ಶುಕ್ರವಾರ, ಜನವರಿ 6, 2012

ಅಲೆಮಾರಿಯ ಕವಿತೆ



ನಾನೊಬ್ಬ ಕವಿ, ಭಾವದ ಹಕ್ಕಿ
ಲಯಗಳ ಹುಡುಕಿ, ಪದಗಳ ಹೆಕ್ಕಿ
ಕವಿತೆಗೆ ಮಗುವಾದೆ ನಾನು !

ಬೀದಿಗೇ ಕರೆದ ಅನ್ನದ ಕೂಗಿನ
ಭಾವದ ಭಿಕ್ಷೆಗೆ ತಟ್ಟೆಯಾದೆ !
ಹಸುಳೆಯ ಅಳುವಿನ ಹಾಲ್ದುಟಿ ಹಸಿವಿಗೆ
ತಾಯ್ತನದ ಹಾಲಿಗೆ ರಕ್ತವಾದೆ  !

ತಂದೆ-ತಾಯಿಯ ಹೆಜ್ಜೆಗಳ ದಾರಿಗೆ
ಅನಾಥ ಮಗುವಿಗೆ ಜೊತೆಯಾದೆ !
ಕಸದ ತೊಟ್ಟಿಲಿನ ಮಗುವಿನ ಆತ್ಮಕೆ
ನಾಯಿ-ಕಾಗೆಗೆ ದೇಹವಾದೆ !
ನಾನೊಬ್ಬ ಕವಿ, ಭಾವದ ಹಕ್ಕಿ !

ಕಣ್ಣಿದ್ದು ಕಾಣದ, ಮುಟ್ಟಿದ್ದು ತೋಚದ
ಅಂಧರ ಕಣ್ಣಿಗೆ ಹಣತೆಯಾದೆ !
ಬಡವರ ನ್ಯಾಯಕೆ , ಮೂಕರ ಹಾಡಿಗೆ
ಪದಗಳ ಬರೆಯುತಾ ಸ್ವರವಾದೆ  !

ಊರೆಲ್ಲಾ ತುಳುಕಿ, ನಕ್ಕು ಹೊರಚೆಲ್ಲಿದ್ದ
ಕನಸುಗಳ ಆಯುತ್ತ ತೃಪ್ತನಾದೆ !
ಸಾಲು ಸಂಸಾರದ ಬೀದಿ ಅಂಗಳಕೆ
ಮಕ್ಕಳ ಆಟದ ಆಟಿಕೆಯಾದೆ  !
ನಾನೊಬ್ಬ ಕವಿ, ಭಾವದ ಹಕ್ಕಿ

ಏನೇಲ್ಲಾ ಬರೆದರು, ಏನೇನೋ ಹೆಸರುಗಳು
ಅಲೆಮಾರಿ ಕವಿತೆಗೆ ದಿಕ್ಕು ಯಾರೋ ?
ಚಿಂದಿಯ ಹುಡುಗರು ಅನ್ನಕೆ ಬಿದ್ದರು
ಎಂಜಲೆಲೆಗೆ ನನ್ನದೇ ಮುಖಗಳಿತ್ತೋ ??
ಅಲ್ಲೆಲ್ಲಾ ನನ್ನದೇ ಭಾವವಿತ್ತೋ?!
-ರವಿ ಮೂರ್ನಾಡು.

6 ಕಾಮೆಂಟ್‌ಗಳು:

