ಸೋಮವಾರ, ಜೂನ್ 27, 2011

ಅಮ್ಮ ಹೊಲಿದ ತಂಗಿಯ ಅಂಗಿ..!


-ರವಿ ಮೂರ್ನಾಡು
          ಗೆಜ್ಜೆಗಳಿಲ್ಲದ ಕಾಲುಗಳಲ್ಲಿ ಮಗು ಅಂಬೆಗಾಲಿಕ್ಕುತ್ತಿತ್ತು. ಬೆಳಕಿನ ಚುಕ್ಕಿಯೊಂದು ಹಾಲ್ಗಲ್ಲದ ನಗೆ ಸೂಸುತ್ತಾ ಅಂಗಿ ತೊಟ್ಟು ಬರುತ್ತಿರುವಂತೆಯೇ, ಅಮ್ಮನ ಕಣ್ಣಿನಲ್ಲಿ ಹನಿಗಳು ತೊಟ್ಟಿಕ್ಕ ತೊಡಗಿದವು. ಹಾಗೇ ನೋಡುತ್ತಿದ್ದೆ. ಏಕಮ್ಮ ಅಳುತ್ತಿದ್ದೀಯ?. ಬಾಚಿ ತಬ್ಬಿಕೊಂಡ ಅಮ್ಮ, "ಇಲ್ಲ ಮಗನೇ.. ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನನಗೊಂದು ಸೀರೆ.. ತಂಗಿಗೊಂದು ಚೆಂದದ ಅಂಗಿ ತಂದು ಕೊಡಬೇಕು" ಅಂತ ಉಸುರಿದಳು. ಮನೆಯ ಹೊರಗೆ ಆಗ ತಾನೆ ಕತ್ತಲು ತಬ್ಬಿಕೊಂಡಿತ್ತು... ಹಾಗೇ ತಂಗಾಳಿ ಮುಖಕ್ಕೆ ಬಡಿದಾಗ, ಅಮ್ಮನ ಮಾತು ನನ್ನ ಹಗಲುಗಳನ್ನು ಕಾಯುತ್ತಿತ್ತು.
          ವಾರಕ್ಕೆ ರವಿವಾರದ ಶಾಲೆಯ ರಜಾ ದಿನಗಳಲ್ಲಿ ಮನೆಗೆ ಬರುವಾಗಲೆಲ್ಲಾ, ಅವಳು ಕೇಳುತ್ತಾಳೆ " ಮಾವ ಏನು ಕೊಡಲಿಲ್ಲವೇನೋ?" ಅಂತ . ಇದು ಪ್ರತೀ ಬಾರಿಯ ಪ್ರಶ್ನೆ. ಒಂದು ಬಾರಿ ಹಾಗೆ ಕೇಳಿದ್ದೆ. ಇಲ್ಲ ಸುಮ್ಮನೇ ಕೇಳಿದೆ ಅಂತ ಹೇಳಿದ್ದಳು. ತಂಗಿ ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದಾಗ, ಮಗು-ತಾಯಿಯನ್ನು ನೋಡಲು ಒಮ್ಮೆ ಮಾವ ಬಂದಿದ್ದು. ತದ ನಂತರ ಬರಲಿಲ್ಲ. ವರ್ಷ ಒಂದಾಗುತ್ತಾ ಬಂತು. ನಾಲ್ಕು ತಿಂಗಳ ಮಗುವಿರುವಾಗ, ಅಜ್ಜಿ  ಎರಡು ಅಂಗಿ ತಂದಿದ್ದರು. ಅಪ್ಪ ಮಡಿಕೇರಿಯ ಶುಕ್ರವಾರದ ಸಂತೆ ದಿನ , ದಾರಿ ಬದಿಯ ಮುಸ್ಲಿಂ ವ್ಯಾಪಾರಿಯಿಂದ ತಂದ ಎರಡು ಅಂಗಿ. ಮಗು ದೊಡ್ಡದಾಗುತ್ತಿದ್ದಂತೆ ಎಲ್ಲವೂ ಸಣ್ಣದಾಗಿದ್ದವು.
          ಒಂದು ಕತೆ ಓದಿದ್ದೆ. ಸುಟ್ಟು ತಿನ್ನುವ ಬಡತನದ ಮನೆ. ಅದರಲ್ಲಿ, ಒಂದು ಬಾರಿ ತಂಗಿಯ ಮನೆಗೆ ಅಣ್ಣ ಬರುತ್ತಾನೆ. ಅಲ್ಲಿ ಒಂದು ಮಗು. ಎಲ್ಲಾ ಮಾತುಕತೆ- ಉಪಚಾರ ಮುಗಿದ ಮೇಲೆ, ಮಗುವಿಗೆ ಬಟ್ಟೆ ತೆಗೆಯಲೆಂದು ಐದು ರೂಪಾಯಿ ಕೊಡುತ್ತಾನೆ. ಅಣ್ಣ ಕೊಟ್ಟ  ಹಣ ಅಂದರೆ ತವರಿನ ದೊಡ್ಡ ಉಡುಗೊರೆ, ದೇವರಿಗೆ ಸಮಾನ ಅಂತ ಹೆಮ್ಮಕ್ಕಳು ಕಾಪಾಡುತ್ತಾರೆ. ಆ ತಂಗಿ ಹಣವನ್ನು ಮಗುವಿಗೆ ಬಟ್ಟೆ ತೆಗೆಯಲು ತೆಗೆದಿಟ್ಟಿರುತ್ತಾಳೆ. ಅದು ಅಕ್ಕಿ ಇರುವ ಡಬ್ಬಿಯೊಳಗೆ. ಪ್ರಾಣಕ್ಕಿಂತ ಮಿಗಿಲು. ಗಂಡ  ಕಂಠ ಪೂರ್ತಿ ಕುಡಿಯವ ಹೆಂಡ ಕುಡುಕ. ಅಣ್ಣ ಮನೆಗೆ ಬಂದಿದ್ದಾನೆ, ಹಣ ಕೊಟ್ಟಿದ್ದಾನೆ ಅಂತ ಗಂಡನಿಗೆ ಗೊತ್ತಿತ್ತು. ಒಂದು ದಿನ ಹಾಗೇ ಆಯಿತು. ಹೆಂಡ ಕುಡಿಯಲು ಹಣವಿಲ್ಲದಾಗ ಹೆಂಡತಿಯನ್ನು ಪೀಡಿಸ ತೊಡಗಿದ. ಎಷ್ಟರ ಮಟ್ಟಿಗೆ ಅಂದರೆ , ಮನೆ ಪೂರ್ತಿ ರಂಪಾಟ- ಹೊಡೆತ- ಬಡಿತ. ಗೋಡೆಯ ಒಂದು ಬದಿಯಲ್ಲಿ ಹಾಲ್ಗಲ್ಲದ ಮಗು ಅಳುತ್ತಿರುತ್ತದೆ. ಕೈಗೆ ಸಿಕ್ಕಿದ್ದಲ್ಲಿ ಹೊಡೆಯ ತೊಡಗಿದ. ಹೊಡೆದ ರಭಸಕ್ಕೆ  ಹೆಂಡತಿಯ ತಲೆ ಗೋಡೆಗೆ ಬಡಿದು ರಕ್ತ ಸುರಿಯ ತೊಡಗಿತು.  ಹಾಗೇ ಮನೆಯೆಲ್ಲಾ ಹುಡುಕುತ್ತಾನೆ. ಜೊತೆಗೆ ಅಕ್ಕಿ ಡಬ್ಬಿಯೂ. ಹಣ ಸಿಕ್ಕಿತು. ಸೀದಾ  ಹೆಂಡದ ಅಂಗಡಿ ಹೋಗಿ ಕಂಠ ಪೂರ್ತಿ ಕುಡಿದು ಮನೆಗೆ ಬರುತ್ತಾನೆ.  ಮನೆಯಲೆಲ್ಲಾ ಜನರು ಗುಂಪು ಸೇರಿದ್ದರು. ದುಃಖ್ಖದ  ಆರ್ತಸ್ವರ ಮುಗಿಲು ಮುಟ್ಟುತ್ತಿದೆ. ಹೆಂಡತಿ ಬಿಳಿ ಬಟ್ಟೆ ಹೊದ್ದು ಮಲಗಿದ್ದಳು. ಮಾತಾಡುತ್ತಿಲ್ಲ. ಮಗು ಅದರ ಅಜ್ಜಿ ಮಡಿಲಲ್ಲಿ ನಿದ್ರಿಸುತ್ತಿತ್ತು. ಪೋಲೀಸರು ಬಂದು ವಿಚಾರಿಸಿದಾಗಲೇ ಅವನಿಗೆ ಗೊತ್ತಾಗಿದ್ದು, ಹೆಂಡಕ್ಕೆ ತೆಗೆದ ಅಂಗಿಯ ಹಣದಲ್ಲಿ  ಕುಟುಂಬದಲ್ಲಿ ಹೆಣ ಬಿತ್ತು ಅಂತ.
