ಸೋಮವಾರ, ಡಿಸೆಂಬರ್ 24, 2012

"ದಣಿಗಳೇ ನಾಳೆ ಮನೆಗೆ ಹೋಗಿ ಬರುತ್ತೇನೆ"


("ಸಂಗೀತ ಕಲಿಸಿ ಕೊಡಿ ಎಂದ ಬಾಲಕ’ ಮುಂದುವರೆದ ಭಾಗ-೪)
ಈ ಗಾಢ ನಿದ್ದೆಯಲಿ ತಾಳ ತಪ್ಪದ ಗಂಟೆಯ ಸ್ವರ.  ಅಡುಗೆ ಮಾಮ ಅದಾಗಲೇ ಈರುಳ್ಳಿ ಕೊಚ್ಚುತ್ತಿದ್ದಾರೆ. ಪಕ್ಕದಲ್ಲಿ ಮಲಗಿದ್ದ ರಂಗ ಅರ್ಧ ಕಣ್ಣು ತೆರೆದು ಮಗ್ಗಲು ಮಗುಚಿದ್ದನ್ನೇ ನೋಡುತ್ತಾ ಗೋಡೆ ಗಡಿಯಾರದ ಹಾಡಿಗೆ ಕತ್ತೆತ್ತಿದ. ಬೆಳಿಗ್ಗೆ ನಾಲ್ಕು ಗಂಟೆ. ಮತ್ತೆ ರೆಪ್ಪೆಗಳು ಭಾರಗೊಂಡವು.  ಹೊರಗೆ ನಾಯಿಗಳ ಹೆಜ್ಜೆ ಸಪ್ಪಳ. ರಾತ್ರಿ ಬಿಸಾಡಿದ್ದ ಅಳಸಿದ್ದ ಅನ್ನ-ಸಾರಿನ ರಾಶಿಗೆ ಬೊಗಳಿ ಬೊಗಳಿ ಬಾಯಿ ಹಾಕುತ್ತಿರಬಹುದು. ರಾತ್ರಿ ತಿಂದುಂಡ ಗಿರಾಕಿಗಳ ರಾಶಿ ಎಂಜಲು ಬಟ್ಟಲುಗಳ ಮೈಗೆ ಮೈಲಿಗೆ ಎದ್ದಿರಬಹುದು.  ಅನ್ನ-ಸಾರು-ಪಲ್ಯಗಳನ್ನು ಬೇಯಿಸಿ ಚೆಲ್ಲಿ ಮೈ ತೊಳೆಯದೆ ಮೂಲೆಗೆ ಕುಳಿತ ಅಡುಗೆ ಪಾತ್ರೆಗಳು. ನಾತ ಕೋಣೆಯ ಮೂಗಿಗೆ ನಾರುತ್ತಿದೆ. ರಾತ್ರಿ ನೆನೆ ಹಾಕಿದ್ದ ಅಕ್ಕಿ-ಬೇಳೆ ಉಬ್ಬಿ ಪಾತ್ರೆಯ ಬಾಯಿಗೆ ಕಣ್ಣು ಬಿಟ್ಟಿರಬಹುದು. ಪಾತ್ರೆ-ತಟ್ಟೆ ತೊಳೆದು ಇಷ್ಟಿಷ್ಟೇ ಹಾಕಿ ರುಬ್ಬಿ ಉದ್ದಿನ ವಡೆಗೆ ಒಲೆಯಲ್ಲಿ ಎಣ್ಣೆ ಕಾಯಿಸಬೇಕಿದೆ.
ಒಂದು ಅಚಾನಕ್ ಸಮಯದ ಕೂಗಿಗೆ ಎಚ್ಚರಗಳು ನಿದ್ದೆಗೆ ಒದ್ದವು ನಿಧಾನವಾಗಿ ಆಕಳಿಸಲಾಗದ ಬಾಯಿ ತೆರೆದು ಹೊರಗೆ ಬಚ್ಚಲು ಮನೆಗೆ ಬಂದ.

ನಾಯಿಗಳು ಅನ್ನಕ್ಕೆ ಅಡ್ಡಬಂದ ಮತ್ತೊಂದು ನಾಯಿಯಂತೆ ದುರುಗುಟ್ಟುತ್ತಿವೆ. ಅಲ್ಲೇ ಕಂಡು ಕಾಣಿಸಿದ ಬೆಳಕಿನ ಅನತಿ ದೂರದ ಕತ್ತಲೆಯಲಿ ಗೊತ್ತಿಲ್ಲದ ಕಂದು ಬಣ್ಣಕೆ ಮಿಶ್ರಣಗೊಂಡ ಮುಸುಕು ಆಕೃತಿಯೊಂದು ಮಿಸುಕಾಡಿತು. ದೈನಂದಿನ ಆ ಭಿಕ್ಷುಕಿ ಒಣಗಿದ ಚಪಾತಿ ತಿನ್ನುತ್ತಾ ಮಲಗಿದ್ದಾಳೆ. ನಾಯಿಗಳ ಬೊಗಳಾಟ ಒಂದಕ್ಕೊಂದು ತಿಕ್ಕುತ್ತಿದ್ದಂತೆ ಕಲ್ಲೆಸೆದು ಓಡಿಸ ತೊಡಗಿದ. ಚಪಾತಿ ತಿನ್ನುತ್ತಾ ಮಲಗಿದ್ದ ಮುದುಕಿ ಭಿಕ್ಷುಕಿ ಅಲ್ಲಿಂದ ಕ್ಷಣ ಮಾತ್ರದಲ್ಲಿ ಕಾಣೆಯಾದಳು. ಮತ್ತೆ ಅಲ್ಲೆಲ್ಲಾ ಕತ್ತಲು. ! ಒಂದೆರಡು ನಾಯಿಗಳು ಮುದುಕಿ ಹೋದ ದಾರಿಗೆ ಮೂಗಾಡಿಸುತ್ತಿವೆ.

