ಸೋಮವಾರ, ಜನವರಿ 30, 2012

ಫೇಸ್ಬುಕ್‍ ಕವಿತೆಗಳು


ನಾನೊಂದು ಕವಿತೆ ಬರೆದಿದ್ದೇನೆ
ಅವರಿವರು ಬರೆದಾಗ ಗೀಚಿದ್ದು !

ಕವಿತಾಶಕ್ತಿ  ಕೇಜಿಗೆಷ್ಟು?
ಅಂಗಡಿಯಲಿ ಅಳೆದು ತೂಗಿದಾಗ
ಹುಚ್ಚು ಮನಸ್ಸಿನ ಸ್ಲೇಟು ಫೇಸ್ಬುಕ್ಕು !
ತೋಚಿದ್ದೆಲ್ಲ  ಹುಚ್ಚೆದ್ದು
ಮಾತುಗಳೆಲ್ಲಾ ಮೈಬಿಟ್ಟು
ಬರೆದದ್ದೆಲ್ಲ ಅಂಟಿಸಿ ಒದರುತ್ತೇನೆ
ಇದು ನನ್ನ ಕವಿತೆ..!

ನಿಜ ಕವಿತೆ ಓದಿ
ಪಡೆದದ್ದೆಲ್ಲಾ ಮಣ್ಣು  !
ಉದ್ದುದ್ದು ಮಾತುಗಳ
ಹರಟೆ-ತಮಾಷೆಗಳು !
ಅರೆಬರೆ ಕನಸುಗಳ
ತುಂಡರಿಸಿದ ವಾಕ್ಯಗಳ
ಇಟ್ಟಿಗೆ ಜೋಡಿಸಿದರೆ ಒಂದು ಕವಿತೆ !

ಲಯಕ್ಕೆ ಸಿಕ್ಕಿದ್ದು ಪದ್ಯ
ಮಾತಿನಾಚೆಯ ನಿಗೂಢ !
ಮಾತು ಗೆದ್ದಾಗ ಗದ್ಯ
ಓದಿದರೂ ಓದಿಸುವ ಗಾಢ !
ಲಯವಿಲ್ಲದ ಕವಿತೆ ಓದಿ
ಸಿಕ್ಕಿದು ತಾಳವಿಲ್ಲದ ಹಾಡು  !
ಹದ ತಪ್ಪಿ ಊಳಿಡುವ ನಾಯಿ ಪಾಡು  !

ಪ್ರೀಯ-ಪ್ರೇಯಸಿ ಪಟ್ಟಾಂಗದಲ್ಲಿ
ಕನವರಿಸಿ ಹೊದಿಕೆ ಸರಿಸುತ್ತವೆ
ಒಂದು ಹನಿಜೇನು ಸಾಲು..!
ಗಂಡ-ಹೆಂಡತಿ ಸಲ್ಲಾಪದೆಡೆಗೆ
ಇಣುಕಿದ ಜಗಳದ ಮಕ್ಕಳು
ಮನೆ ಗುಟ್ಟು ಬೀದಿಗೆ ಬಂದು
ಫೇಸ್ಬುಕ್ಕು ಇನ್ನೊಂದು ಮಗ್ಗಲು !

ಕಚೇರಿಗೆ ಕುಳಿತ ಮಾತಿಗೆ
ಮೈಚಳಿ ಬಿಸಿಯೇರಿ ಕನವರಿಕೆ !
ಪ್ರೀಯತಮೆ ಕಚಗುಳಿ ಸ್ವರಕೆ 
ಪಾರ್ಕುಗಳ ಪ್ಲಾಸ್ಟಿಕ್ ಹೂಗಳಿಗೆ
ಅಂಗಡಿ ಸುಗಂಧ ದ್ರವ್ಯಗಳ ತಳುಕು !
ಹೊಟೇಲ್‍ - ಗಲ್ಲಿಗಳಿಗೆ
ಆಸನಗಳದ್ದೇ ಚಿಂತೆ !
ಮಾತಿಗೆ ಮಾತುಗಳು ಉಜ್ಜಿ
ಗಂಡು- ಹೆಣ್ಣುಗಳ ಮಧ್ಯೆ
ತನ್ನಿಚ್ಚೆಗೆ ಬೆತ್ತಲಾಗುತ್ತಿದೆ ಫೇಸ್ಬುಕ್ಕು  !
ಮಿಕ್ಕುಳಿದ ಭಾವಗಳಿಗೆ ಭಿಕ್ಷೆಯ ಸಾಲು !

ಪ್ರಕಟಿಸಿದ್ದೇನೆ ಕವಿತೆ, ಕಾದಿದ್ದೇನೆ ಮೆಚ್ಚುಗೆ
ಬರದಿದ್ದರೆ  ದಿಗಿಲು !
ತಾನೇ ಮೆಚ್ಚಿದಾಗ ಸ್ಖಲನ ತೃಪ್ತಿ  !
ಒದರುತ್ತೇನೆ ನನ್ನದೇ ಕವಿತೆ !
ನನ್ನಿಷ್ಟದ ಸ್ಲೇಟು ಫೇಸ್ಬುಕ್ಕು  !

ಹೆಣ್ಣಾದರೆ ಖಾಲಿಯಾಗುವುದು
ದೌರ್ಬಲ್ಯಗಳ ಮೇಕೆಪ್ ಸೆಟ್ಟು  !
ಕನ್ನಡಿಗೂ ಮುಖರತಿಯ ಸೊಕ್ಕು !
ಮಾತಿಗೆ ಒಪ್ಪಿದ ಕವಿತೆಗೆ ಮದುವೆ
ಲಯಕ್ಕೆ ವಿಚ್ಚೇಧನದ ಕೊರಗು !
-ರವಿ ಮೂರ್ನಾಡು

ಬುಧವಾರ, ಜನವರಿ 25, 2012

ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!


