ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ ನನ್ನಲ್ಲಿತ್ತು. ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!
ಒಮ್ಮೆ 2008 ರಲ್ಲಿ ಹಾಗೇ ಆಯಿತು.ವಾರ್ಷಿಕ ಲೆಕ್ಕಪತ್ರಗಳ ಅಂತಿಮ ತಪಾಣೆಯ ಪರಿಶೀಲನೆ. ಅದು ಡಿಸೆಂಬರ‍್ ತಿಂಗಳ ಕ್ರಿಸ್‍ಮಸ್ ದಿನಗಳು. ಆಡಿಟರ‍್ ಕಚೇರಿ ನಮ್ಮ ಕಚೇರಿಯಿಂದ ಅನತಿ ದೂರದಲ್ಲಿದೆ. ಈ ರಸ್ತೆ ಭಾರೀ ಜನಜಂಗುಳಿ. ಇವರಲ್ಲಿ ಕಳ್ಳರು ಯಾರೂ ಅಂತ ಗೊತ್ತಾಗುವುದಿಲ್ಲ. ಕಪ್ಪು ಜನರು, ಎಲ್ಲರೂ ಒಂದೇ ರೀತಿ ಕಾಣುತ್ತಿದ್ದರು. ಕಳ್ಳರ ಉಪಟಳವಿರುವುದರಿಂದ 100 ಮೀಟರ್ ಹೋಗಬೇಕಾದರೂ ಕಂಪೆನಿಯ ಕಾರಿನಲ್ಲಿ ಹೋಗುವುದೇ ಎಲ್ಲರೂ ರೂಢಿಸಿಕೊಂಡಿರುವ ವಾಡಿಕೆ. ಧಾಳಿ ಮಾಡಿದಾಗ ಎಲ್ಲರೂ ಮುಂಜಾಗ್ರತೆಯಾಗಿ ಜೀವ ರಕ್ಷಿಸಿಕೊಳ್ಳಲು ಇಲ್ಲಿನ 10 ಸಾವಿರ ಕ್ಯಾಮರೂನ್ ಫ್ರಾಂಕ್ (ಭಾರತದ 1000 ರೂ.) ಯಾವಾಗಲೂ ಇಟ್ಟಿರುತ್ತಾರೆ. ಹಾಗೇ ನಾನು ಇಟ್ಟಿದ್ದೆ. ಸಾಮಾನ್ಯವಾಗಿ ಮೊಬೈಲ್-ವಾಚುಗಳನ್ನು ಯಾರಿಗೂ ಗೋಚರಿಸಿದಂತೆ ಜೇಬಿನೊಳಗೇ ಇಟ್ಟು ಸಂಚರಿಸುವುದು. ನಡು ಮಧ್ಯಾಹ್ನ ಆಡಿಟರ್ ಕಚೇರಿಯಿಂದ ಹೊರಬಿದ್ದು ನಮ್ಮ ಕಚೇರಿಗೆ ಬರುವ ತುರಾತುರಿಯಲ್ಲಿ ಅ ಜನಜಂಗುಳಿ ರಸ್ತೆಯಲ್ಲಿ ನಡೆದೇ ಬರುತ್ತಿದ್ದೆ. . ಯಾರದೋ ಬ್ಯಾಂಕ್ ಅಧಿಕಾರಿಯ ಕರೆ ಬಂತು. ಮೊಬೈಲ್ ಹಿಡಿದು ಮಾತಾಡಿ, ಹಾಗೆಯೆ ಕೈಯಲ್ಲಿ ಹಿಡಿದಿದ್ದೆ. ಈ ರಸ್ತೆಗೆ ಮಧ್ಯೆ ಹಾದು ಹೋಗುವ ತಿರುವಿಗೆ ಬರುತ್ತಿದ್ದಂತೆ ,ಯಾರೋ ಸ್ಪರ್ಶಿದ ಅನುಭವಾಯಿತು. ತಿರುಗಿ ನೋಡಿದೆ. ವ್ಯಕ್ತಿಯೊಬ್ಬ ಓಡುತ್ತಿದ್ದಾನೆ. ನನ್ನ ಕೈ ನೋಡಿದೆ, ಮೊಬೈಲ್ ಇಲ್ಲದೆ ಖಾಲಿಯಾಗಿತ್ತು. ಅಷ್ಟು ನಾಜೂಕಾಗಿ ಅವನು ಕಿತ್ತಿದ್ದ. ಕಿರುಚಿದೆ...! ದಾರಿ ಹೋಕರು ನನ್ನನ್ನೇ ನೋಡುತ್ತಿದ್ದರು. ಕೆಲವರು ನಗುತ್ತಿದ್ದರು. ಮುಜುಗರ ಅನ್ನಿಸಿತು. ಆ ಕಳ್ಳ ಸರಕ್ಕನೇ ಪಕ್ಕದ ಗಲ್ಲಿಯಲ್ಲಿ ನನ್ನ ಮೊಬೈಲ್‍ನೊಂದಿಗೆ ಮರೆಯಾದ.ಯಾರದೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅವರ ಪಾಡಿಗೆ ಅವರು ನನ್ನ ಪಕ್ಕದಲ್ಲೇ ನಡೆದು ಹೋಗುತ್ತಿದ್ದರು. ಹಾಡ ಹಗಲಲ್ಲೇ ಇಂತಹ ಕಸಿದುಕೊಳ್ಳುವ ಘಟನೆ ಇಲ್ಲಿ ಸರ್ವೇ ಸಾಮಾನ್ಯ. ! ಹಾಗಾಗಿ, ಎಲ್ಲರೂ ಕಳ್ಳನನ್ನು ನೋಡುವ ಬದಲು ನನ್ನನ್ನೇ ನೋಡುತ್ತಿದ್ದರು.
ಘಟನೆ ನಡೆದು ಮೂರು ದಿನಗಳಾಗಿಲ್ಲ.ಒಂದು ಬೆಳಿಗ್ಗೆ ಕಚೇರಿಗೆ ಕರೆ ಬಂತು. ನಮ್ಮ ಕಚೇರಿಯ ಕ್ಯಾಷಿಯರ್ ಸಂಜೆ 5.30 ಗಂಟೆಗೆ ಕೆಲಸ ಮುಗಿಸಿ ಟ್ಯಾಕ್ಸಿ ಕಾರಿನಿಂದ ಇಳಿದು ಸ್ವಲ್ಪ ದೂರದಲ್ಲೇ ಇರುವ ಮನೆಗೆ ನಡೆದು ಹೋಗುತ್ತಿದ್ದಳು. ಅವಳಲ್ಲಿ ತಿಂಗಳ ಸಂಬಳದ ಹಣವೂ ಇತ್ತು. ಮನೆ ಪಕ್ಕದಲ್ಲೇ ದಾಳಿಗಿಳಿದ ಲೂಟಿಗಾರರು ಹಣಕ್ಕೆ ಪೀಡಿಸಿದ್ದರು. ಈ ಹೆಂಗಸು ವಾಗ್ಯುದ್ದಕ್ಕೆ ನಿಂತಳು. ಬೊಬ್ಭೆ ಹಾಕುತ್ತಿದ್ದಂತೆ ಚಾಕು ತೆಗೆದು ಅವಳ ಮೂಗು ಮತ್ತು ಬಾಯಿಯನ್ನು ಸೀಳಿಯೇ ಬಿಟ್ಟರು. ರಕ್ತದ ಓಕುಳಿ..! ಹಣ-ಮೊಬೈಲ್‍ನೊಂದಿಗೆ ಪರಾರಿಯಾದರು. ಈ ಹೆಂಗಸು ಮಾರಕ ಚೂರಿ ಇರಿತದಿಂದ ಎರಡು ತಿಂಗಳು ಕಚೇರಿಗೇ ಬರಲಿಲ್ಲ. ಇಂತಹದ್ದು ಬೇಕಾದಷ್ಟು ನಮ್ಮ 200 ಕ್ಕಿಂತಲೂ ಅಧಿಕ ಕೆಲಸದವರಿಂದ ತುಂಬಿರುವ ಕಂಪೆನಿಯ ದೈನಂದಿನ ಘಟನೆಗಳ ಮಾತುಗಳು. ಕೇಳಿ ಭಯಭೀತನಾಗಿದ್ದೆ. ಎಚ್ಚರವೂ ವಹಿಸಿದ್ದೆ. ನನಗೆ ಸಿಕ್ಕಿದ ಸಲಹೆ ಎಂದರೆ,ದಾಳಿ ನಡೆಸುವ ಸಂದರ್ಭ ಏನೂ ಮಾತಾಡಬಾರದು. ದಾಳಿಕೋರರು ಕೇಳಿದ್ದನ್ನು ಕೊಟ್ಟು ಬಿಡಬೇಕು. ವಾಗ್ಯುದ್ಧಕ್ಕೆ ನಿಂತರೆ ಖಂಡಿತಾ ಜೀವಕ್ಕೆ ಆಪತ್ತು. ಮನುಷ್ಯರನ್ನು ಮನುಷ್ಯರೇ ಬೀಭತ್ಸವಾಗಿ ಹರಿತವಾದ ಚೂರಿಗಳಿಂದ ಕತ್ತರಿಸುವುದು. ಅಂದರೆ, ಮನುಷ್ಯರು ಮತ್ತು ಹರಕೆಗೆ ಕತ್ತು ಕುಯ್ಯುವ ಕೋಳಿ-ಕುರಿಗಳಿಗಗೂ ವ್ಯತ್ಯಾಸವಿಲ್ಲ ಅಂತ ಗೊತ್ತಾಯಿತು. ಇದು ಹಗಲು ಲೂಟಿ ಎಂಬ ನಡೆದಾಡುವ ಹೆಣಗಳ ನೈಜ ಸ್ಪಷ್ಟ ಜೀವನಗಾಥೆ.!