          ಅಪ್ಪ, ಅಮ್ಮನನ್ನು ತುಂಬಾ ಪ್ರೀತಿಸುತ್ತಿದ್ದ. ಸರಿಯಾಗಿ ಗೊತ್ತಾಗಿದ್ದು, ಒಂದು ಶನಿವಾರ ಸಂಜೆ ಮನೆಗೆ ಬಂದಾಗ. ತಾಯಿ ಜ್ವರ ಬಂದು ಮಲಗಿದ್ದಳು. ಬೆಳಿಗ್ಗೆ ಎದ್ದ ಅಪ್ಪ, ಅಮ್ಮನ ಸೀರೆ-ಲಂಗ ಸೇರಿದಂತೆ ನಮ್ಮೆಲ್ಲರ ಬಟ್ಟೆಗಳನ್ನು ಕಲ್ಲಿಗೆ ಬಡಿದು, ಸೀಗೆಕಾಯಿ ಹಾಕಿ ಒಗೆಯುತ್ತಿದ್ದ. ಮುಸುರೆ ತಿಕ್ಕಿ ಕಾಫಿ ಮಾಡಿ ತಾಯಿ ಮಲಗಿದ್ದಲ್ಲಿಗೆ ಕುಡಿಸುತ್ತಿದ್ದ. ಸಂತೆಗೆ ಹೋಗಿ ಹಣವಿದ್ದರೆ,  ಒಂದು ಮುಡಿ ಮಲ್ಲಿಗೆ ಹೂ ತರುತ್ತಿದ್ದ. ತುಂಬಾ  ಪ್ರೀತಿಸುತ್ತಿದ್ದ. ಇಬ್ಬರ ಹೆಣ್ಣು ಮಗು ಬೇಕೆಂಬ ಆಸೆಗೆ ನಾನೂ ಸೇರಿದಂತೆ ಐದು ಗಂಡು ಮಕ್ಕಳ ನಂತರ ಹುಟ್ಟಿದವಳು ತಂಗಿ. ಅಮ್ಮನ ಅಂಗಿ ತೆಗೆಯುವ ಆಸೆಗೆ ನಾವೆಲ್ಲರೂ ತೊಡಕಾದೆವೋ ಅನ್ನೋ ಭಾವ, ನನ್ನೊಳಗೆ ಅಡಗಿ ಕುಳಿತು ಪ್ರಶ್ನಿಸುವಂತೆ  ಮಾಡಿದ ವ್ಯವಸ್ಥೆ ಅದಾಗಿತ್ತು.
          ಒಮ್ಮೆ ತರಗತಿಯಲ್ಲಿ ಮೇಷ್ಟ್ರು  ವಿಙ್ಞಾನದ ಪಾಠ ಮಾಡುತ್ತಿದ್ದರು. ಬಡತನ- ಅನಕ್ಷರತೆಗೆ ಜನಸಂಖ್ಯಾ ಸ್ಫೋಟವೇ ಕಾರಣ ಅಂದರು. ನಮ್ಮ ಮನೆಯಲ್ಲಿರುವ ಎಂಟು ಮಂದಿಯ ಬಗ್ಗೆ  ಕುಳಿತಲ್ಲೇ ಆಲೋಚಿಸಿದ್ದೆ. ಭಾರತದ ಬಡತನ- ಅನಕ್ಷರತೆಯ ಅಪವಾದಕ್ಕೆ ನಮ್ಮ ಮನೆ ಒಂದು ಉದಾಹರಣೆಯಾಗುತ್ತಿದ್ದಂತೆ, ತದನಂತರದ ವರ್ಷಗಳ  ಕನ್ನಡದ ಅಂತಿಮ ಪರೀಕ್ಷೆಗಳಲ್ಲಿ ನನಗೆ ಶೇ.ತೊಂಬತ್ತೇಳರಷ್ಟು ಅಂಕ ಲಭಿಸಲು ಪ್ರಾರಂಭವಾಯಿತು.. ಆರೋಗ್ಯ ಇಲಾಖೆಯ "ಗಂಡಾಗಲಿ- ಹೆಣ್ಣಾಗಲಿ ಮಕ್ಕಳೆರಡೇ ಇರಲಿ" ಅನ್ನುವ ಬರಹವನ್ನು ಓದುವ ಅಥವಾ ಅರ್ಥಯಿಸುವ ಕಾಲ ಚಿತ್ರಣ, ಹೆಣ್ಣು ಮಗುವನ್ನು ಕಾಣುವ ಆಸೆಯಲ್ಲಿ ಅಪ್ಪ - ಅಮ್ಮ ಮರೆತು ಹೋದರು. ದಿನದ ಒಪ್ಪೊತ್ತಿನ ಊಟಕ್ಕೆ ಪರದಾಡಿದ ಮನೆ, ಇಬ್ಬರು ಕೂಲಿ ಕಾರ್ಮಿಕರಾಗಿ ದುಡಿದು ಆರು ಹೊಟ್ಟೆಗಳನ್ನು ತುಂಬಿಸುವಾಗ, "ಕಂಪ್ಯೂಟರ್" ಜಗತ್ತಿನ ಕನಸು ಕಂಡ  ನನ್ನ ಗುರಿ, ಮಾವನ ಮನೆಯಲ್ಲಿ ಪುಸ್ತಕ ಹಿಡಿಯುತಿತ್ತು.. ಒಂದರ ಹಿಂದೆ ಒಂದರಂತೆ ಆರು ಮಕ್ಕಳು ಜಗತ್ತಿಗೆ ಬಂದಾಗ, ಮೃಷ್ಠಾನ್ನ ಭೋಜನದ ಸುವಾಸನೆ- ಬಣ್ಣದ ಬಟ್ಟೆಯ ಕನಸುಗಳು  ಅಣಕಿಸಿತು ಅನ್ನುವುದು ಸತ್ಯ. ಹಬ್ಬ - ಹರಿದಿನಗಳು ,ಪಕ್ಕದ ಮನೆಯವರ ಸಂತೋಷಕ್ಕೆ ಚಪ್ಪಾಳೆ ತಟ್ಟಿ  ಆನಂದಿಸುವುದು ಮಾತ್ರ ಬಡತನಕ್ಕೆ ಬರೆದ ಹಣೆಬರಹ. ಶಾಲೆಗೆ ಹೋಗುವಾಗ, ನನ್ನ ತಮ್ಮಂದಿರಲ್ಲಿ ಒಬ್ಬ ಪಕ್ಕದ ತೋಟದ ಸಾಹುಕಾರರ ದನ ನೋಡುವುದೋ,ಇನ್ನೊಬ್ಬ ದನಗಳಿಗೆ ಹುಲ್ಲು ತರುವುದೋ, ಮತ್ತೊಬ್ಬ ಪುಟಾಣಿಗಳಾದ ತಂಗಿ- ತಮ್ಮನನ್ನು ನೋಡಿಕೊಳ್ಳುವ ಜಗತ್ತಿನಲ್ಲಿ ನಟರಾಗಿದ್ದರು. ದಿನನಿತ್ಯದ ಬೆವರಿಗೊಂದು ಅಪ್ಪ-ಅಮ್ಮ  ಬದುಕಿನ ಭಾಷ್ಯ ಬರೆಯುತ್ತಿದ್ದಂತೆ, ತಂಗಿಗೊಂದು ಅಂಗಿ ತೆಗೆಯುವ ಆಸೆ  ಅಮ್ಮನಿಗೆ ಚಿಗುರೊಡೆಯುತ್ತದೆ.
          ಮಾವಂದಿರು ಒಂದು ಸಣ್ಣ ಅಂಗಿಯಾದರೂ ಮಗಳಿಗೆ ತಂದಾರೂ ?!. ದೊಡ್ಡ ಮಾವ ಮಡಿಕೇರಿ ಸಮೀಪದ ಊರಿನಲ್ಲಿ ಪೋಲಿಸ್‍ ಹುದ್ದೆಯಲ್ಲಿದ್ದ. ಇನ್ನೊಬ್ಬ ಮಾವ, ಬಟ್ಟೆ ಹೊಲಿಯುವ " ಟೈಲರ‍್". ಮಡಿಕೇರಿಯಿಂದ  ಖಾಸಗಿ ಬಸ್‍ನಲ್ಲಿ ಬಂದು, ಇಳಿದ ಮೇಲೆ, ಎಂಟು ಕಿ. ಮೀ. ದೂರ ನಡೆದು ತಲುಪಬೇಕಾದ ಮನೆಗೆ,  ಒಬ್ಬ ಪೋಲಿಸ್‍ ಅಥವಾ ಮೂರ್ನಾಡು ಪಟ್ಟಣದಲ್ಲಿ ಖ್ಯಾತಿ ಪಡೆದ ಟೈಲರ‍್ ಬರುವುದು ಕನಸಿನ ಮಾತು. ಅದು ಬಡತನದ ಕಪ್ಪು ಹೊದಿಕೆ ಹೊದ್ದು, ಅಡುಗೆ ಕೋಣೆಯಿಂದ ಹೊಗೆ ಬರುವ  ಮನೆಗೆ. ಹೆಮ್ಮನಸ್ಸು ಹಾಗೇ ತವರಿನ ಮುಖಗಳಿಗೆ ಕೊರಗುತ್ತಿತ್ತು, ಸಣ್ಣರಿರುವಾಗ ಎತ್ತಿ ಆಡಿಸಿದ ತಮ್ಮಂದಿರಲ್ಲವೇ?!, ಅಕ್ಕನನ್ನು ನೋಡಲು ಬಂದಾರು....! ಬರಲಿಲ್ಲ ಅನ್ನುವ ಕಂದರದಲ್ಲಿಯೂ ಇಣುಕಿ ನೋಡುವುದು, ಮದುವೆಯಾಗಿ ಹೋದ ಹೆಮ್ಮನಸ್ಸುಗಳ ಕನಸು. ಅಮ್ಮನೂ ಹಾಗೇ ಮಾಡಿದಳು. ದೊಡ್ಡ ಪರೀಕ್ಷೆ ಮುಗಿದು ಮನೆಗೆ ಬಂದಿದ್ದ ನಾನು, ಅಮ್ಮನ ತೊಳಲಾಟವನ್ನು ಅವಳ ಭಾವದಲ್ಲಿ ಸೆರೆ ಹಿಡಿಯ ತೊಡಗಿದ್ದೆ.
