ಭಾನುವಾರ, ಡಿಸೆಂಬರ್ 30, 2012

ಬುದ್ಧ ಬಂದ.. ಬುದ್ಧ ಬಂದ...!ಬುದ್ಧ ಬಂದ.. ಬುದ್ಧ ಬಂದ...
ಮುಂಜಾನೆ ಹಾಡಿದವು
ಯಶೋಧರೆಯ ಹಕ್ಕಿಗಳು |

ಹಣತೆ ಕಣ್ಣಿಗೆ ಬೆಳಗಿ
ಮುಡಿಗೆ ಮಲ್ಲಿಗೆ ಬೆಳೆಸಿ
ಮನೆಗೆ ಸುಳಿದವು ಸಂತಸಗಳು |

ಬಾಗಿಲು ತೆರೆದೇ ಇದ್ದವು
ವರುಷಗಳೆಷ್ಟು ಕಾದವು ?
ದಣಿದ ಕಣ್ಣೆರಡಗಲಿಸಿ
ಮತ್ತೆ ರೆಪ್ಪೆ ಮಿಟುಕಿದಳು |

ಆಸೆ ತುಂಬಿ ಬೊಗಸೆ ಪಾತ್ರೆ
ಅಗಲಿದರೂ ಬತ್ತದ ಎದೆ
ತೆರೆದ ಅಂಗಳದಿ ಹೂಗಳ ಚೆಲ್ಲಿ
ಬುದ್ಧ ಬಂದ.. ಬುದ್ಧ ಬಂದ
ರೆಕ್ಕೆ ಬಡಿದವು ಗಾಳಿಗೆ ಹಕ್ಕಿಗಳು |

ಮಾತು ತುಟಿಗೆ ಒಣಗಿದವು
ಸೆರಗೊದ್ದು ಕೈಗಳು ಮಡಚಿ
ನಿಲ್ಲಿ ಲೋಕದ ಸ್ವಾಮಿ |
ಪುಣ್ಯದ ಪಾದಕೆ ನಮಿಸಿ-
ಬಾಗಿಲು ಸರಿದಳು ಲೋಕದ ತಾಯಿ !

ಕತ್ತಲು ರೇಖೆಯ ದಾಟಿ
ಒಳ ಬಂದ ಜ್ಞಾನಿ ಬುದ್ಧ |
ಅಪ್ಪ ಬಂದ.. ಅಪ್ಪ ಬಂದ
ಕುಪ್ಪಳಿಸಿ ಹಾಡಿದವು ಮಕ್ಕಳು |

ಇದೋ ನಿಮ್ಮದೇ ಬಟ್ಟೆ
ಬಿಸಿ ಬಿಡದ ಸ್ನಾನದ ನೀರು
ನಮ್ಮದೇ ದೇವರ ಹಣತೆ
ನೀವಿಟ್ಟ ಸಿಂಧೂರವೇ ಹಣೆಗೆ
ಬೇಲಿಸಿ ಬದುಕಿದ ಗಾಲಿಗಳು |

ನಿಮ್ಮದೇ ಊಟದ ತಟ್ಟೆ
ಮೆಚ್ಚಿದ ಅನ್ನ ಸಾರು ಮಜ್ಜಿಗೆ
ತಿಂದಷ್ಟು ನೆನಪಿಸಿದೆ ಮನೆಗೆ
ಇನ್ನಷ್ಟು ಬಡಿಸಲೇ ಸ್ವಾಮಿ |
ತುತ್ತು ಕಾದಿವೆ ಮಕ್ಕಳು
ಕಾದಿದ್ದೇನೆ,ಉಳಿದರೆ ಅನ್ನದ ಅಗಳು |

ಕೋಣೆಗೆ ಬಂದ ಬುದ್ಧನ-
ಹಿಂದಿಂದೆ ಯಶೋಧರೆ ಮಕ್ಕಳು
ನಕ್ಕ ಹಣತೆ ಕೆಳಗೆ
ಮುದುಡಿ ನಾಚಿದವು ನೆರಳು |

ಬುದ್ದ ಬಂದ.. ಬುದ್ದ ಬಂದ
ಹೊರಗೆ...ಹಾಡಿದವು
ಯಶೋಧರೆಯ ಹಕ್ಕಿಗಳು  |
ಅಪ್ಪ ಬಂದ.. ಅಪ್ಪ ಬಂದ
ಒಳಗೆ....ಕನವರಿಸಿದವು
ನಿದ್ದೆಗೆ ಮಕ್ಕಳು |

-ರವಿ ಮೂರ್ನಾಡು.
ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಬುಧವಾರ, ಡಿಸೆಂಬರ್ 26, 2012

ಭೂಮಿಯ ಮೇಲೆ ಶಾಂತಿ...

ಚಿತ್ರ ಕೃಪೆ: ಅಂತರ್ಜಾಲ

ಬಿಲ್ಲುಗಾರ ಎಚ್ಚರವಿದ್ದಾನೆ |
ಹಗಲಿನ ವಿರುದ್ಧ ರಾತ್ರಿ
ಅದೋ ಹಾರುವ ರಾಜಹಂಸಕೆ
ಹೂಡಿದ ಬಾಣ ಮಲಗಿದೆ |
ಸ್ವರ್ಗಕ್ಕೆ ಬೇಟೆ ನಡೆಯುತ್ತಿದೆ -
ನಿಶ್ಚಿಂತ ನಿದ್ದೆ ನಾಳೆಯವರೆಗೆ |

ಕರಡಿಗಳು ವಿದೇಶದಲ್ಲಿವೆ
ಕಿರುಚುತ್ತಿವೆ ಹದ್ದುಗಳು|
ಕಂಗಳು ಮಿನುಗುತ್ತಿವೆ |
ಹಗಲಿನ ವಿರುದ್ಧ ರಾತ್ರಿ
ನಿಶ್ಚಿಂತ ನಿದ್ದೆ ನಾಳೆಯವರೆಗೆ |

ಸಹೋದರಿಯರು ಕೋಮಲ-
ಕೈಗಳೆಣೆದು ಮಲಗಿದ್ದಾರೆ |
ಮುಡಿಗಳು ಸರ್ಪಗಳಂತೆ-
ಸುತ್ತಿ ಹೊಳೆಯುತ್ತಿವೆ|
ಹಗಲಿನ ವಿರುದ್ಧ ರಾತ್ರಿ
ಆಲಿಸುವ ನಕ್ಷತ್ರ ಪುಂಜಗಳ
ಖಡ್ಗಗಳು ಝಳಪಿಸುತ್ತಿವೆ |
ಸ್ವರ್ಗಕ್ಕೆ ಬೇಟೆ ನಡೆಯುತ್ತಿದೆ -
ನಿಶ್ಚಿಂತ ನಿದ್ದೆ ನಾಳೆಯವರೆಗೆ |
-ರವಿ ಮೂರ್ನಾಡು

ಸೋಮವಾರ, ಡಿಸೆಂಬರ್ 24, 2012

"ದಣಿಗಳೇ ನಾಳೆ ಮನೆಗೆ ಹೋಗಿ ಬರುತ್ತೇನೆ"


("ಸಂಗೀತ ಕಲಿಸಿ ಕೊಡಿ ಎಂದ ಬಾಲಕ’ ಮುಂದುವರೆದ ಭಾಗ-೪)
ಈ ಗಾಢ ನಿದ್ದೆಯಲಿ ತಾಳ ತಪ್ಪದ ಗಂಟೆಯ ಸ್ವರ.  ಅಡುಗೆ ಮಾಮ ಅದಾಗಲೇ ಈರುಳ್ಳಿ ಕೊಚ್ಚುತ್ತಿದ್ದಾರೆ. ಪಕ್ಕದಲ್ಲಿ ಮಲಗಿದ್ದ ರಂಗ ಅರ್ಧ ಕಣ್ಣು ತೆರೆದು ಮಗ್ಗಲು ಮಗುಚಿದ್ದನ್ನೇ ನೋಡುತ್ತಾ ಗೋಡೆ ಗಡಿಯಾರದ ಹಾಡಿಗೆ ಕತ್ತೆತ್ತಿದ. ಬೆಳಿಗ್ಗೆ ನಾಲ್ಕು ಗಂಟೆ. ಮತ್ತೆ ರೆಪ್ಪೆಗಳು ಭಾರಗೊಂಡವು.  ಹೊರಗೆ ನಾಯಿಗಳ ಹೆಜ್ಜೆ ಸಪ್ಪಳ. ರಾತ್ರಿ ಬಿಸಾಡಿದ್ದ ಅಳಸಿದ್ದ ಅನ್ನ-ಸಾರಿನ ರಾಶಿಗೆ ಬೊಗಳಿ ಬೊಗಳಿ ಬಾಯಿ ಹಾಕುತ್ತಿರಬಹುದು. ರಾತ್ರಿ ತಿಂದುಂಡ ಗಿರಾಕಿಗಳ ರಾಶಿ ಎಂಜಲು ಬಟ್ಟಲುಗಳ ಮೈಗೆ ಮೈಲಿಗೆ ಎದ್ದಿರಬಹುದು.  ಅನ್ನ-ಸಾರು-ಪಲ್ಯಗಳನ್ನು ಬೇಯಿಸಿ ಚೆಲ್ಲಿ ಮೈ ತೊಳೆಯದೆ ಮೂಲೆಗೆ ಕುಳಿತ ಅಡುಗೆ ಪಾತ್ರೆಗಳು. ನಾತ ಕೋಣೆಯ ಮೂಗಿಗೆ ನಾರುತ್ತಿದೆ. ರಾತ್ರಿ ನೆನೆ ಹಾಕಿದ್ದ ಅಕ್ಕಿ-ಬೇಳೆ ಉಬ್ಬಿ ಪಾತ್ರೆಯ ಬಾಯಿಗೆ ಕಣ್ಣು ಬಿಟ್ಟಿರಬಹುದು. ಪಾತ್ರೆ-ತಟ್ಟೆ ತೊಳೆದು ಇಷ್ಟಿಷ್ಟೇ ಹಾಕಿ ರುಬ್ಬಿ ಉದ್ದಿನ ವಡೆಗೆ ಒಲೆಯಲ್ಲಿ ಎಣ್ಣೆ ಕಾಯಿಸಬೇಕಿದೆ.
ಒಂದು ಅಚಾನಕ್ ಸಮಯದ ಕೂಗಿಗೆ ಎಚ್ಚರಗಳು ನಿದ್ದೆಗೆ ಒದ್ದವು ನಿಧಾನವಾಗಿ ಆಕಳಿಸಲಾಗದ ಬಾಯಿ ತೆರೆದು ಹೊರಗೆ ಬಚ್ಚಲು ಮನೆಗೆ ಬಂದ.

