ಶನಿವಾರ, ಏಪ್ರಿಲ್ 16, 2011

ಹೆಚ್ಚೆಂದರೆ ನಾನು...


ಕೆದರಿದ ಕೂದಲು-ಕುರುಚಲು ಗಡ್ಡ
ಜಿಡ್ಡು-ಕೊಳೆ ಮೆತ್ತಿಕೊಂಡ
ಭಿಕ್ಷುಕನ ಬಗ್ಗೆ ಕವಿತೆ ಬರೆಯುತ್ತೇನೆಂದು
ಮುಖ ತಿರುಗಿಸಿಕೊಳ್ಳದಿರಿ ಹೃದಯಗಳೇ
ಕರುಣೆಯಿದ್ದರೆ ಕಣ್ಣೆತ್ತಿ ನೋಡಿ
ಚಿಲ್ಲರೆಯಿದ್ದರೆ ಪುಡಿಗಾಸು ಹಾಕಿ
ಹೆಚ್ಚೆಂದರೆ ನಾನೂ ಒಬ್ಬ ಭಿಕ್ಷುಕ !


ಒಂದು ಹೊತ್ತಿನ ಅನ್ನದ ಆಸೆಗೆ
ಗೂಡಿನಿಂದ ಹಾರಿಬಂದ ಹಕ್ಕಿಯತೆ
ನೀವು ಬಿಸಾಕಿದ ಎಂಜಲೆಲೆಗೆ ಮುತ್ತಿಕೊಂಡ
ಚಿಂದಿ ಆಯುವ ಹುಡುಗರ ಬಗ್ಗೆ
ಕವಿತೆ ಬರೆಯುತ್ತೇನೆಂದು
ಅಸಹ್ಯ ಪಡದಿರಿ ಹೃದಯಗಳೇ
ಎದೆತುಂಬಿ ಬಂದರೆ ಕಣ್ಣೀರು ಸುರಿಸಿ
ಅನ್ನವಿದ್ದರೆ ಕರೆದು ತಿನ್ನಿಸಿ
ಹೆಚ್ಚೆಂದರೆ...
ನಾನೂ ಒಬ್ಬ ಚಿಂದಿ ಆಯುವ ಹುಡುಗ..!

ಯಾರದೋ ತೃಪ್ತಿಯ ಸ್ಪರ್ಶಕೆ
ಬದುಕು ಸವೆಸಿದ ಹಾದರಕೆ ಹುಟ್ಟಿದ
ಮಮತೆ-ವಾತ್ಸಲ್ಯ ವಂಚಿತ
ಅನಾಥಾಶ್ರಮದ ಮಗುವಿನ ಬಗ್ಗೆ
ಕವಿತೆ ಬರೆಯುತ್ತೇನೆಂದು
ಮುಖ ಸಿಂಡರಿಸಿದರಿ ಹೃದಯಗಳೇ
ಮನಸ್ಸಿದ್ದರೆ ಪ್ರೀತಿ ನೀಡಿ
ನಿಮ್ಮಲ್ಲಿದ್ದರೆ ಮಮತೆ ಕೊಡಿ
ಹೆಚ್ಚೆಂದರೆ...
ನಾನೂ ಒಬ್ಬ ಅನಾಥಾಶ್ರಮದ ಬಾಲಕ ..!


ಹುಟ್ಟಿದ ತಪ್ಪಿಗೆ ಹೊಟ್ಟೆಯ ಚಿಂತೆ
ಅಸಹಾಯಕತೆಯೇ ಬಂಡವಾಳ
ಶ್ರೀಮಂತರ ಮುಂದೆ ಕೈಕಟ್ಟಿ ನಿಂತ
ಗುಲಾಮರ ಬಗ್ಗೆ ಕವಿತೆ ಬರೆಯುತ್ತೇನೆಂದು
ಹುಬ್ಬು ಗಂಟಿಕ್ಕದೀರಿ ಹೃದಯಗಳೇ
ಮಾನವರಾದರೆ ಮಾನವೀಯತೆ ಇರಲಿ
ಸಾಧ್ಯವಾದರೆ ಸಮಾನತೆ ಕೊಡಿ
ಹೆಚ್ಚೆಂದರೆ...
ನಾನೂ ಒಬ್ಬ ದೇವರ ಗುಲಾಮ..!

ಹದಿ ಹರೆಯದ ತುಡಿತಗಳ ಬಗ್ಗೆ
ಕಾಮ-ಪ್ರೇಮದ ಕನಸುಗಳ ಬಗ್ಗೆ
ಸ್ವಾರಸ್ಯಕರ ಕವಿತೆ ಕವಿತೆ ಬರೆಯುತ್ತೇನೆಂದು
ಬೆನ್ನ ತಟ್ಟದಿರಿ ಹೃದಯಗಳೇ
ಹಾದಿ ತಪ್ಪದಂತೆ ಬೆಳಕ ನೀಡಿ
ಬದುಕ ಸಾರ್ಥಕತೆಗೆ ಹಿತನುಡಿಯಾಡಿ
ಹೆಚ್ಚೆಂದರೆ ....
ನಾನೂ ನಿಮ್ಮವರಲ್ಲೊಬ್ಬ...!

