ಮಂಗಳವಾರ, ನವೆಂಬರ್ 27, 2012

ತಲೆಗೆ ಸುತ್ತಿ ನೆನಪು ರುಮಾಲು !

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಆ ಭೂಮಿ ನೋಡಿದ್ದೆ
ಗಿಡ-ಮರ ಮೈವೆತ್ತ ಕಾಡು
ಹೂ ಬಿಟ್ಟ ಹಣ್ಣಿಗೆ
ಹಕ್ಕಿ-ಅಳಿಲು ಸಿಪ್ಪೆ ಸುಲಿದು
ಮುಗಿಬಿದ್ದ ಇಲಿ-ಹೆಗ್ಗಣದ-
ಮಾಳಿಗೆ ನೆಲದ ಮಣ್ಣಿಗೆ ಗೆದ್ದಲು-
ಕಟ್ಟಿದ ಹುತ್ತದ ಹಾವು
ಬಿದ್ದ ಬಿಸಿಲಿಗೆ ಮೈ ಕಾಯಿಸಿ
ನಾಯಿ-ಬೆಕ್ಕು ತುಟಿ ಸವರಿ
ಉದ್ದುದ್ದ ನಾಲಗೆ ಇಳಿಸಿ 
ಹುಲ್ಲು ಕಚ್ಚುವ ದನ-ಕರು

ನೋಡಿದ್ದೆ ...
ಸೀಟಿ ಊದಿ ಗಾಳಿ
ಸತ್ತ ತರಗೆಲೆಗಳ ಪಕಳೆ ಜಾಡಿಸಿದಾಗ
ನೆರಳುಗಳ ಸುತ್ತಾ ಅಸ್ಪಷ್ಟ ಚೆಲ್ಲಾಟಗಳು

ಮತ್ತೊಮ್ಮೆ ಆ ಭೂಮಿ ನೋಡಿದ್ದೆ

ಕಾಡು ಕಡಿದು ಬೇರುಗಳ ಸಿಗಿದು
ಎದ್ದ ದಿಬ್ಬಗಳ ಅಗೆದು
ಗಟ್ಟಿ ಕುಳಿತ ಕಲ್ಲುಗಳ ಒಡೆದಾಗ
ನೆಲದ ಮೈಯೀಗ ಸಾಪು ಸಪಾಟು .

ಮಣ್ಣೊಳಗೆ ಇಲಿ-ಹೆಗ್ಗಣ
ಬುಸುಗುಟ್ಟಿದ ಹುತ್ತದ ಹಾವು ಓಡಿ
ಬಿದ್ದ ಮರಕೆ ಬೆದರಿದ ಹಕ್ಕಿ ಹಾರಿದಾಗ
ಅಲ್ಲೊಂದು ಮನೆಯ ನಕ್ಷೆ
ನೀಲಿಯಾಗಿ ಹರಡಿತ್ತು.

ಚೌಕಾಕೃತಿ ಗೀಟು ಎಳೆದು
ಗುದ್ದಲಿ-ಪಿಕಾಸಿ ಇಷ್ಟಿಷ್ಟು ಮಣ್ಣು ಕಿತ್ತು
ಇಟ್ಟಿಗೆ ಇಟ್ಟಿಗೆಗೆ ಕುಳಿತು
ಅಷ್ಟಿಷ್ಟು ಗಟ್ಟಿ ಸಿಮೆಂಟು ಸವರಿದಾಗ
ಗೋಡೆ ಆಗಸ ನೋಡುತಿತ್ತು
 
ಎದ್ದ ಗೋಡೆಯೊಳಗೆ
ಬಿದ್ದ ಸೂರ್ಯನ ಬೆಳಕಿಗೆ
ಮರ-ಮುಟ್ಟುಗಳ ತಡೆಯಿಟ್ಟು 
ಒಂದೊಂದೇ ಹೆಂಚುಗಳ ಮುಚ್ಚಿದಾಗ
ಸುತ್ತ ಈಗ ಕಣ್ ಬಿಡದ ಕತ್ತಲು

ಮತ್ತೆ ಆ ಮನೆ ನೋಡಿದ್ದೆ

ಅವಳ ಹಸಿರು ಬಳೆ ಕೈಗೆ
ಅಂಗಳದ ಬೊಗಸೆ ಬೆಳಕು ಸುರಿದು
ಬಾಗಿಲ ದೂಡಿ.. ಮತ್ತೆ ದೂಡಿ
ನೆಲದ ಎದೆಗೆ ಹೆಜ್ಜೆಯಿಟ್ಟಾಗ 
ಕೋಣೆ ತುಂಬಾ ಭಾರದ ಸದ್ದು

ಮತ್ತೆ ಒಳಗೆ ನೋಡಿದ್ದೆ ....

ಮುಚ್ಚಿದ ಕಣ್ಣಿಗೆ ತೈಲವಿಟ್ಟು
ಕಡ್ಡಿ ಗೀರಿದಾಗ
ರೆಪ್ಪೆ ತೆರೆದ ಮನೆಯ 
ಹೆಂಚುಗಳ ಸಂದುಗಳಲಿ ಸಾವಿರ ಕಣ್ಣು

ಪಾತ್ರೆಗಳ ಶೂನ್ಯಕೆ ತುಂಬಿ ನೀರು
ಗೆಜ್ಜೆಗೆ ನಾಚಿ ಬಳೆಗಳ ಸದ್ದಿಗೆ
ಹಸಿವು ಹಚ್ಚಿದ ಘಮಘಮ ಸಾರು
ತುಂಬಿದ ತಟ್ಟೆಗೆ ಅನ್ನದ ಮಲ್ಲಿಗೆ ಅರಳು

ಮತ್ತೆ ಹೊರಗೆ ನೋಡಿದ್ದೆ..

ಬಾಗಿಲಿಗೆ ದೇವರ ಹೂವು
ಅವಳ ಹಣೆಗೆ ಕುಂಕುಮ ಚಂದ್ರನ ಚೂರು
ಮನೆಯ ತಲೆಗೆ ನೆನಪು ಸುತ್ತಿ ರು-ಮಾಲು

ರಾತ್ರಿ ಹಾಸಿದ ನಿದ್ದೆಯಲಿ
ಹೊರಗೆ ಆಗಸದ ಹಸಿರು ಮಳೆಗೆ 
ಮನೆ ಸುತ್ತಾ ಸೂರ್ಯನ ಕೊಡೆ
ನದಿ-ತೊರೆ ಹರಿದು ಮುಂಜಾನೆ
ಹಕ್ಕಿ ಚಿಲಿಪಿಲಿಗೆ ತೆನೆ ಬಿದ್ದು
ತೊಟ್ಟಿಲು ತೂಗುತಿತ್ತು ಮೆಲ್ಲನೆ
ಅಲ್ಲೇ ತಂಗಾಳಿಗೆ ಎದೆಯೊಡ್ಡಿ
ಅಂಬೆಗಾಲಿಕ್ಕಿದ ಮಗುವಿನ ನಗು

ಮತ್ತೆ ಒಳಗೆ ನೋಡಿದ್ದೆ  ....

