ಮಂಗಳವಾರ, ಏಪ್ರಿಲ್ 26, 2011

ಪ್ರೀತಿಯ ತಬ್ಬಿಬಿಡು...!

ಬಾ ಜೀವವೇ.. ಬಾ
ತುಂಬು ನನ್ನೊಡಲಿಗೆ
ಒಂದು ಹನಿ ಭಾವ...!

ಈ ಕಣ್ಣ ಕಪ್ಪ ಬಿಂದುವಿನಲಿ
ನಿನ್ನ ನೆರಳಿನ ತುಣುಕ ಬಂಧಿಸಿಡು
ಏಳು ಬಣ್ಣಗಳ ಬಳಿದು ಪ್ರತಿಷ್ಠಾಪಿಸುತ್ತೇನೆ.
ಚಿತ್ತಪಟದಲ್ಲಿ ಸಂಬಂಧಗಳ ಮೊಳೆ ಹೊಡೆದು..!

ನೆನಪ ಬಳ್ಳಿಯ ಜಗ್ಗಿಸಿ
ಆಳವಾದ ಕಣ್ಣೊಳಗೆ ಇಳಿದು ಬಿಡು
ನೀರಿದ್ದರೆ ಚಿಮ್ಮಲಿ, ಜಲ ಹುಟ್ಟಲಿ
ನಿನ್ನ ಕಡಲಿಗೆ ನದಿಯಾಗುತ್ತೇನೆ.!

ನದಿಯಾದ ದುಃಖ್ಖಕ್ಕೆ ಸಾಗರವಾದ ಹೃದಯ
ಅಪ್ಪಳಿಸಿದ ನಗುವಿನಲೆಗೆ ರೆಕ್ಕೆ ಬಡಿದ ಮನಸ್ಸು
ತೆರೆದಿಡು ನಿನ್ನ ಹೃದಯ
ಹರಿಸುತ್ತೇನೆ ಅರ್ಧ ದುಃಖ್ಖ
ತೆರೆದಿಡು ನಿನ್ನ ಒಡಲು
ಹನಿಸುತ್ತೇನೆ ಕಂಬನಿ ಕಡಲು..!

ನೆನಪುಗಳ ಬಂಧನದಲ್ಲಿ ಮೈ ಮುಳ್ಳಾಗಿದ್ದರೆ
ಬಲವುಳ್ಳ ಭುಜಗಳಲಿ ಪ್ರೀತಿಯ ತಬ್ಬಿಬಿಡು
ಪುಡಿಯಾಗಲಿ ಜಡ್ಡುಗಟ್ಟಿದ ಟೊಳ್ಳು ಮೂಳೆಗಳು
ಬಲವಾಗಲಿ ನನ್ನ ತುಕ್ಕು ಹಿಡಿದ ತೋಳುಗಳು...!

ಕೃಶವಾದ ಮುಖದಲ್ಲಿ ಅಮಾವಾಸ್ಯೆಯ ಅರ್ಧ ನೆರಳು
ನಿನ್ನರ್ಧ ಸುಖದ ಬೆಳಕ ನನ್ನೆಡೆಗೆ ತೂರಿಬಿಡು
ಬಿಡುವಿದ್ದರೆ ನೃತ್ಯವಾಡಲಿ ನಗುವಿನ ಗೆರೆಗಳು
ಸ್ಥಳವಿದ್ದರೆ ಹರಿಯಲಿ ಸುಕ್ಕು ಕಾಲುವೆಗಳು..!

ಕೊರಗಿ ಸತ್ತ ಎದೆಯೊಳಗಿನ ಭಾವಗಳು
ನಿನ್ನಂತರಾಳದ ಸುತ್ತ ಬೇಲಿಯಾಗಲಿ ಬಿಡು
ಮತ್ತೊಮ್ಮೆ ಚಿಗುರಲಿ ಸೊರಗಿದ ದಿನಗಳು
ಬಣ್ಣವಾಗಲಿ ಮಣ್ಣಾಗಿ ಹೋದ ಕನಸುಗಳು....!
-------------------------------------------------------------------------
  • ರವಿ ಮೂರ್ನಾಡು

ಸೋಮವಾರ, ಏಪ್ರಿಲ್ 25, 2011

ಕಾಯುತ್ತಿದ್ದೇನೆ...