-ರವಿ ಮೂರ್ನಾಡ್‍
 

2 ಕಾಮೆಂಟ್‌ಗಳು:

  1. ಈ ಸಮಾಜದಲ್ಲಿ ಸಾಕಷ್ಟು ಮಕ್ಕಳು ಭಿಕ್ಷಾಟನೆಗೆ ಇಳಿದಿದ್ದಾರೆ. ಕೆಲವರು ಪರಿಸ್ಥಿತಿಯ ಅನಿವಾರ್ಯತೆಗೆ ತಾವಾಗಿಯೇ ಭಿಕ್ಷಾಟನೆ ಮಾಡುತ್ತಿದ್ದರೆ ಇನ್ನು ಕೆಲವು ಮಕ್ಕಳನ್ನು ಹೆತ್ತವರೇ ಭಿಕ್ಷಾಟನೆಗೆ ದೂಡುತ್ತಿದ್ದಾರೆ. ದೇಶದಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ಬಂದರೂ ಜಡ್ಡುಗಟ್ಟಿದ ಅಧಿಕಾರಶಾಹಿ ವ್ಯವಸ್ಥೆಯು ಇಂಥ ಮಕ್ಕಳ ಬಾಳಿನಲ್ಲಿ ಜ್ಞಾನದ ಹಣತೆ ಹಚ್ಚಲು ಮನಸ್ಸು ಮಾಡದೆ ಇರುವುದು ಈ ದೇಶದ ದುರಂತ.