ಬೆಳೆಯುತ್ತಾ ಮಗು
ಮತ್ತೆ ಮತ್ತೆ ಕನ್ನಡಿ ನೋಡುವ ಅವಳು
ಒಂದು ಎಳೆ ನೆರೆಗೂದಲ ಕಿತ್ತು 
ಅಂಗಳಕ್ಕೆಸೆದಾಗ
ಮನೆ ಕಟ್ಟಿದವನನ್ನೇ ಹುಡುಕುತ್ತಿತ್ತು
ಮನೆ ಮುಚ್ಚಿದ ಹೆಂಚು

ಗೋಡೆ ಮೈಗೆ ಬಣ್ಣ ಬಳಿದು
ಅಂಗಳಕೆ ಚಪ್ಪರ ಹಾಕಿ
ಮದುಮಗನ ಕೋಣೆಗೆ ಇಣುಕಿ
ಮೂಲೆಯ ಖುರ್ಚಿಗೆ ಬಾಗಿ
ಬಂದ ಜನರ ನೋಡುತ್ತಲೇ ಇದ್ದ ಅವನು

ನಾನು ನೋಡಿದ್ದೆ
ಮನೆ ಅವನನ್ನೇ ನೋಡುತ್ತಿತ್ತು.
-ರವಿ ಮೂರ್ನಾಡು

ಗುರುವಾರ, ನವೆಂಬರ್ 22, 2012

ದುಬೈ ವಿಮಾನದಲ್ಲೊಂದು ಕನ್ನಡ ಅಕ್ಷರದ ಹಣತೆ !


ಚಿತ್ರ ಕೃಪೆರವಿಕಿಶನ್ ಮಡಂಗಲ್ಲುದುಬೈ.
ಕನ್ನಡದ ನೆಲದಲ್ಲೇ ಹಲವಾರು ಸೂಚನಾ ಫಲಕಗಳು ಕನ್ನಡದ ಅಪಭ್ರಂಶು ಅಕ್ಷರಗಳಲ್ಲಿ ತೂಗಾಡುತ್ತಿರುತ್ತಿರುವುದನ್ನು ಕಾಣುತ್ತೇವೆ.ಶಾಸ್ತೀಯ ಕನ್ನಡಕ್ಕೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಕೆಲವಾರು ಸಂಸ್ಥೆಗಳಂತೂ ಕನ್ನಡಗರಿಂದಲೇ ವ್ಯವಹಾರ ಕುದುರಿಸಿಕೊಂಡಿದ್ದರೂ ಕನ್ನಡವನ್ನು ಕರುಣಿಸಲು ತಯಾರಿಲ್ಲ.ಮುನ್ಸಿಪಾಲಿಟಿಗಳು, ಪಂಚಾಯಿತಿ ಕಚೇರಿಗಳು,ಬಿಎಂಸಿ ಕಚೇರಿಗಳಲ್ಲಿ ಅಕ್ಷರಗಳನ್ನು ಅರ್ಧ ತಿಂದಾವಸ್ಥೆಯಲ್ಲಿ ಫಲಕಗಳು ತೂಗಿಸಿಕೊಂಡಿರುತ್ತವೆ. ಇದರ ಬಗ್ಗೆ ಕನ್ನಡ ಚಳವಳಿ ಸಂಸ್ಥೆಗಳು ಹೋರಾಟ ಮಾಡಿ ಬಾಯಿ ಹುಣ್ಣಾಗುವಂತೆ ಬೊಬ್ಬೆ ಹೊಡೆದು ಸುಮ್ಮನಾದ ಘಟನೆಗಳು ನಡೆಯುತ್ತಲೇ ಇದೆ.

ಇವೆಲ್ಲದರ ನಡುವೆ ಹೊರನಾಡಿನಲ್ಲಿ ಇದೊಂದು ಸೂಚನಾ ಫಲಕ ನೋಡಿ ! ಅದು ವಿದೇಶಿ ವಿಮಾನದಲ್ಲಿ. ಅಚ್ಚ ಕನ್ನಡದಲ್ಲಿ ಸ್ವಚ್ಛ ಮಾಹಿತಿ ನೀಡುವ ಈ ಫಲಕ ಸುದ್ದಿಗೆ ಮಹತ್ವವನ್ನೇ ಪಡೆದಿಲ್ಲ ಎಂದು ಕರ್ನಾಟಕ ರಾಜ್ಯದ ಜನತೆ ನಗಬಹುದು. ಆದರೆ ಹೊರನಾಡ ಕನ್ನಡಿಗರಿಗೆ ಇದು ಬಹಳ ಶ್ರೇಷ್ಠ . 

"ಶೌಚಾಲಯವನ್ನು ಸ್ವಚ್ಛ ಮಾಡಲು ಬಟನ್ ಒತ್ತಿರಿ"

ಅನ್ನುವ ಈ ಮಾಹಿತಿಯನ್ನು ಪ್ರತಿಯೊಬ್ಬ ಹೊರನಾಡ ಕನ್ನಡಿಗ ದೋಹ-ದುಬೈ ನಡುವೆ ಹಾರಾಟ ನಡೆಸುವ ದುಬೈ ವಿಮಾನದಲ್ಲಿ ಕಾಣಬಹುದು. ಇದು ಕೇವಲ ವಿಮಾನದ ಒಳ ಭಾಗದಲ್ಲಿ ಪ್ರತಿಯೊಬ್ಬ ವ್ಯಕ್ತಿ ಶೌಚಾಲಯಕ್ಕೆ ಹೋಗುವಾಗ ಸ್ಪಷ್ಟವಾಗಿ ಮಾಹಿತಿ ನೀಡುವ ಅಚ್ಛ ಕನ್ನಡದ ಮಾಹಿತಿ ಫಲಕ. ಒಂದೇ ಒಂದು ಅಕ್ಷರದ ತಪ್ಪಿಲ್ಲದೆ ಕೊಲ್ಲಿ ರಾಷ್ಟ್ರದವರು ತೋರಿಸಿದ ಕನ್ನಡದ ಪ್ರೇಮ. ಅದರಲ್ಲೂ ದುಬೈ ಏರ್ ಲೈನ್ಸ್ ಕೊಟ್ಟ ಮಹತ್ವದ ಕನ್ನಡದ ಕಾಣಿಕೆ. ಹೊರನಾಡ ಕನ್ನಡಿಗರಿಗೆ ಕನ್ನಡದ ಅಕ್ಷರ ಕಂಡಾಗ ಕರ್ನಾಟಕ ರಾಜ್ಯ ಕಣ್ಣು ಮುಂದೆ ಕಾಣುವುದು. ಅದೇ ಅನುಭವ ಪ್ರತೀ ಭಾರಿ ಈ ವಿಮಾನದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಕನ್ನಡಿಗನಿಗೆ ಸಿಗುವುದು. ಅಪ್ಪಟ  ಹೊರನಾಡ ಕನ್ನಡಿಗ ಕಾಸರಗೋಡಿನ ಶ್ರೀಯುತ ರವಿಕಿಶನ್ ಮಡಂಗಲ್ಲು ಅವರು ದೋಹ-ದುಬೈ ವಿಮಾನ ಪ್ರಯಾಣ ಬೆಳೆಸಿದಾಗ ತಮ್ಮ ಕ್ಯಾಮರಾ ಕಣ್ಣಿಗೆ ಒತ್ತಿಕೊಂಡ ಕನ್ನಡದ ವಾಕ್ಯಗಳು ಇವು. ಅವರ ಆಶ್ಚರ್ಯಕ್ಕೆ ಸಿಕ್ಕಿದ್ದು, ಅಚ್ಛ ಸ್ವಚ್ಛ ಕನ್ನಡದ ಸ್ಪಷ್ಟ ಮಾಹಿತಿಗಳು. 

