ಸೋಮವಾರ, ಡಿಸೆಂಬರ್ 19, 2011

ಹಗಲು-ರಾತ್ರಿಯ ಪ್ರಶ್ನೆಅವಳು ಗೆಳತಿಗೆ ಹೇಳುತ್ತಿದ್ದಳು
ದಪ್ಪ ಮೀಸೆ- ಉಬ್ಬಿದ ಎದೆಯ
ಕಪ್ಪು ಕಂಗಳ ಹುಡುಗ
ಕನಸ ಚಿಟ್ಟೆಯ ಹಿಡಿದು ಕರೆಯುತ್ತಿದ್ದಾನೆ
ಕತ್ತಲು ತಬ್ಬುವ ಮೊದಲು ಹೋಗಿ ಬಿಡಲೇ?

ಮತ್ತೇರಿಸುವ ಮೈಬೆವರು
ಉಬ್ಬಿ ಅರಳಿದ ಮೂಗು
ಪ್ರತೀ ನೋಟದ ಮಧುರ ಸಾಲು
ಗೆಳತೀ....
ಹೊತ್ತು ಸಾಯುವ ಮೊದಲು
ಅವನೊಳಗೆ ಬಂಧಿಯಾಗಲೇ?

ವಯಸ್ಸಿನ ಕೆರೆತ- ಮೈಯೆಲ್ಲ ಹುತ್ತ
ಸಾಕೆನಿಸದ ಸುರುಳಿ ಬಳ್ಳಿಯ ಕನಸು
ತೃಪಿಯೇ ಇಲ್ಲದ ರಸ್ತೆಗಳಿಗೆ
ರಾತ್ರಿಯಲ್ಲೂ ಪಹರೆ ಕೆಲಸ
ಗೆಳತಿ ಕೇಳುತ್ತಾಳೆ...
ಗೊತ್ತಿದೆಯೇ ಅವನಿಗೆ
ಹಗಲು- ರಾತ್ರಿಯ ವ್ಯತ್ಯಾಸ?

ಇಲ್ಲ, ಇಲ್ಲವೇ ಇಲ್ಲ
ಮನುಷ್ಯ ಸುಖದ ಗುಲಾಮ
ದುಃಖ್ಖವೇ ಅವನ ಚಾಕರಿ
ಜವ್ವನೆಯ ಯೌವ್ವನದ ಬದುಕು
ಬಾಚಿ ತಬ್ಬುವ ಕತ್ತಲು
ಬೊಗೆಸೆಯಷ್ಟು ಬೆಳಕು
ಹಿಂಡಿ ತೆಗೆಯುವಷ್ಟು ನಗು

ಅವಳಿಗೆ ಅವನದೇ ಪ್ರತಿಬಿಂಬ
ಭಾವನೆಗಳು ಒಡೆದ ಗಾಜಿನ ಚೂರು
ಪ್ರೇಮವೇ ಇಲ್ಲದ ಮಾತು
ಕಾಮದ ಇನ್ನೊಂದು ಮನಸ್ಸು
ಜ್ವಾಲಾಮುಖಿ-ದಾಹ-ಹಸಿವು
ಅಲೆಗಳ ಬಡಿತ-ಕರಗುವುದಿಲ್ಲ ಬಂಡೆ
ಕಣ್ಣೀರಿಗೆ ಕಡಲೇ ದಾಖಲೆ

ಹಗಲು-ರಾತ್ರಿಯ ಪ್ರಶ್ನೆಗೆ
ಅವರವರ ಬದುಕು ಉತ್ತರ
ಅವಳಿಗೆ ಇವಳು ಪ್ರಶ್ನೆ
ಬಿರುಗಾಳಿಯೊಂದು ಬೀಸಿದಾಗಲೆಲ್ಲಾ
ಇಬ್ಬರೊಳಗೆ ಚಿಗುರಿದ ಮೋಹದ ಬಳ್ಳಿ
ಗಟ್ಟಿ ಮರವೊಂದನ್ನು ತಬ್ಬಿಕೊಳ್ಳುತ್ತದೆ
--------------------------------
-ರವಿ ಮೂರ್ನಾಡು
 ರೇಖಾ ಚಿತ್ರ: ದಿನೇಶ್ ಕುಕ್ಕುಜಡ್ಕ,ಸುಳ್ಯ.

ಬುಧವಾರ, ಡಿಸೆಂಬರ್ 14, 2011

ಮೌನ ಬಿಕ್ಕಳಿಕೆಎಲ್ಲಿ ಮರೆಯಾಗಿ ಬಿಕ್ಕಳಿಸುತ್ತಿದೆ
ಈ ನನ್ನ ಮನ ?
ಸುಕ್ಕುಗಟ್ಟಿದ ಆ ನೆಲದಲಿ
ನನ್ನೊಳಗೆ ಚಿಗುರಿದ
ಓಭಿರಾಯನ ಬಳ್ಳಿ
ಸತ್ತ ಮರಗಳ ತಬ್ಬಿ
ಸತ್ವ ಕಳೆದುಕೊಂಡಿದೆ

ಇಗೋ ಇಲ್ಲಿ ಒಡೆದು ನಾರುತ್ತಿದೆ
ಬಂಜರು ಬಿರುಕಿಟ್ಟ ನಾಲೆ
ಯೌವ್ವನಕ್ಕೆ ಕಣ್ಣುಗಳಿಲ್ಲ !
ಇಗೋ ಇಲ್ಲಿ ನೆತ್ತರು ಹೆಪ್ಪುಗಟ್ಟುತ್ತಿದೆ
ಸೋತು ಎದೆಭಾರದ ಜ್ವಾಲೆ
ಮೋಹಕ್ಕೆ ಬಂಧನವಿಲ್ಲ !
ಬೀಸಿದ ಬಿರುಗಾಳಿಗೆ ದಿಕ್ಕಿಲ್ಲ
ಸೂರ್ಯನ ರಶ್ಮಿಗೆ ನೆಲಯಿಲ್ಲ
ಎಲ್ಲವೂ ಮುಷ್ಠಿ ಬಿಗಿ ಹಿಡಿದು
ಆಕಾಶ-ಜಲ-ಗಾಳಿಯಲಿ
ಅಂತ್ಯವಿಲ್ಲದ ಚಿತ್ತಾರ ಬಿಡಿಸುತ್ತಿವೆ.

ಹಂಗು ತೊರೆದ ಹೃದಯ
ಜೀವ ಕೇಳಿದ ಬೀಜ
ಮಣ್ಣ ವಾಸನೆಗೆ ಮುತ್ತಿಕ್ಕಿ
ತುಟಿಯ ಸುಟ್ಟುಕೊಂಡಿದೆ.

ಲಗ್ಗೆಯಿಡು ಭಾವವೇ....
ಕನಸುಗಳ ಹರಾಜಿಗಿಡುತ್ತೇನೆ
ನಿನ್ನೊಳಗೆ ಹೂವಾಗುತ್ತೇನೆ
ಗುಟುಕು ಪ್ರೀತಿಯ ಪಾತ್ರೆಗೆ
ಹಣೆ ಚಚ್ಚಿ ಬಿಕ್ಕಳಿಸುತ್ತೇನೆ
ಹಾದಿ ಬದಿಯ ಮೈಲುಗಲ್ಲುಗಳಿಗೆ
ಪ್ರೇಮದ ಚಿತ್ತಾರವಾಗುತ್ತೇನೆ
-ರವಿ ಮೂರ್ನಾಡು.


