ಹಲವು ವರ್ಷಗಳಿಂದ ಆಲೋಚಿಸುತ್ತಿದ್ದೆ. ಅಕ್ಕನನ್ನು ,ಅವಳ ಪುಟ್ಟ ಕಂದಮ್ಮನನ್ನು ಪುನಃ ಈ ಜಗತ್ತಿಗೆ ಕರೆ ತಂದು ಮಾತಾನಾಡಿಸಬೇಕೆಂದು. ಎದೆಯಲ್ಲಿ ಮಾತಾಡುತ್ತಾಳೆ, ಅವಳಿದ್ದಾಳೆ ಅನ್ನಿಸಿತು. ಕನಸುಗಳು ಇಲ್ಲೆ ಇವೆ, ಮಗುವಿನೊಂದಿಗೆ ಪಿಸುಗುಟ್ಟುತ್ತಿದ್ದಾಳೆ. ರಸೀಯಾ ಅಕ್ಕ....! ತೆಳ್ಳಗೆ-ಬೆಳ್ಳಗೆ ಇದ್ದವಳು ಮದುವೆಯ ದಿನ ನನಗೆ ಗೊತ್ತಿಲ್ಲದಂತೆ ಅಪ್ಪ ಹಂಸ ಕಾಕ , ತಾಯಿ ಬಿಪಾತುಮ್ಮ ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ವರ್ಷದ ನಂತರ ಸುದ್ದಿ ಬಂದದ್ದು. ಮಗುವಾದರೂ ಇರಬೇಕಿತ್ತು.
ಮನೆಯ ಒತ್ತಟ್ಟಿಯಲ್ಲೆ ಕುರಾನ್ ಪಠನೆಯ ಪ್ರಾರ್ಥನೆ ಜೋಗುಳ ಹಾಡುತ್ತಿದ್ದವು. ಮಮತೆಯ ಸಾಂಗತ್ಯವನ್ನು ಬಿಪಾತುಮ್ಮ, ರಸೀಯಾ ಅಕ್ಕ, ಲತೀಫ ಬಿರಿಯಾನಿ ಕೊಟ್ಟು ತುಂಬಿಸಿದರು. ರಷೀಯಾ ಅಕ್ಕ ಪಕ್ಕನೇ ಎದುರಿನಲ್ಲಿ ಮಾತಾಡುತ್ತಾಳೆ. ಮೂರ್ನಾಡು ಪಟ್ಟಣದ ಅನತಿ ದೂರದಲ್ಲಿ ಹೊಲಿಗೆ ತರಬೇತಿ ಕೇಂದ್ರಕ್ಕೆ ಹೋಗಿ ಬಟ್ಟೆ ಹೊಲಿಯುವುದನ್ನು ಕಲಿತು, ನನಗೊಂದು ಕೈಚೌಕ ಕೊಟ್ಟಿದ್ದಳು. ಹಲವು ವರ್ಷಗಳವರೆಗೆ ಅವಳಿಲ್ಲದ ಜಾಗದಲ್ಲಿ ನೆನಪಿನ ಬೆವರು ಒರೆಸಿದ್ದೆ. ಶೀತವಾದಾಗ ಗೊಣ್ಣೆಯನ್ನೂ ,ನಂತರದ ವರ್ಷಗಳಲ್ಲಿ ಅವಳಂತೆಯೇ ಅದು ಇಲ್ಲವಾಯಿತು.
ಒಂದು ರಂಝಾನ್ ದಿನ ಚಿನ್ನದ ಬಾರ್ಡರ‍್ ಇರುವ ಲಂಗ ದಾವಣಿಯೊಂದಿಗೆ ಅಂಗಳಕ್ಕೆ ಬಂದಿದ್ದಳು. ಮನೆ- ಅಂಗಳದಲ್ಲಿ ಚಿನ್ನದ ಬೆಳಕು ಸುರಿದು ಮಲ್ಲಿಗೆಯಾಗಿ ನಕ್ಕವಳು. ಮಲ್ಲಿಗೆ ಬಳ್ಳಿ ಹಬ್ಬಿದಂತೆ ಸುತ್ತ ಪರಿಮಳ ಸುರಿದಿದ್ದಳು. ಹಾಗೆಯೇ ಇದೆ ಪರಿಮಳ ಉಸಿರಿನೊಂದಿಗೆ ಬೆರೆತಂತೆ. ಶ್ವೇತ ದಂತಗಳೆಡೆಯಲ್ಲಿನ ನಗು ಕಣ್ಣೆದುರಿನಲ್ಲೇ ಮಲ್ಲಿಗೆ ಮೊಗ್ಗುಗಳನ್ನು ನೋಡುವಾಗಲೆಲ್ಲಾ ಅರಳುತ್ತವೆ.
ಅವಳ ತಮ್ಮ ಲತೀಫನೊಂದಿಗೆ ಒಮ್ಮೆ ಜಗಳವಾಡಿದ್ದೆ. ಲಗೋರಿಯಾಟದಲ್ಲಿ ಚೆಂಡೆಸೆಯುವಾಗ ಮುಖಕ್ಕೆ ಬಿದ್ದದ್ದು.