ಕರ್ನಾಟಕ ರಾಜ್ಯದಲ್ಲಿ ಇಂತಹ ಸೂಚನೆಗಳನ್ನು "ಇದ್ದಿಲಿನಿಂದಲೋ, ರಸ್ತೆಗೆ ಹಾಕುವ "ಟಾರ್"ನಿಂದಲೋ ಸಾರ್ವಜನಿಕ ಶೌಚಾಲಯಗಳಲ್ಲಿ ಬರೆದಿರುವುದನ್ನು ಕಾಣಬಹುದು. ಬರೆದ ಕೆಲವು ದಿನಗಳ ನಂತರ ಸೂಚನೆ ಮಾಹಿತಿ ತಲೆ ಕೆಳಗಾಗಿರುತ್ತವೆ. ಒಂದೋ ಅರ್ಧ ಅಳಿಸಿ ಹೋಗಿರುತ್ತವೆ. ಇಲ್ಲದಿದ್ದರೆ, "ಮೂತ್ರಾಲಯ" ಅನ್ನುವ ಶಬ್ಧಕ್ಕೆ  ಕೊಂಚ ತಿದ್ದುಪಡಿ ಮಾಡಿ ಇನ್ನೊಂದಕ್ಕೆ ದಾರಿ ತೋರಿಸಿದ ಉದಾಹರಣೆ ಬೇಕಾದಷ್ಟಿದೆ. 

ಭಾರತ ದೇಶದೊಳಗೆ ಬೇಕಾದಷ್ಟು ವಿಮಾನಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹಾರಾಡುತ್ತಿರುತ್ತವೆ. ಅಲ್ಲಿ ಏರ್ ಲೈನ್ಸ್ ಗಳು ಹಲವು ರಾಜ್ಯಗಳ ಭಾಷೆಗಳಲ್ಲಿ ಇಂತಹ ಸೂಚನಾ ಫಲಕ ಹಾಕಿವೆ. ಅಲ್ಲಿ ಎಲ್ಲಿಯೂ ಇಂತಹ ಕನ್ನಡದ ಮಾತು ಕಂಡ ಉದಾಹರಣೆಯಿಲ್ಲ. ಸಣ್ಣ  ಉದಾಹರಣೆಯಂತೆ ಬೆಂಗಳೂರಿನಿಂದ ಮಂಗಳೂರಿಗೆ ಹಾರಾಡುವ ವಿಮಾನದಲ್ಲಿಯೂ ಕನ್ನಡದ ಸೂಚನಾ ಫಲಕ ಕಾಣ ಸಿಗುವುದಿಲ್ಲ. ಭಾರತ ದೇಶದೊಳಗೇ ಇಂತಹ ಪರಿಸ್ಥಿತಿ ಇರುವಾಗ ಕರ್ನಾಟಕ ರಾಜ್ಯದೊಳಗೇ ಹಾರಾಡುವ ವಿಮಾನಗಳ ಕನ್ನಡದ ಸೇವೆ ಏನು ಎಂದು ಪ್ರಶ್ನೆ ಬರುತ್ತವೆ. 

ಕನ್ನಡ ಭಾಷೆ ಎಷ್ಟರ ಮಟ್ಟಿಗೆ ತನ್ನತನವನ್ನು ಗುರುತಿಸಿಕೊಂಡಿದೆ ಮತ್ತು ಕನ್ನಡಿಗರು ಎಷ್ಟರ ಮಟ್ಟಿಗೆ ಹಿಂದುಳಿದಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಇನ್ನೊಂದಿಲ್ಲ. ಅದು ಸಾಮಾಜಿಕವಾಗಿ ಮತ್ತು ಮಾನಸೀಕವಾಗಿ ಅನ್ನೋ ವಿಷಯವೂ ಸೇರಿದೆ. ಅಭಿವೃದ್ದಿಯಲ್ಲಿ ಶೂನ್ಯ ಅನ್ನುತ್ತಲೇ ಕನ್ನಡಿಗರು ತಮ್ಮತಮ್ಮೊಳಗೆ ಹೊಡೆದಾಡುವುದು ಸರ್ವೇ ಸಾಮಾನ್ಯವಾಗಿರುವಾಗ, ಅವರ ಸಂಕುಚಿತ ಮನೋಭಾವಗಳು ಕನ್ನಡವನ್ನು ಕುಂಠಿತಗೊಳಿಸುತ್ತಿವೆ. ಕನ್ನಡವನ್ನು ಕನ್ನಡಿಗರೇ ನಾಶ ಮಾಡುತ್ತಿದ್ದಾರೆ.  ತಾವು ಬೆಳೆಸುವುದೂ ಇಲ್ಲ, ಬೆಳೆಸುವವರನ್ನು  ಬಿಡುವುದೂ ಇಲ್ಲ. 

