ಮಾಜಿ ಪ್ರಧಾನಿ ಇಂದಿರಾಜಿಗೊ ಗೊತ್ತಿತ್ತು
ಮುಂಬ್ಯಯ ಕೆಂಪು ದೀಪದಲ್ಲಿ
ಗಂಡ ಹೆಂಡತಿಯನ್ನು ಮಾರಿದ್ದು !
ಇತಿಹಾಸದ ಕ್ಯಾನ್‍ವಾಸಿನಲ್ಲಿ ಗೀಚಿದ್ದು
ಪ್ರಸ್ತುತ ವರ್ತಮಾನದ ವರದಿ !
ನೆನಪಿರಬಹುದು ಗೋವಿನ ಹಾಡು
ಹಸಿದ ವ್ಯಾಘ್ರನ ಕ್ಯೆಗೆ
ಮಾಂಸ ಮಾರಲು ಹೋದವರು
ಬೇಡವೇಂದಾಗ ತ್ಯಜಿಸಿ ಬಿಟ್ಟ
ದಿಕ್ಕು ತಪ್ಪಿದ ಹೆಂಗಸರು !
ಬೇಕೆಂದಾಗ ಹಸಿದ ಹೊಟ್ಟೆಗೆ
ಮಾರಾಟದ ಸರಕುಗಳು !
ಕೆಂಪು ದೀಪದಲ್ಲಿ ಮಿನುಗುತ್ತಿರುವ
ನೆಲೆಯಿಲ್ಲದ ನಕ್ಷತ್ರಗಳು...!
ಕೇಳಿರಬಹುದು ಕಡಲ ತೀರದ ಕಥೆ...!
ಮಧ್ಯರಾತ್ರಿಯ ಮನುಷ್ಯರ ಸಂತೆಯಲಿ
ಪ್ರಿಯಕರನ ಪ್ರೇಯಸಿಯರು
ಅಕ್ಕರೆಯ ಸಹೋದರಿಯರು
ಕರೆದವರಿಗೆ ಮಂಚವಾಗಿದ್ದು !
ಮಕ್ಕಳಿಗಾಗಿ ತಾಯಿ
ಬಂದವರಿಗೆ ಮಲಗಿದ್ದು..!
ಮಹಡಿ ಮನೆಯ ಅಂಗಳದಲ್ಲಿ
ಬಂದವರೆಲ್ಲಾ ನಂಟರು..!
ತಂದೆಯ ಸ್ನೇಹಿತರು
ತಾಯಿ ಮುಡಿಸಿದ ಮಲ್ಲಿಗೆಯಲ್ಲಿ
ಕಂಪು ಸೊಸುವ ಕುಡಿಗಳು..!
ಬೇಟೆ-ಭೇಟಿ-ಬೀಳ್ಕೋಡುಗೆ
ಸಾಗಿದೆ ಜೀವನದ ವ್ಯಾಪಾರ !
ಕಣ್ಣೀರಿಗೆ ಕಣ್ಣಾಗದೆ
ಧ್ವನಿಗೆ ಧ್ವನಿಯಾಗದೆ
ಕಂಡ ಕನಸಿಗೆ ಬಣ್ಣವಿಲ್ಲದೆ ಕುಳಿತವರು !
ತಂಗಾಳಿ ಸುಳಿಯದ ತಂಪಿಲ್ಲದ ಬದುಕುಗಳು !
ಕಥೆ ಹೇಳುತ್ತಿವೆ ಗಲ್ಲಿಯ ಹಕ್ಕಿಗಳು
ಅಳಿಸಿದ ಸಿಂಧೊರ ತಿಲಕಗಳು
ಸಾಲು ಕತ್ತಲೆಯೊಳಗೆ ಬಿಕ್ಕಳಿಸಿದ ಕೋಣೆಗಳು !
ದಾರಿ ಕಾಣದೆ ಸರಿದು ನಿಂತಿವೆ
ಹಗಲು-ರಾತ್ರಿಗಳು,ವರ್ಷಗಳು-ಕಾಲಗಳು
ತೆಪ್ಪಗೆ ಮಲಗಿವೆ ಅನಾದಿ ರಸ್ತೆಗಳು...!
-ರವಿ ಮೂರ್ನಾಡ್
ಮಸಣದ ಹೂಗಳ ಕಣ್ಣೀರ ಗಾಥೆ! ಭಾವ ತೀವ್ರತೆಯ ಕಾವ್ಯ ಸೃಷ್ಟಿಯಲ್ಲಿ ಮೂಕ ವಿಸ್ಮಿತನಾಗಿ ಬರೀ ಓದುತ್ತಲೇ ಇದ್ದು ಬಿಟ್ಟೆ...