ನಾಯಿಗಳು ಅನ್ನಕ್ಕೆ ಅಡ್ಡಬಂದ ಮತ್ತೊಂದು ನಾಯಿಯಂತೆ ದುರುಗುಟ್ಟುತ್ತಿವೆ. ಅಲ್ಲೇ ಕಂಡು ಕಾಣಿಸಿದ ಬೆಳಕಿನ ಅನತಿ ದೂರದ ಕತ್ತಲೆಯಲಿ ಗೊತ್ತಿಲ್ಲದ ಕಂದು ಬಣ್ಣಕೆ ಮಿಶ್ರಣಗೊಂಡ ಮುಸುಕು ಆಕೃತಿಯೊಂದು ಮಿಸುಕಾಡಿತು. ದೈನಂದಿನ ಆ ಭಿಕ್ಷುಕಿ ಒಣಗಿದ ಚಪಾತಿ ತಿನ್ನುತ್ತಾ ಮಲಗಿದ್ದಾಳೆ. ನಾಯಿಗಳ ಬೊಗಳಾಟ ಒಂದಕ್ಕೊಂದು ತಿಕ್ಕುತ್ತಿದ್ದಂತೆ ಕಲ್ಲೆಸೆದು ಓಡಿಸ ತೊಡಗಿದ. ಚಪಾತಿ ತಿನ್ನುತ್ತಾ ಮಲಗಿದ್ದ ಮುದುಕಿ ಭಿಕ್ಷುಕಿ ಅಲ್ಲಿಂದ ಕ್ಷಣ ಮಾತ್ರದಲ್ಲಿ ಕಾಣೆಯಾದಳು. ಮತ್ತೆ ಅಲ್ಲೆಲ್ಲಾ ಕತ್ತಲು. ! ಒಂದೆರಡು ನಾಯಿಗಳು ಮುದುಕಿ ಹೋದ ದಾರಿಗೆ ಮೂಗಾಡಿಸುತ್ತಿವೆ.

ನಲ್ಲಿ ಬಾಯಿಗೆ ನೀರು ತೆರೆದು ತಟ್ಟೆಗಳ ರಾಶಿಯ ಕೆಳಗೆ ಕುಳಿತ. ಹೊರಗೆ ಕಣ್ಣುಗಳು ದೂರಕ್ಕೆ ಹಾಯ ತೊಡಗಿದಂತೇ ತಟ್ಟೆಗಳೇ ಅಡ್ಡಡ್ಡ ಬರುತ್ತಿವೆ. ಅಲ್ಲೆಲ್ಲಾ  ತಟ್ಟೆಗಳ ಸುತ್ತಾ ಎಂಜಲು ರುಚಿಗೆ ಹಾತೊರೆದು, ನೆಕ್ಕುತ್ತಾ , ಹಾರುತ್ತಾ ನೆಗೆದಾಡುವ ನೋಣಗಳು. ಕೈಯಾಡಿಸಿದಷ್ಟು ರಕ್ತಕ್ಕೆ ಹಸಿದು ಶೋಕ ಗೀತೆಗೆ ಅತ್ತು ಅತ್ತು ಕಣ್ಣುಬ್ಬಿಸಿಕೊಂಡ ಸೊಳ್ಳೆಗಳು. ನೀರು ತುಂಬಿದ ತೊಟ್ಟಿಗೆ ತಟ್ಟೆಗಳನ್ನು  ಒಂದೊಂದಾಗಿ ಮುಳುಗಿಸ ತೊಡಗಿದವು ಭಾರದ ಕೈಗಳು. ಬಗಬಗನೇ ಉರಿದ ಬೆಂಕಿಗೆ ಮಸಿ ಮುಕ್ಕಿಸಿಕೊಂಡ ಗಜಗಾತ್ರದ ಅಡುಗೆ ಪಾತ್ರೆಗಳ ಬುಡಕ್ಕೆ ಸೋಪು ಹಾಕಿ ಮತ್ತೆ ಮತ್ತೆ ತಿಕ್ಕ ತೊಡಗಿದ. ಕೈ ತೊಳೆದು ಅಲ್ಲೇ ಮುಖದ ತುಂಬಾ ಕಜ್ಜಿ ಉಬ್ಬಿಸಿಕೊಂಡ ಕನ್ನಡಿಗೆ ಮುಖ ನೋಡಿಕೊಂಡ. ಕೆನ್ನೆ-ಹಣೆ ತುಂಬಾ ಮಕ್ಕಳು ಹಚ್ಚಿಟ್ಟ ಚಿತ್ರದ ಕಪ್ಪುಗಳು.ಆಟಕ್ಕೆ ಸಿಕ್ಕಿ ಬಲವಂತ ತಿಕ್ಕಿದ ಮಕ್ಕಳ ಕೈ ಉಜ್ಜುಗಳು. ಪಾತ್ರೆಗಂಟಿದ್ದ ಎಣ್ಣೆ ಜಿಡ್ಡಿನ ಮಸಿ ತಿಕ್ಕಿ ತಿಕ್ಕಿ ಒರೆಸಿದಷ್ಟು ಮತ್ತಷ್ಟೂ ಕಪ್ಪಾಗಿ ಕಾಣದಾದ ಅಂಗೈ ಹಸ್ತರೇಖೆಗಳು. ಅಲ್ಲಲ್ಲಿ ಹೂಬಿಟ್ಟ ಅಂಗಿ-ಚಡ್ದಿಯಲ್ಲಿ ಒರೆಸಿ ತೊಳೆದರೂ ಹೋಗದೆ ಗಟ್ಟಿಯಾಗಿ ಕುಳಿತ ಎಣ್ಣೆ ಕಪ್ಪುಗಳಿಗೆ ಮುಖ-ಉಬ್ಬು-ಕೆನ್ನೆ- ಅಂಗಿ-ಚಡ್ಡಿಗೆ ಗೀಚಿದ ಚುಕ್ಕಿ ಚಿತ್ತಾರ ಗೀಚುಗಳು. ಕನ್ನಡಿ ಮತ್ತು ಹಣೆಯ ಮಧ್ಯೆ ಅಮ್ಮ ದೃಷ್ಟಿ ತೆಗೆದ ಅಡುಗೆ ಒಲೆಯ ಕಪ್ಪು ಬೊಟ್ಟಿನೊಳಗೆ ಅವಳೇ ನಗುತ್ತಿದ್ದಳು. ಆಗ ಕೇಳಿಸುತ್ತಿದೆ ಗಟ್ಟಿ ಎದೆಗೆ ಒದ್ದ  ಒಂದು ಸ್ವರ.
" ಅಕ್ಕಿ-ಬೇಳೆ ಬೇಗ ರುಬ್ಬಿ ಕೊಡೋ"

ವಿಶ್ರಾಂತ ಮೌನ ಸಂವಾದದ ದಾರಿಗೆ ಅಡುಗೆ ಮಾಮ ಅಡ್ಡ ಬಂದಿದ್ದಾರೆ.
ಹಲ್ಲುಡಿಗೆ ಹಲ್ಲುಜ್ಜುತ್ತಿದ್ದ ತೋರು ಬೆರಳಿನ ವೇಗ ತುಂಡರಿಸಿತು. ಅರ್ಧದಲ್ಲೇ ಮುಖ ತೊಳೆದು ರುಬ್ಬು ಕಲ್ಲಿನ ಮುಂದೆ ಕುಳಿತುಕೊಂಡಾಗ ಒಂದು ಹಾಡು. ಈ ವೇಶ ನೋಡಬೇಡ ಅಮ್ಮಯ್ಯ... ನೀ ಮೋಸ ಹೋಗದಿರು ದಮ್ಮಯ್ಯ...!

