ಶನಿವಾರ, ಮಾರ್ಚ್ 16, 2013

ತಲೆದಿಂಬು !



ಹಗುರಗಳು ಉಬ್ಬಿ
ಚಿಗುರಿಕೊಂಡಿದೆ ಗಾಳಿ |

ಎಣ್ಣೆಗದ್ದಿ ಬಿಸಿನೀರಿಗೆ ತೊಯ್ದ
ಮೃದು ಚರ್ಮದ ಹೊಳಪಿಗೆ
ಬಳಿದ ಪೌಡರು-
ಕುಡಿದ ಮೊಲೆ ಹಾಲಿನ ಪರಿಮಳಕೆ
ಒಳ ಸುಳಿದ ನಿದ್ದೆಗಳಿವೆ|

ಸಂದುಗೊಂದಿಗೆ ಅವಿತ
ಬಾಚಿ ತಬ್ಬಿದ ತೋಳ್ತೆಕ್ಕೆಗಳು
ಗಲ್ಲದ ಚಿವುಟುಗಳು
ಗೋಡೆ ಬಿಳಿ ಬಣ್ಣ ಸವರಿದ
ಅಂಬೆಗಾಲು ನಕ್ಷತ್ರಗಳು |

ಇಕ್ಕಟ್ಟಾಗಿವೆ ಹೆಜ್ಜೆಗಳು
ಸಣ್ಣದು ಉಬ್ಬಿ ದೊಡ್ಡದು |

ಅಲೆದ ನೀರ ಗುಳ್ಳೆ
ಕಾಗದ ದೋಣಿಸಿ
ಹಾಯ್ದ ನಾವಿಕನ ಗುರಿಗಳಿವೆ
ವೃತ್ತ ಜಿಗಿವ ಶೂನ್ಯಕೆ |

ಜಾರಿ ಬಿದ್ದಿವೆ...
ಶಾಲಾ ಪುಸ್ತಕದಿಂದ
ನವಿಲುಗರಿ ಪಿಳಿಪಿಳಿ ಕಣ್ಣುಗಳು
ಕಪ್ಪು ಹಲಗೆಗೆ ಬಿದ್ದು
ಹಾರುತ್ತಿವೆ ಅಕ್ಷರಗಳು  |

ತೂಗುವ ತೇಲಿಕೆ
ದುಃಖ್ಖ ಸಮುದ್ರಕೆ ಉಕ್ಕಿ
ನೆಲೆ ಅಲೆದ ನಗುವಿಗೆ |

ಗೆಲುವುಗಳು
ಮೇಲೇಳಲವಣಿಸಿದ ಸೋಲಿಗೆ
ಭರವಸೆಗೆ ಕುಪ್ಪಳಿಸಿ
ಅಪ್ಪುವ ದ್ವೀಪಸ್ಥಂಭದ ಸ್ವಾಗತಕೆ
 ಕಿನಾರೆಗೆ ಕೈಮುಗಿದು |

ಭಾರಗಳು ಜಗ್ಗಿ
ಉಸಿರುಗಟ್ಟುತಿದೆ ಗಾಳಿ |

ಎಳೆ ಎಳೆಯಾಗಿ ಹೊರಗೆಳೆದು
ನಿದ್ದೆಗೆ ಜಾರುತ್ತೇನೆ |

ಒಂದು ಮಾತ್ರ ಬರಲೊಲ್ಲದು |
ಒಳಗೇ ಕುಳಿತಿರಲಿ
ಉಳಿಸಿ ಹೋಗುತ್ತೇನೆ |
-ರವಿ ಮೂರ್ನಾಡು
ಚಿತ್ರಕೃಪೆ:ಗೂಗಲ್ ಅಂತರ್ಜಾಲ

1 ಕಾಮೆಂಟ್‌:

  1. ಹಲವು ಚಿತ್ರಗಳನ್ನು ಸಮರ್ಥವಾಗಿ ಕಟ್ಟಿಕೊಡುವುದು ಇಲ್ಲಿಯ ಕವಿಯ ಆಶಯ. ಅದರಲ್ಲಿ ಆತ ಸಂಪೂರ್ಣ ಸಫಲ. ಬದುಕಿನಲ್ಲಿ ನಾನು ಭಾಗವಂತನಲ್ಲಿ ಬೇಡಿಕೊಳ್ಳುವ ಏಕೈಕ ಬೇಡಿಕೆಯೆಂದರೆ ದಿನವೆಲ್ಲ ಬಸಿದುಹೋಗಿ ರಾತ್ರಿಗೆ ದಿಂಬಿಗೆ ಆನಿಸಿದಾಗ ತುಸು ನಿದ್ರೆಯನಾದರೂ ದಯ ಪಾಲಿಸು ಅಂತ!

    ಪ್ರತ್ಯುತ್ತರಅಳಿಸಿ