ಬುಧವಾರ, ಆಗಸ್ಟ್ 1, 2012

ಎರಡು ಚಿತ್ರಗಳು-ಎರಡು ಕವಿತೆ



ರೇಖಾ ಚಿತ್ರ:ಎಂ.ಎಸ್.ಮೂರ್ತಿ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !

ಕಣ್ಣು ಬಂತು ಚಳಿಬಿಸಿಗೆ
ಆಕಳಿಸಿ ಮುಲುಕುಗಳು
ತೊಟ್ಟಿಕ್ಕಿದ ಹನಿಯಲ್ಲೂ
ತಿಕ್ಕಿ ಸಿಲುಕುಗಳು !
ಶ್ರಾವಣ ಬಂತೆಂದರೆ..
ಮುಚ್ಚಳಿಕೆಯೊಳಗೂ…
ಚಳಿಯನರಸುವ ಬಿಸಿ !

ಖಂಡ ಖಂಡವೂ ಅವನು
ಮಂಜುಗೆಡ್ಡೆ… ಹಗುರ
ಅವಳ ಖಂಡದ ಕೆಂಡಕೆ
ಕರಗಿ ಕಳೆವ ಭಾರ !

ಗಂಡೊಂದು ಅರ್ಧ
ಬಂದಾಗ….
ಇನ್ನರ್ಧ ಹೆಣ್ಣು ಕರಗಿದಾಗ
ಭೂಮಿ ದುಂಡಗಿದೆ
ಅರ್ಧಗಳು ಒಂದಾದಾಗ !

ಇಗೋ ಇಲ್ಲಿ ಭುವಿ
ಮೇಲೆ ಭಾನು
ಝಣ ಝಣ ಬಿಸಿಲು
ಜಿಟಿ ಜಿಟಿ ಮಳೆಗೆ
ತೊರೆ-ನೆರೆಯೆದ್ದ ನದಿ
ಹರಿದು ಜೀವದ ಹಸಿರು
ಎಲೆಗೆ ಹನಿ ಬೆವರು !
ತೊಟ್ಟಿಕ್ಕಿ ತೆನೆ ಪೈರು
ಗಾಳಿ ತೀಡಿ ಮುಂಗುರುಳು !

ಈಗ….
ತುಟಿಯಿಟ್ಟ ಮಗುವಿಗೆ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !
-ರವಿ ಮುರ್ನಾಡು

ನಮ್ಮ ಹೆಸರು ಹಸಿರಿಲ್ಲದ ಬೆತ್ತಲು..!
ಬದುಕಲಾರೆ ದೊರೆಯೇ
(ಚಿತ್ರ ಕೃಪೆ:ಅವಧಿ ಮಾಗ್)
ನೀರಿದ್ದರೂ ಕುಡಿಯಲಾರೆ
ಹಸಿವಿದ್ದರೂ ನುಂಗಲಾರೆ
ಎದೆಯ ಕೆಳಗೆ !

ದಯೆಯಿದ್ದರೆ ಕೊಡಲಿಯಲಿ
ಕತ್ತರಿಸಿ ಬಿಡು
ನನ್ನ ಗಂಟಲು !

ಕೆಲಕ್ಕುರುಳಿದ ಮೇಲೆ
ಬಾಯ್ತೆರೆಯಲಾರೆ
ತೆರೆದರೆ...
ಸುರಿಸಿ ಬಿಡು
ಕೊಡಲಿ ನೆಕ್ಕಿದ ನೆತ್ತರು !

ಅಷ್ಟಷ್ಟು ಕಣ್ಬಿಟ್ಟ
ಮಾನದ ಪಕಳೆಗಳು
ಹಸಿರಿಲ್ಲದೆ ಸತ್ತಿವೆ
ನಮ್ಮ ಮಸಣದ ಹೆಣಕ್ಕೂ
ಹೆಸರು ಬೆತ್ತಲು !
-ರವಿ ಮೂರ್ನಾಡು,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