ದಿನಗಳ ಸಂಜೆಗಳು ಇಲ್ಲಿ ಭಯಾನಕ..! ಅದು ಆರರ ನಂತರ ಹಗಲು ಲೂಟಿಗಳು ಸರ್ವೇ ಸಾಮಾನ್ಯ. ಕ್ಯಾಮರೂನಿನ ಡ್ವಾಲಾದಲ್ಲಿ ಮಾತ್ರ ಇದು ದೈನಂದಿನ ಚಟುವಟಿಕೆ. ಒಂದಂತೂ ಹೆಣ ರಸ್ತೆಯಲ್ಲಿ ಬೀಳುತ್ತವೆ. ದಿನಕ್ಕೆ ಹತ್ತಂತೂ ಮುಖ-ಕಾಲು-ಕೈಗಳು ಹಿಗ್ಗಾಮುಗ್ಗಾ ಕತ್ತರಿಸಿಕೊಂಡು ಹೆಣಗಳ ಕಪಾಟಿನಂತಿರುವ ಇಲ್ಲಿನ ಆಸ್ಪತ್ರೆಗಳಲ್ಲಿ ಬಿದ್ದಿರುತ್ತವೆ.ಮುಟ್ಟಬೇಕಾದರೂ ಮುಟ್ಟಿದವರೆಲ್ಲರಿಗೂ ಕೈ ಬಿಸಿ ಮಾಡಬೇಕು. ಇಲ್ಲದಿದ್ದರೆ ಬದುಕುವ ಜೀವವೂ ಹೆಣವಾಗುತ್ತವೆ. ಅಂತಹ ಸಾಯುವವರ ಸಂಖ್ಯೆಗೆ ಇಲ್ಲಿ ದಾಖಲೆಯಿಲ್ಲ. ಇದು ಲೂಟಿಗಾರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ ಕ್ಯಾಮರೂನ್ ಜೀವನ ಪುಟ. ಫ್ರೇಂಚ್ ಭಾಷೆಯಲ್ಲಿ ಈ ಹಗಲು ಲೂಟಿಗಾರರ ಗುಂಪಿಗೆ " ನಗಾ ಬೋಕು" ಅನ್ನುತ್ತಾರೆ. ಕಳ್ಳನಿಗೆ " ಬಾಂದಿ " ಅನ್ನುತ್ತಾರೆ. ರಸ್ತೆಯ ಎಲ್ಲೆಂದರಲ್ಲಿ ಇವರ ಓಡಾಟ ನೊಣಗಳಂತೆ ಕಂಡು ಬರುತ್ತವೆ.ಸಂಜೆಯಾದಂತೆ ಚಟುವಟಿಕೆ ಮೈ ಸೆಟೆದುಕೊಳ್ಳುವೆ.
