ಸೋಮವಾರ, ಡಿಸೆಂಬರ್ 19, 2011

ಹಗಲು-ರಾತ್ರಿಯ ಪ್ರಶ್ನೆಅವಳು ಗೆಳತಿಗೆ ಹೇಳುತ್ತಿದ್ದಳು
ದಪ್ಪ ಮೀಸೆ- ಉಬ್ಬಿದ ಎದೆಯ
ಕಪ್ಪು ಕಂಗಳ ಹುಡುಗ
ಕನಸ ಚಿಟ್ಟೆಯ ಹಿಡಿದು ಕರೆಯುತ್ತಿದ್ದಾನೆ
ಕತ್ತಲು ತಬ್ಬುವ ಮೊದಲು ಹೋಗಿ ಬಿಡಲೇ?

ಮತ್ತೇರಿಸುವ ಮೈಬೆವರು
ಉಬ್ಬಿ ಅರಳಿದ ಮೂಗು
ಪ್ರತೀ ನೋಟದ ಮಧುರ ಸಾಲು
ಗೆಳತೀ....
ಹೊತ್ತು ಸಾಯುವ ಮೊದಲು
ಅವನೊಳಗೆ ಬಂಧಿಯಾಗಲೇ?

ವಯಸ್ಸಿನ ಕೆರೆತ- ಮೈಯೆಲ್ಲ ಹುತ್ತ
ಸಾಕೆನಿಸದ ಸುರುಳಿ ಬಳ್ಳಿಯ ಕನಸು
ತೃಪಿಯೇ ಇಲ್ಲದ ರಸ್ತೆಗಳಿಗೆ
ರಾತ್ರಿಯಲ್ಲೂ ಪಹರೆ ಕೆಲಸ
ಗೆಳತಿ ಕೇಳುತ್ತಾಳೆ...
ಗೊತ್ತಿದೆಯೇ ಅವನಿಗೆ
ಹಗಲು- ರಾತ್ರಿಯ ವ್ಯತ್ಯಾಸ?

ಇಲ್ಲ, ಇಲ್ಲವೇ ಇಲ್ಲ
ಮನುಷ್ಯ ಸುಖದ ಗುಲಾಮ
ದುಃಖ್ಖವೇ ಅವನ ಚಾಕರಿ
ಜವ್ವನೆಯ ಯೌವ್ವನದ ಬದುಕು
ಬಾಚಿ ತಬ್ಬುವ ಕತ್ತಲು
ಬೊಗೆಸೆಯಷ್ಟು ಬೆಳಕು
ಹಿಂಡಿ ತೆಗೆಯುವಷ್ಟು ನಗು

ಅವಳಿಗೆ ಅವನದೇ ಪ್ರತಿಬಿಂಬ
ಭಾವನೆಗಳು ಒಡೆದ ಗಾಜಿನ ಚೂರು
ಪ್ರೇಮವೇ ಇಲ್ಲದ ಮಾತು
ಕಾಮದ ಇನ್ನೊಂದು ಮನಸ್ಸು
ಜ್ವಾಲಾಮುಖಿ-ದಾಹ-ಹಸಿವು
ಅಲೆಗಳ ಬಡಿತ-ಕರಗುವುದಿಲ್ಲ ಬಂಡೆ
ಕಣ್ಣೀರಿಗೆ ಕಡಲೇ ದಾಖಲೆ

ಹಗಲು-ರಾತ್ರಿಯ ಪ್ರಶ್ನೆಗೆ
ಅವರವರ ಬದುಕು ಉತ್ತರ
ಅವಳಿಗೆ ಇವಳು ಪ್ರಶ್ನೆ
ಬಿರುಗಾಳಿಯೊಂದು ಬೀಸಿದಾಗಲೆಲ್ಲಾ
ಇಬ್ಬರೊಳಗೆ ಚಿಗುರಿದ ಮೋಹದ ಬಳ್ಳಿ
ಗಟ್ಟಿ ಮರವೊಂದನ್ನು ತಬ್ಬಿಕೊಳ್ಳುತ್ತದೆ
--------------------------------
-ರವಿ ಮೂರ್ನಾಡು
 ರೇಖಾ ಚಿತ್ರ: ದಿನೇಶ್ ಕುಕ್ಕುಜಡ್ಕ,ಸುಳ್ಯ.