ಉರುಳುವ ವರ್ಷಗಳು
ಓಡುವ ದಿನಗಳು
ಎಚ್ಚರಿಸುವ ಹೊತ್ತು
ನಿಂತು ನೋಡುವುದನ್ನೇ ಕಾಯುತ್ತಿದ್ದೇನೆ...!

ಮುದುಡಿದ ಹೂಗಳು
ಬಾಡಿದ ಮುಖಗಳು
ವಿರಹಿಗಳ ಮನಸ್ಸು
ಅರಳಿಕೊಳ್ಳುವುದನ್ನೇ ಕಾಯುತ್ತಿದ್ದೇನೆ...!

ಭಿಕ್ಷುಕರ ತಟ್ಟೆಗಳು
ಬಡವರ ರಟ್ಟೆಗಳು
ಬತ್ತಿದ ಕಣ್ಣುಗಳು
ತುಂಬಿಕೊಳ್ಳುವುದನ್ನೇ ಕಾಯುತ್ತಿದ್ದೇನೆ..!

ನಮ್ಮೆಲ್ಲರ ಆಸೆಗಳು
ಗುರಿಯಿಲ್ಲದ ರಸ್ತೆಗಳು
ದಡ ಸಿಗದ ಸಾಗರಗಳು
ಕೊನೆ ಹೇಳುವುದನ್ನೇ ಕಾಯುತ್ತಿದ್ದೇನೆ...!

ಬಂಜರು ಮಣ್ಣು
ಬೆತ್ತಲೆ ಮರ
ಅವರಿವರ ಮನೆಯಂಗಳ
ಹಸಿರು ಬೆಳೆಸುವುದನ್ನೇ ಕಾಯುತ್ತಿದ್ದೇನೆ..!

ಸರಕಾರದ ನಲ್ಲಿಗಳು
ಕೊಳವೆ ಬಾವಿಗಳು
ಥಾರ‍್ ಮರುಭೂಮಿ
ನಿತ್ಯ ನೀರು ಚಿಮ್ಮಿಸುವುದನ್ನೇ ಕಾಯುತ್ತಿದ್ದೇನೆ...!

ಭೋಗದ ಹಸಿವು
ಹಾದರದ ಹಾಸಿಗೆ
ಗೆದ್ದಲು ತಿನ್ನುವುದನ್ನೇ ಕಾಯುತ್ತಿದ್ದೇನೆ..!

ಹಣತೆ ಹಚ್ಚದ ಮನೆ
ಜ್ಞಾನವಿಲ್ಲದ ಮನ
ಬೆಳಕು ಹರಿಸುವುದನ್ನೇ ಕಾಯುತ್ತಿದ್ದೇನೆ...!

ನಿನ್ನೆ-ನಾಳೆಗಳ ಮಧ್ಯೆ
ಕತ್ತಲೆಯ ತಬ್ಬಿದ ದಿನ
ಉಸಿರು ಸವೆಸಿದ ಬದುಕು
ಬಣ್ಣವಾಗುವುದನ್ನೇ ಕಾಯುತ್ತಿದ್ದೇನೆ.
ಕಾಲ ಓಡುತ್ತಿರುವುದನ್ನೇ ನೋಡುತ್ತಿದ್ದೇನೆ....!
---------------------------------------------------
  •  ರವಿ ಮೂರ್ನಾಡ್‍

ಹೆಸರಿಲ್ಲದವರು...!


  • ರವಿ ಮೂರ್ನಾಡ್‍

ಈ ಹೆಸರೇಳದ ಹುಡುಗಿ ಕಾಣೆಯಾಗಿದ್ದಾಳೆ
ಭಾವದ ಶೂನ್ಯ ದೀವಟಿಕೆ ಹಿಡಿದು
ಹುಡುಕುತ್ತಿದ್ದೇನೆ..!

ನಕ್ಷತ್ರಗಳಿಗೂ ಹೆಸರುಂಟು- ಇದ್ದವರುಂಟು
ಹುಡುಕಿದವರುಂಟು
ಬೆಳಕು-ಬೆಳಕಾಗಿ ನಕ್ಷತ್ರವಾಗಿ ಮಿನುಗಿ
ಹೆಜ್ಜೆ ಗುರುತಿಲ್ಲದೆ ನೆರಳಾಗಿ ಸರಿದವರು.
ಬೆಳಕು-ಬೆಳಕಿನ ನಡುವೆ ಕಿಚ್ಚಿಟ್ಟು
ಸೂರ್ಯ-ಚಂದ್ರಮರನ್ನು ಎದೆಗಪ್ಪಿ ಮುತ್ತಿಟ್ಟು
ವ್ಯಾನಿಟಿ ಬ್ಯಾಗಿನೊಳಗೆ ತುರುಕಿದವರು..!
ನದಿಯಾಗಿ ಹರಿದು, ಕಡಲಾಗಿ ನೆರೆದವರು
ಅಲೆ-ಅಲೆಗಳಿಗೆರಡು ರೆಕ್ಕೆಯ ಮೂಡಿಸಿ
ಹಕ್ಕಿ ಚಿಲಿಪಿಲಿಯಾಗಿ ಹಾರಿದವರು
ಈಗ ಕಾಣೆಯಾಗಿದ್ದಾರೆ...!