ಸಾಮಾನ್ಯವಾಗಿ ಇಲ್ಲಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿ ನಡೆಯುತ್ತವೆ ಜಗಜ್ಜಾಹೀರು ಲೂಟಿ ಪ್ರಸಂಗ . ಕ್ರಿಸ್‍ಮಸ್ ಹಬ್ಬದ ಸಂಭ್ರಮದಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚು.ಜನರ ಓಡಾಟವೂ ಹೆಚ್ಚು. ದಾರಿ ಮಧ್ಯೆಯೂ ನಡು ಹಗಲಲ್ಲಿ ನೇರವಾಗಿ ಹಣಕ್ಕಾಗಿ ದಾಳಿ ನಡೆಯುತ್ತದೆ. ಟ್ಯಾಕ್ಸಿ ಕಾರುಗಳಲ್ಲಿ ಸಹ ಪ್ರಯಾಣಿಕರೊಂದಿಗೆ ಹೋಗುವಾಗ ಯಾರು ಲೂಟಿಗಾರ ಎಂದೇ ತಿಳಿಯುವುದಿಲ್ಲ. ಕಾರಿನೊಳಗೆ ನೇರವಾಗಿ ಕುತ್ತಿಗೆಗೆ ಚಾಕು ಇಟ್ಟು ಬಿಡುತ್ತಾರೆ. ಜೊತೆಗೆ ಚಾಲಕನಿಗೂ. ಬೊಬ್ಬೆ ಹೊಡೆಯುವಂತಿಲ್ಲ, ಏನೂ ಮಾತಾಡುವಂತಿಲ್ಲ. ಕೈಯಲ್ಲಿರುವ ಏನೆಲ್ಲಾ ಬೆಲೆಬಾಳುವ ವಸ್ತುಗಳುಂಟೋ ಕೊಟ್ಟು ಬಿಟ್ಟರೆ, ಜೀವ ಬಿಟ್ಟು ಕಾರಿನಿಂದ ಇಳಿದು ಅಲ್ಲೇ ಇರುವ ಗಲ್ಲಿಯಲ್ಲಿ ಮರೆಯಾಗುತ್ತಾರೆ.
ಟ್ಯಾಕ್ಸಿ ಕಾರುಗಳಿಗಿಂತ ಬೈಕ್ ಬಾಡಿಗೆದಾರರು ಕ್ಯಾಮರೂನಿನಲ್ಲಿ ಹೆಚ್ಚು. ಒಮ್ಮೆಗೇ ಮೂರು ಮಂದಿಯನ್ನೂ ಡ್ವಾಲಾದ ಎಲ್ಲೆಂದರಲ್ಲಿ ಹೊತ್ತು ಸಾಗುತ್ತಾರೆ. ಫ್ರೇಂಚ್ ಭಾಷೆಯಲ್ಲಿ " ಬೆನ್ಸ್ ಕಿನ್" ಅಂತ ಇವರುಗಳಿಗೆ ಹೆಸರು. ಹಗಲು ಲೂಟಿಗಾರರ ಗುಂಪಿನಲ್ಲಿ ನೇರ ಸಂಪರ್ಕ ಹೊಂದಿರುವವರು ಇವರೇ. ಅದೇ ರೀತಿ ಇವರೇ ಹೆಚ್ಚಿನ ಪಾಲು ಲೂಟಿಗಾರರಾಗಿದ್ದಾರೆ. ರಸ್ತೆ ಬದಿಯ ಪ್ರಯಾಣಿಕರನ್ನು ತಲಪಿಸುವ ಸ್ಥಳಕ್ಕೆ ಕೊಂಡೊಯ್ಯುವ ನಾಟಕವಾಡಿ ಜನನಿಬಿಡ ಪ್ರದೇಶಕ್ಕೆ ಕೊಂಡೊಯ್ಯುತ್ತಾರೆ. ಲೂಟಿ ಮಾಡಿ ಅಲ್ಲೇ ಪ್ರಯಾಣಿಕರನ್ನು ಬಿಟ್ಟು ಪರಾರಿಯಾಗುತ್ತಾರೆ. ಅಥವಾ ಲೂಟಿಗಾರ ಗುಂಪಿಗೆ ಸೂಚನೆ ಕೊಡುತ್ತಾರೆ. ಸ್ಥಳಕ್ಕೆ ತಲಪಿದಂತೆ ,ಸೂಚಿಸಿದ ಲೂಟಿಗಾರರು ದಾಳಿ ಪ್ರಾರಂಭಿಸುವಾಗ ಪರಾರಿಯಾಗುತ್ತಾರೆ. ಈ ಟ್ಯಾಕ್ಸಿ ಕಾರು ಲೂಟಿ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸುವವರು ರೂಪವತಿ ಯುವತಿಯರು ಮತ್ತು ಹೆಂಗಸರು. ಪ್ರಯಾಣಿಕರು ತುಂಬಿರುವ ಟ್ಯಾಕ್ಸಿ ಕಾರುಗಳನ್ನು ತಡೆದು ಜನನಿಬಿಡ ಪ್ರದೇಶದ ವಿಳಾಸ ಚಾಲಕನಿಗೆ ಕೊಟ್ಟು ಲೂಟಿಗಾರರೊಂದಿಗೆ ಕೈ ಜೋಡಿಸುತ್ತಾರೆ. ಅದೇ ರೀತಿ ಟ್ಯಾಕ್ಸಿ ಕಾರು ಚಾಲಕರು ಲೂಟಿ ಪ್ರಕರಣಗಳಲ್ಲಿ ಹಿಂದೆ ಉಳಿದಿಲ್ಲ. ಒಂದೊಕ್ಕೊಂದು ಸಂಪರ್ಕದೊಂದಿಗೆ ಕೈ ಜೋಡಿಸಿದ ಜೀವನ ಇವರದ್ದಾಗಿದೆ.