ಬುಧವಾರ, ಡಿಸೆಂಬರ್ 14, 2011

ಮೌನ ಬಿಕ್ಕಳಿಕೆಎಲ್ಲಿ ಮರೆಯಾಗಿ ಬಿಕ್ಕಳಿಸುತ್ತಿದೆ
ಈ ನನ್ನ ಮನ ?
ಸುಕ್ಕುಗಟ್ಟಿದ ಆ ನೆಲದಲಿ
ನನ್ನೊಳಗೆ ಚಿಗುರಿದ
ಓಭಿರಾಯನ ಬಳ್ಳಿ
ಸತ್ತ ಮರಗಳ ತಬ್ಬಿ
ಸತ್ವ ಕಳೆದುಕೊಂಡಿದೆ

ಇಗೋ ಇಲ್ಲಿ ಒಡೆದು ನಾರುತ್ತಿದೆ
ಬಂಜರು ಬಿರುಕಿಟ್ಟ ನಾಲೆ
ಯೌವ್ವನಕ್ಕೆ ಕಣ್ಣುಗಳಿಲ್ಲ !
ಇಗೋ ಇಲ್ಲಿ ನೆತ್ತರು ಹೆಪ್ಪುಗಟ್ಟುತ್ತಿದೆ
ಸೋತು ಎದೆಭಾರದ ಜ್ವಾಲೆ
ಮೋಹಕ್ಕೆ ಬಂಧನವಿಲ್ಲ !
ಬೀಸಿದ ಬಿರುಗಾಳಿಗೆ ದಿಕ್ಕಿಲ್ಲ
ಸೂರ್ಯನ ರಶ್ಮಿಗೆ ನೆಲಯಿಲ್ಲ
ಎಲ್ಲವೂ ಮುಷ್ಠಿ ಬಿಗಿ ಹಿಡಿದು
ಆಕಾಶ-ಜಲ-ಗಾಳಿಯಲಿ
ಅಂತ್ಯವಿಲ್ಲದ ಚಿತ್ತಾರ ಬಿಡಿಸುತ್ತಿವೆ.

ಹಂಗು ತೊರೆದ ಹೃದಯ
ಜೀವ ಕೇಳಿದ ಬೀಜ
ಮಣ್ಣ ವಾಸನೆಗೆ ಮುತ್ತಿಕ್ಕಿ
ತುಟಿಯ ಸುಟ್ಟುಕೊಂಡಿದೆ.

ಲಗ್ಗೆಯಿಡು ಭಾವವೇ....
ಕನಸುಗಳ ಹರಾಜಿಗಿಡುತ್ತೇನೆ
ನಿನ್ನೊಳಗೆ ಹೂವಾಗುತ್ತೇನೆ
ಗುಟುಕು ಪ್ರೀತಿಯ ಪಾತ್ರೆಗೆ
ಹಣೆ ಚಚ್ಚಿ ಬಿಕ್ಕಳಿಸುತ್ತೇನೆ
ಹಾದಿ ಬದಿಯ ಮೈಲುಗಲ್ಲುಗಳಿಗೆ
ಪ್ರೇಮದ ಚಿತ್ತಾರವಾಗುತ್ತೇನೆ
-ರವಿ ಮೂರ್ನಾಡು.