"ನೀನೇನೋ ಚೆಂಡು ಮುಖಕ್ಕೆ ಎಸೆಯುತ್ತೀಯಾ?! ನೋಡು ಮೂಗಲ್ಲಿ ರಕ್ತ ಬರುತ್ತಿದೆ. ನಾನು ಸತ್ತು ಹೋಗುತ್ತೇನೆ" ಅಂತ ಹೇಳಿದ್ದ.
"ಸತ್ತು ಹೋದರೆ ಹೋಗು, ರಸೀಯಾ ಅಕ್ಕ ಇದ್ದಾಳೆ. ಅವಳೊಂದಿಗೆ ಚೆಂಡಾಡುತ್ತೇನೆ" ಅಂದಿದ್ದೆ.
ಇಬ್ಬರಿಗೂ ಜಗಳ
"ನೀನೇನೋ ನನ್ನನ್ನು ಸಾಯಲು ಹೇಳುತ್ತೀಯಾ?"
ನನ್ನ ಮುಸುಂಡಿಗೆ ಭಾರಿಸಿದ. ಹೊಡೆತ ಬಿದ್ದದ್ದು ಮೂಗಿಗೆ. ನನ್ನ ಮೂಗಲ್ಲೂ ರಕ್ತ.
"ನನ್ನ ಮೂಗಲ್ಲಿ ರಕ್ತ ಬರುತ್ತಿದೆ.. ನಾನು ಸತ್ತು ಹೋಗುತ್ತೇನೆ." ಅಂದಿದ್ದೆ.
ಪಕ್ಕದಲ್ಲೇ ಇದ್ದ ರಸೀಯಾ ಅಕ್ಕ ಅಳುತ್ತಿದ್ದಳು.
ನೋಡುತ್ತಲೇ ಇದ್ದ ಲತೀಫ.. ಅವನೂ ಅಳಲು ಪ್ರಾರಂಭಿಸಿದ. ಇವರಿಬ್ಬರನ್ನೂ ನೋಡಿ ನಾನು ಪ್ರಾರಂಭಿಸಿದೆ. ಚೆಂಡಾಟ ಬಿಟ್ಟು ಅಳುವಾಟವನ್ನು ಕೇಳಿದ ಬಿಪಾತುಮ್ಮ ಬಂದವರೇ ಮೂವರಿಗೂ ಭಾರಿಸಿದರು. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅವರೇ. ರಸೀಯಾ ಅಕ್ಕನೇ ನಮ್ಮಿಬ್ಬರ ಮೂಗಿಗೆ ಎರಡೂ ದಿನ " ಡ್ರಾಪ್ಸ್" ಹಾಕಿದ್ದು. ಪಾಪ... ತಪ್ಪಿಲ್ಲದ ಅವಳಿಗೆ ಬಿಪಾತುಮ್ಮ ಹೊಡೆದರು.
ಅವಳು, ಲತೀಫ ಮದ್ರಸಾಗೆ ಓದಲು ಹೋಗುತ್ತಿದ್ದರು. ಅಲ್ಲಿ ಅರಬ್ಬೀ ಕಲಿಸುತ್ತಾರೆ. ಮದ್ರಸಾದಲ್ಲಿ ಓದುವ ಪುಸ್ತಕವನ್ನು ಯಾರೂ ಮುಟ್ಟಬಾರದು, ಬಹಳ ಪವಿತ್ರವಾಗಿ ಓದಬೇಕೆಂದು ರಸೀಯಾ ಅಕ್ಕ ಹೇಳುತ್ತಿದ್ದಳು.ನಾನಂತೂ ಮುಟ್ಟಲೇ ಇಲ್ಲ. ದಿನನಿತ್ಯ ಬೆಳಿಗ್ಗೆ ಐದೂವರೆ ಗಂಟೆಗೆ ಎದ್ದು ಅವಳು ಅರಬ್ಬೀ ಪಾಠ ಓದುವುದೇ ಚೆಂದ. ಅದೂ ಲಯಬದ್ಧವಾಗಿ. ಆಗಲೇ ಪಟ್ಟಣದ ರಾಮನ ದೇಗುಲದಲ್ಲಿ ಸುಪ್ರಭಾತ ಹಾಡು ಕೇಳುತ್ತಿತ್ತು. ಪ್ರತೀ ದಿನ ಅಕ್ಕ ಓದುವಾಗ ಕಿವಿ ಕುರಾನ್ ಪಠಣದ ಲಯಬದ್ಧ ಗೀತೆ ವಾಚನವನ್ನು ಎದೆಯಲ್ಲಿ ತುಂಬಿಸಿಕೊಳ್ಳುತ್ತಿತ್ತು.
ಹಾಗೇ ಒಂದು ದಿನ ಈ ಅರಬ್ಬೀ ಭಾಷೆಯಲ್ಲಿ ಏನು ಓದುತ್ತಿದ್ದೆ ಅಂತ ಕೇಳಿದ್ದೆ. ಅರಬ್ಭೀ ಲಿಪಿಯಲ್ಲಿರುವ ಮಲಯಾಳಂ ಮಾತುಗಳು ಅಲ್ಲಿರುತ್ತಿದ್ದವು. ದೇವರು ಒಬ್ಬನೇ. ಅವನನ್ನು ನಾವು ಅಲ್ಲಾ ಅನ್ನುತ್ತೇವೆ, ಶಿವ-ಕೃಷ್ಣ ಅನ್ನುತ್ತೇವೆ. ಚರ್ಚಿನಲ್ಲಿ ಜೀಸಸ್ ಅನ್ನುತ್ತೇವೆ ಅಂದಿದ್ದಳು. ಇದೆಲ್ಲಾ ನಿನಗೆ ಹೇಗೆ ಗೊತ್ತು ಅನ್ನುವ ಪ್ರಶ್ನೆ ನನ್ನಲ್ಲಿ ಸಿದ್ಧವಾಗಿತ್ತು.