          ಹಾಗೇ ದಿನಗಳು ಓಡುತ್ತಿದ್ದಂತೆ, ಒಂದು ಶುಕ್ರವಾರದ ದಿನ ತನ್ನ ಕಬ್ಬಿಣದ ಪೆಟ್ಟಿಗೆಯನ್ನು ತಡಕಾಡಿದ್ದಳು. ಆಗ ಸಿಕ್ಕಿತು ಹನ್ನೆರಡು ವರ್ಷಗಳ ಹಿಂದೆ  ಅಜ್ಜಿ  ಅವಳ ಮದುವೆಗೆ ಉಡಲು ತೆಗೆದ ಒಂದು ಸೀರೆ. ಚೆಂದದ ಸೀರೆ,  ಹೂಗಳ ಕುಸುರಿ, ಮಧ್ಯೆ ಮಧ್ಯದಲ್ಲಿ ಬಣ್ಣದ ಗೆರೆಗಳು.  ತಂಗಿಯ  ಒಂದು ಸಣ್ಣದಾದ ಅಂಗಿಯ ಅಳತೆಗೆ ತಕ್ಕಂತೆ, ಕಬ್ಬಿಣದ ಕತ್ತಿಯಿಂದ  ಮದುವೆ ಸೀರೆಯ  ಒಂದು ಭಾಗವನ್ನು ಕತ್ತರಿಸಿದ್ದಳು. ಕೈಗೆ-ಕೊರಳ ಪಟ್ಟಿಗೆ- ಸೊಂಟದ ಭಾಗಕ್ಕೆ ಎಲ್ಲವೂ ಸೇರಿದಂತೆ  ಮಗುವಿನ ದೇಹಕ್ಕೆ ಹೊಂದುವಂತ ಎಲ್ಲಾ ಭಾಗಗಳ ಅಳತೆಯ ತುಂಡು ಮಾಡಿ , ಬೇರೆ ಬೇರೆ ಇಟ್ಟಿದ್ದಳು. ಹಾಗೇ ಅವುಗಳನ್ನು ಪೆಟ್ಟಿಗೆಯೊಳಗೆ ಕಟ್ಟಿ ಹಾಕಿ ಬೀಗ ಹಾಕಿದ್ದಳು.
          ಬೆಳಿಗ್ಗೆ ತೋಟದ ಕೂಲಿ ಕೆಲಸ ಮುಗಿಸಿ ಬಂದು, ಸಂಜೆ ರಾತ್ರಿ ಎಲ್ಲರ ಊಟವಾದ ಮೇಲೆ ಅಮ್ಮನ ಅಂಗಿ ಹೊಲಿಯುವ ಕೆಲಸ ಪ್ರಾರಂಭವಾಯಿತು. ಸೂಜಿ ನೂಲಿನಿಂದ ಕೈಯಿಂದ ಪ್ರತೀ ದಿನ ರಾತ್ರಿ ಹೊಲಿಯ ತೊಡಗಿದಳು. ದಿನಗಳು ಉರುಳುತ್ತಲೇ ಅವಳ  ಅಂಗಿಯ ಕನಸು ಒಂದೊಂದಾಗಿ ರೂಪ ಪಡೆಯ ತೊಡಗಿತು. ಪ್ರಾರಂಭಿಸುವ ಒಂದೆರಡು ದಿನ ಹೆಚ್ಚು ಮೌನವಹಿಸುತ್ತಿದ್ದ ಅಮ್ಮ, ಅಂಗಿಯು ಒಂದು ರೂಪಕ್ಕೆ ಬರುತ್ತಿದ್ದಂತೆ ಕೊಂಚ ಸಂತೋಷ-ನಗು ಅವಳ ಮುಖದಲ್ಲಿ  ಅರಳ ತೊಡಗಿತ್ತು. ನಮ್ಮೆಲ್ಲರೊಂದಿಗೆ  ಅಗತ್ಯಕ್ಕಿಂತ ಹೆಚ್ಚು ಮಾತನಾಡ ತೊಡಗಿದಳು.
          ಕಳೆದ ವಾರದ ಶುಕ್ರವಾರದ ಸಂತೆ ದಿನದಿಂದ,  ಇನ್ನೊಂದು ಶುಕ್ರವಾರದ ಸಂತೆ ದಿನದ ಹಿಂದಿನ ರಾತ್ರಿಗೆ ತಂಗಿಯ ಅಂಗಿ ಸಿದ್ಧವಾಯಿತು. ಅದು ಹೇಗಿತ್ತು ಅಂದರೆ ದರ್ಜಿಯೂ ನಾಚಬೇಕು..! ಅಮ್ಮನ ಕುಸುರಿಯ ಅಪ್ಪಟ ಕೈ ಚಳಕ, ಅಷ್ಟೇ ನಾಜೂಕಾಗಿ ರೂಪುಗೊಂಡ ಅಂಗಿಯಲ್ಲಿ ನೃತ್ಯವಾಡುತ್ತಿದ್ದವು. ಹೆಣ್ಣು ಮಗು ಬೇಕೆಂಬ ಅವಳ ಆಸೆಗೆ ಹುಟ್ಟಿದ ತಂಗಿಯಂತೆ , ಆ ಅಂಗಿ ಅವಳ ಕೈಯಲ್ಲಿ ಲಾಸ್ಯವಾಡ ತೊಡಗಿತ್ತು. ಎಂದಿನ ಶುಕ್ರವಾರದ ಬೆಳಿಗ್ಗೆ ಬೇಗ ಎದ್ದ  ಅವಳು, ತಂಗಿಯನ್ನು ಸ್ನಾನ ಮಾಡಿಸಿ , ಆ ಕನಸಿನ ಮೂರ್ತ ರೂಪದ ಅಂಗಿಯನ್ನು ತೊಡಿಸಿದ್ದಳು. ಹಾಗೆಯೇ, ಅಡುಗೆ ಒಲೆಯ ಮುಂದೆ ಕುಳಿತು  ಯಾರಾದರೂ ನೋಡಿದರೆ ದೃಷ್ಠಿಯಾಗದೆಂಬಂತೆ ಮಗುವಿನ ಕೆನ್ನೆಗೆ ಒಂದು ಸಣ್ಣ  ಕಪ್ಪು ಬೊಟ್ಟು ಇಟ್ಟಳು. ಒಂದು ಸಂತಸದ ಕಣ್ಣೀರು ಮಗುವಿನ ಅಂಗಿಯ ಮೇಲೆ ಬಿದ್ದಿತು.
          ಮಗುವನ್ನು ಮನೆಯ ಹೊರಗೆ ಅಂಗಳದಲ್ಲಿ  ಆಟವಾಡಲು ಬಿಟ್ಟಳು. ಅದು ಗೋಡೆ ಹಿಡಿದು ಹೆಜ್ಜೆ ಹಾಕ ತೊಡಗಿತ್ತು, ಜೊತೆಗೆ ಅಂಗಿಯೂ. ಅದರ ಪಕ್ಕದಲ್ಲಿ ನಾನು ನಿಂತು ಸಂತಸ ಪಡುತ್ತಿರುವಾಗ, ಮನೆಯ ಬಾಗಿಲಲ್ಲಿ ಕುಳಿತ ಅಮ್ಮನ ಕಣ್ಣಿನಲ್ಲಿ ಹನಿಯಾಗುತ್ತಿತ್ತು. ಅವಳ ಸೀರೆ ಸೆರಗು ಅದನ್ನು ಒರೆಸುತ್ತಿತ್ತು.  ಒಂದು ಕನಸು ಸಾರ್ಥಕಗೊಂಡು ಜೀವ ಪಡೆದ ಭಾವ. ಏಕಮ್ಮ ಅಳುತ್ತಿದ್ದೀಯ?. ಉಕ್ಕಿ ಬಂದ ಅವಳ ಸಂತಸದ ದುಃಖ್ಖ, ನನ್ನನ್ನು ಭಾಚಿ ತಬ್ಬಿಕೊಂಡಿತು. ಹಾಗೆಯೇ ಉಸುರಿದಳು " ಮಗನೇ... ನೀನು ದೊಡ್ಡವನಾಗಿ ಕೆಲಸಕ್ಕೆ ಸೇರಿದ ಮೇಲೆ ನನಗೊಂದು ಸೀರೆ ತಂದು ಕೊಡುತ್ತೀಯಾ? ನಿನ್ನ ತಂಗಿಗೆ ಒಂದು ಚೆಂದದ ಬಟ್ಟೆ ತೆಗೆದುಕೊಡು ಮಗನೇ". ಹಾಗಂತ ಜಗನ್ಮಾತೆ ಹೆಣ್ಣು ಜನ್ಮದ ಮಾತು, ನಾನು ದಿನನಿತ್ಯ ಕೈ ಮುಗಿಯುವ ದೇವರ ಭಾವಚಿತ್ರದ ಮುಂದಿನ ಪ್ರಾರ್ಥನೆಯಾಯಿತು. ಆ ಕ್ಷಣ ಅಮ್ಮನ ದುಃಖ್ಖಕ್ಕೆ ನಾನು ನಗು ಸೇರಿಸಿದ್ದೆ. ಮಕ್ಕಳ ಬಗೆಗೆ ಭಾವ ತುಂಬಿದ ಅಮ್ಮನ ಬದುಕಿಗೆ, ನಾನು ಭಾವವಾದೆ, ಜಗತ್ತಾದೆ. ಹಾಗೆಯೇ ಬದುಕಾದೆ.