ಭಾನುವಾರ, ಡಿಸೆಂಬರ್ 11, 2011

ಆ ಪುಸ್ತಕದ ರಾಶಿಯಲ್ಲಿ ಭಿಕರಿಯಾದ ಕನಸುಗಳು


ಬನ್ನಿ ಸಾರ್  ಬನ್ನಿ...! ಉತ್ತಮ ಪುಸ್ತಕಗಳು ನನ್ನಲ್ಲಿದೆ. 20 ರೂಪಾಯಿಗೆ 30 ಪುಸ್ತಕಗಳು ಕೊಂಡುಕೊಳ್ಳಬಹುದು. ಹಾಗಂತ,ಆ ಹುಡುಗ ಸಾಹಿತ್ಯ ಪುಸ್ತಕ ಕೊಂಡುಕೊಳ್ಳಿ ಅಂತ ಅಂಗಲಾಚಿದ. ಪುಸ್ತಕದ ರಾಶಿಗಳು ಹತ್ತು ಹಲವು ಆ ರಸ್ತೆಯಲ್ಲಿ ಕರೆಯುತ್ತಿವೆ. ಪುಸ್ತಕ ಮಳಿಗೆ -ಗ್ರಂಥಾಲಯಗಳಲ್ಲಿ ಅಚ್ಚುಕಟ್ಟಾದ ಪೆಟ್ಟಿಗೆಯೊಳಗೆ ಕುಳಿತು ಓದುಗರೊಂದಿಗೆ ಮಾತನಾಡಬೇಕಾದ ಕವಿತೆ-ಕಥೆಗಳು ಮೌನವಾಗಿ ಒಂದರ ಮೇಲೊಂದು ತಬ್ಬಿಕೊಂಡಿವೆ. ಬಿರುಬಿಸಿಲಿಗೆ ಮಲಗಿದ್ದ ಭಾವ ಅನಾಥ ಪ್ರಜ್ಞೆಯನ್ನು ಮೂಡಿಸಿತು ಅನ್ನೋದು ಇನ್ನೊಂದು ಮಾತು. ಆ ರಸ್ತೆ ಬದಿಯ ಕೊನೆಯ ಎಂಟನೇ ಪುಸ್ತಕದ ರಾಶಿಗೆ ನನ್ನ ಕಣ್ಣು ಎಟುಕಿತು. ತುಂಬಾ ಎತ್ತರದ ರಾಶಿಯಾಗಿತ್ತು ಅದು. ಪುಸ್ತಕಕ್ಕೆ ತಲೆಕೊಟ್ಟು ಕಿರುನಿದ್ದೆಗೆ ಜಾರಿದ್ದ ಆ ಮಧ್ಯ ವಯಸ್ಸಿನ ಮಾರಾಟದ ವ್ಯಕ್ತಿಯನ್ನು ಸಣ್ಣಗೆ ಎಬ್ಬಿಸಿ, ಪುಸ್ತಕದ ರಾಶಿಗೆ ಕೈ ಹಾಕಿದ್ದೆ.
ನನ್ನ ಕಣ್ಣು ಪಕ್ಕದ್ದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಂದಮಾಮ ಮತ್ತು  ಬಾಲಮಂಗಳ ಪುಸ್ತಕಗಳ ಮೇಲೆ ಹರಿಯಿತು. ಒಂದನೇ ತರಗತಿಯಿಂದಲೇ ವಿಜ್ಞಾನ-ಲೆಕ್ಕ-ಸಮಾಜಶಾಸ್ತ್ರ ಪುಸ್ತಕಗಳೊಂದಿಗೆ ಶಾಲಾ ಪುಸ್ತಕ ಚೀಲದಲ್ಲಿ  ಜೊತೆಯಲ್ಲೇ ಇರುತ್ತಿದ್ದ ಮುಗ್ಧ ಕನಸುಗಳು ಅಲ್ಲೇ ಮಲಗಿದ್ದವು. ಕಿರೀಟ ತೊಟ್ಟ ರಾಜರು, ಅವರ ರಾಣಿಯರು, ರಾಜಕುಮಾರರು-ರಾಜಕುಮಾರಿಯರು,ಮಾತು ಮಾತಿಗೆ ಎದ್ದು ನಿಲ್ಲುತ್ತಿದ್ದ ವಿಕ್ರಮಾಧಿತ್ಯ-ಬೇತಾಳರು ಅದರೊಳಗಿದ್ದರು. ನನ್ನ ನಿದ್ದೆಯ ಕನಸಿನಲ್ಲಿ ಬಂದು ಕೈ ಹಿಡಿದು ಗಾಳಿಯಲ್ಲಿ ತೇಲಿಸುತ್ತಿದ್ದ  ಬಾಲ ಮಂಗಳದ "ಡಿಂಗ" ಅಲ್ಲಿದ್ದರು. ತರಗತಿಯ ಪುಸ್ತಕಗಳನ್ನು ಮರೆತು ಶಾಲೆಯಲ್ಲಿ ಪೆಟ್ಟು ತಿಂದ ನೆನಪುಂಟು. ಕನಸುಗಳ ಒಡನಾಡಿಯಾಗಿದ್ದ ಚಂದಮಾಮ- ಬಾಲಮಂಗಳ ಮರೆತ ದಿನಗಳ ನೆನಪಿಲ್ಲ. ಮೇಷ್ಟ್ರು ಪಾಠ ಮಾಡುತ್ತಿದ್ದಾಗಲೂ ಕದ್ದುಮುಚ್ಚಿ ಓದುತ್ತಿದ್ದ ಆನಂದ ಅಲ್ಲಿದ್ದವು. ಈ ಬಾಲ ಸಾಹಿತ್ಯ ಪುಸ್ತಕಗಳು ಈಗಲೂ ನನ್ನೊಂದಿಗೆ ಇವೆ. ಹಾಗಂತ ಇನ್ನಷ್ಟು ಒಟ್ಟು ಸೇರಿಸಲು ಅಲ್ಲಿದ್ದ  50  ಕ್ಕೂ ಮಿಕ್ಕಿದ ಚಂದಮಾಮ- ಬಾಲಮಂಗಳ ಪುಸ್ತಕಗಳನ್ನು ಬಗಲಿಗೆ ಸೇರಿಸಿದ್ದೆ. ಮತ್ತಷ್ಟು ಪುಸ್ತಕಗಳ ಹುಡುಕಾಟಕ್ಕೆ ಬೆರಳುಗಳು ಮುಂದೆ ಹರಿಯ ತೊಡಗಿದವು.
ಇದು ನಡೆದದ್ದು 2005 ರ ಅಕ್ಟೋಬರ‍್ ತಿಂಗಳಲ್ಲಿ. ಬೆಂಗಳೂರಿನ ಮೆಜೆಸ್ಟಿಕ್‍ನ ಆ ಗಲ್ಲಿಗಳಿಗೆ  ಹೆಜ್ಜೆಗಳು ಸವೆಯುತ್ತಿದ್ದಾಗ, ಈ ರಸ್ತೆ ಬದಿಯ ಪುಸ್ತಕಗಳು ಕರೆದಿದ್ದವು. 50 ಪುಸ್ತಕವನ್ನು ಒಟ್ಟು ಸೇರಿಸುವ ಇರಾದೆ ನನ್ನದು. ಆ ರಾಶಿಯಿಂದ ಒಂದೊಂದೆ ಆಯ್ಕೆ ಮಾಡಿ ಮಡಿಲಿಗಿಟ್ಟೆ. ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗರು ಎದೆ ಬಿಚ್ಚಿ ನಕ್ಕ  ಗುರುತು ಹಿಡಿದಿದ್ದೆ. ಮಲ್ಲಿಗೆಯ ಕವಿ ನರಸಿಂಹ ಸ್ವಾಮಿಯವರ ಕಪ್ಪು ಕಾಡಿಗೆಯ ಮಾತುಗಳು ಎದೆ ತುಂಬಿದ್ದವು. ಜಿಎಸ್‍ಎಸ್‍ರವರ ಅಹಂನ್ನು ಮೆಟ್ಟಿ ಬಿರುಕಿಟ್ಟ ಗೋಡೆಗೆ ಹಚ್ಚಿದ ದೀಪಗಳಿದ್ದವು. ಎಲ್ಲವೂ ನನ್ನ ಮಡಿಲಿನಲ್ಲಿ ಸೇರಿಸುತ್ತಿದ್ದಾಗಲೇ ವ್ಯಾಪಾರಿ ಮಾತಿಗಿಳಿದ,
"ಸಾರ್ ! ನನ್ನಲ್ಲಿ ಒಟ್ಟು 800  ಪುಸ್ತಕವಿದೆ. ಒಂದು 500  ರೂಪಾಯಿಗೆ ಎಲ್ಲವನ್ನು ಕೊಟ್ಟು ಬಿಡುತ್ತೇನೆ ಅಂದ.
"ಇಲ್ಲಪ್ಪ, ಇದರಲ್ಲಿ ಬೇರೆ ಬೇರೆ ಪುಸ್ತಕಗಳಿವೆ.ನನಗೆ ಸಾಹಿತ್ಯ ಮಾತ್ರ ಸಾಕು. ಹುಡುಕುತ್ತಿದ್ದೇನೆ. ಮುಗಿದ ಮೇಲೆ ಹೇಳುತ್ತೇನೆ" ಅಂದೆ. ಇನ್ನಷ್ಟು ಪುಸ್ತಕಗಳನ್ನು ತನ್ನ ಇನ್ನೊಂದು ಚೀಲದಿಂದ ತೆಗೆದು ಸುರಿದಿಟ್ಟ.