-ರವಿ ಮೂರ್ನಾಡು
ಮಗ ದೊಡ್ಡವನಾಗಿರಬಹುದು. ಬರುವಾಗ ಮೂರು ತಿಂಗಳ ಹಾಲುಗಲ್ಲದ ಮಗು. ವರ್ಷ 5 ಆಯಿತ್ತಲ್ಲ !. ಮುಂಜಾನೆ 5 ಗಂಟೆಗೆ ಅದೊಂದು ಶನಿವಾರ ಹೊರಟಿದ್ದೆ. ಕನಸು ನಿದ್ದೆಯಲ್ಲಿ ಕಾಣದ ದೇವರೊಂದಿಗೆ ನಗುತ್ತಾ ಮಲಗಿತ್ತು. ಕೆನ್ನೆ- ಹಣೆಯಲ್ಲಿ ಅತ್ತಿತ್ತ ಹೊರಳಾಡಿ ಕಾಡಿಗೆಯೂ ಚಿತ್ತಾರ ಬಿಡಿಸಿತ್ತು. ಬೆಣ್ಣೆಯಂತ  ಕೆನ್ನೆಗೆ, ಚದುರಿದ್ದ ಕೂದಲ ನೇವರಿಸಿ ಹಣೆಗೆ ಒರಟು ತುಟಿಗಳಿಂದ ಮುತ್ತಿಟ್ಟಿದ್ದೆ.  ಎಚ್ಚರವಾಗಲಿಲ್ಲ. ಅಯ್ಯೋ. ನೊಣಗಳು ಹಾರಾಡುತ್ತಿದ್ದವು ! ಕೈಗಳ ಗಾಳಿಯಾಡಿಸಿ ಹಾಲ್ದುಟಿಗೆ ಕೂರದಂತೆ ಓಡಿಸಿದ್ದೆ. ಅಹಾ..! ರಾತ್ರಿ ಬಳಿದಿದ್ದ ಬೇಬಿ ಜಾನ್ಸನ್‍ ಪೌಡರು, ಅವಳು ಕುಡಿಸಿದ್ದ ಹಾಲಿನ ಪರಿಮಳ ಹಾಗೇ ಬೀಸುತ್ತಿದೆ. " ಮಗುವನ್ನು ಚೆನ್ನಾಗಿ ನೋಡಿಕೋ". ಆ ಕ್ಷಣ ಬಾಗಿದ ಸ್ವರ ಮನಸ್ಸಿನೊಳಗೆ ಮಗುವಾಗುತ್ತಿದೆ.
ಅಡುಗೆ ಕೋಣೆಯಲ್ಲಿ ಕಾಫಿ ಪಾತ್ರೆ ಕುದಿಯುತ್ತಿತ್ತು. ಕೋಣೆ ತುಂಬಾ ನೀರವ ಮೌನ, ವಯಸ್ಸಾದ ಅತ್ತೆಯ ಹೊದಿಕೆಯೊಳಗೆ ಎರಡು ಕೆಮ್ಮಲು ಧ್ವನಿ ದಿಗಿಲು ಹುಟ್ಟಿಸುತ್ತಿವೆ. ಬಾಡಿದ ತಿಳಿ ಬೆಳಕಿನಲ್ಲಿ ಮುಖ ನೋಡಿದ್ದೆ. ಕಾಫಿ ಸುವಾಸನೆಯನ್ನು  ಕೋಳಿ ಕೂಗಿನೊಂದಿಗೆ  ಹೀರುತ್ತಿದ್ದಾಗ, ದೇವರ ನಂದಾ ದೀಪಕೆ ಕೈ ಮುಗಿಯುತ್ತಿದ್ದಳು. ಸಾಲು ದೇವರುಗಳು, ಗಣಪತಿ,ರಾಜರಾಜೇಶ್ವರಿ ಭಾವ ಚಿತ್ರಗಳು. ಹಿಂದಿನ ದಿನ ಮಲ್ಲಿಗೆಯ ಮಾಲೆ ಪೋಣಿಸಿ ಹಾಕಿದ್ದಳು. ಬಾಡಿರಲಿಲ್ಲ ಕೈಯ ಸ್ಪರ್ಶಗಳಿಗೆ ದೇವರುಗಳ ಮಂದಸ್ಮಿತ ಮುಖಗಳು. ಗಾಢ ಮೌನದ ತದೇಕ ದೃಷ್ಟಿಯ ಮುಖ ನನ್ನನ್ನೇ ನೋಡುತ್ತಿತ್ತು.
" ಯಾವಾಗ ಬರುತ್ತೀರಿ ?"
ಬರುತ್ತೇನೆ....ಓಡೋಡಿ ಬರುತ್ತೇನೆ. ಸ್ವರವಿಲ್ಲದ ಗಂಟಲಿಗೆ ಭಾರವಾದ ತಲೆ ಆಡಿತು.
" ಯಾರೊಂದಿಗೆ ಹೆಚ್ಚು ಮಾತಾಡಬೇಡಿ, ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳಬೇಡಿ"
ಆಯಿತು, ಮಾತಾಡಲಿಲ್ಲ. ಅಭ್ಯಾಸವಂತೂ ನಿನ್ನ ನೆನಪಿನಲ್ಲಿ ದೂರವಿದೆ.
" ಸಮಯಕ್ಕೆ ತಕ್ಕಂತೆ ಚೆನ್ನಾಗಿ ಊಟ ಮಾಡಿ, ನಿದ್ದೆಗೆಡಬೇಡಿ"
ದೇವರ ತಿಲಕ ಹಣೆಗಿಡುವಾಗ ಕೈ ಬಳೆ ಸದ್ದಾಗುತ್ತಿತ್ತು. ಗೊತ್ತಿಲ್ಲದ ಹನಿಗಳು ಕೆನ್ನೆಯನ್ನು ಚುಂಬಿಸಿದವು. ತೋಳ ತೆಕ್ಕೆಯೊಳಗೆ ಬಿಡಲಾರದ ಕಣ್ಣೀರ ಬಿಸುಪು ಅಂಗಿಯನ್ನು ಒದ್ದೆ ಮಾಡಿದ್ದವು.
"ಪೆಟ್ಟಿಗೆಗೆ ಎಲ್ಲಾ ತುಂಬಿಸಿದ್ದೇನೆ. ಈ ಫೋಟೋ ಇಟ್ಟಿದ್ದೇನೆ."