ಭಾನುವಾರ, ಡಿಸೆಂಬರ್ 11, 2011

ಆ ಪುಸ್ತಕದ ರಾಶಿಯಲ್ಲಿ ಭಿಕರಿಯಾದ ಕನಸುಗಳು


ಬನ್ನಿ ಸಾರ್  ಬನ್ನಿ...! ಉತ್ತಮ ಪುಸ್ತಕಗಳು ನನ್ನಲ್ಲಿದೆ. 20 ರೂಪಾಯಿಗೆ 30 ಪುಸ್ತಕಗಳು ಕೊಂಡುಕೊಳ್ಳಬಹುದು. ಹಾಗಂತ,ಆ ಹುಡುಗ ಸಾಹಿತ್ಯ ಪುಸ್ತಕ ಕೊಂಡುಕೊಳ್ಳಿ ಅಂತ ಅಂಗಲಾಚಿದ. ಪುಸ್ತಕದ ರಾಶಿಗಳು ಹತ್ತು ಹಲವು ಆ ರಸ್ತೆಯಲ್ಲಿ ಕರೆಯುತ್ತಿವೆ. ಪುಸ್ತಕ ಮಳಿಗೆ -ಗ್ರಂಥಾಲಯಗಳಲ್ಲಿ ಅಚ್ಚುಕಟ್ಟಾದ ಪೆಟ್ಟಿಗೆಯೊಳಗೆ ಕುಳಿತು ಓದುಗರೊಂದಿಗೆ ಮಾತನಾಡಬೇಕಾದ ಕವಿತೆ-ಕಥೆಗಳು ಮೌನವಾಗಿ ಒಂದರ ಮೇಲೊಂದು ತಬ್ಬಿಕೊಂಡಿವೆ. ಬಿರುಬಿಸಿಲಿಗೆ ಮಲಗಿದ್ದ ಭಾವ ಅನಾಥ ಪ್ರಜ್ಞೆಯನ್ನು ಮೂಡಿಸಿತು ಅನ್ನೋದು ಇನ್ನೊಂದು ಮಾತು. ಆ ರಸ್ತೆ ಬದಿಯ ಕೊನೆಯ ಎಂಟನೇ ಪುಸ್ತಕದ ರಾಶಿಗೆ ನನ್ನ ಕಣ್ಣು ಎಟುಕಿತು. ತುಂಬಾ ಎತ್ತರದ ರಾಶಿಯಾಗಿತ್ತು ಅದು. ಪುಸ್ತಕಕ್ಕೆ ತಲೆಕೊಟ್ಟು ಕಿರುನಿದ್ದೆಗೆ ಜಾರಿದ್ದ ಆ ಮಧ್ಯ ವಯಸ್ಸಿನ ಮಾರಾಟದ ವ್ಯಕ್ತಿಯನ್ನು ಸಣ್ಣಗೆ ಎಬ್ಬಿಸಿ, ಪುಸ್ತಕದ ರಾಶಿಗೆ ಕೈ ಹಾಕಿದ್ದೆ.
ನನ್ನ ಕಣ್ಣು ಪಕ್ಕದ್ದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಂದಮಾಮ ಮತ್ತು  ಬಾಲಮಂಗಳ ಪುಸ್ತಕಗಳ ಮೇಲೆ ಹರಿಯಿತು. ಒಂದನೇ ತರಗತಿಯಿಂದಲೇ ವಿಜ್ಞಾನ-ಲೆಕ್ಕ-ಸಮಾಜಶಾಸ್ತ್ರ ಪುಸ್ತಕಗಳೊಂದಿಗೆ ಶಾಲಾ ಪುಸ್ತಕ ಚೀಲದಲ್ಲಿ  ಜೊತೆಯಲ್ಲೇ ಇರುತ್ತಿದ್ದ ಮುಗ್ಧ ಕನಸುಗಳು ಅಲ್ಲೇ ಮಲಗಿದ್ದವು. ಕಿರೀಟ ತೊಟ್ಟ ರಾಜರು, ಅವರ ರಾಣಿಯರು, ರಾಜಕುಮಾರರು-ರಾಜಕುಮಾರಿಯರು,ಮಾತು ಮಾತಿಗೆ ಎದ್ದು ನಿಲ್ಲುತ್ತಿದ್ದ ವಿಕ್ರಮಾಧಿತ್ಯ-ಬೇತಾಳರು ಅದರೊಳಗಿದ್ದರು. ನನ್ನ ನಿದ್ದೆಯ ಕನಸಿನಲ್ಲಿ ಬಂದು ಕೈ ಹಿಡಿದು ಗಾಳಿಯಲ್ಲಿ ತೇಲಿಸುತ್ತಿದ್ದ  ಬಾಲ ಮಂಗಳದ "ಡಿಂಗ" ಅಲ್ಲಿದ್ದರು. ತರಗತಿಯ ಪುಸ್ತಕಗಳನ್ನು ಮರೆತು ಶಾಲೆಯಲ್ಲಿ ಪೆಟ್ಟು ತಿಂದ ನೆನಪುಂಟು. ಕನಸುಗಳ ಒಡನಾಡಿಯಾಗಿದ್ದ ಚಂದಮಾಮ- ಬಾಲಮಂಗಳ ಮರೆತ ದಿನಗಳ ನೆನಪಿಲ್ಲ. ಮೇಷ್ಟ್ರು ಪಾಠ ಮಾಡುತ್ತಿದ್ದಾಗಲೂ ಕದ್ದುಮುಚ್ಚಿ ಓದುತ್ತಿದ್ದ ಆನಂದ ಅಲ್ಲಿದ್ದವು. ಈ ಬಾಲ ಸಾಹಿತ್ಯ ಪುಸ್ತಕಗಳು ಈಗಲೂ ನನ್ನೊಂದಿಗೆ ಇವೆ. ಹಾಗಂತ ಇನ್ನಷ್ಟು ಒಟ್ಟು ಸೇರಿಸಲು ಅಲ್ಲಿದ್ದ  50  ಕ್ಕೂ ಮಿಕ್ಕಿದ ಚಂದಮಾಮ- ಬಾಲಮಂಗಳ ಪುಸ್ತಕಗಳನ್ನು ಬಗಲಿಗೆ ಸೇರಿಸಿದ್ದೆ. ಮತ್ತಷ್ಟು ಪುಸ್ತಕಗಳ ಹುಡುಕಾಟಕ್ಕೆ ಬೆರಳುಗಳು ಮುಂದೆ ಹರಿಯ ತೊಡಗಿದವು.
ಇದು ನಡೆದದ್ದು 2005 ರ ಅಕ್ಟೋಬರ‍್ ತಿಂಗಳಲ್ಲಿ. ಬೆಂಗಳೂರಿನ ಮೆಜೆಸ್ಟಿಕ್‍ನ ಆ ಗಲ್ಲಿಗಳಿಗೆ  ಹೆಜ್ಜೆಗಳು ಸವೆಯುತ್ತಿದ್ದಾಗ, ಈ ರಸ್ತೆ ಬದಿಯ ಪುಸ್ತಕಗಳು ಕರೆದಿದ್ದವು. 50 ಪುಸ್ತಕವನ್ನು ಒಟ್ಟು ಸೇರಿಸುವ ಇರಾದೆ ನನ್ನದು. ಆ ರಾಶಿಯಿಂದ ಒಂದೊಂದೆ ಆಯ್ಕೆ ಮಾಡಿ ಮಡಿಲಿಗಿಟ್ಟೆ. ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗರು ಎದೆ ಬಿಚ್ಚಿ ನಕ್ಕ  ಗುರುತು ಹಿಡಿದಿದ್ದೆ. ಮಲ್ಲಿಗೆಯ ಕವಿ ನರಸಿಂಹ ಸ್ವಾಮಿಯವರ ಕಪ್ಪು ಕಾಡಿಗೆಯ ಮಾತುಗಳು ಎದೆ ತುಂಬಿದ್ದವು. ಜಿಎಸ್‍ಎಸ್‍ರವರ ಅಹಂನ್ನು ಮೆಟ್ಟಿ ಬಿರುಕಿಟ್ಟ ಗೋಡೆಗೆ ಹಚ್ಚಿದ ದೀಪಗಳಿದ್ದವು. ಎಲ್ಲವೂ ನನ್ನ ಮಡಿಲಿನಲ್ಲಿ ಸೇರಿಸುತ್ತಿದ್ದಾಗಲೇ ವ್ಯಾಪಾರಿ ಮಾತಿಗಿಳಿದ,
"ಸಾರ್ ! ನನ್ನಲ್ಲಿ ಒಟ್ಟು 800  ಪುಸ್ತಕವಿದೆ. ಒಂದು 500  ರೂಪಾಯಿಗೆ ಎಲ್ಲವನ್ನು ಕೊಟ್ಟು ಬಿಡುತ್ತೇನೆ ಅಂದ.
"ಇಲ್ಲಪ್ಪ, ಇದರಲ್ಲಿ ಬೇರೆ ಬೇರೆ ಪುಸ್ತಕಗಳಿವೆ.ನನಗೆ ಸಾಹಿತ್ಯ ಮಾತ್ರ ಸಾಕು. ಹುಡುಕುತ್ತಿದ್ದೇನೆ. ಮುಗಿದ ಮೇಲೆ ಹೇಳುತ್ತೇನೆ" ಅಂದೆ. ಇನ್ನಷ್ಟು ಪುಸ್ತಕಗಳನ್ನು ತನ್ನ ಇನ್ನೊಂದು ಚೀಲದಿಂದ ತೆಗೆದು ಸುರಿದಿಟ್ಟ.
ಒಂದೊಂದೇ ಪುಸ್ತಕಗಳನ್ನು ಆಯ್ದು ಪರಿಶೀಲಿಸಿದಾಗ ನನ್ನ ಪರಿಚಯಸ್ಥ ಮುಖಗಳ ಹೆಸರುಗಳೇಷ್ಟೋ ನನ್ನ ಬೆರಳಿಗೆ ಸ್ಪರ್ಶಿಸಿದವು. ನಾಡಿನಾದ್ಯಂತ ಕವಿಗೋಷ್ಠಿ, ಸಾಹಿತ್ಯಗೋಷ್ಠಿಯಲ್ಲಿ ಪರಿಚಯವಾದ ಅದೆಷ್ಟೋ ಕವಿ-ಕವಯತ್ರಿಯರ ಪುಸ್ತಕಗಳನ್ನು ಅಲ್ಲಿ ನೋಡುವಾಗ, ಬೀದಿಯಲ್ಲಿ ಅವರನ್ನು ಮಾತಾಡಿಸಿದಂತೆ ಅನ್ನಿಸಿತು. ಕೆಲವರು ಬದುಕನ್ನೇ ಪದವಾಗಿಸಿದವರು, ಕೆಲವರು ಕನಸುಗಳನ್ನೇ ಮಾಲೆ ಕಟ್ಟಿದವರು ಅಲ್ಲಿ ಆ ರಸ್ತೆ ಬದಿಯ ರಾಶಿಯಲ್ಲಿ ಬಿದ್ದಿದ್ದರು. ಒಂದಷ್ಟು ಅವರುಗಳ ಪುಸ್ತಕಗಳನ್ನು ಆಯ್ದುಕೊಂಡೆ. ವ್ಯಾಪಾರಿ ಸುರಿದ ಇನ್ನೊಂದು ಚೀಲದ ಸುಮಾರು 200 ರಷ್ಟಿದ್ದ ಪುಸ್ತಕದ ರಾಶಿಗೆ ಕೈ ಹಾಕಿದ್ದೆ. ಒಂದು 50 ಪುಸ್ತಕಗಳನ್ನು ಮಗುಚಿದ ನಂತರ ಸಿಕ್ಕಿದ್ದೆ ಬೇರೆ ಪುಸ್ತಕ. ಬದುಕಿನಲ್ಲಿ ಮರೆಯಲಾಗದ ಪುಸ್ತಕ ಅದು..!
ಅಲ್ಲಿ ನಾನೇ ಮಲಗಿದ್ದೆ. ಸವಿದ ಹಲವು ಕ್ಷಣಗಳನ್ನು ಪದಗಳ ಕುಂಚದಲ್ಲಿ ಅದ್ದಿದ್ದ ನನ್ನ ಕನಸುಗಳು. ನಾನೇ ಬೆಳೆಸಿದ ಮಗು. ಅಲ್ಲಿ ನನಗಾಗಿ ಹಸಿದಂತೆ ಮಲಗಿತ್ತು. ಹೌದು..! ಅದು " ಹಗಲು-ರಾತ್ರಿಯ ರೆಕ್ಕೆ". ನನ್ನದೇ ದಿನಗಳಿಗೆ ಹಗಲಿಗೊಂದು ರೆಕ್ಕೆ, ರಾತ್ರಿಗೊಂದು ರೆಕ್ಕೆ ಬೆಳೆಸಿ ಈ ಕನಸಿನ ಲೋಕದಲ್ಲಿ ಮೂಕವಾಗಿ ಹಾರಿದ ಹಕ್ಕಿ. ನನ್ನ ಕೈಗೆ ಬಂದೊಡನೆ ಪಟಪಟ ರೆಕ್ಕೆ ಬಡಿದಂತೆ ಭಾಸವಾಯಿತು. ಪಕ್ಕನೇ ಎಳೆದು ಅದರ ಮೈ ಸವರ ತೊಡಗಿದೆ. ಅಲ್ಲಲ್ಲಿ ಮಾಸಿತ್ತು. ಏನೋ ಸಿಕ್ಕಿದ ಜೀವ  ಒಂದೇ ಸಾರಿಗೆ ಪುಟಗಳನ್ನು ಮಗುಚಿದೆ. ಅಲ್ಲಿ ಚಿಂದಿ ಆಯುವ ಹುಡುಗ ನಿಂತಿದ್ದ, ಗಡ್ಡ ಬಿಟ್ಟ ಭಿಕ್ಷುಕ ಅಲ್ಲಿದ್ದ, ಯಾರೋ  ಕಸದ ತೊಟ್ಟಿಗೆ ಬಿಸುಟ ಅನಾಥ ಮಗು ಬೆಳೆದು ದೊಡ್ಡವಳಾದ ಕುರುಹು ಇತ್ತು. ಕೃಷ್ಣನ ಹದಿನಾರು ಸಾವಿರ ಹೆಂಡತಿಯರನ್ನು ಜಾತಿ-ಜಾತಿಯ ಹೆಸರಿನಲ್ಲಿ ದೇಶದ ಗಲ್ಲಿ ಗಲ್ಲಿಗಳಲ್ಲಿ ಕುಳ್ಳಿರಿಸಿದ್ದು ಅಲ್ಲಿ ಸತ್ಯ ಅನ್ನುತ್ತಿತ್ತು. ನನ್ನದೇ ಪುಸ್ತಕ. ಬೊಗಸೆಯಲ್ಲಿ ಹಿಡಿದು ಎದೆಗೆ ಅವುಚಿಕೊಂಡೆ. ಎಷ್ಟೋ ವರ್ಷಗಳಿಂದ ತಪ್ಪಿಸಿಕೊಂಡ ಮಗು ಸಿಕ್ಕಿದ ಸಂತಸ. ಅದು ಅಚಾನಕ್ಕಾಗಿ ಯಾವುದೋ ದಿಕ್ಕಿಲ್ಲ ರಸ್ತೆ ಬದಿಯಲ್ಲಿ. ಕಣ್ಣೀರು ಬಳಬಳನೇ ಸುರಿಯ ತೊಡಗಿತು.
ನನ್ನ ಮುಖ ನೋಡಿ ಗಲಿಬಿಲಿಗೊಂಡವನಂತೆ ವ್ಯಾಪಾರಿ ಕೇಳಿದ " ಏಕೆ ಸಾರ್ ಅಳುತ್ತಿದ್ದೀರ?" ಅದು ಯಾರ ಪುಸ್ತಕ?".
ಒಂದು ನಿಮಿಷ ಸುಮ್ಮನಿದ್ದು ಅವನಲ್ಲಿ ಪ್ರಶ್ನಿಸಿದ್ದೆ. ಈ ಪುಸ್ತಕವನ್ನು ಯಾರು ಇಲ್ಲಿ  ನಿಮಗೆ ಕೊಟ್ಟರು?.
"ಇದನ್ನು 4  ತಿಂಗಳ ಹಿಂದೆ ಯಾರೋ ತಂದು ಮಾರಿದರು ಸಾರ್. ಒಟ್ಟು ಹತ್ತು ಪುಸ್ತಕಗಳನ್ನು ಅವರಿಂದ 50 ರೂಪಾಯಿಗೆ ಕೊಂಡುಕೊಂಡೆ" ಅಂದ.
ಆ ಪುಸ್ತಕದಲ್ಲಿ ಅಲ್ಲಲ್ಲಿ ಕೆಲವು ಟಿಪ್ಪಣಿಗಳಿದ್ದವು.ಕೆಲವು ಕಡೆ ಪೂರ್ತಿ ಕವಿತೆಗೇ ಬರೆದಿತ್ತು. ಕೆಲವು ಕಡೆ ಸಾಲುಗಳನ್ನು ಗುರುತಿಸಲಾಗಿತ್ತು.ಏನೇ ಆದರೂ, ಕೆಲವು ಪದಗಳು ಅವರುಗಳ ಎದೆಗೆ ಕುಳಿತಿದೆ ಅಂತ ಸಮಾಧಾನಿಸಿಕೊಂಡೆ.
ಸಧ್ಯ..! ಪುಸ್ತಕ ನನಗೇ ಸಿಕ್ಕಿದ್ದು ಅದೃಷ್ಟ. ಇದು ನಾನು ಬರೆದ ಪುಸ್ತಕ ಅಂತ ವ್ಯಾಪಾರಿಗೆ ತಿಳಿಸಿದೆ. ಅವನು ಅಲ್ಲಿಯವರೆ ಹಲ್ಲು ತೋರಿಸದವನು, ಹಲ್ಕಿರಿದು ನಕ್ಕ.
ಈ ಪುಸ್ತಕಗಳು ಮಾರಾಟವಾಗದಿದ್ದರೆ ಏನು ಮಾಡುತ್ತೀರಿ? ಅಂತ ಮರುಪ್ರಶ್ನೆ ಹಾಕಿದ್ದೆ.
ದಿನಕ್ಕೆ 50 ರೂಪಾಯಿಯ ವ್ಯಾಪಾರ ಆಗೋದೇ ಕಷ್ಟ ಸಾರ್. ಯಾರಾದರೂ ಪುಸ್ತಕಗಳನ್ನು ನಮಗೆ ಮಾರೋದೇ ಹೆಚ್ಚು. ತಿಂಗಳಿಗೊಮ್ಮೆ ದಿನಸಿ ಅಂಗಡಿಗಳಿಗೆ  ಕೇಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತೇವೆ. ಅದರ ಲಾಭದಲ್ಲೇ ನಮ್ಮ ಜೀವನ. ಹೀಗೆ ರಸ್ತೆ ಬದಿಯ ಮಾರಾಟದಲ್ಲಿ ನಮಗೆ ಲಾಭವಿಲ್ಲ. ನಿಮ್ಮಂತವರು ವರ್ಷಕ್ಕೆ ಒಬ್ಬರು ಹೀಗೆ 100-150 ಪುಸ್ತಕಗಳನ್ನು  ಕೊಂಡುಕೊಳ್ಳುತ್ತಾರೆ ಅಂದ.
ಅಬ್ಬಾ..! ದಿನಸಿ ಅಂಗಡಿಗೆ ಕೇಜಿಗೊಂದರಂತೆ ಮಾರಾಟ ಆಗುತ್ತವೆ ಅಂದಾಗ ಏನೋ ದಿಗಿಲು ಪ್ರಾರಂಭವಾಯಿತು. ಆ ವ್ಯಾಪಾರಿಯಿಂದ ಒಟ್ಟು 150 ಪುಸ್ತಕಗಳನ್ನು ಕೊಂಡು ಅಲ್ಲಿಂದ ಕಾಲ್ಕಿತ್ತೆ...
-ರವಿ ಮೂರ್ನಾಡು.
-------------------------------------------------

ಅವಧಿ ಮಾಗ್:
ಹಗಲು-ರಾತ್ರಿಯ ರೆಕ್ಕೆ
-ರವಿ ಮೂರ್ನಾಡು.

