ಬುಧವಾರ, ಮಾರ್ಚ್ 7, 2012

ಕವಿತೆ ಅರಳುವ ಹೊತ್ತು..!


ಹೊರಾ೦ಗಣದಲಿ ಕುಳಿತಿದ್ದೇನೆ
ತಲೆಯಾನಿಸಿ ಜೋಡಿ ಕೈಗಳ ತಲೆಗೆ
ಭೂಮಿಗೂ , ಕುರ್ಚಿಗೂ ನನ್ನದೇ ಮಾತು
ಇನ್ನೆಷ್ಟು ದಿನ ಈ ಋಣಭಾರ ?

ಎದೆಗೆ ಕಿವಿ ಬಂದು ಕೇಳುತ್ತಿದೆ ಬಡಿತ
ಕಾಲಿಟ್ಟು ನೆಲಕೆ - ಜೀಕಿ ಕುರ್ಚಿಗೆ ದೇಹ
ಮುಂದಕ್ಕೆ ಸುಖ
ಜಗ್ಗಿ ಹಿಂದಕ್ಕೆ ದುಃಖ್ಖ !
ಪದಗಳಿಗೆ ತಡವರಿಸಿ
ಮಾತಾದ ಲೇಖನಿಗೆ
ಕವಿತೆ ಅರಳುವ ಹೊತ್ತು !
 ------ 2 ---------
ಕಣ್ಣೆದುರೇ ಓಡುತ್ತಿದೆ
ಹಾರುತ್ತಾ  ಗಾಳಿಗೆ ಮಗು !
ಮನಸು ಹೆಜ್ಜೆಯ ಕಣ್ಣೋಟಕೆ
ಮಗುವಾದೆ ಕೈಯಿಟ್ಟು ಗಲ್ಲಕೆ !!!!!
ಹೊರಾಂಗಣದ ಅಂಚಿಗೆ
ಪಕ್ಕನೆ ನಿಂತ ಮಗು
ಕತ್ತೆತ್ತಿ ಮೇಲಕೆ
ತು೦ಬಿಸುತ್ತಿದೆ ಕಣ್ಣ ಬುಟ್ಟಿಗೆ
ಚಂದ್ರ-ಚಿತ್ರ- ನಕ್ಷತ್ರ  !
ತಿರುಗಿ ಕ್ಷಣ ಕತ್ತು, ಕೈಯೆತ್ತಿ ಬೆರಳು
ಬಿರಿದ ತುಟಿ ಇಣುಕುತ್ತಿದೆ
ಎರಡು ಮಲ್ಲಿಗೆ ಹರಳು !
ಆಯ್ದ ಅಲೆಮಾರಿ ಬದುಕಿಗೆ
ಕವಿತೆ ಅರಳುವ ಹೊತ್ತು  !
 ------ 3 ---------
ಬರಸೆಳೆದು ಬಾಚಿದ್ದೇನೆ
ತೋಳಿನಡಿ ಮಗು ದೇವರು !
ಹೆಜ್ಜೆಗೆ ಹೆಜ್ಜೆ ಸೇರಿ ಒಳಗೆ ಮನೆ 
ಪತ್ನಿಗೆ ನಮ್ಮ ನಗು ಎರಡು !!!!!
ಮೌನ ಮುರಿದ ಕೋಣೆಗೆ
ಟೀವಿ ಧಾರವಾಹಿ ಮಾತು
ದೋಣಿಯೊಂದು ತೇಲುತ್ತಿದೆ
ಸಾಗರವೆಂಬ ಹೆಸರು !
ಅಲೆಅಲೆಗಳು ಬಡಿದು
ಬದುಕು ಅರೆಗಳಿಗೆಯ ಜಗತ್ತು
ಕವಿತೆ ಅರಳುವ ಹೊತ್ತು  !
 ------4---------
ಬಾ ಎಂದು ಕರೆಯುತ್ತಿದೆ
ಘಮಘಮ ಅಡುಗೆ ಕೋಣೆಗೆ
ಪಾತ್ರೆಗಳ ಸದ್ದೊಳಗೆ ಬಾಯ್ತೆರೆದ ಹಸಿವು !
ಘಂಟೆಯಾಗಿದೆ ಊಟಕೆ ಕೈಬಳೆ  !
ತಟ್ಟೆಯಗಲ ದಿಟ್ಟಿಸಿದ ಅನ್ನದ ಕಂಗಳಲ್ಲಿ
ನಾಲ್ಕು ತುತ್ತು ಮಗುವಿಗೆ
ಇನ್ನೆರಡು ಪತ್ನಿಗೆ !
ತುತ್ತಿಟ್ಟ ನನಗೆ ಅಮ್ಮನದೇ ನೆನಪು
ಕವಿತೆ ಅರಳುವ ಹೊತ್ತು  !
 ------5---------
ಕೈ ತೊಳೆದು ಸ್ವಚ್ಚ ಶುಭ್ರ ದಿನಗಳು
ಮುಗಿಸುತ್ತಿವೆ ಅರ್ಧ ಹಾಸಿಗೆ ಬದುಕು !
ಮಡಿಲಿಂದ ಮಗದೊಂದು ಮಗ್ಗುಲಿಗೆ
ಮುಗ್ಧ ನಿದ್ರೆಗೆ ಜಾರಿದೆ ಮಗು !
ಹಗಲು ನೆನಪುಗಳ ಕರೆದು
ಬಿಚ್ಚಿ ರಾತ್ರಿ ಭಾವದ ಗಂಟು !
ಆ ಕಡೆ ಅವಳು, ಮಧ್ಯೆ ಮಗು
ಈ ಕಡೆ ನನ್ನನ್ನೇ ನೋಡುತ್ತಿದೆ
ಎರಡು ಪ್ರೇಮದ ಕಂಗಳು !
ಒಂದಾದ ಎರಡು, ಜೋಗುಳದ ಹಾಡಿಗೆ
ಕವಿತೆ ಅರಳುವ ಹೊತ್ತು !
-ರವಿ ಮೂರ್ನಾಡು.

