-ರವಿ ಮೂರ್ನಾಡು
ಒಂದು ಸುದ್ದಿ ಓದುತ್ತಿದ್ದೆ. ಅಬುಧಾಭಿಯಲ್ಲಿ ಅನಿವಾಸಿ ಸಿರಿಯಾ ದೇಶದ
ದಂಪತಿ ತಮ್ಮ ಹೆಣ್ಣು ಮಗುವಿಗೆ "ಎಮಿರೇಟ್" ಅಂತ ನಾಮಕರಣ ಮಾಡಿದ್ದಾರೆ . ಇವರಿಗೇನು
ಬೇರೆ ಹೆಸರೇ ಸಿಗಲಿಲ್ಲವೇ ಅಂತ ತಲೆ ಕೆರೆದುಕೊಳ್ಳುತ್ತೇವೆ. ಆಶ್ಚರ್ಯವೆಂದರೆ, ಈ ರೀತಿ ಹೆಸರಿಡಲು ಎಮಿರೇಟ್ ದೇಶದ ಮೇಲಿನ ಅತೀವ ಪ್ರೇಮವೇ ಕಾರಣವಂತೆ.
ಅದರ ಹಿಂದೆ ಪ್ರಚಾರದ ಹಂಗು ಇತ್ತು ಅನ್ನೋದು ಇನ್ನೊಂದು ಮಾತು. ಅಂತೂ ಈ ದಂಪತಿ ಮತ್ತು ಎಮಿರೇಟ್
ಎಂಬ ಮಗು ಈಗ ಹೆಚ್ಚು ಪ್ರಚಾರಕ್ಕೆ ಸಿಕ್ಕಿದೆ. ಅಂದ ಹಾಗೆ ಎಲ್ಲರಿಗೂ ರಾಷ್ಟ್ರದ ಮೇಲೆ ಪ್ರೇಮ
ಹೆಚ್ಚಾಗಿ ಇಡೀ ದೇಶದ ಹೆಸರು ಒಂದು ಮಗುವಿಗೆ ಇಡುವುದಾದರೆ ಇದಕ್ಕೊಂದು ಕಾನೂನು ಬರಬಹುದೇ
? ಏಕೆಂದರೆ, ರಾತ್ರಿ ಒಂದು ಕಾನೂನು, ಮರುದಿನ ಬೆಳಿಗ್ಗೆ ಇನ್ನೊಂದು ಕಾನೂನು ಎಮಿರೇಟ್ ರಾಷ್ಟ್ರದಲ್ಲಿದೆ. ದೇಶದ ಮೇಲಿನ
ಅಭಿಮಾನಕ್ಕೆ ಎಲ್ಲರೂ ತಾವು ವಾಸಿಸುತ್ತಿರುವ ನಗರ-ಪಟ್ಟಣ, ಗಲ್ಲಿಗಳು,
ಮತ್ತೆ ಇನ್ನೊಂದಷ್ಟು "ಎಮಿರೇಟ್" ಎಂಬ ಹೆಸರುಗಳು ಮಕ್ಕಳಿಗೆ
ಇಡುತ್ತಾ ಹೋದರೆ ದೇಶವನ್ನು ಮತ್ತು ಅಲ್ಲಿರುವ ಪ್ರಜೆಗಳನ್ನು ಮುಂದೆ ಗುರುತಿಸುವುದಾದರೂ ಹೇಗೆ
ಎಂಬ ಪ್ರಶ್ನೆ ಬಂತು.