ಇತಿಹಾಸಕ್ಕೊಂದು ಹಣತೆ ಹಚ್ಚುತ್ತೇನೆ....
ಕತ್ತಲಿನಿಂದ ಕತ್ತಲೆಗೆ ತಡಕಾಡಿ
ಸಿಕ್ಕಿದ್ದೊಂದು ಆಗಸದ ಕ್ಯಾನ್‍ವಾಸಿನಿಂದ
ಜಾರಿಬಿದ್ದ ಒಂಟಿ ತಾರೆ..!
ಶಾಸ್ತ್ರ-ಪುರಾಣಗಳ ಧೂಳು ಒರೆಸಿ
ಮಾತು ಕೈ ಹಿಡಿದಾಗ, ಪುಟಕ್ಕಿಟ್ಟ ಪದ..!
ಹೇಳುತ್ತಾರೆ, ಹೆಸರಿಡದ ದಾಖಲೆ ಹಿಡಿದ
ಡಯಾನ- ಮಡೋನ್ನ- ಮರ್ಲಿನ್‍ ಮನ್ರೋ
ಕೇಳಿಸುತ್ತಿದೆ.. ಕದ್ದೊಯ್ದ ಸೀತೆಯ ಕೂಗು..!
ಇಂಡಿಯ ಗೇಟಲ್ಲಿ ನೇತಾಡಿದ ದ್ರೌಪದಿಯ ಸೀರೆ.
ಅಬ್ಬಾ..! ಏಳುಸುತ್ತಿನ ಕೋಟೆಗೂ ಕೋಣೆಗಳು ಹಲವು
ಗೋಡೆಗಳಾಗಿವೆ ರಾಣಿಯರ ಎಲುಬು...!

ಹುಡುಕುವುದಕ್ಕೊಂದು ಹಾಡು ಹಾಡುತ್ತೇನೆ....
ಅಸ್ಪಷ್ಟ ಭಾವ ಶರೀರಕೆ ರುಜುವನ್ನಿಟ್ಟು
ಸಾಗಿದೇ ಇತಿಹಾಸ ವರ್ತಮಾನದ ಹಕ್ಕಿ
ಗಾಳಿ-ನೆಲ-ದಡ ಸಿಗದ ಕಡಲು
ಕೊನೆ ಹೇಳದ ರಸ್ತೆಯ ಹಂಚು
ಪರಿಚಯ ಹೇಳದ ನಿಂತ ನಿಲ್ದಾಣಗಳು
ಬಣ್ಣವಿಲ್ಲದೆ ಸರಿದ ಬೆತ್ತಲೆ ನೆರಳುಗಳು
ಮಿಂಚು ಬಳ್ಳಿಯೊಂದು ನಡದಾಡಿದ ನೆನಪು
ಈಗ ಮರೆಯಾಗಿದ್ದಾರೆ..

ಈ ಹೆಸರೇಳದ ಹುಡುಗಿ ಭಾವವಾಗಿದ್ದಾಳೆ...
ನೆನಪ ದೀವಟಿಕೆ ಹಿಡಿದು ಹುಡುಕುತ್ತಿದ್ದೇನೆ..!

ಬೀಭತ್ಸ ದುಃಸ್ವಪ್ನ...

ಆ ದೇಶದ ರಾಜಾದಿರಾಜ.                      
ರೋಗ-ರುಜಿನಗಳ ಈಟಿ ಹಿಡಿದ
ಅವನ ಸೈನಿಕರು.
ದಂಡೆತ್ತಿ ಬಂದರು ಊರಿಗೆ..!
ರುಂಡಗಳ ಕತ್ತರಿಸಿದರು.
ಕೆಲವರ ಕೈ-ಕಾಲುಗಳು
ನೋಡುತ್ತಿದ್ದವರ ಕಣ್ಣುಗಳ ಕಿತ್ತರು.
ಗಹಗಹಿಸಿ ನಕ್ಕರು..!