5 ಕಾಮೆಂಟ್‌ಗಳು:

 1. ಸುಂದರ ಕಲ್ಪನಾ ಚಿತ್ರಣ .. ಸರಳ ಶಾಂತ ಬದುಕಿನ ಚಿತ್ರಕಥೆಯ ಕಲ್ಪನೆಯಲ್ಲಿ ಕವನದ ಪಾತ್ರಗಳ ಪರಿಚಯ ಸೊಗಸಾಗಿದೆ. & ಮೌನದಲ್ಲಿ ಹುಟ್ಟುವ ಆಲೋಚನೆಗಳು ವಿಶೇಷ ರಚನೆಗಳಾಗಿ ಮೂಡಲು ಸಾಧ್ಯ .. ಸ್ವಚ್ಚ ನಿಷ್ಕಲ್ಮಶ ಹಾಗು ಸಿಹಿಯಾದ ಸಂಸಾರ ಸುಖಕ್ಕೆ ಒಂದು ಮಾತನ್ನು ಹೇಳುವ ಕವನ.. ಸಾಲು ಸಾಲು ಕಲ್ಪನೆ ಅತೀ ಮುದ್ದಾಗಿ ಕವಿತೆಯನ್ನು ಅರಳಿಸಿದೆ.. ಮೂರ್ನಾಲ್ಕು ಸಾರಿ ಓದಿ ಓದಿ ವಿಚಾರ ಅನುಭವಿಸಿದೆವು.. :) & ಕವಿತೆ ಅರಳುವ ಸಮಯ ನಿಜಕ್ಕೂ ರಮಣೀಯವಾಗಿ ಗೋಚರವಾಯಿತು ಸರ್ .. :)

  ಪ್ರತ್ಯುತ್ತರಅಳಿಸಿ
 2. ಕವಿತೆ ಅರಳುವ ಹೊತ್ತನ್ನು ವಿಷದೀಕರಿಸಿ ಕೊಟ್ಟಿದ್ದೀರ ಸಾರ್.

  ಕಲವು ಚಿತ್ರಗಳ ಸುತ್ತ ರಿಂಗಣಿಸುವ ಈ ಕವನದಲ್ಲಿ ಒಮ್ಮೆಲೆ ಹಲವು ಭಾವನೆಗಳ ರಸಾಸ್ವಾಧನೆಯು ಮನೆಸಿಗೆ ತಟ್ಟುತ್ತದೆ. ಉತ್ಕಟತೆ ಮತ್ತು ಕವಿಯ ಗ್ರಹಿಕೆಯ ನೋಟಕ್ಕೆ ಸಿಕ್ಕ ಪದರುಗಳೆಲ್ಲವೂ ಕಾವ್ಯ ಸಂಪತ್ತೇ...