ನಲ್ಲಿ ಬಾಯಿಗೆ ನೀರು ತೆರೆದು ತಟ್ಟೆಗಳ ರಾಶಿಯ ಕೆಳಗೆ ಕುಳಿತ. ಹೊರಗೆ ಕಣ್ಣುಗಳು ದೂರಕ್ಕೆ ಹಾಯ ತೊಡಗಿದಂತೇ ತಟ್ಟೆಗಳೇ ಅಡ್ಡಡ್ಡ ಬರುತ್ತಿವೆ. ಅಲ್ಲೆಲ್ಲಾ  ತಟ್ಟೆಗಳ ಸುತ್ತಾ ಎಂಜಲು ರುಚಿಗೆ ಹಾತೊರೆದು, ನೆಕ್ಕುತ್ತಾ , ಹಾರುತ್ತಾ ನೆಗೆದಾಡುವ ನೋಣಗಳು. ಕೈಯಾಡಿಸಿದಷ್ಟು ರಕ್ತಕ್ಕೆ ಹಸಿದು ಶೋಕ ಗೀತೆಗೆ ಅತ್ತು ಅತ್ತು ಕಣ್ಣುಬ್ಬಿಸಿಕೊಂಡ ಸೊಳ್ಳೆಗಳು. ನೀರು ತುಂಬಿದ ತೊಟ್ಟಿಗೆ ತಟ್ಟೆಗಳನ್ನು  ಒಂದೊಂದಾಗಿ ಮುಳುಗಿಸ ತೊಡಗಿದವು ಭಾರದ ಕೈಗಳು. ಬಗಬಗನೇ ಉರಿದ ಬೆಂಕಿಗೆ ಮಸಿ ಮುಕ್ಕಿಸಿಕೊಂಡ ಗಜಗಾತ್ರದ ಅಡುಗೆ ಪಾತ್ರೆಗಳ ಬುಡಕ್ಕೆ ಸೋಪು ಹಾಕಿ ಮತ್ತೆ ಮತ್ತೆ ತಿಕ್ಕ ತೊಡಗಿದ. ಕೈ ತೊಳೆದು ಅಲ್ಲೇ ಮುಖದ ತುಂಬಾ ಕಜ್ಜಿ ಉಬ್ಬಿಸಿಕೊಂಡ ಕನ್ನಡಿಗೆ ಮುಖ ನೋಡಿಕೊಂಡ. ಕೆನ್ನೆ-ಹಣೆ ತುಂಬಾ ಮಕ್ಕಳು ಹಚ್ಚಿಟ್ಟ ಚಿತ್ರದ ಕಪ್ಪುಗಳು.ಆಟಕ್ಕೆ ಸಿಕ್ಕಿ ಬಲವಂತ ತಿಕ್ಕಿದ ಮಕ್ಕಳ ಕೈ ಉಜ್ಜುಗಳು. ಪಾತ್ರೆಗಂಟಿದ್ದ ಎಣ್ಣೆ ಜಿಡ್ಡಿನ ಮಸಿ ತಿಕ್ಕಿ ತಿಕ್ಕಿ ಒರೆಸಿದಷ್ಟು ಮತ್ತಷ್ಟೂ ಕಪ್ಪಾಗಿ ಕಾಣದಾದ ಅಂಗೈ ಹಸ್ತರೇಖೆಗಳು. ಅಲ್ಲಲ್ಲಿ ಹೂಬಿಟ್ಟ ಅಂಗಿ-ಚಡ್ದಿಯಲ್ಲಿ ಒರೆಸಿ ತೊಳೆದರೂ ಹೋಗದೆ ಗಟ್ಟಿಯಾಗಿ ಕುಳಿತ ಎಣ್ಣೆ ಕಪ್ಪುಗಳಿಗೆ ಮುಖ-ಉಬ್ಬು-ಕೆನ್ನೆ- ಅಂಗಿ-ಚಡ್ಡಿಗೆ ಗೀಚಿದ ಚುಕ್ಕಿ ಚಿತ್ತಾರ ಗೀಚುಗಳು. ಕನ್ನಡಿ ಮತ್ತು ಹಣೆಯ ಮಧ್ಯೆ ಅಮ್ಮ ದೃಷ್ಟಿ ತೆಗೆದ ಅಡುಗೆ ಒಲೆಯ ಕಪ್ಪು ಬೊಟ್ಟಿನೊಳಗೆ ಅವಳೇ ನಗುತ್ತಿದ್ದಳು. ಆಗ ಕೇಳಿಸುತ್ತಿದೆ ಗಟ್ಟಿ ಎದೆಗೆ ಒದ್ದ  ಒಂದು ಸ್ವರ.
" ಅಕ್ಕಿ-ಬೇಳೆ ಬೇಗ ರುಬ್ಬಿ ಕೊಡೋ"

ವಿಶ್ರಾಂತ ಮೌನ ಸಂವಾದದ ದಾರಿಗೆ ಅಡುಗೆ ಮಾಮ ಅಡ್ಡ ಬಂದಿದ್ದಾರೆ.
ಹಲ್ಲುಡಿಗೆ ಹಲ್ಲುಜ್ಜುತ್ತಿದ್ದ ತೋರು ಬೆರಳಿನ ವೇಗ ತುಂಡರಿಸಿತು. ಅರ್ಧದಲ್ಲೇ ಮುಖ ತೊಳೆದು ರುಬ್ಬು ಕಲ್ಲಿನ ಮುಂದೆ ಕುಳಿತುಕೊಂಡಾಗ ಒಂದು ಹಾಡು. ಈ ವೇಶ ನೋಡಬೇಡ ಅಮ್ಮಯ್ಯ... ನೀ ಮೋಸ ಹೋಗದಿರು ದಮ್ಮಯ್ಯ...!