ಬುಧವಾರ, ಡಿಸೆಂಬರ್ 7, 2011

ಒಮ್ಮೊಮ್ಮೆ ಸೂರ್ಯನಿನ್ನೆ ಬಿದ್ದ ದಟ್ಟ ದರಿದ್ರ ಮಳೆಗೆ ಬಸವಳಿದು
ಈ ದಿನ ಸೂರ್ಯ ಕಾಲಿಗೆ ಗೆಜ್ಜೆ ಕಟ್ಟುವುದಿಲ್ಲ
ದಣಿದ ಇವನ ಹೃದಯ ಪಿಸುಗುಟ್ಟುವುದಿಲ್ಲ

ಒಮ್ಮೊಮ್ಮೆ ಹೀಗೆ ಸೂರ್ಯ ನಿರಾಢಂಬರ
ರಂಗೇರುವುದಿಲ್ಲ ನೀಲಾಂಬರ
ಸುತ್ತಮುತ್ತ ಕೆಂಪು ಬಳಿಯುವುದಿಲ್ಲ
ಗಾಳಿಯೊಂದಿಗೆ ತಂಪು ಸುರಿಯುವುದಿಲ್ಲ
ಭೂರಮೆಯ ರಮಿಸುವುದಿಲ್ಲ.

ಮೌನದಲಿ ಕಡಲ ಮಂಚಕೆ ಒರಗುತ್ತಾ
ಭೂರಮೆಗೆ ಕಪ್ಪು ಹೊದಿಕೆ ಹೊದೆಸುತ್ತಾನೆ
ಹಕ್ಕಿಗಳ ತಟ್ಟಿ ಮಲಗಿಸುತ್ತಾ
ಗಾಳಿಗೆ ಚಾಮರ ಬೀಸಲು ಆದೇಶಿಸುತ್ತಾನೆ

ಇತ್ತ, ಬೇಗ ಮಲಗಿದ ಸೂರ್ಯನಿಗೆ
ಚಂದ್ರ ಸಹಕರಿಸುತ್ತಾ
ನಕ್ಷತ್ರಗಳ ಮನೆ ಕದ ತಟ್ಟಿದ

ಅರ್ಭಟಿಸುತ್ತಿದೆ ಸೂರ್ಯನ ಗೊರಕೆ ಸದ್ದು
ಬೆಚ್ಚಿದ ಭೂರಮೆ ಕಣ್ಣುಜ್ಜಿ ನೋಡುತ್ತಾಳೆ ಮೇಲೆದ್ದು
ನೀಲ ನಭದಲ್ಲಿ ಚಂದ್ರ ನಗುತ್ತ ಬೆಳದಿಂಗಳ ಚೆಲ್ಲುತ್ತಾ
ಇಣುಕುತ್ತಿದ್ದ ನಕ್ಷತ್ರ ವಿಚಿತ್ರ ಸುತ್ತಮುತ್ತ
ಆಕಳಿಸುತ್ತಾ ರಮೆ ಗಾಳಿಯೊಂದಿಗೆ ನೆಲ ಗುಡಿಸಿದ್ದಾಳೆ
ಬಿಂದಿಗೆ ಸೊಂಟದಲ್ಲಿಟ್ಟು ನೀರಿಗೆ ಹೊರಟಿದ್ದಾಳೆ.

ರಮೆಯ ಕಾಲ್ಗೆಜ್ಜೆಗೆ ಸೂರ್ಯ ಥಟ್ಟನೇ ಎಚ್ಚರವಾದ
ಸುತ್ತಮುತ್ತ ಕೆಂಪು ನದಿಯ ಜುಳುಜುಳು ನಾದ
ಚಡಪಡಿಸುತ್ತ ಮೇಲೆದ್ದು ಮೈಮುರಿದ
ಬೆಚ್ಚಗೆ ಮಲಗಿದ್ದ ಕೋಳಿಗಳ ಕೂಗಿಸುತ್ತಾ
ಗೂಡಿಗೆ ಕೈ ಹಾಕಿ ಹಕ್ಕಿಗಳ ತಟ್ಟಿ ಎಚ್ಚರಿಸುತ್ತಾ
ಕೋಗಿಲೆಗೆ ಸುಪ್ರಭಾತ ಹಾಡಲು ಹೇಳುತ್ತಾ
ರಂಗೇರುತ್ತಾ ಮೇಲೆದ್ದ ರಮೆಯ ಹುಡುಕುತ್ತಾ

ನೀರು ತಂದ ರಮೆಗೆ ಸಿಹಿಮುತ್ತ ನೀಡುತ್ತಾ
ಸಂಜೆ ಮಧುಮಂಚದ ಸಿದ್ಧತೆಗೆ ಸೂಚನೆಯಿತ್ತ
ಸೂರ್ಯನ ಮುತ್ತಿಗೆ ರಮೆಯ ಮೈ ಬೆವರಿ
ಹಣೆಯ ತುಂಬಾ ಬೆವರ ಹನಿ
ಹಸಿರ ನೆಲದ ತುಂಬೆಲ್ಲಾ ಇಬ್ಬನಿ..!
-ರವಿ ಮೂರ್ನಾಡು.


ಭಾನುವಾರ, ನವೆಂಬರ್ 27, 2011

ಗಾಳಿಗೆ ಪ್ರಾರ್ಥನೆ


ಗಾಳಿಯೇ ಬೇಡ
ಬಿರುಗಾಳಿಯಾಗಬೇಡ  !
ಉಸಿರಾಡೋ ಎದೆಗೆ ನುಗ್ಗಿ
ಭುಸುಗುಟ್ಟಬೇಡ  !
ಬೇಗುದಿ ಬೆಂಕಿಗೆ
ಜೊತೆ ಸೇರಬೇಡ !

ಕಪ್ಪಿಟ್ಟ ಮೋಡದ
ಎದೆ ಸವರಿ ಚುಂಬಿಸು
ಸುರಿಯಲಿ ಒಂದು ಹನಿ ಇಳೆಗೆ !
ಆಗಸದ ಮೊಗಕೆ
ತಿಳಿ ಬಂದು ಅರಳಲಿ
ಸದಾ ಬೀಸು ನಿನ್ನ ತಂಪು !

ಶಾಂತಿಯ ಹೆಜ್ಜೆಗಳು
ಬೀದಿಗೆ ನಡೆಯಲಿ
ತೆರೆಯಲಿ ನಿನ್ನ ಸ್ನೇಹದ ಭಾಹು !
ಬೀದಿಯ ದೀಪಗಳು
ದಾರಿಯ ತೆರೆಯಲಿ
ಕಾಪಿಡಲಿ ನಿನ್ನದೇ ಉಸಿರು !

ಲೋಕದ ಮಾತಿಗೆ
ಭುಗಿಲೆದ್ದ ಜ್ವಾಲೆಗೆ
ಮೋಡಗಳ ಗುಡುಗಿಸಿ ಕರೆಯೇ !
ನಗುವಾಗಿ ಮಿಂಚಿಗೆ
ಮಳೆಯಾಗಿ ಜೊತೆಗೆ
ಉರಿ ಬೆಂಕಿ ಎದೆಗಳ ತಣಿಸೆ !

ಅಹಂ ಗೋಡೆಗಳ
ಮೇಲೊಂದು ದೀಪ
ಆರದಿರಲಿ ನಿನ್ನ ಬಿರುಸು ನುಡಿಗೆ !
ಬಿರುಕಿಟ್ಟ ಗೋಡೆಗಳ
ಬಿರುಕೊಳಗೆ ನುಗ್ಗಿ ಬಾ
ಬೆಸೆಯಲಿ ಬಂಧಗಳು ಜಗಕೆ !

ಗಾಳಿಯೇ ಬೇಡ
ಬೇಡವೇ ಬೇಡ
ಕಿಚ್ಚುಗಳ ಘರ್ಷಿಸಬೇಡ
ನೋವುಗಳ ತುಂಬಿಸಿ
ದ್ವೇಷಗಳ ಎಬ್ಬಿಸಿ
ಬೆಂಕಿಗೆ ನಾಲಗೆಯಾಗಬೇಡ..!
-ರವಿ ಮೂರ್ನಾಡು

ಮಂಗಳವಾರ, ನವೆಂಬರ್ 22, 2011

ಅವಳ ಕವಿತೆ


ನಾನು ಸುಂದರಾಂಗನಲ್ಲ
ನೀನು ಸುರಸುಂದರಿಯೂ ಅಲ್ಲ
ನಮ್ಮಿಬ್ಬರ ನಡುವೆ
ಒಂದು ಸ್ಪರ್ಶದ ನೆನಪು..!
ಉಸಿರ ಗಾಳಿಗೆ ಸೋಕಿ
ಕೆಂಡವಾಗುತ್ತಿದೆ ಕಣಕಿ
ಮರೆಯಲಾಗದ ಮಧುರ ಬಿಸುಪು..!

ಒಂದಷ್ಟು ಚಳಿಯಿತ್ತು
ನಿನ್ನಲ್ಲಿ ಬಿಸಿಯಿತ್ತು
ಮರವನ್ನಪ್ಪಿದ ಬಳ್ಳಿ ಮನಸ್ಸು..!
ಪ್ರೀತಿ ಭಾಷ್ಯದೊಳಗೆ
ಮಾತು ಕಲಿಸಿದ ನೀನು
ಒಲುಮೆಯಲಿ ಪದವಾದೆ ನಾನು..!

ಭಾಗ್ಯದ ಕದ ತೆರೆದೆ
ಎದೆಗೆ ಕೈಯಿಟ್ಟು ಕರೆದೆ
ಭುಜದೊಳಗೆ ಮುಖವಿಟ್ಟೆ
ನೀನು ತಾಯಿ
ಮುಂಗುರುಳಿಗೆ ಬೆರಳಿಟ್ಟೆ
ನಾನು ಸ್ವಾಮಿ..!

ಆ ದೀಪ ನಕ್ಕಿತು ನಾಚಿ
ಚಂದ್ರಿಕೆಯ ಮುಖದಲ್ಲಿ ಬೆಳಗಿ
ರೆಪ್ಪೆ ಮುಚ್ಚಿತು ನಮಗೆ ಬಾಗಿ
ಶಿರಭಾಗಿ ನಮಿಸಿದೆನು
ಪೂಜೆ ನಿನಗೆ ದೇವಿ
ಹೋಮ-ಧೂಪ- ಹವನ
ನಾ ನಿನಗೆ ತೀರ್ಥ-ಹಣ್ಣು-ಕಾಯಿ..!

ಬದುಕುತ್ತಿದೆ ಬರವಣಿಗೆ
ಭೋಗ-ಭಾಗ್ಯದ ಮೆರವಣಿಗೆ
ರಂಭೆ-ಮೇನಕೆಯ ಜೊತೆಗೆ ಕವಿತೆ
ನಾನು ಪಡೆದವನಲ್ಲ
ನೀನು ತಿರಸ್ಕರಿಸಲೂ ಇಲ್ಲ
ನಡುವೆ ಸುಳಿಯಲಿ ನಕ್ಕು
ಸುಖದ ನೆನಪಿನ ಗಾಳಿ...!
-ರವಿ ಮೂರ್ನಾಡು

ಗುರುವಾರ, ನವೆಂಬರ್ 3, 2011

ಘಳಿಗೆ ಗೀಚಿದಾಗ..!


ಹಗಲಿಡೀ ನಿದ್ದೆಗೆ ಬಿದ್ದು
ಆಕಳಿಸಿ ಕಣ್ತೆರೆದ ರಾತ್ರಿ
ಸಂಜೆ ಆರರ ಘಳಿಗೆ
ಬೊಗಸೆಯೊಡ್ಡಿ ಸ್ವಾಗತಿಸುತ್ತಿದೆ
ಗಾಳಿ ಸ್ಪರ್ಶಕೆ ಬಳುಕಿ
ಮನೆಯ ದೇವರ ದೀಪ

ಅಂಗಳದಿ ಬಣ್ಣ-ಬಳಿದಿದೆ ಕಪ್ಪು
ಕಗ್ಗತ್ತಲು ಸ್ಲೇಟು
ಬರೆಯುತಿದೆ ಮಿಣುಕು ಹುಳು
ಅಆಇಈ ಅಕ್ಷರದ ಸಾಲು..

ಕದಮುಚ್ಚಿ ಒಳ ಸುಳಿದ ರಾತ್ರಿ
ಇಣುಕಿದೆ ಹೆಜ್ಜೆಹೆಜ್ಜೆಗೆ ಕುರುಡು
ರೆಪ್ಪೆ ತೆರದ ದೀಪದ ಕಣ್ಣು
ಸಂದಿ-ಸಂದಿಗೆ ಅವಿತಿದೆ ಕಪ್ಪು
ದೀಪದಡಿ ಕಪ್ಪಿಟ್ಟ ನೆರಳಿಗೆ ಅಳು
ಇವರಿಬ್ಬರಿಗೆ ನಕ್ಕಿತು ಬೆಳಕು.!

ಬಾಯ್ಬಿಟ್ಟಿದೆ ಅಮ್ಮನಿಗೆ ಮಗು
ತೀಡುವಾಗ ಉಬ್ಬಿಗೆ ಕಪ್ಪು
ಅಳು ನಿಂತ ಹಾಲ್ಸ್ವರಕೆ ನಗು
ದೃಷ್ಠಿಗೆ-ಗಲ್ಲಕೆ ಇನ್ನೊಂದು ಕಪ್ಪು
ಜೀಕುತಿದೆ ತೊಟ್ಟಿಲು ಕತ್ತಲು ಕೈಗಳು 
ದೀಪ ಅದಕೆ ಕಾವಲು..!