"ಕಳೆದ ವರ್ಷ ರಾಮ ಮಂದಿರದಲ್ಲಿ ಹರಿಕಥೆ ದಾಸರು ಹೇಳಿದ್ದು ನನಗೆ ನೆನಪಿದೆ" ಅಂದಿದ್ದಳು.
ಪ್ರತೀ ವಾರ್ಷಿಕ ರಾಮನವಮಿ ಹಬ್ಬಕ್ಕೆ ಹತ್ತು ದಿನಗಳ ಕಾಲ ನಡೆಯುವ ದೇವರ ಉತ್ಸವದಲ್ಲಿ ಹರಿಕಥಾ ದಾಸರು ಕಥಾ ಪ್ರಸಂಗ ನೀಡಿದ್ದನ್ನು ಗಮನವಿಟ್ಟು ಆಲಿಸುತ್ತಾಳೆ ಅಂತ ಗೊತ್ತಾಯಿತು. ದೇವರ ಬಗ್ಗೆ ತುಂಬಾ ಅಗಾಧವಾದ ನಂಬಿಕೆ ಹೊತ್ತ ಜೀವ ಅಂತ ಅವಳ ಮಾತು ಕೇಳುವಾಗ ಅನ್ನಿಸುತ್ತಿತ್ತು. ಒಳ್ಳೆ ಜ್ಞಾನವಂತ ಅಕ್ಕ !
ಒಂದು ಗುರುವಾರ ಸಂಜೆ ಶಾಲೆ ಬಿಟ್ಟು ಬಂದಿದ್ದೆ. ಕಾಫಿ ಕುಡಿಯುತ್ತಿದ್ದಾಗ ಒಂದು ದಯಾನೀಯಾ ಆರ್ತಸ್ವರ . ಹೌದು..! ಅದು ರಸೀಯಾ ಅಕ್ಕ. ಕುಡಿಯುವ ಕಾಫಿಯನ್ನು ಅರ್ಧದಲ್ಲಿ ಬಿಟ್ಟು ಅಂಗಳಕ್ಕೆ ಹಾರಿ ಬಂದಿದ್ದೆ. ಅವರ ಮನೆಯ ಬಾಗಿಲು ಮುಚ್ಚಿತ್ತು. ಮತ್ತೊಮ್ಮೆ ಒಳ ಓಡಿ ಬಂದೆ.
"ನಿಜ ಹೇಳು ಯಾರು ಅವನು?" ತಂದೆ ಹಂಸ ಕಾಕನ ಚಾಕುವಿನಂತ ಮಾತು.
"ನನಗೆ ಗೊತ್ತಿಲ್ಲ ಅಪ್ಪ... ನನಗೆ ಗೊತ್ತಿಲ್ಲ.." ಅಕ್ಕನ ಅಂಗಲಾಚುವ ಮಾತು
ಬೆವತು ಬಿಟ್ಟಿದ್ದೆ. ಹಂಸ ಕಾಕನ ಮೇಲೆ ಇನ್ನಿಲ್ಲದ ಕೋಪ ಬಂದಿತು. ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಹೊಡೆಯುವುದನ್ನು ತಡೆಯಬೇಕೆನ್ನಿಸಿತು. ಪಾಪ..! ರಸೀಯಾ ಅಕ್ಕ ಹೆಚ್ಚು ಮೌನದಲ್ಲೆ , ತುಟಿಯಂಚಿನಲ್ಲೇ ನಗುವವಳು. ಪೆಟ್ಟನ್ನು ಹೇಗೆ ಸಹಿಸಿಕೊಳ್ಳುವಳೋ ಅಂತ ದಿಗಿಲು. ಒಂದು ದಿನವೂ ಗಹಗಹಿಸಿ ನಕ್ಕಿದ್ದನ್ನು ಕೇಳಲಿಲ್ಲ. ಕೋಪದಲ್ಲಿ ಯಾರೊಂದಿಗೂ ಎಗರಾಡಿದ್ದು ಕಾಣಲಿಲ್ಲ. ಯಾರಾದರೂ ಹೆಚ್ಚು ಸ್ವರ ವಹಿಸಿ ಮಾತಾಡಿದರೂ ಅವಳ ಕಣ್ಣಂಚಿನಲ್ಲಿ ಹನಿ ಗಟ್ಟುತ್ತಿದ್ದವು. ಮನೆಯ ಪಾತ್ರೆಗಳನ್ನು ತೊಳೆಯುವಾಗಲೂ ಶಬ್ಧಗಳು ಕೇಳುತ್ತಿರಲಿಲ್ಲ. ಅಷ್ಟೋಂದು ಸದ್ದು ಗದ್ದಲ ಬಯಸದ ಮೃದು ಭಾವದ ಮಲ್ಲಿಗೆ ಮನಸ್ಸಿನವಳು ರಸೀಯಾ ಅಕ್ಕ. ಅವಳ ಅಳುವಿನ ಸ್ವರ ಕಣ್ಣನ್ನು ಒದ್ದೆ ಮಾಡಿತ್ತು.