ಇವೆಲ್ಲಾ  ಸಂಕುಚಿತ ದೌರ್ಬಲ್ಯಗಳ ನಡುವೆ ವಿದೇಶದ ಅಂತರ ರಾಷ್ಟ್ರೀಯ ವಿಮಾನಗಳಲ್ಲಿ ಇಂತಹ ಕನ್ನಡದ ಪದಗಳು ಮೇರು ಮಟ್ಟದಲ್ಲಿ ನಿಲ್ಲುತ್ತವೆ. ಅದೇ ರೀತಿಯಲ್ಲಿ ಕನ್ನಡದ ನೆಲದಲ್ಲಿ ಕನ್ನಡಕ್ಕಾಗಿ ಹೋರಾಡುವ ಸಂಘಟನೆಗಳು ತಮ್ಮ ನಾಡಿನಲ್ಲೇ ಹಾರಾಡುವ ವಿಮಾನಗಳಲ್ಲಿ ಇಂತಹ ಅಚ್ಚ ಕನ್ನಡದ ಮಾಹಿತಿಯನ್ನು ಕಂಡಿದ್ದಾರೋ ಅನ್ನುವುದು ಪ್ರಶ್ನೆ. ಭಾಷೆಯನ್ನು ಸಮಾಜದ ಮುಖವಾಣಿಗೆ ಉಪಯೋಗಿಸಿಕೊಂಡಿರುವವರು ಇದರ ಬಗ್ಗೆ ಆಲೋಚಿಸಬೇಕು. ಭಾರತದಲ್ಲಿ ಕನ್ನಡ ಶಾಸ್ತ್ರೀಯ ಸ್ಥಾನ ಮಾನ್ಯತೆಯನ್ನು ಪಡೆದುಕೊಂಡಿದೆ. ಎಲ್ಲಾ ಏರ್ ಲೈನ್ಸ್ ಗಳು ತಮಗೆ ಇಷ್ಟ ಬಂದ ಭಾಷೆಯಲ್ಲಿ ಮಾಹಿತಿಯನ್ನು ಸೂಚನಾ ಫಲಕಗಳಲ್ಲಿ ತೂಗಿಸುತ್ತಿವೆ. ಎಷ್ಟು ವಿಮಾನಗಳಲ್ಲಿ ಕನ್ನಡದ ಅಕ್ಷರಗಳಿವೆ ಅನ್ನೋದು ಇದುವರೆಗೆ ಯಾವ ಕನ್ನಡ ಸಂಘಟನೆಗಳು ಪತ್ತೆ ಹಚ್ಚಿಲ್ಲ. 
-ರವಿ ಮೂರ್ನಾಡು

ಬುಧವಾರ, ನವೆಂಬರ್ 21, 2012

ತುಂಬಿಕೊಳ್ಳದ ನೀನು..!


ಚಿತ್ರ ಕೃಪೆ: ಅಂತರ್ಜಾಲ
ಉರಿವ ಬೆಂಕಿಯೇ ನಾನು
ಬುಸುಗುಡುವ ಗಾಳಿ ನೀನು
ಮನಸ್ಸು ಸುಟ್ಟಿದೆ !
ಮಾತಾದೆವೋ ಬೆಳೆದು
ಕರಗಿಕೊಂಡೆವು ಉರಿದು
ಮೌನ ಮೆಚ್ಚಿದೆ !

ಬಿಡದ ಅಹಂಕಾರಿ ನಾನು
ಒಪ್ಪದ ಹಠಮಾರಿ ನೀನು
ಅಹಂ ಎದ್ದಿದೆ !
ಗೋಡೆ ಬೆಳೆದಿದೆ ನಡುವೆ
ಮುಖವ ಕಾಣದ ಮನಕೆ
ಪ್ರೀತಿ ಮುಚ್ಚಿದೆ !

ಮಿತಿ ಮೀರಿ ಒಲುಮೆ ಜೇನು
ಗತಿ ತಿರುಗಿ ಹುಳಿ ಹಾಲು
ಅರಿತುಕೊಳ್ಳದೆ !
ಸೆಳೆದುಕೊಳ್ಳದೇ ಕಾಂತೆ
ಸೆಟೆದುಕೊಳ್ಳದಾ ಕಾಂತ
ನಮ್ಮ ನಡುವಿದೆ!

ನಿನ್ನ ತುಂಬುವ ಕನ್ನಡಿಗೆ
ನನ್ನ ತುಂಬುವ ಕಣ್ಣಿದೆ
ಒಂಟಿಯಾಗದೆ !
ಚಳಿಗೆ ಉಬ್ಬಿದ ಸ್ಪರ್ಶಕೆ
ಹಣೆಗೆ ತಬ್ಬುವ ಬಿಂಧಿಗೆ
ಬೆರಳ ನನಪಿದೆ !

ನಂಬಿ ತುಂಬದ ಮಾತು
ಬದುಕ ಮೌನವೇ ನಮಗೆ
ಶಬ್ಧ ಚೆಲ್ಲಿದೆ !
ತುಂಬಿಕೊಳ್ಳದ ನೀನು
ತುಂಬಲಾಗದ ನಾನು
ಅರ್ಧವಾಗಿದೆ !
-ರವಿ ಮೂರ್ನಾಡು.

ಭಾನುವಾರ, ನವೆಂಬರ್ 11, 2012

ಮೆಲ್ಲಗೆ ನಡೆ ಮುದ್ದಿನ ಮಗಳೇ ..!


ಮೆಲ್ಲಗೆ ನಡೆ ಮುದ್ದಿನ ಮಗಳೆ
ಎಚ್ಚರವೆದ್ದಿತು ಮಗು ಒಳಗೆ ....

ಎಚ್ಚರವಾಗದಮ್ಮ, ಮಲಗಿಯೇ ಇದೆ
ತೂಗಿದ್ದಾನೆ ದೇವ ಸದಾ ನಡೆಗೆ !

ಮೆಲ್ಲಗೆ ಕುಳಿತುಕೊ ಮಲ್ಲಿಗೆ ಮಗಳೆ
ನೋವೆದ್ದಿತು ಮಗು ಒಳಗೆ....

ನೋವಾಗದಮ್ಮ ಆಡುತ್ತಲೇ ಇದೆ
ಒದೆಯುತ್ತಿದೆ ಹೊಟ್ಟೆಗೆ ಮೇಲೆ ಕೆಳಗೆ!

ತಟ್ಟೆ ತುಂಬಾ ತಿನ್ನು ಅನ್ನದ ಮಗಳೆ
ಹಸಿವೆದ್ದಿತು ಮಗು ಹಾಲಿಗೆ ಒಳಗೆ...

ಹಸಿವಾಗದಮ್ಮ ಕರಳೇ ತಬ್ಬಿದೆ
ದೇವರ ಎದೆಯಲಿ ಹಾಲೇ ಹರಿದಿದೆ!

ಸ್ನಾನ ಬಿಸಿಯಿರಲಿ ತಂಗಾಳಿ ಮಗಳೆ
ಮಳೆ ಕುಡಿಯುತ್ತಿದೆ ಮಣ್ಣು ಹೊರಗೆ...

ಕುಡಿದರೆ ಕುಡಿಯಲಮ್ಮ ಉಸಿರು ಬಿಸಿಯಿದೆ
ಮಳೆ-ಗಾಳಿ ಮಣ್ಣಿಗೆ ಹಸಿರು ಚಿಗುರಿದೆ!

ಮೆಲ್ಲಗೆ ಮಲಗು ಹೂವಿನ ಮಗಳೆ
ಜೀವ ಎರಡಿದೆ ನಿದ್ದೆಯ ಮಂಚಕೆ...

