ಎಂ. ಎಸ್. ಮೂರ್ತಿ |
ಆ ಬಾಗಿಲೊಳಗೆ
ಯಾರೋ ಕಟ್ಟಿದರು
ಅರಿಯದ ಜಗತ್ತು
ಹೊರಗೆ ಮತ್ತೊಂದು !
ಹೊರ ಬರುವ ಧಾವಂತಕೆ ನಾನು
ಒದ್ದಾಟಕೆ ಕದ ತೆರೆದ ಅವ್ವ
ಅಳುತ್ತಿದ್ದೆವು ಆ ಶುಭದಿನ !
ಕರುಳ ಬಳ್ಳಿಗೆ ಕತ್ತರಿ ಸಿಕ್ಕಿಸಿ
ಸ್ವಾಗತವೆಂದು ನಕ್ಕರು ಜನ !
ಬೆಳಕು ಬೊಗಸೆ ಬಿಚ್ಚಿದಾಗ
ತೆರದಿದ್ದೇನೆ ಹಣತೆ ಕಣ್ಣು
ಓಡಿಸುತ್ತಾ ಕತ್ತಲು !
ನನಗಿಟ್ಟ ಹೆಸರಿನ ಚೌಕಟ್ಟಿನೊಳಗೆ
ಉರುಳಿದಂತೆ ನನ್ನ ಜಗತ್ತು !
ಮೊಲೆ ಹಾಲು ಕಲಿಸಿದ ಹಸಿವಿಗೆ
ನಡೆದು ಎಡವಿ ಓಡಿದ್ದೇನೆ ಬೆವತು
ಬಾಯಾರಿ ಕುಡಿದು ನೀರು
ಚಳಿಯೆಂದು ಬಡಬಡಿಸಿ
ಬಿಸಿಯೇರಿ ತಂಗಾಳಿಗೆ ತೆರೆದು !
ಕತ್ತಲೆಯಂತೆ ಬೆತ್ತಲೆ ನಾನು
ಜ್ಞಾನದ ಬೆಳಕಿನ ಭಿಕಾರಿ
ಹೂವಾಗಿ ಮೋಹಕೆ ಅರಳಿ
ಬಿದ್ದ ಬೀಜಕೆ ಬೇರಾಗಿ-
ಕಟ್ಟಿದ್ದೇನೆ ಮನೆ-ಸಂಸಾರ-ಅಧಿಕಾರ
ಸುಕ್ಕು ಕಾಲುವೆಗೆ ಅನುಭವಗಳ ಸುರಿದು !
ಈ ಬಾಗಿಲ ಹೊರಗೆ
ನಾನೇ ಕಟ್ಟಿದ ಜಗತ್ತು
ಒಳಗೆ ಗೊತ್ತಿಲ್ಲದ ಮತ್ತೊಂದು !
ಈಗ ದಣಿದಿದ್ದೇನೆ...
ಹೋಗಲಾರದ ನೋವಿಗೆ ನಾನು
ಹೆಣಭಾರಕೆ ಗರ್ಭ ತೆರೆದ ಮಣ್ಣು
ಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
-ರವಿ ಮೂರ್ನಾಡು.
ಒಂದು ಜೀವ ಮಾನದ ವೃತ್ತಂತವನ್ನು ಸವಿಸ್ತಾರವಾಗಿ ಕಟ್ಟಿಕೊಟ್ಟಿದ್ದೀರ.
ಪ್ರತ್ಯುತ್ತರಅಳಿಸಿಬಾಗಿಲಿನ ಹಿಂದೆ ಇದ್ದ ಭದ್ರತೆ ನಮಗೆ ಬಾಗಿಲಿನ ಹೊರಗೆ ಇರಲಾರದು. ಹೊರಗೆ ಬರೀ ಗುದ್ದಾಟ ಜಗ್ಗಾಟ ಕಾಲು ಎಳೆದಾಟ.
ನಾನು ಪದೇ ಪದೇ ಓದಿಕೊಳ್ಳಲು ಈ ಕವನವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತೇನೆ.
ಅದೆಂತಹ ಕವಿತೆಗಳನ್ನು ಬರೆಯುತ್ತಿರಿ ಸರ್..
ಪ್ರತ್ಯುತ್ತರಅಳಿಸಿಮೊದಲ ಓದಿಗೆ ಆವರಿಸುತ್ತ... ಎರಡೆನೇ ಓದಿಗೆ ತನ್ನ ವಿಶಾಲ ಅರ್ಥವನ್ನು ತೆರೆದುಕ್ಕೊಳ್ಳುತ್ತಾ ಹೋಗುತ್ತದೆ...
ತುಂಬಾ ಚೆನ್ನಾಗಿದೆ...
ಪ್ರತ್ಯುತ್ತರಅಳಿಸಿಬಾಗಿಲು ತೆರೆದು ಹೊರಬಂದವನಿಗೆ ಹೊರಗೆ ಬೆಳಕಿದೆಯೆಂದೆನಿಸಿದರೂ ಕತ್ತಲಿರುವುದು ತಿಳಿಯಲು ಸಮಯ ತಗಲಬಹುದು. ಆದರೂ ಕಣ್ಣುತೆರೆದು ಕೈ ಮುಗಿಯಬೇಕಾದದ್ದು ಬಂದವನ ಧರ್ಮವೆನಿಸುತ್ತದೆ. ಉತ್ತಮ ಪ್ರತಿಮೆಗಳನ್ನು ಹೊತ್ತ ಕವನ ಎಂದಿನಂತೆ ಪ್ರಜ್ವಲಿಸುತ್ತಿದೆ.
ಎಮ್.ಎಸ್.ಮೂರ್ತಿಯವರಿಗೂ ನಮನಗಳು.
ಸಾವಿರದ ಕವಿತೆ ಮನುಷ್ಯ ಸತ್ತ ಮೇಲೂ ಅವನನ್ನು ಜೀವಂತವಾಗಿರುವಂತೆ ನೋಡಿಕೊಳ್ಳುತ್ತದೆ.. ಅಂತಹ ಚಿಪ್ಪೊಳಗಿನ ಮುತ್ತು ಈ ಕವಿತೆ.. ಕವಿತೆ ಬಿಟ್ಟುಕೊಟ್ಟ ಪ್ರತಿ ಭಾವಗಳಿಗೊಂದು ಕವಿತೆ ಹುಟ್ಟೀತು..
ಪ್ರತ್ಯುತ್ತರಅಳಿಸಿಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
ಈ ಸಾಲುಗಳನ್ನು ಎಷ್ಟು ಓದಿದರೂ ಮನ ತಣಿಯುತ್ತಿಲ್ಲ.. ಅದ್ಭುತ ಎಂದಷ್ಟು ಹೇಳಿ ಸುಮ್ಮನಾಗುತ್ತೇನೆ..:)