ಒರೆಸದೆ ಬಿಟ್ಟ ಮುಖ ತೊಳೆದ ನೀರು ತೊಟ್ಟಿಕ್ಕಿ ಬಿಳಿ ಕಾಗದದ ಮೇಲೆ ಬಲವಂತಕ್ಕೆ ಬಿದ್ದ ಒದ್ದೆ ಚಿತ್ರವಾಗುತ್ತಿದೆ ಅಂಗಿಯ ಮೇಲೆ .ಆ ಚುಮುಚುಮು ಬೆಳಿಗ್ಗೆ ಮೈ ಬಿಸಿಯನ್ನು ಎಬ್ಬಿಸಿದ ಚಳಿ ಚಳಿ. ಅಕ್ಕಿ ಹಿಟ್ಟು ಉದ್ದಿನ ವಡೆಗೆ ಸಿದ್ದವಾದಂತೆ  ಇಡ್ಲಿ- ದೋಸೆಗೆ  ಇನ್ನಷ್ಟು ಅಕ್ಕಿಯನ್ನು ಅದಾಗಲೇ ಎದ್ದ ರಂಗ ಪಕ್ಕದಲ್ಲಿಟ್ಟ.  ಇದೇನಿದು ! ನೀರು ಒಣಗಿದ ಜಾಗದಲ್ಲಿ ಮತ್ತೆ ನೀರು?. ಒಂದೊಂದಾಗಿ ಹನಿಗಟ್ಟ ತೊಡಗಿದವು ಹಣೆ- ಬೆನ್ನಿಗೆ ಬೆವರು .ಬಿರಬಿರನೇ ಸುರಿದ ಬೆವರ ಮಳೆಗೆ ತೊಟ್ಟ ಅಂಗಿ ಬೆನ್ನು-ಎದೆಗಂಟುತ್ತಿದೆ . ತಿಂಗಳ ಹಿಂದೆ ಜೇಬಿಗಿಟ್ಟಿದ್ದ ಮೂರ್ನಾಡಿನಿಂದ ಮಡಿಕೇರಿಗೆ ಬಂದ ಬಸ್ ಟಿಕೇಟು ನೆನಪು. ನಿಧಾನವಾಗಿ ಕಣ್ಣು ಜೇಬಿಗಿಳಿಯಿತು. ಬೆರಳಿಳಿಸಿ ನೆನೆದ ಟಿಕೇಟು ಹೊರ ತೆಗೆದು ನೋಡಿದ. ಬಸ್ಸಿಗೆ ಕುಳಿತಾಗ ಕಂಡೆಕ್ಟರ್ ನೀಲಿ ಪೆನ್ನಿಗೆ ಬರೆದ ಐದು ರೂಪಾಯಿ ಅಕ್ಷರದ ಇಂಕು. ತುಂಬಾ ನೀಲಿಯೇ ಹರಿದಾಡಿದೆ. ಗೀಚಿದ ಪೆನ್ನಿನ ಐದು ರೂಪಾಯಿ ಚಿತ್ರ ಗಲ್ಲಿ ಗಲ್ಲಿಗಳಲ್ಲಿ ರಂಗೇರಿ ಓಡುತ್ತಿದೆ. ನೀಲಿ ಇಂಕು ಮೂರ್ನಾಡಿನ ಬೀದಿ ತುಂಬಾ ನದಿಯೇ ಹರಿಯುತ್ತಿದೆ. ಅಲ್ಲಲ್ಲಿ ಕಾಮನ ಬಿಲ್ಲಿನ ಏಳು ಬಣ್ಣಗಳು ,ಒಂದಷ್ಟು ಕೆಂಪು, ಬಿಳಿ, ಅಲ್ಲೇ ಮಾವಿನ ಮರದಲ್ಲಿ ಚಿಲಿಪಿಲಿ ಗುಟ್ಟಿ ಚಿಗುರು ತಿನ್ನುತ್ತಿದ್ದ ಗಿಳಿ ಹಸಿರು. ಒಂದಿಷ್ಟು ನೀಲಿ, ಮೇಲೆ ಕುಳಿತ ನೇರೆಳೆ ಮರದ ಹಣ್ಣು, ಗದ್ದೆ ಬಯಲಿಗೆ ತೆನೆ ಬಲಿತು ತಲೆದೂಗಿದ ಹಳದಿ, ದೀಪಾವಳಿ ಪಟಾಕಿ ಸುರುಸುರು ಬತ್ತಿ, ಆಗಸಕ್ಕೆ ಮುತ್ತಿಟ್ಟ ರಾಕೇಟು ಜಗ್ಗನೇ ನೆನಪ ಬಳ್ಳಿಯ ಜಗ್ಗಿಸಿ ನಿಟ್ಟುಸಿರು ಎಚ್ಚರವೆಬ್ಭಿಸಿತು. ಅದಾಗ ತಾನೇ ರುಬ್ಬಿಕೊಟ್ಟ ಅಕ್ಕಿಯಲಿ ಬೆಂದ ಇಡ್ಲಿ  ಅಡುಗೆ ಮಾಮನ ಕೈಯಲ್ಲಿ ಬಗಬಗನೇ ಉರಿವ ಬೆಂಕಿಗೆ ಸುವಾಸನೆ ಬೀರುತ್ತಿದೆ...
" ಹೊರಗೇ ಹೋಗಿ ಟೇಬಲ್ ಕ್ಲೀನ್ ಮಾಡೋ"

ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಬಕೇಟು, ಒರೆಸುವ ಬಟ್ಟೆ ಎತ್ತಿದ. ಎಷ್ಟು ದಿನಗಳಿಂದ ಈ ಬಟ್ಟೆ ತೊಳೆಯಲಿಲ್ಲ?
ಮೇಜಿನ ಮೇಲೆ ಬಿದ್ದ ಗಿರಾಕಿಗಳ ಅನ್ನ-ಸಾರು-ನೀರು-ಟೀ-ಕಾಫಿ-ನೆಗಡಿ ನೆಕ್ಕಿದ ಈ ಬಟ್ಟೆ, ಮತ್ತೊಮ್ಮೆ ಮೈಲಿಗೆ ಮಾಡುತ್ತಿದೆ ಗಿರಾಕಿಗಳ ಮೇಜು. ಮೆಲ್ಲೆಗೆ ಬಂದು ಊಟ ಮಾಡುತ್ತಿದ್ದವರ ಬದಿಯ ಗೋಡೆಗೆ ಒರಗಿ ನಿಂತ. ಕೆಲವರು ಕೆಕ್ಕರುಗಣ್ಣಿನಲಿ ನೋಡಿದರು. ಎದೆಗೆ ಎರಡು ಗುಂಡಿ ಬಿಟ್ಟ ಅಂಗಿ ನೋಡಿಕೊಂಡ.  ಮತ್ತೆ ಮತ್ತೆ ಓಡಿಸಿದಷ್ಟು ಹೆಣೆಗೆ ಮುತ್ತಿಕ್ಕುವ ನೋಣ ಓಡಿಸಿ ಅಂಗಿ ಎತ್ತಿ ಮೂಗಿಗೆ ಮೂಸಿಕೊಂಡ.
"ಹೇ ನೀರು ಕೋಡೋ"

ಅವರು ಖಾಲಿ ಬಿದ್ದ ಲೋಟ ಬಡಿದು ನೀರಿಗೆ ಕರೆದರು. ಕೆಲವರು ಉದ್ದ ಮೀಸೆ ಬಿಟ್ಟ ಅಪ್ಪಂದಿರು. ಪಕ್ಕದಲ್ಲೇ ಬಾಯಿಗೆ ಅನ್ನ ತುಂಬಿಸಿ ಮಕ್ಕಳನ್ನು ಪುಸಲಾಯಿಸುತ್ತಿದ್ದ ಅಮ್ಮಂದಿರು. ಮೊಮ್ಮಕ್ಕಳನ್ನೇ ನೋಡುತ್ತಿದ್ದ ಅಜ್ಜಿಯಂದಿರ ಪೇಲವ ತಾಯ್ತನದ ಕಣ್ಣುಗಳು ,ಅವರ ಮಡಿಲ ಮೇಲೆ ಅನ್ನಕ್ಕಾಗಿ ಜಗಳವಾಡುತ್ತಿದ್ದ ಮಕ್ಕಳು, ಇವರನ್ನೆಲ್ಲಾ ನೋಡುತ್ತಿದ್ದ ಬಿಳಿ ಮೀಸೆ ಅಜ್ಜಂದಿರು. ಸುತ್ತಲೂ ಹಕ್ಕಿ ಚಿಲಿಪಿಲಿ ಹಾಡುಗಳು. ಎಂಜಲು ತಟ್ಟೆಗಳನ್ನು ಬಿಟ್ಟೇಳುವ ಗಿರಾಕಿಗಳನ್ನೇ ಕಾಯುತ್ತಿದ್ದವು ಅವನೆರಡು ಕಣ್ಣುಗಳು.

"ಹೇ ಹುಡುಗ ಇಲ್ಲಿ ಬಾ’
ದಣಿಗಳ ಕ್ಯಾಷಿಯರ್ ಮೇಜಿನ ಮುಂದೆ ನಿಂತ. ಝಗಮಗಿಸುವ ಸೂರ್ಯನ ಬೆಳಕು ರಸ್ತೆ ಬದಿಯ ಜನರ ನೂಕುನುಗ್ಗಲಿನ ಮಧ್ಯೆ ನುಸುಳುತ್ತಿರುವುದು ಕಣ್ಣಿಗೆ ರಾಚಿತು. ಕಾಗೆಗಳಂತೆ ದಾರಿ ಹೋಕರನ್ನು ಕರೆಯುವ ವ್ಯಾಪಾರಿಗಳು, ತರತರದ ಹಣ್ಣುಗಳು, ಪ್ಲಾಸ್ಟಿಕ್ ಆಟದ ಸಾಮಾನು ಬಸ್ಸು, ಕಾರು, ಕುದುರೆ,ಲಾರಿಗಳು. ತರತರದ ಬಟ್ಟೆ ತೊಟ್ಟು ಅಪ್ಪ-ಅಮ್ಮಂದಿರ ಕೈಕೈ ಹಿಡಿದು ಸಾಗುವ ಮಕ್ಕಳು. ಅವರ ಹಿಂದೆ-ಮುಂದೆ ಸರಿದಾಡುವ ಅಕ್ಕಂದಿರು, ಅವರ ಮುಂದೆ ಅವನ ಹಾಗೇ ಇರುವ ಅಣ್ಣಂದಿರು. ಅಲ್ಲಿ ಒಬ್ಬಂಟಿಯಾಗಿ ಎಲ್ಲರಿಗಾಗಿ ಹುಡುಕುತ್ತಾ, ಓಡುತ್ತಾ ಮಧ್ಯೆ ನುಸುಳುತ್ತಿದ್ದ. ತಪ್ಪಿಸಿಕೊಂಡ ಆರ್ತಸ್ವರಕ್ಕೆ ಮಗುವೊಂದು ಅತ್ತ ಇತ್ತ ಓಡಾಡುತ್ತಿದ್ದಂತೆ ಒಂದು ಕೂಗು.
"ನಿನಗೆ ಸಿನಿಯರ್ ಕಾಲೇಜು ರಸ್ತೆಯಲ್ಲಿರುವ ಉಷಾ ಮೆಷಿನ್ ಟೈಲರ್ ಅಂಗಡಿ ಗೊತ್ತಾ?"
"ಗೊತ್ತಿದೆ ದಣಿಗಳೇ "
"ಅಲ್ಲಿಗೆ ಮೂರು ಕಪ್ ಚಹಾ ತೆಗೆದುಕೊಂಡು ಹೋಗಿ ಕೊಡು.ಅವರದು ಎಕೌಂಟು ಇದೆ. ಹಣ ಮತ್ತೆ ಕೊಡುವರು"

