ಆ ಗೋಡೆಗೆ ತಾಗಿದ
ಚಿತ್ರವನ್ನೇ ನೋಡುತ್ತೇನೆ..!
ತಾಯ ತುಂಬು ತೋಳಿನಡಿ
ಮಗು ನಗುತ್ತಿದೆ...
ಅರಳಿದ ಹಾಲ್ದುಟಿ ಹರಿದು
ಬಾಯಿ-ಕಿವಿ ಒಂದಾಗಿದೆ.!
ಮೊಗ್ಗರಳಿದ ಮಲ್ಲಿಗೆ ಹಲ್ಲುಗಳ ಕಾಂತಿಗೆ
ಬಿರಿದ ಕಂಗಳು ಸೋತು
ಪ್ರಪಂಚ ಎರಡಾಗಿದೆ...!
ನಕ್ಷತ್ರವನ್ನೇ ತಬ್ಬಿದ ಮಾಯೆ
ಸೂರ್ಯ-ಚಂದ್ರಮರನ್ನು ನುಂಗಿ
ತುಂಬು ಗರ್ಭದ ಮಂಡಲವಾಗಿದೆ.!
ಜೋಗುಳ ಹಾಡುವ ಕಡಲಾಗಿದೆ.
ಕಡಲ ಸೇರುವ ನದಿಯಂತೆ
ಮಗು.....
ಕುಣಿದು ಕುಪ್ಪಳಿಸುವ ಅಲೆಯಾಗಿದೆ !.
ಇಳಿದು ಬಿಡುತ್ತೇನೆ
ನಿಧಾನವಾಗಿ .... ಚಿತ್ರದೊಳಗೆ
ಆ.. ತುಂಬು ತೋಳಿನಡಿ
ಮಗುವಾಗುತ್ತೇನೆ..!
ಧಿಗಂತದಾಚೆಯ ಶೂನ್ಯದೆಡೆಗೆ..
ನಿಂತ ಭೂಮಿಯಿಂದ ನೆಗೆಯುತ್ತೇನೆ..
ಅಮ್ಮನ ಸ್ಪರ್ಶ ಸುಖವ
ಕೈಬೀಸಿ ಕರೆಯುತ್ತೇನೆ..!
------------------------------------------
-ರವಿ ಮೂರ್ನಾಡ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