ಒರೆಸದೆ ಬಿಟ್ಟ ಮುಖ ತೊಳೆದ ನೀರು ತೊಟ್ಟಿಕ್ಕಿ ಬಿಳಿ ಕಾಗದದ ಮೇಲೆ ಬಲವಂತಕ್ಕೆ ಬಿದ್ದ ಒದ್ದೆ ಚಿತ್ರವಾಗುತ್ತಿದೆ ಅಂಗಿಯ ಮೇಲೆ .ಆ ಚುಮುಚುಮು ಬೆಳಿಗ್ಗೆ ಮೈ ಬಿಸಿಯನ್ನು ಎಬ್ಬಿಸಿದ ಚಳಿ ಚಳಿ. ಅಕ್ಕಿ ಹಿಟ್ಟು ಉದ್ದಿನ ವಡೆಗೆ ಸಿದ್ದವಾದಂತೆ  ಇಡ್ಲಿ- ದೋಸೆಗೆ  ಇನ್ನಷ್ಟು ಅಕ್ಕಿಯನ್ನು ಅದಾಗಲೇ ಎದ್ದ ರಂಗ ಪಕ್ಕದಲ್ಲಿಟ್ಟ.  ಇದೇನಿದು ! ನೀರು ಒಣಗಿದ ಜಾಗದಲ್ಲಿ ಮತ್ತೆ ನೀರು?. ಒಂದೊಂದಾಗಿ ಹನಿಗಟ್ಟ ತೊಡಗಿದವು ಹಣೆ- ಬೆನ್ನಿಗೆ ಬೆವರು .ಬಿರಬಿರನೇ ಸುರಿದ ಬೆವರ ಮಳೆಗೆ ತೊಟ್ಟ ಅಂಗಿ ಬೆನ್ನು-ಎದೆಗಂಟುತ್ತಿದೆ . ತಿಂಗಳ ಹಿಂದೆ ಜೇಬಿಗಿಟ್ಟಿದ್ದ ಮೂರ್ನಾಡಿನಿಂದ ಮಡಿಕೇರಿಗೆ ಬಂದ ಬಸ್ ಟಿಕೇಟು ನೆನಪು. ನಿಧಾನವಾಗಿ ಕಣ್ಣು ಜೇಬಿಗಿಳಿಯಿತು. ಬೆರಳಿಳಿಸಿ ನೆನೆದ ಟಿಕೇಟು ಹೊರ ತೆಗೆದು ನೋಡಿದ. ಬಸ್ಸಿಗೆ ಕುಳಿತಾಗ ಕಂಡೆಕ್ಟರ್ ನೀಲಿ ಪೆನ್ನಿಗೆ ಬರೆದ ಐದು ರೂಪಾಯಿ ಅಕ್ಷರದ ಇಂಕು. ತುಂಬಾ ನೀಲಿಯೇ ಹರಿದಾಡಿದೆ. ಗೀಚಿದ ಪೆನ್ನಿನ ಐದು ರೂಪಾಯಿ ಚಿತ್ರ ಗಲ್ಲಿ ಗಲ್ಲಿಗಳಲ್ಲಿ ರಂಗೇರಿ ಓಡುತ್ತಿದೆ. ನೀಲಿ ಇಂಕು ಮೂರ್ನಾಡಿನ ಬೀದಿ ತುಂಬಾ ನದಿಯೇ ಹರಿಯುತ್ತಿದೆ. ಅಲ್ಲಲ್ಲಿ ಕಾಮನ ಬಿಲ್ಲಿನ ಏಳು ಬಣ್ಣಗಳು ,ಒಂದಷ್ಟು ಕೆಂಪು, ಬಿಳಿ, ಅಲ್ಲೇ ಮಾವಿನ ಮರದಲ್ಲಿ ಚಿಲಿಪಿಲಿ ಗುಟ್ಟಿ ಚಿಗುರು ತಿನ್ನುತ್ತಿದ್ದ ಗಿಳಿ ಹಸಿರು. ಒಂದಿಷ್ಟು ನೀಲಿ, ಮೇಲೆ ಕುಳಿತ ನೇರೆಳೆ ಮರದ ಹಣ್ಣು, ಗದ್ದೆ ಬಯಲಿಗೆ ತೆನೆ ಬಲಿತು ತಲೆದೂಗಿದ ಹಳದಿ, ದೀಪಾವಳಿ ಪಟಾಕಿ ಸುರುಸುರು ಬತ್ತಿ, ಆಗಸಕ್ಕೆ ಮುತ್ತಿಟ್ಟ ರಾಕೇಟು ಜಗ್ಗನೇ ನೆನಪ ಬಳ್ಳಿಯ ಜಗ್ಗಿಸಿ ನಿಟ್ಟುಸಿರು ಎಚ್ಚರವೆಬ್ಭಿಸಿತು. ಅದಾಗ ತಾನೇ ರುಬ್ಬಿಕೊಟ್ಟ ಅಕ್ಕಿಯಲಿ ಬೆಂದ ಇಡ್ಲಿ  ಅಡುಗೆ ಮಾಮನ ಕೈಯಲ್ಲಿ ಬಗಬಗನೇ ಉರಿವ ಬೆಂಕಿಗೆ ಸುವಾಸನೆ ಬೀರುತ್ತಿದೆ...
" ಹೊರಗೇ ಹೋಗಿ ಟೇಬಲ್ ಕ್ಲೀನ್ ಮಾಡೋ"

ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಬಕೇಟು, ಒರೆಸುವ ಬಟ್ಟೆ ಎತ್ತಿದ. ಎಷ್ಟು ದಿನಗಳಿಂದ ಈ ಬಟ್ಟೆ ತೊಳೆಯಲಿಲ್ಲ?
ಮೇಜಿನ ಮೇಲೆ ಬಿದ್ದ ಗಿರಾಕಿಗಳ ಅನ್ನ-ಸಾರು-ನೀರು-ಟೀ-ಕಾಫಿ-ನೆಗಡಿ ನೆಕ್ಕಿದ ಈ ಬಟ್ಟೆ, ಮತ್ತೊಮ್ಮೆ ಮೈಲಿಗೆ ಮಾಡುತ್ತಿದೆ ಗಿರಾಕಿಗಳ ಮೇಜು. ಮೆಲ್ಲೆಗೆ ಬಂದು ಊಟ ಮಾಡುತ್ತಿದ್ದವರ ಬದಿಯ ಗೋಡೆಗೆ ಒರಗಿ ನಿಂತ. ಕೆಲವರು ಕೆಕ್ಕರುಗಣ್ಣಿನಲಿ ನೋಡಿದರು. ಎದೆಗೆ ಎರಡು ಗುಂಡಿ ಬಿಟ್ಟ ಅಂಗಿ ನೋಡಿಕೊಂಡ.  ಮತ್ತೆ ಮತ್ತೆ ಓಡಿಸಿದಷ್ಟು ಹೆಣೆಗೆ ಮುತ್ತಿಕ್ಕುವ ನೋಣ ಓಡಿಸಿ ಅಂಗಿ ಎತ್ತಿ ಮೂಗಿಗೆ ಮೂಸಿಕೊಂಡ.
"ಹೇ ನೀರು ಕೋಡೋ"

ಅವರು ಖಾಲಿ ಬಿದ್ದ ಲೋಟ ಬಡಿದು ನೀರಿಗೆ ಕರೆದರು. ಕೆಲವರು ಉದ್ದ ಮೀಸೆ ಬಿಟ್ಟ ಅಪ್ಪಂದಿರು. ಪಕ್ಕದಲ್ಲೇ ಬಾಯಿಗೆ ಅನ್ನ ತುಂಬಿಸಿ ಮಕ್ಕಳನ್ನು ಪುಸಲಾಯಿಸುತ್ತಿದ್ದ ಅಮ್ಮಂದಿರು. ಮೊಮ್ಮಕ್ಕಳನ್ನೇ ನೋಡುತ್ತಿದ್ದ ಅಜ್ಜಿಯಂದಿರ ಪೇಲವ ತಾಯ್ತನದ ಕಣ್ಣುಗಳು ,ಅವರ ಮಡಿಲ ಮೇಲೆ ಅನ್ನಕ್ಕಾಗಿ ಜಗಳವಾಡುತ್ತಿದ್ದ ಮಕ್ಕಳು, ಇವರನ್ನೆಲ್ಲಾ ನೋಡುತ್ತಿದ್ದ ಬಿಳಿ ಮೀಸೆ ಅಜ್ಜಂದಿರು. ಸುತ್ತಲೂ ಹಕ್ಕಿ ಚಿಲಿಪಿಲಿ ಹಾಡುಗಳು. ಎಂಜಲು ತಟ್ಟೆಗಳನ್ನು ಬಿಟ್ಟೇಳುವ ಗಿರಾಕಿಗಳನ್ನೇ ಕಾಯುತ್ತಿದ್ದವು ಅವನೆರಡು ಕಣ್ಣುಗಳು.

