ಶನಿವಾರ, ಆಗಸ್ಟ್ 20, 2011

ನವಿಲು ಗರಿ

ಬೀಸುತಿತ್ತು ಒಂದು ತಣ್ಣನೆ ಗಾಳಿ
ರಾತ್ರಿಯ ಮೈಸವರಿ ಜೋಕಾಲಿ
ಕಿಟಕಿ ಸಂದಿಗಿಣುಕಿದ ಸೂರ್ಯ
ಅಲ್ಲೇ ಕಣ್ಣಗಲಿಸಿ ನಕ್ಕಿತು
ಒಂದು ನವಿಲು ಗರಿ..!

ಶುಭ್ರ ನೆನಪೊಂದು ಜೀಕಿ
ಸೊಂಟಗುಂಟದ ಮುಡಿ ಚದುರಿ
ದೇವಿಯ ತಲೆಸವರಿ ಬಿದ್ದ ಗರಿ.!

ಮಲಗಿತ್ತು ಗಾಳಿ ಗಾಳಕ್ಕೆ ಬೆಚ್ಚಿ
ನೆಲದಲ್ಲೇ ಹುಸಿನಿದ್ದೆಗೆ ಜಾರಿ..!

ಆ ಕೃಷ್ಣವೇಣಿಗೆ ಅಷ್ಟಗಲದ ಕಣ್ಣು
ನೀಲಿ.. ಅದನ್ನಪ್ಪಿದ ಕಪ್ಪು
ಅದನೋಡುತ ಕುಳಿತ ಗಿಳಿ ಹಸಿರು
ಮತ್ತೊಮ್ಮೆ ಕಪ್ಪು,ಅದ ಬೇಧಿಸಿದ ನೀಲಿ
ಇವೆಲ್ಲವನ್ನೂ ಕಾಪಿಟ್ಟ ಬಿಳಿ
ಕಣ್ಣು ಪಿಳಿಪಿಳಿ... ಗಾಳಿಗದುರಿ
ರೆಪ್ಪೆಯೊಳಗೆ ಕಣ್ಣ ನಗಾರಿ.

ಹಾಗೆ ಬೆರಳ ಸ್ಪರ್ಶಕ್ಕದ್ದುತ್ತೇನೆ
ಕೈಯ ಮಂಚದಿ ಹುಸಿ ನಾಚಿಕೆ
ದೇವಿಯ ಪ್ರೀತಿ ಹನಿಗೆ
ಒರೆಸುತ್ತಿತ್ತು  ಮನಸ್ಸು ಮತ್ತೊಮ್ಮೆ ಹಾರಿ
ಮುಡಿ ತಂದ ಸುವಾಸನೆಗೆ ಅಮಲೇರಿ
ನನಪೀಗ  ನವಿಲುಗರಿ...!
----------------------------------
-ರವಿ ಮೂರ್ನಾಡು
ಚಿತ್ರ ಕೃಪೆ: www.shutterstod.com

ಭಾನುವಾರ, ಆಗಸ್ಟ್ 14, 2011

ಒಲವಿನ ಕಿಚ್ಚಿಗೆ...


ಬಾ ಒಲವೆ ಕನಸಿಗೆ-ಬದುಕಿನ ಕಿಚ್ಚಿಗೆ
ಎದೆ ಬಗೆದು ಬೆಳೆದಿದೆ ಜೀವರೇಖೆ
ಬಿಸಿಲು-ಮಳೆ-ಗಾಳಿಗೆ ಬಡಿದ ಬಣ್ಣದ ರೆಕ್ಕೆ
ಮುರಿಮುರಿದು ಬೀಳದೆ ಇಂದು-ನಾಳೆ
ಒಡೆದ ಬದುಕಿನ ಗೋಡೆ ಕಪ್ಪು ಹಲಗೆ

ಬಾಂದಳದ ಬದುಕಿಗೆ - ಬೆತ್ತಲೆ ಅಲೆಗಳಿಗೆ
ಬಾ ಎಂದು ಕರೆಯುವ ದಡದ ಚಿಂತೆ
ಮುಗಿಯದ ಮಾತಿಗೆ-ಮುರಿಯದ ಮೌನಕೆ
ಓಡುವ ದಿನಗಳ ಲೆಕ್ಕೆವೆಷ್ಟು?
ಹುತ್ತದ ಅಣಬೆಗೆ ಕೊಡೆಗಳೆಷ್ಟು?

ಬಾ ಒಲವೆ ಜೀವಕೆ-ನಗುವಿಗೆ-ಆಸೆಗೆ
ಭಾವವೇ ಜೀವದ ಚಿಗುರು ಬೇರು
ಜಗದಗಲ ರಾತ್ರಿಗೆ ಗೀರು ಬೆಳಕೇ ಖಾತ್ರಿ
ದೂಡುವ ದಿನಗಳಿಗೆ ಹುಟ್ಟು-ಸಾವು
ರಾತ್ರಿಯ ಸಾವಿಗೆ ಹಗಲು ಕಾವು

ರೆಪ್ಪೆಯ ಕಾವಲು-ಕಂಬನಿ ಕಂಗಳು
ಹಗಲಂತೆ ಕಾಪಿಟ್ಟ ಕಪ್ಪುರಾತ್ರಿ
ಬಿರುಕಿಟ್ಟ ಗೋಡೆಗೆ-ತೆರೆದಿಟ್ಟ ಬದುಕಿಗೆ
ಮಮತೆಯ ಸೆರೆಗಿನ ಕನಸು ಕುಚ್ಚು
ಬಿಕ್ಕುವ ದುಃಖ್ಖಕ್ಕೆ ಭಾವ ನೂರು.