ಒಂದೊಂದೇ ಪುಸ್ತಕಗಳನ್ನು ಆಯ್ದು ಪರಿಶೀಲಿಸಿದಾಗ ನನ್ನ ಪರಿಚಯಸ್ಥ ಮುಖಗಳ ಹೆಸರುಗಳೇಷ್ಟೋ ನನ್ನ ಬೆರಳಿಗೆ ಸ್ಪರ್ಶಿಸಿದವು. ನಾಡಿನಾದ್ಯಂತ ಕವಿಗೋಷ್ಠಿ, ಸಾಹಿತ್ಯಗೋಷ್ಠಿಯಲ್ಲಿ ಪರಿಚಯವಾದ ಅದೆಷ್ಟೋ ಕವಿ-ಕವಯತ್ರಿಯರ ಪುಸ್ತಕಗಳನ್ನು ಅಲ್ಲಿ ನೋಡುವಾಗ, ಬೀದಿಯಲ್ಲಿ ಅವರನ್ನು ಮಾತಾಡಿಸಿದಂತೆ ಅನ್ನಿಸಿತು. ಕೆಲವರು ಬದುಕನ್ನೇ ಪದವಾಗಿಸಿದವರು, ಕೆಲವರು ಕನಸುಗಳನ್ನೇ ಮಾಲೆ ಕಟ್ಟಿದವರು ಅಲ್ಲಿ ಆ ರಸ್ತೆ ಬದಿಯ ರಾಶಿಯಲ್ಲಿ ಬಿದ್ದಿದ್ದರು. ಒಂದಷ್ಟು ಅವರುಗಳ ಪುಸ್ತಕಗಳನ್ನು ಆಯ್ದುಕೊಂಡೆ. ವ್ಯಾಪಾರಿ ಸುರಿದ ಇನ್ನೊಂದು ಚೀಲದ ಸುಮಾರು 200 ರಷ್ಟಿದ್ದ ಪುಸ್ತಕದ ರಾಶಿಗೆ ಕೈ ಹಾಕಿದ್ದೆ. ಒಂದು 50 ಪುಸ್ತಕಗಳನ್ನು ಮಗುಚಿದ ನಂತರ ಸಿಕ್ಕಿದ್ದೆ ಬೇರೆ ಪುಸ್ತಕ. ಬದುಕಿನಲ್ಲಿ ಮರೆಯಲಾಗದ ಪುಸ್ತಕ ಅದು..!
ಅಲ್ಲಿ ನಾನೇ ಮಲಗಿದ್ದೆ. ಸವಿದ ಹಲವು ಕ್ಷಣಗಳನ್ನು ಪದಗಳ ಕುಂಚದಲ್ಲಿ ಅದ್ದಿದ್ದ ನನ್ನ ಕನಸುಗಳು. ನಾನೇ ಬೆಳೆಸಿದ ಮಗು. ಅಲ್ಲಿ ನನಗಾಗಿ ಹಸಿದಂತೆ ಮಲಗಿತ್ತು. ಹೌದು..! ಅದು " ಹಗಲು-ರಾತ್ರಿಯ ರೆಕ್ಕೆ". ನನ್ನದೇ ದಿನಗಳಿಗೆ ಹಗಲಿಗೊಂದು ರೆಕ್ಕೆ, ರಾತ್ರಿಗೊಂದು ರೆಕ್ಕೆ ಬೆಳೆಸಿ ಈ ಕನಸಿನ ಲೋಕದಲ್ಲಿ ಮೂಕವಾಗಿ ಹಾರಿದ ಹಕ್ಕಿ. ನನ್ನ ಕೈಗೆ ಬಂದೊಡನೆ ಪಟಪಟ ರೆಕ್ಕೆ ಬಡಿದಂತೆ ಭಾಸವಾಯಿತು. ಪಕ್ಕನೇ ಎಳೆದು ಅದರ ಮೈ ಸವರ ತೊಡಗಿದೆ. ಅಲ್ಲಲ್ಲಿ ಮಾಸಿತ್ತು. ಏನೋ ಸಿಕ್ಕಿದ ಜೀವ  ಒಂದೇ ಸಾರಿಗೆ ಪುಟಗಳನ್ನು ಮಗುಚಿದೆ. ಅಲ್ಲಿ ಚಿಂದಿ ಆಯುವ ಹುಡುಗ ನಿಂತಿದ್ದ, ಗಡ್ಡ ಬಿಟ್ಟ ಭಿಕ್ಷುಕ ಅಲ್ಲಿದ್ದ, ಯಾರೋ  ಕಸದ ತೊಟ್ಟಿಗೆ ಬಿಸುಟ ಅನಾಥ ಮಗು ಬೆಳೆದು ದೊಡ್ಡವಳಾದ ಕುರುಹು ಇತ್ತು. ಕೃಷ್ಣನ ಹದಿನಾರು ಸಾವಿರ ಹೆಂಡತಿಯರನ್ನು ಜಾತಿ-ಜಾತಿಯ ಹೆಸರಿನಲ್ಲಿ ದೇಶದ ಗಲ್ಲಿ ಗಲ್ಲಿಗಳಲ್ಲಿ ಕುಳ್ಳಿರಿಸಿದ್ದು ಅಲ್ಲಿ ಸತ್ಯ ಅನ್ನುತ್ತಿತ್ತು. ನನ್ನದೇ ಪುಸ್ತಕ. ಬೊಗಸೆಯಲ್ಲಿ ಹಿಡಿದು ಎದೆಗೆ ಅವುಚಿಕೊಂಡೆ. ಎಷ್ಟೋ ವರ್ಷಗಳಿಂದ ತಪ್ಪಿಸಿಕೊಂಡ ಮಗು ಸಿಕ್ಕಿದ ಸಂತಸ. ಅದು ಅಚಾನಕ್ಕಾಗಿ ಯಾವುದೋ ದಿಕ್ಕಿಲ್ಲ ರಸ್ತೆ ಬದಿಯಲ್ಲಿ. ಕಣ್ಣೀರು ಬಳಬಳನೇ ಸುರಿಯ ತೊಡಗಿತು.