ಭಾರತದಲ್ಲಿ ಇಂತಹದ್ದು ಕೇಳಿಲ್ಲ ಅನ್ನಿಸುತ್ತದೆ. ತಾಯಿಯನ್ನು
ಪೂಜಿಸುವ ಪ್ರತೀಕವಾಗಿ ಹೆಣ್ಣು ಮಕ್ಕಳಿಗೆ ಭಾರತಿ ಅಂತ ಹೆಸರು ಇದೆ. ಭಾರತ ಅಂತ ತಂದೆಯ
ಪ್ರತೀಮೆಗಳು ಬಂದಿಲ್ಲ. ಅದಕ್ಕಿಂತ ಹೆಚ್ಚಾಗಿ ಭಾರತದ ಶಾಸ್ತ್ರಬದ್ಧತೆ ನಾಮಕರಣಕ್ಕೆ ಹುಟ್ಟಿದ
ನಕ್ಷತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದನ್ನು ಮೀರಿ ಕೆಲವು ಚಲನಚಿತ್ರ ನಟ-ನಟಿಯರು ಮತ್ತು
ಕ್ರಿಕೇಟ್ ಆಟಗಾರರು ಅಭಿಮಾನಕ್ಕೆ ಹೆಸರುಗಳಾಗಿ ಗುರುತಿಸಿಕೊಂಡಿವೆ ಅಂದುಕೊಳ್ಳುತ್ತೇವೆ. ಅಂತೂ ಶಾಸ್ತ್ರಬದ್ಧ ನಕ್ಷತ್ರಗಳು ಭಾರತವನ್ನು
ಅಡ್ಡಾದಿಡ್ಡಿ ಅಭಿಮಾನಕ್ಕೆ ಅವಕಾಶ ಕೊಡಲಿಲ್ಲ. ನಾಮಾಂಕಿತ ಮನುಷ್ಯನ ಶ್ರೇಷ್ಠತೆಯಲ್ಲಿ ಒಂದು.
ಅದು ಅವನ ಹುಟ್ಟನ್ನು ಪ್ರತಿನಿಧಿಸುತ್ತವೆ ಮತ್ತು ಅವನ ಬದುಕನ್ನು. ಈ ಹೆಸರುಗಳ ಬಗ್ಗೆ ತುಂಬಾ
ಕಾಡಿದ ಪ್ರಶ್ನೆ ಎಂದರೆ ಈ ಹೆಸರೇ ಮನುಷ್ಯರಿಗೆ ಇಲ್ಲದಿದ್ದರೆ ಗತಿ ಏನು?
ಇವತ್ತಿನ ಜಾಯಮಾನದಲ್ಲಿ ಮನೆಯ ನಾಯಿಗೆ, ಬೆಕ್ಕಿಗೆ , ಹಸು-ದನಗಳಿಗೆ ಹೆಸರಿಟ್ಟು ಪುಣ್ಯ
ಕಟ್ಟಿಕೊಂಡಿದ್ದೇವೆ ನಾವು. ಹೆಸರಿಡಿದು ಕರೆದಾಗ ಅವುಗಳು ಮಾನ್ಯ ಮಾಡಿ ನಮ್ಮ ಬಳಿ ಬರುವುದಂತೂ
ಇದ್ದೇ ಇದೆ.ಒಂದು ಪಕ್ಷ ಮನೆಯಲ್ಲಿರುವ ಮಂದಿಗೂ ಈ ಪ್ರಾಣಿಗಳಿಗೂ ಒಂದೇ ಹೆಸರಿದ್ದರೆ, ಕರೆಯುವಾಗ ಎಚ್ಚರಿಕೆಯಿಂದ ಇರಬೇಕಾಗಬಹುದು. ಹೆಸರಿಡಿದು ಕರೆದಾಗ ನಾಯಿ ಎದುರಿನಲ್ಲಿ
ಬಾಲ ಅಲ್ಲಾಡಿಸುತ್ತಲೋ, ಬೆಕ್ಕು "ಮಿಯಾಂ" ಅಂದರೆ
ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಹೆಚ್ಚು ಪ್ರೀತಿ. ನಾಯಿ ತುಂಬಾ ನಿಯತ್ತಿನ ಪ್ರಾಣಿ,ಮನುಷ್ಯನ ಮನಸ್ಸಿಗೆ ಒಗ್ಗಿಕೊಂಡು ಹೋಗುವ ಪ್ರಾಣಿ. ಅದಕ್ಕೊಂದು ಮನುಷ್ಯನ ಹೆಸರಿಡಿದು
ಕರೆಯುವುದರಲ್ಲಿ ಅರ್ಥವಿದೆ ಅನ್ನಿಸುತ್ತದೆ. ಕೆಲವೊಮ್ಮೆ ನಾಯಿ-ನಾಯಿಗೆ, ಬೆಕ್ಕು ಬೆಕ್ಕಿಗೆ ಮದುವೆ ಮಾಡಿ ನಾಯಿ-ಬೆಕ್ಕು ಸಮಾರಂಭದ ಊಟ ಮಾಡಿದ ಮನುಷ್ಯರ ವಿಶ್ವ ದಾಖಲೆ ಇದೆ. ಈ ನಾಯಿ-ಬೆಕ್ಕುಗಳು
ಪತಿ- ಪತ್ನಿಯರಂತೆ ಬದುಕಿದರೆ ಒಳ್ಳೆಯದು. ಅದಲ್ಲದೆ ಅದರ ಬುದ್ದಿ ಅದು ತೋರಿಸಿದರೆ ಅದರ ಮದುವೆ
ಊಟ ಮಾಡಿದವರಿಗೆ ವಾಂತಿ ಬರುವುದಂತೂ ಸತ್ಯ.