"ಹೇ ಹುಡುಗ ಇಲ್ಲಿ ಬಾ’
ದಣಿಗಳ ಕ್ಯಾಷಿಯರ್ ಮೇಜಿನ ಮುಂದೆ ನಿಂತ. ಝಗಮಗಿಸುವ ಸೂರ್ಯನ ಬೆಳಕು ರಸ್ತೆ ಬದಿಯ ಜನರ ನೂಕುನುಗ್ಗಲಿನ ಮಧ್ಯೆ ನುಸುಳುತ್ತಿರುವುದು ಕಣ್ಣಿಗೆ ರಾಚಿತು. ಕಾಗೆಗಳಂತೆ ದಾರಿ ಹೋಕರನ್ನು ಕರೆಯುವ ವ್ಯಾಪಾರಿಗಳು, ತರತರದ ಹಣ್ಣುಗಳು, ಪ್ಲಾಸ್ಟಿಕ್ ಆಟದ ಸಾಮಾನು ಬಸ್ಸು, ಕಾರು, ಕುದುರೆ,ಲಾರಿಗಳು. ತರತರದ ಬಟ್ಟೆ ತೊಟ್ಟು ಅಪ್ಪ-ಅಮ್ಮಂದಿರ ಕೈಕೈ ಹಿಡಿದು ಸಾಗುವ ಮಕ್ಕಳು. ಅವರ ಹಿಂದೆ-ಮುಂದೆ ಸರಿದಾಡುವ ಅಕ್ಕಂದಿರು, ಅವರ ಮುಂದೆ ಅವನ ಹಾಗೇ ಇರುವ ಅಣ್ಣಂದಿರು. ಅಲ್ಲಿ ಒಬ್ಬಂಟಿಯಾಗಿ ಎಲ್ಲರಿಗಾಗಿ ಹುಡುಕುತ್ತಾ, ಓಡುತ್ತಾ ಮಧ್ಯೆ ನುಸುಳುತ್ತಿದ್ದ. ತಪ್ಪಿಸಿಕೊಂಡ ಆರ್ತಸ್ವರಕ್ಕೆ ಮಗುವೊಂದು ಅತ್ತ ಇತ್ತ ಓಡಾಡುತ್ತಿದ್ದಂತೆ ಒಂದು ಕೂಗು.
"ನಿನಗೆ ಸಿನಿಯರ್ ಕಾಲೇಜು ರಸ್ತೆಯಲ್ಲಿರುವ ಉಷಾ ಮೆಷಿನ್ ಟೈಲರ್ ಅಂಗಡಿ ಗೊತ್ತಾ?"
"ಗೊತ್ತಿದೆ ದಣಿಗಳೇ "
"ಅಲ್ಲಿಗೆ ಮೂರು ಕಪ್ ಚಹಾ ತೆಗೆದುಕೊಂಡು ಹೋಗಿ ಕೊಡು.ಅವರದು ಎಕೌಂಟು ಇದೆ. ಹಣ ಮತ್ತೆ ಕೊಡುವರು"

ಈ ಮಡಿಕೇರಿ ಕಾಲೇಜು ರಸ್ತೆಯಲಿ ಸರಿಗಮಪದನಿಸ  ತಾಳ ತಪ್ಪದ ಸ್ವರಗಳ ಹುಡುಕಾಟ. ಕೈಯಲ್ಲಿ ಮೂರು ಕಪ್ ಟೀ. ಚೆಲ್ಲದಂತೆ ಭದ್ರವಾಗಿದೆ ಕೈಬಲಗಳು ಉಷಾ ಮೆಷಿನ್ ಅಂಗಡಿಯವರೆಗೆ. ಈ ಬರಿಗಾಲು ರಸ್ತೆಯ ಅನತಿ ದೂರದಲಿ ಒಂದು ಹಾಡು ಕೇಳುತ್ತಿದೆ. ಅಹಾ ! ಜೀನತ್ ಹೋಟೇಲಿನಲ್ಲಿ ಮಲೆಯಾಳಂ ಮಾಪಿಳ್ಳೆ ಹಾಡು. ಮೂರ್ನಾಡಿನಲ್ಲಿ ಗೆಳೆಯ ಲತೀಫ ಇದೇ ಹಾಡು ಮದ್ರಸದ ರಂಜಾನ್ ಸಮಾರಂಭದಲ್ಲಿ ಹಾಡಿದ್ದ ನೆನಪು. ಉಷಾ ಮೆಷಿನ್ ಅಂಗಡಿವರೆಗೆ ಎಳೆ ಎಳೆಯಾಗಿ ಗುನುಗಿತು.
" ಹೊಸ ಹುಡುಗನಾ?"
ಕಪ್ಪಗಿನ ಮನುಷ್ಯ. ತಟ್ಟೆಯಲ್ಲಿದ್ದ ಚಹಾ ಕಪ್ ತೆಗೆದು ಮೊದಲ ಬಾರಿಗೆ ಮೇಲಿಂದ ಕೆಳಗೆ ನೋಡಿ ಕೇಳುತ್ತಿದ್ದ.ಪಕ್ಕದಲ್ಲಿ ಮತ್ತಿಬ್ಬರು  ಎದೆಗೆ ಎರಡು ಗುಂಡಿ ಬಿಟ್ಟ ಬಟ್ಟೆಯನ್ನೇ ನೋಡುತ್ತಿದ್ದರು. ಅಂಗಿಗೆ ಎಳೆದೆ ಮಸಿ ಪಾತ್ರೆಯ ಚಿತ್ರಗಳನ್ನೇ ಲೆಕ್ಕ ಹಾಕುತ್ತಿದ್ದರು. ಅಲ್ಲೊಂದಷ್ಟು ಹಣೆಗೆ ಮುತ್ತಿಕ್ಕಿದ ನೋಣಗಳು. ಕ್ಷಮಿಸಿ.! ಹೋಟೆಲಿನಿಂದ ಬಂದದ್ದು. ಸ್ವಲ್ಪ ದೂರ ನಿಂತು ಆ ಮನುಷ್ಯ ಹೊಸ ಬಟ್ಟೆ ಅಂಗಿಗೆ ಗುಂಡಿ ಹೊಲಿಯುತ್ತಿದ್ದುದ್ದನ್ನೇ ದೃಷ್ಟಿ ಬದಲಿಸದೇ ನೋಡ ತೊಡಗಿದ. ಚಹಾ ಕುಡಿದು ಕಪ್ ಕೈಗಿಡುತ್ತಾ ಒಮ್ಮೆ ಮೀಸೆ ಒರೆಸಿದ. ಎಣ್ಣೆ ಬಾಚಿದ ಕ್ರಾಪು, ಕೆಂಪಗಿನ ಕಣ್ಣು ಮತ್ತೊಮ್ಮೆ ಅಂಗಿ ಗುಂಡಿಗೆ ಸೂಜಿ ಬಿಡುತ್ತಾ ಕತ್ತೆತ್ತಿ ಮತ್ತೊಮ್ಮೆ ಕೇಳಿತು.
"ನಿನಗೆ ಟೈಲರಿಂಗ್ ಬರುತ್ತಾ?"
" ಅಹಾ ! ಬರುತ್ತೆ"
ಮೂರ್ನಾಡಿನಿಂದ ಕ್ಲಿಕ್ಕಿಸಿದ ಬಣ್ಣ ಬಣ್ಣದ ನೆನೆಪು ಚಿತ್ರಗಳನ್ನು ಒಂದೊಂದಾಗಿ ಅವನ ಮುಂದಿಡುತ್ತಾ ಬಂದ. ಇದು ಸಂಗೀತದ ಏಳು ಸ್ವರಗಳು, ಅದು ಎಂಜಲು ತಟ್ಟೆಗಳ ಮೇಲೆ ಮೆತ್ತಿಕೊಂಡ ಅನ್ನ-ಸಾರು. ಬೇಯಿಸಿದ ಪಾತ್ರೆಗಳನ್ನು ಮುಚ್ಚಿಕೊಂಡ ಕಪ್ಪು ಮಸಿಗಳು, ಮತ್ತೆ ಮತ್ತೆ ರುಬ್ಬುತ್ತಾ ಅಕ್ಕಿ-ಉದ್ದಿನ ಬೇಳೆಗೆ ಮಾತಾಡಿಕೊಳ್ಳುವ ರುಬ್ಬು ಕಲ್ಲುಗಳು, ಗಿರಾಕಿಗಳು ತಟ್ಟೆ ಬಿಟ್ಟೇಳುವುದನ್ನೇ ಕಾಯುತ್ತಿದ್ದ ಕೈಯಲ್ಲಿದ್ದ ಪ್ಲಾಸ್ಟಿಕ್ ಬಕೇಟು, ಕೈಬಟ್ಟೆ. ಓಡಿಸಿದಷ್ಟು ಮುಖ ನೆಕ್ಕುವ ನೊಣಗಳು,ಮುಚ್ಚಿದಷ್ಟೂ ತೆರೆದುಕೊಳ್ಳುತ್ತಾ, ಮತ್ತೆ ಭಾರವಾಗುವ ಕಣ್ಣ ಮೇಲಿನ ರೆಪ್ಪೆಗಳು ಅವನ ಮುಂದೆ ಮತ್ತೆ  ತೆರೆಯಲೆತ್ನಿಸಿದವು. ದಿನಕ್ಕೆ ಒಂದು ರೂಪಾಯಿ ಕೊಟ್ಟರೆ ಸಾಕು.. ಸಂಗೀತ ಕಲಿಯಬೇಕು. ಹೋಟೇಲಿನಿಂದ ಓಡಿ ಬಂದರೋ?". ಸಂಗೀತಕ್ಕೆ ದಾರಿ ಸಲೀಸಾಗಿದೆ...