ಈ ಮಡಿಕೇರಿ ಕಾಲೇಜು ರಸ್ತೆಯಲಿ ಸರಿಗಮಪದನಿಸ  ತಾಳ ತಪ್ಪದ ಸ್ವರಗಳ ಹುಡುಕಾಟ. ಕೈಯಲ್ಲಿ ಮೂರು ಕಪ್ ಟೀ. ಚೆಲ್ಲದಂತೆ ಭದ್ರವಾಗಿದೆ ಕೈಬಲಗಳು ಉಷಾ ಮೆಷಿನ್ ಅಂಗಡಿಯವರೆಗೆ. ಈ ಬರಿಗಾಲು ರಸ್ತೆಯ ಅನತಿ ದೂರದಲಿ ಒಂದು ಹಾಡು ಕೇಳುತ್ತಿದೆ. ಅಹಾ ! ಜೀನತ್ ಹೋಟೇಲಿನಲ್ಲಿ ಮಲೆಯಾಳಂ ಮಾಪಿಳ್ಳೆ ಹಾಡು. ಮೂರ್ನಾಡಿನಲ್ಲಿ ಗೆಳೆಯ ಲತೀಫ ಇದೇ ಹಾಡು ಮದ್ರಸದ ರಂಜಾನ್ ಸಮಾರಂಭದಲ್ಲಿ ಹಾಡಿದ್ದ ನೆನಪು. ಉಷಾ ಮೆಷಿನ್ ಅಂಗಡಿವರೆಗೆ ಎಳೆ ಎಳೆಯಾಗಿ ಗುನುಗಿತು.
" ಹೊಸ ಹುಡುಗನಾ?"
ಕಪ್ಪಗಿನ ಮನುಷ್ಯ. ತಟ್ಟೆಯಲ್ಲಿದ್ದ ಚಹಾ ಕಪ್ ತೆಗೆದು ಮೊದಲ ಬಾರಿಗೆ ಮೇಲಿಂದ ಕೆಳಗೆ ನೋಡಿ ಕೇಳುತ್ತಿದ್ದ.ಪಕ್ಕದಲ್ಲಿ ಮತ್ತಿಬ್ಬರು  ಎದೆಗೆ ಎರಡು ಗುಂಡಿ ಬಿಟ್ಟ ಬಟ್ಟೆಯನ್ನೇ ನೋಡುತ್ತಿದ್ದರು. ಅಂಗಿಗೆ ಎಳೆದೆ ಮಸಿ ಪಾತ್ರೆಯ ಚಿತ್ರಗಳನ್ನೇ ಲೆಕ್ಕ ಹಾಕುತ್ತಿದ್ದರು. ಅಲ್ಲೊಂದಷ್ಟು ಹಣೆಗೆ ಮುತ್ತಿಕ್ಕಿದ ನೋಣಗಳು. ಕ್ಷಮಿಸಿ.! ಹೋಟೆಲಿನಿಂದ ಬಂದದ್ದು. ಸ್ವಲ್ಪ ದೂರ ನಿಂತು ಆ ಮನುಷ್ಯ ಹೊಸ ಬಟ್ಟೆ ಅಂಗಿಗೆ ಗುಂಡಿ ಹೊಲಿಯುತ್ತಿದ್ದುದ್ದನ್ನೇ ದೃಷ್ಟಿ ಬದಲಿಸದೇ ನೋಡ ತೊಡಗಿದ. ಚಹಾ ಕುಡಿದು ಕಪ್ ಕೈಗಿಡುತ್ತಾ ಒಮ್ಮೆ ಮೀಸೆ ಒರೆಸಿದ. ಎಣ್ಣೆ ಬಾಚಿದ ಕ್ರಾಪು, ಕೆಂಪಗಿನ ಕಣ್ಣು ಮತ್ತೊಮ್ಮೆ ಅಂಗಿ ಗುಂಡಿಗೆ ಸೂಜಿ ಬಿಡುತ್ತಾ ಕತ್ತೆತ್ತಿ ಮತ್ತೊಮ್ಮೆ ಕೇಳಿತು.
"ನಿನಗೆ ಟೈಲರಿಂಗ್ ಬರುತ್ತಾ?"
" ಅಹಾ ! ಬರುತ್ತೆ"
ಮೂರ್ನಾಡಿನಿಂದ ಕ್ಲಿಕ್ಕಿಸಿದ ಬಣ್ಣ ಬಣ್ಣದ ನೆನೆಪು ಚಿತ್ರಗಳನ್ನು ಒಂದೊಂದಾಗಿ ಅವನ ಮುಂದಿಡುತ್ತಾ ಬಂದ. ಇದು ಸಂಗೀತದ ಏಳು ಸ್ವರಗಳು, ಅದು ಎಂಜಲು ತಟ್ಟೆಗಳ ಮೇಲೆ ಮೆತ್ತಿಕೊಂಡ ಅನ್ನ-ಸಾರು. ಬೇಯಿಸಿದ ಪಾತ್ರೆಗಳನ್ನು ಮುಚ್ಚಿಕೊಂಡ ಕಪ್ಪು ಮಸಿಗಳು, ಮತ್ತೆ ಮತ್ತೆ ರುಬ್ಬುತ್ತಾ ಅಕ್ಕಿ-ಉದ್ದಿನ ಬೇಳೆಗೆ ಮಾತಾಡಿಕೊಳ್ಳುವ ರುಬ್ಬು ಕಲ್ಲುಗಳು, ಗಿರಾಕಿಗಳು ತಟ್ಟೆ ಬಿಟ್ಟೇಳುವುದನ್ನೇ ಕಾಯುತ್ತಿದ್ದ ಕೈಯಲ್ಲಿದ್ದ ಪ್ಲಾಸ್ಟಿಕ್ ಬಕೇಟು, ಕೈಬಟ್ಟೆ. ಓಡಿಸಿದಷ್ಟು ಮುಖ ನೆಕ್ಕುವ ನೊಣಗಳು,ಮುಚ್ಚಿದಷ್ಟೂ ತೆರೆದುಕೊಳ್ಳುತ್ತಾ, ಮತ್ತೆ ಭಾರವಾಗುವ ಕಣ್ಣ ಮೇಲಿನ ರೆಪ್ಪೆಗಳು ಅವನ ಮುಂದೆ ಮತ್ತೆ  ತೆರೆಯಲೆತ್ನಿಸಿದವು. ದಿನಕ್ಕೆ ಒಂದು ರೂಪಾಯಿ ಕೊಟ್ಟರೆ ಸಾಕು.. ಸಂಗೀತ ಕಲಿಯಬೇಕು. ಹೋಟೇಲಿನಿಂದ ಓಡಿ ಬಂದರೋ?". ಸಂಗೀತಕ್ಕೆ ದಾರಿ ಸಲೀಸಾಗಿದೆ...