ಅದೇ ಈಗಲೂ ಜೀವ ತುಂಬಿದ್ದು. ಕೋಣೆಯ ಟೇಬಲ್ಲಿನಲ್ಲಿ ಬೆಳಿಗ್ಗೆ ಕೆಲಸಕ್ಕೆ ಹೊರಡುವಾಗ ನನ್ನನ್ನೇ ಬಾಗಿಲವರೆಗೆ ಬೀಳ್ಕೂಡುತ್ತೀರಿ. ಸಂಜೆ ಬಾಗಿಲಿನಿಂದಲೇ ಬರಮಾಡುತ್ತೀರಿ. ಒಂಟಿ ನೀರವ ಕ್ಷಣಗಳಿಗೆ ಗೋಡೆಯಲ್ಲೆಲ್ಲಾ ನಿಮ್ಮದೇ ಮುಖಗಳು. ಊಟದ ತಟ್ಟೆಯಲ್ಲಿ ನಿಮ್ಮದೇ ಬೆರಳ ಸ್ಪರ್ಶಗಳು.  ಅಸ್ತವ್ಯಸ್ಥ ಮನಸ್ಸಿನ ಕಿಟಕಿಗಳಲ್ಲಿ ಉಸಿರ ಸದ್ದುಗಳು. ಬೀಸುವಾಗಲೆಲ್ಲಾ  ಕೋಣೆ ಕಿಟಕಿಯ ಪರದೆಗಳು ಮೆಲ್ಲನೇ ತೆರೆದು ನೋಡುತ್ತವೆ.  "ಹೇಗಿದ್ದೀರಿ?" ಗಾಳಿಯೊಂದಿಗೆ ಸ್ವರ ಸೇರಿಸುತ್ತವೆ. ಪಟ್ಟಣದ ಬೀದಿಗೆ ಸುತ್ತಾಡುವಾಗಲೂ ಮಗ ಬೆರಳಿಡಿದು, ಅಂಗಡಿ-ಬಜಾರುಗಳಲ್ಲಿ " ಅದು ಯಾಕ್ರೀ, ಇದು  ಯಾಕ್ರೀ?" ಎಂದು ಕೊರಳ ಕೊಂಕಿಸಿ ಕಾಡಿಗೆ ಹುಬ್ಬೇರಿಸಿ ಪ್ರಶ್ನಿಸಿದ  ಮಾತುಗಳು ಹಿತವೆನಿಸುತ್ತವೆ.
ಪಟ್ಟಿಗೆ ಹೊತ್ತು ಮೆಟ್ಟಿಲ ಮೇಲೆ ಹೆಜ್ಜೆಗಳನ್ನಿಡುವಾಗ ತಿರುಗಿ ನೋಡಿದ್ದೆ.  ಮನೆಯ ದೇವರ ದೀಪದ ಬೆಳಕಿಗೆ ಅಲ್ಲಲ್ಲಿ ಕಣ್ಣು ಬಿಟ್ಟ ಮನೆ ಅಂಚುಗಳು ಕಾಣುತ್ತಿತ್ತು. ಊದುಬತ್ತಿಯ ಸುವಾಸನೆಯನ್ನು ಹೀರುತ್ತಿದ್ದ  ಹೊರಗಿನ ಗಾಳಿಗೆ ನಿಟ್ಟುಸಿರ ಸದ್ದು. ಅಲ್ಲೇ ಸಾಗಿದ ನಮ್ಮಿಬ್ಬರ ಅಂತರಕೆ ಸೋತು, ಬಾಗಿಲಿಗೆ ತಲೆಯಾನಿಸಿ ಕೈಬೀಸುತ್ತಲೇ ಇದ್ದಳು. ಮಗು ಅಳುತ್ತಿರುವ ಸ್ವರ " ಹುಂಗ್ಯಾ... ಹುಂಗ್ಯಾ....". ಮಗು ಎಚ್ಚರವಾಯಿತು. ನನ್ನ ನೆನಪಾಯಿತೇ !?... ಪಟ್ಟಿಗೆ ಕೆಳಗಿಟ್ಟು ತಿರುಗಿ ಎರಡು ಹೆಜ್ಜೆಗೆ ಮೆಟ್ಟಿಲಿಳಿದಿದ್ದೆ. ತಕ್ಷಣ ಅವಳ ಮಾತು ತಡೆದವು. " ಹೊರಟ ಮೇಲೆ, ಕಾರ್ಯ ಮುಗಿಯದೆ ನುಗ್ಗಬಾರದು" ಒಂದಷ್ಟು ನಿಮಿಷ ಮಗುವಿನ ಅಳು ಮನದೊಳಗೇ ತುಂಬಿಕೊಂಡವು. ಭಾರಗಳು  ಹೆಜ್ಜೆಗೆ ಜೋತು ಬಿದ್ದು ಬಸ್‍ ನಿಲ್ದಾಣಕ್ಕೆ  ಹೊರಟವು. 
ಈಗ  ಪಪ್ಪಾ ಅಂತ ಕರೆಯುತ್ತಾನೆ. ಮೊನ್ನೆ ಮಾತಾಡಿದ್ದ,
" ಪಪ್ಪಾ ಕಳೆದ ವಾರ ಬರುತ್ತೇನೆ ಅಂದಿದ್ದೆ, ಯಾಕೆ ಬರಲಿಲ್ಲ?"
" ಬಸ್ ಸಿಗಲಿಲ್ಲ ಮಗನೇ, ಬರಲಾಗಲಿಲ್ಲ" .
" ಬಸ್ಸು ಸಿಗಲಿಲ್ಲವೇ ?! , ಅಮ್ಮ, ದೊಡ್ಡಮ್ಮ  ಎಲ್ಲರೂ ರಿಕ್ಷಾದಲ್ಲಿ ಬರುತ್ತಾರೆ. ನೀನು ರಿಕ್ಷಾದಲ್ಲಿ ಬಾ" .
ಆಫ್ರೀಕಾದ ಕ್ಯಾಮರೂನಿನಿಂದ ರಿಕ್ಷಾದಲ್ಲಿ ಬರಲು ಹೇಳುವ ಮಗುವನ್ನು ಒಮ್ಮೆ ನೋಡಬೇಕು.!  ಮುಗ್ದತೆಯನ್ನು ಅಪ್ಪಿ ಮುದ್ದಾಡಬೇಕು. ಒಂದು ವರ್ಷವುಂಟು. ದಿನಗಳು ಬೇಸರಿಸಿಕೊಂಡವೋ....!  ಬೆಳಿಗ್ಗೆ ಮರೆಯಾದ ರಾತ್ರಿಗೆ ಕೈಬೀಸಬೇಕು.....ರಾತ್ರಿ ಮರೆಯಾದ ಹಗಲು ಮತ್ತೊಮ್ಮೆ ಕೂರಬೇಕು. ದಿನಗಳು ತಲಪುವ ಗುರಿಗೆ ಕಾವಲು ಕಾಯುತ್ತಿವೆ.