"ಆಯಿತು...ನಿನ್ನ ಬಟ್ಟೆಬರೆ ತೆಗೆದುಕೊಂಡು ನಾಳೆ ಬಾ"
ಆ ಅಂಗಡಿಯ ಗೋಡೆಗಳ ಮೇಲೆ ಸುತ್ತಲೂ ಒಮ್ಮೆ ಹರಿದಾಡಿತು ಕಣ್ಣುಗಳು . ಒಂದರ ಮೇಲೊಂದರಂತೆ ಮಾರಾಟಕ್ಕಿಟ್ಟ ಹೊಲಿಗೆ ಯಂತ್ರಗಳು. ಅಲ್ಲೇ ಮೂಲೆಯಲ್ಲಿ ಒಂದು ಮರದ ಖುರ್ಚಿ. ಕೆಲಸ ಸಿಕ್ಕಿದರೆ ಅಲ್ಲೇ ಕೂರಬಹುದು. ಖಾಲಿ ಚಹಾ ಕಪ್ ಗಳನ್ನು ಖಾಲಿ ತಟ್ಟೆಗಿಡುತ್ತಾ ಹೋಟೆಲಿಗೆ ಮುಖ ಮಾಡಿದ ರಸ್ತೆಗೆ ಕಾಲುಗಳು ಇನ್ನಷ್ಟು ಚುರುಕಾಗಿ ತಿಕ್ಕತೊಡಗಿತು. ಕೆಲವಷ್ಟು ಜಲ್ಲಿ ಕಲ್ಲುಗಳು, ಅದನ್ನು  ಮುಚ್ಚಿದ ಮರಳು, ಮರಳಂತೆ ಇರುವ ಧೂಳು ಮಣ್ಣು. ಕಾಲು-ಮಣ್ಣು-ಧೂಳು ಒಂದಾದವು.
ಬಿಸಿಲು ಮಂಕಾಗಿದೆ. ಶಾಲೆ ಬಿಟ್ಟ ಮಕ್ಕಳು ಬಿರಬಿರನೇ ನಡೆಯುತ್ತಿದ್ದಾರೆ.ಹಕ್ಕಿಗಳು ಚಿಲಿಪಿಲಿ ಹಾರಾಡುತ್ತಿವೆ.ಎಲ್ಲರೂ ಗೂಡು ಸೇರುವವರೆ. ಹೋಟೆಲಿಗೆ ಬಂದವನು ಖಾಲಿ ಎಣ್ಣೆ ಡಬ್ಬಿಯ ಮೇಲಿದ್ದ ಬಟ್ಟೆ ತುಂಬಿದ ಚೀಲವನ್ನು ಮೊದಲು ಮುಟ್ಟಿ ನೋಡಿದ. ಅಂಗಿ-ಚಡ್ದಿ, ಧರ್ಮಸ್ಥಳದ ಕಾರ್ಡು,ಚಲನಚಿತ್ರ ಗೀತೆಗಳ ಪುಸ್ತಕ ಅವನನ್ನೇ ನೋಡುತ್ತಿವೆ..ಇಲ್ಲ ! ಒಳಗೆ ಬೆಚ್ಚಗೆ ಮಲಗಿವೆ. ಮತ್ತೊಮ್ಮೆ ಸರಿಪಡಿಸಿ ಹಿಂದಕ್ಕೆ ಕತ್ತು ತಿರುಗಿಸಿದ.
"ಹೇ ಒಳಗೆ ತಟ್ಟೆಗಳನ್ನು ತೊಳೆಯೋ, ಗಿರಾಕಿಗಳು ಕಾಯ್ತಿದ್ದಾರೆ"

ಇನ್ನಿಲ್ಲದ ಉಮ್ಮಸ್ಸು, ಉಜ್ಜಿ ಉಜ್ಜಿ ತೊಳೆದು ರಾಶಿಯಿದ್ದ ನೂರರಷ್ಟು ತಟ್ಟೆಗಳನ್ನು ಬೆಳ್ಳಗೇ ಕಂಡಾಗಲೇ ಗೊತ್ತಾಗಿದ್ದು, ಬಟ್ಟೆಯೆಲ್ಲಾ ಒದ್ದೆ. ಮುಖ ತುಂಬಾ ತೊಳೆದ ಬೆವರಿಗೆ ಅಂಗಿಯ ಕೊನೆಯನ್ನು ಎತ್ತಿ ಒರೆಸತೊಡಗಿತು ಕೈಗಳು.ಅಲ್ಲೇ ಮೂಲೆಗೆ ತಲೆ ಕೆಳಗೆ ಮಲಗಿದ್ದ  ಪೊರಕೆ ಹಿಡಿದು ಅಡುಗೆ ಕೋಣೆ, ಗಲೀಜು ಹರಿದರೂ ಮೂಗು ಮುಚ್ಚದೆ ನಾರುತ್ತಿದ್ದ ಚರಂಡಿಯನ್ನು ಗುಡಿಸತೊಡಗಿದ. ಮತ್ತೆ ಗುಡಿಸಿದ..ನೀರು ಮತ್ತೆ ಮತ್ತೆ ಚರಂಡಿಗೆ ಸುರಿಯುತ್ತಾ ಒಂದು ಹಾಡು ಹಾಡಿದ..."ಎಲ್ಲೆಲ್ಲೂ ಸಂಗೀತವೇ....ಕೇಳುವ ಕಿವಿ ಇರಲು... ನೋಡುವ ಕಣ್ಣಿರಲೂ"

"ದಣಿಗಳೇ ನಾನು ನಾಳೆ ಮನೆಗೆ ಹೋಗಿ ಬರುತ್ತೇನೆ"
ಹಿಂದಿಂದೆಯೇ ಬಂದ ರಂಗನ ಐವತ್ತು ಪೈಸೆ ಸಾಲ ಈ ಸಲವೂ ಬಿಡಲಿಲ್ಲ. ರಾತ್ರಿ ಮಲಗುವಾಗ ಅವನದು ಅದೇ ರಾಗ. ಚೀಲದಲ್ಲಿ ಹಾಕಿಟ್ಟ ಇಪ್ಪತೈದು ಪೈಸೆ  ಎರಡು ನಾಣ್ಯ ಹುಡುಕಿ ಕೈಗಿಟ್ಟ ಮೇಲೆ ಅವನಿಗೆ ನಿದ್ದೆ ಬಂತು. ಈ ಅಡುಗೆ ಮನೆಗೆ ಕಣ್ಣುಗಳು ಮತ್ತೆ ಮತ್ತೆ ಹಾಯತೊಡಗಿದವು. ಒಲೆಯಲ್ಲಿ ಉರಿದು ನಾಳೆಗೆ ಉಳಿದ ಬೂದಿಯೊಳಗಿನ ಕೆಂಡ ಮಂದವಾಗಿ ಕಣ್ಮುಚ್ಚಿದೆ. ಮೈಗೆ ಬಿಸಿ ಹೊದ್ದ ಗೋಣಿಚೀಲವನ್ನು ಮತ್ತೊಮ್ಮೆ ಸವರಿ ನೋಡಿದ.ನಿದ್ದೆಗೆ ಸೋಲುತ್ತಿರುವ ಭಾರದ ಕಣ್ಣುಗಳ ತುಂಬಾ ರಾಶಿ ರಾಶಿ ಅಂಗಿಗಳು, ಹೆಕ್ಕಿ ಹೆಕ್ಕಿ ಹೊರತೆಗೆಯುವ ಬಲಾಢ್ಯ ಗಡಸು ಕಪ್ಪು ಕೈಗಳ ನಡುವೆ ಆಳದಿಂದ ಆಳಕ್ಕೆ ಇಳಿಯುವ ಹೊಲಿಗೆ ಹಾಕುವ ಗುಂಡಿಗಳು ಕಾಣುತ್ತಿವೆ. ದಿನದಿಂದ ದಿನಕ್ಕೆ ಜೇಬಿಗಿಳಿಸುವ ಗಾಂಧಿ ಚಿತ್ರದ ಒಂದು ರೂಪಾಯಿ ನಾಣ್ಯಗಳ ಗೆಜ್ಜೆ ಶಬ್ದಗಳು. ಅಲ್ಲೊಂದು ಮಸುಕು ಮಬ್ಬು ಬೆಳಕಿನಲ್ಲಿ ಆಕೃತಿಯೊಂದು ಕುಳಿತಂತಿತ್ತು.  ಓಹೋ..ಸಂಗೀತ ಮೇಷ್ಟ್ರು ! ಅವರ ಮುಂದೆ ಆದಿ ತಾಳ ಹಾಕುತ್ತಿದ್ದ ಪುಟ್ಟ ಕೈಗಳಿಗೆ ಸ್ವರವೇಳಿಸುತ್ತಿದ್ದ ಗಾಳಿ.
ಥಟ್ಟನೇ ಎಚ್ಚರವಾದವು ಅಡುಗೆ ಮಾಮನ ಈರುಳ್ಳಿ ಕೊಚ್ಚುತ್ತಿದ್ದ ಶಬ್ದ. ಕಣ್ಣು ಬಿಟ್ಟವನ ಕಿವಿಯೊಳಗೆ ಎಲ್ಲೋ ದೂರದಲ್ಲಿ ಗಂಟಲು ಹರಿದು ಹಾಡುತ್ತಿದ್ದ ಕೋಳಿಯ ಮುಂಜಾನೆ ಹಾಡು.ಹೊರಗೆ ನಾಯಿಗಳ ಬೊಗಳಿಕೆಗೆ ಸ್ಪರ್ಧೆಗೆ ನಿಂತಂತಿವೆಮದ್ರಸಕೆ ಕರೆಯುವ ಅಲ್ಲಾಹುವಿನ ಪ್ರಾರ್ಥನೆಗೆ, ಪಕ್ಕದ  ಕಾಲೇಜು ರಸ್ತೆ ರಾಮಮಂದಿರದಿಂದ ಗಾಳಿ ತೇಲಿಸಿ ತರುತ್ತಿದೆ ಒಂದು ಹಾಡು " ಎದ್ದೇಳು ಮಂಜುನಾಥ... ಎದ್ದೇಳು.. ಬೆಳಗಾಯಿತು". ಥಟ್ಟನೆ ಎದ್ದವನು ಮೈಸೆಟೆದು ಮೊದಲು ಚೀಲ ಮುಟ್ಟಿ ನೋಡಿದ..ಎಲ್ಲವೂ  ಎಚ್ಚರವಾಗಿವೆ ಹೆಗಲ ಮೇಲೆ ತೂಗಿ ಒಂದು ಸುದೀರ್ಘ ಪ್ರಯಾಣಕ್ಕೆ....