ಮನೆ ಮುಚ್ಚಿದೆ ಕತ್ತಲೆಯ ಹೊದಿಕೆ
ದಿನ ದಾಟಿ ಹನ್ನೆರಡರ ಘಳಿಗೆ
ಕಣ್ತೆರೆದಿದೆ ದೇವರ ನಂದಾದೀಪ
ಕತ್ತಲೆಗೆ ತೂಗಿ ಮೈಯೊಡ್ಡಿ
ಕನಸುಗಳ ಬಿಚ್ಚಿಟ್ಟ ಮನಸು
ಮುಚ್ಚಿ ರೆಪ್ಪೆಯೊಳಗೆ ಕಪ್ಪು
ಬೆಚ್ಚಿವೆ ಉಸಿರ ಸದ್ದಿಗೆ ಮೌನ

ರಾತ್ರಿಯೆಲ್ಲಾ ನಿದ್ದೆಗೆ ಬಿದ್ದು
ಕತ್ತಲೆಯ ಮುಸುಕೆಳೆದ ಹಗಲು
ಮುಂಜಾವು ಆರರ ಘಳಿಗೆ
ಬೊಗಸೆಯೊಡ್ಡಿ ಸ್ವಾಗತಿಸುತ್ತಿದೆ
ಹಕ್ಕಿಗಳೊಂದಿಗೆ ಸೂರ್ಯ
ತೆರೆಯುತ್ತಿದೆ ದಿನಚರಿಯ ಪುಸ್ತಕ.
---------------------------------------
-ರವಿ ಮೂರ್ನಾಡು.

ಮಂಗಳವಾರ, ನವೆಂಬರ್ 1, 2011

ಆ ಪಟ್ಟಿಯಲ್ಲಿ ಈ ಪದ್ಯಾಣರ ಹೆಸರಿರಬೇಕಿತ್ತು...!


          ಸಾಹಿತ್ಯವನ್ನು ಬೆಳೆಸಿ, ಕನ್ನಡ ಸಂಸ್ಕೃತಿ-ಕಲೆಯನ್ನು ಉಳಿಸಿ ಅಂತ ಭಾಷಣ  ಬಿಗಿಯುವವರ ಅಗತ್ಯತೆ ನಮಗಿಲ್ಲ. ಕನ್ನಡದ ಹೆಸರೇಳಿ ವ್ಯಾಪಾರ-ಪ್ರಚಾರದ ಸ್ವಾರ್ಥಕ್ಕೆ ಇಳಿದವರೂ ಬೇಡ. ಅದನ್ನು ನಿಜವಾಗಿ ಬೆಳೆಸುವವರು ಬೇಕು. ಯಾವುದೇ ಪ್ರತಿಫಲವಿಲ್ಲದೆ, ತನ್ನ ಪಾಡಿಗೆ ತಾನು ಕನ್ನಡಕ್ಕೆ ಮನವನ್ನು ಅರ್ಪಿಸುವವರ ಅಗತ್ಯತೆ ಈ ಸಂದರ್ಭದಲ್ಲಿ ಕನ್ನಡಕ್ಕಿದೆ. ನಾಡಿನ ಯಾವುದೋ ಮೂಲೆಯಲ್ಲಿ ಕುಳಿತು ಸದ್ದಿಲ್ಲದೆ ಬರೆಯುವ ಬರಹಗಾರನ ಪದಗಳನ್ನು ಹೆಕ್ಕಿ ನಾಡಿಗೆ ಪರಿಚಯಿಸುವ ಕನ್ನಡಾಭಿಮಾನಿ ಬೇಕು. ಅಂತಹ ಪ್ರತಿಭಾನ್ವೇಷಕರನ್ನು ಪ್ರೋತ್ಸಾಹಿಸಿ ಅವರ ಹೊಣೆಗಾರಿಕೆಯನ್ನು ಹೆಚ್ಚಿಸುವ ಕಾರ್ಯ ಕನ್ನಡದ ನೆಲದಲ್ಲಿ ನಡೆಯಬೇಕಿತ್ತು. ಅದಕ್ಕೆ  ಕೆಲವೇ ಕೆಲವು ಹೆಸರುಗಳಲ್ಲಿ  ಕನ್ನಡದ ಅಭಿಮಾನದ ಗಾಳಕ್ಕೆ ಸಿಕ್ಕವರು ಕೆಲವರು.
          ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದ್ದನ್ನು ನೋಡಿದ್ದೆ. ಅದರಲ್ಲಿರುವ ಹೆಸರುಗಳನ್ನು ಓದುತ್ತಿದ್ದಂತೆ, ಕೆಲವು ಹೆಸರುಗಳನ್ನು ಆ ಪಟ್ಟಿಯಲ್ಲಿ ನೋಡಬೇಕೆನಿಸಿತು. ತೆರೆಮರೆಯಲ್ಲಿರುವ ಕನ್ನಡದ ಪ್ರತಿಭಾನ್ವೇಷಕರ ಬಗ್ಗೆ ಬರೆಯುವುದು ಕನ್ನಡದ ಬೆಳವಣಿಗೆ ಮಟ್ಟಿಗೆ ಒಳ್ಳೆಯದು. ಅದು ವ್ಯಕ್ತಿ ಸ್ತುತಿಯಲ್ಲ ಅಥವಾ ಇಂತಹವರಿಗೇ ಪ್ರಶಸ್ತಿ ಕೊಡಿ ಅಂತ ದುಂಬಾಲು ಬೀಳುವುದೂ ಅಲ್ಲ. ಕನ್ನಡ ನಾಡಿನ ಸಾಹಿತ್ಯ ಭಂಡಾರವನ್ನು  ಅಲ್ಲಲ್ಲಿ ಹೆಕ್ಕಿ ತೆಗೆದು ತುಂಬಿಸುವ ಕಾಣದ ಕೈಗಳನ್ನು ಸ್ಮರಿಸುವುದು ಕನ್ನಡದ ಅಕ್ಷರಕ್ಕೆ ಸಲ್ಲಿಸುವ ನಮನ.
          ಹಾಗಂತ, ಇವರು ಪ್ರಚಾರ ಪ್ರೀಯರಲ್ಲ, ಪ್ರಶಸ್ತಿ ಬಂದರೂ ಸಾರಾ ಸಗಟಾಗಿ ತಿರಸ್ಕರಿಸಲೂ ಹಿಂಜರಿಯುವುದಿಲ್ಲ. ಅದು ನಿಜವಾದ ಕನ್ನಡಿಗನ ನಿಜವಾದ ಕನ್ನಡದ ಕೆಲಸ. ಹಲವು ಉತ್ಕೃಷ್ಟವಾದ ಕನ್ನಡದ ಕೆಲಸಗಳಲ್ಲಿ  ಕೈ ಕೆಸರು ಮಾಡಿಕೊಂಡು ಆಸ್ವಾಧಿಸುವ ಅಪ್ಪಟ ಕನ್ನಡದ ವಿಶಾಲ ಮನಸ್ಸು . ಪ್ರಚಾರದ ವೇದಿಕೆಗೆ ಹೋಗದೆ ಸದ್ದಿಲ್ಲದೆ ಕನ್ನಡದ ಸಾಗರಕ್ಕೆ ನದಿಗಳನ್ನು ಹರಿಯ ಬಿಡುತ್ತಿದ್ದಾರೆ ಪದ್ಯಾಣ ರಾಮಚಂದ್ರರು. ಈ ಹೆಸರು ಆ ರಾಜ್ಯೋತ್ಸವದ ಪ್ರಶಸ್ತಿ ಪಟ್ಟಿಯಲ್ಲಿರಬೇಕಿತ್ತು. ಏಕೆಂದರೆ, ಕನ್ನಡಕ್ಕಾಗಿ ಇವರ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಬೇಕು.
          ಇವರಿಗಿಂತ ಘಟಾನುಘಟಿಗಳಿದ್ದಾರೆ. ಹಾಗಂತ,ಕನ್ನಡದ ಕೆಲಸ ಮಾಡಿ ಪರಿಪೂರ್ಣರಾಗಿ ನಿದ್ರಾವಸ್ಥೆಯಲ್ಲಿರುವವರು ಬೇಡ. ದ.ಕನ್ನಡ ಜಿಲ್ಲೆಯ ಪತ್ರಿಕಾ ರಂಗದಲ್ಲಿ ಪ್ರವಾಹವನ್ನು ಹರಿಸಿದ  ದಿವಂಗತ ಪದ್ಯಾಣ ಗೋಪಾಲಕೃಷ್ಣರ ಪುತ್ರ ಅಂತ ಹೇಳುವಾಗ, ಪ.ಗೋ.ಕನ್ನಡದ ಸೇವೆ ನಿರಂತರವಾಗಿದೆ ಎಂದು ಹೇಳುವಂತಹದ್ದು. ದೇಶ ಬಿಟ್ಟು ದೇಶದಲ್ಲಿ  ನಡೆಸುವ ಕನ್ನಡದ ಕಾರ್ಯ ಇವರದೇನು ಮಹಾ ? ಅಂತ ಆಶ್ಚರ್ಯವಾಗಬಹುದು.ಇವರ ಕೆಲಸ ಇಷ್ಟೇ..ಒಂದು ಬರಹ ಬರೆದ ಬರಹಗಾನಿಂದ ನೂರು ಬರಹಗಳನ್ನು ಬರೆಸುವ ತಾಕತ್ತುಳ್ಳವರು.  ಅಂತಹ ಒಂದು ಪ್ರೋತ್ಸಾಹದ ಕೆಲಸದಿಂದ ನಾಡಿನಾದ್ಯಂತ ಬೆಳಕಿಗೆ ಬಂದ ಪ್ರತಿಭೆಗಳು ಇನ್ನೇಷ್ಟೋ. ಈ ಕನ್ನಡದ ಅಗಾಧ ಮನಸ್ಸಿನ ಕನ್ನಡದ ಕೆಲಸಕ್ಕೆ ಪೂರ್ವಪರ ಬದುಕಿನ ಇತಿಹಾಸಗಳ ಪರಿಚಯವೇ ಕಾಣುವುದಿಲ್ಲ. ನಾಡಿನಾದ್ಯಂತ ಬರೆಯುತ್ತಿರುವ ಬರಹಗಾರರೇ ಸಾಕು ಇವರ ವ್ಯಕ್ತಿ ಪರಿಚಯಕ್ಕೆ.
          ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ದಿ. ಪ.ಗೋ. ಟ್ರಸ್ಟ್ ನ ಬುನಾದಿಯ ಶಿಲೆಗಳಲ್ಲಿ ಇವರೂ ಒಬ್ಬರು.ಅರಬ್‍ ದೇಶದ  ದೊಹದಲ್ಲಿ ಕುಳಿತು ಬರಹಗಾರರನ್ನು  ಇನ್ನಿಲ್ಲದಷ್ಟು ಬೆಳಕಿಗೆ ತರುತ್ತಾ ಆನಂದವನ್ನು ಅನುಭವಿಸುತ್ತಾರೆಪದ್ಯಾಣ ರಾಮಚಂದ್ರರು..ಇದೇ ದೇಶದಲ್ಲಿ  ವೃತ್ತಿಯಲ್ಲಿ ವೈದ್ಯರಾಗಿರುವ ಬಿಜೂರು ಮೋಹನ್ ದಾಸ್‍ ಅವರ ಹೆಸರು ಕೇಳಿರಬಹುದು. ಗಲ್ಫ್ ಕನ್ನಡಿಗ ಅಂತರ್ಜಾಲ ತಾಣದ ಸ್ಥಾಪಕ ಸಂಪಾದಕರಾದ ಮೋಹನ್‍ ದಾಸರು " ಗಲ್ಫ್ ಕನ್ನಡಿಗ ವರ್ಷದ ವ್ಯಕ್ತಿ" ಅಂತ ಪ್ರಶಸ್ತಿ ನೀಡಿ ಗೌರವಿಸಿದ  ಒಂದು ಸಮ್ಮಾನ ಬಿಟ್ಟರೆ , ಪದ್ಯಾಣರು ಯಾವುದನ್ನು  ನಿರೀಕ್ಷಿಸುವುದಿಲ್ಲ ಅನ್ನುವುದು ಆಲೋಚನೆಗೆ ನಿಲುಕುವ ಮಾತು.
          ಬರಹಗಾರನಿಗೇ ದಿಕ್ಕಿರುವುದಿಲ್ಲ ಅವನ ಬರಹ ಎಲ್ಲಿ ಪ್ರಕಟಿಸಬೇಕೆಂದು. ಅಂತಹ ಸಂದರ್ಭಗಳಲ್ಲಿ ಈ ಪದ್ಯಾಣ ರಾಮಚಂದ್ರರು ಅವರ ಬರಹಗಳನ್ನು ಪ್ರಕಟಿಸಿಯೂ ಇರುತ್ತಾರೆ. ಅಷ್ಟು ಸಾಕು ನೀರಲ್ಲಿ ಮುಳುಗುತ್ತಿದ್ದವನಿಗೆ ಹುಲುಕಡ್ಡಿ ಸಿಕ್ಕಿದಷ್ಟು ಸಂತೋಷ. ಅಷ್ಟರ ಮಟ್ಟಿಗೆ ಕನ್ನಡದ ವಿಷಯದಲ್ಲಿ ಕ್ರೀಯಾಶೀಲರಾಗಿರುವ ಇವರ ಜವಾಬ್ದಾರಿಯನ್ನು ಹೆಚ್ಚಿಸುವ ಅಗತ್ಯತೆ ಇತ್ತು. ಅದು ರಾಜ್ಯದಲ್ಲಿ ನಡೆಯುವ ಗಂಭೀರ ಕನ್ನಡದ ಹಬ್ಬ ರಾಜ್ಯೋತ್ಸವದಲ್ಲಿ ನಡೆಯಬೇಕು. ನಾಡಿನ ಯಾವುದೋ ಮೂಲೆಯಲ್ಲಿ ಕಲೆ-ಸಂಸ್ಕೃತಿ-ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರವಿರಬಹುದು ಅದು  ಪದ್ಯಾಣರ ಕೈಸೇರುತ್ತದೆ. ಅದೇ ರೀತಿ ಅದನ್ನು ನಾಡಿನಾದ್ಯಂತ ಪರಿಚಯವೂ ಅಷ್ಟೇ ಶೀಘ್ರಗತಿಯಲ್ಲಿ ಮುಗಿಸಿ ಬಿಡುತ್ತಾರೆ. ಪ್ರೋತ್ಸಾಹಗೊಂಡ ಬರಹಗಾರನ ಸಂತಸದಲ್ಲಿ ಅವರೂ ಪಾಲ್ಗೋಳ್ಳುತ್ತಾರೆ. ಅದು ನಿಜವಾದ ಕನ್ನಡಾಭಿಮಾನಿಯ ನಿಜವಾದ ಕನ್ನಡದ ಕೆಲಸ. ಇಂತಹವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೂಕ್ತವೇ ಅಂತ ನಾಡಿನ ಮತಕ್ಕೆ ಹಾಕಿ ಅಂತ ಈ ಬರಹ ಒತ್ತಾಯ ಹೇರುವುದಿಲ್ಲ. ಇವರಿಂದ ಉತ್ತೇಜಿರಾದ ಬರಹಗಾರರೇ ರಾಜ್ಯ ಪ್ರಶಸ್ತಿಗೂ ಮಿಗಿಲಾದ ಮನಸ್ಸಿನ  ಕೃತಜ್ಞತೆ ಮೂಲಕ ಅಭಿಮಾನದ ಪ್ರಶಸ್ತಿ ಅರ್ಪಿಸುತ್ತಿದೆ. ಅಷ್ಟರಲ್ಲೇ ಸಂಪೂರ್ಣ ತೃಪ್ತಿಗೊಳ್ಳುತ್ತದೆ ಈ ನಿಸ್ವಾರ್ಥ ಮನಸ್ಸು. ಜೈ ಕನ್ನಡ ಮಾತೆ....!
----------------------------------------------------------------------------------
-ರವಿ ಮೂರ್ನಾಡು.
http://www.gulfkannadiga.com/news-53838.html

ಗುರುವಾರ, ಅಕ್ಟೋಬರ್ 27, 2011

“ಫೇಸ್ಬುಕ್‍” ನಿಸ್ತಂತು ಕನ್ನಡ ಸಾಹಿತ್ಯ - ಒಂದು ಇಣುಕು ನೋಟ !