ತಂಗಿ ಮದುವೆ ವಯಸ್ಸಿಗೆ ಬಂದಿದ್ದಾಳೆ. ಗುಂಗುರು ಕೂದಲು, ದೇವತೆಯಂತಹ ಮೂಗುತಿ ಬೊಟ್ಟು. ಅಮ್ಮ ಹೊಲಿದ ಫ್ರಾಕ್ ತೊಟ್ಟು ಹೆಜ್ಜೆ ಹಾಕಿದ ಬರಿಗಾಲು ಕಾಣುತ್ತದೆ. ಅಮ್ಮನದೇ ಸ್ವರ,ಧಾಟಿ, ಸ್ವಲ್ಪ ಗದರಿಸಿದಾಗಲೂ ಉಮ್ಮಳಿಸುವ ದುಃಖ್ಖ. "ಅಳಬಾರದು, ಒಳ್ಳೆಯದಕ್ಕಲ್ಲವೇ ಹೇಳಿದ್ದು". ಕೊಟ್ಟ 50-100 ರೂಪಾಯಿಗಳನ್ನು ಪರ್ಸಿನಲ್ಲಿ ಬಚ್ಚಿಟ್ಟುಕೊಂಡಿದ್ದಳು. ವಿದೇಶಕ್ಕೆ ಬರುವಾಗ ಕೂಡಿಟ್ಟು ಕೊಟ್ಟ ಮೊತ್ತ ಮೂರು ಸಾವಿರ ರೂಪಾಯಿ ಜೋಪಾನ ಮಾಡಿದ್ದು, ಮದುವೆಗೆ ಲಕ್ಷವಾಗಬೇಕು. ತಮ್ಮಂದಿರು ನೆಲ ಕಾಣಬೇಕು. ಕಾಣಲೇ ಬೇಕು. ಹೋಗಿ ಬರುತ್ತೇನೆ.
ಸತ್ತು ಸ್ವರ್ಗ ಸೇರಿದ ಆತ್ಮಗಳಿಗೆ ಅನ್ನ ಇಡಬೇಕು.ಆಯಿತು..! ರಾತ್ರಿ ಇಡುವಾಗ ಒಂದು ಸೀರೆ, ಕೈಬಳೆಗಳು,ಕುಂಕುಮದ ಡಬ್ಬಿ, ಒಂದು ಲುಂಗಿ. ಹೊರಗಡೆ ನಾಯಿ ಹೂಳಿಡುತ್ತಿತ್ತು. "ಬಂದರೇನೋ". ಹೊರಗಡೆ ನೋಡಿದ್ದೆ. ತಂಪು ಹವೆಯಲ್ಲಿ ಕಪ್ಪುಗಳ ಸೀಳಿ ಮಂಜು ಹಾದು ಹೋಗುತ್ತಿತ್ತು. "ಅಣ್ಣಾ...  ಅಪ್ಪ-ಅಮ್ಮನಿಗಿಟ್ಟ ಅನ್ನ ನೀನೇ ತಿನ್ನಬೇಕು". ತಮ್ಮ ಎಲೆ ತುಂಬಿದ ಅನ್ನ ಮುಂದಿಟ್ಟ.  ತಿನ್ನುತ್ತಲೇ ಇದ್ದೆ. ಹಲವರ ಗೈರು ಹಾಜರಿಗೆ ದಿನಗಳು ಲೆಕ್ಕ ಕೇಳಿದ್ದವು. ಹೋಗಿ ಬರುತ್ತೇನೆ.
ಎಲ್ಲವೂ ಮೌನ. "ಫೋನ್ ಮಾಡು"
" ಮಾಡುತ್ತೇನೆ "
ಮಟ್ಟಿಲಿಳಿದು ಎಲ್ಲರೂ ಹೆಜ್ಜೆಯಿಕ್ಕಿದರು. ಮುಖಗಳು ಮರೆಯಾದಂತೆ ನನ್ನ ಒಂಟಿ ಹೆಜ್ಜೆಗಳು ಮಾತ್ರ ಕಂಡವು. ಅಹಾ..! ತಂಗಿಗೆ ಮದುವೆಯಾಗಿದೆ.  ಗಂಡ  ಡ್ರೈವರ್. ಮೊನ್ನೆ  ಮಾತಾಡಿದ್ದೆ. ಚೆನ್ನಾಗಿದ್ದಾರೆ.ಮಾತಿನ ಮಧ್ಯೆ ಮಗುವೊಂದು ಅಳುತ್ತಿರುವ ಸ್ವರ ಕೇಳುತ್ತಿತ್ತು. ಒಂದು ಗಂಡು ಮಗುವಾಗಿದೆ.
ಯಾವಾಗ ಬರುತ್ತೀ ಅಣ್ಣಾ..?!
ಬರುತ್ತೇನೆ. ಯೋಚನೆಗಳು ಮೂಟೆ ಕಟ್ಟಿದ ಒಂದು ದಿನ ನಿಮ್ಮ ಮನಸ್ಸಿನಂಗಳದಲ್ಲಿ ನನ್ನ ಹೆಜ್ಜೆಗಳಿರುತ್ತವೆ. ಮಗುವಿಗೆ ಬೊಗಸೆ ತುಂಬಾ ಉಡುಗೋರೆ ಇರುತ್ತದೆ. " ಮಾಮಾ " ಅಂತ ಕರೆಯಬೇಕು. ಕಾಯುತ್ತಿದ್ದೇನೆ.
"ನನ್ನ ಮಗ ನೀನು". ಹುಷಾರಿಲ್ಲದ ದೇಹದಿಂದ ಮಾವ ಮಾತು ಪ್ರಾರಂಭಿಸಿದ್ದರು. ಅತ್ತೆಯಿಲ್ಲದ ಒಂಟಿ ಮನಸ್ಸು ಒಂಟಿಯಂತೆ ಭಾಸವಾಯಿತು.
"ಅಲ್ಲಿಂದ ಹಣ ಕಳುಹಿಸುತ್ತೇನೆ. ಮನೆ ಬೇರೆ ಮಾಡಿ". ಮಾತಿಲ್ಲದ ಮುಖದಿಂದ ನನ್ನನ್ನೇ ನೋಡಿದ್ದರು.
ಒಂದು ಗಟ್ಟಿ ಕೆಮ್ಮಲು. "ಸಿಗರೇಟು ಹೆಚ್ಚು ಸೇದಬೇಡಿ, ಹೆಚ್ಚು ಕುಡಿಯಬೇಡಿ"