ಆ ಕ್ಷಣದಲ್ಲೇ ಆ ನಾಲ್ವರಲ್ಲಿ ಓರ್ವ ಬೈಕಿನ ಹಿಂಬದಿಗೆ ಬಂದು ನನ್ನೆರಡು ಕೈಗಳನ್ನು ಮುರಿದು ಹಿಂಬದಿಗೆ ಹಿಡಿದ. ಮತ್ತೋರ್ವ ನನ್ನ ಸಹ ಉದ್ಯೋಗಿಯ ಎರಡು ಕೈಗಳನ್ನೂ ಅದೇ ರೀತಿ ಹಿಡಿದ. ಮತ್ತೀರ್ವರಲ್ಲಿ ಓರ್ವ ನನ್ನ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ನಾನು ಕಿರುಚಿ ಮಾತಾಡಲೂ ಶುರು ಹಚ್ಚಿದೆ. ಇನ್ನೋರ್ವ ನೇರವಾಗಿ ನನ್ನ ಕುತ್ತಿಗೆಗೆ ಚಾಕು ಇಟ್ಟೇ ಬಿಟ್ಟ.! ನಾನು ಸ್ಥಬ್ಧನಾದೆ. ಚಾಕು ಇಟ್ಟವನು ನನ್ನ ಬಾಯಿಯನ್ನು ತನ್ನ ಬಲಿಷ್ಠ ಇಷ್ಟಗಲದ ಕೈಗಳಿಂದ ಮುಚ್ಚಿದ. ಯಾವುದೋ " ಡ್ರಗ್ಸ್" ವಾಸನೆ ಅವನ ಕೈಗಳಿಂದ ಮೂಗಿಗೆ ಬಡಿಯಿತು. ನನ್ನ ಕಣ್ಣೆರಡು ಮಂಕಾದಂತೆ ಅನ್ನಿಸಿತು. ಮುಂಬದಿಯಲ್ಲಿ ಕೊಸರಾಡುತ್ತಿದ್ದ ನನ್ನ ಸಹೊದ್ಯೋಗಿಯ ಬಾಯಿ - ಗಂಟಲನ್ನು ಇನ್ನೋರ್ವ ಭದ್ರವಾಗಿ ಹಿಡಿದ. ಕುರಿ ಬಲಿಗೆ ಸಿದ್ಧವಾಯಿತು...! ಅನತಿ ದೂರದಲ್ಲಿ ಎರಡು ಹದ್ದುಗಳು ಅಗಸದಲ್ಲಿ ಸುತ್ತಿ ಸುತ್ತಿ ಹಾರಾಡುತ್ತಿದ್ದವು. ಹಕ್ಕಿಗಳ ಭಯಭೀತ ಕಲರವ ತಾರಕಕ್ಕೇರಿದ್ದು ಕೇಳಿಸುತ್ತಿತ್ತು.!
