ಭಾನುವಾರ, ಜನವರಿ 15, 2012

ಅದೊಂದು ಹುಟ್ಟುಹಬ್ಬ..!


ಅವಳ ಹುಟ್ಟುಹಬ್ಬದ ದಿನ
ಕೇಕ್‍ ಕತ್ತರಿಸಿದ ಚಾಕುವಿನಲಿ
ಮಚ್ಚು ಎತ್ತಿದ ಶತ್ರುವಿನ
ಕೈ ಬೆರಳ ಗುರುತು ಇತ್ತು..!
ಅಮ್ಮನ ಮೊಲೆ ಹಾಲಿನ ರುಚಿಗೆ ಬೆಳೆದ
ನನ್ನ ದೇಹದ ರಕ್ತದ ಕಲೆಯಿತ್ತು
ದುಃಖ್ಖದ ಸ್ಪರ್ಶವಿತ್ತು..!

ಸಂತೋಷ ಕೇಳಿದ ಆ ದಿನ
ಬೇಡವೆಂದರೂ ಕಣ್ಮುಚ್ಚಿತು ಹಗಲು
ಮಬ್ಬು ಮೆತ್ತಿಕೊಂಡಿತು ರಾತ್ರಿ..!

ಕೈಬೀಸಿ ಕರೆದ ಹೋಟೇಲಿನಲಿ
ಮುಖಕ್ಕೆ ಮುಖ-ಬಾಂಧವ್ಯದ ಸಂಭ್ರಮ
ಎದೆ ಭಾರವನ್ನೆತ್ತಿ ತಿಂದ ಐಸ್‍ಕ್ರೀಂ
ಎಲ್ಲಿಂದಲೋ ಬೀಸಿದ ಬಿಸಿಗಾಳಿಗೆ ನೀರಾಯಿತು
ತುಟಿ-ಕೈಬೆರಳ ಸಂಧುಗಳಲಿ ಕೊಸರಾಡಿ
ಹುಟ್ಟುಹಬ್ಬದ ಬಟ್ಟೆಗೆ
ನೆನಪು ಮೆತ್ತಿಕೊಂಡಿತು....!

ಅಕ್ಕಪಕ್ಕದಲ್ಲೆಲ್ಲಾ
ಮಿಣುಕು ಬೆಳಕಿನ ಕಣ್ಣುಗಳು
ಬೆಂಕಿ ಸುಡುವ ನೋಟಗಳು
ನಾಲಿಗೆ ಚಪ್ಪರಿಸುವ ಮಾತುಗಳು
ಪ್ರೀತಿ-ಪ್ರೇಮದ ಹಣತೆಗೆ
ಕಡ್ಡಿ ಗೀಚುವ ಬೆರಳುಗಳು
ತೂಕಡಿಸುವ ಮಂಪರು ಬೆಳಕಿನಲಿ
ಇರುಳನ್ನು ಭೋಗಿಸುವವರು
ಸಂಜೆಗತ್ತಲೆಯ ಹಾಸಿಗೆಯಲಿ
ಕಾಣದ ಕೈಗೆ ಮಾರಾಟವಾದರು. !

ಬದುಕು ಕೇಳಿದ ಹುಟ್ಟುಹಬ್ಬ
ಅಮ್ಮನ ಮಮತೆಗೆ ಬಣ್ಣ ಹಚ್ಚಿತು
ಈ ಕೇಕ್‍-ಐಸ್‍ಕ್ರೀಂ
ಅವನ ಮಚ್ಚಿನ ಮೇಲೆ ರಂಗೋಲಿ ಇಟ್ಟವು
ಹುಟ್ಟುಹಬ್ಬದ ಸುಖಕೆ
ಕವಿತೆ ಮೈ ಗೀಚಿತು..!
-ರವಿ ಮೂರ್ನಾಡು.


2 ಕಾಮೆಂಟ್‌ಗಳು:

  1. ಒಟ್ಟಿಗೆ ನೂರು ಭಾವನೆಗಳನ್ನು ಹುಟ್ಟು ಹಾಕಿದ ಕವನ.

