ಮಂಗಳವಾರ, ಜೂನ್ 21, 2011

ರಂಗೋಲಿ ಇಡುವ ಹುಡುಗಿ

ಪಕ್ಕದ ಮನೆಯ ಹುಡುಗಿ
ದಿನವೂ ಇಡುತ್ತಾಳೆ
ಅಂಗಳದಲ್ಲಿ...
ಚಿತ್ರ-ವಿಚಿತ್ರ ರಂಗೋಲಿ
ಅವಳು ಇಡುವ ರಂಗೋಲಿ ಚಿತ್ರದಲಿ
ವಿಚಿತ್ರಾಕಾರದ
ಚುಕ್ಕಿ ಚುಕ್ಕಿ ಸುರುಳಿ
ಅವಳ ಚಿತ್ತದ ಕನಸಿನ ಬಳ್ಳಿ..!




ಕಾಣುವ ಕನಸುಗಳು
ಪುಟಿದೇಳುವ ಆಸೆಗಳು
ರಂಗೋಲಿಯಲ್ಲಿ ಚುಕ್ಕಿಯಾಗಿ
ಅವತರಿಸಿದವು.

ಮೌನದ ಮಾತುಗಳು
ಬೂದಿ ಮುಚ್ಚಿದ ಭಾವಗಳು
ಅಂತರಾಳದ ಪಿಸುದನಿಗಳು
ಚೌಕಾಕೃತಿಯಾಗಿ-
ತ್ರಿಕೋನ ಬಿಂದುಗಳಾಗಿ
ರಂಗು ರಂಗಾಗಿ ಹೆಣೆದುಕೊಂಡುವು
ಒಳಗೊಳಗೆ ಕುದಿದು
ಅಸಂಖ್ಯಾತ ಗೋಪುರಗಳಾಗಿ
ಅಂಗಳದಲಿ ಪಡಿ ಮೂಡಿದವು..!

ಅವಳ ಕನಸುಗಳೆಲ್ಲ ರಂಗೋಲಿಯಲಿ
ಆಸೆಗಳೆಲ್ಲ ಚುಕ್ಕಿಗಳಲಿ
ಭಾವಗಳೆಲ್ಲಾ ರೇಖೆಗಳಲ್ಲಿ
ಒಂದಕ್ಕೊಂದು ರೂಪ ಪಡೆದು
ಒಂದರ ಮೇಲೊಂದು ಕುಳಿತು
ಸುರುಳಿ ಸುರುಳಿ ಬಳ್ಳಿಯಾಗಿ ಅರಳಿಕೊಂಡವು..!

ಇದೇನೇ ಹುಡುಗಿ...
ಎಷ್ಟು ಮುದ್ದಾಗಿದೆ
ನಿನ್ನ ಕೈಯಲ್ಲರಳಿದ ರಂಗೋಲಿ
ಎಂದು ಉದ್ಘರಿಸಿದ್ದೆ.
ಕಣ್ಣಂಚಿನಲಿ ಆಸೆಗಳು ಚಿಗುರಿ
ಕೆನ್ನೆ- ತುಟಿಯಂಚಿನಲಿ ರಾಚಿತು
ಕೆಂಪಾದ ರಂಗೋಲಿ
ಮುಖದ ತುಂಬೆಲ್ಲ  ಸುಳಿದಾಡಿತು
ನೂರು ಕನಸಿನ ಬಳ್ಳಿ...!

ಮುಗ್ಧ ಹುಡುಗಿ...
ಹೃದಯದಾಳದಲ್ಲಿ ಜೀವಿಸುತ್ತಾಳೆ
ಹೃದಯಕ್ಕಿಳಿದವರಿಗೆಲ್ಲಾ
ಸಾವಿರ ಕಥೆ ಹೇಳುತ್ತಾಳೆ.

-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. >> " ಮೌನದ ಮಾತುಗಳು
    ಬೂದಿ ಮುಚ್ಚಿದ ಭಾವಗಳು
    ಅಂತರಾಳದ ಪಿಸುದನಿಗಳು
    ಚೌಕಾಕೃತಿಯಾಗಿ-
    ತ್ರಿಕೋನ ಬಿಂದುಗಳಾಗಿ
    ರಂಗು ರಂಗಾಗಿ ಹೆಣೆದುಕೊಂಡುವು
    ಒಳಗೊಳಗೆ ಕುದಿದು
    ಅಸಂಖ್ಯಾತ ಗೋಪುರಗಳಾಗಿ
    ಅಂಗಳದಲಿ ಪಡಿ ಮೂಡಿದವು..!" <<
    ತುಂಬಾ ಇಷ್ಟವಾಯಿತು ಮೂರ್ನಾಡರೇ. ಕವಿತೆ ಚೆನ್ನಾಗಿದೆ. .ಪ್ರತೀಸಲವೂ ನೀವು ನನ್ನ ಕವಿತೆ ಓದಿ ಚೆನ್ನಾಗಿದೆ, ಇಲ್ಲಿ ತಿದ್ದಿಕೋ ಎನ್ನೋ ಪ್ರೀತಿಯ ಸಲಹೆ ನೀಡುತ್ತಿದ್ದಿರಿ. ಆದರೆ ಈ ಬಾರಿ ನಿಮ್ಮ ಕವನವನ್ನು ಓದಿ ಅಭಿಪ್ರಯಿಸುವ ಅವಕಾಶ ಸಿಕ್ಕಿದ್ದಕ್ಕಾಗಿ ಆನಂದಿಸುತ್ತಿದ್ದೇನೆ :-)

    ಪ್ರತ್ಯುತ್ತರಅಳಿಸಿ