"ಆಯಿತು...ನಿನ್ನ ಬಟ್ಟೆಬರೆ ತೆಗೆದುಕೊಂಡು ನಾಳೆ ಬಾ"
ಆ ಅಂಗಡಿಯ ಗೋಡೆಗಳ ಮೇಲೆ ಸುತ್ತಲೂ ಒಮ್ಮೆ ಹರಿದಾಡಿತು ಕಣ್ಣುಗಳು . ಒಂದರ ಮೇಲೊಂದರಂತೆ ಮಾರಾಟಕ್ಕಿಟ್ಟ ಹೊಲಿಗೆ ಯಂತ್ರಗಳು. ಅಲ್ಲೇ ಮೂಲೆಯಲ್ಲಿ ಒಂದು ಮರದ ಖುರ್ಚಿ. ಕೆಲಸ ಸಿಕ್ಕಿದರೆ ಅಲ್ಲೇ ಕೂರಬಹುದು. ಖಾಲಿ ಚಹಾ ಕಪ್ ಗಳನ್ನು ಖಾಲಿ ತಟ್ಟೆಗಿಡುತ್ತಾ ಹೋಟೆಲಿಗೆ ಮುಖ ಮಾಡಿದ ರಸ್ತೆಗೆ ಕಾಲುಗಳು ಇನ್ನಷ್ಟು ಚುರುಕಾಗಿ ತಿಕ್ಕತೊಡಗಿತು. ಕೆಲವಷ್ಟು ಜಲ್ಲಿ ಕಲ್ಲುಗಳು, ಅದನ್ನು  ಮುಚ್ಚಿದ ಮರಳು, ಮರಳಂತೆ ಇರುವ ಧೂಳು ಮಣ್ಣು. ಕಾಲು-ಮಣ್ಣು-ಧೂಳು ಒಂದಾದವು.
ಬಿಸಿಲು ಮಂಕಾಗಿದೆ. ಶಾಲೆ ಬಿಟ್ಟ ಮಕ್ಕಳು ಬಿರಬಿರನೇ ನಡೆಯುತ್ತಿದ್ದಾರೆ.ಹಕ್ಕಿಗಳು ಚಿಲಿಪಿಲಿ ಹಾರಾಡುತ್ತಿವೆ.ಎಲ್ಲರೂ ಗೂಡು ಸೇರುವವರೆ. ಹೋಟೆಲಿಗೆ ಬಂದವನು ಖಾಲಿ ಎಣ್ಣೆ ಡಬ್ಬಿಯ ಮೇಲಿದ್ದ ಬಟ್ಟೆ ತುಂಬಿದ ಚೀಲವನ್ನು ಮೊದಲು ಮುಟ್ಟಿ ನೋಡಿದ. ಅಂಗಿ-ಚಡ್ದಿ, ಧರ್ಮಸ್ಥಳದ ಕಾರ್ಡು,ಚಲನಚಿತ್ರ ಗೀತೆಗಳ ಪುಸ್ತಕ ಅವನನ್ನೇ ನೋಡುತ್ತಿವೆ..ಇಲ್ಲ ! ಒಳಗೆ ಬೆಚ್ಚಗೆ ಮಲಗಿವೆ. ಮತ್ತೊಮ್ಮೆ ಸರಿಪಡಿಸಿ ಹಿಂದಕ್ಕೆ ಕತ್ತು ತಿರುಗಿಸಿದ.
"ಹೇ ಒಳಗೆ ತಟ್ಟೆಗಳನ್ನು ತೊಳೆಯೋ, ಗಿರಾಕಿಗಳು ಕಾಯ್ತಿದ್ದಾರೆ"

ಇನ್ನಿಲ್ಲದ ಉಮ್ಮಸ್ಸು, ಉಜ್ಜಿ ಉಜ್ಜಿ ತೊಳೆದು ರಾಶಿಯಿದ್ದ ನೂರರಷ್ಟು ತಟ್ಟೆಗಳನ್ನು ಬೆಳ್ಳಗೇ ಕಂಡಾಗಲೇ ಗೊತ್ತಾಗಿದ್ದು, ಬಟ್ಟೆಯೆಲ್ಲಾ ಒದ್ದೆ. ಮುಖ ತುಂಬಾ ತೊಳೆದ ಬೆವರಿಗೆ ಅಂಗಿಯ ಕೊನೆಯನ್ನು ಎತ್ತಿ ಒರೆಸತೊಡಗಿತು ಕೈಗಳು.ಅಲ್ಲೇ ಮೂಲೆಗೆ ತಲೆ ಕೆಳಗೆ ಮಲಗಿದ್ದ  ಪೊರಕೆ ಹಿಡಿದು ಅಡುಗೆ ಕೋಣೆ, ಗಲೀಜು ಹರಿದರೂ ಮೂಗು ಮುಚ್ಚದೆ ನಾರುತ್ತಿದ್ದ ಚರಂಡಿಯನ್ನು ಗುಡಿಸತೊಡಗಿದ. ಮತ್ತೆ ಗುಡಿಸಿದ..ನೀರು ಮತ್ತೆ ಮತ್ತೆ ಚರಂಡಿಗೆ ಸುರಿಯುತ್ತಾ ಒಂದು ಹಾಡು ಹಾಡಿದ..."ಎಲ್ಲೆಲ್ಲೂ ಸಂಗೀತವೇ....ಕೇಳುವ ಕಿವಿ ಇರಲು... ನೋಡುವ ಕಣ್ಣಿರಲೂ"

