ಶುಕ್ರವಾರ, ಏಪ್ರಿಲ್ 15, 2011

ಏಸು ಮನೆಗೆ ಬರಲಿಲ್ಲ ..



-ರವಿ ಮೂರ್ನಾಡ್‍
ಪವಿತ್ರ ಚರ್ಚಿನಲ್ಲಿ ಅವಳು
ಕ್ಯಾಂಡಲ್‍ ಉರಿಸಿ
ಶಿಲುಬೆಗೆ ಪ್ರಾರ್ಥಿಸಿದ ದಿನ..!ಬ್ಯೆಬಲ್‍ನ ಧೂಳು ಕೊಡವಿ
ಫಾದರ‍್ ಹೇಳಿದ್ದು ನೆನಪು
ಸರ್ವೇಶ್ವರನು ನಿಮ್ಮ ಮನೆಯಲ್ಲಿದ್ದಾನೆ !-

ಧೂಳು ನುಂಗಿದ ಮುರುಕು ಮನೆ
ಗುಳಿ ಬಿದ್ದ ಮಣ್ಣಿನ ನೆಲ
ಅಲ್ಲಲ್ಲಿ ಬಿರುಕಿಟ್ಟ ಗೋಡೆಯ
ಬಿಳಿ ಕ್ಯಾನ್‍ವಾಸಿನಲಿ ಅವಳು
ಶಿಲುಬೆಗೆ ನೆಲೆ ನೀಡುತ್ತಾಳೆ..!-

ಸವೆದ ವರ್ಷಗಳ ನೆನಪಿಗೆ
ಗಂಡನ ಮಮತೆಯ ಉಡುಗೋರೆ
ಅಪ್ಪನ ಸ್ಮಶಾನದ ನಿದ್ರೆ
ಅಮ್ಮನ ಕರಗುವ ಎಲುಬಿನ ಮೇಲೆ
ಈಗ ಅವಳು ಗೋರಿ ಕಟ್ಟುತ್ತಾಳೆ ..!-

ಮಗನಿಗೆ ಯೌವ್ವನದ ಮಂಪರು
ಮಗಳಿಗೆ ಸೌಂದರ್ಯವೇ ಶತ್ರು
ಕಣ್ಣೀರ ಕತ್ತಲ ಪರದೆಯ ಸೀಳಿ
ಕಳೆದ ಪ್ರೇಮದ ಹೃದಯಕೆ
ಶಾಂತಿಯ ಈಟಿ ತೀವಿಯುತ್ತಾಳೆ..!-


ಅವಳು........! 
ಪರಿಶುದ್ಧ ಚರ್ಚಿನ ಅಂಗಳದಲ್ಲಿ-
ಕಾದು ಕುಳಿತ ವರ್ಷಗಳೆಷ್ಟು ಫಾದರ‍್...!?-

ಗೋಡೆಯ ಶಿಲುಬೆಯ ಮುಂದೆ-
ಆಳೆತ್ತರದ ಗಂಟೆ ಬಾರಿಸಿದರೂ-
ಏಸು ಅವಳ ಮನೆಗೆ ಬರಲಿಲ್ಲ ಫಾದರ‍್....!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