  ಪ್ರತ್ಯುತ್ತರಅಳಿಸಿ
 3. ಮನದ ಭಾವದುಂದುಭಿಯಾಗಿ ಕವಿತೆ ಅರಳಿದ ಪರಿ ಅನೂಹ್ಯವಾಗಿದೆ.ನಿತ್ಯ ಜೀವನದದಲ್ಲಿನ ಹಲವು ಸನ್ನೀವೇಷಗಳಿಗೆ,ಸಂಸಾರದಲ್ಲಿನ ನೋವು-ನಲಿವು,ಸುಖ ಚಿಂತನೆಗಳಿಗೆ ಕವಿತೆಯ ಮಟ್ಟು ಅತ್ಯಂತ ಹೃದ್ಯವಾಗಿ ಸ್ಪುರಣಗೊಂಡಿದೆ.ತುಂಬಾ ಇಷ್ಟವಾಗುವುದು.

  ಪ್ರತ್ಯುತ್ತರಅಳಿಸಿ
 4. ಕವಿತೆ ಅರಳುವ ಹೊತ್ತುಗಳ
  ಹೊತ್ತ ಕವಿತೆ
  ಮನಸ್ಸಿಗೆ ಹಗುರವಾಗಿ ಪದಗಳ ಲಾಲಿತ್ಯದಲ್ಲೇ ತಟ್ಟಿ ಮಲಗಿಸುತ್ತಿವೆ
  ಹೊಸ ಹೊಸ ರಂಗಿನ ಕನಸುಗಳ ಜೋಗುಳದೊಡನೆ
  ರವಿಯವರೇ ಕವನ ಸುಂದರವಾಗಿದೆ

  ಪ್ರತ್ಯುತ್ತರಅಳಿಸಿ
 5. ಮನಮುಟ್ಟುವ ಕವಿತೆ ರವಿಯಣ್ಣ.. ನಿಮ್ಮ ಕವಿತೆಗನ್ನು ಮನದಾಳದ ಭಾವಗಳಲ್ಲಿ ಅದ್ದಿ ತೆಗೆದಿಡುತ್ತೀರಿ ಅದು ಕವಿತೆಯನ್ನು ಓದುಗನ ಮನಸ್ಸಗೆ ಬೇಗ ಮುಟ್ಟಿಸುತ್ತದೆ.. ನನಗೆ ಕವಿತೆ ಅರಳುವ ಹೊತ್ತಿಗಿಂತ ಆ ಸಮಯದಲ್ಲಿನ ಕವಿತೆಯ ಪಡಿಮೂಡಿಸಲು ಪ್ರಯತ್ನಿಸಿರುವ ಕವಿಯ ತಾಕಲಾಟಗಳ ಪಿಸುದನಿ ಕೇಳಿಸಿತು ಕವಿತೆಯಲ್ಲಿ.. ಕವಿಯಾದವನು ಸಮಾಜದಲ್ಲಿ ಎಲ್ಲವೂ ತಾನಾಗುತ್ತಾನೆ ಮತ್ತು ಅದನ್ನು ತಾನೇ ಅನುಭವಿಸಿ ಕವಿತೆಯಲ್ಲಿ ಬಿಡಿಸಿಡುತ್ತಾನೆ ಎಂಬುದನ್ನು ನಿಮ್ಮ ಹಿಂದಿನ ಕವಿತೆಯೊಂದರಲ್ಲಿ ಓದಿದ್ದ ನನಗೆ ಅದನ್ನು ಸಂದರ್ಭಗಳ ಸಮೇತ ಬಿಡಿಸಿಟ್ಟಂತೆನಿಸಿತು ಕವಿತೆ.. ಅರ್ಥಪೂರ್ಣವಾದ ಕವಿತೆ, ಓದುಗರ ಮನಸೂರೆಗೊಳ್ಳುವುದು..

  ಪ್ರತ್ಯುತ್ತರಅಳಿಸಿ