ಸೋಮವಾರ, ಏಪ್ರಿಲ್ 18, 2011

ಯಾರ ಮೇಲೆ ದ್ವೇಷ...


ಯಾರ ಮೇಲೆ ದ್ವೇಷ.
ಈ ಬಿರುಗಾಳಿಗೆ
ಮುಗಿಯದ ಕಣ್ಣೀರು ಉಕ್ಕುತ್ತಿದೆ
ದುಃಖಿತ ಹೃದಯ ನಡುಗುತ್ತಿದೆ
ಅಸರೆಯ ನೆಲ ಗುಡುಗುತ್ತಿದೆ

ಮನೆ-ಮನಗಳ ಸೂರು ಮುರಿದು
ನಲವನಪ್ಪಿ ಮಲಗಿವೆ
ನಡೆದಾಡುವ ನಲವೆಲ್ಲವೂ
ಸುಕ್ಕುಗಟ್ಟಿದಂತಿದೆ
ಅಷ್ಟ ದಿಕ್ಕು ಇರವ ತೊರೆದು
ದೂರ ಸರಿದು ಹೋಗಿವೆ

ಹಗಲಿನಲ್ಲಿ ಸತ್ತ ಬೆಳಕು
ಇರುಳ ತಬ್ಬಿಕೊಂಡಿದೆ
ಸೆರಗು ಸರಿದ ಜೀವನದಿಯು
ಬತ್ತಿ ಬೆತ್ತಲಾಗಿದೆ
ಎದೆ-ಎದೆಗಳು ನಗುವ ಮರೆತು
ಸೆಟೆದು ನಿಂತ ಹಾಗಿದೆ

ಹಸಿವು-ದಾಹ-ತಲ್ಲಣಗಳು
ಆಕಾಶಕೆ ಬೆಳೆದಿವೆ
ಹೃದಯ-ಹೃದಯ ಮುಸುಕನ್ನೊದ್ದು
ಮುಖ-ಮುಖಗಳ ಮರೆತಿವೆ
ಸಂಬಂಧದ ಕೊಂಡಿ ಕಳಚಿ
ಮಾತು ಮೌನವಾಗಿದೆ.
----------------
-ರವಿ ಮೂರ್ನಾಡ್‍
http://kannadahanigalu.com/viewentertainment.php?id=7259

3 ಕಾಮೆಂಟ್‌ಗಳು:

  1. ಬಹು ಮಾರ್ಮಿಕಗವಿತೆ.ವಿಚಾರ ಲಹರಿಯು ಭಾವಲಹರಿಯಾಗಿ ಚಿತ್ತಾಕರ್ಷಕವಾಗಿ ಬಿಂಬಿತಗೊಂಡಿದೆ.
    ಹಸಿವು-ದಾಹ-ತಲ್ಲಣಗಳು
    ಆಕಾಶಕೆ ಬೆಳೆದಿವೆ
    ಹೃದಯ-ಹೃದಯ ಮುಸುಕನ್ನೊದ್ದು
    ಮುಖ-ಮುಖಗಳ ಮರೆತಿವೆ
    ಸಂಬಂಧದ ಕೊಂಡಿ ಕಳಚಿ
    ಮಾತು ಮೌನವಾಗಿದೆ.
    ..........ಈ ನುಡಿ ಪುಷ್ಪಗಳಂತೂ ಮನವನ್ನು ಬಹುವಾಗಿ ಚಿಂತನೆಗೆ ಒಡ್ಡುವವು.ದ್ವೇಷಾಸೂಯೆಗಳೆಲ್ಲ ಅಳಿದು ಮಾನವತೆಯ ಚಿಲುಮೆ ಎಲ್ಲರ ಬಾಳಲ್ಲೂ ಚಿಮ್ಮಿ ಬರಲಿ ಎಂಬುದೆ ಕವಿಯ ಆಶಯವಾಗಿ ಹಿನ್ನೆಲೆಗೊಂಡಿದೆ.

    ಪ್ರತ್ಯುತ್ತರಅಳಿಸಿ
  2. ರವಿಯಣ್ಣ ಕವಿತೆಯ ಕಲ್ಪನೆಯಲ್ಲಿ ಆಳವಾಗಿ ಮುಳುಗಿ ಅಲ್ಲಿ ಅರ್ಥ ವಿವರಣೆ ಹುಡುಕಲು ಪ್ರಯತ್ನಿಸಿ , ಸಿಕ್ಕಿದನ್ನು ಮೇಲೆ ತಂದು ವಿಚಾರ ಮಾಡಿದಾಗ ಅದೆಷ್ಟೋ ಪ್ರಶ್ನೆಗಳ ಚಿಂತನೆ ಕಾಡುತ್ತದೆ.. ಒಬ್ಬರ ಮನಸ್ಸನ್ನು ಮತ್ತೊಬ್ಬರು ಹೇಗೆ ಅಳೆಯುತ್ತಾರೆ.. ಆ ಅಳತೆಯ ಪ್ರಮಾಣ ಏನು ಎನ್ನುವ ಆಲೋಚನೆಯಲ್ಲಿ.. ಒಂದು ವಿಚಿತ್ರ ಅನುಭವ ಹುಟ್ಟಿಸುವ ಭಾವ ಸೃಷ್ಟಿ.. ತುಂಬಾ ಉತ್ತಮ ಕವಿತೆ.. ಓದಲು ಮತ್ತು ತಿಳಿಯಲು + ಕಲಿಯಲು ವಿಶೇಷ ಅನುಭವ... :)
    (ಆದರೆ ನಿಮಗೆ ಸಮಯ ಸಿಕ್ಕಾಗ ಈ ಕವಿತೆಯ ಸಂಕ್ಷೀಪ್ತ ವಿವರಣೆಯನ್ನು ಎರಡು ಸಾಲಿನಲ್ಲಿ ಉದ್ದೇಶವನ್ನು ಬರೆದರೆ.. ಮನಸ್ಸಿಗೆ ಇನ್ನೂ ಹತ್ತಿರ ತಲುಪುತ್ತದೆ ಈ ಕವಿತೆ.. ಎಂಬ ಸಣ್ಣ ಕೋರಿಕೆ..) ಹಾಗು ಶುಭ ಕೋರುತ್ತ ವಂದನೆಗಳು.. :)

    ಪ್ರತ್ಯುತ್ತರಅಳಿಸಿ
  3. Bellala Gopinath Rao ಕಠೋರ ಸತ್ಯವನ್ನು ಸರಳ ಸುಂದರ ಶಬ್ದಗಳಲ್ಲಿ ಹಿಡಿದಿಟ್ಟು ಉಣ ಬಡಿಸಿದ್ದೀರಾ ರವಿಯವರೇ
    ಹೀಗೆ ಬರೆದರೂ ಆಂತರೀಕ ದುಮ್ಮಾನದ ವಿರುದ್ದ ಹೇಳಿದ ಹಾಗೆ ಆಗುತ್ತದೆ
    ಹೇಳದೇ ಇದ್ದರೆ ಕವಿಗೆ, ಕವಿತೆಗೆ ಅನ್ಯಾಯ

    ಪ್ರತ್ಯುತ್ತರಅಳಿಸಿ