ಸಾಮಾನ್ಯವಾಗಿ ಮಗು ಹುಟ್ಟಿದಾಕ್ಷಣ ಅದಕ್ಕೊಂದು ಹೆಸರಿಡಲು ಹರ ಸಾಹಸ
ಪಡುವವರಿದ್ದಾರೆ. ಅದಕ್ಕೆಂದೇ ಇದನ್ನೇ ವ್ಯಾಪಾರಕ್ಕೆ ತಿರುಗಿಸಿ ಮಗುವಿನ ಹೆಸರುಗಳನ್ನು
ಉಲ್ಲೇಖಿಸುವ ಪುಸ್ತಕಗಳೂ ಮಾರುಕಟ್ಟೆಯಲ್ಲಿ ಸಿಗುತ್ತವೆ. ದೇಗುಲ,ಮಸೀದಿ,ಚರ್ಚುಗಳ ಮುಖ್ಯಸ್ಥರಿಗಂತೂ ಈ ಕೆಲಸ
ಇದ್ದೇ ಇದೆ. ನಮ್ಮ ಭಾರತ ದೇಶದಲ್ಲಂತೂ ಇದಕ್ಕೆಂದೇ ಕಂದಾಚಾರ, ಶಾಸ್ತ್ರಗಳು,
ನಕ್ಷತ್ರಗಳು ಒಂದರ ಮೇಲೊಂದು ಬರುವುದುಂಟು. ಎಷ್ಟೋ ಮಂದಿ ಮಗು ಹುಟ್ಟುವುದಕ್ಕೆ
ಮೊದಲು ಹೆಸರು ಹುಡುಕುವ ಪರದಾಟವನ್ನು ಕಾಣಬಹುದು.
ಕೆಲವು ತಿಂಗಳ ಹಿಂದೆ ಹಾಗೇ ಆಯಿತು. ಕ್ಯಾಮರೂನಿನಲ್ಲಿ ಭಾರತೀಯನೋರ್ವ ನಮ್ಮ
ಕಂಪೆನಿಯಲ್ಲಿ ಇದ್ದಾರೆ. ಅವರ ಹೆಂಡತಿ ತುಂಬು ಏಳು ತಿಂಗಳ ಗರ್ಭೀಣಿ. ಇವನಿಗೆ ಹುಟ್ಟುವ ಮಗುವಿಗೆ
ಹೆಸರು ಹುಡುಕುವ ಕೆಲಸ ಕಳೆದ ಮೂರು ತಿಂಗಳಿಂದ ನಡೆಸಿದ್ದಾನೆ. ಕೆಲವರಂತೂ ನಕ್ಕಿದ್ದೇ
ನಕ್ಕಿದ್ದು. ಮಗು ಹೆಣ್ಣೋ ಗಂಡೋ ಅದು ಗೊತ್ತಿಲ್ಲ. ಇದ್ದ ಬದ್ದ ಅಂತರ್ಜಾಲ ಸೈಟುಗಳನ್ನು
ಹುಡುಕುವುದೇ ಕೆಲಸ. ಮಗುವಿನ ಹೆಸರುಗಳ ಪುಸ್ತಕಗಳನ್ನು ಕೂರಿಯರ್ ಮೂಲಕ ತರಿಸಿಕೊಂಡಿದ್ದ.