 ನವೆಂಬರ‍್ ತಿಂಗಳು ಬಂತಲ್ಲ...!  ಸಂತಸದ ಸಂಗತಿಯೆಂದರೆ, ಮಾನ್ಯ ಕಂಬಾರರು  ಜ್ಞಾನಪೀಠ ಪ್ರಶಸ್ತಿ ತಂದು,ಈ "ನವೆಂಬರ‍್ ಕನ್ನಡದ ಹಬ್ಬ" ವನ್ನು ಶ್ರೀಮಂತಗೊಳಿಸಿದರು. ಹನ್ನೊಂದು ತಿಂಗಳು ನಿದ್ದೆಗೆ ಬಿದ್ದು, ಒಂದು ತಿಂಗಳು ಭಾರೀ ಪ್ರಚಾರ ಪಡೆದುಕೊಳ್ಳುವ ಈ "ಕನ್ನಡದ ಹಬ್ಬ" ಅಂದಾಗ ಅದರ ಇನ್ನಿಲ್ಲದ ದೌರ್ಬಲ್ಯಗಳು ಬೀದಿಗೆ ಬರುತ್ತವೆ. ಕನ್ನಡದ ಕಾರ್ಯಕ್ರಮಗಳಲ್ಲಿ ವಿದೇಶಿ ಮೇಕಪ್‍ ಮೆತ್ತಿಕೊಂಡು, ಅರೆಬರೆಯ ಫ್ಯಾಷನ್‍ ಷೋ ವೇದಿಕೆಯಲ್ಲಿ ಇಂಗ್ಲೀಷ್‍- ಹಿಂದಿ ಹಾಡಿಗೆ ನೃತ್ಯ ಮಾಡುವ  ಅವೇಶಗಳು ಮೈಮೇಲೆ ಬರುತ್ತವೆ. ರಾಷ್ಟ್ರದಲ್ಲಿ ಸಾಹಿತ್ಯಕ್ಕಾಗಿ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರ ಆಡಂಭರ ಇದು !. ಅಭಿಮಾನದ ಬಗ್ಗೆ ಮಾತು ಒಕ್ಕಣಿಸುವಾಗ ಹೊರಗೆಡವಲಾರದ ನೋವು. ದೇಶದ ಇತರ ರಾಜ್ಯಗಳ ಜನರಲ್ಲಿರುವ ಅವರ ಮಣ್ಣಿನ ಭಾಷಾಭಿಮಾನಕ್ಕೆ ಹೋಲಿಸಿದಾಗ, ನಮ್ಮಲ್ಲಿ ಪ್ರಚಾರಕ್ಕೆ ಅಭಿಮಾನದ ಸೋಗು ಹಾಕಿದ ಉದಾಹರಣೆಗಳೇ ಹೆಚ್ಚು. ಒಂದು ಕಡೆ ರಾಜ್ಯದ ಹೃದಯ ಭಾಗಗಳೇ ತಾಯಿ ಭಾಷೆಯನ್ನು ಹರಾಜಿಗಿಟ್ಟಿವೆ. ಇನ್ನೊಂದೆಡೆ ನೆಲ ನಮ್ಮದು ಅಂತ ಕಾಳಗಕ್ಕಿಳಿದು, ಜೈಲೊಳಗೆ ಬಂಧಿಯಾದಂತೆ, ಕನ್ನಡ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿದೆ.  ಯಾಕೆ ಹೀಗೆ? ಈ ನವೆಂಬರ‍್ ತಿಂಗಳಲ್ಲಿ ಮಾತ್ರ ಏಕೆ ಕನ್ನಡಕ್ಕೆ ಆವೇಶ..?
          ಎಲ್ಲವನ್ನು ಮೌನದ ಕನ್ನಡಿಯಲ್ಲಿ ನೋಡಿದಾಗ ಕನ್ನಡದ ಭಾವಚಿತ್ರ ಒಡೆದ ಗಾಜಿನಂತೆ ನೂರಾರು ಬಿರುಕುಗಳು ಅಟ್ಟಹಾಸಗೈಯ್ಯುತ್ತಿವೆ. ಹೊರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದ ಪರಭಾಷಿಗರು ಕನ್ನಡದ ಬಗ್ಗೆ ಹಿಗ್ಗಾಮುಗ್ಗ ಮಾತಾಡಿದರು. ಕನ್ನಡದ ಮನಸ್ಸುಗಳು ನೋವು ಅನುಭವಿಸಿದ್ದು  ಯಾವತ್ತಿಗೂ ಮರೆತಿಲ್ಲ. ಎಲ್ಲಿ ಹೋದವು ಭಾಷಾಭಿವೃದ್ಧಿಗೆ ಸರಕಾರ ತಂದ ನೀತಿಗಳು ?. ಶಾಲಾ-ಕಾಲೇಜುಗಳಲ್ಲಿ ಭಾಷೆಯ ಬಗೆಗಿನ ಲಘು ವಿಚಾರಗಳು ವಿದ್ಯಾರ್ಥಿಗಳಲ್ಲಿ ಅಸಡ್ಡೆಗೆ ದಾರಿ ತೋರಿಸುತ್ತಿದೆ. ಕನ್ನಡ ಸಂಘಟನೆಗಳಲ್ಲಿ ಮುತುವರ್ಜಿ ವಹಿಸಿ ಬೀದಿ-ಬೀದಿಯಲ್ಲಿ ಕನ್ನಡದ ಆವೇಷ ಉಕ್ಕಿಸುವ ಉಮ್ಮಸ್ಸು ಮಂಕಾಗಿದೆ. ಗಣ್ಯ ವ್ಯಕ್ತಿಗಳ ರಣ ಕಹಳೆ ಮೊಳಗಿಸುವ ಕನ್ನಡದ ಬಗೆಗಿನ ಮಾತುಗಳು ಜಡ ಹಿಡಿದು ಮಲಗಿವೆ. ಇದು ಇಂದಿನ ಕನ್ನಡದ ದೌರ್ಬಲ್ಯಗಳಲ್ಲಿ ಮೊದಲು ಕಾಣುವಂತಹದ್ದು. ಆಂಗ್ಲ ಮತ್ತು ಹಿಂದಿ ಭಾಷೆಗಳ ನಡುವೆ ಬೇಧಭಾವ  ಭಿತ್ತಿದ ಹಲವು ಉದಾಹರಣೆಗಳು ಹಲವು ವಿಧದಲ್ಲಿ ಅಭಿಮಾನ ಕುಸಿಯುವಂತೆ ಮಾಡಿದೆ ಅಂತ ಖೇಧ ವ್ಯಕ್ತಪಡಿಸುವುದು ಅನಿರ್ವಾಯ.  ಪ್ರಶಸ್ತಿ ಕೊಡುವುದು ಪ್ರಚಾರಕ್ಕೆ ಅಲ್ಲ. ಅದು ಹೊಣೆಗಾರಿಕೆಯನ್ನು ಹೆಚ್ಚಿಸಲಿಕ್ಕೆ. ಪ್ರಶಸ್ತಿ ಅನ್ನುವ ಪದದ  ಇನ್ನೊಂದು ಅರ್ಥ ಇದು. ಟಿ.ವಿ.ಮಾಧ್ಯಮ, ಆಕಾಶವಾಣಿ ಮಾಧ್ಯಮಗಳಂತೂ ಕನ್ನಡದ ಹೆಸರಿಟ್ಟು ಕನ್ನಡಿಗರನ್ನೇ ಬೀದಿಗೆ ತರುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದವರಿಗೆ ಕನ್ನಡದ ನೆಲದಲ್ಲೇ ಕನ್ನಡತನದ ಚುಕ್ಕಾಣಿ ಹಿಡಿದವರ ಉತ್ತರ ಮೌನ.
          ಇಷ್ಟೆಲ್ಲಾ ದೌರ್ಬಲ್ಯಗಳಿದ್ದರೂ ಕನ್ನಡ ಸಾಹಿತ್ಯ ಮತ್ತು ಭಾಷೆ, ಫೇಸ್ಬುಕ್‍ ಎಂಬ  ನಿಸ್ತಂತು ವೇದಿಕೆಗಳಲ್ಲಿ ಹೇಗೆ ಅಗಾಧವಾಗಿ ಬೆಳೆದಿದೆ ಅನ್ನುವ ಒಂದು ಅವಲೋಕನ ಇಲ್ಲಿದೆ. ಜಗತ್ತಿನ ಎಲ್ಲೆಂದರಲ್ಲಿ ಬೇರು ಬಿಟ್ಟಿರುವ ಕನ್ನಡಾಭಿಮಾನಿಗಳ ಸಾಹಿತ್ಯದ ಮಾತುಗಳಿಗೆ ಅಂತರ್ಜಾಲ ತಾಣ ,ಕನ್ನಡದ ನೆಲದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕಡಿಮೆಯಲ್ಲ. ಫೇಸ್ಬುಕ್ ಎಂಬ ಅಂತರ್ಜಾಲ ತಾಣವನ್ನು ಸಮರ್ಥವಾಗಿ ಸಾಹಿತ್ಯಕ್ಕೆ  ಬಳಸಿಕೊಂಡ ಹಲವು ಕನ್ನಡ ಸಮೂದಾಯಗಳ ನಿರ್ವಾಹಕರುಗಳು ಕನ್ನಡವನ್ನು ಹೀಗೂ ಬೆಳೆಸಬಹುದು ಅಂತ ಸಾಧಿಸಿಕೊಟ್ಟಿದ್ದಾರೆ. ಅದೇ ರೀತಿ ನೇರವಾಗಿ ಸಾಹಿತ್ಯಕ್ಕೆ ಧುಮಕದ ಬ್ಲಾಗ್ ಪ್ರತಿಭೆಗಳು ತಮ್ಮದೇ ಆದ ಅಂತರ್ಜಾಲ ತಾಣಗಳಲ್ಲಿ ಸಾಹಿತ್ಯವನ್ನು ತೆಕ್ಕೆಗೆ ತೆಗೆದುಕೊಂಡಿದೆ ಅಂತ ಸಂತಸ ಪಡುತ್ತೇವೆ.
          ಕನ್ನಡ ನೆಲದಲ್ಲಿ ನಡೆಯುವ ಸಾಹಿತ್ಯ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲಾಗದಷ್ಟು  ಸಮಸ್ಯೆಗೆ ಸಿಲುಕಿದಾಗ ಉತ್ತರವಾಗಿ ಬಂದಿದ್ದು ಈ ಫೇಸ್‍ ಬುಕ್ಕ್.! ತುಂಬಿ ತುಳುಕುವಷ್ಟು ಸಾಹಿತ್ಯಗಳು ಬೆಳೆದು ನಿಂತಿದೆ. ಅದರ ಜಾಡನ್ನು ಜಾಲಾಡಿದಾಗ ಸಿಗುವ ಉತ್ತರವಿದು. ಹಲವು ಪ್ರತಿಭೆಗಳು ತಮ್ಮದೇ ಆದ ಸ್ವಂತ ವಿಳಾಸದ ಅಂತರ್ಜಾಲ ತಾಣಗಳಲ್ಲಿ ಸೃಜನಶೀಲ ಸಾಹಿತ್ಯ ಕೃಷಿಯಲ್ಲಿ  ಸದ್ದಿಲ್ಲದಂತೆ ಬರೆಯುತ್ತಿವೆ. ಪತ್ರಿಕಾ ಮಾಧ್ಯಮಗಳು ಮತ್ತು ಸಂಘ-ಸಂಸ್ಥೆಗಳ ಕಣ್ಣಿಗೆ ಕಾಣದ ಹಲವು ಪ್ರತಿಭೆಗಳು ಸಮೃದ್ದವಾಗಿವೆ. ಅವುಗಳನ್ನು  ಮುಂದೆ ತರುವ ಕೆಲಸವನ್ನು ಕನ್ನಡ ನಾಡು ಮಾಡಬೇಕು. ರಾಜಧಾನಿ ಬೆಂಗಳೂರಿನಲ್ಲಿ ಅಥವಾ ರಾಜ್ಯದ ಯಾವುದೋ ಗಲ್ಲಿಯಲ್ಲಿ ನಡೆಯುವ ಸಮಾರಂಭಕ್ಕೆ  ದೂರದಿಂದ ಬರುವುದು ಅಸಾಧ್ಯದ ಮಾತು ಅಥವಾ ತನ್ನ ಕೆಲಸದ ಒತ್ತಡದ ನಡುವೆ ಬರಹಗಾರ ಪಾಲ್ಗೊಳ್ಳಲಾಗದೆಯೂ ಇರಬಹುದು. ಸಮಾರಂಭದಲ್ಲಿ ಭಾಗವಹಿಸಿದವರಿಗಿಂತಲೂ ಮೇಲ್ಮಟ್ಟದಲ್ಲಿ  ಪ್ರತಿಭೆಯನ್ನು ಅನಾವರಣಗೊಳಿಸಿದ ಉದಾಹರಣೆ ಫೇಸ್‍ ಬುಕ್ಕ್ ವೈರ್ ಲೆಸ್‍ ವೇದಿಕೆಯಲ್ಲಿ ಮತ್ತು  ಅವರದ್ದೇ ಆದ ಅಂತರ್ಜಾಲ ತಾಣಗಳಲ್ಲಿ ಬೆಳಕಿಗೆ ಬಂದಿವೆ. ಪುಸ್ತಕ ಬಿಡುಗಡೆಯ ಗೊಡವೆಗೇ ಹೋಗದೆ , ತಮ್ಮದೇ ಅಂತರ್ಜಾಲದ ಸ್ವಂತ  ತಾಣಗಳಲ್ಲಿ ಯಾವ ಅಕಾಡೆಮಿಕ್‍ ಸಾಹಿತ್ಯಕ್ಕೂ ಕಡಿಮೆಯಿಲ್ಲದ ಕನ್ನಡ ಸಾಹಿತ್ಯ ಭಂಡಾರದ ಶ್ರೇಷ್ಠತೆಯನ್ನು ಪಡೆದುಕೊಂಡಿದೆ.                   
