಡಗಿ ಬದನೆಕಾಯಿ
ಕೊಂಚ ಎಲೆಲೆ ಜುಟ್ಟಿಳಿಸಿ
ಶ್ವೇತ ಚರ್ಮದ ಮೂಲಂಗಿ  !

ಅದೋ ಅದೋ ಸ್ನಾನ ಮುಗಿಸಿ
ಕುಳಿತಿದೆ ತಲೆ ನೀರೊರೆಸದೆ
ಕಹಿಬೇವು- ಸಂ-ಭಾರ ಸೊಪ್ಪು !
ಪಕ್ಕದಲ್ಲೇ ಸಪೂರ ಹುಡುಗಿ ಕ್ಯಾರೆಟ್ಟು
ಅದಕ್ಕೊಂದಷ್ಟು ನೀಳ ಬೆರಳು ಬೆಂಡೆಕಾಯಿ !

ಕಣ್ಣಲ್ಲೇ ಮಾರಿಕೊಳ್ಳುವುದು
ಬಲಿತು ಒಂದರ ಮೇಲೊಂದು ಉಬ್ಬುಬ್ಬಿ
ಸೌತೆ-ಆಲೂಗೆಡ್ಡೆ- ತೆಂಗಿನಕಾಯಿ
ಸವರಿದಷ್ಟು ಕೊನೆ ಸಿಗದ ಸೋರೆಕಾಯಿ  !

ಅವಕಾಶದಾಕಾಶಕೆ ,
ಕಜ್ಜಿ ಚರ್ಮದೊಳಗೆ ಅವಿತಿದೆ ಅನನಾಸು !
ಸಂತೆಗೆ ಜಾಗ ಕೇಳಿ
ಶಿಸ್ತಾಗಿ ಚಿಪ್ಪೊಳಗೆ ನಿಂತ ಬಾಳೆ ಹಣ್ಣು !
ರುಚಿ ನೋಡಿರೋ ಎನ್ನುತ್ತಿದೆ
ಅರ್ಧರ್ಧ ಕತ್ತಸಿಟ್ಟ ಮಾಂಸದ ಹಣ್ಣು ಕಲ್ಲಂಗಡಿ  !

ಇವುಗಳ ಮಧ್ಯೆ  ಸಂಜೆ ಬಾಡುತ್ತಿದೆ
 ಕೊಟ್ಟವರ ನಡುವೆ ಕೊಂಡವರಿಗೆ !
ಶೂನ್ಯಕ್ಕೊಂದು ಅವಕಾಶವಿರಿಸಿದ್ದೇನೆ
ಈ ಸಂತೆಗೆ ಉಳಿದವರಿಗೆ !
-ರವಿ ಮೂರ್ನಾಡು

ಬುಧವಾರ, ಮಾರ್ಚ್ 7, 2012

ಕವಿತೆ ಅರಳುವ ಹೊತ್ತು..!


ಹೊರಾ೦ಗಣದಲಿ ಕುಳಿತಿದ್ದೇನೆ
ತಲೆಯಾನಿಸಿ ಜೋಡಿ ಕೈಗಳ ತಲೆಗೆ
ಭೂಮಿಗೂ , ಕುರ್ಚಿಗೂ ನನ್ನದೇ ಮಾತು
ಇನ್ನೆಷ್ಟು ದಿನ ಈ ಋಣಭಾರ ?

