ಎಂ. ಎಸ್. ಮೂರ್ತಿ |
ಆ ಬಾಗಿಲೊಳಗೆ
ಯಾರೋ ಕಟ್ಟಿದರು
ಅರಿಯದ ಜಗತ್ತು
ಹೊರಗೆ ಮತ್ತೊಂದು !
ಹೊರ ಬರುವ ಧಾವಂತಕೆ ನಾನು
ಒದ್ದಾಟಕೆ ಕದ ತೆರೆದ ಅವ್ವ
ಅಳುತ್ತಿದ್ದೆವು ಆ ಶುಭದಿನ !
ಕರುಳ ಬಳ್ಳಿಗೆ ಕತ್ತರಿ ಸಿಕ್ಕಿಸಿ
ಸ್ವಾಗತವೆಂದು ನಕ್ಕರು ಜನ !
ಬೆಳಕು ಬೊಗಸೆ ಬಿಚ್ಚಿದಾಗ
ತೆರದಿದ್ದೇನೆ ಹಣತೆ ಕಣ್ಣು
ಓಡಿಸುತ್ತಾ ಕತ್ತಲು !
ನನಗಿಟ್ಟ ಹೆಸರಿನ ಚೌಕಟ್ಟಿನೊಳಗೆ
ಉರುಳಿದಂತೆ ನನ್ನ ಜಗತ್ತು !
ಮೊಲೆ ಹಾಲು ಕಲಿಸಿದ ಹಸಿವಿಗೆ
ನಡೆದು ಎಡವಿ ಓಡಿದ್ದೇನೆ ಬೆವತು
ಬಾಯಾರಿ ಕುಡಿದು ನೀರು
ಚಳಿಯೆಂದು ಬಡಬಡಿಸಿ
ಬಿಸಿಯೇರಿ ತಂಗಾಳಿಗೆ ತೆರೆದು !
ಕತ್ತಲೆಯಂತೆ ಬೆತ್ತಲೆ ನಾನು
ಜ್ಞಾನದ ಬೆಳಕಿನ ಭಿಕಾರಿ
ಹೂವಾಗಿ ಮೋಹಕೆ ಅರಳಿ
ಬಿದ್ದ ಬೀಜಕೆ ಬೇರಾಗಿ-
ಕಟ್ಟಿದ್ದೇನೆ ಮನೆ-ಸಂಸಾರ-ಅಧಿಕಾರ
ಸುಕ್ಕು ಕಾಲುವೆಗೆ ಅನುಭವಗಳ ಸುರಿದು !
ಈ ಬಾಗಿಲ ಹೊರಗೆ
ನಾನೇ ಕಟ್ಟಿದ ಜಗತ್ತು
ಒಳಗೆ ಗೊತ್ತಿಲ್ಲದ ಮತ್ತೊಂದು !
ಈಗ ದಣಿದಿದ್ದೇನೆ...
ಹೋಗಲಾರದ ನೋವಿಗೆ ನಾನು
ಹೆಣಭಾರಕೆ ಗರ್ಭ ತೆರೆದ ಮಣ್ಣು
ಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
-ರವಿ ಮೂರ್ನಾಡು.