ಮಾತು ಕೋಣೆಯ ಗೋಡೆಗೆ ಬಡಿದು ತಿರುಗಿ ನನ್ನನ್ನೇ ಕೇಳಿ ಮಾಯಾವಾಯಿತು. ಕಾಲಿಡಿದು ಆಶೀರ್ವಾದ ಬೇಡುವಾಗ ಅಪ್ಪಿ ಹಿಡಿದ ಸ್ಪರ್ಶ ,ಈಗಲೂ ಬಿಸಿಯಿದೆ.  ಬಾಲ್ಯಕ್ಕೆ ಮಾತಾಡಿದ್ದ ಸದಾ ನಗುತ್ತಿರುವ ದೇವರುಗಳಿಗೆ ಕೆಳಗಿನ ಕೋಣೆಯಲಿ ಕೈ ಮುಗಿದಿದ್ದೆ.  ಅಲ್ಲಲ್ಲಿ ಮಾಸಿದ್ದ ಗೋಡೆಗಳು "ನಮ್ಮನ್ನು ಬಿಟ್ಟು ಹೋಗುತ್ತೀಯೇನೋ?" ಕೇಳಿದಂತಾಯಿತು.
" ಇಲ್ಲ....ನಾನು ಮತ್ತೊಮ್ಮೆ ಬರುತ್ತೇನೆ. ಅಳಬೇಡಿ ಗೋಡೆಗಳೇ..! ನಾನೂ ಅತ್ತು ಬಿಡುತ್ತೇನೆ...! "  ಮಾವ ಹೊಡೆಯುವಾಗ ಅಧಾರಕ್ಕೆ ನಿಂತ ಗೋಡೆಗಳು. ಬದುಕಿನ ಹಲಗೆಗೆ ಗೋಡೆಗಳಾಗಿವೆ. ವ್ಯವಸ್ಥೆಗಳು ಅದರ ಮೇಲೆ ಬಳಪದಲ್ಲಿ ಬರೆದಿವೆ.
ಬಂದ ಒಂದು ತಿಂಗಳಲ್ಲಿ ಸುದ್ದಿ ಬಂತು. ನಾನಿಲ್ಲದ ಒಂದು ಅಂತಿಮ ಯಾತ್ರೆಗೆ ಜನ ಸೇರಿದ್ದರು.ಎಲ್ಲರೂ ನನ್ನನ್ನೇ ಕೇಳಿದ್ದರು.ಮನೆಯ ಹಿತ್ತಲ ನೆಲದಲ್ಲಿ ನಿಂತಾಗ ಸ್ಮಶಾನ ಕಾಣುತ್ತಿದೆ. ಕಣ್ಣ ಮುಂದೆ ಹಾದು ,ಮಾತಿಗೆ ಸಿಕ್ಕಿದ ಆತ್ಮಗಳು. ಒಂದು ಸಮಾರಂಭದಲ್ಲಿ ಜಗತ್ತಿಗೆ ವಿದಾಯ ಹೇಳುತ್ತಿದ್ದಾರೆ. ಅಳುತ್ತಿದ್ದವರು ಮಾರನೇ ದಿನ ನಗುತ್ತಿದ್ದಾರೆ. ಅಜ್ಜಿಯೂ ಅಲ್ಲೇ ಇದ್ದಾಳೆ, ಪದವಿ ಓದುವಾಗ ಇನ್ನೂರು ರೂಪಾಯಿ ಮೈಸೂರಿಗೆ ಮನಿ ಆರ್ಡರ‍್ ಕಳುಹಿಸಿ, ಅದರ ಮೂರನೇ ದಿನ ಮಾತಿಲ್ಲದೆ ಅದೇ ಸ್ಥಳಕ್ಕೆ ಹೋದರು. ಸ್ಮಶಾನದ ಸ್ಥಳಕ್ಕೆ ಬೇಲಿಯಿದೆ, ಗಟ್ಟಿಮುಟ್ಟಾದ ಕಾವಲು ಗೇಟಿದೆ. ಅದರೊಳಗೆ ಆತ್ಮಗಳಿವೆ.....! ದೇಹ ತೊರೆದ ಆತ್ಮಗಳು ಆ ಗೇಟು ದಾಟಿ ಪಟ್ಟಣದ ನಡು ಬೀದಿಯಲ್ಲಿ ಮಧ್ಯರಾತ್ರಿ ಸಂಚರಿಸಿದ ಕಥೆಗಳಿವೆ....! ಕೆಲವು ನಿಜಗಳು, ಹಲವು ಸುಳ್ಳುಗಳು...ಸತ್ತವರ ನೆನಪುಗಳು ಮನೆ-ಮನಗಳಲ್ಲಿ ಹೆಜ್ಜೆ ಹಾಕುತ್ತಿವೆ...!
ಹೆಣ್ಣು ಮಗು ಮಂಗಳೂರಿನಲ್ಲಿದೆ ಅವಳ ಅಜ್ಜಿ ಮನೆಯಲ್ಲಿ. ಗಂಡು ಮಕ್ಕಳೆರಡು ಚೆನ್ನಾಗಿವೆ. ಮಾತಾಡಿದ್ದೆ . ಭಾರತಕ್ಕೆ ಬಂದ ಮೇಲೆ ಸ್ವಲ್ಪ ಕೆಲಸವಿದೆ. ಅವರ ದಾರಿಯಲ್ಲಿರುವ ಮನೆಗೆ ಬೆಳಕು ಹಚ್ಚಬೇಕಿದೆ. ಮನೆಯ ಮೆಟ್ಟಿಲಿಳಿದು ನಡೆಯುತ್ತಲೇ ಇದ್ದೆ. ಮಕ್ಕಳು "’ ಟಾಟಾ" ಬೀಸುತ್ತಿದ್ದ ಪುಟ್ಟ ಕೈಗಳು ಹೂಗುಚ್ಚದಂತೆ ಕಂಡವು. ಅವರು ನೋಡುತ್ತಲೇ ಇದ್ದರು. ನನ್ನಿಂದ ಮರೆಯಾಗದಿದ್ದರೂ ಮರೆಯಾದರು. ಈಗ ದೊಡ್ಡವರಾಗಿದ್ದಾರೆ. 
"ನೀವು ಯಾವಾಗ ಬರುತ್ತೀರಿ?".
ಬರುತ್ತೇನೆ.....! ಬರುವಾಗ ನಿಮ್ಮ ಮುಖದಲ್ಲಿ ಗಡ್ಡ-ಮೀಸೆ ಕಾಣಬೇಕಿದೆ. ಸ್ವರದಲ್ಲಿ ಗಡಸಿದೆ.  "ಟಾಟಾ": ಬೀಸಿದ್ದ ಹೂಗುಚ್ಚದ ಕೈಗಳಲ್ಲಿ ರೋಮ ತುಂಬಿರಬಹುದು...! ಹೆಣ್ಣು ಮಗಳ ಕೈಗಳಲ್ಲಿ ಮದುಮಗಳ ಹಸಿರು ಬಳೆಗಳಿರಬಹುದು. ಬಾಚಿ ಅಪ್ಪಿಕೊಳ್ಳಬಹುದು..! . ಗಾಳಿ ಸೀಟಿ ಊದುತ್ತಿದೆ. ಭಾರತಕ್ಕಿರಬಹುದು..!  ಅದೋ ಮರಗಳು ಇನ್ನಿಲ್ಲದಂತೆ ಎಲೆಗಳ ಉದುರಿಸುತ್ತಿದೆ. ದಿನಗಳ ಲೆಕ್ಕವಿರಬಹುದು....!