ಮಂಗಳವಾರ, ಜೂನ್ 21, 2011

ರಂಗೋಲಿ ಇಡುವ ಹುಡುಗಿ

ಪಕ್ಕದ ಮನೆಯ ಹುಡುಗಿ
ದಿನವೂ ಇಡುತ್ತಾಳೆ
ಅಂಗಳದಲ್ಲಿ...
ಚಿತ್ರ-ವಿಚಿತ್ರ ರಂಗೋಲಿ
ಅವಳು ಇಡುವ ರಂಗೋಲಿ ಚಿತ್ರದಲಿ
ವಿಚಿತ್ರಾಕಾರದ
ಚುಕ್ಕಿ ಚುಕ್ಕಿ ಸುರುಳಿ
ಅವಳ ಚಿತ್ತದ ಕನಸಿನ ಬಳ್ಳಿ..!
ಕಾಣುವ ಕನಸುಗಳು
ಪುಟಿದೇಳುವ ಆಸೆಗಳು
ರಂಗೋಲಿಯಲ್ಲಿ ಚುಕ್ಕಿಯಾಗಿ
ಅವತರಿಸಿದವು.

ಮೌನದ ಮಾತುಗಳು
ಬೂದಿ ಮುಚ್ಚಿದ ಭಾವಗಳು
ಅಂತರಾಳದ ಪಿಸುದನಿಗಳು
ಚೌಕಾಕೃತಿಯಾಗಿ-
ತ್ರಿಕೋನ ಬಿಂದುಗಳಾಗಿ
ರಂಗು ರಂಗಾಗಿ ಹೆಣೆದುಕೊಂಡುವು
ಒಳಗೊಳಗೆ ಕುದಿದು
ಅಸಂಖ್ಯಾತ ಗೋಪುರಗಳಾಗಿ
ಅಂಗಳದಲಿ ಪಡಿ ಮೂಡಿದವು..!

ಅವಳ ಕನಸುಗಳೆಲ್ಲ ರಂಗೋಲಿಯಲಿ
ಆಸೆಗಳೆಲ್ಲ ಚುಕ್ಕಿಗಳಲಿ
ಭಾವಗಳೆಲ್ಲಾ ರೇಖೆಗಳಲ್ಲಿ
ಒಂದಕ್ಕೊಂದು ರೂಪ ಪಡೆದು
ಒಂದರ ಮೇಲೊಂದು ಕುಳಿತು
ಸುರುಳಿ ಸುರುಳಿ ಬಳ್ಳಿಯಾಗಿ ಅರಳಿಕೊಂಡವು..!

ಇದೇನೇ ಹುಡುಗಿ...
ಎಷ್ಟು ಮುದ್ದಾಗಿದೆ
ನಿನ್ನ ಕೈಯಲ್ಲರಳಿದ ರಂಗೋಲಿ
ಎಂದು ಉದ್ಘರಿಸಿದ್ದೆ.
ಕಣ್ಣಂಚಿನಲಿ ಆಸೆಗಳು ಚಿಗುರಿ
ಕೆನ್ನೆ- ತುಟಿಯಂಚಿನಲಿ ರಾಚಿತು
ಕೆಂಪಾದ ರಂಗೋಲಿ
ಮುಖದ ತುಂಬೆಲ್ಲ  ಸುಳಿದಾಡಿತು
ನೂರು ಕನಸಿನ ಬಳ್ಳಿ...!

ಮುಗ್ಧ ಹುಡುಗಿ...
ಹೃದಯದಾಳದಲ್ಲಿ ಜೀವಿಸುತ್ತಾಳೆ
ಹೃದಯಕ್ಕಿಳಿದವರಿಗೆಲ್ಲಾ
ಸಾವಿರ ಕಥೆ ಹೇಳುತ್ತಾಳೆ.

