ಎಷ್ಟೊಂದು ಜನರು ಬಂದರು - ಹೋದರು
ಆ ಮನೆಯ ಬಾಗಿಲ ಸಂದಿಯಲಿ !
ಕೇಕೆ ಕುಣಿತ - ಮಗುವಿನ ಆಟ
ಬಿರುಕಿಡಲಿಲ್ಲ ಆ ಮನೆಯ ಗೋಡೆಗಳು !
ನೂರಾರು ವರ್ಷ ಬಾಳಿ ಬದುಕುತ್ತವೆ
ಗೋಡೆಗೆ ಮಗು ಗೀಚಿದ
ಗಾಂಧಿ ತಾತನ ಚಿತ್ರಗಳು !
ಬೊಗಸೆ ಬೆಳಕನು ಸೀಳಿ
ಕೆಣಕು ಗಾಳಿ - ಬೆಳವ ಕಾಳ್ಗಿಚ್ಚು
ಆಶ್ರಯಿಸದಿರಲಿ ಈ ಮನೆ
ಒಂದೊಂದು ಕೋಣೆಗೆ ಒಂದೊಂದು ದೇವರು
ಕೃಷ್ಣ-ಅಲ್ಲ-ಕ್ರಿಸ್ತ , ಹೊಡೆದಾಡದಿರಲಿ ಮಕ್ಕಳು
ಮುಟ್ಟದಿರಲಿ ಬಿರುಗಾಳಿ-ಮುತ್ತ್ಯೆದೆಯ ಮುಂಗುರುಳು
ಬತ್ತದಿರಲಿ ಎದೆ ಹಾಲು..!
ಮಲಗಿದ ಮಗು ಮಲಗಿಯೇ ಇರಲಿ
ಎಷ್ಟೊಂದು ಜನರು ಬಂದರು - ಹೋದರು
ಕದಡದಿರಲಿ ನೆಮ್ಮದಿ
ಕಾಪಿಡು ತಂದೆಯೇ.. ಆರದಿರಲಿ ಬೆಳಕು
ಆ ಮನೆಯ ಕನಸು !
ಎಷ್ಟೊಂದು ಜನರು ಬಂದರು - ಹೋದರು
ಸುಳಿಯದಿರಲಿ ಸುಳಿಗಾಳಿ - ಮುಚ್ಚದಿರಲಿ ಬಾಗಿಲು
ಬಾಚಿ ತಬ್ಬುವ ಕತ್ತಲು !
------------------------------------
-ರವಿ ಮೂರ್ನಾಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