"ಯಾವಾಗ ಬರುತ್ತೀಯಾ" ಅಂತ ಆ ಅಡುಗೆ ಮಾಮ ಕೇಳಿದರು. ಹೆಗಲಿಗೆ ಮುಂಡಾಸು ತೂಗಿಸಿದ ಕಪ್ಪು ಮುಖ-  ಕಪ್ಪು ತುಂಬಿದ ಕೂದಲ ಸೆರೆಗೆ ನಾಲ್ಕಾರು ಬಿಳಿ ಇಣುಕಿದ ನೆರೆಗೂದಲ ಎದೆ, ಕಪ್ಪು ಬಂಡೆ ಕಲ್ಲಿನ ಬೆನ್ನಿಗೆ ಸುರಿಯುತ್ತಿದ್ದ ಬೆಂಕಿಯ ಬೆವರು. ಅಡುಗೆ ಮಾಮ ಮುಂದೆ ಉರಿಯುತ್ತಿದ್ದ ಒಲೆ ಬಗಬಗನೇ ಮತ್ತಷ್ಟು ಉರಿಯ ತೊಡಗಿತು. ಕೊಚ್ಚುತ್ತಿದ್ದ ಮೆಣಸು-ಈರುಳ್ಳಿಗೆ  ಕಣ್ಣಲ್ಲಿ ಸುರಿದ ನೀರು ಒರೆಸುತ್ತಲೇ ಇದ್ದರು. ಮತ್ತೆ ಮತ್ತೆ ಅದು ಹರಿಯುತ್ತಲೇ ಇತ್ತು. ಚೀಲ ಹೆಗಲೇರಿಸಿ ಕ್ಯಾಷಿಯರ್ ಮೇಜಿಗೆ ಬಂದಾಗ ದಣಿಗಳು ಕೊಟ್ಟ ಹತ್ತು ರೂಪಾಯಿ ಜೇಬಿಗಿಳಿಸಿ ಪಾಪ್ಯುಲರ್ ಹೋಟೆಲಿನ ಮೆಟ್ಟಿಳಿದಿದ್ದೇ ತಡ, ರಂಗ ಹಿಂದೆಯೇ ನಿಂತಿದ್ದ.
"ಬರುವಾಗ ಏನು ತರುತ್ತೀಯಾ?"
ತರುತ್ತೇನೆ.. ಮನಸ್ಸು ಹಾಯುವವರೆಗೆ ತಂಪು ಸುರಿಯುವ ಹಾಡುಗಳನ್ನ. ಮರೆತರೂ ಮರೆಯಬಾರದೆನ್ನುವ ಈ ಅಡುಗೆ ಕೋಣೆ, ಮುಖ ಕೆಂಪಗೆ ಮಾಡಿ ಕೋಪ ತೋರಿದ ಒಲೆಯ ಬೆಂಕಿ, ಬಿಸಿಗೆ ಮತ್ತಷ್ಟು ಬಿಸಿ ಮುಟ್ಟಿಸಿ ಚಳಿಯ ಹೆಸರೇಳುವ ಈರುಳ್ಳಿ ಸುರಿದ ಗೋಣಿ ಚೀಲಗಳಲ್ಲಿ ನನ್ನನ್ನೇ ತೂರಿಸಿಕೊಳ್ಳಲು ಮತ್ತೆ ಬರುತ್ತೇನೆ.
(ಮುಂದುವರೆಯುವುದು ಭಾಗ-೫)


ಶನಿವಾರ, ಡಿಸೆಂಬರ್ 22, 2012

ಹುಡುಗಿ ಕಾಮದ ಬಗ್ಗೆ ಬರೆಯುತ್ತಾಳೆಂದರೆ...!ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ..
ಗಂಡಸರಿಗೆ ಮೈಯೆಲ್ಲ ಮಿಂಚು
ತಿದ್ದಿ ತೀಡಿ ಕ್ರಾಪು
ಅಲ್ಲಲ್ಲಿ ಬಿಳಿಗೆ ಮೆತ್ತಿ ಕಪ್ಪು
ಹೆಂಡತಿಗೆ ಒಗ್ಗರಣೆ ಮಾತು !

ಹೆಂಗಸರಿಗೆ ಆತಂಕ !
ಒಂದಷ್ಟು ಕನ್ನಡಿ ಮುಂದೆ ಕೆಲಸ
ಅಡುಗೆಗೆ ರುಚಿ ವ್ಯತ್ಯಾಸ
ಗಂಡಸರ ಹೆಜ್ಜೆಗೆ ಹದ್ದಿನ ಕಣ್ಣು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ...
ಹುಡುಗಿಯರಿಗೆ ಹೊಟ್ಟೆಕಿಚ್ಚು
ಕೈಬಳೆ ಸದ್ದು, ಫ್ಯಾಷನ್ ಬಿರುಸು
ಗೆಳತಿಯೊಂದಿಗೆ ತೆಗಳಿ ಪಿಸುಪಿಸು ಮಾತು !

ಹುಡುಗರಿಗೆ ಇನ್ನಿಲ್ಲದ ರಂಗು
ಬೀದಿಗೆ ಬಗೆಬಗೆ ನಡಿಗೆ ನಗು
ಹುಡುಗಿಯರ ಮೇಲೆ ಮತ್ತೆ ಮತ್ತೆ ಕಣ್ಣು
ಖಾಲಿ ಎದೆಗೆ ಪ್ರೇಮ ನಿವೇಧನೆ ಗುಂಗು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ
ಅಪ್ಪಂದಿರಿಗೆ ಇನ್ನಿಲ್ಲದ ಮೌನ
ಅಣ್ಣ-ತಮ್ಮಂದಿರಿಗೆ ಕೋಪ
ಹುಡುಗಿಗೆ ಸಿಗುವುದೇ ಮದುವೆ ಗಂಡು ?

ತಾಯಂದಿರಿಗೆ ಒಳಗೊಳಗೆ ಅಳು
ಅಪ್ಪ-ಅಣ್ಣಂದಿರ ಕಟು ಮಾತು
ನಿನ್ನದಲ್ಲವೇ ಸಲಿಗೆಯೆಂಬ ಕೊಂಕು
ಹೆಜ್ಜೆಹೆಜ್ಜೆಗೆ ಕಾಯುವುದೇ ಅವಳ ದಿನಗಳು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆಂದರೆ
ಮುದುಕಿಯರ ಎದೆಗೆ ಕೊರಗು
ಇವಳಿಗೇನು ರೋಗ?
ಲೋಕ ಹಾಳಾಯಿತು ಮಗಾ....
ಮನೆ ಹುಡುಗಿಯರಿಗೆ ಹಿತೋಪದೇಶ !