    ಹುಟ್ಟಿದ ಹಬ್ಬದ ಸಾಂಕೇತಿಕವಾಗಿ ಇಲ್ಲಿ ಬಂದು ಹೋಗುವ ನೂರು ಭಾವನೆಗಳ ತಂತುಗಳು ಮೀಟಿ ಮೀಟಿ ಇಟ್ಟವು.

    ನನ್ನ ಬ್ಲಾಗಿಗೂ ಸ್ವಾಗತ...

    ಪ್ರತ್ಯುತ್ತರಅಳಿಸಿ
  2. ರವಿಯಣ್ಣ ನಿಮ್ಮ ಕಾವ್ಯ ಪ್ರೌಢಿಮೆಗೆ ಎಷ್ಟು ಸಲ ನಮಿಸಿದರು ಸಾಲದು.. ಕಾವ್ಯ ಸರಸ್ವತಿ ನಿಮ್ಮಲ್ಲಿ ಮನೆ ಮಾಡಿ ನಿಂತಿದ್ದಾಳೆ ಅಷ್ಟಲ್ಲದೆ ಇಂತಹದ್ದೊಂದು ಪ್ರಬುದ್ಧ ಕವಿತೆ ಅಸಾಧ್ಯವೇ ಸರಿ.. ಇದನ್ನು ಕೇವಲ ಒಂದು ಕವಿತೆ ಎಂದು ಮನಸ್ಸು ಒಪ್ಪಿಕೊಳ್ಳುತ್ತಲೇ ಇಲ್ಲ.. ಸಾವಿರಾರು ಭಾವಗಳು ಒಮ್ಮೆಲೆ ಮನಸ್ಸಿಗೆ ದಾಳಿಯಿಟ್ಟು ಮನಸ್ಸು ಯಾವ ಭಾವದಲ್ಲಿ ನೆಲೆಗೊಂಡಿದೆ ಎಂಬುದೇ ಅಯೋಮಯವಾಗಿದೆ.. ಹುಟ್ಟುಹಬ್ಬದಲ್ಲಿ ಅನೇಕ ಪ್ರತಿಮೆಗಳು ಕಾಣ ಸಿಗುತ್ತವೆ ಮನದಲ್ಲಿನ ಕ್ರೌರ್ಯ, ಮುಗ್ಧತೆ, ಹುಟ್ಟುಹಬ್ಬದ ಪಾಶ್ಚಾತ್ಯೀಕರಣ, ಯಾಂತ್ರಿಕತೆ, ಹುಟ್ಟುಹಬ್ಬದ ಕೃತಕತೆಯ ನೆಪದಲ್ಲಿ ಕಳೆಗಟ್ಟಿಸಿಕೊಳ್ಳುವ ಬೆತ್ತಲೆ ಜಗತ್ತು, ಅಬ್ಬಾ ಕವಿತೆ ಇಷ್ಟೆಲ್ಲಾ ಭಾವಗಳನ್ನು ಒಮ್ಮೆಲೆ ಮನಸ್ಸಿಗೆ ನುಗ್ಗಿಸಿ ಭಾವಗಳನ್ನು ಒಂದೊಂದಾಗಿ ಬಿಡಿಸುವ ಕೆಲಸ ಮಾಡುವ ಓದುಗ ಭಾವಗಳು ಮತ್ತೆ ಗೋಜಲಾದಂತೆ ಕಂಡು ವಿಧಿ ಇಲ್ಲದೆ ಕವಿತೆಯ ಆರಂಭದಿಂದ ಮತ್ತೊಮ್ಮೆ ಓದಲು ಪ್ರಾರಂಭಿಸುತ್ತಾನೆ.. ಸೂಕ್ಷ್ಮ ಭಾವಗಳ ಅಭಿವ್ಯಕ್ತಿ ಅದ್ಭುತವೆನಿಸುವಂತೆ ಮೂಡಿಬಂದಿದೆ.. ಒಂದು ಅದ್ಭುತ ಕವಿತೆಯನ್ನು ಓದಿದ ಆತ್ಮ ತೃಪ್ತಿ ಸಿಕ್ಕಿತು ಇಂದು..

    ಪ್ರತ್ಯುತ್ತರಅಳಿಸಿ