ಹೆಂಡತಿಗೆ ಮಗುವಿನ ಸುರಕ್ಷಿತ ಹೆರಿಗೆ ಕನಸು.ಈತನಿಗೆ ಹೆಸರು ಹುಡುಕುವ ಕೆಲಸ. ಅಂತೂ ಮಗು
ಹುಟ್ಟಿದೆ. ಎಲ್ಲವನ್ನೂ ಬಿಟ್ಟು ಕಡೆಗೆ ನಕ್ಷತ್ರದ ಆಧಾರದಲ್ಲಿ ಹೆಸರು ಇಟ್ಟಿದ್ದಾನೆ. ಮಗು
ನಕ್ಷತ್ರದ ಹಾಗೇ ಇದೆ.
ಮಗುವಿಗೊಂದು ಹೆಸರಿಡುವ ಸಮಾರಂಭವೂ ಬಹಳ ಸಂತೋಷವಾಗಿ ನಡೆಯುತ್ತವೆ.
ಅಂದ ಹಾಗೆ ಈ ಜಗತ್ತಿನಲ್ಲಿ ಹುಟ್ಟಿದಾಗ ಅದನ್ನು ಪ್ರತಿನಿಧಿಸುವ ಹೆಜ್ಜೆ ಗುರುತು ಈ ಹೆಸರು. ದೇಹ
ತ್ಯಾಗ ಮಾಡಿದವರನ್ನು ಈ ಹೆಸರುಗಳು ಇತಿಹಾಸದುದ್ದಕ್ಕೂ, ನೆನಪಿನುದ್ದಕ್ಕೂ
ಪ್ರತಿನಿಧಿಸುವ ತಾಕತ್ತನ್ನು ಹೊಂದಿರುವ ಈ ಹೆಸರು, ಅವರ ನಂತರವೂ ಅವರ
ಬದುಕನ್ನು ಈ ಜಗತ್ತಿನಲ್ಲಿ ಪ್ರತಿನಿಧಿಸುತ್ತವೆ. ಹೆಸರಿನ ಬಗ್ಗೆ ಬೇಕಾದಷ್ಟು
ಗೊಂದಲಗಳಾಗುವುದುಂಟು, ಅದರಂತೆ ಅಪಹಾಸ್ಯಕ್ಕೂ ದಾರಿಗಳಿವೆ. ಹೆಸರಿಗೆ
ತಕ್ಕ ಹಾಗೇ ಅವನ ಅಥವ ಅವಳ ಚಟುವಟಿಕೆ,ಸ್ವಭಾವಗಳು
ವಿರುದ್ಧವಾಗಿರುತ್ತವೆ. ತಂದೆ-ತಾಯಿ ಇಟ್ಟ ಹೆಸರು ಒಂದಾದರೆ ಇನ್ನೊಂದು ಹೆಸರು ಅವರ ಸ್ವಭಾವವನ್ನು
ಹಣೆಪಟ್ಟಿಯನ್ನಾಗಿಸುತ್ತದೆ.
ಫೇಸ್ಬುಕ್ಕು-ಟ್ವಿಟ್ಟರ್ ಅಂತರ್ಜಾಲಗಳಲ್ಲಿ ಇದು ಸಾಧ್ಯವಾದಷ್ಟು ತಲೆಕೆಳಗೆ ಮಾಡುವ
ಹೆಸರುಗಳನ್ನು ಕಾಣುತ್ತೇವೆ. ಕೆಲವು ಹೆಸರುಗಳಂತೂ "ನಾನು ನನ್ನಿಷ್ಟ" ,
"ನಿಮ್ಮಿಷ್ಟ ನನ್ನಿಷ್ಟ", "ನಾನು
ನಿಮ್ಮ ಸ್ವೇಹಿತ" ಇಂತಹ ಹೆಸರುಗಳು ಅವರಿಷ್ಟದ ವಿಕೃತ್ತ ಜಗತ್ತನ್ನು ಪ್ರತಿನಿಧಿಸುತ್ತವೆ.