          ಫೇಸ್ಬುಕ್ಕಿನಲ್ಲಿ ಕನ್ನಡ ನಿಸ್ತಂತು ವೇದಿಕೆ ತೆರೆದು ಮೊದಲು ಸಾಧಿಸಿ ತೋರಿಸಿಕೊಟ್ಟ ಗೌರವ ಕೊಡಗಿನ ಶನಿವಾರಸಂತೆಯ  ಅಬ್ದುಲ್‍ ಸತ್ತಾರ್ ಅವರದು. ಅದು ’ ಕನ್ನಡ ಬ್ಲಾಗ್" ನಿಸ್ತಂತು ಕನ್ನಡ ಸಾಹಿತ್ಯ ಗೋಷ್ಠಿ ವೇದಿಕೆ. ಪ್ರೇರಿತಗೊಂಡ ಹಲವು ಕನ್ನಡ ಸಮೂದಾಯಗಳು ಇದೀಗ  ಈ ಫೇಸ್ಬುಕ್ ತಾಣದಲ್ಲಿ  ಅಮೋಘವಾದ ಕನ್ನಡ ಬೆಳೆಸುವಲ್ಲಿ ತಲ್ಲೀನವಾಗಿವೆ. ಮಲ್ಲಿಕಾರ್ಜುನ ಗೌಡರ " ಕನ್ನಡ ಕಲ್ಪವೃಕ್ಷ", ಹಾಸನದ  ಜ್ಞಾನದೇವ್ ಬೋಳ್ದೆಯವರ " ಕನ್ನಡ ಸಾಹಿತ್ಯ ಮಂಚ",ದುಬೈನ ಬಿಜೂರು ಗೋವಿಂದಪ್ಪ ಮೋಹನ್ ದಾಸರ ಗಲ್ಫ್ ಕನ್ನಡಿಗರ ಒಕ್ಕೂಟ, ಅದೇ ರೀತಿ ವಿಸ್ಮಯ ವಿಜ್ಞಾನ, ಭವ್ಯ ಭಾರತ ನವ ನಿರ್ಮಾಣ ವೇದಿಕೆ, ನಮ್ಮ ಕನ್ನಡ ನಾಡು, ಕನ್ನಡ ಕವನಗಳು, ಫೇಸ್ಬುಕ್ ಕನ್ನಡ ಗೆಳೆಯರ ಬಳಗ, ಕನ್ನಡಿಗರ ಒಕ್ಕೂಟ, ವಿಶ್ವ ಕನ್ನಡಿಗರ ಒಕ್ಕೂಟ,ನಮ್ಮ ಕನ್ನಡ ಬಹ್ರೆರೈನ್‍, ಕರುನಾಡ ಸ್ನೇಹಿತರು,ಕನ್ನಡ ದ್ವೇಷಿಗಳ ವಿರುದ್ಧ ಕರ್ನಾಟಕ. ಇತ್ಯಾದಿ.ಶರಣ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುತ್ತಿರುವ " ಅನುಭವ ಮಂಟಪ" ಪರದೇಶದ ಜನರಲ್ಲಿಯೂ  ಶರಣ ಸಾಹಿತ್ಯವನ್ನು  ಶ್ರೀಮಂತಗೊಳಿಸುತ್ತಿವೆ ಅನ್ನೋದು ಇನ್ನೊಂದು ಶ್ರೇಷ್ಠ ಮಾತು. ನಮ್ಮ ಮಾಹಿತಿಗೆ ಸಿಗದ ಹಲವು ಸಮೂದಾಯಗಳು ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.  ಶೇ 100 ರಷ್ಟು ಆಂಗ್ಲ ಭಾಷೆಗೆ ಮೀಸಲಾಗಿರುವ ಫೇಸ್ಭುಕ್‍ ತಾಣದಲ್ಲಿ , ಪ್ರತಿಯೊಬ್ಬ ಕನ್ನಡಿಗ ಸದಸ್ಯನನ್ನು ಸೇರಿಸುವಾಗ ಕನ್ನಡದಲ್ಲಿ ಮಾತುಗಳಿಗೆ " ಲಿಂಕ್" ಸಹಾಯಗಳನ್ನು ತೋರಿಸಿದರು. ಹಲವು ಕನ್ನಡಿಗರು  ಇದರಿಂದ ಕನ್ನಡವನ್ನು ಅಂತರ್ಜಾಲದಲ್ಲಿ ಬೆಳೆಸಿದರು ಅನ್ನುವಾಗ ಒಂದು ವಿಧದ ಸಾರ್ಥಕ್ಯ ಭಾವವಿದೆ. ಕನ್ನಡ ಬ್ಲಾಗ್ ಸಮೂದಾಯದ ಬಗ್ಗೆ ಮಾತು ಬಂದಾಗ ಹೆಗಲುಕೊಟ್ಟು ಸೂಕ್ತ ನಿರ್ವಹಣೆಗೆ ಜೊತೆಯಾದವರು ಉಡುಪಿ ಮೂಲದ ದುಬ್ಯೆನ ಪ್ರಮೋದ್‍ ಶೆಟ್ಟಿ, ಬೆಂಗಳೂರಿನ ಪುಷ್ಪರಾಜ್ ಚೌಟ, ಕೊಳ್ಳೇಗಾಲದ  ಮೋಹನ್‍ ವಿ. ಬಬ್ಲಿ, ಸೋಮಶೇಖರ ಬನವಾಸಿ. ದಿನದಿಂದ ದಿನಕ್ಕೆ ಸಾವಿರಾರು ಕನ್ನಡಿಗರನ್ನು ಒಂದೆಡೆಯಲ್ಲಿ  ಕೂರಿಸುತ್ತಿದೆ ಈ ಕನ್ನಡ ಬ್ಲಾಗ್ . ತೆರೆಮರೆಯಲ್ಲಿ ದುಡಿಯುತ್ತಿರುವ ಮೈಸೂರಿನ ವಿಜ್ಞಾನಿ ಮಾನ್ಯ ರಾಜುರಾಮ, ಹಾಸ್ಯ ಸಾಹಿತಿ ಕೋಮಲ್‍ ಕುಮಾರ್, ರಾಜೇಶ್ ದಾವಲ್‍ ನಾಯಕ್, ಪ್ರಕಾಶ್ ಹೆಗಡೆ ಅವರಿಂದಲೂ ಕನ್ನಡ ಸೇವೆ ನಿಂತಿಲ್ಲ. ಸಾಹಿತ್ಯದ ಘಟಾನುಘಟಿಗಳು ಇದರ ಹಿಂದೆ ವ್ಯವಹರಿಸಿದ ರೀತಿ ಕನ್ನಡ ನಾಡು ಹೆಮ್ಮೆ ಪಡುವಂತಹದ್ದು. ಮಾನ್ಯ ವಸಂತ ಕುಮಾರ್,ಬೆಳಗಾಂನ  ಗಂಗಾಧರ್ ದಿವಾಟರ ಹಾಗೂ ರಾಜು ವಿನಯ್‍ ದಾವಣಗೆರೆ  ಮುಂತಾದವರು ಟೊಂಕ  ಕಟ್ಟಿ ನಿಂತು ಕನ್ನಡತನದ ಸಂತಸಕ್ಕೆ ಕಾರಣರಾಗಿದ್ದು ಕನ್ನಡಿಗರ ಧಾರಾಳತನ ಮೇರು ಮಟ್ಟದ್ದು ಅಂತ ತೋರಿಸಿತು.. ಇದು ಇನ್ನಷ್ಟು ಬೆಳೆಯುತ್ತದೆ, ಅದಕ್ಕೆ ಪ್ರತಿಭೆಗಳ ಸಾಹಿತ್ಯ ಬೆಳವಣಿಗೆಯೇ ಸಾಕ್ಷಿ.
          ಇವತ್ತು ಸಾಹಿತ್ಯಗೋಷ್ಠಿ ಅನ್ನುವ  ವಿಚಾರಕ್ಕೆ  ಮಾತಾಡುವುದಾದರೆ,ಸುದ್ಧಿ ಭಿತ್ತರಿಸಿ, ಬರಹಗಳನ್ನು ಆಹ್ವಾನಿಸುವುದು. ಆಯ್ಕೆಯಾದ ಕವಿತೆಗಳಿಗೆ ಅಲ್ಲಿ ಅವಕಾಶಗಳು ಲಭಿಸುವಂತಹದ್ದು. ನಿಗಧಿತ ಸ್ಥಳದಲ್ಲಿ ನಾಲ್ಕು ಗೋಡೆಯ ಕಟ್ಟಡದಲ್ಲಿ ನಡೆಯುವ ಈ ಸಾಹಿತ್ಯ ಗೋಷ್ಠಿಗಳಿಗೆ ಮೊದಲ  ಹಿನ್ನಡೆ ಸಭಾ ಪ್ರೇಕ್ಷಕರು .ಈ ರೀತಿಯ ಸಾಹಿತ್ಯದ  ಕಾರ್ಯಕ್ರಮ ಫೇಸ್ಬುಕ್ ಅಂತರ್ಜಾಲ ತಾಣದಲ್ಲಿ  ಸಾಧ್ಯವುಂಟಾ..!? ಹಾಗಂತ, ನಮ್ಮಲ್ಲಿ ನಾವೇ ಕೇಳಿಕೊಳ್ಳುವ ಸಾಂದರ್ಭಿಕ ಪ್ರಶ್ನೆಯಿತ್ತು. ಸೂಕ್ತ ನಿರ್ವಹಣೆ, ಅದರ ಬಗೆಗಿನ ಆಸಕ್ತ ತಂಡದ ವ್ಯವಸ್ಥಿತ ನಿರ್ಧಾರಗಳು, ಕನ್ನಡಿಗರನ್ನು ಒಗ್ಗೂಡಿಸಿ ನಡೆಸಲು ಸಾಧ್ಯವಿದೆ ಅಂತ ಉದಾಹರಣೆಗಳು ಸಾಭೀತಾಯಿತು. ಇವತ್ತು ಇದೇ ಫೇಸ್ಬುಕ್  ಎನ್ನುವ ಅಂತರ್ಜಾಲ ತಾಣದಲ್ಲಿ ಹಲವು ಕನ್ನಡ ಸಮೂದಾಯಗಳನ್ನು ಕಟ್ಟಿ, ನಿರ್ವಾಹಕರ ಸತತ ಮುತುವರ್ಜಿಯಿಂದ ನಡೆಸಬಹುದು ಅಂತ ಉತ್ತರ ದಟ್ಟವಾದಾಗ, ಹಿಂದಿಗಿಂತಲೂ ಸಾಹಿತ್ಯ ಮುಂದೆ ಸಾಗುತ್ತಿದೆ ಅಂತ ಸಾಕ್ಷಿಗಳು ಸಿಕ್ಕಿದವು. ಅದನ್ನು ಕನ್ನಡ ಸಾಹಿತ್ಯ ಸಂಘಟಕರು ಮತ್ತು ಪತ್ರಿಕಾ ಮಾಧ್ಯಮದ ಮಾನ್ಯರು ಗಮನಿಸಿದರೆ ಉತ್ತರ ಸ್ಪಷ್ಟವಾಗುವಂತಹದ್ದು.
          ಸಾವಿರದ ಗಡಿಯಲ್ಲಿರುವ ಬ್ಲಾಗ್ ಪ್ರತಿಭೆಗಳ ಅಂತರ್ಜಾಲ ಸಾಹಿತ್ಯ ಭಂಡಾರ, ಒಂದಕ್ಕಿಂತ ಒಂದು ಶ್ರೇಷ್ಠ. ಸಾಹಿತ್ಯದ ಹಲವು ಪ್ರಾಕಾರಗಳು ಬೆರಗು ಹುಟ್ಟಿಸುವಂತಹದ್ದು. ಅವುಗಳಲ್ಲಿ ಎಷ್ಠು ಸಾಹಿತ್ಯಗಳು ಪುಸ್ತಕರೂಪದಲ್ಲಿವೆ ಅಂತ ಮಾಹಿತಿಗೆ ಲಭ್ಯವಾಗಿಲ್ಲ. ಕನ್ನಡ ಭಾಷೆ ಮನಸ್ಸಿನ ಭಾವಗಳನ್ನು ಸುಲಭವಾಗಿ ಆಳದಿಂದ ಅರಳಿಸಬಲ್ಲ ಶಕ್ತಿವುಳ್ಳದ್ದು. ಅದು ಬೇರೆ ಭಾಷೆಗಿಂತ ಮನಸ್ಸನ್ನು ಸುಲಭ ರೀತಿಯಲ್ಲಿ ಅನಾವರಣಗೊಳಿಸುವ ಪಂಕ್ತಿಯಲ್ಲಿ ಮೇಲ್ಮಟ್ಟದಲ್ಲಿ ನಿಲ್ಲುವಂತಹದ್ದು. ಅದಕ್ಕೆ ಸಾಕ್ಷಿ ಕನ್ನಡದ ನೆಲ ಬಿಟ್ಟರೂ , ಹೋದೆಡೆಯಲ್ಲಿ ಪದಗಳಾಗಿ ಮಾತಾಡುವಂತಹದ್ದು. ಖ್ಯಾತ ಕಥೆಗಾರ ಮಾನ್ಯ ಅಬ್ದುಲ್ ರಶೀದರ "ಕೆಂಡ ಸಂಪಿಗೆ", ಮಾನ್ಯ ರಾಕೇಶ್ ಶೆಟ್ಟಿ,ಅರವಿಂದ್ ಎಚ್‍, ಎನ್‍.ವಿ.ಸಾತ್ವಿಕ ಅವರ ನೇತೃತ್ವದ " ನಿಲುಮೆ" ಇದರಲ್ಲಿ ಮೇರು ಮಟ್ಟದಲ್ಲಿ ನಿಂತು ಪ್ರತಿಭೆಗಳ ಬೆಳಕಿಗೆ ದಾರಿ ತೋರಿಸುತ್ತಿವೆ. ಹೊರನಾಡ ಕನ್ನಡಿಗರನ್ನು ಕನ್ನಡದ ತೆಕ್ಕೆಯಲ್ಲಿ ಸಿಕ್ಕಿಸಿದ ಮೋಹನ್‍ದಾಸ್ ಬೈಜೂರರ " ಗಲ್ಫ್ ಕನ್ನಡಿಗ" ಅಂತರ್ಜಾಲ ತಾಣವಂತೂ ಇನ್ನಿಲ್ಲದ ಕನ್ನಡದ ಸೊಗಸು. ಕನ್ನಡ ಒನ್‍ ಇಂಡಿಯಾ, ದಟ್ಸ್ ಕನ್ನಡ,ವೆಬ್‍ ದುನಿಯಾ, ಯಾಹೂ ಮುಂತಾದ ಮಾಹಿತಿಗೆ ಲಭ್ಯವಿಲ್ಲದ ತಾಣಗಳು ಕನ್ನಡದ ಕಂಪನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವಾಗ ಕನ್ನಡಕ್ಕೆ ತನ್ನದೇ ಆದ  ಅಂದಾಜು ಇದೆ ಅಂತ ಮನದಟ್ಟಾಯಿತು. ಇದು ಜಗತ್ತಿನ ಯಾವ ಭಾಷೆಗೂ ಸ್ಪರ್ಧಿಸುವಂತಹದ್ದು.
