ಈ ಗುಲಾಬಿ ಇಲ್ಲೇಕೆ ಬಿದ್ದಿದೆ ?!
ಮುಡಿ ಸ್ಪರ್ಶದ ಸುವಾಸನೆಯಿದೆ
ಮೈಬಿಸಿ ಬಿಸಿಲಿಗೆ ಬಾಡಿದೆ !
ಅಂಗಳದಲಿ ನೋಡಿದ್ದೆ
ಮೊನ್ನೆ ನಾಲ್ಕು ದಳಗಳರಳಿ
ಎರಡು ಕಣ್ಣಗಲಿಸಿ ನಕ್ಕಿತ್ತು !
ದುಂಭಿ ಬಂತೆಂದು
ಉಸಿರ ಗಾಳಿಗೆ ಬಾಗಿ ನಾಚಿತ್ತು !
ಎಷ್ಟೊಂದು ಸಂಭ್ರಮಿಸಿತ್ತೋ
ಆ ಮುಂಗುರಳಲ್ಲಿ ಈ ಹೆಣ್ಣು !
ತಾಮುಂದು-ನಾಮುಂದು
ಸಾಲುಗಟ್ಟಿ ಸಾವಿರ ಕಣ್ಣು !
ಈಗ ರಸವಿಲ್ಲದ ಮಾವಿನ ಹಣ್ಣು !
ಇದೇನು ಮೆದುವಿದೆ !
ಕಾಂತಿ ಸರಿದ ನುಣುಪು ದೇಹದ ದಂಟು
ಮೇಲೆ ಹಸಿರು ಮೂರು ದಳ-
ಚರ್ಮಕ್ಕೆ ಗೀಚಿ ಉಗುರು
ಉಜ್ಜಿ ಕೂದಲು,ಸಾವಿರ ಸುಕ್ಕು
ಬಿಳುಚಿ ಸುಖದ ಶಾಖಕ್ಕೆ ಸುಲಿದು !
ಛೇ..! ಕವಚವೊಂದು ಕಳಚಿ
ಎಸಳು ನಡುಪಾದ ಬೆತ್ತಲೆ
ಚಿಟ್ಟೆಯೊಂದು ಅಲ್ಲೇ ನೋಡುತ್ತಿದೆ !
ಅದೆಷ್ಟು ನರಳಿತ್ತೋ..!
ವಿದಾಯ ಬಯಸದ ರಾತ್ರಿಗೆ
ನಿಶ್ಚಲ ತೆರೆದ ಕಣ್ಣ ಕೆಳಗೆ
ಹೆಪ್ಪುಗಟ್ಟಿದೆ ಕಂಬನಿ ಈ ಮುಂಜಾವಿಗೆ !
ಶವಸ್ನಾನ ಮುಗಿಸಿದ ಮಂಜಹನಿ
ತೊಟ್ಟಿಕ್ಕಿ ಎಸಳ ಮೇಲೆ ಕರಗುತ್ತಿದೆ
ಮತ್ತೊಮ್ಮೆ ಬಿಸಿಲಿಗೆ
!
ಸಾಲು ಇರುವೆಗಳು ಗೀಚಿ ದಾರಿ
ಶವದ ಮನೆ ಕಸದ ತೊಟ್ಟಿ !
ಎಸಳುಗಳು ಸಾವಿರ ಹೆಗಲಿಗೆ
ದಂಟೊಂದು ನೂರು ಕೈಗಳಿಗೆ
ಕೆಲವಕ್ಕೆ ರುಚಿಯಿಲ್ಲದ ಮಧುಪಾತ್ರೆ !
ಗೌಜು ಗದ್ದಲವಿಲ್ಲದ ಗುಲಾಬಿ ಶವಯಾತ್ರೆ !
ದುಃಖ್ಖಿ ದುಂಭಿಯೊಂದು ಹಾರಾಡುತ್ತಿದೆ
ಗುಂಯ್‍ಗಿಡುವ ಶೋಕದ ಹಾಡು
ತಾಳ ರೆಕ್ಕೆಯಲ್ಲಿದೆ
!
ಇಂದು ಮುಂಜಾನೆ ನೋಡಿದ್ದೆ
ಇನ್ನೊಂದು ಗುಲಾಬಿ ಮೊಗ್ಗರಳಿದೆ !
-ರವಿ ಮೂರ್ನಾಡು
ಮನ ಕಲಕುವಂತಿದೆ ಗುಲಾಬಿಯ ಅಂತಿಮ ಯಾತ್ರೆ.ಅದ್ಭುತ ಕವನ!