ಜೀವ ಮೂರಿದೆಯಮ್ಮ ಮತ್ತೊಂದು ತಾಳಿಗೆ
ಭುವಿ-ಭಾನು ನಾವು ಚಂದ್ರ ಬಾಳಿಗೆ!

ನೋವ ಸಹಿಸಿಕೊ ಸಹನೆಯ ಮಗಳೆ
ಹಾಸಿಗೆ ಮೆತ್ತಗೆಯಿದೆ ಭುವಿ ಮಡಿಲ ತೆಕ್ಕೆಗೆ ....
 
ನೋವಿದೆಯಮ್ಮ, ತುಟಿ ಏಳು ಸೀಳಿದೆ
ಬಿದ್ದ ಮಣ್ಣಿಗೆ ಬೀಜ ಕಣ್ಣೆರಡು ಬಿಟ್ಟಿದೆ !
-ರವಿ ಮೂರ್ನಾಡು

ಗುರುವಾರ, ನವೆಂಬರ್ 8, 2012

ಅವನು ತುಂಬಾ ಒರಟ - ಒಮ್ಮೆ ಕಣ್ಣೀರಿಳಿಸಿ ಪ್ರೀತಿಸಿದ್ದ..! (ಭಾಗ-2)



" ಹೇ ಶಾಲೆಗೆ ಹೊರಟಿದ್ದೀಯೇನೋ?"
ಚಂದ್ರಿ ತಲೆ ಬಾಚುತ್ತಾ ಹೊರಗೆ ಅರಚುತ್ತಿದ್ದಾಳೆ. ಚೆಂದದ ಹುಡುಗಿ. ಸೊಂಟ ಮುಟ್ಟಿದ ಮುಡಿ. ಆರನೇ ಕ್ಲಾಸು. ಅವಳ ಮೂಗುತಿ ಬೊಟ್ಟು ಮಿನುಗುತ್ತಿದೆ..
" ಚಂದ್ರಕ್ಕ ಹೊರಡುತ್ತಿದ್ದೇನೆ "
ಅಹಾ..! ಇವತ್ತು ಶಾಲೆಯ ಬೆಳ್ಳಿ ಮಹೋತ್ಸವ... ನಾನು ಪಸ್ಟು ರ‍್ಯಾಂಕ್.ಚಡ್ಡಿಯ ಗುಂಡಿಯೊಂದು ಬಿಟ್ಟು ಹೋಗಿದೆ. ಅವರೆಲ್ಲರೂ ನೋಡಿದರೋ? ಅಂಗಿಯನ್ನು ಉದ್ದ ಬಿಡುತ್ತೇನೆ. ಚಂದ್ರಿಗೂ ಪ್ರಶಸ್ತಿ ಇದೆಅವಳು ಎರಡನೇ ರ‍್ಯಾಂಕ್.
ಏಳು ಮೈಲು ದೂರದ ದಾರಿಯಲ್ಲಿ ಸುಂಟಿಕೊಪ್ಪದ ಶಾಲೆಯೇ ಕಾಣುತ್ತಿದೆ. ಪಟ್ಟಣಕ್ಕೆ ಸಮೀಪಿಸುತ್ತಿದ್ದಂತೆ ಎಲ್ಲಿಯೋ ಸಿನೇಮಾ ಹಾಡು. ಹತ್ತಿಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಸುಶ್ರಾವ್ಯ.ನಡೆಯುತ್ತಾ ಮನಸ್ಸು ಕುಣಿಯುತ್ತಿದೆ. ಹೌದು ! ಅದು ನನ್ನ ಶಾಲೆಯ ಹಾಡು... ಅಹಾ..! ಎಲ್ಲರೂ ಸೇರಿದ್ದಾರೆ... ಪ್ರಶಸ್ತಿ ಕೊಡುವವರು ಯಾರು? ನಾನು ಫಸ್ಟು ರ‍್ಯಾಂಕು. ಎಲ್ಲಿ ಕುಳಿತುಕೊಳ್ಳವುದು? ಜಾಗ ಹುಡುಕುತ್ತಿದೆ ಚಂದ್ರಿ,ರಾಧೆ,ಗಿರಿಜಾ, ರವಿ, ಚಂದ್ರರ ಹತ್ತಾರು ಕಣ್ಣುಗಳು....
ಅದೋ ಅಲ್ಲಿ ಮೂರು ಖಾಲಿ ಕುರ್ಚಿ... ಚಂದ್ರಿ ನನ್ನ ಕೈ ಬಿಡಲೇ ಇಲ್ಲ.... ಅವಳು ಮುಂದೆ.. ನಾನು ಹಿಂದೆ. ಹಿಡಿದ ಕೈ ಅವಳನ್ನು ಗಟ್ಟಿಯಾಗಿ ಬಿಡಲೇ ಇಲ್ಲ.
"ಚಂದ್ರಕ್ಕ... ಪ್ರಶಸ್ತಿ ಅಲ್ಲಿ ಕೊಡುತ್ತಾರಾ?"
"ಸುಮ್ಮನೆ ಕುಳಿತುಕೊಳ್ಳೋ"
ಮಾತಾಡಲಿಲ್ಲ... ಚಪ್ಪಲಿಯಿಲ್ಲದ ಕಾಲು ನೆಲಕ್ಕೆ ಮುಟ್ಟದೆ ಮೇಲೆಯೇ ನಡುಗುತ್ತಿದೆ. ದಾರಿಯಲ್ಲಿ ನಡೆದು ಬರುವಾಗ ಮಣ್ಣು ಮೆತ್ತಿಕೊಂಡಿದೆ. ತೊಳೆದಿದ್ದರೆ ಚೆನ್ನಾಗಿತ್ತು. ಪ್ರಶಸ್ತಿ ಸ್ವೀಕರಿಸುವಾಗ ಎಲ್ಲರೂ ನೋಡಿದರೋ? ವೇದಿಕೆಯಲ್ಲಿ ಹತ್ತಾರು ಮಂದಿ... ಅಹಾ ! ಐದನೆ ಕ್ಲಾಸು ಕಾವೇರಿ ಟೀಚರು ಮೈಕಲ್ಲಿ ಏನೇನೋ ಹೇಳುತ್ತಿದ್ದಾರೆ. ಕೆಲವರು ಎದ್ದು ಕೈ ಮುಗಿದು ಕುಳಿತುಕೊಳ್ಳುತ್ತಿದ್ದಾರೆ. ಕೆಲವರು ಹಾಡಿದರು. ಅದೋ ಹೆಡ್ ಮಾಸ್ಟರು....! ಕೈಯಲ್ಲಿದ್ದ ಬೆತ್ತವೆಲ್ಲಿಟ್ಟಿದ್ದಾರೋ? ದಪ್ಪ ಕೊಂಬಿನಂತ ಮೀಸೆಯ ಸೋಮಣ್ಣ ಮಾಸ್ಟರು... ಕೈಯಲ್ಲಿ ಹೂಗುಚ್ಚವಿಡಿದು ಮುಖ್ಯಮಂತ್ರಿ ಗುಂಡೂರಾಯರಿಗೆ ಕೊಡುತ್ತಿದ್ದಾರೆ. ಅದೋ ಕೈಮುಗಿದು ನಕ್ಕರು...ಮೀಸೆಯನ್ನೊಮ್ಮೆ ಸರಿಯಾಗಿ ತೀಡುತ್ತಿದ್ದಾರೆ. ನನ್ನ ಪ್ರಶಸ್ತಿ ಎಲ್ಲಿ ಇಟ್ಟಿದ್ದಾರೋ?
"ಚಂದ್ರಕ್ಕ ಪ್ರಶಸ್ತಿ ಯಾವಾಗ ಕೊಡುತ್ತಾರೆ?"
"ಸುಮ್ಮನೇ ಕುಳಿತುಕೊಳ್ಳೋ"
ಆಯಿತು... ಅದೋ ಗಂಗಮ್ಮ ಟೀಚರು....! ಎತ್ತರವಾಗಿದ್ದಾರೆ.... ಓಹೋ ಹೀಲ್ಡ್ ಚಪ್ಪಲು ಸ್ವಲ್ಪ ಎತ್ತರದಲ್ಲೇ ಇದೆ....ಅಹಾ...! ಹೆಸರು ಕರೆಯುತ್ತಿದ್ದಾರೆ....ಚಂದ್ರಕ್ಕನ ಹೆಸರು ಕರೆದರು...
"ಚಂದ್ರಕ್ಕ ಕರೆಯುತ್ತಿದ್ದಾರೆ"
ಲಗುಬಗೆನೆ ವೇದಿಕೆಯೆಡೆಗೆ ಓಡಿದ ಚಂದ್ರಕ್ಕ ಒಂದು ದೊಡ್ಡ ಪೊಟ್ಟಣ ಸ್ವೀಕರಿಸಿದಳು. ಅವಳ ಹಿಂದೆ ಮತ್ತೊಬ್ಬ ಹುಡುಗ, ಅವನ ಹಿಂದೆ ಮತ್ತೊಬ್ಬಳು.. ನನ್ನ ಹೆಸರೋ?
ವೇದಿಕೆಯಿಂದ ಬಂದ ಚಂದ್ರಕ್ಕನ ಕೈಯಲ್ಲಿದ್ದ ಪೊಟ್ಟಣವನ್ನೊಮ್ಮೆ ಸವರಿ ನೋಡುತ್ತೇನೆ. ಒಳಗೆ ಗಟ್ಟಿಯಿದೆ... ಪುಸ್ತಕವೋ ?
"ನಿನ್ನ ಹೆಸರು ಕರೆಯುತ್ತಿದ್ದಾರೆ.... ಬೇಗ ಹೋಗು "
ನನ್ನ ಮುಖದಲ್ಲಿದ್ದ ಬೆವರನ್ನೊಮ್ಮೆ ಚಂದ್ರಕ್ಕ ಒರೆಸಿದಳು.....ತಲೆಗೂದಲು ಸರಿಪಡಿಸಿ ಸವರಿ ವೇದಿಕೆಗೆ ಕಳುಹಿಸಿದಳು."ಮೆಲ್ಲೆಗೆ ಹೋಗು".  ಹೊರಗೆ ಇಣುಕುತ್ತಿದ್ದ ಗೊಣ್ಣೆಯನ್ನೊಮ್ಮೆ ಏರಿಸಿ ಕಾಲು ನಡುಗುತ್ತಲೇ ವೇದಿಕೆಗೆ ಓಡುತ್ತಿದೆ....ಒಂದು ದೊಡ್ಡ ಪೊಟ್ಟಣ ಕೈಗೆ ಸಿಕ್ಕಿತು...ನಿದ್ದೆಯಲ್ಲಿ ಕಾಣುತ್ತಿದ್ದ ಬಣ್ಣದ ಪೊಟ್ಟಣ ಇದೇ ಇರಬೇಕು..!
ಪೊಟ್ಟಣ ಹಿಡಿದು ಮೆಟ್ಟಿಲಿಳಿಯುತ್ತಿದ್ದೇನೆ... ನಾನು ಫಸ್ಟು ರ‍್ಯಾಂಕು..!.ವೇದಿಕೆಯಲ್ಲಿ ಯಾರೂ ಕಾಣುತ್ತಿಲ್ಲ. ಎದೆವರೆಗೆ ಬಂದ ಪೊಟ್ಟಣವೇ ಕಾಣುತ್ತಿದೆ. ಅಬ್ಬಾ...! ಇನ್ನು ಮಾಮ ಹೊಡೆಯಲಾರರು....ಇಪ್ಪತ್ತು ಮನೆ ಸರಿಯಾಗಿ ಹೇಳುತ್ತೇನೆ.... ಅಕ್ಷರವೋ? ...ಕೋಳಿ ಕಾಲು... ಸರಿಯಾಗಿ ಬರೆಯುತ್ತೇನೆ.... ಅಕ್ಷರ ಚೆನ್ನಾಗಿ ಬರೆದರೆ ಇನ್ನೊಂದು ಪ್ರಶಸ್ತಿ ಕೊಡಬಹುದೋ?