-ರವಿ ಮೂರ್ನಾಡು

"ಪ.ಗೋ. ಕಾಲಂ" ಜಗತ್ತಿನಲ್ಲಿ ಪತ್ರಕರ್ತನಿಗೊಂದು "ಸರ್ಟಿಫಿಕೇಟ್"

        ಪ.ಗೋ. ಜಗತ್ತಿನ ಪದಗಳ  ಹಂದರದಲ್ಲಿ ಒಬ್ಬ " ವಿಲನ್‍" ಸೃಷ್ಠಿಯಾಗುತ್ತಾನೆ . ಅವನನ್ನು ಬುದ್ಧಿವಂತ ಹುಚ್ಚ ಅನ್ನುತ್ತೇವೆ. ಅದು ಕೊಡಿಯಾಲ್‍ ಬೈಲ್‍ ನವಭಾರತ ಪತ್ರಿಕೆಯಿದ್ದಾಗ ಪತ್ರಿಕಾ ಪ್ರಸರಣಾ ವಿಭಾಗದ ಮುಖ್ಯಸ್ಥ ಕಾಮತ್‍. ಅದಕ್ಕೆ ದಿವಂಗತ ಪ.ಗೋ.ರವರು "ಹಿತ್ತಾಳೆ ದೂರುಗಂಟೆ" ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ತಮ್ಮ " ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು" ಸಂಕಲನದಲ್ಲಿ  ಹಿತ್ತಾಳೆ ದೂರುಗಂಟೆಯ ಪಾತ್ರಧಾರಿ  ವಿಲಕ್ಷಣವಾಗಿ ಎದ್ದು ನಿಲ್ಲುವಂತದ್ದು. ಹೀಗೂ ಉಂಟೆ...?! ಅನ್ನುವ ಒಂದು ಪ್ರಶ್ನೆ. ಪತ್ರಿಕಾ ಕಾರ್ಯಾಲಯದಲ್ಲಿ ಅಚಾನಕ್ಕಾಗಿ ಸೃಷ್ಠಿಯಾಗುತ್ತವೆ, ಇಲ್ಲದಿದ್ದರೆ ಸೃಷ್ಠಿಸುತ್ತಾರೆ . ಎಲ್ಲಾ  ಖಾಸಾಗಿ ಸಂಸ್ಥೆಯಲ್ಲಿ  ಇಂತಹ "ಶಕುನಿ"ಗೊಂದು ಹುದ್ದೆ ಉಂಟೇ ಉಂಟು. ಪ.ಗೋ.ರವರು ಮೌನವಾಗಿ ನವಭಾರತ ಕಚೇರಿ ಬಿಟ್ಟು ಹೋದಾಗ, ಕಚೇರಿಯ ಬಾಗಿಲಿಗೆ ತುಕ್ಕು ಹಿಡಿಯಬಾರದಿತ್ತೋ ಆನ್ನಿಸಿತು. ಬದುಕಿನ ಗೋಡೆ ಬಿರುಕಿಟ್ಟ ಸನ್ನಿವೇಶಕ್ಕೆ, ಪತ್ರಿಕಾ ಬದುಕಿಗೆ ಛೀಮಾರಿ ಹಾಕುವಷ್ಟು ವ್ಯಥೆಯಾಗುವಂತದ್ದು.
          ಇವತ್ತಿಗೂ ಮಾತಾಡುತ್ತಿದೆ.... ಮನುಷ್ಯ ಬದುಕಿಗೆ  ಸವಾಲು ಹಾಕಿದ ಮಾತು.  "ನಾನು ಪತ್ರಿಕೆ ಹುಟ್ಟು ಹಾಕುವ ಕನಸು ಕಂಡಿದ್ದು ತಪ್ಪಾಯಿತು..!" ಅಂತ. ಬದುಕಿನ ಸ್ಥಿತ್ಯಂತರದಲ್ಲಿ ಒಮ್ಮೊಮ್ಮೆ ಕನಸುಗಳು ಈಟಿ ಇರಿದಂತೆ ಅಣಕಿಸುತ್ತವೆ. ಮಂಗಳೂರಿನ ಕಡಲ ಮರಳ ಕಣಗಳಿಗೆ ಇದರ ಪರಿಚಯ ಉಂಟು. ಅಲೆಗಳು ದಡಕ್ಕೆ ಬಡಿದು ಎಚ್ಚರಿಸಿ ಹೋಗುತ್ತಿವೆ... ಆ ಒಂದು ಜಗತ್ತಿನ ವಿಸ್ತಾರದಲ್ಲಿ ಜೀವನದ ಸಾರ್ಥಕ್ಯಕ್ಕೆ  ಮನಸ್ಸುಗಳು ತೆರೆದುಕೊಳ್ಳಲಿಲ್ಲ . ಪಡ್ಯಾನ ಗೋಪಾಲಕೃಷ್ಣರ  ರೆಕ್ಕೆ ಮುರಿದ ಮಾತುಗಳ ಹಕ್ಕಿಯ ಕಲರವ ಕೇಳಿಸುತ್ತಲೇ ಇದೆ.... ಕನಸುಗಳ ಮೂಟೆ ಹೊತ್ತ ದೋಣಿ ಕಡಲ ಮಧ್ಯದಲ್ಲಿ ಈಜುತ್ತಿದೆ....!
          " ಪೇಪರ‍್ ಕೆಲ್ಸ  ಅದೇನು ಮಹಾ? ಕಾಸೆಸೆದ್ರೆ ಕೈ ನೆಕ್ಕೋ ನಾಯಿಗಳು  ಎಷ್ಟೋ ಸಿಗ್ತಾವೆ"  ಅಂತ ಒಂದು ಕಡೆ ಹೇಳುತ್ತಾರೆ. ಮಾತುಗಳು ಪದಗಳಾಗಿ ಮಾತಾಡುವಾಗ ನೈಜವಾದುದು ಅನ್ನಿಸಿತು.  ತನ್ನ ಸ್ವಂತಿಕೆ ಬಿಟ್ಟು, ಗುಲಾಮರಾಗುತ್ತಿರುವ ಇಂದಿನ ಸಮಾಜದಲ್ಲಿ, ಗುಲಾಮಗಿರಿಗೆ ಪರೋಕ್ಷವಾಗಿ ಪ.ಗೋ.ರವರು ಎಸೆದ ಬಾಣವಿದು. ಸ್ವಹಿತಾಸಕ್ತಿಗೆ "ತಿಗಣೆ"ಗಳ ಹಾಗೆ ರಕ್ತ ಕುಡಿಯುತ್ತಿರುವ ಸಮಾಜದ ಮುಖವಾಣಿ ಹೊತ್ತ  ಘನತೆಯ ಡಂಭರು, ಹೇಗೇ ಹೇಳಿದರೋ ಹಾಗೆ ಸೆರೆಹಿಡಿದು ಬಿಟ್ಟಿದ್ದಾರೆ. ನಾವೆಲ್ಲರೂ ಅಧುನಿಕ ಸಮಾಜದಲ್ಲಿ ವಿದ್ಯಾವಂತೆರೆನ್ನುವ ಶಾಲೆ-ಕಾಲೇಜುಗಳ ಸರ್ಟಿಫಿಕೇಟ್ ಗಿಟ್ಟಿಸಿ ದುಡಿಯುತ್ತಿರುವ ಗುಲಾಮರು. ಅದಕ್ಕೆ ಬ್ರಿಟೀಷರು  ಭಾರತ ಬಿಟ್ಟು ಹೋಗುವಾಗ ತರಬೇತಿ ನೀಡಿದ್ದ ಅವರ ನಾಯಿಗಳನ್ನು  ವಿವಿಧ ಹಂತದಲ್ಲಿ  ಪ.ಗೋ. ತರಾಟೆಗೆ ತೆಗೆದುಕೊಂಡಿದ್ದಾರೆ.
          ಕಾಲಂ ಸಾಹಿತ್ಯ ಅನ್ನುವ ಹೊಸ ಒಂದು ಕನ್ನಡದ ಆಯಾಮವನ್ನು ಪ.ಗೋ.ಜಗತ್ತಿನಲ್ಲಿ ಕನ್ನಡ ಸಾಹಿತ್ಯ ನೋಡುತ್ತದೆ. ವಸ್ತುನಿಷ್ಠ ವಿಚಾರವನ್ನು ಹಾಗೇ ಪದಗಳಲ್ಲಿ ಕಟ್ಟಿ ಗಟ್ಟಿಗೊಳಿಸಿದ ಉದಾಹರಣೆಗೆ ಇನ್ನೊಂದು  ಇತಿಹಾಸವನ್ನು ನೋಡಿಲ್ಲ. ಅದು ದೇಹವಿಲ್ಲದೆಯೂ ಮಾತಾಡುವಂತದ್ದು. ಕೆಲವೊಂದು ವಿಷಯಗಳು ಪಿಸುಮಾತಾಗಿದ್ದು. ನೇರವಾಗಿ ಜಗತ್ತನ್ನು ತೆರೆದು ಘಟನೆಯನ್ನು ನಿರೂಪಿಸುವ ತಂತ್ರ, ಈಗಿನ ಹಲವರು ಅನುಸರಿಸುತ್ತಿರುವುದಕ್ಕೆ ಸಾಕ್ಷಿಗಳು ಸಿಗುತ್ತವೆ. ಮನುಷ್ಯ ಈ ಜಗತ್ತು ಬಿಟ್ಟು ಹೋಗುವಾಗ ಏನಾದರು ಉಳಿಸಿ ಹೋಗಿದ್ದರೆ ನೆನಪಾಗುತ್ತಾನೆ. ಅದರಲ್ಲೂ ತನ್ನದೇ ಆದ ಸ್ವಂತಿಕೆಯನ್ನು ಇತರರು ಅನುಸರಿಸುವಂತೆ ಮಾಡುವುದು ಇನ್ನೋ ದೊಡ್ಡ ಮಾತು. ಅದಕ್ಕೆ ಮೈಕೆಲ್ ಜಾಕ್ಸನ್ ಉದಾಹರಣೆ. ಅಂದರೆ,ತನ್ನದೇ ಜಗತ್ತಿನ ಒಂದು ಹೆಜ್ಜೆ ಗುರುತನ್ನು ಪ.ಗೋ.ರವರು ಬಿಟ್ಟು ಹೋದರು. ಇಂದಿಗೂ ಅದರ ನಿಜದ ಆಳವನ್ನು ಅಳತೆ ಮಾಡಲಾಗಲಿಲ್ಲ. ಈ ತಲೆಮಾರು, ಮತ್ತೊಂದು ತಲೆಮಾರಿಗೂ... ಪ.ಗೋ. ಕಾಲಂ ಸಾಹಿತ್ಯದ ಮೊನಚು ಜೀವಂತವಾಗಿರುತ್ತದೆ.
          ಗಬ್ಬೆದ್ದು ನಾರುತ್ತಿರುವ ಸಮಾಜದ ಕೊಳೆಯನ್ನು ತೊಳೆಯುವ ಪತ್ರಕರ್ತನಿಗೆ ತನ್ನ ಮೈ ಮೇಲಿರುವ ಕೊಳೆಯ ಬಗ್ಗೆ ಅರಿವಿರುವುದಿಲ್ಲ. ಈ ವಾಕ್ಯಕ್ಕೆ ಒಗ್ಗುವ ಪತ್ರಕರ್ತರ ಒಂದು ಗುಂಪು ಉಂಟು. ಅಂದ ಹಾಗೆ ತೊಳೆಯಲು ಸಮಯವೂ ಇರುವುದಿಲ್ಲ. ಈ ವಾಕ್ಯಕ್ಕೂ ಒಗ್ಗುವ ಪತ್ರಕರ್ತರ ಗುಂಪೂ ಉಂಟು. ಅದಕ್ಕೆ ಉದಾಹರಣೆಗೆ ಸಿಗುವವರು ದಿ. ಪ. ಗೋ.ರವರು. ಬದುಕಿನ ಸವಾಲುಗಳನ್ನು  ಸ್ವೀಕರಿಸುವುದು ಅಂದರೆ, ಅರ್ಧ ವಯಸ್ಸು ಮುಗಿದಂತೆ.  ಒಂದೇ ದಿಕ್ಕಿಗೆ ಛಲ ಬಿಡದ ವಿಕ್ರಮನಂತೆ ಅಲೆದಾಡುವುದು ವಿಸ್ತ್ರುತ ಬದುಕಿನಲ್ಲಿ ಮೈಲುಗಲ್ಲಾಗುವಂಹದ್ದು. ಅದನ್ನು ಅವರು ಮಾಡಿದರು. ’ವಿಶ್ವ ಕರ್ನಾಟಕ" ಪತ್ರಿಕೆಯಿಂದ  ತಮ್ಮದೇ ಆದ " ವಾರ್ತಾ ಲೋಕ " ಪತ್ರಿಕೆಯವರೆಗೆ  ಕಪ್ಪು ಮಸಿಯೊಂದಿಗೆ ನಡೆಸಿದ ಹೋರಾಟದ  ಇತಿಹಾಸ ಅವರು ಬಿಟ್ಟು ಹೋದ ಲೇಖನಿಯಲ್ಲಿ ಅಡಗಿ ಕುಳಿತಿದೆ. ಒಂದು ಹಂತದಲ್ಲಿ " ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು" ಸಂಕಲನ ವಸ್ತುನಿಷ್ಠ ಪತ್ರಕರ್ತನ ಬದುಕು ಅನ್ನುವುದಕ್ಕೆ ಇನ್ನೊಂದು ಹೆಸರು. ಪತ್ರಿಕೆ ಕೈಯಲ್ಲಿಡಿದು ಓದುತ್ತಿರುವ  ಓದುಗನಿಗೆ,ಆ ದಿನದ ಸುದ್ಧಿಗಳು ಮತ್ತು ಪುಟಗಳು ಸುಂದರವಾಗಿ ಕಾಣುತ್ತವೆ. ಅದರ ಹಿಂದಿನ ಶ್ರಮದ ಕೈಗಳು ಅಗೋಚರ. ಅದರ ಪ್ರತಿಫಲ ಉಣ್ಣುವುದು ಪತ್ರಿಕೆ ಮತ್ತು  ಅದರ ಸಂಪಾದಕ. ಈ ವಸ್ತುಸ್ಥಿತಿಯನ್ನು ಸ್ಪಷ್ಟವಾಗಿ ಪ.ಗೋ.ರವರು ಪದಗಳಲ್ಲಿ ಕಟ್ಟಿ ಇಟ್ಟಿದ್ದಾರೆ.