ನೆಲವನಪ್ಪಿದ ನಿಸ್ತೇಜಸ್ಸುಗಳಿಗೆ
ನಾಯಿ-ಕಾಗೆ- ರಣಹದ್ದುಗಳು
ವೈದ್ಯರಾದರು.
ಹುಳ-ಹುಪ್ಪಟೆ ತಿನ್ನುವ ಪಕ್ಷಿಗಳು
ದಾದಿಯರಾದರು.!

ಶಸ್ತ್ರಚಿಕಿತ್ಸೆ ಸಂಪೂರ್ಣ
ಅವೆಲ್ಲವೂ ಕೈ ತೊಳೆದು
ರಕ್ತದ ಮುಖ ವರೆಸಿ ಪೌಡರ‍್ ಬಳಿದು
ಒಂದು ತೇಗಿನೊಂದಿಗೆ ಹಾರಿದವು...!
ಇರುವೆಗಳು ರಕ್ತದ ಹೊಳೆಯಲ್ಲಿ
ರುಂಡ-ಮುಂಡಗಳ ಶುಚಿಗೊಳಿಸಿ
ಹಾಯಾಗಿ ಮೈಮುರಿದು ಹಲ್ಲುಕಿರಿದವು...!

ಆಗಸವೇ ಕಳಚಿ ಬಿದ್ದ
ರುಂಡ-ಮುಂಡಗಳ ಹೆಂಡತಿಯರು
ಸೆರಗು ಹಿಡಿದ ಅವರ ಮಕ್ಕಳು
ಸಾವಿನ ಸಂತೆಯಲಿ ಜೈಕಾರ ಕೂಗಿದರು..!
ಸ್ಮಶಾನದ ಮನೆಯಲ್ಲಿ
ಮುಸಿಮುಸಿ ಅತ್ತರು...!

ಮತ್ತೊಮ್ಮೆ ಬರುತ್ತಾನೆ ರಾಜಾದಿರಾಜ
ಈಟಿ ಹಿಡಿದ ಅವನ ಸೈನಿಕ
ಮುಖಮುಚ್ಚಿ ಅಳುವರು ವಿಧವೆಯರು.
ಬೆಳಕು ಸತ್ತ ಕೋಣೆಯಲಿ
ಅವರ ಮಕ್ಕಳು...!
----------------------------------------------------
  • ರವಿ ಮೂರ್ನಾಡ್‍

ಶುಕ್ರವಾರ, ಏಪ್ರಿಲ್ 22, 2011

ಆ ಕನಸಿನ ಹೆಸರು ಸಂಸಾರ


ಇಟ್ಟಿಗೆ ಜೋಡಿಸುತ್ತಿದೆ
ಒಂದು ಕನಸು..!

ಸುತ್ತಲೂ ಗುಡ್ಡಗಳು
ನಡುವೆ ಒಂದು ಹಳ್ಳ
ಹಳ್ಳದಂತಿರುವ ನದಿ
ಇಕ್ಕೆಲದ ತುಂಬಾ ಹೊಲಗಳು
ಉಳಿದ ಭೂಬಾಗದ ನಡುವೆ
ರೂಪುಗೊಳ್ಳುತ್ತಿದೆ..
ಒಂದು ಸುಂದರ ಪುಟ್ಟಮನೆ..!

ಅಂಗಳದ ಮೂಲೆಯಲಿ
ಕಂಬದ ದೀಪಗಳು..!
ಎರಡು ನವಿಲುಗಳು..!
ಮೆಲ್ಲನೆ ಇಳಿದು ಬರುತ್ತಿವೆ
ಕಣಿವೆಯಲಿ ಹಿಮದ ಪದರಗಳು..!

ಹೆಜ್ಜೆಯಿಡುತ್ತಿದೆ ಅಂಗಳದಲ್ಲಿ
ಪುಟ್ಟಮಗುವಿನ ಗೆಜ್ಜೆಕಟ್ಟಿದ ಕಾಲುಗಳು..!
ಬೆಳದಿಂಗಳ ಕೋಣೆಯಲಿ
ಕೆಲಸ ಮಾಡುತ್ತಿದೆ
ಬಂಗಾರದ ಬಳೆ ತೊಟ್ಟ ಕೈಗಳು..!