ಮುದುಕರಿಗೆ ತೊಡೆ ಬಲಿತ ಉಮ್ಮಸ್ಸು
ಕೆದಕಿ ನೆನಪು ಸುಕ್ಕು ರಟ್ಟೆ ಸಲೀಸು
ನಡೆಗೆ ಲಗುಬಗೆ ಸೊಗಸು !

ಹುಡುಗಿ ಕಾಮದ ಬಗ್ಗೆ ಕವಿತೆ ಬರೆಯುತ್ತಾಳೆ
ಭೂಮಿಯೇ ಅವಳು
ಭೂತಾಯಿ ಮಗಳು
ಸೂರ್ಯನೇ ಅವಳ ಬದುಕಿನ ತಿರುಳು !
-ರವಿ ಮೂರ್ನಾಡು.

ಶುಕ್ರವಾರ, ಡಿಸೆಂಬರ್ 21, 2012

ಬೆಂಕಿ ಮತ್ತು ಮಂಜುಗಡ್ಡೆ

Photo:Google image

ವಿಶ್ವದ ಬೆಂಕಿ ಕೊನೆಗೊಳ್ಳುತ್ತದೆ
ಅವರೆಂದರು,
ಮಂಜುಗೆಡ್ಡೆಯಿಂದ ತಣಿಯುತ್ತದೆ ।

ನಾನು ಅಪೇಕ್ಷೆಗಳಿಗೆ ಇಷ್ಟಪಟ್ಟು,
ಬೆಂಕಿಗೆ ಒಲವಿದ್ದವರನ್ನು ತಬ್ಬಿಕೊಳ್ಳುತ್ತೇನೆ ।
 
ದ್ವೇಷ ನಿಲ್ಲುವುದಾದರೆ, 
ಎರಡು ಬಾರಿ ನಾಶವಾಗುತ್ತೇನೆ ।
 
ಮಂಜುಗೆಡ್ಡೆಗೆ ವಿನಾಶದ-    
ಅದ್ಭುತ ತಿಳಿಯಲು- 
ನಿತ್ಯ ಅತ್ತವರನ್ನು ಬಿಗಿದುಕೊಳ್ಳುತ್ತೇನೆ
ತಣಿಯಲು ಸಮಯ ಸಾಕಾಗುತ್ತದೆ. ।
 
-ರವಿ ಮೂರ್ನಾಡು

ಬುಧವಾರ, ಡಿಸೆಂಬರ್ 19, 2012

ಬುದ್ಧನ ಬೋಧಿವೃಕ್ಷದ ಕತೆ !ಅವಳು ಯಶೋಧರೆ
ನಾನು ಬುದ್ಧ
ಅರ್ಧ ರಾತ್ರಿಗೆ ಓಡಿಹೋದ ನಾನು
ಮತ್ತೆ ಬಂದಿದ್ದೇನೆ ಭಿಕ್ಷೆಗೆ

ಲೋಕದ ಆಸೆಗೆ ಬದ್ದ
ಮರಳಿ ಸಂಸಾರಿಯಾಗುತ್ತೇನೆ ಮನೆಗೆ

ತಪಸ್ಸಿಗೆ ಕುಳಿತ ಭೋದಿವೃಕ್ಷದ ಮೇಲೆ
ಕೊಂಬೆ ಕಡಿಯುತ್ತಿದ್ದ ಗಂಡಸರು-
ಹೇಳುತ್ತಿದ್ದರು |
ಇನ್ನೆರಡು ರೆಂಬೆ ಕಡಿದರೆ
ಅಲ್ಲೊಂದು ಕೊಳವೆ ಬಾವಿ ಎತ್ತಿ
ಇಲ್ಲೊಂದು ಮನೆ ಕಟ್ಟಿದರೆ
ಕಾರು -ಬಸ್ಸು ಸಲೀಸು ಡಾಂಬರು ರಸ್ತೆಗೆ |

ಮೊನ್ನೆ ...
ಸೌದೆಗೆ ಬಂದ ಹೆಂಗಸರು
ಎಲೆ-ಅಡಿಕೆ ಮೆಲ್ಲುತ್ತಾ ನುಡಿದರು |
ವ್ಯವಸ್ಥಾಪಕರ ಸಹಿ ಬಿದ್ದರೆ
ಬ್ಯಾಂಕು ಸಾಲ ಸೇರಿಸಿ
ಕೋಳಿ-ಕುರಿ -ಹಸು ಖರೀದಿಸಿ
ಇದೇ ಮರದ ಪಕ್ಕದಲ್ಲಿ
ಹಂದಿಗೆ ಗಂಜಿ ಹಾಕಬಹುದು  |

ಪ್ರೀತಿಸುತ್ತಿದ್ದ ಆ ಗ್ರಾಮದ ಯುವತಿ
ಯುವಕನ ಮಡಿಲಿಗೆ ತಲೆಯಿಟ್ಟು
ಪಿಸುಗುಟ್ಟುತ್ತಿದ್ದಳು |
ನನ್ನದು ಮೇಲ್ಜಾತಿ
ನಿನ್ನದು ಕೆಳಜಾತಿ
ಮನೆಯಲಿ ಒಪ್ಪದಿದ್ದರೆ
ಇದೇ ಮರದ ಆ  ಕೊಂಬೆಗೆ
ನೇಣು ಬಿಗಿದುಕೊಳ್ಳುವ ಎಂದಳು

ಅಬ್ಬಾ ! ಕಳೆದ ಆ ರಾತ್ರಿ
ಬೇಟೆಗೆ ಬಂದ ಗ್ರಾಮದವರು
ಪ್ರಾಣಿಯೊಂದರ ಚರ್ಮ ಸುಲಿದು
ಮರದ ಕೆಳಗಿದ್ದ ಕಾಡು ಕಲ್ಲಿಗೆ
ಕತ್ತಿ ಮಸೆಯುತ್ತಿದ್ದರು |
ಅಷ್ಟರಲ್ಲೇ ಹೆಣವೊಂದನ್ನು ಎತ್ತಿ
ಬುಡದಲ್ಲೇ ಮಣ್ಣು ಅಗೆದು
ನಾಲ್ವರು ಹೂತು ಹೋದರು |

ಹೆಣ್ಣೊಬ್ಬಳ ಕೈ-ಬಾಯಿ ಕಟ್ಟಿ
ಮರದ ಬುಡದ ಹಾಸಿಗೆ
ಬೆತ್ತಲೆ ನೋಡಿದ ಕೆಲವರು
ಹೆಣ ಬಿದ್ದ ಕುತ್ತಿಗೆಗೆ-
ಬಟ್ಟೆ ಬಿಗಿದು ಕೊಂಬೆಗೆ
ಹಣ್ಣಂತೆ ತೂಗಿದರು |
ಹೆಣದಂತೆ ನಡೆದರು |

ಅರೆರೆ ! ಆ ಕಪ್ಪು ಕನ್ನಡಕದವರು
ಗೂಟದ ಕಾರಿಂದ ಇಳಿದು
ಇದೇ ಮರದ ಕೆಳಗೆ ನಿಂತು
ದೊಡ್ಡ ಬಂಗಲೆ ನಕ್ಷೆ ಬಿಡಿಸಿದರು |
ನಗರದ ದೊಡ್ಡ ಲಾರಿಯೊಂದು
ಹಿಂಭಾಗ ಎತ್ತಿ ಕಸ ಸುರಿಯುವಾಗ
ಮೂಗು ಮುಚ್ಚಿ ಕಣ್ಣು ಬಿಟ್ಟು
ಬೆಳಕು ಹುಡುಕುತ್ತಾ ಕತ್ತಲೆಗೆ ಬಂದಿದ್ದೇನೆ |

ಭಿಕ್ಷೆಗೆ ಬಂದಿದ್ದೇನೆ ಯಶೋಧರೆ
ಮನೆಯೊಳಗೆ ಬರಬಹುದೇ ಪ್ರೀಯೆ ?!
-ರವಿ ಮೂರ್ನಾಡು

ಶನಿವಾರ, ಡಿಸೆಂಬರ್ 15, 2012

ನನ್ನ ಪ್ರೀತಿಯೆಂದರೆ ..!ನನ್ನ ಪ್ರೀತಿಗಳೆಲ್ಲವೂ ಒಂದು ಕೆಂಪು
ಕೆಂಪೆಂದರೆ, ಗುಲಾಬಿ ತಬ್ಬಿದ ಕಂಪು
ಕಂಪೆಂದರೆ, ಸವಿಗಾಳಿ ಇಂಪು-
ಸಿಹಿ ರಾಗಕೆ ಅದು ಕಟ್ಟಿದ ಹಾಡು !