          ಯಾವುದೇ ಪತ್ರಿಕೆಯನ್ನು ಕೈಗೆತ್ತಿಕೊಂಡರೂ, ಸ್ಪಷ್ಟವಾಗಿ ಹೇಳುವ ಒಂದು ಉತ್ತರ ಉಂಟು. ಅದು ಒಂದು ದಿಕ್ಕಿಗೆ ವಾಲಿಕೊಂಡಿರುವುದು. ಅದು ರಾಜಕೀಯವಿರಬಹುದು, ಜಾತಿ-ಪಂಥ ಮತ್ತು ವ್ಯಕ್ತಿಗತ " ಪರಾಖ್"ಗಳಿಗೆ ಅಂಟಿಕೊಂಡಂತೆ. ಇದು ಅವುಗಳ ಧರ್ಮ ಅಂತ ಅವುಗಳು ಪ್ರತಿಪಾದಿಸುತ್ತವೆ. ಅದರಲ್ಲಿ ಎಷ್ಟು ಪತ್ರಿಕೆಗಳು ಸಮಾಜವನ್ನು ದಿಕ್ಕು ತಪ್ಪಿಸುವ ಮಾರ್ಗ ಹಿಡಿದು "ಪೀತ" ಪತ್ರಿಕೆಗಳ ಪಟ್ಟಿಯಲ್ಲಿವೆಯೋ ಎಂದು ವಿಶಾಲ ಮನಸ್ಸಿನ ಓದುಗರೇ ನಿರ್ಧರಿಸಬೇಕು.
          ದಿನ ಬೆಳಗಾಗುವುದರೊಳಗೆ ಲಕ್ಷಾಂತರ ಪತ್ರಿಕೆಗಳು ಕಾಗದಗಳಲ್ಲಿ- ಅಂತಾರ್ಜಾಲಗಳಲ್ಲಿ ಪ್ರಕಟಗೊಳ್ಳುತ್ತವೆ. ಕನ್ನಡ ಜಾಗ್ರತಿಯ ಬಗ್ಗೆ ರಾಗ ಎಳೆಯುವ ನಾವು "ಕನ್ನಡದ ಸ್ವಂತಿಕೆಯ ಪತ್ರಿಕೋದ್ಯಮವನ್ನು ಕಾಣುತ್ತಿದ್ದೇವೆಯೇ ಅನ್ನೋದಕ್ಕೆ ಒಂದು ನಿಮಿಷ  ಆಲೋಚನೆ ಮಾಡುತ್ತೇವೆ. ಕನ್ನಡದ ಬಗ್ಗೆ ಮಾತಾಡುವಾಗ ಅನ್ಯ ಭಾಷೆಯನ್ನು ಯದ್ವಾ-ತದ್ವಾ ತರಾಟೆಗೆ ತೆಗೆದುಕೊಳ್ಳುವುದು ನಮ್ಮೊಳಗೇ ಉದ್ಭವಿಸುವ ಆವೇಶ. ಇವತ್ತು ಕನ್ನಡ ಅಭಿಮಾನವನ್ನು ಭಿತ್ತರಿಸಲು ಕನ್ನಡ ಪತ್ರಿಕೆಗಳಲ್ಲಿ ಬ್ರಿಟೀಷ್ ಸಿದ್ಧಾಂತ- ವಿಧಾನಗಳ ಅಳವಡಿಸಿಕೊಳ್ಳಬೇಕಾಯಿತು. ಪ.ಗೋ. ಇತ್ತೀಚಿನವರೆಗೂ ಹೇಳಿದ್ದರು, ಭಾರತದಲ್ಲಿ ಪತ್ರಿಕೆಗಳ ಪರಿಚಯ ಮಾಡಿಕೊಟ್ಟವರು ಇಂಗ್ಲೀಷರು. ಮೊತ್ತಮೊದಲ ಭಾರತದ ಸಂಪಾದಕ ಭಾರತೀಯರು ಅಂತ ಎದೆತಟ್ಟಿಕೊಳ್ಳುವ ಉದಾಹರಣೆಯಿಲ್ಲ. ಭಾರತದ ಮೊತ್ತಮೊದಲ ಸಂಪಾದಕ ಜೇಮ್ಸ್ ಗಸ್ಟಸ್ ಹಿಕ್ಕಿ ಎಂಬ ಬ್ರಿಟೀಷನಿಗೆ ಈ ಗೌರವ ಸಲ್ಲುತ್ತದೆ. ಈ ವಿಷಯವನ್ನು ತಮ್ಮ ಬರಹ ಬದುಕಿನಲ್ಲಿ ಸೇರಿಸುವಾಗ  ಕನ್ನಡ ಜಾಗೃತಿಯ ಬಗ್ಗೆ ಪ.ಗೋ.ರವರು  ಉತ್ತರ ಕೊಟ್ಟು ಹೋಗಿದ್ದಾರೆ. ಕನ್ನಡ ಅಭಿಮಾನದ ಬಗೆಗಿನ  "ಸ್ಲೋಗನ್‍"ಗೆ ಯಾವ ನಂಟು? ಬ್ರಿಟೀಷರು  ಊಟ ಮಾಡಿ ತೊಳೆಯದೇ ಇಟ್ಟ ಅವರ ತಟ್ಟೆಗಳು ಈಗಲೂ ಇದೆ. ಅದನ್ನು ತೊಳೆಯದೆ ಅದರಲ್ಲೆ ಊಟ ಮಾಡುವ ಕನ್ನಡದ ಸ್ವಂತಿಕೆಯ ಬಗ್ಗೆ ಬೊಬ್ಬೆ ಹೊಡೆಯುವ ಸಂಸ್ಥೆಗಳಿಗೆ- ಪತ್ರಿಕೆಗಳಿಗೆ ಪ.ಗೋ. ಪರೋಕ್ಷವಾಗಿ  ಖೇಧ ವ್ಯಕ್ತ ವ್ಯಕ್ತಪಡಿಸಿದ ಸನ್ನಿವೇಶಗಳುಂಟು.
          "ಬಾಯಾರಿಕೆಯಾದರೆ ಮಸಿ ಕುಡಿದು, ಹಸಿವೆಯಾದರೆ ನ್ಯೂಸ್‍ಪ್ರಿಂಟ್ ಕಾಗದಗಳನ್ನೇ ಹರಿದು ತಿನ್ನುವವನೇ ಪತ್ರಿಕೋದ್ಯಮಿ" ಅಂತ ಪತ್ರಿಕಾ ಜಗತ್ತಿಗೆ ಒಂದು ಹೆಸರು ಬರೆದ ಪ.ಗೋ., ಅದನ್ನು ಸ್ವತಃ ಅನುಭವಿಸಿಯೇ ಭಾಷ್ಯಾ ಬರೆದರು. ತಡ ರಾತ್ರಿಯವರೆಗೂ ಕೆಲಸ ಮಾಡಿ ನೀರೆನ್ನುವ ಜಾಗದಲ್ಲಿ ಮಸಿ ಕುಡಿದ ಅವರ ಘಟನೆ ಪತ್ರಿಕಾ ಬದುಕಿನ ಇತಿಹಾಸದಲ್ಲಿ  ಅಚ್ಚಳಿಯದೆ ಉಳಿಯುವ ವ್ಯಥೆ. ಇದೇ ಪ.ಗೋ.ರಂತಹ ಹಲವರು ಈಗ ಇತಿಹಾಸವಾಗಿದ್ದಾರೆ. ಕೆಲವರು ಹೇಳ ಹೆಸರಿಲ್ಲದಂತೆ. ಅದು ಆ ಪತ್ರಿಕೆಯ ಉನ್ನತಿ ಮತ್ತು ಅದರ ಚಲಾವಣೆಯಲ್ಲಿ ಕಂಡು ಬರುವುದಿಲ್ಲ. ಬದುಕಿದ್ದಾಗ ಹೆಸರಿತ್ತು, ಇಲ್ಲವಾದ ಮೇಲೆ ಆ ಜಗತ್ತೇ ಮಾಯಾವಾಗುತ್ತವೆ. ಪತ್ರಿಕೆಯ ಕಾರ್ಯ ತಂತ್ರದಲ್ಲಿ ಹೊಸತೊಂದು ಮಾದರಿಯನ್ನು ಅವರು ತಂದಿದ್ದರೂ ಕೂಡ ತಂತ್ರ ನಡೆಯುತ್ತಿರುತ್ತದೆ, ವ್ಯಕ್ತಿ ಇರುವುದಿಲ್ಲ. ಪ.ಗೋ.ರವರ ವಿಷಯದಲ್ಲಿ ಇದು ಭಿನ್ನವಾಗಿರುವಂತಹದ್ದು, ಅವರೂ ಇದ್ದಾರೆ  ಅನ್ನುವ ತಂತ್ರವೂ ಉಂಟು.
          ಕನಸುಗಳ ಬಗ್ಗೆ ಒಂದಿಷ್ಟು ಮಾತಾಡುವಾಗ,ಆಶಾಭಾವನೆಯ ಬಗ್ಗೆ ಸಂಶಯ ಪಡುವಂತಾಗುತ್ತದೆ. ಭಿಕ್ಷುಕನೂ ರಾಜನಾಗುವ ಕನಸು ಕಾಣುವುದು ತಪ್ಪು ಅಂತ ಕಾನೂನು ಸಿದ್ಧವಾದರೋ?. ಹಾಗಿದ್ದಲ್ಲಿ, ಮನುಷ್ಯನ ಮನಸ್ಸಿಗೊಂದು ಸಂವಿಧಾನ ಸೃಷ್ಥಿಯಾಗಬೇಕಾಗುತ್ತದೆ. ತಾನೆ ಪ್ರೀತಿಸಿದ  ವೃತ್ತಿಯಲ್ಲಿ ತನ್ನದೊಂದು ವ್ಯವಸ್ಥೆಯನ್ನು ಕಲ್ಪಿಸುವ ಕನಸನ್ನು ಕಾಣುವುದು ತಪ್ಪೆ ಅನ್ನುವ ಪ್ರಶ್ನೆ ಪ.ಗೋ. ಬದುಕಿನಲ್ಲಿ ಕಾಣುವಂತದ್ದು. ತಾನೊಂದು ಬಗೆದರೆ ವಿಧಿ ಇನ್ನೊಂದು ಬರೆಯಿತು ಅನ್ನುವಂತಾಯ್ತು. ಕನಸು ಹಾಗಿರಲಿ, "ಬದುಕಿಗಾಗಿ ಹೋರಾಡುವುದು" ಮುಖ್ಯ ಅಂತ  " ವಿಚಿತ್ರ ಸೃಷ್ಠಿಯ ಲೋಕದಲ್ಲಿ ಮತ್ತು ಅಂಕಣ ಬರಹಗಳು" ಸಂಕಲನದಲ್ಲಿ  ಸಾರ ದಾಖಲಾಗಿದೆ. ತುಕ್ಕು ಹಿಡಿದ ಸಮಾಜದ ಬದಲಾವಣೆಗೆ  ಪತ್ರಕರ್ತ ಸಮಾಜದ ಒಳಿತಿಗಾಗಿ ಬದುಕನ್ನು ಕಂಡುಕೊಳ್ಳುತ್ತಾನೋ ಅಥವಾ ಬದುಕಿಗಾಗಿ ಪತ್ರಕರ್ತನಾಗುತ್ತಾನೋ ಅನ್ನುವುದು ಪ.ಗೋ. ಬದುಕಿನಲ್ಲಿ ಕಂಡುಕೊಳ್ಳಬೇಕಾದ ಉತ್ತರ.