ಆ ಕನಸಿನ ಹೆಸರು " ಸಂಸಾರ"
ಅಮೂರ್ತ ಮನೆಯ
ಬಾಗಿಲಲ್ಲಿ ಕೈಮುಗಿಯುತ್ತಿದೆ
ಒಂದು ಬಂಗಾರದ ಫಲಕ
ಬರೆದಿದೆ " ಸುಸ್ವಾಗತ"..!
---------------------------------------------------
-ರವಿ ಮೂರ್ನಾಡ್‍

ಬುಧವಾರ, ಏಪ್ರಿಲ್ 20, 2011

ಕವಿತೆ ಹುಟ್ಟಲಿಲ್ಲ

·         ರವಿ ಮೂರ್ನಾಡ್‍
ಕವಿತೆ ಹುಟ್ಟಲೆಂದು
ಕವಿದ ಕಾರಿರುಳಿನಲಿ
ಸುತ್ತ ಕತ್ತರಿಸುವ ಕತ್ತಲೆಯ
ಕಪ್ಪನ್ನೊದ್ದು
ಕರಿ ನೆರಳಾಗಿ ಕಾಯುತ್ತಿದ್ದೆ
ಮನಸ್ಸಿಗೂ- ಕಲ್ಪನೆಗೂ ಮಧ್ಯೆ
ಮೋಹದ ಬಲೆ ಬೀಸುತ್ತಿದ್ದೆ
ಕವಿತೆ ಹುಟ್ಟಲಿಲ್ಲ...!

ಆ ಕಾರಿರುಳಿನ ಎಷ್ಟೋ ರಾತ್ರಿ
ಋತುಚಕ್ರದ ಬಂಧನದಲ್ಲಿ
ಮೊನ್ನೆ-ಮೊನ್ನೆಯವರೆಗೂ
ಮನಸ್ಸಿಗೆ ಮುಟ್ಟು ನಿಂತಿತ್ತು !

ಶಭ್ಧಗಳ ಒರೆತದಲಿ
ಗದ್ದಲದ ತೀವ್ರತೆಯಲಿ
ದುಃಖ್ಖದ ಮೊರೆತದಲಿ
ಗರ್ಭಸ್ರಾವವಾಗಿತ್ತು..!

ಮನಸ್ಸು ಬಿರಿಯಲೇ ಇಲ್ಲ
ಕಲ್ಪನೆಯ ಮೈ ಸವರಲಿಲ್ಲ
ಮುದ್ದು ಕವಿತೆ ಹುಟ್ಟಲೇ ಇಲ್ಲ..!

ಬಿಳಿ ಹಾಳೆಯ ತೊಟ್ಟಿಲನು
ಲೇಖನಿಯ ದಾರ ತೂಗಲಿಲ್ಲ
ಜೋಗುಳದ ಹಾಡು ಹಾಡಲಿಲ್ಲ
ಕತ್ತಲೆಯ ಕತ್ತರಿಸಿದ ಬೆಳಕು
ಪ್ರಕಾಶಮಾನವಾಗಿ ಉರಿಯಲಿಲ್ಲ..!

ಈ ನೀರವತೆಯಲಿ
ಉಸಿರು ಪಿಸುಗುಟ್ಟುತ್ತಿದೆ
ಕಣ್ಣು ಭಾವನೆಯ ಬೆನ್ನೆಟ್ಟಿದೆ
ಕಲ್ಪನೆಯ ಹುಡುಕುತ್ತಿದೆ
ಮನಸ್ಸಿಗೆ ಬೇಗೆ ಬಂದಿದೆ..!

ಒಂಟಿ ಮನಸ್ಸಿಗೆ
ಕಲ್ಪನೆಯ ಬೆಸುಗೆ ಬೆಸೆಯಲೇ ಇಲ್ಲ
ಅವರಿಬ್ಬರ ಸಂಗಮವಾಗಳೆ ಇಲ್ಲ
ನನ್ನ ಮುದ್ದು ಕವಿತೆ ಹುಟ್ಟಲೇ ಇಲ್ಲ..!

ನಿನ್ನ ಗೋಡೆಯ ಕನಸು..!