ಸ್ವಚ್ಛ ನನ್ನ ಒಲವು, ಅದಕ್ಕಿಂತ ಸ್ವಚ್ಛ-
ನನ್ನ ಪ್ರೀತಿಗೆ ನಿನ್ನ ಆಳದ ಹರವು
ಒಲವೇ ಪ್ರೀತಿಸುವೆನು ಎಂದಿಗೂ-
ಕೊನೆಗೂ, ಸಾಗರಗಳೆಲ್ಲಾ ಬತ್ತುವವರೆಗೂ

ಸಾಗರಗಳೆಲ್ಲಾ ಬತ್ತಿದ ಮೇಲೆ ಪ್ರೀತಿಯೇ
ಸೂರ್ಯನೊಂದಿಗೆ ಕಲ್ಲು ಕರಗುವರೆಗೂ-
ಪ್ರೀತಿಸುತ್ತಲೇ ಇರುವೆನು ಒಲವೇ
ಮರಳ ಕಣ ಜೀವ ಪಡೆದು ಓಡುವವರೆಗೂ

ನನ್ನ ಪ್ರೀತಿಯೇ ಶುಲ್ಕವಿಲ್ಲದ ಬಾಡಿಗೆ-
ಉಳಿಸಿ ತೊರೆಯಲಾಗದ ಯಜಮಾನನೇ
ಮತ್ತೆ ಬರುವನು, ಪ್ರೀತಿಗೆ ಈ ಬಾಡಿಗೆದಾರ
ನೆನಪಿಗೂ ಬಾಡಿಗೆ ಬೇಡುವವರೆಗೂ
-ರವಿ ಮೂರ್ನಾಡು

ಭಾನುವಾರ, ಡಿಸೆಂಬರ್ 9, 2012

ದೇವರು ಪ್ರಳಯದ ಕವಿತೆ ಬರೆದರು !

ಚಿತ್ರಕೃಪೆ: ಅಂತರ್ಜಾಲ


ಹೊರಗೆ ಪ್ರಳಯವೆಂದು
ಅಳುತ್ತಿದ್ದರು ಜನರು;
ಕೊನೆಯಿರದ ನಿದ್ದೆಯ ಕಣ್ಣಿಗೆ 
ನನಗೊಂದು ಕನಸು ಬಿತ್ತು
ದೇವರು ಕವಿತೆ ಬರೆಯುತ್ತಿದ್ದರು |

ಹಸುಳೆ ಹಾಲ್ಕುಡಿವಾಗ
ಮಂದಿರ-ಮಸೀದಿ-ಚರ್ಚಿನಲಿ
ಪ್ರಾರ್ಥನೆ ನಡೆಯುತ್ತಿತ್ತು|
ಮಂದಿಯ ಅನ್ನದ ತಟ್ಟೆಗೆ
ಕೈ-ಕಣ್ಣುಗಳು ಓಡುತ್ತಿತ್ತು|

ಬೀದಿ ನಿದ್ದೆಯ ರಾತ್ರಿಗೆ 
ರಭಸದ ಬಾಂಬುಗಳ ಭಿತ್ತಿ
ಆರ್ತಸ್ವರಕೆ ಗುಂಡೊಡೆದವರು
ಹೆಣದ ಎದೆಯ ಮೇಲೆ ನಡೆದಾಗ
ಭೂಮಿ ಹೃದಯ ತಣ್ಣಗೆ ಕಂಪಿಸಿತ್ತು
ಆಗ ಪ್ರಳಯವಾಗಿತ್ತು !

ದೇವರು ಕವಿತೆ ಓದುತ್ತಿದ್ದರು ;

ಮನುಷ್ಯರೇ ರಣ ಹದ್ದಾಗಿ,
ಬೊಗಳುವ ನಾಯಿಗಳಾಗಿ
ಕಿರುಚಾಡುವ ಕಾಗೆಗಳಾಗಿ
ಹೊಲಸು ನೆಕ್ಕುವ ಹಂದಿಗಳಾಗಿದ್ದರು|
ಹುಲಿ-ಸಿಂಹ-ಚಿರತೆಗಳ ಹಲ್ಲು ಸಿಕ್ಕಿಸಿ
ನಾಡಿನಿಂದ ಮತ್ತೆ ಕಾಡಿಗೆ ಹೋದಾಗ
ಅಲ್ಲೆಲ್ಲಾ ಮರಳ ಕಣದ ಹೆಣಗಳು ತುಂಬಿ
ಬೆಟ್ಟದ ಎದೆಯಲಿ ಬೆಂಕಿ ಉಗುಳುತ್ತಿತ್ತು
ಆಗ ಪ್ರಳಯವಾಗಿತ್ತು |

ದೇವರು ಕವಿತೆ ಓದುತ್ತಿದ್ದರು;

ಅಂಕೆ ತಪ್ಪಿದ ಗಂಡಸರು
ನೀತಿ ತಪ್ಪಿದ ಹೆಂಗಸರು
ಮುಚ್ಚಳಿಕೆ ತೆರೆದು ದೇಹ ಮುಕ್ಕಳಿಸಿದಾಗ
ಕಸದ ತೊಟ್ಟಿಯಲಿ ಅವರದೇ ಮಗುವಿಗೆ
ಬಿಡುವಿಲ್ಲದೆ ನೊಣಗಳು ರಕ್ತ ನೆಕ್ಕುತ್ತಿತ್ತು |
ನೆಲ ಸಣ್ಣಗೆ ಬಿರುಕಿಟ್ಟಿತ್ತು
ಆಗ ಪ್ರಳಯವಾಗಿತ್ತು !

ಮನುಷ್ಯ ಮನುಷ್ಯನನ್ನೇ ಸಿಗಿದು
ಸಾವಿಲ್ಲದೆ ಜೀವಂತ ನರಳಿ
ತುಳಿದು ಎದ್ದವರ ಕೆಳಗೆ ರಕ್ತ ಹನಿಯುತ್ತಿತ್ತು|
ಅಲೆ ಅಲೆಯ ಆರ್ಭಟದ ಕಿಚ್ಚಿಗೆ 
ಸರೋವರ ಶವಸ್ನಾನಕೆ ನಿಂತು
ನೆಲ ಕುಸಿದು ಹೆಣಗಳಿಗೆ ಕಾದಿತ್ತು
ಆಗ ಪ್ರಳಯವಾಗಿತ್ತು !

ದೇವರು ಕವಿತೆ ಓದುತ್ತಿದ್ದರು;

ಆಸೆ ಆಗಸಕೆ ನೆಗೆದು 
ಕಾಡು ಕಡಿದು ಹಲ್ಲು ಕಚ್ಚಿ
ಭೂಮಿಗೆ ಬೆತ್ತಲೆ ಬಿಚ್ಚಿದಾಗ;
ಅತ್ಯಾಚಾರವೆಂದು ಅಳುತ್ತಿದ್ದ
ಮಹಿಳೆಯರು ಓಡುತ್ತಿದ್ದರು|
ಧೂಮಕಾಟದ ಭಾನಿನ ಎದೆಗೆ
ಅತ್ತು ಕರೆಯದ ಮೋಡದ ಕೊರಗು
ಆಗ ಪ್ರಳಯವಾಗಿತ್ತು |

ಹೊರಗೆ ಜನರು ಅಳುತ್ತಿದ್ದರು;
ಎಚ್ಚರವಾದಾಗ ನಾನು
ಕವಿತೆ ಓದುತ್ತಿದ್ದ ದೇವರು
ಗೋಡೆ ಚಿತ್ರದಲ್ಲಿ ಸುಮ್ಮನೆ ನಗುತ್ತಿದ್ದರು |

ಮಾಧ್ಯಮಗಳ ಪುಟ ತಿರುವಿದ್ದೇನೆ;

ಕಸದ ತೊಟ್ಟಿಯ ಮುಂದೆ
ನಾಯಿ-ಕಾಗೆ ಕೂಗಿಗೆ
ಮಗು ಸುಮ್ಮನೆ ಮಲಗಿತ್ತು;
ಅದರ ತಾಯಿಗೆ ಅತ್ಯಾಚಾರವಾಗಿತ್ತು;
ಹಾಜರಿ ಕೇಳಿದ ಆತ್ಮಹತ್ಯೆಗಳು
ಜಗದ ಗೈರಿಗೆ ಪ್ರಳಯವಾಗಿತ್ತು |

ಸುನಾಮಿ ಸರೋವರದಲಿ
ದಡ ಸೇರಲು ಈಜುತ್ತಿದ್ದ ಹೆಣಗಳು;
ರಾತೋರಾತ್ರಿ ಮಣ್ಣೊಳಗೆ ಹೂತ
ಆಗಸ ಕರೆವ ಕೈಗಳ ಚಿತ್ರಗಳು;
ಹಲವರು ಹಲವರನ್ನು ತಿಂದ
ಹಲವು ಚಿತ್ರ ಹತ್ಯೆ ಸುದ್ದಿಗಳು ;
ಆಗ ಪ್ರಳಯವಾಗಿತ್ತು |

ಹೊರಗೆ ಪ್ರಳಯವೆಂದ ಜನರು
ಅಳುತ್ತಲೇ ಇದ್ದರು |
-ರವಿ ಮೂರ್ನಾಡು