          ಹಲವು ಪ್ರತಿಭೆಗಳು  ಕನ್ನಡ ನೆಲದಲ್ಲಿ  ಮಾತ್ರವಲ್ಲದೆ, ದೇಶದ ಇತರ ರಾಜ್ಯ, ವಿದೇಶಗಳಲ್ಲಿ ಉಂಟು. ಅವರೆಲ್ಲರನ್ನೂ ಒಗ್ಗೂಡಿಸಿ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಒದಗಿಸಿದ ಕೀರ್ತಿ ಈ ಫೇಸ್ಬುಕ್ ಕನ್ನಡ ಸಮೂದಾಯಕ್ಕೆ ಸಲ್ಲಬೇಕು. ಇದರಿಂದ ಸೃಜನಶೀಲ ಸಾಹಿತ್ಯ ಪ್ರಾಕಾರಕ್ಕೆ ಬುನಾದಿ  ಬಂತು. ಪತ್ರಿಕೆಗಳಲ್ಲಿ ಬರುವ ಸಾಹಿತ್ಯ ವಿಚಾರಗಳ ಓದುವಿಕೆ ಸಂಖ್ಯೆ ಹೆಚ್ಚಿರಬಹುದು ಅಥವಾ ಬರೆಯುವವರ ಬರವಣಿಗೆಯಲ್ಲಿ ಪ್ರೌಢತೆ ಸಾಧಿಸಿರಬಹುದು ಅಂತ ಸಂತಸ ಪಡುತ್ತೇವೆ. ಸಮಾಜದಲ್ಲಿ ವಿಚಾರವಂತಿಕೆಗೆ, ಆಲೋಚನಾಭರಿತ ವ್ಯವಸ್ಥೆಗೆ ಪರೋಕ್ಷವಾಗಿ ಬೆಳವಣಿಗೆ ಕಾರ್ಯತಂತ್ರ ರೂಪಿತವಾಗಿರುವುದು ಕಂಡು ಬಂದಿದೆ.
          ದೈನಂದಿನ ಪತ್ರಿಕೆಯಲ್ಲಿ ಭಿತ್ತರವಾಗುವ ಸಾಹಿತ್ಯ ವಿಷಯಗಳಿಗೆ ಸಡ್ಡು ಹೊಡೆಯುವಂತ ಬರವಣಿಗೆಗಳನ್ನು ಕಂಡು ಆಶ್ಚರ್ಯ ಪಡುವಂತಿದೆ ಕನ್ನಡ ಸಾಹಿತ್ಯ ನೆಲ. ಮುಖಾಮುಖಿ ಕವಿಗೋಷ್ಟಿ, ಕಥೆ, ವಿಮರ್ಶೆಗಳು, ಲೇಖನಗಳು, ಬೆಚ್ಚಿ ಬೀಳಿಸುವ  ಅಲೋಚನಾಭರಿತ ಮಾತುಗಳು, ಅಲ್ಲೇ ವ್ಯಕ್ತವಾಗುವ  ಪರ-ವಿರೋಧ ಪ್ರತಿಕ್ರಿಯೆಗಳು, ಸಲಹೆಗಳು ಅಥವಾ ಇನ್ನೊಬ್ಬರ ಸಾಹಿತ್ಯ ಕೃಷಿಯನ್ನು ಓದಿ ತಮಗೆ ತಾವೇ ಉತ್ತೇಜನಗೊಂಡು ಇನ್ನೊಂದು ಬರಹಕ್ಕೆ  ತೊಡಗಿಸಿಕೊಳ್ಳುವ ಕಾರ್ಯ ಫೇಸ್ಬುಕ್‍ ನಿಸ್ತಂತು ವೇದಿಕೆಯಲ್ಲಿ ನಡೆಯುತ್ತಿರುವಾಗ, ಕನ್ನಡ ಸಾಹಿತ್ಯಕ್ಕೆ  ಸಲ್ಲುವ ಅಮೂಲ್ಯ ಕೊಡುಗೆ ಅಂತ  ಭಾಷ್ಯ ಬರೆಯಬೇಕಾಗುತ್ತದೆ.
          ಪತ್ರಿಕೆಯಲ್ಲಿ  ಪ್ರಕಟಣೆಗೆ  ಕಳುಹಿಸುವ ಅದೇಷ್ಟೋ ಬರಹಗಳು  ಸಂಪಾದಕರ ಕಸತೊಟ್ಟಿಗೆ ಆಹಾರವಾಗುತ್ತಿದೆ. ಆಯ್ಕೆ ಮಾಡಿದ ಬರಹಗಳು ಮಾತ್ರ ಅಲ್ಲಿ ಪ್ರಕಟಣೆಗೆ ಸೂಕ್ತ ..ಹೌದು, ಅದು ನಿಜವೂ ಹೌದು.ಇದರಲ್ಲಿ ಪರಿಷ್ಕರಿಸುವಾಗ ಕೆಲವು ನೈಜ ಪ್ರತಿಭೆಗಳೂ ಕಸದ ತೊಟ್ಟಿಗೆ ಹೋದ ಉದಾಹರಣೆಗಳು ಉಂಟು. ಅಥವಾ ಅದು ಮುಂದೆಯೂ ನಡೆಯಬಹುದು. ಸಾಹಿತ್ಯವನ್ನು ಬೆಳೆಸುವ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಇವತ್ತು ಕನ್ನಡ ನಾಡಿನ ಬೀದಿ-ಬೀದಿಯಲ್ಲಿ ಅದ್ಧೂರಿಯ ಸಮಾರಂಭಗಳಲ್ಲಿ ಕಾಣುತ್ತಿದ್ದೇವೆ. ಸಾಹಿತ್ಯವೆಂದರೆ ಅಂತಹ ನಾಲ್ಕು ಗೋಡೆಗಳ ನಡುವೆ ಒಂದಷ್ಟು ಸಾಹಿತ್ಯದ ಗಟ್ಟಿಗರನ್ನು ವೇದಿಕೆಯ ಮೇಲೆ ಕೂರಿಸಿ ಮಾಡುವುದು. ಅವರಿಂದ  ಒಂದಷ್ಟು ಹಿತನುಡಿಗಳನ್ನು ಸಮಾಜಕ್ಕೆ ಭಿತ್ತರಿಸುವಂತಹದ್ದು. ಹಾಗಂತ ಸಾವಿರಾರು ರೂಪಾಯಿಗಳಷ್ಟು ವೆಚ್ಚ ಮಾಡಿ , ಕರಪತ್ರ ಹಂಚಿ.ಪತ್ರಿಕೆಯಲ್ಲಿ ಆಹ್ವಾನಿಸಿದರೂ ಬರುವುದು ಬೆರಳೆಣಿಕೆಯಷ್ಟು ಮಂದಿ. ಅದರಲ್ಲಿ ಸಾಹಿತ್ಯ ಅನ್ನುವ ಮರ್ಮದ ಆಳಕ್ಕೆ ಇಳಿದವರೇಷ್ಟು ಅಂತ ನಮ್ಮಲ್ಲಿ ನಾವೇ ಕೇಳಿಕೊಳ್ಳುವ ಪ್ರಶ್ನೆ.ಕನ್ನಡಿಗರಲ್ಲಿ  ಬೇರೆ ಭಾಷೆಗೆ ಹೋಲಿಸಿದಲ್ಲಿ ಕನ್ನಡದ ಅಭಿಮಾನ ಕಡಿಮೆ ಅಂತ ನೇರವಾಗಿ ಹೇಳುವ ಮಾತಿದು.
          ಹಾಗಾದರೆ, ರಾಜ್ಯಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು, ಹಲವು ಕೇಂದ್ರ ಸಾಹಿತ್ಯ ಅಕಾಡೆಮಿ,ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುವುದಕ್ಕೆ ಮೊದಲು ಈ ಫೇಸ್ ಬುಕ್‍ ಎಂಬ ತಾಣ ಇರಲಿಲ್ಲ  ಅನ್ನುವ ಪ್ರಶ್ನೆ ಉದ್ಬವಿಸುವುದು ಸಹಜ. ಅಂದು ಮುಕ್ಕೋಟಿ- ಪಂಚಕೋಟಿ ಕನ್ನಡಿಗರು ಮೂರು ಸಾವಿರದಷ್ಟು ಸಾಹಿತಿಗಳನ್ನು ಪತ್ರಿಕೆ ನೋಡಿ ಬೆಳೆಸಿದರು.ಈಗ ಅದು ಹತ್ತು ಕೋಟಿಗೂ ಮೀರಿದೆ. ಹದಿನೈದು ಸಾವಿರಕ್ಕೂ ಅಧಿಕ ಸಾಹಿತ್ಯ ಕುಸುಮಗಳಿವೆ. ಅವರಿಗೆಲ್ಲಾ  ಪತ್ರಿಕಾ ಮಾಧ್ಯಮದಲ್ಲಿ ಗುರುತಿಸಿಕೊಳ್ಳುವ ಅವಕಾಶಕ್ಕೆ ತೊಡಕಾಗಿದೆ. ಅಂತಹ ಸಂದರ್ಭದಲ್ಲಿ ಅಂತರ್ಜಾಲ ತಾಣಗಳಲ್ಲಿ ತಮ್ಮ ಸಾಹಿತ್ಯವನ್ನು ಹರಿಯ ಬಿಡುತ್ತಿದ್ದಾರೆ. ಹಿಂದಿಗಿಂತಲೂ ಇಂದು, ಈ ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಹುಲುಸಾಗಿ ಬೆಳೆದಿದೆ. ಅದು ಸದ್ದಿಲ್ಲದಂತೆ.
          ಬಹಳ ದೊಡ್ಡ ಅಭಾಸವೆಂದರೆ, ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸುವುದು. ಇದು ಇಂದಿನ ಪ್ರಸ್ತುತ ಯುಗದಲ್ಲಿ ಸಾಧನೆಯನ್ನು ಅಳತೆ ಮಾಡುವ ಮಾಪನವಾಗಿ ಮಾರ್ಪಟ್ಟಿರುವುದು ದುರಾದೃಷ್ಟ.ಸಾಧನೆ ಅನ್ನುವುದು ಎಲ್ಲಾ ಕಟ್ಟುಪಾಡು- ಬಂಧನವನ್ನು ಮೀರಿದ್ದು. ಆದರೆ ನಾವು ಈಗ ಕಾಣುತ್ತಿರುವುದು ಜಾತಿ-ಪಂಥವನ್ನು ಗಣನೆಗೆ ತೆಗೆದುಕೊಳ್ಳುವ ರಾಜಕೀಯ ನಾಟಕ. ಅದು ನಾಡಿನ ಸಂಸ್ಕೃತಿ,ಭಾಷೆ-ನೆಲೆಯನ್ನು ಹರಾಜಿಗಿಟ್ಟಷ್ಟು ಬೆಲೆ ಕಟ್ಟಿದಂತಾಯಿತು. ತಮ್ಮ ತಮ್ಮೆ ಸಾಧನೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಪ್ರಶಸ್ತಿಗಳ ಅಗತ್ಯತೆ  ಎಲ್ಲಾ ಶ್ರೀಮಂತಿಕೆಯನ್ನು ಮೀರಿ ನಿಲ್ಲುತ್ತವೆ. ಕೋಟ್ಯಾಂತರ ರೂಪಾಯಿ ಹಣವನ್ನು ಸಾಹಿತ್ಯದ ಅಭಿವೃದ್ಧಿಗೋಷ್ಕರ ಯೋಜನೆ ರೂಪಿಸಿ ವ್ಯಯಿಸುವ ಮುನ್ನ ಸರಕಾರ ಮತ್ತು ಕನ್ನಡ ಸಾಹಿತ್ಯ ಸಂಘಟನೆಗಳು ಈ ಲೇಖನದ ಆಶಯವನ್ನು ಗುರುತಿಸಬೇಕು. ಎಲ್ಲರಲ್ಲಿ ಸಾಹಿತ್ಯದ ಅಭಿರುಚಿ ಹುಟ್ಟಿಸಿ,ಸಮಾಜವನ್ನು ಉದ್ಧೀಪನಗೊಳಿಸುವ ಕಾರ್ಯಕ್ಕೆ ಹಿನ್ನಡೆಯಿದೆ. ಆ ದಾರಿಯಲ್ಲಿ ನಡೆಯಲು  ಕನ್ನಡ ನಾಡಿನ ಸಂಘಟನೆಗಳಿಗೆ ಹಲವು ಅಡ್ಡಿ ಆತಂಕಗಳನ್ನು ಕಾಣುತ್ತಿದ್ದೇವೆ. ಅದರಲ್ಲಿ ಮೊತ್ತ ಮೊದಲನೆಯದು ಸಾಹಿತ್ಯದಲ್ಲೇ ತೊಡಗಿಸಿಕೊಂಡಿರುವ ಕನ್ನಡಿಗರು ನೆಲ ಬಿಟ್ಟು  ವಿದೇಶದಲ್ಲಿ ಅಥವಾ ದೇಶದ ಇತರೆ ರಾಜ್ಯಗಳಲ್ಲಿ ನೆಲೆಸಿರುವುದು. ಬದುಕು ಗಟ್ಟಿಯಾದಾಗ ಸಾಹಿತ್ಯ ಗಟ್ಟಿಯಾಗುತ್ತದೆ, ಅದು ಕನ್ನಡ ನೆಲದಲ್ಲಿ ಉದ್ಯೋಗದ ಕೊರತೆ.. ಅದಕ್ಕೆ ಸರಕಾರ ನೀತಿಗಳು, ಸಂಸ್ಥೆಗಳ ನಿಯಮಗಳು ಬದಲಾಗಬೇಕು. ಕನ್ನಡಕ್ಕಾಗಿ ದುಡಿಯುತ್ತಿರುವ  ಹಲವು  ಬ್ಲಾಗ್ ಸಾಹಿತ್ಯ ಪ್ರತಿಭೆಗಳನ್ನು ಹಾಗೂ  ಅಂತರ್ಜಾಲ ತಾಣಗಳನ್ನು ಕನ್ನಡ ನಾಡು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ.
-ರವಿ ಮೂನಾಡು.  