ಆ ನೀಳಾ ಕತ್ತಲ ಜಡೆಗೆ
ಸಾಲು ಬೆಳಕಿನ ಸುಮಗಳ
ಮಾಲೆ ಪೋಣಿಸಬೇಕು  !
ಸುಧೀರ್ಘ ಬದುಕಿನ
ಕಡಲ ದಡ ಸೇರಲು
ದೋಣಿ ಉಡುಗೋರೆಯಾಗಬೇಕು..!
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು


ಆ ಸಂಜೆಗತ್ತಲೆಯ
ಹಬ್ಬದ ಸಂತೆಯಲಿ
ನಗುವಿನ ಮಾರಾಟವಾಗಬೇಕು..!
ಹೊಳೆವ ಮೂಗುತಿ ಬೊಟ್ಟು
ರಂಗಿನ ಬಟ್ಟೆಯ ತೊಟ್ಟು
ಹಬ್ಬದ ತೇರನು ಎಳೆಯಬೇಕು..!

ನಿನ್ನ ಕೋಣೆಯ ಜಗತ್ತಿನಲ್ಲಿ
ಕನಸು ಚಿತ್ರಿಸಿದ ಗೋಡೆಗೆ
ಚಂದ್ರನ ಬೆಳದಿಂಗಳ ಎರಚಬೇಕು.!
ಮನಸ್ಸು ಮಂಚವನ್ನೊತ್ತ
ನಾಲ್ಕು ಕಂಬದ ಗಂಧರ್ವರು
ನಿನ್ನ ರಾತ್ರಿ ತೊಟ್ಟಿಲ ತೂಗಬೇಕು..!
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು

  • ರವಿ ಮೂರ್ನಾಡ್‍

ಶಕುಂತಲೆಗೆ ಮದುವೆ ಎರಡು·         ರವಿ ಮೂರ್ನಾಡ್‍
ನಮ್ಮ ಹುಡುಗಿಗೆ ನಿಮ್ಮ ಹಾಗೆಯೇ
ನಡೆದಿದೆ ಮಂಟಪದಲಿ ಮದುವೆ.
ಒಂದಲ್ಲ.... ಎರಡು..
ಜೊತೆ ಸಾಕ್ಷಿಗೆ ಮಗು.
ಮದುವೆಗೆ ಬಂದ ಜನರು
ಮನೆ-ಮನೆಗೆ ಹಂಚಿದ ಕರೆಯೋಲೆಗಳು..!

ಕಥೆ ಹೇಳುತ್ತೇನೆ...
ಒಂದೂರಿನಲ್ಲಿ ಒಬ್ಬ ಸೂಟುಧಾರಿ
ಮದುವೆ ಪಲ್ಲಂಗದ ಮೇಲೆ
ಮುಡಿಯಿಂದ ಜಾರಿದ ಹೂವು.
ಎದೆಗೆ ಅಂಟಿಸಿದ ಭಾಂಧವ್ಯದ ಹೊನಲು
ಪಿಸುಗುಟ್ಟಿದ ಸಾವಿರ ರಾತ್ರಿಯಿಂದ
ತಾಳಿಯ ಶವಯಾತ್ರೆಯ ದಿನ
ಪಿಂಡಕ್ಕೆ ವರ್ಷ ಒಂದು.!
ಕೋರ್ಟು-ಕಛೇರಿಗೆ ತೋರಣ ಕಟ್ಟಿ
ಕಟಕಟೆಯ ಮುಂದೆ ತಗ್ಗಿಸಿದ ಮುಖ
ವಿವಾಹ ವಿಚ್ಛೇದನ ಸಮಾರಂಭ
ನ್ಯಾಯದೇವತೆಯ ಬಟ್ಟೆ ಕಳಚಿದ
ಆತ್ಮಸಾಕ್ಷಿಯ ಅತ್ಯಾಚಾರಿ....!

ಇನ್ನೊಂದು ಕಥೆ ಹೇಳುತ್ತೇನೆ...
ನಿಮ್ಮ ಪಕ್ಕದ ಊರಿನಲ್ಲಿ ತಿರುಗುತ್ತಿದ್ದ
ಒಬ್ಬ ಅಪಪೋಲಿ ಬೀದಿ ಭಿಕಾರಿ
ಮೋಹ-ಆಸೆ-ಕಾಮದ ವರ್ತಕ
ಸಿಂಗರಿಸಿದ ವಿಚ್ಚೇಧಿತ ಹುಡುಗಿಗೆ
ಮುರುಕು ಮಂಚದ ಆಸರೆ
ಮುಸುರೆ ತಿಕ್ಕಿ ಮಾಸಿದ ಹಸ್ತರೇಖೆ
ಮೋಹದ ಸೆಲೆ ಬತ್ತಿದ ಮೇಲೆ
ಹಾದರಕೆ ಇನ್ನೊಂದು ಹೆಸರು ಮದುವೆ..!