ಪ್ರತ್ಯುತ್ತರಅಳಿಸಿಮೊದಲ ಓದಿಗೆ ದಕ್ಕಿದ ಭಾವಾರ್ಥ, ಎರಡನೇ ಓದಿಗೆ ವಿಭಿನ್ನ ದಿಸೆಗೆ ನನ್ನ ಕೊಂಡು ಹೋಯ್ತು!
ಪ್ರತ್ಯುತ್ತರಅಳಿಸಿಅಂತ ಬುಡದಲ್ಲೇ ಮುಳ್ಳಿನ ರಕ್ಷೆ ಇರುವ ಗುಲಾಬಿಗೂ ಇಂತಹ ಪಾಡಾದರೇ! ರಕ್ಷೆ ಇರದ ಹೂಗಳೆನಿತೋ?
ರವಿಯಣ್ಣ ನಿಮ್ಮ ಕಾವ್ಯ ಪ್ರೌಢಿಮೆಗೆ ನನ್ನದೊಂದು ಸಲಾಂ.. ಮತ್ತೊಂದು ಸಮಾಜಮುಖಿ ಧಾರೆ, ಗುಲಾಬಿಯನ್ನು ಉಪಮೆಯಾಗಿಟ್ಟುಕೊಂಡು ಹೆಣ್ಣು ಮಗಳೊಬ್ಬಳ ಮೈ ಮನಸ್ಸುಗಳು ಕಾಮ ಪಿಶಾಚಿಗಳ ಕಬಂದ ಬಾಹುಗಳಿಗೆ ಸಿಕ್ಕಿ ನಲುಗುಹೋಗುವ ಮನಕಲಕುವ ಪ್ರತಿಮೆಯನ್ನು ಎತ್ತಿ ನಿಲ್ಲಿಸಿದ್ದೀರಿ.. ಸೂಕ್ಷ್ಮವಾದ ನಿರೂಪಣೆ ಮತ್ತು ಪದ ಪ್ರಯೋಗದಲ್ಲಿನ ಪಕ್ವತೆಗಳಲ್ಲಿ ನಿಮಗೆ ನೀವೇ ಸಾಟಿ.. ಒಂದು ಅಮಾನವೀಯ ಚಿತ್ರಣವನ್ನು ಕಣ್ಣ ಮುಂದೆ ತಂದಿದ್ದೀರಿ.. ಆ ಗುಲಾಬಿ ಬೆಳೆದು ನಿಂತು ತನ್ನ ಸೊಗಸಿನಿಂದ ದುಂಬಿಯನ್ನು ಆಕರ್ಷಿಸುವಲ್ಲಿನ ನಾಜೂಕಿನ ವರ್ಣನೆಗಳೊಂದಿಗೆ ತೆರೆದುಕೊಳ್ಳುವ ಕವಿತೆ ಕಡೆಯಲ್ಲಿ ಅದು ಆ ಕಾಮಾಂಧರ ಕಣ್ಣುಗಳನ್ನು ಕುಕ್ಕಿ ಅವುಗಳಿಗೆ ಆಹಾರವಾಗಿ ನರಳುವ ಪರಿ ಎಂತವರ ಕಣ್ಣಾಲಿಗಳಲ್ಲೂ ನೀರಾಡುವಂತೆ ಮಾಡುತ್ತದೆ.. ಮುಮ್ಮಲ ಮರುಗುವಂತೆ ಮಾಡುವ ತೀವ್ರವಾದ ಭಾವಸ್ರಾವದ ಕವಿತೆ.. ಮನಮುಟ್ಟುವಂತದ್ದು..