ನನ್ನ ಮುಖ ನೋಡಿ ಗಲಿಬಿಲಿಗೊಂಡವನಂತೆ ವ್ಯಾಪಾರಿ ಕೇಳಿದ " ಏಕೆ ಸಾರ್ ಅಳುತ್ತಿದ್ದೀರ?" ಅದು ಯಾರ ಪುಸ್ತಕ?".
ಒಂದು ನಿಮಿಷ ಸುಮ್ಮನಿದ್ದು ಅವನಲ್ಲಿ ಪ್ರಶ್ನಿಸಿದ್ದೆ. ಈ ಪುಸ್ತಕವನ್ನು ಯಾರು ಇಲ್ಲಿ  ನಿಮಗೆ ಕೊಟ್ಟರು?.
"ಇದನ್ನು 4  ತಿಂಗಳ ಹಿಂದೆ ಯಾರೋ ತಂದು ಮಾರಿದರು ಸಾರ್. ಒಟ್ಟು ಹತ್ತು ಪುಸ್ತಕಗಳನ್ನು ಅವರಿಂದ 50 ರೂಪಾಯಿಗೆ ಕೊಂಡುಕೊಂಡೆ" ಅಂದ.
ಆ ಪುಸ್ತಕದಲ್ಲಿ ಅಲ್ಲಲ್ಲಿ ಕೆಲವು ಟಿಪ್ಪಣಿಗಳಿದ್ದವು.ಕೆಲವು ಕಡೆ ಪೂರ್ತಿ ಕವಿತೆಗೇ ಬರೆದಿತ್ತು. ಕೆಲವು ಕಡೆ ಸಾಲುಗಳನ್ನು ಗುರುತಿಸಲಾಗಿತ್ತು.ಏನೇ ಆದರೂ, ಕೆಲವು ಪದಗಳು ಅವರುಗಳ ಎದೆಗೆ ಕುಳಿತಿದೆ ಅಂತ ಸಮಾಧಾನಿಸಿಕೊಂಡೆ.
ಸಧ್ಯ..! ಪುಸ್ತಕ ನನಗೇ ಸಿಕ್ಕಿದ್ದು ಅದೃಷ್ಟ. ಇದು ನಾನು ಬರೆದ ಪುಸ್ತಕ ಅಂತ ವ್ಯಾಪಾರಿಗೆ ತಿಳಿಸಿದೆ. ಅವನು ಅಲ್ಲಿಯವರೆ ಹಲ್ಲು ತೋರಿಸದವನು, ಹಲ್ಕಿರಿದು ನಕ್ಕ.
ಈ ಪುಸ್ತಕಗಳು ಮಾರಾಟವಾಗದಿದ್ದರೆ ಏನು ಮಾಡುತ್ತೀರಿ? ಅಂತ ಮರುಪ್ರಶ್ನೆ ಹಾಕಿದ್ದೆ.
ದಿನಕ್ಕೆ 50 ರೂಪಾಯಿಯ ವ್ಯಾಪಾರ ಆಗೋದೇ ಕಷ್ಟ ಸಾರ್. ಯಾರಾದರೂ ಪುಸ್ತಕಗಳನ್ನು ನಮಗೆ ಮಾರೋದೇ ಹೆಚ್ಚು. ತಿಂಗಳಿಗೊಮ್ಮೆ ದಿನಸಿ ಅಂಗಡಿಗಳಿಗೆ  ಕೇಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತೇವೆ. ಅದರ ಲಾಭದಲ್ಲೇ ನಮ್ಮ ಜೀವನ. ಹೀಗೆ ರಸ್ತೆ ಬದಿಯ ಮಾರಾಟದಲ್ಲಿ ನಮಗೆ ಲಾಭವಿಲ್ಲ. ನಿಮ್ಮಂತವರು ವರ್ಷಕ್ಕೆ ಒಬ್ಬರು ಹೀಗೆ 100-150 ಪುಸ್ತಕಗಳನ್ನು  ಕೊಂಡುಕೊಳ್ಳುತ್ತಾರೆ ಅಂದ.
ಅಬ್ಬಾ..! ದಿನಸಿ ಅಂಗಡಿಗೆ ಕೇಜಿಗೊಂದರಂತೆ ಮಾರಾಟ ಆಗುತ್ತವೆ ಅಂದಾಗ ಏನೋ ದಿಗಿಲು ಪ್ರಾರಂಭವಾಯಿತು. ಆ ವ್ಯಾಪಾರಿಯಿಂದ ಒಟ್ಟು 150 ಪುಸ್ತಕಗಳನ್ನು ಕೊಂಡು ಅಲ್ಲಿಂದ ಕಾಲ್ಕಿತ್ತೆ...
-ರವಿ ಮೂರ್ನಾಡು.
-------------------------------------------------