ಪೊಟ್ಟಣವನ್ನು ಬಿಡಲೇ ಬಾರದು...ಮನೆಗೆ ಹೋಗಿ ಅಜ್ಜಿಗೆ ಕೊಡುತ್ತೇನೆ....ತೋಟದ ಕೆಲಸ ಮುಗಿಸಿ ಬಂದಿರಬಹುದು... ಅಯ್ಯೋ ಕೈ ಸೋಲುತ್ತಿದೆ....ಒಳಗೇ ಏನಿದೆಯೋ? ಗಟ್ಟಿಯಿದೆ....ಅಜ್ಜಿ ನಾನು ಫಸ್ಟು ರ‍್ಯಾಂಕ್....!
ಚಿಕ್ಕಮ್ಮ- ಅಜ್ಜಿ ಎಲ್ಲಿ? ಅಹಾ...! ಅಲ್ಲಿದ್ದಾರೋ.. ಅಡುಗೆ ಮನೆಗೆ ಓಡುತ್ತೇನೆ...ಅಜ್ಜಿ ಪೊಟ್ಟಣ ತೆರೆಯುತ್ತಿದ್ದಾಳೆ...ನನ್ನ ಕೈಗಳ ಬೆವರು ಪೊಟ್ಟಣದ ಮೇಲಿನ ಕಾಗದವನ್ನು ನೆನೆಸಿ ಬಿಟ್ಟಿದೆ.... ಒಳಗೇ ಏನಿದೆ ಅಜ್ಜಿ? ಎರಡನೇ ತರಗತಿಗೆ ಓದಲು ಬೇಕಾದ ಎಲ್ಲಾ ಪುಸ್ತಕಗಳು.. ಪೆನ್ನು, ಪೆನ್ಸಿಲು.. ರಬ್ಬರು... ಒಂದು ಕಂಪಾಸು...! ಅಜ್ಜಿಗೆ ಪುಸ್ತಕ ತೆಗೆಯುವ ಹಣದ ಖರ್ಚು ಉಳಿಯಿತು.... ಹಾಗೇ ತೆಗೆದು ಕಬ್ಬಿಣದ ಪೆಟ್ಟಿಗೆಗೆ ಇಡುತ್ತಿದ್ದಾಳೆ...ಹಿಂದೆ ಹಿಂದೆಯೇ ಸೆರಗಿಡಿದು ಓಡುತ್ತೇನೆ...
ಅಜ್ಜಿ ಮಾಮ ಬರುತ್ತಾರಾ?
ಹೌದು ಬರುತ್ತಾರೆ. ಅವರೀಗ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪೊಲೀಸು. ಕರಾಟೆ ಕಲಿತಿದ್ದಾರಂತೆ... ಕರಾಟೆ ಆಡುವಾಗ ತೊಡುವ ಬಿಳಿ ಬಟ್ಟೆಯಲ್ಲಿ ಒಂದು ಕಪ್ಪು ಪಟ್ಟಿ ಕಟ್ಟಿಕೊಳ್ಳುತ್ತಾರೆ.. ಕಳೆದ ವಾರ ಅಜ್ಜಿ ಬಟ್ಟೆ ಒಗೆಯುವಾಗ ನೋಡಿದ್ದೆ. ರೌಡಿಗಳನ್ನು ಒಬ್ಬರೇ ಹೊಡೆಯಬಹುದು.. ಗಿರಿಕನ್ಯೆ ಸಿನೇಮಾದಲ್ಲಿ ರಾಜ್ ಕುಮಾರ್ ಹೊಡೆದಂತೆ.. ಶಾಲೆಯಲ್ಲಿ ನಮ್ಮ ತರಗತಿಯ ಮಮ್ಮದು ದೊಡ್ಡವನು. ಎಲ್ಲರಿಗೂ ಹೊಡೆಯುತ್ತಾನೆ. ಅವನಿಗೆ ಮಾಮ ಕರಾಟೆ ಹೊಡೆಯಬೇಕು... ಹೆಡ್ ಮಾಸ್ಟರು ಯಾವಾಗಲೂ ಹೊಡೆಯುತ್ತಾರೆ... ಅವರಿಗೂ ಹೊಡೆಯಬೇಕು.. ನಾನು ದೊಡ್ಡವನಾಗಬೇಕು... ಕರಾಟೆ ಕಲಿಯಬೇಕು.....ಅಕ್ಷರ ಕೋಳಿ ಕಾಲು... ಮಾಮ ಹೊಡೆದರೋ?