ಇಷ್ಟೇಲ್ಲಾ ನಡೆಯುವಾಗ ಅಲ್ಲೇ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರು-ಬೈಕುಗಳು ಅಲ್ಲಲ್ಲೇ ನಿಂತಿದ್ದವು. ಕೆಲವರು ಕೆಳಗಿಳಿದು ಮುಂದಿನದನ್ನು ಎದುರು ನೋಡುತ್ತಿದ್ದರು. ಲೂಟಿಗಾರರು ಅದ್ಯಾವುದರ ಪರಿವೇ ಇಲ್ಲದೆ ಕೋಳಿಯ ಕತ್ತು ಹಿಡಿದಂತೆ ನಮ್ಮನ್ನು ಹಿಡಿದಿದ್ದರು. ನನ್ನ ಜೇಬಿನಲ್ಲಿ ಔಷಧಿಗೆಂದು ಇಟ್ಟಿದ್ದ 50 ಸಾವಿರ ಕ್ಯಾಮರೂನ್ ಫ್ರಾಂಕ್,ಮೊಬೈಲ್ ಅನ್ನು ಅವರಲ್ಲಿ ಓರ್ವ ಮೊದಲು ತೆಗೆದ, ಪ್ಯಾಂಟ್ ಜೇಬಿಗೆ ಕೈ ಹಾಕಿ ಅದರಲ್ಲಿದ್ದ 15 ಸಾವಿರ ಫ್ರಾಂಕ್‍ಗೆ ತಡಕಾಡುತ್ತಿದ್ದ. ಹೆಣವಾಗಿದ್ದ ನನ್ನ ದೇಹದ ಕುತ್ತಿಗೆಗೆ ಇಟ್ಟ ಚಾಕು, ಅಲ್ಪಸ್ವಲ್ಪ ಸುರಿದ ರಕ್ತದಿಂದ ಗೆರೆಗಳನ್ನು ಮೂಡಿಸ ತೊಡಗಿತ್ತು. ಮಲಗಿದ್ದ ಹೆಣಗಳ ಬಿಳಿ ಬಟ್ಟೆ ಸರಿಸಿದಾಗ ನನ್ನ ಮುಖ ಕಾಣತೊಡಗಿದವು. ನನ್ನ 4 ವರ್ಷದ ಮಗು ಮುಗ್ದವಾಗಿ ಕಣ್ಣಲ್ಲಿ ನಗುತ್ತಿದ್ದ. ಮುಖಮುಚ್ಚಿ ಕೂದಲು ಬಿಚ್ಚಿಟ್ಟು ಅಳುತ್ತಿದ್ದ ನನ್ನ ಪತ್ನಿಯ ಹಾದುಹೋದ ನೆರಳನ್ನು ಅಲ್ಲಿ ಕಂಡೆ. ಅಲ್ಲೇಲ್ಲಾ ಜನರ ಮುಖದಲ್ಲಿ ಕಣ್ಣೀರ ಭಾಷ್ಪ ಹರಳುಗಟ್ಟುತ್ತಿದ್ದವು.
ಮೊಬೈಲ್, ಹಣ,ಒಂದು ಚಿನ್ನದ ಉಂಗುರ ಎಲ್ಲವನ್ನೂ ಲೂಟಿ ಮಾಡಿ ಅಲ್ಲೇ ಪಕ್ಕದ ಕಾಲು ಗಲ್ಲಿಯಲ್ಲಿ ಸದ್ದಿಲ್ಲದೆ ಮರೆಯಾದರು. ಮತ್ತೇನೋ ಒಂದು ಉಳಿದ ಅನುಭವ ..! ಗಾಬರಿಯಿಂದ ವಿಚಲಿತಗೊಂಡ ಸಹೊದ್ಯೋಗಿಯ ಕಣ್ಣುಗಳಲ್ಲಿ ತೊಟ್ಟಿಕ್ಕಿದ ಹನಿಗಳು. ಹಿಡಿದ ರಭಸಕ್ಕೆ ಗಂಟಲು ಕಟ್ಟಿ ಒಂದೇ ಉಸಿರಿಗೆ ಕೆಮ್ಮ ತೊಡಗಿದೆ. ಜೀವ ಇತ್ತು. ಮತ್ತೊಮ್ಮೆ ಕೆಮ್ಮಿದೆ, ಸುತ್ತಲೂ ಅಲ್ಲೆಲ್ಲಾ ನಿಂತಿದ್ದ ಕಾರು-ಬೈಕುಗಳು ಒಂದೊಂದಾಗಿ ತೆರಳ ತೊಡಗಿದವು.ನಮ್ಮಿಬ್ಬರದೂ ಮಾತಿಲ್ಲದ ನೋಟ..! ಜಗ್ಗಾಟದಲ್ಲಿ ಕೆಳಗೆ ಬಿದ್ದಿದ್ದ ಬೈಕ್‍ನ "ಕೀ"ಯನ್ನು ಹೆಕ್ಕಿ ಬೈಕ್ ಚಾಲಿಸಿದ.ಔಷಧಿಯಿಲ್ಲದೆ ಬರಿಗೈಯಲ್ಲಿ ಕಂಪೆನಿ ವಾಸಸ್ಥಾನಕೆ ತಲಪಿದೆವು.ಕೈ ಕಾಲೆಲ್ಲಾ ನಡುಗುತ್ತಿದ್ದವು.ಯಾರಿಗೂ ಹೇಳಿ ಪ್ರಯೋಜನವಿಲ್ಲ , ಯಾರಿಗೂ ಹೇಳದೆ ಹಾಗೇ ಮಲಗಿದ್ದೆವು.