ಸ್ವಲ್ಪ ಸಮಯದ ಬಳಿಕ ಎಲ್ಲವೂ ನಿಶ್ಯಬ್ಧ...! ಅಂದು ಅವಳು ಹೊರಗೆ ಬರಲೇ ಇಲ್ಲ. ಬೆಳಿಗ್ಗೆ ಶಾಲೆಗೆ ಹೊರಡುವಾಗ ಅಂಗಳಕ್ಕೆ ಬಂದೆ. ರಸೀಯಾ ಅಕ್ಕನ ಮುಖದಲ್ಲಿ ಆತ್ಮವಿಶ್ವಾಸ ಇರಲಿಲ್ಲ.
"ಏಕೆ ಹೊಡೆದರು ಅಕ್ಕ ?" ತಗ್ಗಿದ ದ್ವನಿಯಲ್ಲಿ ಕೇಳಿದ್ದೆ. ಏನು ಮಾತಾಡಲಿಲ್ಲ.
"ಶಾಲೆಗೆ ಹೋಗಿ ಬರುತ್ತೇನೆ. ಸಂಜೆ ಹೇಳು" ಅಂದೆ.
"ಇಲ್ಲ, ಇಂದಿನಿಂದ ನಾನು ಹೊಲಿಗೆ ಕಲಿಯಲು ಹೋಗುವುದಿಲ್ಲ. ಅಪ್ಪ ಹೋಗಬೇಡ ಅಂದರು"
ಒಂದು ಸಂತೋಷವನ್ನು ಕಿತ್ತುಕೊಂಡ ಭಾವ ಮುಖದಲ್ಲಿ ಗೋಚರಿಸಿತು. ಈ ಮನೆಯ ನಾಲ್ಕು ಗೋಡೆಯಲ್ಲಿ ಅರಳಿದ ಕನಸುಗಳು ಜಗತ್ತು ನೋಡುವ ಭಾಗ್ಯವನ್ನು ಕೆಳೆದುಕೊಂಡಿತು. ಅಪ್ಪ ಹಂಸ ಕಾಕ ಕಾರಣರಲ್ಲ. ಈ ಜಗತ್ತು. ಈ ಜಗತ್ತಿನ ಕಣ್ಣುಗಳು. ಮನೆಯ ಮಾನ ಕಾಪಾಡುವ ಹೆಣ್ಣು ಹೆತ್ತವರ ಧರ್ಮಕ್ಕೆ ,ಸಮಾಜದ ಹಾಳಾದ ಗೊಜಲುಗಳನ್ನು ಎಳೆ ಮನಸ್ಸು ಎತ್ತರಕ್ಕೆ ಅಲೋಚಿಸಿರಲಿಲ್ಲ.
ಸಂಜೆ ಅವಳು ಅಂಗಳಕ್ಕೆ ಬರಲಿಲ್ಲ. ಲತೀಪ ಹೇಳಿದ, ಹೊಲಿಗೆ ಕೇಂದ್ರದಲ್ಲಿ ಯಾರೋ ಹುಡುಗ ಪುಸ್ತಕದೊಳಗೆ ಪ್ರೇಮ ಪತ್ರ ಇಟ್ಟಿದ್ದ ಅಂತ. ಅದು ಅಪ್ಪ ಹಂಸ ಕಾಕನಿಗೆ ಸಿಕ್ಕಿತು. ತುಂಬಾ ಕಟ್ಟುನಿಟ್ಟಿನ ಮನುಷ್ಯ. ಸಧ್ಯ, ಆ ಪತ್ರದಲ್ಲಿ ಯಾರ ಹೆಸರೂ ಇರಲಿಲ್ಲ. ವಿಷಯ ಅಲ್ಲಿಗೇ ಗಪ್‍ಚಿಪ್ ಆಯಿತು.
ಅಂದಿನಿಂದ ರಸೀಯಾ ಅಕ್ಕ ನಮ್ಮೊಂದಿಗೆ ಚೆಂಡಾಡುವುದು ನಿಂತಿತು. ಸಂತೆಯಿಂದ ತಂದ ಪ್ಲಾಸ್ಟಿಕ್ ಲಾರಿ, ಬಸ್ಸುಗಳ ಓಡಾಡ ಅಂಗಳದಲ್ಲಿ ಬಂದ್ ಆಗಿತ್ತು. ಲತೀಫ ಮಾತ್ರ ನನ್ನೊಂದಿಗೆ ಆಡುತ್ತಿದ್ದ. ಅಕ್ಕ ರಸೀಯಾ ಬಾಗಿಲ ಮರೆಯಲ್ಲಿ ನಿಂತು ನಮ್ಮ ಸಂತಸಗಳಿಗೆ ಮುಖ ಅರಳಿಸಿಕೊಳ್ಳುವುದನ್ನು ಗಮನಿಸಿದ್ದೆ. ನಮ್ಮ ಕೇಕೆ, ಕುಣಿತಗಳಿಗೆ ಸ್ವರ ಆನಿಸಿ ದುಖ್ಖಿಃಸುವುದು ದಿನಗಳಾಯಿತು. ನನ್ನ ಎಳೆ ಮನಸ್ಸು ಒಮ್ಮೊಮ್ಮೆ ಏನೋ ಕಳೆದುಕೊಂಡಿದ್ದು ಹುಡುಕುತ್ತಿತ್ತು. ಅಪ್ಪ- ಅಮ್ಮನ ಹಾರೈಕೆಯ ಕೊರತೆಗೆ ಅದು ದಿನ ಕಳೆದಂತೆ ಮಾಸ ತೊಡಗಿತು.