"ದಣಿಗಳೇ ನಾನು ನಾಳೆ ಮನೆಗೆ ಹೋಗಿ ಬರುತ್ತೇನೆ"
ಹಿಂದಿಂದೆಯೇ ಬಂದ ರಂಗನ ಐವತ್ತು ಪೈಸೆ ಸಾಲ ಈ ಸಲವೂ ಬಿಡಲಿಲ್ಲ. ರಾತ್ರಿ ಮಲಗುವಾಗ ಅವನದು ಅದೇ ರಾಗ. ಚೀಲದಲ್ಲಿ ಹಾಕಿಟ್ಟ ಇಪ್ಪತೈದು ಪೈಸೆ  ಎರಡು ನಾಣ್ಯ ಹುಡುಕಿ ಕೈಗಿಟ್ಟ ಮೇಲೆ ಅವನಿಗೆ ನಿದ್ದೆ ಬಂತು. ಈ ಅಡುಗೆ ಮನೆಗೆ ಕಣ್ಣುಗಳು ಮತ್ತೆ ಮತ್ತೆ ಹಾಯತೊಡಗಿದವು. ಒಲೆಯಲ್ಲಿ ಉರಿದು ನಾಳೆಗೆ ಉಳಿದ ಬೂದಿಯೊಳಗಿನ ಕೆಂಡ ಮಂದವಾಗಿ ಕಣ್ಮುಚ್ಚಿದೆ. ಮೈಗೆ ಬಿಸಿ ಹೊದ್ದ ಗೋಣಿಚೀಲವನ್ನು ಮತ್ತೊಮ್ಮೆ ಸವರಿ ನೋಡಿದ.ನಿದ್ದೆಗೆ ಸೋಲುತ್ತಿರುವ ಭಾರದ ಕಣ್ಣುಗಳ ತುಂಬಾ ರಾಶಿ ರಾಶಿ ಅಂಗಿಗಳು, ಹೆಕ್ಕಿ ಹೆಕ್ಕಿ ಹೊರತೆಗೆಯುವ ಬಲಾಢ್ಯ ಗಡಸು ಕಪ್ಪು ಕೈಗಳ ನಡುವೆ ಆಳದಿಂದ ಆಳಕ್ಕೆ ಇಳಿಯುವ ಹೊಲಿಗೆ ಹಾಕುವ ಗುಂಡಿಗಳು ಕಾಣುತ್ತಿವೆ. ದಿನದಿಂದ ದಿನಕ್ಕೆ ಜೇಬಿಗಿಳಿಸುವ ಗಾಂಧಿ ಚಿತ್ರದ ಒಂದು ರೂಪಾಯಿ ನಾಣ್ಯಗಳ ಗೆಜ್ಜೆ ಶಬ್ದಗಳು. ಅಲ್ಲೊಂದು ಮಸುಕು ಮಬ್ಬು ಬೆಳಕಿನಲ್ಲಿ ಆಕೃತಿಯೊಂದು ಕುಳಿತಂತಿತ್ತು.  ಓಹೋ..ಸಂಗೀತ ಮೇಷ್ಟ್ರು ! ಅವರ ಮುಂದೆ ಆದಿ ತಾಳ ಹಾಕುತ್ತಿದ್ದ ಪುಟ್ಟ ಕೈಗಳಿಗೆ ಸ್ವರವೇಳಿಸುತ್ತಿದ್ದ ಗಾಳಿ.
ಥಟ್ಟನೇ ಎಚ್ಚರವಾದವು ಅಡುಗೆ ಮಾಮನ ಈರುಳ್ಳಿ ಕೊಚ್ಚುತ್ತಿದ್ದ ಶಬ್ದ. ಕಣ್ಣು ಬಿಟ್ಟವನ ಕಿವಿಯೊಳಗೆ ಎಲ್ಲೋ ದೂರದಲ್ಲಿ ಗಂಟಲು ಹರಿದು ಹಾಡುತ್ತಿದ್ದ ಕೋಳಿಯ ಮುಂಜಾನೆ ಹಾಡು.ಹೊರಗೆ ನಾಯಿಗಳ ಬೊಗಳಿಕೆಗೆ ಸ್ಪರ್ಧೆಗೆ ನಿಂತಂತಿವೆಮದ್ರಸಕೆ ಕರೆಯುವ ಅಲ್ಲಾಹುವಿನ ಪ್ರಾರ್ಥನೆಗೆ, ಪಕ್ಕದ  ಕಾಲೇಜು ರಸ್ತೆ ರಾಮಮಂದಿರದಿಂದ ಗಾಳಿ ತೇಲಿಸಿ ತರುತ್ತಿದೆ ಒಂದು ಹಾಡು " ಎದ್ದೇಳು ಮಂಜುನಾಥ... ಎದ್ದೇಳು.. ಬೆಳಗಾಯಿತು". ಥಟ್ಟನೆ ಎದ್ದವನು ಮೈಸೆಟೆದು ಮೊದಲು ಚೀಲ ಮುಟ್ಟಿ ನೋಡಿದ..ಎಲ್ಲವೂ  ಎಚ್ಚರವಾಗಿವೆ ಹೆಗಲ ಮೇಲೆ ತೂಗಿ ಒಂದು ಸುದೀರ್ಘ ಪ್ರಯಾಣಕ್ಕೆ....