  1. ಭಾವಪೂರ್ಣ ಕವಿತೆ.. ವಿಭಿನ್ನ ಆಲೋಚನೆಯಲ್ಲಿ ಪದ ಬಳಕೆ.. ಈಗಿನ ಸಮಾಜದಲ್ಲಿ ಕಂಡು ಬರುವ ವಿಚಿತ್ರ ನೋಟಗಳನ್ನು ವಿಶೇಷವಾಗಿ ಸಾಲು ಕಟ್ಟಿ ಸೆರೆ ಹಿಡಿದು ಇಟ್ಟಿದ್ದೀರಾ .. ಮಾನವನ ಜೀವನಕ್ಕೆ ಏನೆಲ್ಲಾ ಬದಲಾವಣೆ ಬಂದರೂ ಆ ಅಲೆಮಾರಿತನ ಇನ್ನೂ ಮುಗಿಯದ ಸಮಸ್ಯೆಯಾಗಿದೆ.. ಒಂದು ಕ್ಷಣ ವಿಚಾರ ಮಾಡಿ ಸಾಮಾಜಿಕ ಹಿತಚಿಂತನೆ ಮೂಡಿಸುವ ನಿಮ್ಮ ಕವನ ವಿಷಯ ಸತ್ಯಾಂಶದಿಂದ ಕೂಡಿದೆ.. ಬದುಕಲು ಏನೆಲ್ಲಾ ಮಾಡುವ ಆ ಚಿಂದಿ ಆಯುವ ಜನ ಜೀವನದ ಚಿತ್ರಣ ಕೆಲವು ವಿಶೇಷ ಕಥಾ ವಸ್ತು ತುಂಬಿದ ನಾಲ್ಕಾರು ಹಿಂದಿ ಸಿನೆಮಾಗಳ ನೆನಪು ಮೂಡಿಸಿತು ಈ ಕವಿತೆ ಓದುವಾಗ.. ಮನಸ್ಸಲ್ಲಿ ಅನೇಕ ಭಾವನೆಗಳ ಅಲೆದಾಟ ... ಅತೀ ಘೋರ ಸ್ಥಿತಿ ಗತಿಗಳ ಜನರ ಜೀವನ ಪರಿಚಯ ಹೇಳಿತು ನಿಮ್ಮ ಕವಿತೆ.. ಪ್ರಾರಂಭವು ತುಂಬಾ ಚೆನ್ನಾಗಿದೆ.. ಹಾಗು .. (ಊರೆಲ್ಲಾ ಗೆಳೆಯರು, ಅವರಿಗೆ ಗೆಳತಿಯರು.. ಕಾಣುವ ಕನಸಲ್ಲೇ ತೃಪ್ತನಾದೆ.. ಪತಿ ಪತ್ನಿಯರು,ತುಂಬು ಸಂಸಾರಗಳು.. ಮಕ್ಕಳ ಆಟಕೆ ಆಟಿಕೆಯಾದೆ.. ನಾನೊಬ್ಬ ಕವಿ, ಭಾವದ ಹಕ್ಕಿ).. ಈ ಸಾಲುಗಳಲ್ಲಿ ಅತೀ ಕಷ್ಟದ ಪರಿಸ್ಥಿತಿಗಳು ಇಲ್ಲವಾದರಿಂದ ಸ್ವಲ್ಪ ವಿಶೇಷ ಮತ್ತು ಏನೋ ಆಕರ್ಷಣೆ ಮೂಡಿದೆ ಆ ಅಲೆಮಾರಿ ಕವಿಯಲ್ಲಿ ಎಂಬಂತೆ ವಿಭಿನ್ನವಾಗಿದೆ ರಚನೆ.. ವಿಚಾರವಂತಿಕೆಯ ಸಂದೇಶ ಕೊಡುವ ಕವಿತೆ.. ಸಾಲುಗಳ ಜೊತೆ ಪದ ಬಳಕೆಯೂ ಸೊಗಸಾಗಿದೆ.. :)

    ಪ್ರತ್ಯುತ್ತರಅಳಿಸಿ
  2. ತುಂಬಾ ಅದ್ಭುತ ಕವಿತೆ ರವಿಯಣ್ಣ.ಚಿಂದಿ ಆಯುವ ಹುಡುಗನ ಜೀವನ ಗಾಥೆಯನ್ನು ಚಿತ್ರಿಸಿದ ನೀವು ಅಲೆಮಾರಿಯ ಜೀವನ ನೋಟವನ್ನೂ ಹೃದಯ ಸ್ಪರ್ಷಿಯಾಗಿ,ಕರುಣಾ ಜನಕವಾಗಿ ವಿಷಧಿಸಿದ್ದೀರಿ.ಕವಿ ಭಾವದ ಹಕ್ಕಿಯಾಗಿ ಅಂತರಾಳದಲ್ಲಿನ ತುಮುಲುಗಳಿಗೆ ಜೀವ ಚೈತನ್ಯ ಕೊಟ್ಟಿದ್ದೀರಿ.ಎಂದಿಗೂ ಯಾವಾಗಲೂ ಓದಿಸಿಕೊಂಡುಹೋಗುವ ಈ ಮಾರ್ಮಿಕ ಕವನವು ಅಲೆಮಾರಿಗೆ ಧ್ವನಿಯಾಗಿದೆ.ಚಿಂತೆಗೆ,ಗಾಢ ಆಲೋಚನೆಗೆ ಈಡು ಮಾಡುವ ನಿಮ್ಮ ಇಂಥ ಕವಿತೆಗಳನ್ನು ಓದಿದಾಗಲೆಲ್ಲ ಭಾವುಕನಾಗುತ್ತೇನೆ.ಒಮ್ಮೊಮ್ಮೆ ಅತ್ತು ಬಿಡುತ್ತೇನೆ.ನಿಮ್ಮೊಳಗಿ ಚಿಂತಕನಿಗೆ ಶರಣು ಶರಣಾರ್ಥಿಗಳು.