ಸಾವಿನ ಬಗ್ಗೆ ಸಾವಿರ ಮಾತಾಡಿದ್ದೆ. ಜೀವದ ಬಗ್ಗೆ ಬೇಕಾದಷ್ಟು ಆಲೋಚಿಸಿದ್ದೆ. ಪ್ರಾಣ ಹೋಗುವ ಆ ಸಂದರ್ಭಗಳ ಕುರಿತು ಆಲೋಚಿಸಿರಲಿಲ್ಲ. ಎಷ್ಟೊಂದು ಕಠಿಣ ಸಂದರ್ಭ ಅದು ?.ತಮಗೆ ತಾವೇ ಆತ್ಮಹತ್ಯೆ ಮಾಡಿಕೊಳ್ಳುವವರ ಧೈರ್ಯದ ಬಗ್ಗೆ ಮುಟ್ಟಿ ನೋಡಕೊಳ್ಳಬೇಕೆನಿಸಿತು.ಮನಸ್ಸು ಶ್ರೇಷ್ಠ ಸಮುದ್ರ, ಅಲ್ಲಿ ನವೀರಾದ ಅಲೆಗಳು ಬಡಿಯುತ್ತವೆ... ಬಿರುಸಾದ ಬಿರುಗಾಳಿ ಬೀಸಿದಾಗ ದೋಣಿ ನಿಯಂತ್ರಣ ತಪ್ಪಿ ಮಗುಚುತ್ತದೆ...!
ಈ ಘಟನೆ ಕಳೆದು ಒಂದು ವಾರ ಕಳೆಯಿತು. ಒಂದು ಶನಿವಾರ ರಾತ್ರಿ 8.00 ಗಂಟೆಗೆ ಸುದ್ದಿ ಬಂತು. ನಮ್ಮ ಕಂಪೆನಿಯ ಈರ್ವರನ್ನು ಲೂಟಿಗಾರರು ಧಾಳಿ ನಡೆಸಿ,ಅವರು ಚಾಲಿಸುತ್ತಿದ್ದ ಬೈಕ್‍ನೊಂದಿಗೆ ಪರಾರಿಯಾದರು ಅಂತ. ತಕ್ಷಣವೇ ಸ್ಥಳಕ್ಕೆ ಧಾವಿಸಿದೆವು. ಓರ್ವ ಚೂರಿ ಇರಿತಕ್ಕೆ ಹೊಟ್ಟೆ, ಎದೆ ತಲೆಯಿಂದ ಸುರಿಯುತ್ತಿದ್ದ ರಕ್ತದಲ್ಲಿ ಬಿದ್ದಿದ್ದ. ಇನ್ನೋರ್ವ ಮುಖ ದವಡೆ ಮುರಿದು, ಮುಂಭಾಗದ ಮೂರು ಹಲ್ಲುಗಳು ಕಿತ್ತು ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪಕ್ಕದಲ್ಲೇ ಒದ್ದಾಡುತ್ತಿದ್ದ. ಅವರುಗಳನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಬಂದೆವು. ಮುಂಜಾನೆ ಆಸ್ಪತ್ರೆಗೆ ಧಾವಿಸಿ, ಮಂಚದಲ್ಲಿ ಮಲಗಿದ್ದ ಈರ್ವರ ಗಂಟಲಿನಿಂದ ಭಯ ಮಿಶ್ರಿತ ಸ್ವರ ಹೊರಟಾಗ ಸಮಾಧಾನವಾಯಿತು. ಅಬ್ಬಾ..! ಎಲ್ಲಕ್ಕಿಂತ ದೊಡ್ಡದು ಜೀವ. ಎದ್ದು ಮಾತಾಡುತ್ತಿದೆ. ಆಫ್ರೀಕಾದಲ್ಲಿ ಬದುಕುತ್ತೇವೆ ನಾವು.ಕುಟುಂಬ ಬಡತನದ ಭಾರ ಹೊತ್ತು. ನಾಲ್ಕಾರು ಜೀವಗಳು ಬದುಕಲಿ ಎಂಬ ಆಶಯಕ್ಕೆ ನಕ್ಕು..!