"ಯಾವಾಗ ಬರುತ್ತೀಯಾ" ಅಂತ ಆ ಅಡುಗೆ ಮಾಮ ಕೇಳಿದರು. ಹೆಗಲಿಗೆ ಮುಂಡಾಸು ತೂಗಿಸಿದ ಕಪ್ಪು ಮುಖ-  ಕಪ್ಪು ತುಂಬಿದ ಕೂದಲ ಸೆರೆಗೆ ನಾಲ್ಕಾರು ಬಿಳಿ ಇಣುಕಿದ ನೆರೆಗೂದಲ ಎದೆ, ಕಪ್ಪು ಬಂಡೆ ಕಲ್ಲಿನ ಬೆನ್ನಿಗೆ ಸುರಿಯುತ್ತಿದ್ದ ಬೆಂಕಿಯ ಬೆವರು. ಅಡುಗೆ ಮಾಮ ಮುಂದೆ ಉರಿಯುತ್ತಿದ್ದ ಒಲೆ ಬಗಬಗನೇ ಮತ್ತಷ್ಟು ಉರಿಯ ತೊಡಗಿತು. ಕೊಚ್ಚುತ್ತಿದ್ದ ಮೆಣಸು-ಈರುಳ್ಳಿಗೆ  ಕಣ್ಣಲ್ಲಿ ಸುರಿದ ನೀರು ಒರೆಸುತ್ತಲೇ ಇದ್ದರು. ಮತ್ತೆ ಮತ್ತೆ ಅದು ಹರಿಯುತ್ತಲೇ ಇತ್ತು. ಚೀಲ ಹೆಗಲೇರಿಸಿ ಕ್ಯಾಷಿಯರ್ ಮೇಜಿಗೆ ಬಂದಾಗ ದಣಿಗಳು ಕೊಟ್ಟ ಹತ್ತು ರೂಪಾಯಿ ಜೇಬಿಗಿಳಿಸಿ ಪಾಪ್ಯುಲರ್ ಹೋಟೆಲಿನ ಮೆಟ್ಟಿಳಿದಿದ್ದೇ ತಡ, ರಂಗ ಹಿಂದೆಯೇ ನಿಂತಿದ್ದ.
"ಬರುವಾಗ ಏನು ತರುತ್ತೀಯಾ?"
ತರುತ್ತೇನೆ.. ಮನಸ್ಸು ಹಾಯುವವರೆಗೆ ತಂಪು ಸುರಿಯುವ ಹಾಡುಗಳನ್ನ. ಮರೆತರೂ ಮರೆಯಬಾರದೆನ್ನುವ ಈ ಅಡುಗೆ ಕೋಣೆ, ಮುಖ ಕೆಂಪಗೆ ಮಾಡಿ ಕೋಪ ತೋರಿದ ಒಲೆಯ ಬೆಂಕಿ, ಬಿಸಿಗೆ ಮತ್ತಷ್ಟು ಬಿಸಿ ಮುಟ್ಟಿಸಿ ಚಳಿಯ ಹೆಸರೇಳುವ ಈರುಳ್ಳಿ ಸುರಿದ ಗೋಣಿ ಚೀಲಗಳಲ್ಲಿ ನನ್ನನ್ನೇ ತೂರಿಸಿಕೊಳ್ಳಲು ಮತ್ತೆ ಬರುತ್ತೇನೆ.
(ಮುಂದುವರೆಯುವುದು ಭಾಗ-೫)


1 ಕಾಮೆಂಟ್‌:

 1. ಸಂಗೀತ ಕಲಿಕೆಯ ಭಾಗ ಮುಂದುವರೆದದ್ದಕ್ಕೆ ಖುಷಿಯಾಯಿತು.

  ಗ್ರಾಮಗಳ ಮನೆ ಸುತ್ತ ಮುತ್ತಲಿನ್ನು ಪರಿಸರ ಚೆನ್ನಾಗಿ ಮೂಡಿಬಂದಿದೆ.

  ಬಾಲ್ಯದಲ್ಲಿ ನೀವು ಅನುಭವಿಸಿದ ಯಾತನಾಮಯ ಬದುಕನ್ನು ಹಸನಾಗಿಸಲು ಈಗ ಭಗವಂತ ನಿಮ್ಮನ್ನು ನೆಮ್ಮದಿಯಾಗಿ ಇಟ್ಟಿದ್ದಾನೆ ಎಂದೇ ಭಾವಿಸುತ್ತೇನೆ.

  ಹೊಟೆಲ್ ಗಿರಾಕಿಗಳ ಕರೆಗಳಿಗೆಲ್ಲ ಓಗೊಡುತ್ತಿದ್ದ, ಆ ಎಳವೆ ಮನಸ್ಸಿನಲ್ಲಿ ಆಗುತ್ತಿದ್ದ ಘಾತಗಳ ಅರಿವು ನನ್ನ ಮನಸ್ಸಿಗೂ ಆಗುತ್ತಿದೆ.

  ಮೂರ್ನಾಡಿನಿಂದ ಮಡಕೇರಿಯ ತೆಕ್ಕೆಗೆ ಬಿದ್ದ ಮೇಲೆ ಹೊಟೆಲಿನಿಂದ ಟೈಲರಿಂಗಿಗೆ ಜಿಗಿತ?

  ಬಹುಶಃ ತಾವು ಹೇಳಿದಂತೆ ಇಡೀ ಬದುಕೇ - ’ಯಾವಾಗ ಬರುತ್ತೀಯಾ’ ಮತ್ತು ’ಬರುವಾಗ ಏನು ತರುತ್ತೀಯಾ?’ ನಡುವೆಯೇ ಧೃವೀಕರಣವಾಗಿದೆ ಏನೋ? ಅನಿಸುತ್ತದೆ.

  ಆ ಮಡಗಟ್ಟಿದ ನೋವುಗಳಿಗೆಲ್ಲ ಬರಹವೇ ಬಿಡುಗಡೆ, ಮುಂದಿನ ಭಾಗ ಬೇಗನೇ ಬರಲಿ.

  ಪ್ರತ್ಯುತ್ತರಅಳಿಸಿ