ದಿನಗಳ ಜೊತೆಗೆ ಕ್ಷಣಗಳನ್ನು ಸವರಿದ ಹೆಜ್ಜೆಗಳು, ಮಡಿಕೇರಿ ಪಟ್ಟಣದ ಗಲ್ಲಿಗಳಲ್ಲಿ ಚಪ್ಪಲಿಗಳ ಸಪ್ಪಳಕ್ಕೆ ಕಿವಿಯಾನಿಸುತ್ತಿದೆ. " ಊರು ಖಾಲಿಯಾದರೂ ಮನಸ್ಸು ಖಾಲಿ ಮಾಡಿಕೊಳ್ಳಬೇಡ". ಹೇಳಿದ ಮಾತುಗಳು ಖಾಲಿ ದಿನಗಳನ್ನು ಹೆಕ್ಕಿ ಹೆಕ್ಕಿ  ಎದೆಗೆ ತುಂಬಿಸುತ್ತಿವೆ. ಸುತ್ತ ಕಾವಲು ಕಾಯ್ದ ಬೆಟ್ಟಗಳ ತುದಿಗೆ ನಿಂತು ಪಟ್ಟಣಕ್ಕೆ ಒಮ್ಮೆ ಕಣ್ಣು ಹಾಯಿಸಿದ್ದೇನೆ. ಗಲ್ಲಿ-ಗಲ್ಲಿಗಳಲ್ಲಿ, ಕೇರಿ ಕೇರಿಗಳಿಗೆ ಮನಸ್ಸು ನಾಗಾಲೋಟಕ್ಕೆ ಹಣಿಯಾಗುತ್ತಿದೆ. ಹಲವಾರು ಮುಖಗಳು, ಕೆಲವರು ನಕ್ಕವರು, " ಹೋದ ಮೇಲೆ ಫೋನು ಮಾಡು, ಮರೆತು ಬಿಡಬೇಡ". ಹೌದು..! ಮರೆತಿಲ್ಲ. ಮಾತುಗಳು ಇಷ್ಟಿಷ್ಟೇ ಬೆಟ್ಟವಾದಾಗ " ಕವಿತೆ-ಕಥೆ ಬರೆಯುವುದನ್ನು ನಿಲ್ಲಿಸಬೇಡ", ನಿಲ್ಲಿಸಲಿಲ್ಲ...! ನಿಮ್ಮದೇ ಮಾತುಗಳು,ನಕ್ಕು ಎದೆಗೆ ಸಿಕ್ಕಿಸಿಕೊಂಡ ಅಸ್ತವ್ಯಸ್ಥತೆಗಳು ಮತ್ತೆ ಮತ್ತೆ ಪಾತ್ರಗಳಾಗುತ್ತಿವೆ. ಪದಗಳಲ್ಲಿ ಮಾತಾಗಿ ಮೆಲುಕುಗಳು, ಅವರಿವರ ಮುಖಗಳಲ್ಲಿ ನಿಮ್ಮದೇ ಭಾವಗಳ ತಳುಕುಗಳು...!
ಆ ಬೀದಿಯಲ್ಲಿ ನಡೆವಾಗ ಸ್ಪರ್ಶಿದ ಮಂದಿಯೆಷ್ಟೋ ..! ಪರಿಚಯವಿದ್ದರೂ ಅಪರಿಚಿತನಂತೆ ಮುಖ ತಿರುಗಿಸಿದವರೆಷ್ಟೋ...! ಮಾತಿಗೆ ಸಿಗದೆ ಪರಿಚಯಕ್ಕೆ ತುಟಿಯಂಚಿನಲ್ಲೇ ನಕ್ಕವರೆಷ್ಟೋ...! ಈಗ ಬನ್ನಿ ನನ್ನ ಭಾವದ ಎದೆಗೆ...ಹದ ಮಾಡುತ್ತೇನೆ ಮಣ್ಣು .. ಉತ್ತಿ ನೆನಪಿನ ಬೀಜ ಬಿತ್ತಿ, ತೆನೆ ಕಣ್ಣು ಬಿಡುವವರೆಗೆ...! ಆಹಾ...ರಸ್ತೆಯನ್ನು ಅಗಲ ಮಾಡುವ ಕೆಲಸ ಎಲ್ಲಿಗೆ ನಿಂತಿತೋ? ನಗರ ಸಭೆಯವರು ನೋಟೀಸು ಕೊಟ್ಟ ನೆನಪು. ಅದರ ವಿರುದ್ಧ ಕೋರ್ಟು ಕಟಕಟೆಗೆ  ಅರ್ಜಿ ಹಾಕಿದವರು ರಸ್ತೆ ಬದಿ ಅಂಗಡಿ ಮಾಲೀಕರು. ಬರುವಾಗ ನನ್ನ  ಇಷ್ಟಗಲದ ಎದೆಯುಬ್ಬಿಸಿ ನಡೆಯುವ ಹೆಜ್ಜೆಗೆ ರಸ್ತೆ ದೊಡ್ಡದಿರಬಹುದು.
ಅಂದು ಬೆಳಿಗ್ಗೆ ಪೆಟ್ಟಿಗೆಗೆ ಜೋತು ಬಿದ್ದು, ಹೆಜ್ಜೆಗಳನ್ನು ದಾರಿಗೆ ಗೀಚುತ್ತಿದ್ದಾಗ ಓಂಕಾರೇಶ್ವರ ದೇಗುಲದಲ್ಲಿ ಓಂಕಾರದ ಸದ್ದು..  