ಉರುಳುವ ವರ್ಷಗಳು
ಓಡುವ ದಿನಗಳು
ಎಚ್ಚರಿಸುವ ಹೊತ್ತು
ನಿಂತು ನೋಡುವುದನ್ನೇ ಕಾಯುತ್ತಿದ್ದೇನೆ...!
ಮುದುಡಿದ ಹೂಗಳು
ಬಾಡಿದ ಮುಖಗಳು
ವಿರಹಿಗಳ ಮನಸ್ಸು
ಅರಳಿಕೊಳ್ಳುವುದನ್ನೇ ಕಾಯುತ್ತಿದ್ದೇನೆ...!
ಭಿಕ್ಷುಕರ ತಟ್ಟೆಗಳು
ಬಡವರ ರಟ್ಟೆಗಳು
ಬತ್ತಿದ ಕಣ್ಣುಗಳು
ತುಂಬಿಕೊಳ್ಳುವುದನ್ನೇ ಕಾಯುತ್ತಿದ್ದೇನೆ..!
ನಮ್ಮೆಲ್ಲರ ಆಸೆಗಳು
ಗುರಿಯಿಲ್ಲದ ರಸ್ತೆಗಳು
ದಡ ಸಿಗದ ಸಾಗರಗಳು
ಕೊನೆ ಹೇಳುವುದನ್ನೇ ಕಾಯುತ್ತಿದ್ದೇನೆ...!
ಬಂಜರು ಮಣ್ಣು
ಬೆತ್ತಲೆ ಮರ
ಅವರಿವರ ಮನೆಯಂಗಳ
ಹಸಿರು ಬೆಳೆಸುವುದನ್ನೇ ಕಾಯುತ್ತಿದ್ದೇನೆ..!
ಸರಕಾರದ ನಲ್ಲಿಗಳು
ಕೊಳವೆ ಬಾವಿಗಳು
ಥಾರ‍್ ಮರುಭೂಮಿ
ನಿತ್ಯ ನೀರು ಚಿಮ್ಮಿಸುವುದನ್ನೇ ಕಾಯುತ್ತಿದ್ದೇನೆ...!
ಭೋಗದ ಹಸಿವು
ಹಾದರದ ಹಾಸಿಗೆ
ಗೆದ್ದಲು ತಿನ್ನುವುದನ್ನೇ ಕಾಯುತ್ತಿದ್ದೇನೆ..!
ಹಣತೆ ಹಚ್ಚದ ಮನೆ
ಜ್ಞಾನವಿಲ್ಲದ ಮನ
ಬೆಳಕು ಹರಿಸುವುದನ್ನೇ ಕಾಯುತ್ತಿದ್ದೇನೆ...!
ನಿನ್ನೆ-ನಾಳೆಗಳ ಮಧ್ಯೆ
ಕತ್ತಲೆಯ ತಬ್ಬಿದ ದಿನ
ಉಸಿರು ಸವೆಸಿದ ಬದುಕು
ಬಣ್ಣವಾಗುವುದನ್ನೇ ಕಾಯುತ್ತಿದ್ದೇನೆ.
ಕಾಲ ಓಡುತ್ತಿರುವುದನ್ನೇ ನೋಡುತ್ತಿದ್ದೇನೆ....!
---------------------------------------------------
- ರವಿ ಮೂರ್ನಾಡ್
ಅಮೋಘವಾದ,ಹೃದಯ ಸ್ಪರ್ಷಿಯಾದ ಕವಿತೆ.ಉರುಳುವುವು ದಿನಗಳು ಓಡುವುವು ಗಳಿಗೆಗಳು ತುದಿ ಮೊದಲಿಲ್ಲದ ಅನಂತತೆಯ ಕಡೆಗೆ ...ಎಂಬ ಪ್ರಸಿದ್ಧ ಕವಿ ಸಾಲುಗಳು ನೆನಪಾದವು.
ಪ್ರತ್ಯುತ್ತರಅಳಿಸಿನಿನ್ನೆ-ನಾಳೆಗಳ ಮಧ್ಯೆ
ಕತ್ತಲೆಯ ತಬ್ಬಿದ ದಿನ
ಉಸಿರು ಸವೆಸಿದ ಬದುಕು
ಬಣ್ಣವಾಗುವುದನ್ನೇ ಕಾಯುತ್ತಿದ್ದೇನೆ.
ಕಾಲ ಓಡುವುದನ್ನೇ ನೋಡುತ್ತಿದ್ದೇನೆ....ಈ ಸುಂದರ ಅರ್ಥಗರ್ಭಿತ ನುಡಿಗಳ ಹಿಂದಿನ ಆಶಯ ಹೃದ್ಯವಾದುದು.ಏನು ಹೇಳಲಿ ಕವಿಮಾನ್ಯರೆ.ನಿಮ್ಮ ಲೇಖನಿ ಅತ್ಯಂತ ಶಕ್ತಶಾಲಿ.ಅನುಕರಣೀಯ.
ಮೂಡಣದಲ್ಲಿ ಮತ್ತೊಂದು ಅರ್ಥಪೂರ್ಣ ಅಭಿವ್ಯಕ್ತಿಯೊಂದಿಗೆ ರವಿ ಮತ್ತೆ ಮೂಡಿ ನಿಂತ ಪರಿಗೆ ಒಂದು ಸಲಾಂ ರವಿಯಣ್ಣ.. ಕವಿತೆ ವ್ಯವಸ್ಥೆಯ ಹುಳುಕುಗಳ ವಿರುದ್ಧದ ದನಿಯಾಗಿ ಪ್ರಕಟಗೊಂಡಿದೆ.. ಎಂದಿನಂತೆ ಕವಿತೆ ಒಮ್ಮೆಲೇ ಅನೇಕ ಭಾವಗಳನ್ನು ಮನದೊಳಗೆ ಪ್ರವಹಿಸುವಂತೆ ಹರಿಯುತ್ತದೆ.. ಒಂದು ಕವಿತೆ ನೂರು ಕವಿತೆಗಳಿಗೆ ಪ್ರೇರಣೆ ನೀಡುವುದರೊಂದಿಗೆ, ವಸ್ತುವನ್ನು ಒದಗಿಸುತ್ತದೆ ಎಂಬುದಕ್ಕೊಂದು ಉದಾಹರಣೆ ಈ ಕವಿತೆ..
ಪ್ರತ್ಯುತ್ತರಅಳಿಸಿಭೋಗದ ಹಸಿವು
ಹಾದರದ ಹಾಸಿಗೆ
ಗೆದ್ದಲು ತಿನ್ನುವುದನ್ನೇ ಕಾಯುತ್ತಿದ್ದೇನೆ..!
ಈ ಸಾಲುಗಳು ಮನಸ್ಸನ್ನು ತುಂಬಾ ಹಿಂಡುತ್ತಿವೆ.. ಚೆನ್ನಾಗಿದೆ ಕವಿತೆ..