ಮೂಗು ಹಿಂಡಿ ಗೊಣ್ಣೆಯನ್ನು ಹೊರತೆಗೆಯುತ್ತಿದ್ದಾಳೆ ಅಜ್ಜಿ. ಮುಖದಲ್ಲಿದ್ದ ಬೆವರು ಒರೆಸಿ ಕೇಳುತ್ತಾಳೆ.... ಕೈಕಾಲು ತೊಳೆದಿದ್ದೀಯಾ ಮಗು ? ದೇವರ ಮುಂದೆ ಕೈ ಮುಗಿದು ಹೇಳಿದಳು...
"ನಿನ್ನನ್ನು ಮಾಮ ನಾಪೋಕ್ಲು ಶಾಲೆ ಹಾಸ್ಟೆಲ್ ಗೆ ಸೇರಿಸುತ್ತಾನಂತೆ"
ಅಯ್ಯೋ...ಮೂಗಲ್ಲಿ ಸುರಿಯುವ ಗೊಣ್ಣೆ ತೆಗೆಯುವವರು ಯಾರು? ಮುಖದ ಬೆವರು ಒರೆಸುವವರು.... ಹೊರಗೆ ಬೊಗ್ಗಿ  ನಾಯಿ ಬೊಗಳುತ್ತಿದೆ....ಮರಿಗಳು ದೊಡ್ಡದಾಗಿವೆ...ಮೊಟ್ಟೆಯೊಡೆದ ಮರಿಗಳು ಕೋಳಿಗಳಾಗಿವೆ. ಒಂದು ವಾರದಲ್ಲಿ ಮೊಟ್ಟೆಯಿಡಬಹುದು...!
ಚಂದ್ರಕ್ಕ ನಾನು ದೂರದ ಊರಿಗೆ ಹೋಗುತ್ತೇನೆ...ಚಂದ್ರ,ರವಿ, ಮುರಳಿ,ಗಿರಿಜಾ,ರಾಧೆ....ಅದೋ ಸಂಜೆಯಾಗುತ್ತಿದೆ. ಮುಳುಗುತ್ತಿದ್ದ ಸೂರ್ಯ ಮೋಡಗಳಿಗೆ ಬಣ್ಣ ಬಳಿಯುತ್ತಿದ್ದಾನೆ.. ಮರದ ಪೊಟರೆಗಳಲ್ಲಿ ಮರಿಗಳು ಅಳುತ್ತಿವೆ. ಹಕ್ಕಿಗಳು  ಒಂದೊಂದಾಗಿ ಗೂಡು ಸೇರುತ್ತಿವೆ. ಮರಿಗಳು ಅಳು ನಿಲ್ಲಿಸುತ್ತಿವೆ...ಛೆ...! ಹಗಲಲ್ಲಿ ಬಿಸಿಯಿದ್ದ ಗಾಳಿ, ತಣ್ಣಗೆ ಬೀಸಿ. ಮರಗಳೆಡೆಗೆ ನುಸುಳಿ ಸೀಟಿ ಊದುತ್ತಿವೆ....! ಶಾಲೆ ಚೀಲ ತೆರೆದು  ಮಗ್ಗಿ ಪುಸ್ತಕ ಮಗುಚುತ್ತೇನೆ. ಕಣ್ಣು ಮುಚ್ಚಿಯೇ ಇದ್ದ ನವಿಲುಗರಿ ಕಣ್ಣು ಮೆಲ್ಲೆಗೆ ತೆರೆಯುತ್ತಿದೆ. ಗಾಳಿಗೆ ಒಂದು ಎಳೆ ಗರಿ ಸಣ್ಣಗೆ ಅದುರಿತು...ಮತ್ತೆ ಪುಸ್ತಕ ಮುಚ್ಚುತ್ತೇನೆ.. ನವಿಲುಗರಿ ಮತ್ತೆ ಕಣ್ಣು ಮುಚ್ಚಿರಬಹುದು..!