ಸೋಮವಾರ, ಜೂನ್ 13, 2011

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ - ಮಸಾಲೆ ದೋಸೆಯೂ..!


-ರವಿ ಮುರ್ನಾಡು 
ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು... ರಕ್ತ ಕಾರಿ ಸತ್ತಾರು...! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ  ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.
ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ " ಟೀ" ಕುಡಿಯಲು ಐವತ್ತು ಪೈಸೆಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ  ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.
ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಒಂದು ಸಂತೆ ದಿನ ಅಜ್ಜಿಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಬೆಳಿಗ್ಗೆ ಎದ್ದು ಎಂಟು ಕಿ.ಮೀ. ದೂರ ನಡೆದು ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹೋಗಿದ್ದೆ. ಪಟ್ಟಣಕ್ಕೆ ಬಂದಾಕ್ಷಣ ಅದೇ ಹೋಟೆಲ್ಲಿನ ಹಾದಿಗೆ ಕಣ್ಣು ಹಾಯಿಸಿದ್ದು. ನಾನು ಒಂದನೇ ಕ್ಲಾಸು. ಹುಡುಗರಿಗೆಲ್ಲ ದೋಸೆಯ ಮಹತ್ವವನ್ನು ವಿವರಿಸಿದ್ದೆ. ಮಧ್ಯಾಹ್ನ ಊಟಕ್ಕೆ ಬಿಟ್ಟಾಗಲೂ ಪಟ್ಟಣಕ್ಕೆ ಬಂದು ಹೋಟೇಲನ್ನು ನೋಡಿ ಹೋಗುವುದು ವಾಡಿಕೆಯಾಯಿತು. ಒಂದು ಬಾರಿ  ಹೋಟೆಲಿನ ಸಪ್ಲಯರ  ಹತ್ತಿರ ಮಸಾಲೆ ದೋಸೆಯ "ರೇಟು" ಕೇಳಿದ್ದಾಯಿತು. ಎಪ್ಪತ್ತೈದು ಪೈಸೆ ಅಂದ. ಹಣವನ್ನು ಹೊಂದಿಸಿದ್ದರೆಈಗಲೆ ಒಂದು ದೋಸೆ ತಿನ್ನಬಹುದಿತ್ತು.
ಕಾರೆಕೊಲ್ಲಿ ಕಾಫಿ ತೋಟ ತುಂಬಾ ದೊಡ್ಡದು. ಅಲ್ಲಿ ಅವರೆಲ್ಲಾ ಹೇಳಿದರುನಾಲ್ಕು ಕಠಿಣ ದೇವರುಗಳು ತೋಟವನ್ನು ಕಾಯುವುದು. ಅಮ್ಮಣ್ಣಿಯಮ್ಮನ ತಾಯಿಯೂ ಹೇಳುತ್ತಾರೆ. ಅವರು ನೋಡಿದ್ದಾರಂತೆ. ಕೆಂಪು ಸೀರೆತಲೆ ತುಂಬಾ ಕೂದಲುಮೈಯೆಲ್ಲ ಚಿನ್ನದ ಆಭರಣಗಳು...ನಡೆಯುವಾಗ ಗೆಜ್ಜೆ ಶಬ್ಧ ಕೇಳಿದ್ದಾರಂತೆ. ಅದು ಮಾರಿಯಮ್ಮ ದೇವರು. ನಮ್ಮ ಲೈನಿನ ಅನತಿ ದೂರದಲ್ಲೇ ಅದು ಇರುವುದು. ದೇವರ ಅಣ್ಣ " ಗುಳಿಗ" ದೇವರು. ನಾವು ಬಾವಿಯ ನೀರು ತರಲು ಹೋಗುವ ದಾರಿಯಲ್ಲೇ ಇರುವುದು. ಅಲ್ಲಿಂದ ಸ್ವಲ್ಪ ದೂರದಲ್ಲಿ ಅಜ್ಜಪ್ಪ ದೇವರು. ಇವರು ಎಲ್ಲರಿಗೂ ದೊಡ್ಡ ದೇವರಂತೆ. ಅಲ್ಲಿ ತುಂಬಾ ಹಾವುಗಳು ಉಂಟು. ಮಧ್ಯಾಹ್ನದ ಸಮಯದಲ್ಲಿ ಹಾವುಗಳು ಹೊರಗೆ ಬಂದು ಆಟವಾಡುತ್ತದಂತೆ. ಚಂದ್ರಿ ಹೇಳಿದ್ದು. ನನಗಿಂತ ಮೂರು ಕ್ಲಾಸು ದೊಡ್ಡವಳು. ಸುಳ್ಳು ಅಂತ ಹೇಳಿದ್ದೆ. ಹಾವುಗಳು ಇವಳನ್ನು ನೋಡುವಾಗ ಏಕೆ ಕಚ್ಚಲಿಲ್ಲ ಅಂತ ಒಂದು ಅನುಮಾನ. ಅವಳು ಹೇಳುತ್ತಾಳೆ ಹಾವುಗಳು ಅಜ್ಜಪ್ಪ ದೇವರ ತಲೆಯ ಮೇಲೆ ಹೆಡೆ ಬಿಚ್ಚಿ ನಿಂತದ್ದನ್ನು ನೋಡಿದ್ದಾಳಂತೆ. ಬರೀ ಸುಳ್ಳು...!
ಭಗವತಿ ದೇವರು ತೋಟದ ಕಾಫಿ ಒಣಗಿಸುವ ಕಣದ ಪಕ್ಕದಲ್ಲಿ ಇರುವುದು. ಮಾರಿಯಮ್ಮ ದೇವರ ತಂಗಿ. ರಾತ್ರಿ ಎಲ್ಲ ದೇವರುಗಳು ಒಟ್ಟು ಸೇರುತ್ತಾರಂತೆ. ಯಾರೆಲ್ಲ ತಪ್ಪು ಮಾಡಿದ್ದರೂಅವರೆಲ್ಲರ ಮನೆಯ ಬಾಗಿಲು ಬಡಿದು ಎಚ್ಚರಿಕೆ ಕೊಡುತ್ತಾರಂತೆ. ಜೊತೆಗೆ ಅವರುಗಳ ಹಾವುಗಳು. ಅಮ್ಮಣಿಯಮ್ಮನ ತಾಯಿಗೆ ಎಲ್ಲಾ ಗೊತ್ತು. ಅವರು ಹೇಳುತ್ತಾರೆ ದೇವರುಗಳು ಬರುವಾಗ ತೋಟದಲ್ಲಿ ಸ್ಮಶಾನದ ಭೂತಗಳು ಅಡಗಿಕೊಳ್ಳುತ್ತವಂತೆ. ದೇವರುಗಳು ಹೋದ ಮೇಲೆ ಭೂತಗಳು ತೋಟ ಸುತ್ತುವುದು. ಅವುಗಳು ರಾತ್ರಿ " ಸೀಟಿ" ಊದುತ್ತವೆ...! ಚಂದ್ರಿ ಹೇಳಿದ್ದು.
ತೋಟದಲ್ಲಿ ದೇವರುಗಳ ದೊಡ್ಡ ಹಬ್ಬ ನಡೆಯುತ್ತದೆ. ನಮ್ಮ ದೊಡ್ಡ ಪರೀಕ್ಷೆ ಮುಗಿದಾಗ ಬರುವುದು. ಅಜ್ಜಿ ನನಗೆ ಹೊಸ ಬಟ್ಟೆ ತೆಗೆದುಕೊಡುತ್ತಾರೆ. ತೋಟದವರ ದೂರದೂರಿನ ನೆಂಟರಿಸ್ಟರೂ ಸಂದರ್ಭ ಕಾರೆಕೊಲ್ಲಿ ತೋಟಕ್ಕೆ ಬರುತ್ತಾರೆ.ಅಮ್ಮ-ಅಪ್ಪನೂ ತಮ್ಮಂದಿರೂ .  ಹರಕೆ ಇದ್ದರೆ ಹಾಕುತ್ತಾರೆ. ಆಡು-ಕೋಳಿ ಬಲಿ ಕೊಡುತ್ತಾರೆ. ನಮ್ಮ ಅಜ್ಜಿಯೂ..!. ಅಜ್ಜಪ್ಪ ದೇವರಿಗೆ ಬಲಿ ಕೊಡುವುದಿಲ್ಲ. ಅದು ಪಾಪದ ಅಜ್ಜ ದೇವರು. ಮಾರಿಯಮ್ಮ ದೇವರುಗುಳಿಗ ದೇವರು ಮತ್ತು ಭಗವತಿ ದೇವರಿಗೇ ಮಾತ್ರ ಬಲಿ ಕೊಡುವುದು. ಬಲಿ ಕೊಟ್ಟ ಪ್ರಾಣಿಗಳ ರಕ್ತವನ್ನು ಅವರುಗಳು ಕುಡಿಯುತ್ತಾರಂತೆ. ಅಮ್ಮಣಿಯಮ್ಮನ ತಾಯಿ ಹೇಳುತ್ತಾರೆ ,ಕೋಳಿ-ಆಡುಗಳನ್ನು ಬಲಿ ಕೊಡದಿದ್ದರೆತೋಟದಲ್ಲಿ ಕೆಲಸ ಮಾಡುವವರಿಗೆ ತೊಂದರೆ ಕೊಡುತ್ತಾರಂತೆ. ತೋಟದ ಸಾವುಕಾರ  ಸಾಯುತ್ತಾನಂತೆ. ಅದಕ್ಕೆ ಬಲಿ ಕೊಡುವುದು. ಪೂಜೆಯಾದ ನಂತರ ಸಂಜೆ ಬಲಿ ಕೊಟ್ಟ ಆಡು- ಕೋಳಿಗಳ ಮಾಂಸವನ್ನು ಎಲ್ಲರಿಗೂ ಹಂಚುತ್ತಾರೆ ತೋಟದ ಸಾಹುಕಾರರು.
ಪೂಜೆಗೆ ಬಂದ ಜನರು ದೇವರಿಗೆ ದುಡ್ಡು ಕಾಣಿಕೆ ಹಾಕುತ್ತಾರೆ. ನಾನು ನೋಡಿದ್ದೆ. ತುಂಬಾ ಹಾಕುತ್ತಾರೆ. ನಮ್ಮ ಮನೆಯ ಪಕ್ಕದ ಮಾರಿಯಮ್ಮ ದೇವರಿಗೂ ಒಂದು ಕಾಣಿಕೆ ಡಬ್ಬಿ ಉಂಟು. ಅಲ್ಲಿ ತುಂಬಾ ಜನ  ದುಡ್ದು ಹಾಕಿದ್ದರು. ನಮ್ಮ ಅಜ್ಜಿಯೂ. ನನಗೆ  ತುಂಬಾ ಹುಷಾರಿರಲಿಲ್ಲ. ಆಗ ಮಾರಿಯಮ್ಮ ದೇವರಿಗೆ ಹೀಗೆ ಹರಕೆ ಹೊತ್ತುಕೊಂಡಿದ್ದರು.
" ತಾಯಿ... ನಮ್ಮ ಮಗುವಿಗೆ ಜ್ವರ ವಾಸಿಯಾಗಲಿನಿನಗೆ ಮಗುವಿನ ತಲೆ ಸುತ್ತಿ ಇಪ್ಪತ್ತೈದು ಪೈಸೆ ಹಾಕುತ್ತೇನೆ" ಎಂದು.
ಅವರು ಹೇಳಿ ಅರ್ಧಗಂಟೆಯಲ್ಲಿ ಜ್ವರ ಇಳಿಯಿತಂತೆ. ಅಜ್ಜಿ ನನಗೆ ಹೇಳಿದ್ದು. ಮಾರಿಯಮ್ಮ ದೇವರಿಗೆ ನನ್ನ ಮೇಲೆ ಪ್ರೀತಿ. ನಾನು ದಿನವೂ ಕೈ ಮುಗಿಯುತ್ತಿದ್ದೆ.
ಯಾರಲ್ಲಿ ಕೇಳಿದರೂ ಮಸಾಲೆ ದೋಸೆಗೆ ಹಣ ಸಿಗುವುದಿಲ್ಲ. ಅಜ್ಜಿ-ಚಿಕ್ಕಮ್ಮನಲ್ಲಿ ಕೇಳಿದರೆ "ನಿನಗೇನು ಮಸಾಲೆ ದೋಸೆಯ ರಾವು ಬಡಿದಿದೆ" ಅಂತ ಗದರಿಸಬಹುದು. ಇವತ್ತು ಶನಿವಾರ. ಮಧ್ಯಾಹ್ನದವರೆಗೇ ಮಾತ್ರ ಶಾಲೆ..! ಶಾಲೆಯಿಂದ ನಡೆದು ಬರುವಾಗ ಚಂದ್ರಿ ಹೇಳಿದಳುನಾಳೆ  ಅವರೆಲ್ಲರೂ ಹೋಟೆಲ್ಲಿಗೆ ಹೋಗುವುದಾಗಿ.