ಅವಧಿ ಮಾಗ್:
ಹಗಲು-ರಾತ್ರಿಯ ರೆಕ್ಕೆ
-ರವಿ ಮೂರ್ನಾಡು.

ಬುಧವಾರ, ಡಿಸೆಂಬರ್ 7, 2011

ಒಮ್ಮೊಮ್ಮೆ ಸೂರ್ಯನಿನ್ನೆ ಬಿದ್ದ ದಟ್ಟ ದರಿದ್ರ ಮಳೆಗೆ ಬಸವಳಿದು
ಈ ದಿನ ಸೂರ್ಯ ಕಾಲಿಗೆ ಗೆಜ್ಜೆ ಕಟ್ಟುವುದಿಲ್ಲ
ದಣಿದ ಇವನ ಹೃದಯ ಪಿಸುಗುಟ್ಟುವುದಿಲ್ಲ

ಒಮ್ಮೊಮ್ಮೆ ಹೀಗೆ ಸೂರ್ಯ ನಿರಾಢಂಬರ
ರಂಗೇರುವುದಿಲ್ಲ ನೀಲಾಂಬರ
ಸುತ್ತಮುತ್ತ ಕೆಂಪು ಬಳಿಯುವುದಿಲ್ಲ
ಗಾಳಿಯೊಂದಿಗೆ ತಂಪು ಸುರಿಯುವುದಿಲ್ಲ
ಭೂರಮೆಯ ರಮಿಸುವುದಿಲ್ಲ.