ಬಿತ್ತಿದ ಬೀಜಕೆ- ಅಪ್ಪಿದ ಬದುಕಿಗೆ
ಚಿಗುರೊಡೆವ ಭಾವವೇ ಹೂವು-ಹಣ್ಣು
ನದಿ ಹರಿದು ತುಂಬಿದೆ ಕಡಲ ಒಡಲು
ಗಂಡಿಗೆ-ಹೆಣ್ಣಿಗೆ- ಮಮತೆಯ ಮಗುವಿಗೆ
ಬಡಿಯದಿರಲಿ ಸಿಡಿಲು ನೂರು ನೂರು

ಬಾ ಒಲವೇ ಕನಸಿಗೆ- ಎದೆ ತೆರೆದ ಪ್ರೀತಿಗೆ
ಪುಟ ಮಗುಚಿ ಕುಳಿತಿದೆ ಬೆಟ್ಟ ಬದುಕು
ಭಾವನೆಗೆ-ಕನಸಿಗೆ- ಆಸೆಗೆ -ಭ್ರಮೆಗೆ
ಮಳೆ ಕುಡಿದು ಮಲಗಿದೆ ಬಟ್ಟ ಬಯಲು
ದೂರ ಬದುಕಿನ ದಾರಿ ನೂರು ಕವಲು.
-ರವಿ ಮೂರ್ನಾಡು

ಮಂಗಳವಾರ, ಆಗಸ್ಟ್ 9, 2011

ಮಾತನಾಡುವ ದೇವರು..!


ಹಾಸಿಗೆಯಲ್ಲೇ ಅವನು ಮಗ್ಗಲು ಮಗುಚಿದ
ಬೆಳ್ಳಂಬೆಳಗ್ಗೆ..!
ಮಂದಿರದ ಸುಪ್ರಭಾತದ ಹಾಡಿಗೆ
ಮಸೀದಿಗೆ ಬಾ ಎಂದ
ಅಲ್ಲಾನ ಪ್ರಾರ್ಥನೆಗೆ..!
ಚರ್ಚಿನ ಗಂಟೆಯ ಸದ್ದಿಗೆ..!

ತಟ್ಟಿ ಎಚ್ಚರಿಸಿದ ಅಮ್ಮನ ಮಾತಿನೊಳಗೆ
ಕಣ್ಣುಜ್ಜಿ ಸೂರ್ಯನೊಂದಿಗೆ ಲೋಕವ ಅಳೆದ

ಪಟ್ಟಣದ ಬೀದಿಯಲಿ
ಮಂದಿರಕೆ ಕಾಲಿಟ್ಟವನು
ಶ್ಲೋಕಕ್ಕೆ ಮೈಮರೆತು ಭಕ್ತನಾದ
ಭಗವದ್ಗೀತೆ ಉಚ್ಚರಿಸಿ ವಿಭೂತಿಯಿಟ್ಟ..!
ಶಿಲಾ ದೇವರಿಗೆ ಕೈಮುಗಿದು
ಮಾತಾಡುವ ದೇವರ ಹುಡುಕಿ
ಬೀದಿಗೆ ನಿಂತ...!

ಆ ಬೀದಿ ರಸ್ತೆಯಲಿ
ಸಾಗರೋಪಾದಿಯ ಭಕ್ತರ ಮಸೀದಿ
ಎದೆಗೆ- ಎದೆ ಕೊಟ್ಟ ಸೋದರರ ಅಪ್ಪಿ
ಸಾಷ್ಠಾಂಗ ನಮಾಜು ಮುಗಿಸಿದ..!
ಕುರಾನ್‍ ಪಠಿಸಿ ರಸ್ತೆಗೆ ಬಂದು
ಆಗಸ ದಿಟ್ಟಿಸಿದ..!

ಬಾಚಿ ಕರೆಯಿತು ಗಂಟೆಯ ಸದ್ದು
ಫಾದರೊಡಗೂಡಿ ಕ್ರಿಸ್ತನ ಹಾಡು..!
"ಆಮೇನ್‍" ಎಂದುಸುರಿದಾಗ ಶಿಲುಬೆಗೆ ಮೇಣ ಬತ್ತಿ
ಬೈಬಲ್‍ನ ಪುಟ ಮಗುಚಿ ದೇವರ ಕರೆದ
ಚರ್ಚಿನ ಮೆಟ್ಟಿಲಿಳಿದು ಮನೆಗೆ ನಡೆದ..!

ಹಸಿಯುತ್ತಿದೆಯೇನೋ ಮಗನೇ..?!
ಜಗನ್ಮಾತೆಯ ಕಣ್ಣಿನಲ್ಲಿ ದೇವರ ಮುಖ
ಮಾತನಾಡುವ ಅಮ್ಮ ನಡೆದಾಡಿ ಹೇಳಿದಾಗ
ಮಂದಿರ-ಮಸೀದಿ-ಚರ್ಚು ಅವನ ಮನೆ
ಕೃಷ್ಣ-ಅಲ್ಲಾ-ಕ್ರಿಸ್ತ ಸುಮ್ಮನೆ...!
-----------------------------------------------------------------------
-ರವಿ ಮೂರ್ನಾಡು.