ದಡಕ್ಕನೇ ಎಚ್ಚರವಾಗುತ್ತೇನೆ...ಯಾರೂ ಕಾಣುತ್ತಿಲ್ಲ.. ಕಣ್ಣು ಬಿಡಲಾಗುತ್ತಿಲ್ಲ... ಅಯ್ಯೋ ನೋವು..! ಮೈಯೆಲ್ಲ ಬಿಸಿ.
ಯಾರೋ ಕೋಣೆಗೆ ನಡೆದು ಬರುತ್ತಿದ್ದಾರೆ... ಯಾರದು? ಅದೋ ಹತ್ತಿರ ಬಂದರು... ಪಕ್ಕದಲ್ಲಿ ನಿಂತರು...ಹಣೆಗೆ ಕೈಯಿಟ್ಟರು...
" ತುಂಬಾ ಜ್ವರವಿದೆ ಹುಡುಗನಿಗೆ... ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಎರಡು ದಿನ ಮಾತ್ರೆ ಕೊಡಿ"

ಈ ಎಲ್ಲವೂ ಎಲ್ಲಿಗೆ ಹೋಗುತ್ತಿದೆ...? ಅದೋ ಬಸ್ಸು, ಕಾರು, ಮರಗಳು ನಿಂತಲ್ಲೇ ಓಡುತ್ತಿವೆ... ನಡೆವ ಜನರು ಹಿಂದೆ ಹೋಗುತ್ತಿದ್ದಾರೆ....ಚಂದ್ರಿ,ರವಿ,ಗಿರಿಜಾ, ನನ್ನ ಶಾಲೆ, ಅದೋ ಕುಳ್ಳಿ ಗಂಗಮ್ಮ ಟೀಚರು..! ತರಗತಿಯ ಮಕ್ಕಳೆಲ್ಲರೂ ಮಗ್ಗಿ ಮರೆಯುತ್ತಿದ್ದಾರೆ.!
"ಇವರಿಗೆ ಮಗ್ಗಿ ಹೇಳಿಕೊಡು ಮಗು"

ಅಬ್ಬಾ...! ಏನೊಂದು ಬೆವರು..ಚೆನ್ನಾಗಿ ನೀರು ಕುಡಿಯಬೇಕು... ಜ್ವರ ತಲೆಗೆ ಬಂದಿದೆ....ನೆನೆಸಿದ ಬಟ್ಟೆಯೊಂದು ಹಣೆಗೆ ಮಲಗಿ ಒಣಗುತ್ತಿದೆ... ಅಹಾ.... ನಿದ್ದೆ !
ಇಲ್ಲೇ ಯಾರೋ ಪಕ್ಕದಲ್ಲೇ ಕುಳಿತಿದ್ದಾರೆ...ಕೈ ಕಾಲು, ಎದೆ, ಹೊಟ್ಟೆಗೆ ಬೆರಳುಗಳು ಉಜ್ಜುತ್ತಿದೆ... ಅಮೃಂಜನ ಸುವಾಸನೆ.. ಶೀತವಿದೆಯೋ?
ಅದೋ ಬೆರಳುಗಳು ಹಣೆಗೆ ತಿಕ್ಕಿ- ಕೂದಲು ಸವರುತ್ತಿದೆ. ಇದೇನಿದು ಬಿಸಿ ಬಿಸಿ?!. ಹನಿ ನೀರು ಕೆನ್ನೆಗೆ ಜಾರುತ್ತಿದೆ. 
ಯಾರಿದು? ಅಮ್ಮನೋ, ಅಜ್ಜಿಯೋ ? ಕಣ್ಣು ಬಿಡಲಾಗುತ್ತಿಲ್ಲ. ! ಒಮ್ಮೆ ತೆರೆಯಬಾರದೆ? ಅಷ್ಟೊಂದು ಜ್ವರವೇ?
ಅಬ್ಬಾ..! ಗಟ್ಟಿ ಎದೆ.... ಅಮ್ಮ ತಬ್ಬಿದಷ್ಟೇ ವಾತ್ಸಲ್ಯ ಸುಖ... ಗಟ್ಟಿಯಾಗಿ ತಬ್ಬಿದ್ದಾರೆ.. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ...ಹಣೆಗೆ ಮುತ್ತಿಕ್ಕಿದೆ ಅವರ ಗಡಸು ಮೀಸೆ ಮುಚ್ಚಿದ ತುಟಿ..!.
ಸಣ್ಣಗೆ ಕಣ್ಣು ಬಿಡುತ್ತೇನೆ.... ಮಾಮಾ.....!
ಮತ್ತಷ್ಟೂ ರೆಪ್ಪೆ ಅಗಲಿಸಿ ಕಣ್ಣು ಬಿಡುತ್ತೇನೆ....ತುಂಬಿಕೊಂಡ ಕಣ್ಣು ಮಬ್ಬು ಮಬ್ಬು.. ಒರೆಸುತ್ತಿದ್ದಾರೋ?.. ತನ್ನ ಕಣ್ಣನ್ನು ತಾನೇ ಒರೆಸಿಕೊಳ್ಳುತ್ತಿದ್ದಾರೆ..!
ಮತ್ತೆ ನಾಲ್ಕು ಬೆರಳುಗಳು ಹಣೆಗೆ ಬಿಸಿ ಮುಟ್ಟಿಸುತ್ತಿತ್ತು. .ಮತ್ತೆ ಕಣ್ಣು ರೆಪ್ಪೆ ಅಗಲಿಸಿ ಎಚ್ಚರವಾಗುತ್ತೇನೆ....
"ಜ್ವರ ವಾಸಿ ಆಗಿದೆ ಮಾಮಾ"
ಒಳ್ಳೆಯದು.. ನಾಳೆ ಹಾಸ್ಟೆಲ್ ಗೆ ಹೋಗು.
ಚೀಲ ಹೆಗಲಿಗೇರಿಸಿ ಬಾಗಿಲಿಗೆ ಮತ್ತೆ ಮತ್ತೆ ನೋಡುತ್ತಲೇ ಇದ್ದೆ... ಮಗ್ಗಿ ಹೇಳುವಾಗ ತಡವರಿಸುತ್ತಿದೆ ಬಿಕ್ಕಳಿಕೆ ನಾಲಗೆ... ಹೊಡೆಯಲಾರದ ಕರಾಟೆ ಕೈಗಳು ಮತ್ತೆ ತಬ್ಬಿಕೊಳ್ಳಲು ಹವಣಿಸಿದವು.. ಗಾಳಿ ರಭಸವಾಗಿ ತಲೆ ಗೂದಲು ಮೆಲ್ಲೆನೆ ಸವರ ತೊಡಗಿತು..
"ಮಾಮ ನಾನು ಫಸ್ಟು ರ‍್ಯಾಂಕ್"
-ರವಿ ಮೂರ್ನಾಡು