ಎದೆಗೆ ಕಿವಿ ಬಂದು ಕೇಳುತ್ತಿದೆ ಬಡಿತ
ಕಾಲಿಟ್ಟು ನೆಲಕೆ - ಜೀಕಿ ಕುರ್ಚಿಗೆ ದೇಹ
ಮುಂದಕ್ಕೆ ಸುಖ
ಜಗ್ಗಿ ಹಿಂದಕ್ಕೆ ದುಃಖ್ಖ !
ಪದಗಳಿಗೆ ತಡವರಿಸಿ
ಮಾತಾದ ಲೇಖನಿಗೆ
ಕವಿತೆ ಅರಳುವ ಹೊತ್ತು !
 ------ 2 ---------
ಕಣ್ಣೆದುರೇ ಓಡುತ್ತಿದೆ
ಹಾರುತ್ತಾ  ಗಾಳಿಗೆ ಮಗು !
ಮನಸು ಹೆಜ್ಜೆಯ ಕಣ್ಣೋಟಕೆ
ಮಗುವಾದೆ ಕೈಯಿಟ್ಟು ಗಲ್ಲಕೆ !!!!!
ಹೊರಾಂಗಣದ ಅಂಚಿಗೆ
ಪಕ್ಕನೆ ನಿಂತ ಮಗು
ಕತ್ತೆತ್ತಿ ಮೇಲಕೆ
ತು೦ಬಿಸುತ್ತಿದೆ ಕಣ್ಣ ಬುಟ್ಟಿಗೆ
ಚಂದ್ರ-ಚಿತ್ರ- ನಕ್ಷತ್ರ  !
ತಿರುಗಿ ಕ್ಷಣ ಕತ್ತು, ಕೈಯೆತ್ತಿ ಬೆರಳು
ಬಿರಿದ ತುಟಿ ಇಣುಕುತ್ತಿದೆ
ಎರಡು ಮಲ್ಲಿಗೆ ಹರಳು !
ಆಯ್ದ ಅಲೆಮಾರಿ ಬದುಕಿಗೆ
ಕವಿತೆ ಅರಳುವ ಹೊತ್ತು  !
 ------ 3 ---------
ಬರಸೆಳೆದು ಬಾಚಿದ್ದೇನೆ
ತೋಳಿನಡಿ ಮಗು ದೇವರು !
ಹೆಜ್ಜೆಗೆ ಹೆಜ್ಜೆ ಸೇರಿ ಒಳಗೆ ಮನೆ 
ಪತ್ನಿಗೆ ನಮ್ಮ ನಗು ಎರಡು !!!!!
ಮೌನ ಮುರಿದ ಕೋಣೆಗೆ
ಟೀವಿ ಧಾರವಾಹಿ ಮಾತು
ದೋಣಿಯೊಂದು ತೇಲುತ್ತಿದೆ
ಸಾಗರವೆಂಬ ಹೆಸರು !
ಅಲೆಅಲೆಗಳು ಬಡಿದು
ಬದುಕು ಅರೆಗಳಿಗೆಯ ಜಗತ್ತು
ಕವಿತೆ ಅರಳುವ ಹೊತ್ತು  !
 ------4---------
ಬಾ ಎಂದು ಕರೆಯುತ್ತಿದೆ
ಘಮಘಮ ಅಡುಗೆ ಕೋಣೆಗೆ
ಪಾತ್ರೆಗಳ ಸದ್ದೊಳಗೆ ಬಾಯ್ತೆರೆದ ಹಸಿವು !
ಘಂಟೆಯಾಗಿದೆ ಊಟಕೆ ಕೈಬಳೆ  !
ತಟ್ಟೆಯಗಲ ದಿಟ್ಟಿಸಿದ ಅನ್ನದ ಕಂಗಳಲ್ಲಿ
ನಾಲ್ಕು ತುತ್ತು ಮಗುವಿಗೆ
ಇನ್ನೆರಡು ಪತ್ನಿಗೆ !
ತುತ್ತಿಟ್ಟ ನನಗೆ ಅಮ್ಮನದೇ ನೆನಪು
ಕವಿತೆ ಅರಳುವ ಹೊತ್ತು  !
 ------5---------
ಕೈ ತೊಳೆದು ಸ್ವಚ್ಚ ಶುಭ್ರ ದಿನಗಳು
ಮುಗಿಸುತ್ತಿವೆ ಅರ್ಧ ಹಾಸಿಗೆ ಬದುಕು !
ಮಡಿಲಿಂದ ಮಗದೊಂದು ಮಗ್ಗುಲಿಗೆ
ಮುಗ್ಧ ನಿದ್ರೆಗೆ ಜಾರಿದೆ ಮಗು !
ಹಗಲು ನೆನಪುಗಳ ಕರೆದು
ಬಿಚ್ಚಿ ರಾತ್ರಿ ಭಾವದ ಗಂಟು !
ಆ ಕಡೆ ಅವಳು, ಮಧ್ಯೆ ಮಗು
ಈ ಕಡೆ ನನ್ನನ್ನೇ ನೋಡುತ್ತಿದೆ
ಎರಡು ಪ್ರೇಮದ ಕಂಗಳು !
ಒಂದಾದ ಎರಡು, ಜೋಗುಳದ ಹಾಡಿಗೆ
ಕವಿತೆ ಅರಳುವ ಹೊತ್ತು !
-ರವಿ ಮೂರ್ನಾಡು.