ಪ್ರತ್ಯುತ್ತರಅಳಿಸಿಗುಲಾಭಿ ಯಾತ್ರೆಯ ಪ್ರತಿ ಸಾಲುಗಳೂ ಮನದ ಲಹರಿಯನ್ನು ನೂರು ದಿಕ್ಕುಗಳತ್ತ ಕೊಂಡೊಯ್ದಿದೆ.ಹೃದಯ ವಿದ್ರಾವಕವಾದ ಮತ್ತು ಅಮಾನವೀಯತೆಯ ಸತ್ಯ ದರ್ಶನ ಮಾಡುವ ಕವಿತೆ ಯೋಚನಾ ಗತಿಯನ್ನೆ ಅಲ್ಲಾಡಿಸುವುದು.ಮನ ಕರಗಿಸುವ,ಮಮ್ಮಲ ಮರುಗುವ ರವಿ ಸರ್ ಅವರ ಚಿಂತನೆಯ ಮೂಸೆಯಲ್ಲರಳುವ ಇಂಥ ಹತ್ತಾರು ಕವಿತೆಗಳನ್ನು ಓದಿ ಭಾವುಕನಾಗುತ್ತೇನೆ.ಕವಿ ಮನಸಿನ ಚಿಂತನೆ ಅಗಾಧ ಮತ್ತು ವಿಶಾಲ ದೃಷ್ಠೀಕೋನವುಳ್ಳದ್ದು.ಸಮಾಜದ ಹತ್ತೂ ಸಮಸ್ತರ ನೋವು,ನಲಿವು,ಭವಣೆಗಳಿಗೆ ರವಿ ಸರ್ ಅವರು ದ್ವನಿಯಾಗಿದ್ದಾರೆ.ಉತ್ತರವಾಗುತ್ತಾರೆ.ಅವರು ರವಿಯಾಗಿ ತಂಪನ್ನೆರೆಯುವ ತಿಂಗಳಾದರೂ ಆಕಾಶದಗಲಕ್ಕೂ ಮೂಡುವ ಸೂರ್ಯ ರಶ್ಮಿ.ಜೀವಾತ್ಮಗಳಿಗೆ ಧಾತಾರ.
ಪ್ರತ್ಯುತ್ತರಅಳಿಸಿರವಿಯವರೇ ಕವಿತೆ ಹೃದಯ ಸ್ಪರ್ಷಿಯಾಗಿದೆ
ಪ್ರತ್ಯುತ್ತರಅಳಿಸಿಪ್ರತಿಮೆಯಂತೂ ಮನ ಮುಟ್ಟುವಂತಿದೆ
ಬರೆದ ಕವಿ ಗೆ ನನ್ನ ಮನಃ ಪೂರ್ವಕ ನಮನಗಳು
ಯಾರದೋ ಮೈಯ್ಯ ಶಾಖಕ್ಕೆ ಸುಲಿದು ನಿಂತ ಪಕಳೆಗಳು ಮುದುಡಿ ಪರಿಮಳ ಕಳೆದುಕೊಂಡಾಗಿನ ಕ್ಷಣ ಆಘ್ರಾಣಿಸುವ ದುಂಬಿಗಳೂ ಕೂಡ ಶವಯಾತ್ರೆಗೆ ರಾಗಹಾಡುವ ಪರಿ ಕಂಡು ವಿಸ್ಮಯಗೊಂಡೆ ರವಿಯಣ್ಣ. ಇದೇ ರೀತಿ ಅದೆಷ್ಟು ಮೃದು 'ಗುಲಾಬಿ'ಗಳು ರುಚಿಯಿಲ್ಲ ಮಧುಪಾತ್ರೆಗಳಾಗಿವೆಯೋ, ಲೆಕ್ಕಕ್ಕಿಲ್ಲ.
ಪ್ರತ್ಯುತ್ತರಅಳಿಸಿಮನಕರಗುವ ಚಿತ್ರಣ. ಚಿಂತಿಸುವಂತೆ ಮಾಡುತ್ತದೆ ಮನಸನ್ನು ನಿಮ್ಮ ಕವಿತೆ.
ನಿಮ್ಮ ಕಲ್ಪನೆಯಲ್ಲಿ ಅರುಳುವ ಕವನಗಳ ಸೊಗಸೇ ಸೊಗಸು...ಮತ್ತೆ ಮತ್ತೆ ಓದಿಸುತ್ತದೆ...ಕಾಡಿಸುತ್ತದೆ....ಚಿಂತಿಸುವಂತೆ ಮಾಡುತ್ತದೆ...
ಪ್ರತ್ಯುತ್ತರಅಳಿಸಿವೆರಿ ನೈಸ್
ರವಿ ಸರ್....
ಪ್ರತ್ಯುತ್ತರಅಳಿಸಿಸುಂದರ, ಅರ್ಥಪೂರ್ಣ...ಸೊಗಸಾದ ನಿರೂಪಣೆಯೊಂದಿಗೆ, ಹೃದಯಸ್ಪರ್ಶಿ, ಭಾವನಾತ್ಮಕ ಸಾಲುಗಳು....ತುಂಬಾನೇ ಇಷ್ಟ ಆಯಿತು ಸರ್...
ನನ್ನ ಬ್ಲಾಗ್ ಗೂ ಬನ್ನಿ....
http://ashokkodlady.blogspot.com/
ರವಿ ಸರ್,
ಪ್ರತ್ಯುತ್ತರಅಳಿಸಿಕವನ ಚೆನ್ನಾಗಿದೆ,ಇಷ್ಟವಾಯಿತು ..