ಏಳನೇ ತರಗತಿ ಮುಗಿಸಿ ಪಕ್ಕದ ನಾಪೋಕ್ಲು ಹೈಸ್ಕೂಲಿನ ಸರಕಾರಿ ಹಾಸ್ಟೆಲ್‍ಗೆ ಸೇರಿದ್ದೆ. ಶಾಲೆ ಬಿಟ್ಟು ಹಾಸ್ಟೇಲಿನ ಕೋಣೆಗೆ ನುಗ್ಗುವಾಗ ನೆನಪುಗಳು ಬಿಚ್ಚಿಕೊಳ್ಳುತ್ತಿದ್ದವು. ವಾರಕ್ಕೊಮ್ಮೆ ಮೂರ್ನಾಡಿನ ಮನೆಗೆ ಬರುವಾಗಲೆಲ್ಲಾ ಆ ದಿನಗಳ ಮಾತುಗಳು ರಸೀಯಾ ಅಕ್ಕನನ್ನು ಹುಡುಕುತ್ತಿದ್ದವು. ಲತೀಫನೊಂದಿಗೆ ಆಟಗಳು ಮೇಳೈಸುತ್ತಿದ್ದವು. ದಿನಗಳು ಓಡುತ್ತಿದ್ದಂತೆ , ಮನಸ್ಸು ಬೆಳೆಯುತ್ತಾ ಒಂಟಿ ಕ್ಷಣಗಳಿಗೆ ಒಗ್ಗಿಕೊಳ್ಳುತ್ತಿದ್ದವು.
ಒಂದು ಶನಿವಾರ ಮನೆಗೆ ಬಂದಾಗ, ರಸೀಯಾ ಅಕ್ಕನ ಮನೆಯಲ್ಲಿ ಯಾರೂ ಇರಲಿಲ್ಲ. ಅಜ್ಜಿ ಹೇಳಿದಳು ರಸೀಯಾ ಅಕ್ಕ, ಅವರೆಲ್ಲರೂ ಕೇರಳಕ್ಕೆ ಹೋದರು. ಅವಳಿಗೆ ಮದುವೆಯಾಗಿದೆ ಅಂದರು. ಮನಸ್ಸು ಬಿಗಿಯಾಗಲಿಲ್ಲ. ಒಂದು ಬಂಧನದಿಂದ ಇನ್ನೊಂದು ಬಂಧನಕ್ಕೆ ಹೋದ ಹಕ್ಕಿಗೆ ಸ್ವರವಿಲ್ಲ. ಮೂಕವಾಗಿ ಅಳುತ್ತಿರುವುದು ಎಲ್ಲೋ ಮೂಲೆಯಲ್ಲಿ ಕೇಳುತ್ತಿತ್ತು. ಅಪ್ಪ ಹಂಸ ಕಾಕನ ಏಟಿಗೆ ಅಳುತ್ತಿದ್ದ ಆ ಜರ್ಜರಿತ ಧ್ವನಿ ಹಾಗೇ ಹಾದು ಹೋದವು. ಅವಳು ಪುನಃ ಬರಬಹುದೇ ?. ಅಂಗಳಕ್ಕೆ ಬಂದು ಅವರ ಮುಚ್ಚಿದ ಮನೆಯ ಬಾಗಿಲನ್ನು ಕೇಳಿತು ಮನಸ್ಸು..!!!
ಹೌದು... ಅವಳು ಬಂದಳು. ನಾನು ಒಂಭತ್ತನೇ ತರಗತಿಯ ಶಾಲೆಗೆ ಸೇರುವ ಒಂದು ವಾರಕ್ಕೆ ಮೊದಲು. ಅವರ ಮನೆಯಲ್ಲಿ ಸಂಭ್ರಮದ ಗದ್ದಲವೋ ಗದ್ದಲ. ಮಗು ಅಳುತ್ತಿರುವುದು ಕೇಳಿಸಿತು. ಓಡಿ ಅವರ ಮನೆಯ ಒಳ ಹೊಕ್ಕೇ ಬಿಟ್ಟೆ. ರಸೀಯಾ ಅಕ್ಕ.....! ಮಗುವನ್ನು ಮಡಿಲಲ್ಲಿಟ್ಟು ನನ್ನನ್ನು ಪಕ್ಕಕ್ಕೆ ಕರೆದಳು... ದೊಡ್ಡ ಹೆಂಗಸಾಗಿದ್ದಾಳೆ. ಸ್ವರದಲ್ಲಿಯೂ ಅನುಭವವಿತ್ತು.
"ರವಿ... ಮಗು ಹೇಗಿದ್ದೀಯಾ? ನೀನು ದೊಡ್ಡವನಾಗಿದ್ದೀಯಾ..."