ಇನ್ನೂ ಕೆಲವು ಗಂಡು ಹೆಣ್ಣಾಗಿ ಬರುವುದು, ಇನ್ನೂ ಕೆಲವು ಹೆಣ್ಣು
ಗಂಡಾಗಿ ಬರುವುದು. ಮುಖ-ಮುಖವೇ ಕಾಣದ ಅವರದ್ದೇ ಆದ ವಿಚಿತ್ರ ಜಗತ್ತಿನಲ್ಲಿ ಇಂತಹ ನಪುಂಸಕತ್ವಗಳು
ಬೆತ್ತಲೆ ಹೆಸರುಗಳಾಗಿ ಬಟ್ಟೆಯಿಲ್ಲದೆ ಸಂಚರಿಸುತ್ತಿರುತ್ತವೆ. ಇದು ಅಧುನಿಕ ಶಿಲಾಯುಗದ ಜನರ
ಇನ್ನೊಂದು ಮುಖ. ಕಡಿವಾಣವಿಲ್ಲದೆ ನಾಡಿನ ಸಂಸ್ಕೃತಿಯನ್ನು ವಿನಾಶದಂಚಿಗೆ ತಳ್ಳಿದ ಫ್ಯಾಶನ್ ಲೋಕದ
ಕೊಡುಗೆ. ಅದರಲ್ಲಿಯೂ ಟೀವಿ ಮಾಧ್ಯಮ, ಅರೆಬೆತ್ತಲೆ ಸಿನೇಮಾಗಳು ಯುವ
ಜನತೆಯನ್ನು ಕನಸು-ಬದುಕನ್ನು ಎತ್ತಲೋ ಕೊಂಡೊಯ್ಯುವುದರ ಅಶುಭ ಸೂಚನೆಗಳು. ಕೆಲವೊಮ್ಮೆ ಗಂಡು-ಹೆಣ್ಣು
ನಾಲ್ಕು ಗೋಡೆಯಲ್ಲಿ ಸುತ್ತಾಡುವ ಅರೆಬೆತ್ತಲೆಗಳು ಸಾರ್ವಜನಿಕವಾಗಿ ತೆರೆದು ನಡೆಯುತ್ತಿರುತ್ತವೆ.
ಅವರ ಹೆಸರು ಸುಂದರವಾಗಿರುತ್ತವೆ. ಆದರೆ ಬೀದಿಯಲ್ಲಿ ನಡೆಯುವುದೂ ಮಾತ್ರ ಇನ್ನೊಂದಾಗಿರುತ್ತವೆ.
ಅದೇ ರೀತಿ ಸಿನೇಮಾ ನಟಿಯರೂ. ಇತ್ತೀಚೆಗೆ ಸುದ್ದಿಯಾದ ಸ್ವಾಮಿ ನಿತ್ಯಾನಂದನ ಭಾವಚಿತ್ರ ನೋಡಿ,
ಸದಾ ನಗುತ್ತಿರುತ್ತದೆ. ಕೆಲಸ ಮಾತ್ರ ಹುಬ್ಬುಗಂಟಿಕ್ಕುವ ರೀತಿಯಲ್ಲಿದೆ. ಇದು
ಹೆಸರು ಮತ್ತು ವ್ಯಕ್ತಿಗಳ ನಡುವೆ ಇರುವ ವ್ಯವಹಾರಗಳು.
ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಕೆಲವೆಡೆ ತರಕಾರಿಗಳ
ಹೆಸರು, ಅಡುಗೆ ಸಾಮಾಗ್ರಿಗಳು ಮನುಷ್ಯರನ್ನು
ಪ್ರತಿನಿಧಿಸುತ್ತಿರುವುದನ್ನು ಕಾಣುತ್ತೇವೆ. ಬೆಳ್ಳುಳ್ಳಿ, ಈರುಳ್ಳಿ,ಬೆಂಡೆ,ಸಂಬಾರ, ಮೆಣಸಿನಕಾಯಿ,
ಬೆಲ್ಲ,ಸೌತೆ ಏಲಕ್ಕಿ ಇತ್ಯಾದಿ. ಇದು ಹೇಗೆ ಬಂತು ಅಂತ
ಇಟ್ಟವರನ್ನೇ ಕೇಳಬೇಕು. ಕಗ್ಗತ್ತಲೇ ಖಂಡ ಆಫ್ರೀಕಾದಲ್ಲಿ ಇದರ ಜಾಡು ಹುಡುಕಿದರೆ ನಗುವೇ
ಬರುವುದು. ನಮ್ಮ ಕಂಪೆನಿಯಲ್ಲಿ ಉದ್ಯೋಗಿಗಳಿಗೆ ಅಡುಗೆ ಮಾಡಿ ಕೊಡುವ ಕೆಲಸದವನಿದ್ದಾನೆ.