ಇವರು ಮಸಾಲೆ ತಿನ್ನಬಹುದು ?!!!. ದೋಸೆ ಒಂದಕ್ಕೆ ಎಪ್ಪತ್ತೈದು ಪೈಸೆನೀವು ಹೇಗೆ ಎಲ್ಲರೂ ತಿನ್ನುತ್ತೀರಿ?
"ನಮ್ಮ ಪಪ್ಪನಿಗೆ ಹೇಳಿದರೆ ತೆಗೆದು ಕೊಡುತ್ತಾರೆ" ಅಂದಳು.
ಮಸಾಲೆ ದೋಸೆಯ ನೆನಪು ಮರುಕಳಿಸ ತೊಡಗಿತು. ಹಣಕ್ಕೆ ಏನು ಮಾಡುವುದು?. ಮನೆಗೆ ಬಂದಂತೆ ಮಾರಿಯಮ್ಮ ದೇವರ ಗುಡಿಗೆ ಒಂದು ಬಾರಿ ಹೋಗಿ ಬಂದೆ. ಕಾಣಿಕೆ ಡಬ್ಬ ಹೊರಗೆಯೆ ಇತ್ತು. ದೇವರಿಗೆ ಸ್ವಲ್ಪ ಮಾತಾಡಬೇಕು. ಸ್ನಾನ ಮಾಡಿ ಮಾತನಾಡುವುದಾಗಿ ಪುನಃ ವಾಪಾಸು ಬಂದೆ.
" ಮಾರಿಯಮ್ಮ ದೇವರೆನನಗೆ ಮಸಾಲೆ ದೋಸೆ ತಿನ್ನಬೇಕು.ನಾಳೆ ಸಂತೆಗೆ ಹೋಗುವಾಗ ನಿನ್ನ  ದುಡ್ಡು ತೆಗೆಯುತ್ತೇನೆ." ಅನ್ನುವ ಪ್ರಾರ್ಥನೆ ಮಾಡಿದೆ. ರಾತ್ರಿ ಒಂದು ಕನಸು " ಅಮ್ಮುಣ್ಣಿಯಮ್ಮನ ತಾಯಿ ಹೇಳಿದಂತೆಕೆಂಪು ಸೀರೆಉದ್ದದ ತಲೆಗೂದಲುಆಭರಣ ತೋಟ್ಟ ದೇವರು ಮಸಾಲೆ ದೋಸೆ ಹಿಡಿದು ನನ್ನಲ್ಲಿಗೆ ಬಂದರು" . ಬೆಳಿಗ್ಗೆ ಎದ್ದಾಕ್ಷಣ ಸ್ನಾನ ಮಾಡಿ ಗುಡಿಗೆ ಹೋಗಿದ್ದು. ಸುತ್ತಮುತ್ತ ಯಾರ ಸುಳಿವು ಇಲ್ಲ. ಎಲ್ಲರೂ ಸಂತೆಗೆ ಹೋಗುವ ತುರತುರಿಯಲ್ಲಿರಬಹುದು. ಮತ್ತೊಂದು ಪ್ರಾರ್ಥನೆಯೊಂದಿಗೆಯ ಡಬ್ಬದ ಮುಚ್ಚಳ ತೆಗೆದೆ. ಕೈ ಹಾಕಿದಾಗ ಸಿಕ್ಕಿದ್ದು ಒಂದು ರೂಪಾಯಿ ನಾಣ್ಯ. ಹಾಗೆ ಮುಚ್ಚಿ ಬಂದೆ. ದೋಸೆಗೆ ಎಪ್ಪತ್ತೈದು ಪೈಸೆ. ನಂತರ ಇಪ್ಪತ್ತೈದು ಪೈಸೆ ಉಳಿದೀತು. ಅದನ್ನು ವಾಪಾಸು ಮಾಡುವ ಆಲೋಚನೆ. ಅಜ್ಜಿ-ಚಿಕ್ಕಮ್ಮನೊಂದಿಗೆ ಸಂತೆಗೆ ಹೋಗುವಾಗ ಒಂದು ಸಂತೋಷ , ಚಂದ್ರಿ ಹೋಟೇಲ್ಲಿಗೆ ಹೋಗುವ ಮುನ್ನ  ಮಸಾಲೆ ದೋಸೆ ತಿಂದು ಬರಬೇಕು. ಅವಳಿಗೆ ಹೇಳಬೇಕುನಾನೂ ದೋಸೆ ತಿಂದೆ ಅಂತ. ಅವಳೂ ತಾಯಿಯೊಂದಿಗೆ ಸಂತೆಗೆ ಬಂದಳು.
ಅಜ್ಜಿ- ಚಿಕ್ಕಮ್ಮ ದಿನಸಿ ಎಲ್ಲಾ ಖರೀದಿಸಿದ ನಂತರಮೀನು ತರಲು ನನ್ನನ್ನು ಕಳುಹಿಸುವುದು. ಹೋಟೆಲ್ಲಿಗೆ ಹೋಗಲು ಇದೇ ಸರಿಯಾದ ಸಮಯ. ಮೀನು ತರಲು ಮೂರು ರೂಪಾಯಿ ಕೊಟ್ಟು ಕಳುಹಿಸಿದಾಕ್ಷಣ ಗಣೇಶ ಕ್ಯಾಂಟೀನಿನ ಕಡೆ ಓಡ ತೊಡಗಿದೆ. ಕಣ್ಣು ತುಂಬಾ ಮಸಾಲೆ ದೋಸೆ...!! ಅದು ಸುಂಟಿಕೂಪ್ಪ ಮಾರುಕಟ್ಟೆಯಿಂದ ಅನತಿ ದೂರದಲ್ಲಿದೆ. ಸಂತೆಯ ಜನಸಂದಣಿಯೂ. ಆಗಾಗ ದೋಸೆಯ ಹಣವನ್ನು ಮುಟ್ಟಿ ನೋಡ ತೊಡಗಿದೆ. ಆಹಾ..! ಇದೆ ಅನ್ನುವ ಭರವಸೆ ಮತ್ತು ಸಂತೋಷ. ಅದರ ಜೊತೆಗೆ ಮೀನಿಗೆ ಕೊಟ್ಟ ಹಣವೂ....! ಓಡುತ್ತಿದ್ದಂತೆ ಸಣ್ಣ ಕಲ್ಲೊಂದು ಕಾಲಿಗೆ ತಾಗಿತು. ಮುಗ್ಗರಿಸಿ ಬಿದ್ದುಬಿಟ್ಟೆ. ಪಕ್ಕದಲ್ಲೇ ಚರಂಡಿಯೂ. ಹೆಬ್ಬರಳಿನ ಉಗುರು ಕಿತ್ತು ಹೋಯಿತು. ತುಂಬಾ ರಕ್ತ....! ಮಸಾಲೆ ದೋಸೆ ಮರೆತು ಹೋಗಲಿಲ್ಲ. ಬಿದ್ದ ರಭಸಕ್ಕೆ ಶರ್ಟು ಜೇಬಿನಲ್ಲಿಟ್ಟಿದ್ದ ದುಡ್ಡು ಚೆಲ್ಲಾಪಿಲ್ಲಿ. ಅಜ್ಜಿ ಮೀನಿಗೆ  ಕೊಟ್ಟಿದ್ದು ಎರಡು ಮತ್ತು ಒಂದು ರೂಪಾಯಿ ನೋಟು. ಅದು ಹಾಗೇ ಇದೆ..!. ಮಾರಿಯಮ್ಮ ದೇವರ ಮಸಾಲೆ ದೋಸೆ ಹಣ ಒಂದು ರೂಪಾಯಿ ನಾಣ್ಯ..! .ಜೇಬಿನಿಂದ ಚಿಮ್ಮಿ ಚರಂಡಿಯೊಳಗೆ ನುಗ್ಗಿತು. ಮೇಲ್ಭಾಗ ಮುಚ್ಚಿದ್ದ ಚರಂಡಿಯ  ಒಳಗೆ ನೀರು ಹರಿಯುತ್ತಿತ್ತು. ಕೈ ಹಾಕಿ ತೆಗೆಯುವ ಹಾಗಿಲ್ಲ. ಮಸಾಲೆ ದೋಸೆ ಕಣ್ಣೆದುರಿನಲ್ಲೇ ಕೊಚ್ಚಿ ಹೋಯಿತು...!
ರಕ್ತಸಿಗ್ಧ ಕಾಲಿನ ಹೆಬ್ಬರಳಿನ ನೋವು ಎಲ್ಲವನ್ನು ಮರೆಸಿಬಿಟ್ಟಿತಲ್ಲ..! ಮೀನು ತೆಗೆದು ಹಾಗೆ ಅಜ್ಜಿಯ ಹತ್ತಿರ ಬಂದೆ. ರಕ್ತ ನೋಡಿ ಚಿಕ್ಕಮ್ಮ ಕಣ್ಣು ಕೆಂಪು ಮಾಡಿದಳು."ಆಗಸ ನೋಡಿಕೊಂಡು ಹೋಗುತ್ತೀಯ.. ನೆಲ ಕಣ್ಣು ಕಾಣುದಿಲ್ಲವೇ?" ಮರುಕ ಕೋಪದ ಮಾತು. ಅಲ್ಲೇ ಕಾಫಿ ಹುಡಿ ಹಾಕಿತನ್ನ ಕೈ ಕವಚದಿಂದ ಗಾಯಕ್ಕೆ ಕಟ್ಟಿ ಮುಚ್ಚಿದಳು.
ಕುಂಟುತ್ತಾ ಮನೆಗೆ ಬಂದದ್ದು. ದಾರಿಯಲ್ಲಿ ಚಂದ್ರಿ ಹೇಳುತ್ತಾಳೆಅವರೆಲ್ಲರೂ ಮಸಾಲೆ ದೋಸೆ ತಿಂದರಂತೆ. ತುಪ್ಪ ಹಾಕಿದ್ದು. ಜೊತೆಗೆ ಆಲೂಗೆಡ್ಡೆ ಪಲ್ಯ-ತೆಂಗಿನಕಾಯಿ ಚಟ್ನಿ....!
ಬೆಳಿಗ್ಗೆ ಮಾರಿಯಮ್ಮ ಗುಡಿಗೆ  ಚಂದ್ರಿಯ ಅಮ್ಮ  ಪಾಂಚಾಲಿಯಮ್ಮ ಕೈಮುಗಿಯಲು ಹೋಗಿದ್ದರು. ಲೈನಿನ ಎಲ್ಲರಿಗೂ ಹೇಳುತ್ತಾರೆ ಕಾಣಿಕೆ ಡಬ್ಬದ ಮುಚ್ಚಳ ಸ್ವಲ್ಪ ತೆರೆದಿದೆ ಅಂತ. ದೇವರ ಭಂಡಾರ ಕದ್ದವರು ಒಳ್ಳೆಯದಾಗಲ್ಲ. ನಮ್ಮ ಅಜ್ಜಿಯೂ ಸ್ವರ ಸೇರಿಸಿದರು..ಯಾರು ಕದ್ದರೋ...ದೇವರಿಗೆ ಗೊತ್ತಿರುತ್ತದೆ... ಕದ್ದವರು ರಕ್ತಕಾರಿ ಸತ್ತಾರು...! ಅಮ್ಮುಣ್ಣಿಯಮ್ಮ ಹೇಳಿದನ್ನು ನಿಜಗೊಳಿಸಿದರು...! ಹೆಬ್ಬರಳಿನ ನೋವು ಇನ್ನೂ ಹೆಚ್ಚಾಗ ತೊಡಗಿತು. ಶಾಲೆಗೆ ಹೋಗಲಾಗಲಿಲ್ಲ. ಎಲ್ಲರೂ ಲೈನಿನಿಂದ ತೋಟ ಕೆಲಸಕ್ಕೆ ಹೋದ ಮೇಲೆ ಭಯ ಆವರಿಸಿತು. ಅಲ್ಲಿ ಹಾವುಗಳು ಉಂಟು. ಅವು ಬಂದರೋಮಾರಿಯಮ್ಮ ದೇವರಿಗೆ ಕೈಮುಗಿಯಬೇಕು. ಹಣವನ್ನು ಹೇಗೆ ಸೇರಿಸುವುದುಅಜ್ಜಿ ಮತ್ತು ಚಿಕ್ಕಮ್ಮ ವಾರಕ್ಕೆ ಬೆಲ್ಲದ ಮಿಠಾಯಿಗೆ ಕೊಡುವ ಹತ್ತತ್ತು ಪೈಸೆಯನ್ನು ಒಟ್ಟು ಸೇರಿಸುವುದು ಅಂದ ಮೇಲೆ  ಸಣ್ಣ ನಿದ್ದೆ ಬಂತು.
ಎಚ್ಚರವಾದ ಮೇಲೆ ಮುಖ ತೊಳೆದು ಮೆಲ್ಲನೆ ಮಾರಿಯಮ್ಮ ದೇವರ ಗುಡಿಗೆ ಅಡಿಯಿಟ್ಟೆ. ಕಾಣಿಕೆ ಡಬ್ಬ ಹಾಗೇ ಇದೆ. ಮತ್ತೊಂದು ಪ್ರಾರ್ಥನೆ...
"ನಿನ್ನ ಒಂದು ರೂಪಾಯಿ ಚರಂಡಿಯಲ್ಲಿ ಬಿದ್ದು ಹೋಯಿತು. ಮಸಾಲೆ ದೋಸೆ ತಿನ್ನಲಿಲ್ಲ. ಅಜ್ಜಿ-ಚಿಕ್ಕಮ್ಮ ಕೊಡುವ ಬೆಲ್ಲದ ಮಿಠಾಯಿ ಹಣವನ್ನು ಹಾಕುತ್ತೇನೆ".
ಕಪ್ಪಗಿನ ದೇವರ ಶಿಲಾ ಮೂರ್ತಿ ನಕ್ಕಂತೆ ಅನ್ನಿಸಿತು. ಕಾಲಿನ ನೋವು  ಸ್ವಲ್ಪ ಕಡಿಮೆಯಾದಂತೆ....ಹಗುರವಾದ ಮನಸ್ಸು....! ವಾರದಲ್ಲಿ ಸಿಗುವ ಬೆಲ್ಲದ ಮಿಠಾಯಿಯೂ ಇಲ್ಲ.... ಮಸಾಲೆ ದೋಸೆಯೂ ಇಲ್ಲ.... ಹಾಗೇ ಕಾಲಿನ ನೋವು ಗುಣವಾಗುತ್ತಿದ್ದಂತೆ....ಆಸೆ ಕರಗಿಯೂ ಹೋಯಿತು.....!