ಸಂತೋಷ.. ತುಂಬಾ ಸಂತೋಷ ಅಂತ ತಲೆಯಾಡಿಸಿದೆ. ಮಾತು ಗಂಟಲೊಳಗೆ ಸಿಕ್ಕಿಕೊಂಡಿತು. ಪಕ್ಕನೇ ಮಗುವನ್ನು ಎತ್ತಿಕೊಂಡೆ . ಅವಳಂತೆಯೆ ಇದೆ ಗಂಡು ಮಗು. ಅವಳ ಮಡಿಲಲ್ಲಿ ಹಾಲಿಗಾಗಿ ಅಳುತ್ತಿದ್ದ ಮಗು ನನ್ನ ಬೊಗಸೆಯಲ್ಲಿ ನನ್ನನ್ನೇ ಸುಮ್ಮನೇ ನೋಡುತ್ತಿತ್ತು. ಮತ್ತೆ ಅವಳ ಕೈಗೆ ಮಗುವನ್ನು ನೀಡಿದೆ.
ನೋಡಲು ಹಾತೊರೆಯುತ್ತಿದ್ದ ಕಣ್ಣುಗಳು ರಸೀಯಾ ಅಕ್ಕನನ್ನು ನೋಡಿ ತೇವಗೊಂಡಂತೆ ,ಕೈ ಬೆರೆಳು ಮುಖ ಮುಚ್ಚಿ ಸ್ವಚ್ಚಗೊಳಿಸಿತು. ಅಂದು ಸಂಜೆಯೇ ನಾನು ಹಾಸ್ಟೇಲಿಗೆ ವಾಪಾಸ್ಸು ಬಂದು ಬಿಟ್ಟೆ.
ಎರಡು ತಿಂಗಳು ಕಳೆದು ಮಳೆಗಾಲದ ರೆಜೆಗೆ ಮನೆಗೆ ಬಂದಾಗ ಅಲ್ಲಿ ಅವಳಿರಲಿಲ್ಲ. ಅಪ್ಪ ಹಂಸ ಕಾಕ- ತಾಯಿ ಬೀಪಾತುಮ್ಮ ಇರಲಿಲ್ಲ, ಲತೀಫನೂ ಇಲ್ಲ.
ಮಾವನ ಟೈಲರ್ ಅಂಗಡಿಯಲ್ಲಿ ಕುಳಿತಿದ್ದೆ. ಪಕ್ಕದ ಅಂಗಡಿಯ ಯೂಸುಫ್‍ನೊಂದಿಗೆ ಅವರು ಮಾತಿಗಿಳಿದಿದ್ದರು.
"ಅಲ್ಲ ಡೌರಿಗಾಗಿ ಹೀಗೆ ಮಾಡುವುದಾ? ಕೇಸು ಹಾಕಿದ್ದು ಒಳ್ಳೆಯದಾಯಿತು"
"ಅಲ್ಲ ವಿಶ್ವನಾಥ, ನಿನ್ನೆ ಎಲ್ಲಾ ಪೇಪರಿನಲ್ಲಿ ಸುದ್ಧಿ ಬಂದಿದೆ. ಮಲೆಯಾಳಂ ಮನೋರಮಾದಲ್ಲೂ ಬಂದಿದೆ. ಅವರು ಮನುಷ್ಯರೋ ಪ್ರಾಣಿಗಳೋ?.ಮದುವೆಗೆ ಹತ್ತು ಪವನ್ ಚಿನ್ನ ಹಾಕಿದ್ದಾರೆ. ಅದನ್ನೆಲ್ಲಾ ಮಾರಿದ್ದಾರಂತೆ. ಒಟ್ಟಾರೆ ಅವಳ ಅತ್ತೆ-ಮಾವ ರಾಕ್ಷಸರು. ಅವರನ್ನು ಸುಮ್ಮನೆ ಬಿಡಬಾರದು. ಒಂದು ಲಕ್ಷ ಹಣ ಬರುವ ತಿಂಗಳು ಕೊಡುತ್ತೇನೆಂದು ಹಂಸ ಹೇಳಿದ್ದನಂತೆ. ಮತ್ತೆ ಅಂಗಡಿ ತೆರೆಯಲು ಹಣ ಬೇಕೆಂದು ಕೇಳಿದ್ದು. ಸ್ವಲ್ಪ ಕಷ್ಟವಾಗುತ್ತದೆ ಅಂದಾಗ ಜಗಳವಾಗಿ ಕೆನ್ನೆಗೆ ಹೊಡೆದಾಗ ತೀರಿ ಹೋಗಿದ್ದಂತೆ ಮಾರಾಯ. ಅವಳ ಕೈಯಲ್ಲಿದ್ದ ಸಣ್ಣ ಮಗುವೂ ಕೈಯಿಂದ ನೆಲಕ್ಕೆ ಬಿದ್ದು ಸತ್ತಿದೆ.ಗೊತ್ತಿಲ್ಲದಂತೆ ಬಾವಿಗೆ ಎಸೆದು ಆತ್ಮ ಹತ್ಯೆ ಅಂತ ಅವರು ಕೇಸು ಹಾಕಿದ್ದಾರಂತೆ." ರೋಷದಲ್ಲಿ ಅವರು ಮಾತನಾಡುತ್ತಿದ್ದರು.