ಸಾಲು ಗಲ್ಲಿಗಳಲ್ಲಿ ಕದ ತೆರೆದ ಮನೆಗಳಲ್ಲಿ ದೇವರ ಸುಪ್ರಭಾತಗಳು... ಕುರಾನ್ ಪಠನೆಯ ಲಯಬದ್ಧ ಗೀತೆಗಳು. ಒಮ್ಮೆ ದೃಷ್ಟಿ ಮೇಲಕ್ಕೆತ್ತಿದ್ದೆ. ದೂರದ ಚರ್ಚು ಶಿಲುಬೆಗೆ ನಿಂತ ಏಸುವನ್ನು  ಎತ್ತಿ ತೋರಿಸುತ್ತಿತ್ತು.. ಮತ್ತೊಮ್ಮೆ ದೃಷ್ಠಿ  ಬೀದಿಗೆ ಬಿಟ್ಟಿದ್ದೆ. ಹಲವು ಮುಖಗಳು ಮಂದಿರಕೆ ನಡೆಯುತ್ತಿದ್ದವು, ಹಾಲು ಮಾರುವವರು  ಹಾಲು ಮಾರುತ್ತಿದ್ದರು. ಅಂಗಡಿ-ಮುಂಗಟ್ಟುಗಳು ತಮ್ಮನ್ನು ತಾವೇ ಮಾರಾಟ ಮಾಡುತ್ತಿದ್ದವು.ಅಲ್ಲಲ್ಲಿ ಕೊಂಡು ಕೊಳ್ಳುವ ಮಾತುಗಳು. ಮೀನು ಮಾರುವವರು ಕಾಗೆಗಳೊಂದಿಗೆ ದಾರಿ ಹೋಕರನ್ನು ಕೂಗಿ ಕರೆಯುತ್ತಿದ್ದರು.  ಅದೋ ಮಕ್ಕಳು ಮದ್ರಸಾಕ್ಕೆ ಹೋಗುತ್ತಿದ್ದಾರೆ. ಕೆಲವರು ನಮಾಜು ಮುಗಿಸಲು ತಾಮುಂದು- ನಾಮುಂದು ಎಂದು ಮಸೀದಿಗೆ ನುಗ್ಗುತ್ತಿದ್ದಾರೆ.
ಕೇರಳದ ಕಡೆಗೆ ಬಸ್‍ ಹೊರಟಿತು....! ಮಂದಿರದ ಕೆಂಪು ಭಾವುಟ ಪಟಪಟನೆ ಕೈ ಬೀಸಿತು. ಮಸೀದಿಗಳ ಹಸಿರು ಭಾವುಟಗಳು ಹೋಗಿ ಬಾ ಅನ್ನುವ ಸ್ವರ ಮೂಡಿಸಿದ್ದವು. ಹೋಗಿ ಬರುತ್ತೇನೆ ನಾನು ..!  ಹೊಚ್ಚ ಹೊಸದರಂತೆ... ಎಲ್ಲಾ ಕೊಳೆಗಳನು ಮರೆತು... ನಿಮಗಳ ನೆನಪಿನಲ್ಲಿ ಬೆರೆತು....! ಚರ್ಚಿನ ಶಿಲುಬೆಗೆ ನಿಂತ ಏಸು ಎತ್ತಿದ ಕೈ ಮತ್ತೊಮ್ಮೆ ಎತ್ತಿ ಆಶೀರ್ವದಿಸಿದಂತೆ ಭಾಸವಾಯಿತು. 
ಕೊಚ್ಚಿನ್ ವಿಮಾನ ನಿಲ್ದಾಣದಿಂದ ಗೊತ್ತಿಲ್ಲದ ಮನಸ್ಸಿನ ಗೊತ್ತಿಲ್ಲದ ಊರಿನ ಪಯಣಕ್ಕೆ ಉಕ್ಕಿನ ಹಕ್ಕಿ ಸಿದ್ದತೆಯಲ್ಲಿದೆ. ಪೆಟ್ಟಿಗೆಯಲ್ಲಿದ್ದ ಫೋಟೋದ ಕಡೆಗೆ ಮತ್ತೆ ಮತ್ತೆ ತಡಕಾಡಿದೆ. "ಹೌದು.. ಇದೆ...! ನಾವಿಲ್ಲೇ ಇದ್ದೇವೆ.!" 
ಉಕ್ಕಿನ ಹಕ್ಕಿ ನಿಧಾನವಾಗಿ ಮೇಲಕ್ಕೇರುತ್ತಿತ್ತು....! ಒಂದು ಕುತೂಹಲಕ್ಕೆ ಕಿಟಕಿಗೆ ತಲೆಕೊಟ್ಟು ಕಣ್ಣು ಕೆಳಗೆ ಬಿಟ್ಟಿದ್ದೆ. ರಸ್ತೆಗಳು ಗೆರೆಗಳಾಗುತ್ತಿದೆ. ಮನುಷ್ಯರು ಇರುವೆಗಳಾಗುತ್ತಿದ್ದಾರೆ. ಅತ್ತಿತ್ತ  ಅದುರಿದರೂ ಚದುರದಂತೆ....ಮತ್ತೆ ಮತ್ತೆ ಸಣ್ಣದಾಗುತ್ತಿದ್ದಾರೆ.
ಅಲ್ಲೊಂದು ಮೂಲೆಯಲ್ಲಿ ಭಾರತದ ಭಾವುಟ ತಲೆಯಾಡಿಸುತ್ತಿದೆ. ಕೇಸರಿ- ಬಿಳಿ- ಹಸಿರು. ಮಧ್ಯದಲ್ಲಿ ಅಶೋಕ ಮಹಾರಾಜನ ಸತ್ಯ ಮೇವ ಜಯತೇ ಚಕ್ರ ತಿರುಗುತ್ತಿದೆ. ನೋಡುತ್ತಿದ್ದಂತೆ ಚಕ್ರ ನಾಲ್ಕಾಗಿ.. ಇಡೀ ದೇಶವೇ ಅದರ ಬದುಕ ಬಂಡಿಯಲ್ಲಿ ಸಾಗುತ್ತಿದೆ. ಎಲ್ಲರದೂ ಒಕ್ಕೊರಲಿನ ಹಾಡು " ಜನಗಣ ಮನ ಅದಿನಾಯಕ ಜಯಹೇ..." ಮುಗಿಲು ಮುಟ್ಟುತ್ತಿದೆ.....!ವಿಮಾನದೊಳಗೇ  ಎದ್ದು ನಿಂತು ಸಾರಿ ಸಾರಿ ಕೂಗಬೇಕೆನಿಸಿತು..  " ಭಾರತ ಮಾತಾ ಕೀ ಜೈ " !
-------------------------------------------------------------------------------
GulfKannadiga web:
http://www.gulfkannadiga.com/news-59787.html