-ರವಿ ಮೂರ್ನಾಡು.
-ರವಿ ಮೂರ್ನಾಡು.
New post on ನಿಲುಮೆ |
|
ಅರಾಜಕತೆಯ ಭ್ರಷ್ಟ ದೇಶ! ಕಾನೂನು ಸುವ್ಯವಸ್ಥೆ ಹದಗೆಟ್ಟು ಅಪರಾಧಿಗಳ ತವರುಮನೆ ಈ ದೇಶ.
ಪ್ರತ್ಯುತ್ತರಅಳಿಸಿಯಾಕೋ ಮನಸು ವಿಹ್ವಲವಾಯಿತು
ಛೆ ..! ಇಂತಹ ಪಾಪಿಗಳು ಇನ್ನೂ ಇದ್ದಾರೋ .ವಿಶ್ವದ ದೊಡ್ದಣ್ಣರು ಬೇರೆ ಬೇರೆ ದೇಶದಲ್ಲಿ ದೊರೆಗಳಿಂದ ಸುಖ ಸಮೃದ್ದಿಯಿಂದ ಬದುಕುತಿರುವ ಜನರನ್ನು ಕೆದಕಿ ಆ ರಾಷ್ಟದ ಅಭಿವ್ರುದ್ದಿಯನ್ನು ನುಚ್ಚು ನೂರು ಮಾಡುತ್ತಿದ್ದಾರೆ .ಇಂತಹ ಕಾನೂನು ಹದಗೆಟ್ಟ , ಕಳ್ಳ ಕಾಕರರಿಂದ ತುಂಬಿರುವ ,ಮನುಷ್ಯತ್ವಕ್ಕೆ ಬೆಲೆ ಇಲ್ಲದ ಜನರ ದೇಶ ಕಾಣುವುದಿಲ್ಲವೋ . ಏನೇ ಇರಲಿ ಅಲ್ಲಿಯ ಬದುಕುವ ಪರಿಸ್ಥಿತಿ ನೋಡಿ ಒಂದು ತೊಟ್ಟು ಕಣ್ಣೇರು ಹರಿಯಿತು . ನೀವು ಅಲ್ಲಿಂದ ಇಲ್ಲಿಗೆ ಬಂದು ನೆಲೆಸಿ ,ಆದೆ ನನ್ನ ಆಶಯ
ಪ್ರತ್ಯುತ್ತರಅಳಿಸಿಭಯಾನಕ ಅನುಭವಗಳು ಸರ್... ಯಾವುದೊ ಲೂಟಿಕೋರರ ಕಥವಸ್ತುವಿರುವಾ ಕಾಡಂಬರಿಯನ್ನ ಓದಿದಂತ ಅನುಭವವಾಯ್ತು.
ಪ್ರತ್ಯುತ್ತರಅಳಿಸಿIstondu kasta pattu badukabeke alli.... dayavittu banni marali Bhatathakke.... duddiginta Jeeva doddadu....
ಪ್ರತ್ಯುತ್ತರಅಳಿಸಿಎಲ್ಲ ಆಫ್ರಿಕನ್ ದೇಶಗಳ ಇದೆ ಅವಸ್ಥೆ.....ನನ್ನ ಸಹದ್ಯೋಗಿಯರು ನೈಜೇರಿಯಾ ಹೋಗಿದ್ದರು ಅವರೊಟ್ಟಿಗೆ ಅಲ್ಲಿ ಇದೆ ರೀತಿಯ ಘಟನೆ ಆಗಿದೆ. ಕಳ್ಳತನ, ದರೋಡೆ ,ವೇಶ್ಯಾವಾಟಿಕೆ ಅಲ್ಲಿ ತುಂಬಾ ಸಹಜವಂತೆ. ನನ್ನ ಸಹದ್ಯೋಗಿಯರು ಹೇಗೋ ತನ್ನ ಜೀವ ಉಳಿಸಿ ಬಂದಿದ್ದರು. ಅಲ್ಲಿಯ ಪೋಲಿಸರೂ ದೊಡ್ಡ ಕಳ್ಳರಂತೆ, ಲಂಚ ಇಲ್ಲದೆ ಕೆಲಸ ಮಾದುದಿಲ್ಲವಂತೆ.
ಪ್ರತ್ಯುತ್ತರಅಳಿಸಿ