ಇವಳ ಕಥೆ ಬಿಡಿ
ಶಕುಂತಲೆಗೆ ಏನಾಯಿತು?
ದುಷ್ಯಂತ ಮೋಹದ ಬಲೆ
ಕೈಬೆರಳ ಉಂಗುರ
ಅವಳಾದರೋ ಅವನ ಕರ್ಪೂರದ ಬೊಂಬೆ
ಇವಳಾದರೋ ಇಬ್ಬರು ಅತ್ಯಾಚಾರಿಗಳು
ಸುಲಿದಿಟ್ಟ ಮಾವಿನ ಸಿಪ್ಪೆ
ಬರೆದಿಟ್ಟ ಪುಟ್ಟ ಕವಿತೆಯಲಿ
ನಮ್ಮ ಶಕುಂತಲೆಗೆ ಮದುವೆ ಎರಡು..!
------------------------------------------------------

ಅತ್ಯಾಚಾರದ ಕಥೆ ಹೇಳುತ್ತಿವೆ...

ರೆಕ್ಕೆ ಮುರಿದ ಗಾಳಿ
ಸುಕ್ಕುಗಟ್ಟಿದ ಬೆತ್ತಲೆ ನೆಲ
ಹುಬ್ಬುಗಂಟಿಕ್ಕಿದ ಬೆಟ್ಟದ ಸಾಲು
ಅವರು ಮಾಡಿದ ಅತ್ಯಾಚಾರದ
ಕಥೆ ಹೇಳುತ್ತಿವೆ...!

ಅವರೆಲ್ಲರೂ ಹೋದ ಮೇಲೆ
ಬಿಟ್ಟು ಬಿಡದೆ ಸುರಿದ ಮಳೆಗೆ
ಎಂಜಲೊರೆಸದ ಮರ-ಗಿಡ
ತುಂಬಿಕೊಂಡ ಮಣ್ಣಿನ ಗರ್ಭ
ಗಾಯಗೊಂಡ ಕಾಡು-ಮೇಡು
ಮೇಕಪ್‍ ಮೆತ್ತಿದ ನದಿ-ತೊರೆ-ನಾಲೆ
ನವ ಮಾಸ ತುಂಬುವ ಮೊದಲೇ
ಗರ್ಭಪಾತವಾದವು..!

ಇರುಳನ್ನು ಸುಖಿಸಿದ ಜನ
ಹಗಲನ್ನು ಭೋಗಿಸಿದ ಹದ್ದು
ಸೂರ್ಯ-ಚಂದ್ರ-ಚಿಕ್ಕೆಯ ಲೋಕದಲ್ಲಿ
ವೃತ್ತ ಪತ್ರಿಕೆಯ ಸುದ್ಧಿ
ಆಕಾಶ-ಗಾಳಿ-ನದಿ- ಸಾಗರಗಳಿಗೆ
ವರದಿಗಾರನ ಸರದಿ

ತಾಯಿಯ ಹೆಣದ ಮೇಲೆ ಮುಖವಿಟ್ಟವರು
ಹಾಲುಗಲ್ಲದ ಹಸುಳೆ ರಕ್ತ ಚೀಪಿದ್ದು
ಜೀವಂತ ಗೋರಿಯಾದ ಬೆತ್ತಲೆ ಕಣ್ಣುಗಳು
ಕಾಲಗರ್ಭದಡಿ ಹಿಡಿ ಮಣ್ಣಾಗಿ ಹೋದವು..!

ಅಳಿದುಳಿದ ಅಷ್ಟೊಂದು ಜನರಿಗೆ
ಹಗಲು-ರಾತ್ರಿಯ ಪಹರೆ ಕೆಲಸ
ಭಿಕ್ಷುಕನ ವೇಷ ತೊಟ್ಟ ಶ್ರೀಮಂತ
ತಟ್ಟೆ ಕಳೆದುಕೊಂಡ ಭಿಕ್ಷುಕ
ಕಣ್ಣೀರಿಗೆ ಹರಾಜು
ನಗುವಿಗೆ ಸರದಿಯ ನೂಕು-ನುಗ್ಗಲು
ಉಕ್ಕಿ ಬಂದ ಹಸಿವಿನ ಪ್ರವಾಹಕ್ಕೆ
ಇಂದು-ನಾಳೆ ನಿರಂತರ ತೇಲುವ
ಮೂಳೆ-ಮಾಂಸದ ಅಶಾಶ್ವತ  ಹಂದರಗಳು..!

