ಮಂಗಳವಾರ, ಫೆಬ್ರವರಿ 7, 2012

ಗುಲಾಬಿ ಯಾತ್ರೆಈ ಗುಲಾಬಿ ಇಲ್ಲೇಕೆ ಬಿದ್ದಿದೆ ?!
ಮುಡಿ ಸ್ಪರ್ಶದ ಸುವಾಸನೆಯಿದೆ
ಮೈಬಿಸಿ ಬಿಸಿಲಿಗೆ ಬಾಡಿದೆ !

ಅಂಗಳದಲಿ ನೋಡಿದ್ದೆ
ಮೊನ್ನೆ ನಾಲ್ಕು ದಳಗಳರಳಿ
ಎರಡು ಕಣ್ಣಗಲಿಸಿ ನಕ್ಕಿತ್ತು !
ದುಂಭಿ ಬಂತೆಂದು
ಉಸಿರ ಗಾಳಿಗೆ ಬಾಗಿ ನಾಚಿತ್ತು !

ಎಷ್ಟೊಂದು ಸಂಭ್ರಮಿಸಿತ್ತೋ
ಆ ಮುಂಗುರಳಲ್ಲಿ ಈ ಹೆಣ್ಣು !
ತಾಮುಂದು-ನಾಮುಂದು
ಸಾಲುಗಟ್ಟಿ ಸಾವಿರ ಕಣ್ಣು !
ಈಗ ರಸವಿಲ್ಲದ ಮಾವಿನ ಹಣ್ಣು !

ಇದೇನು ಮೆದುವಿದೆ  !
ಕಾಂತಿ ಸರಿದ ನುಣುಪು ದೇಹದ ದಂಟು
ಮೇಲೆ ಹಸಿರು ಮೂರು ದಳ-
ಚರ್ಮಕ್ಕೆ ಗೀಚಿ ಉಗುರು
ಉಜ್ಜಿ ಕೂದಲು,ಸಾವಿರ ಸುಕ್ಕು
ಬಿಳುಚಿ ಸುಖದ ಶಾಖಕ್ಕೆ ಸುಲಿದು !
ಛೇ..! ಕವಚವೊಂದು ಕಳಚಿ 
ಎಸಳು ನಡುಪಾದ ಬೆತ್ತಲೆ
ಚಿಟ್ಟೆಯೊಂದು ಅಲ್ಲೇ ನೋಡುತ್ತಿದೆ  !

ಅದೆಷ್ಟು ನರಳಿತ್ತೋ..!
ವಿದಾಯ ಬಯಸದ ರಾತ್ರಿಗೆ
ನಿಶ್ಚಲ ತೆರೆದ ಕಣ್ಣ ಕೆಳಗೆ
ಹೆಪ್ಪುಗಟ್ಟಿದೆ ಕಂಬನಿ ಈ ಮುಂಜಾವಿಗೆ !
ಶವಸ್ನಾನ ಮುಗಿಸಿದ ಮಂಜಹನಿ
ತೊಟ್ಟಿಕ್ಕಿ ಎಸಳ ಮೇಲೆ ಕರಗುತ್ತಿದೆ
ಮತ್ತೊಮ್ಮೆ  ಬಿಸಿಲಿಗೆ !

ಸಾಲು ಇರುವೆಗಳು ಗೀಚಿ ದಾರಿ
ಶವದ ಮನೆ ಕಸದ ತೊಟ್ಟಿ !
ಎಸಳುಗಳು ಸಾವಿರ ಹೆಗಲಿಗೆ
ದಂಟೊಂದು ನೂರು ಕೈಗಳಿಗೆ
ಕೆಲವಕ್ಕೆ ರುಚಿಯಿಲ್ಲದ ಮಧುಪಾತ್ರೆ !
ಗೌಜು ಗದ್ದಲವಿಲ್ಲದ ಗುಲಾಬಿ ಶವಯಾತ್ರೆ !
ದುಃಖ್ಖಿ ದುಂಭಿಯೊಂದು ಹಾರಾಡುತ್ತಿದೆ
ಗುಂಯ್‍ಗಿಡುವ ಶೋಕದ ಹಾಡು
ತಾಳ ರೆಕ್ಕೆಯಲ್ಲಿದೆ  !

ಇಂದು ಮುಂಜಾನೆ ನೋಡಿದ್ದೆ
ಇನ್ನೊಂದು ಗುಲಾಬಿ ಮೊಗ್ಗರಳಿದೆ !
-ರವಿ ಮೂರ್ನಾಡು