ಪ್ರತ್ಯುತ್ತರಅಳಿಸಿAll i can say is ಮತ್ತೆ ಮತ್ತೆ ಕಾಡುವ ಸಾಲುಗಳ ಕವನ... nice keep writing :)
ಪ್ರತ್ಯುತ್ತರಅಳಿಸಿಮನಮಿಡಿಯುವ ವಿಚಾರ.. ಸ್ವಲ್ಪ ಹೊತ್ತು ಸುಮ್ಮನೆ ವಿಷಯ ಚಿಂತನೆಯ ಬಗ್ಗೆ ಆಲೋಚನೆ ಮಾಡಿದರೆ ಸಾಕು ಹತ್ತು ಹಲವಾರು ಪ್ರಶ್ನೋತ್ತರಗಳು ಎದುರಿಗೆ ಬರುತ್ತವೆ.. ಗಂಭೀರ ವಿಚಾರ ಚಿಂತನೆಯಲ್ಲಿ ಮನಸ್ಸಿನ ಭಾವನೆಗೆ ಉತ್ತಮ ಮತ್ತು ಸತ್ಯವಾದ ಬೆಲೆ ಕಟ್ಟುವ, ಸಮಾಜದ ಹಿತ ಬಯಸುವ ಪರಿಸ್ಥಿತಿಯ ನಿರ್ಮಾಣ ಅಗತ್ಯವಾಗಿ ಆಗಬೇಕಿದೆ.. ಒಟ್ಟಾರೆ ಕವಿತೆಯ ವಿಷಯ ವಸ್ತುವಿನ ಸಾಲುಗಳು ಮತ್ತೊಂದು ದೃಷ್ಟಿಕೋನದಲ್ಲಿ ಆಲೋಚಿಸುವಂತೆ ಮಾಡುತ್ತದೆ.. ನಿಮ್ಮ ಚಿಂತನೆ ಇಷ್ಟ ಆಗಿದೆ ಸರ್.. :)
ಪ್ರತ್ಯುತ್ತರಅಳಿಸಿಏನಾದರೂ ಬರೆಯಬೇಕು ಎಂದುಕೊಳ್ಳುತ್ತಿದೆ, ಎಷ್ಟೇ ಯೋಚಿಸಿದರೂ ವಸ್ತುವೇ ಸಿಗುತ್ತಿರಲಿಲ್ಲ.. ಮನಸ್ಸು ಕೆಲವು ದಿನಗಳಿಂದ ತುಂಬಾ ಭಾವಗಳ ಹೊಳೆಯಲ್ಲಿ ತೋಯ್ದಿತ್ತು ಆದರೂ ಯಾವ ಭಾವಗಳೂ ಪದಗಳಾಗಲು ಒಲ್ಲೆ ಎಂದು ಸತ್ಯಾಗ್ರಹ ಹೂಡಿದ್ದವು ನಿಮ್ಮ ಈ ಕವಿತೆಯನ್ನು ಓದುತ್ತಿದ್ದಂತೆ ಲೇಖನಿ ಕೈಗೆತ್ತಿಕೊಂಡರೆ ಸಾಕು ಏನಾದರೊಂದಷ್ಟು ಗೀಚಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತಿದೆ ಅದು ನಿಮ್ಮಲ್ಲಿನ ಪ್ರೌಢ ಕವಿಯ ತಾಕತ್ತು ರವಿಯಣ್ಣ.. ಹಲವಾರು ಕವಿಗಳಿಗೆ ಸರಕೊದಿಗಿಸುವ ವಸ್ತುಗಳನ್ನು ಒಟ್ಟಿಗೆ ಗುಡ್ಡೆ ಹಾಕಿ ಬಿಗಿಯಾದ ಚೌಕಟ್ಟು ನೀಡಿದ ನಿಮಗೆ ನನ್ನ ನಮನಗಳು.. ಮನಸ್ಸನ್ನು ಹೊಕ್ಕಬಲ್ಲ ಶೀರ್ಷಿಕೆ ಮತ್ತು ಕವಿತೆಯನ್ನು ಅಷ್ಟೇ ಬಿಗಿಯಾಗಿ ಎತ್ತಿ ನಿಲ್ಲಿಸಿದ್ದೀರಿ.. ತಮ್ಮ ಕಷ್ಟಗಳನ್ನು ಭರಿಸಲು, ತಮ್ಮ ಹೊಟ್ಟೆ ಹೊರೆಯಲು ಹಲುಭುವ ಮಹಿಳೆಯರ ನರಕ ಸದೃಶ ಬದುಕನ್ನು ಕಣ್ಣಿಗೆ ಕಟ್ಟುವಂತೆ ಓದುಗರ ಮುಂದಿಟ್ಟಿದ್ದೀರಿ..
ಪ್ರತ್ಯುತ್ತರಅಳಿಸಿಕೇಳಿರಬಹುದು ಕಡಲ ತೀರದ ಕಥೆ...!
ಮಧ್ಯರಾತ್ರಿಯ ಮನುಷ್ಯರ ಸಂತೆಯಲಿ
ಪ್ರಿಯಕರನ ಪ್ರೇಯಸಿಯರು
ಅಕ್ಕರೆಯ ಸಹೋದರಿಯರು
ಕರೆದವರಿಗೆ ಮಂಚವಾಗಿದ್ದು !
ಮಕ್ಕಳಿಗಾಗಿ ತಾಯಿ
ಬಂದವರಿಗೆ ಮಲಗಿದ್ದು..!
ಈ ಸಾಲುಗಳು ತುಂಬಾ ಕಾಡಿಸುತ್ತಿವೆ.. ಮರೆತೆನೆಂದರೂ ಮರೆಯಲಾಗದ ಕವಿತೆ..