ಸ್ವಲ್ಪ ಕುತೂಹಲ ಅನ್ನಿಸಿತು. ಹಿಂದಿನ ದಿನದ ಪತ್ರಿಕೆಗಳನ್ನು ಹುಡುಕಲು ಶುರು ಹಚ್ಚಿದ್ದೆ. ಪತ್ರಿಕೆ ಸಿಕ್ಕಿತು. ಕೋಣೆಗೆ ನುಗ್ಗಿ ಅವಳ ಸ್ಮಶಾನದ ಮನೆಯ ಕಡೆಗೆ ಕಿವಿ ನೆಟ್ಟಿತು. ಮತ್ತೊಮ್ಮೆ ಎದ್ದು ಅಂಗಳಕ್ಕೆ ಬಂದೆ. ಅವರ ಮನೆಯ ಹಿಂಬದಿಯ ಬಾಗಿಲು ಮುಚ್ಚಿತು.
ಎಲ್ಲೋ ಓದಿದ್ದ ಸಾಲು ಮನೆಯ ಬಾಗಿಲಲ್ಲಿ ಬರೆದಂತೆ ಕಂಡಿತು.
"ದೇವರು ಎಲ್ಲರಿಗೂ ನೆಮ್ಮದಿ ಕೊಡಲಾರ. ಒಳ್ಳೆಯವರನ್ನು ಹೆಚ್ಚು ಕಾಲ ಇರಲು ಬಿಡಲಾರ" ಪಾಪಿ ಜಗತ್ತು ಮುಷ್ಠಿಯಷ್ಟು ಸುಖಕ್ಕೆ ಬೆಟ್ಟದಷ್ಟು ದುಖ್ಖಃ ಚೆಲ್ಲುತ್ತದೆ.
ಮನೆ ಒಳಗೆ ಬಂದೆ. ಅಜ್ಜಿ ಹೇಳಿದರು. " ರಸೀಯಾ ಹೋಗುವಾಗ ನಿನ್ನನ್ನು ತುಂಬಾ ಕೇಳಿದ್ದಳು. "
-ರವಿ ಮೂರ್ನಾಡು.
ಮನಕಲಕುವಂತಿದೆ ರವಿಯಣ್ಣ. ಇಂತಹಾ ಅದೆಷ್ಟೋ ರಸಿಯಕ್ಕ ನಮ್ಮಲ್ಲಿ 'ಅಳಿಸಿ'ಹೋಗಿದ್ದಾರೆ. ಮಿದುಳಲ್ಲಿ ರದ್ದಿ ತುಂಬಿರುವ ಕ್ರೂರಿ ಸಮಾಜಕ್ಕೆ ಬುದ್ಧಿಬರುವವರೆಗೂ ಈ ಸತ್ಯಕಥೆ ಮುಂದುವರಿಯುತ್ತಲೇ ಹೋಗುವುದು /
ಪ್ರತ್ಯುತ್ತರಅಳಿಸಿಇಷ್ಟೊಂದು ಸುಂದರಚಿತ್ರಣ ಕೊಟ್ಟ ನಿಮಗೊಂದು ಧನ್ಯವಾದ. ರಸಿಯಕ್ಕಳಿಗೆ ಅಲ್ಲಾಹು ಶಾಂತಿ ಕೊಡಲೆಂದು ಪ್ರಾರ್ಥಿಸುತ್ತೇನೆ.
ಕಥೆಯನ್ನು ಓದಿ ತೇವಗೊಂಡೆ.ಕಥೆ ಯನ್ನಷ್ಟಕ್ಕೇ ತಾನೇ ಓದಿಸಿಕೊಳ್ಳುತ್ತದೆ.ಕೊನೆಯ ಈ ಮಾತು ಮನಸ್ಸನ್ನು ಕಿವುಚಿತು....."ದೇವರು ಎಲ್ಲರಿಗೂ ನೆಮ್ಮದಿ ಕೊಡಲಾರ. ಒಳ್ಳೆಯವರನ್ನು ಹೆಚ್ಚು ಕಾಲ ಇರಲು ಬಿಡಲಾರ" ಪಾಪಿ ಜಗತ್ತು ಮುಷ್ಠಿಯಷ್ಟು ಸುಖಕ್ಕೆ ಬೆಟ್ಟದಷ್ಟು ದುಖ್ಖಃ ಚೆಲ್ಲುತ್ತದೆ.
ಪ್ರತ್ಯುತ್ತರಅಳಿಸಿಕೊನೆಗೆ,ಮನೆ ಒಳಗೆ ಬಂದೆ. ಅಜ್ಜಿ ಹೇಳಿದರು. " ರಸೀಯಾ ಹೋಗುವಾಗ ನಿನ್ನನ್ನು ತುಂಬಾ ಕೇಳಿದ್ದಳು. "
ಎನ್ನುವಾಗ ಹೃದಯ ಒಡೆದು ಹೋಗುವುದು.ಕಥೆ,ಕಾವ್ಯ ಕಟ್ಟುವುದರಲ್ಲಿ ಸೂಕ್ಷ್ಮ ಮನಸ್ಸನ್ನು ಹೊಂದಿರುವ ರವಿ ಮೂರ್ನಾಡು ಅವರು ಸಾಹಿತ್ಯ ಶಾರದೆಯ ಅನರ್ಘ್ಯ ರತ್ನ.