ರೆಕ್ಕೆ ಬಿಚ್ಚದ ನಗುವಿವ ಅಲೆಗಳು
ಬಿರುಕಿಟ್ಟ ಎಳಸು ತುಟಿಗಳು
ಸೆರಗು ಸರಿದ ಎದೆಗಳು
ಗೋರಿಯಾದ ಅವರ ಎಲುಬುಗಳು
ಇತಿಹಾಸವನ್ನು ಕೈಬೀಸಿ ಕರೆದ
ಸಾವಿನ ನೌಕೆಯ ನಾವಿಕರು..
-------------------------------------------------------
·         ರವಿ ಮೂರ್ನಾಡ್‍

ಜೀಸಸ್‍ ಮತ್ತು ಸೀತೆ..

ಜೀಸಸ್‍ ಬಂದರು
ಜಗನ್ಮಾತೆ ಸೀತೆಯೂ
ಕಾಲದ ಜಟಕಾ ಬಂಡಿಗೆ...!

"ಆಮೇನ್‍" ಎಂದು ಉದ್ಘರಿಸಿದಾಗ
ಬೈಬಲ್‍ನ ಪುಟ ಮಗುಚುತ್ತೇನೆ.....!
ಬೆತ್ಲೆಹೇಮಿನ ಗೋದೂಳಿಯಲ್ಲಿ
ಮುಗಿ ಬಿದ್ದರು ಪಾಪಿಜನ
ದೇವಪುತ್ರ ನಕ್ಷತ್ರವೆಂದು..!
ಅಂಧಾಕಾರದ ದಾರಿಯಲಿ
ಆಧಾರವಾದ ಸಂತನ
ಒಂದು ಕೆನ್ನೆಗೆ ಹೊಡೆದು
"ಹುಚ್ಚ"  ಎಂದರು...!
ಇನ್ನೊಂದು ಕೆನ್ನೆಗೆ ಮತ್ತೊಂದು !
ಶಿಲುಬೆಗೇರಿಸಿ ಕಲ್ಲು ಹೊಡೆದು
ಬೈಬಲ್‍ ಬರೆದರು...!

ರಾಮ ರಾಮ ಎಂದಾಗ
ಕೈಗೆ ಸಿಕ್ಕಿತು ರಾಮಾಯಣ....!
ಕದ್ದೊಯ್ದ ರಾವಣ
ರಾಮನಂತಲ್ಲ ಶಿವಶಿವ...!
ಅಶೋಕವನದ ಬ್ರಹ್ಮಾಂಡದಲ್ಲಿ
ದೇವೀ.. ಎಂದನೋ ಶಿವಭಕ್ತ...!
ಪತಿಯೇ ನಿ ಎನ್ನೊಡೆಯ
ಬೊಬ್ಬಿಟ್ಟ ಮುತ್ತೈದೆಯ
ಮಾಂಗಲ್ಯಕೇ ಬೆಂಕಿ ಬಿದ್ದಿತೋ
ರಾಮ... ರಾಮ...!
ಸಹಗಮನವೆಂದಿತೋ ಲಕ್ಷ್ಮಣ ರೇಖೆ...!

ಓಡುತ್ತಿದೆ....
ಉತ್ತರಕ್ಕೆ ಧರ್ಮ
ದಕ್ಢಿಣಕ್ಕೆ ಬದುಕು
ನೊಗಹೊತ್ತ ಕಾಲದ ಜಟಕಾ ಬಂಡಿ..!
ಋತುಚಕ್ರಗಳ ಉರುಳಿಸುತ್ತಾ
ನಿಲ್ದಾಣವಿಲ್ಲದ ದಾರಿಯಲಿ
ಸತ್ಯಕ್ಕೆ ವಿಳಾಸ ಹುಡುಕುತ್ತಾ....!

ಅದೋ ಅಲ್ಲಿ ಕಾಣಿಸುತ್ತಿದೆ ಚರ್ಚು
ಜೀಸಸ್‍ ಕೆಳಗಿಳಿದು ಒಳ ಹೊಕ್ಕರು..!
ಜಗನ್ಮಾತೆ ಸೀತೆಯೂ
ರಾಮನಿಗೆ ಮಂದಿರದಲಿ ಮೂರ್ತಿಯಾದರು..!
------------
·       ರವಿ ಮೂರ್ನಾಡು