ಅವನ ಹೆಸರು " ಸಂಡೇ" ಅಂತ. ಇದರ
ಬಗ್ಗೆ ಕುತೂಹಲಕ್ಕಾಗಿ ಅವನಲ್ಲಿ ಪ್ರಶ್ನೆಗಳನ್ನು ಕೇಳಿದ್ದೆ. ನಂತರ ಬಂದದ್ದೇ ಬೇರೆ. ಅವನು
ಹುಟ್ಟಿದ್ದು ಭಾನುವಾರ ದಿನವಂತೆ. ಅವನ ತಮ್ಮ ಹುಟ್ಟಿದ್ದು ಶುಕ್ರವಾರವಂತೆ, ಅದಕ್ಕೆ"ಫ್ರ್ಯ್ ಡೆ" ಅವನ ಹೆಸರಂತೆ. ಕ್ಯಾಮರೂನಿನಲ್ಲಿ ಇಂತಹ ಬೇಕಾದಷ್ಟು
ವಾರದ ದಿನಗಳ ಹೆಸರುಳ್ಳ ಮಂದಿ ಸಿಕ್ಕಿದರು. ಅದೇ ರೀತಿ ವರ್ಷದ ಹನ್ನೇರಡು ತಿಂಗಳುಗಳ ಜನವರಿ,
ಫೆಬ್ರವರಿ, ಮಾರ್ಚ್ ಅಂತ ಹೆಸರುಳ್ಳವರು. ಅದರಲ್ಲೂ ಮೇ
ತಿಂಗಳು ತುಂಬಾ ಇವೆ. ಅಲ್ಲದೆ, ಅಂಗ್ಲ ಅಕ್ಷರಗಳ ಎಬಿಸಿಡಿ ಹೀಗೆ
ಪ್ರತಿನಿಧಿಸುವ ಹೆಸರುಗಳು, ಸಂಖ್ಯೆಗಳನ್ನು ಪ್ರತಿನಿಧಿಸುವ "ಒನ್,
ಟು, ತ್ರೀ... ಹೀಗೆ ಆಂಗ್ಲ ಅಕ್ಷರಗಳಲ್ಲಿ ಬರುವ ಸಂಭೋದನೆಗಳು ಇಲ್ಲಿ
ಚಾಲ್ತಿಯಲ್ಲಿವೆ. ಅದು ನೈಜೀರಿಯಾ, ಇಥಿಯೋಪಿಯಾ, ಉಗಾಂಡ, ಛಾಡ್, ಸೆಂಟ್ರಲ್ ಆಫ್ರೀಕಾ,
ಮೊಜಾಂಭಿಕ್, ಕಾಂಗೋ ಮುಂತಾದ ಆಫ್ರೀಕಾದ
ರಾಷ್ಟ್ರಗಳಲ್ಲಿ ಇವೆ. ಕೆಲವರು ಅವರವರ ರಾಷ್ಟ್ರದ
ಹೆಸರನ್ನು ಇಟ್ಟುಕೊಂಡಿದ್ದಾರೆ. ಕೆಲವರಿಗೆ " ಕಾಫಿ" ಸೇರಿದಂತೆ ಪ್ರಚಲಿತವಿರುವ
ಕೋಕಾ, ಕೋಲ, ಮುಂತಾದ ಪಾನೀಯಗಳ ಹೆಸರುಗಳೂ
ಇವೆ.
ಆದರೆ ಹೆಸರುಗಳು ಮತ್ತು ಹೆಸರಿನ ಮಹತ್ವಗಳು ವ್ಯಕ್ತಿಯಲ್ಲಿ ಕಾಣುವುದೇ
ಇಲ್ಲ. ಭಾರತದಲ್ಲಿ ಬೇಕಾದಷ್ಟು ಇಂತಹ ಹೆಸರುಗಳನ್ನು ಕಾಣುತ್ತೇವೆ. ನಮ್ಮ ಕೈಯಳತೆಯ
ಕರ್ನಾಟಕದಲ್ಲಿಯೂ ಇಲ್ಲ ಅಂತ ಹೇಳುವುದೇ ಇಲ್ಲ.ಸಿನೇಮಾ ಹುಚ್ಚುಗಳು ಮಗುವಿನ ಮೇಲೆ ಬರುವುದುಂಟು.