ರವಿಯಣ್ಣ ನನಗೇ ಗೊತ್ತಿಲ್ಲದೆ ಭಾವುಕನಾಗಿ ಬಿಟ್ಟೆ, ಕಣ್ಣು ತೇವವಾಗಿ ಬಿಟ್ಟಿದೆ..:( ಮನಕಲಕುವ ಕಥೆ, ಆ ರಸೀಯಾಕ್ಕಳ ಮುಗ್ಧಮನಸ್ಸಿನ ದುಗುಡಗಳನ್ನು ನಿಮ್ಮ ಮಾತುಗಳು ಮನಮುಟ್ಟುವಂತೆ ಹೊರಹಾಕಿದೆ.. ಈ ಸಮಾಜದ ಕೆಟ್ಟ ಕ್ರೂರ ಮುಖಗಳ ಅನಾವರಣವಾಗಿದೆ ಈ ಕತೆಯಲ್ಲಿ.. ಒಬ್ಬ ವಯಸ್ಸಿನ ಹುಡುಗ ಯಾವ ಹುಡುಗಿಯೊಂದಿಗೆ ಮಾತಾಡಿದರೂ ಕಟಕಿಯಾಡದ ಈ ಕ್ರೂರ ಸಮಾಜ ಒಬ್ಬ ಹೆಣ್ಣುಮಗಳು ಒಂದು ಹುಡುಗನೊಂದಿಗೆ ತನ್ನ ಅಣ್ಣ ತಮ್ಮನಂತೆ ಭಾವಿಸಿ ಮಾತನಾಡಿದರೂ ಹುರಿದು ಮುಕ್ಕಿಬಿಡುತ್ತದೆ.. ಇನ್ನು ಅಪ್ಪನ ಅಷ್ಟೆಲ್ಲಾ ಕಷ್ಟಗಳನ್ನು ತಾಳಿಕೊಂಡು ಬೆಳೆದ ಅಕ್ಕ ತನ್ನ ಗಂಡನ ಮನೆಯಲ್ಲೂ ಸುಖವನುಭವಿಸದೆ ಆ ಜನರ ವರದಕ್ಷಿಣೆ ಧಾಹಕ್ಕೆ ಬಲಿಯಾಗಿದ್ದು ಮನಸ್ಸನ್ನು ತೇವವಾಗಿಸಿತು.. ಅಷ್ಟೆಲ್ಲಾ ಒಳ್ಳೆಯ ಗುಣಗಳಿದ್ದ ಒಬ್ಬ ಮುಗ್ಧ ಮನಸ್ಸಿನ ಹೆಣ್ಣುಮಗಳಿಗೆ ಮೋಸ ಮಾಡಿದ ಈ ಸಮಾಜಕ್ಕೆ ನನ್ನ ಧಿಕ್ಕಾರವಿರಲಿ, ಈ ಕ್ರೂರ ಮೃಗಗಳಂತಹ ಜನರಿಗೆ ನನ್ನ ಧಿಕ್ಕಾರವಿರಲಿ, ವರದಕ್ಷಿಣೆ ಪಿಡುಗುಗಳಂತಹ ಅನಿಷ್ಟ ಪದ್ಧತಿಗಳಿಗೆ ಧಿಕ್ಕಾರವಿರಲಿ..
ಪ್ರತ್ಯುತ್ತರಅಳಿಸಿ"ದೇವರು ಎಲ್ಲರಿಗೂ ನೆಮ್ಮದಿ ಕೊಡಲಾರ. ಒಳ್ಳೆಯವರನ್ನು ಹೆಚ್ಚು ಕಾಲ ಇರಲು ಬಿಡಲಾರ"
ಈ ಸಾಲಂತೂ ಬದುಕಿನುದ್ದಕ್ಕೂ ಮನಸ್ಸನ್ನು ಕಾಡುತ್ತದೆ, ಆ ರಸೀಯಾ ಅಕ್ಕ ಮತ್ತು ಅವಳದೇ ಪ್ರತಿರೂಪವಾದ ಆ ಮುಗ್ಧ ಮಗುವಿನ ಆತ್ಮಗಳಿಗೆ ಆ ಭಗವಂತ ಶಾಂತಿ ಕೊಡಲಿ.. ಅವಳನ್ನು ಕೊಂದ ಆ ಪಾಪಿ ಜನರಿಗೆ ಆ ದೇವರು ಎನ್ನುವವನಿದ್ದರೆ ಸರಿಯಾದ ಶಿಕ್ಷೆ ಕೊಡಲಿ..
ಪ್ರೀತಿಯ ರವಿ ಸಾರ್.
ಪ್ರತ್ಯುತ್ತರಅಳಿಸಿರಷೀಯಾ ಅಕ್ಕ ಒಂದು ಅತ್ಯುತ್ತಮ ಮನ ಮಿಡಿಯುವ ಕಠನ.
ಕ್ರೂರ ಸಮಾಜದ ಹುಣ್ಣುಗಳಿಗೆ ನೀವು ಕನ್ನಡಿ ಹಿಡಿದಿದ್ದೀರ.
ನೀವು ಉತ್ತಮ ಕವಿಗಳು ಮತ್ತು ಉತ್ತಮ ಕಥೆಗಾರರು.