    ಪ್ರತ್ಯುತ್ತರಅಳಿಸಿ
  3. ರವಿಯಣ್ಣ ಕವಿತೆಯ ಭಾವದಲ್ಲಿ ಮನವನ್ನು ನೆಲೆಯಾಗಿಸುವ ನಿಮ್ಮ ನಿರೂಪಣೆಗೆ ದೊಡ್ಡ ಸಲಾಂ.. ಮನದಲ್ಲಿನ ಭಾವ ತೀವ್ರತೆ ಅಷ್ಟೇ ಕತ್ತಿಯಂತಹ ಹಲುಗಿನ ಪದಗಳನ್ನು ಹೆಕ್ಕಿ ಕವಿತೆಯಾಗಿಸಿದ್ದೀರಿ.. ಕಷ್ಟ ಮತ್ತು ನೋವುಗಳಲ್ಲಿಯೆ ಕವಿ ಒಡಮೂಡುವನು ಎಂಬ ಸತ್ಯ ಒಪ್ಪುವಂತಹದ್ದು.. ಪ್ರತಿಯೊಂದು ಸಾಲುಗಳಲ್ಲಿನ ಪಕ್ವತೆ ನೂರಾರು ಕವಿತೆಗಳನ್ನು ಬರೆಸುವಷ್ಟು ಪರಿಪೂರ್ಣತೆ ಕಂಡಿವೆ..
    ಅನ್ನದ ಕೂಗಿಗೆ ಬೀದಿಗೆ ನಿಂತೆ
    ಭಾವದ ಭಿಕ್ಷೆಗೆ ತಟ್ಟೆಯಾದೆ !
    ಹಸುಳೆಯ ಅಳುವಿನ ಹಾಲ್ದುಟಿ ಹಸಿವಿಗೆ
    ತಾಯ್ತನದ ಹಾಲಿಗೆ ರಕ್ತವಾದೆ !

    ತಂದೆಯೂ ಇಲ್ಲದ, ತಾಯಿಯ ಕಾಣದ
    ಅನಾಥ ಮಗುವಿಗೆ ಜೊತೆಯಾದೆ !
    ಕಸದ ತೊಟ್ಟಿಲಿನ ಮಗುವಿನ ಆತ್ಮಕೆ
    ನಾಯಿ-ಕಾಗೆಗೆ ದೇಹವಾದೆ !
    ನಾನೊಬ್ಬ ಕವಿ, ಭಾವದ ಹಕ್ಕಿ !
    ಈ ಸಾಲುಗಳು ನನ್ನನ್ನು ಅದೆಷ್ಟು ಕಾಡುತ್ತಿವೆಯೆಂದರೆ ಮನಸ್ಸನ್ನು ಕವಿತೆ ಆವರಿಸಿರುವಂತೆ ಭಾಸವಾಗುತ್ತಿದೆ.. ಇದು ಕೇವಲ ಅಲೆಮಾರಿಯ ಕವಿತೆಯಾಗದೆ ಕವಿಮನದ ದುಗುಡ ದುಮ್ಮಾನ ಮತ್ತು ಸಮಾಜದಲ್ಲಿನ ಅನಿಷ್ಟಗಳಿಗೆ ಬೇಸತ್ತು ಮನದಲ್ಲಿ ಕುದಿಯುತ್ತಿರುವ ಭಾವಾಗ್ನಿಯನ್ನು ನಂದಿಸಲು ಮೂಡಿರುವ ಸಾಲುಗಳಂತೆ ಅನಿಸುತ್ತವೆ.. ಕವಿತೆಯನ್ನು ಓದಿದ ಮನಸ್ಸು ತನ್ನ ಒಳಗಣ್ಣನ್ನು ತೆರೆದುಕೂರುತ್ತದೆ.. ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸಲು ಅಣಿಯಾಗುತ್ತದೆ.. ಅದ್ಭುತವಾದ ಸಮಾಜಮುಖಿ ಧಾರೆ..

    ಪ್ರತ್ಯುತ್ತರಅಳಿಸಿ
  4. ಕವಿಯ ಅಂರರ್ ಯಾತನೆಯನ್ನು ಬಹಳ ಚೆನ್ನಾಗಿ ಬಿಡಿಸಿಟ್ಟಿದ್ದೀರ.

    ಕಾವ್ಯ ಮಜಲು ಬಿಚಿಕೊಳ್ಳುವ ಪ್ರತಿ ಪದದಲ್ಲೂ ಮಿಳಿತವಾಗುವ ನೂರಾರು ಹೆರಿಗೆ ನೋವುಗಳನ್ನು ಬಿಚ್ಚಿಟ್ಟಿದ್ದೀರ.

    ಪದ ಜೋಡಣೆಯಲ್ಲೂ, ಭಾವನೆಯ ಲೇಪನದಲ್ಲೂ ನಿಮಗೆ ನೀವೆ ಸಾಟಿ.

    ಪ್ರತ್ಯುತ್ತರಅಳಿಸಿ