ಕ್ರಿಕೇಟ್ ಹುಚ್ಚುಗಳು ಅಭಿಮಾನದ ಪ್ರತೀಕವಾಗಿ ಬರುವುದುಂಟು. ಅದೆಲ್ಲಾ ನಮ್ಮ ಮಗುವೂ ಅವರಂತೆ
ಹೆಸರು ಪಡೆಯಲಿ ಅನ್ನುವ ಭಾವವೋ ಏನೋ. ಶ್ರಮವಿಲ್ಲದೆ ಸಮಾಜ ಗುರುತಿಸುವುದಾದರೂ ಹೇಗೆ?
ದೇವ-ದೇವತೆಗಳ ಹೆಸರಿಟ್ಟುಕೊಂಡವರು ದೇವರನ್ನೇ ನಂಬುವುದಿಲ್ಲ.
ಸೌಂದರ್ಯ,ಸಂಸ್ಕಾರ, ಅಚಾರವನ್ನು
ಪ್ರತಿನಿಧಿಸುವ ಹೆಸರುಟ್ಟುಕೊಂಡವರು ಅದರ ಗಂಧ ಗಾಳಿಯೇ ಸುಳಿಯದ ವ್ಯಕ್ತಿತ್ವಗಳೂ ಉಂಟು.
ಮಾನವೀಯತೆಯನ್ನು ಪ್ರತಿನಿಧಿಸುವ ವ್ಯಕ್ತಿಗಳ ಹೆಸರುಗಳು ಇವತ್ತು ಪೊಲೀಸ್ ಠಾಣೆ, ಕೋರ್ಟು ಕಚೇರಿಗಳಲ್ಲಿ, "ವಾಂಟೆಡ್" ಪಟ್ಟಿಯಲ್ಲಿ
ರಾರಾಜಿಸುತ್ತಿರುತ್ತವೆ. ದೇವರ ಹೆಸರಿಟ್ಟುಕೊಂಡವನ ಹೆಸರು ಅತ್ಯಾಚಾರದ ಸುದ್ದಿಯಲ್ಲಿರುತ್ತವೆ.
ಭೃಷ್ಟಾಚಾರದ, ಲಂಚ ಪ್ರಕರಣಗಳಲ್ಲಿ ಕಾಣುತ್ತಿರುತ್ತೇವೆ.
ತಂದೆ-ತಾಯಂದಿರಿಗೆ ಹೆಸರಿಡುವಾಗ ಇಂತಹದ್ದು ಸಂಭವಿಸುತ್ತದೆ ಅಂತ ಗೊತ್ತಿರುವುದೂ ಇಲ್ಲ. ಅಂತೂ
ಹೆಸರುಗಳು ಮತ್ತು ವ್ಯಕ್ತಿಯ ವ್ಯಕ್ತಿತ್ವಕ್ಕೆ ಅಜಗಜಾಂತರ ವ್ಯತಾಸವಿರುತ್ತವೆ. ರಾಷ್ಟ್ರ ಮತ್ತು
ರಾಜ್ಯಗಳ ಹೆಸರುಟ್ಟುಕೊಂಡವರಿಗೆ ಅಲ್ಲಿಯ ಚೌಕಟ್ಟಿನ ಕಾನೂನು ನಿಯಮಗಳೇ ಉತ್ತರ ನೀಡಬೇಕು.
ಸಂಸ್ಥೆಗಳು, ಸಂಗೀತ, ಕಲೆ,ಸಾಹಿತ್ಯಕ್ಕೆ, ಉತ್ಪಾದನ ವಸ್ತುಗಳಿಗೆ
"ಪೇಟೆಂಟ್" ಪಡೆದುಕೊಂಡಂತೆ ಪ್ರತಿಷ್ಠಿತ ವ್ಯಕ್ತಿಗಳು ತಮ್ಮ ಹೆಸರಿಗೆ, ರಾಷ್ಟ್ರಗಳು, ರಾಜ್ಯಗಳು ಪಡೆದುಕೊಂಡ ವಿಚಾರ ಇದುವರೆಗೆ
ಕೇಳಿಲ್ಲ. ಪಡೆದುಕೊಳ್ಳುವ ಕಾಲ ಬರಬಹುದೇನೋ?