ಮೌನದಲಿ ಕಡಲ ಮಂಚಕೆ ಒರಗುತ್ತಾ
ಭೂರಮೆಗೆ ಕಪ್ಪು ಹೊದಿಕೆ ಹೊದೆಸುತ್ತಾನೆ
ಹಕ್ಕಿಗಳ ತಟ್ಟಿ ಮಲಗಿಸುತ್ತಾ
ಗಾಳಿಗೆ ಚಾಮರ ಬೀಸಲು ಆದೇಶಿಸುತ್ತಾನೆ

ಇತ್ತ, ಬೇಗ ಮಲಗಿದ ಸೂರ್ಯನಿಗೆ
ಚಂದ್ರ ಸಹಕರಿಸುತ್ತಾ
ನಕ್ಷತ್ರಗಳ ಮನೆ ಕದ ತಟ್ಟಿದ

ಅರ್ಭಟಿಸುತ್ತಿದೆ ಸೂರ್ಯನ ಗೊರಕೆ ಸದ್ದು
ಬೆಚ್ಚಿದ ಭೂರಮೆ ಕಣ್ಣುಜ್ಜಿ ನೋಡುತ್ತಾಳೆ ಮೇಲೆದ್ದು
ನೀಲ ನಭದಲ್ಲಿ ಚಂದ್ರ ನಗುತ್ತ ಬೆಳದಿಂಗಳ ಚೆಲ್ಲುತ್ತಾ
ಇಣುಕುತ್ತಿದ್ದ ನಕ್ಷತ್ರ ವಿಚಿತ್ರ ಸುತ್ತಮುತ್ತ
ಆಕಳಿಸುತ್ತಾ ರಮೆ ಗಾಳಿಯೊಂದಿಗೆ ನೆಲ ಗುಡಿಸಿದ್ದಾಳೆ
ಬಿಂದಿಗೆ ಸೊಂಟದಲ್ಲಿಟ್ಟು ನೀರಿಗೆ ಹೊರಟಿದ್ದಾಳೆ.

ರಮೆಯ ಕಾಲ್ಗೆಜ್ಜೆಗೆ ಸೂರ್ಯ ಥಟ್ಟನೇ ಎಚ್ಚರವಾದ
ಸುತ್ತಮುತ್ತ ಕೆಂಪು ನದಿಯ ಜುಳುಜುಳು ನಾದ
ಚಡಪಡಿಸುತ್ತ ಮೇಲೆದ್ದು ಮೈಮುರಿದ
ಬೆಚ್ಚಗೆ ಮಲಗಿದ್ದ ಕೋಳಿಗಳ ಕೂಗಿಸುತ್ತಾ
ಗೂಡಿಗೆ ಕೈ ಹಾಕಿ ಹಕ್ಕಿಗಳ ತಟ್ಟಿ ಎಚ್ಚರಿಸುತ್ತಾ
ಕೋಗಿಲೆಗೆ ಸುಪ್ರಭಾತ ಹಾಡಲು ಹೇಳುತ್ತಾ
ರಂಗೇರುತ್ತಾ ಮೇಲೆದ್ದ ರಮೆಯ ಹುಡುಕುತ್ತಾ

ನೀರು ತಂದ ರಮೆಗೆ ಸಿಹಿಮುತ್ತ ನೀಡುತ್ತಾ
ಸಂಜೆ ಮಧುಮಂಚದ ಸಿದ್ಧತೆಗೆ ಸೂಚನೆಯಿತ್ತ
ಸೂರ್ಯನ ಮುತ್ತಿಗೆ ರಮೆಯ ಮೈ ಬೆವರಿ
ಹಣೆಯ ತುಂಬಾ ಬೆವರ ಹನಿ
ಹಸಿರ ನೆಲದ ತುಂಬೆಲ್ಲಾ ಇಬ್ಬನಿ..!
-ರವಿ ಮೂರ್ನಾಡು.