    ಪ್ರತ್ಯುತ್ತರಅಳಿಸಿ
  2. ಚಿಂದಿ ಆಯುವ ಹುಡುಗನ ಜೀವನ ಗಾಥೆಯನ್ನು ಭಾವಾತ್ಮಕವಾಗಿಯೂ ಚಿಂತನಾತ್ಮಕವಾಗಿಯೂ ಎಳೆ ಎಳೆಯಾಗಿ ಬಿಡಿಸಿ ಹೇಳುವ ಕವಿ ತನ್ನ ಮನಸ್ಸಿನಾಳದಲ್ಲಿ ಹುದುಗಿರುವ ದುಗುಡವನ್ನು ಹಗುರಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಆ ಹುಡುಗನ ವಾಸ್ತವ ಬದುಕಿನ ನೈಜ ಚಿತ್ರಣವನ್ನು ವಿಷಧೀಕರಿಸುವ ರೀತಿ ಅತ್ಯಂತ ಮನೋಜ್ಞವಾಗಿ ಮೂಡಿ ಬಂದಿದೆ.
    ಭಿಕ್ಷುಕನ ನೈಜ ಸ್ಥಿತಿಯನ್ನು ಅನಾವರಣ ಮಾಡುತ್ತಾ,ಕರುಣೆಯಿದ್ದರೆ ಕಣ್ಣೆತ್ತಿ ನೋಡಿ ಬಿಡಿಗಾಸು ಹಾಕಿ ನನಗೂ ಬದುಕನ್ನು ನೀಡಿರೆಂದು ಗೋಗರೆಯುವ ಮನೋಬಾವ ಕರುಣಾಜನಕವಾಗಿದೆ.ಒಪ್ಪೊತ್ತಿನ ತುತ್ತಿಗಾಗಿ ನೀವು ಬಿಸಾಕಿದ ಎಂಜಲೆಲೆಗೆ ಹಕ್ಕಿಯಂತೆ ಹಾರಿ ಮುತ್ತಿಕ್ಕಲು ಬಂದಿದ್ದೇನೆ ಎನ್ನುವಾಗಿನ ಚಟಪಡಿಕೆ ಹ್ರದಯ ವಿದ್ರಾವಕವಾಗಿದೆ.ತನ್ನ ಕೆದರಿದ ಕೂದಲು,ಜಿಡ್ಡುಗಟ್ಟಿದ ಕೊಳೆ,ಕುರುಚಲು ಗಡ್ಡವನ್ನು ನೋಡಿ ಅಸಹ್ಯಪಡದೇ ಹ್ರದಯ ತುಂಬಿದರೆ ನನ್ನಬಗ್ಗೆ ಕರುಣೆದೋರಿ ತುತ್ತು ಹಾಕಿರೆನ್ನುವಾಗಿನ ದ್ರಶ್ಯ ಮನಕಲಕುವುದು.
    ಯಾರ ಮನ ಸಂತೋಷಕ್ಕೆ,ಅಸಹಾಯಕತೆಯ ಹಾದರಕ್ಕೆ ನನ್ನ ಜನ್ಮವಾಗಿಯೋ ನಾ ಕಾಣೆ;ಅಕ್ಕರೆ-ಕಕ್ಕುಲತೆಗಳಿಂದ ವಂಚಿತನಾದರೂ ಅನಾಥಾಶ್ರಮದ ನೆರಳಿನಲ್ಲಿ ಬೆಳೆಯುತ್ತಿರುವ ಬಾಲಕ ನಾನು ಎಂದು ತನ್ನ ಬಗ್ಗೆ ಪರಿಚಯಿಸಿಕೊಳ್ಳವ ಅನಾಥ ಬಾಲಕ,ತನ್ನನ್ನು ನಿರ್ಲಕ್ಷ್ಯ ಮಾಡದೇ ಸಹಾನುಭೂತಿ,ಅನುಕಂಪ ತೋರಿ ಕಾಪಾಡಿರೆನ್ನುವ ಕೂಗು ಹ್ರದಯ ಚುಚ್ಚುವುದು.ಹುಟ್ಟಿದ ತಪ್ಪಿಗೆ, ಹೊಟ್ಟೆಯ ಪಾಡಿಗಾಗಿ ನನ್ನ ಅಸಹಾಯಕತನವನ್ನೇ ಬಂಡವಾಳ ಮಾಡಿಕೊಂಡು ನಿಮ್ಮ ಬಳಿಸಾರಿದ್ದೇನೆ.ಈ ನನ್ನ ದೈನ್ಯೇಸಿ ಸ್ಥಿತಿಗಾಗಿ ಕೋಪಿಷ್ಠರಾಗದೇ,ಮನ ಬಂದಂತೆ ನನ್ನ ದೂಷಿಸದೇ ಪ್ರೀತಿ ತೋರಿ ನನ್ನನ್ನೂ ಮನುಷ್ಯನನ್ನಾಗಿ ನೋಡಿರೆಂದು ನಿವೇದಿಸುವ ಬಾಲಕನ ಕೂಗು ಅರಣ್ಯರೋದನವೆನಿಸುವದು.
    ಶೋಷಣೆ,ಅನ್ಯಾಯ,ದೌರ್ಜನ್ಯ ಮತ್ತು ತುಳಿತಕ್ಕೊಳಗಾದ ನಾನು ಆಕಸ್ಮಿಕವಾಗಿ ನಿಮ್ಮ ನಡುವಿರುವೆ.ನಿಮ್ಮ ಮುಂದೆ ನಾನು ಕೇವಲ ಭಿಕ್ಷುಕ,ಚಿಂದಿ ಆಯುವ ಹಡುಗ,ಅನಾಥ,ದೇವರ ಗುಲಾಮ ಎಂದೆಲ್ಲಾ ತನ್ನ ಪರಿಚಯ ಮಾಡಿಕೊಳ್ಳವ ಈ ದೀನ ಬಾಲಕನ ತನ್ನ ಹುಟ್ಟಿಗೆ ಯಾವುದೇ ಹೆಚ್ಚುಗಾರಿಕೆ ಇಲ್ಲ.ಕರುಣೆ,ಹ್ರದಯ,ಮನಸ್ಸಿದ್ದರೆ ಈ ಬದುಕು ಸಾರ್ಥಕಗೊಳ್ಳಲು ಕೈ ಹಿಡಿದು ಮುನ್ನಡೆಸಿ,ನನ್ನನ್ನು ನಿಮ್ಮಲೊಬ್ಬನ್ನಾಗಿ ಸ್ವೀಕರಿಸಿ ಎಂದು ಹೇಳುವಾಗ ಎಂಥ ಕಠೋರ ಮನಸ್ಸಾದರೂ ಕರಗಿ ನೀರಾಗುವುದು ಎಂಬ ಆಶಯವನ್ನು ಕವಿ ಮೂರ್ನಾಡರು ಅರ್ಥಗರ್ಭಿತವಾಗಿ,ಹ್ರದಯ ವಿದ್ರಾವಕವಾಗಿ 'ಹೆಚ್ಚೆಂದರೆ ನಾನು ...'ಕವಿತೆಯಲ್ಲಿ ಬಿಂಬಿಸಿರುವರು."ನನ್ನ ಈ ಎಲ್ಲಾ ಅನಿಸಿಕೆಗಳು ಅವರ ಆಶಯಕ್ಕೆ ಖಂಡಿತಾ ನ್ಯಾಯ ಒದಗಿಸುವುದಿಲ್ಲ.ನೀವೆ ಓದಿ ಆಸ್ವಾದಿಸಿ ಪ್ರತಿಕ್ರಿಯೆ ನೀಡಬಹುದು.

    ಪ್ರತ್ಯುತ್ತರಅಳಿಸಿ