ಮಂಗಳವಾರ, ಅಕ್ಟೋಬರ್ 25, 2011

ದೀಪಾವಳಿಗೆ ನಾಲ್ಕು ಮಾತು


-------------------------
ದೀಪದ ಹಬ್ಬದಲ್ಲಿ ಜಗತ್ತಿನ ಅಂಧರ ಹಣತೆ ಕಣ್ಣುಗಳಲ್ಲಿ ಸಂಭ್ರಮದ ಚಿತ್ತಾರ ಮೂಡಲಿ ಎಂಬ ಒಂದು ಪ್ರಾರ್ಥನೆ ಚಿಗುರೊಡೆಯಿತು. ಅಂಗವಿಕಲರು -ವಯೋವೃದ್ಧರು - ಪುಟ್ಟ ಕಂದಮ್ಮಗಳಿಗೂ ಆಶಾಕಿರಣದ ಹಣತೆ ಬೆಳಗಲಿ .ಅಕ್ಕ-ಪಕ್ಕದವರ ಪಟಾಕಿಯ ಸಂಭ್ರಮದಲ್ಲಿ ಪಾಲ್ಗೋಳ್ಳಲಾಗದ ಬಡವರ ಕನಸು ಕಣ್ಣುಗಳಲ್ಲಿ ಈ ಹಣತೆ ಬೆಳಗುವ ದಿನಗಳು ಎದುರುಗೊಳ್ಳುವುದನ್ನು ಆಶಿಸುತ್ತೇವೆ.
ಪ್ರೀತಿ- ಸ್ನೇಹ ಮತ್ತು ಮಾನವಿಯತೆಯಿಂದ ಜೀವ ಸಂಕುಲವನ್ನು ಪೋಷಿಸುವ ಲಾಲಿತ್ಯ ಬೇಕು. ರಾಕೇಟ್ ವೇಗದಲ್ಲಿ ಓಡುತ್ತಿರುವ ರೋಬೋಟ್ ಯುಗದಲ್ಲಿ ಅದು ಸಾಧ್ಯವ ಅಂತ ಪ್ರಶ್ನೆ. ಗೆಲುವು ಅನ್ನುವ ಬಿಸಿಲುಗುದುರೆಯ ಬೆಂಬೆತ್ತಿ ಸೋಲು ಅನ್ನುವ ಹಣೆ ಪಟ್ಟಿಯನ್ನು ಕಟ್ಟಿಕೊಳ್ಳಲು ನಾವು ಮರೆತಿಲ್ಲ. ದೀಪಾವಳಿಯ ಹಣತೆ ಹಿಡಿದು ನಾವು ಹಬ್ಬಗಳನ್ನು ಆಚರಿಸುತ್ತಿದ್ದೇವೆ.
ಹಣತೆಗಳ ಸ್ವರೂಪವನ್ನೇ ಕಾಣದ ಅಸಂಖ್ಯಾತ ಹಣತೆಗಳು ಕಗ್ಗತ್ತಲೆಯಲ್ಲೇ ಪಟಾಕಿ ಶಭ್ದಗಳನ್ನು ಆಲಿಸುತ್ತಾ, ಸಂಭ್ರಮಿಸುವವರ ಸಂಭ್ರಮವೇ ತಮ್ಮ ಬೆಳಕಿನ ಹಬ್ಬ ಅಂತ ಆಚರಿಸುವ ಅದೇಷ್ಟೋ ಕಣ್ಣಿಲ್ಲದವರಿಗೆ ನನ್ನ ದೀಪಾವಳಿಯ ನಮನಗಳು.ಅವರ ಕಣ್ಣುಗಳು ಈ ದೀಪಾವಳಿಗೆ ಹಣತೆಗಳಂತೆ ತೆರೆದುಕೊಳ್ಳಲಿ.
ರೋಗಗ್ರಸ್ತ ಸಮಾಜದಲ್ಲಿ ದ್ವೇಷದ ಕಿಚ್ಚು ಹೊತ್ತಿಸಿ ಉರಿಯುವ ಹಣತೆ, ಹಸಿವಿನ ಕಬಂಧ ಭಾಹುಗಳಲ್ಲಿ ನಲುಗುತ್ತಿರುವ ಹಸಿವಿನ ಕಗ್ಗತ್ತಲ ಲೋಕದಲ್ಲಿ ಒಂದು ಮಾನವೀಯ ಹಣತೆ ಹಚ್ಚುವ ಕಾರ್ಯ ಜನತೆಯಲ್ಲಿ ಉಗಮವಾಗಬೇಕು. ಅದು ಪ್ರೀತಿ ,ಸ್ವ್ನೇಹ - ಮಾನವೀಯ ಮನಸ್ಸಿನಿಂದ ಮಾತ್ರ ಸಾಧ್ಯ. ವಿದ್ಯೆಯಿಲ್ಲದೆ ದಾರಿ ತಪ್ಪುತ್ತಿರುವ ಮನಸ್ಸುಗಳಿಗೆ ಅಕ್ಷರದ ದೀಪ ಹಚ್ಚಿ..ವಿದ್ಯೆಯಿದ್ದರೂ ಕೆಲಸವಿಲ್ಲದೇ ದಾರಿ ತಪ್ಪಿದವರಿಗೆ ಹಣತೆ ಹಚ್ಚಿ..ಕನ್ನಡ ನಾಡಿನಲ್ಲಿ ಕೆಲಸಕ್ಕಾಗಿ ಭಿಕ್ಷಾಟನೆ ನಿಲ್ಲಿಸಿ. ಅದು ಮಾನವೀಯ ಹಣತೆ ಹಚ್ಚಿ ಬೆಳಕು ನೀಡಿ ಸಾಧಿಸುವಂತಹದ್ದು.
ಸಮಾಜದಲ್ಲಿ ಜಾಗೃತಿ ಮೂಡಿಸುವ ಸಮಾಜಮುಖಿ ಕಾರ್ಯಕ್ಕೆ ಸದಾ ನಿಮ್ಮ ಬೆಂಬಲವಿರಲಿ. ಜಡ್ಡು ಹಿಡಿದ ಸಮಾಜ, ಕಂದಾಚಾರ- ಗೊಡ್ಡು ಸಂಪ್ರದಾಯದ ಹೆಸರಿನಲ್ಲಿ ದಾರಿ ತಪ್ಪಿಸುವವರ ಬಗ್ಗೆ ಎಚ್ಚರವಿರಲಿ. ತಮ್ಮದೇ ಸ್ವಾರ್ಥ ಚಿಂತನೆಯಿಂದ ಸಮಾಜವನ್ನು ದಿಕ್ಕು ಬದಲಿಸುವ " ಹಿಪ್ನಾಟಿಜಂ" ಪ್ರವೃತ್ತಿಗೆ ಬಲಿಯಾಗದಿರಲಿ ಈ ಜನತೆ. ಅನ್ಯಾಯಕ್ಕೆ ಸದಾ ಸೆಟೆದು ನಿಲ್ಲುವ ಶಕ್ತಿ-ಸಾಮರ್ಥ್ಯ, ಕತ್ತಲೆ ಸವಾಲೊಡ್ಡುವ ದೀಪಾವಳಿ ಹಣತೆಗಳು ಮನ- ಮನದಲ್ಲಿ ಬೆಳಕ ಚೆಲ್ಲಲಿ.
-ರವಿ ಮೂರ್ನಾಡು.

ಸೋಮವಾರ, ಅಕ್ಟೋಬರ್ 17, 2011

ದೀಪಾವಳಿಗೆ ನಾಲ್ಕು ಹಣತೆ..!ಈ ಹಣತೆ ನಿಮ್ಮದೆ
ಕಾಪಾಡಿ ನಂದದೆ
ಬದುಕು ಬೊಗಸೆಯೊಳಗೆ
ದಾರಿಗೆ ಕೈ ನಡೆಸಿ ತೀರದವರೆಗೆ..!

ಒಲುಮೆಗೊಂದು ಹಣತೆ
ಹಗಲು-ರಾತ್ರಿಯ ನೊಗಕೆ
ಸುಖ-ದುಃಖ್ಖದ ಉಳುಮೆಯಲಿ ಎದೆಯ ನೆಲ
ಅಹಂ ಅಬ್ಬರವ ಮೆಟ್ಟಿ
ನಗು ಚಿಲುಮೆ ಚಿಮ್ಮಲಿ ಮನದಂಗಳ..!

ಈ ಬೆಳಕೇ ಅಮ್ಮನಂತೆ
ಕರುಳ ಬಳ್ಳಿಯ ಬತ್ತಿಗೆ
ತುಂಬು ಕಂಗಳ ಕಂಬನಿ ತೈಲದಂತೆ
ಕಗ್ಗತ್ತಲ ಸೀಳಿ ಬೆಳಕು ಖಡ್ಗದಂತೆ
ಉರಿದು ವಾತ್ಸಲ್ಯಕೆ ಚಿಮ್ಮಿ ಜಗದ ಹಣತೆ...!

ಮಮತೆಗೊಂದು ಹಣತೆ
ಹಬ್ಬಲಿ ಬೆಟ್ಟದ ತೋಳು
ಬೆನ್ನು ಬಿಕ್ಕಳಿಕೆ ತೀಡಿ ಸಾಂತ್ವನದ ಬೆರಳು
ಬದುಕು ಬಂಧನಕೆ ಕಟ್ಟಿ ಏಳುಕೋಟೆ
ಬಿಚ್ಚಿದರೂ ಬಿಚ್ಚದ  ನಂಟಿಗೆ ಗಂಟಿನಂತೆ..!

ಹಗಲೇ ಇರುಳಿನ ಉಸಿರು
ನಂಬಿಕೆಗೆ ಇನ್ನೊಂದು ಹೆಸರು
ಪ್ರೀತಿ ಹೆಣೆದ ದಿನಗಳ ದೇಹದೊಳಗೆ
ಹಗಲು-ರಾತ್ರಿಯ ಜೋಡಿ ಎತ್ತಿನಂತೆ
ಪ್ರೀತಿಗೊಂದು ಹಣತೆ, ಬದುಕು ಭಂಡಾರದೊಳಗೆ...!

ಈ ನಾಲ್ಕು ಹಣತೆ ನಿಮ್ಮದೇ
ಮನೆ-ಮನೆಯ ದೀಪಾವಳಿಗೆ
ನಂದದಿರಲಿ ಬದುಕು ತೀರದವರೆಗೆ...!
------------------------------------------------------------
-ರವಿ ಮೂರ್ನಾಡು.