ಅವಧಿ ಮಾಗ್:
http://avadhimag.com/?p=47822

ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..

ಬುಧವಾರ, ಜನವರಿ 18, 2012

ಅವನು ಕುತ್ತಿಗೆಗೆ ಚಾಕು ಇಟ್ಟ, ದೇಹ ಹೆಣವಾಗಿತ್ತು : ಆಫ್ರೀಕಾದ ಕ್ಯಾಮರೂನ್ ಲೂಟಿ ಪ್ರಸಂಗ !

          ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ  ನನ್ನಲ್ಲಿತ್ತು.  ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!

          ಇಲ್ಲಿನ ಡ್ವಾಲಾ  ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 2007 ರಲ್ಲಿ ಕಾಲಿಟ್ಟು ಪಾಸ್‍ಪೋರ್ಟಿಗೆ ಮುದ್ರೆಯೊತ್ತಿ ಲಗ್ಗೇಜು ವಿಲೇವಾರಿಗೆ ಬರುವಾಗಲೇ ಈರ್ವರು ಹಿಂದೆಯೇ ಬಂದರು. ನಾನು ಕಸ್ಟಂ ಅಧಿಕಾರಿ, ನಿಮ್ಮ ಬ್ಯಾಗ್ ಚೆಕ್‍ ಮಾಡಬೇಕು, ಸ್ವಲ್ಪ ಈ ಕಡೆ ಬನ್ನಿ ಅಂದರು. ಅರೆ..! ಅಧಿಕಾರಿಯಾಗಿದ್ದರೆ ಮರೆಗೆ ಕರೆಯುವ ಆಲೋಚನೆ ಏನು ಅಂತ ಯೋಚಿಸಿದ್ದೆ.ಇಲ್ಲಿನ ಐದು ಸಾವಿರ ಕ್ಯಾಮರೂನ್ ಫ್ರಾಂಕ್ ಕೊಟ್ಟರೆ ತಕರಾರಿಲ್ಲ ಅಂದರು. ಅಲ್ಲಿಯೇ ನಮ್ಮ ಕಂಪೆನಿಯ ವಾರೀಸುದಾರರು ಮಧ್ಯೆ ಬಂದಿದ್ದರಿಂದ ಆ ಪೀಡನೆಯಿಂದ ಪಾರಾದೆ. ಅಮಾನುಷ ಕೃತ್ಯಗಳ ಹೆಣಗಳ ವಾಸನೆ ನನ್ನ ಮೂಗಿಗೆ ಆಗಲೇ ಬಡಿದಿದೆ. ಹಣ ಕೊಟ್ಟರೆ ಕಾನೂನುಗಳು ಇಲ್ಲಿ ನಮ್ಮ ಕೈಗೆ ಬರುತ್ತವೆ.ಹಾಗಂತ ಹಣಕ್ಕೆ ಬಾಯ್ಬಿಟ್ಟ ನಡೆದಾಡುವ ಹೆಣಗಳೇ ಇಲ್ಲಿನ ಮನುಷ್ಯರು. ಭಾರತದಲ್ಲಿ ಇಂತಹದ್ದು ಬೇಕಾದಷ್ಟು ನಡೆಯುತ್ತವೆ. ಅದನ್ನು ಪ್ರಶ್ನಿಸುವ ಜನರಿದ್ದಾರೆ ಅನ್ನುವ ಸಮಾಧಾನ. ಇಲ್ಲಿ ಕೇಳುವವರು, ಕೊಡುವವರು ಎಲ್ಲರೂ  ಕಳ್ಳರೇ ಅಂದಾಗ ಸತ್ಯಕ್ಕೂ ಹಲ್ಲು ಕಿರಿಯಲು ನಾಚಿಕೆ...!
          ಒಮ್ಮೆ 2008 ರಲ್ಲಿ ಹಾಗೇ ಆಯಿತು.ವಾರ್ಷಿಕ ಲೆಕ್ಕಪತ್ರಗಳ  ಅಂತಿಮ ತಪಾಣೆಯ ಪರಿಶೀಲನೆ. ಅದು ಡಿಸೆಂಬರ‍್ ತಿಂಗಳ ಕ್ರಿಸ್‍ಮಸ್ ದಿನಗಳು. ಆಡಿಟರ‍್ ಕಚೇರಿ ನಮ್ಮ  ಕಚೇರಿಯಿಂದ ಅನತಿ ದೂರದಲ್ಲಿದೆ. ಈ ರಸ್ತೆ ಭಾರೀ ಜನಜಂಗುಳಿ. ಇವರಲ್ಲಿ  ಕಳ್ಳರು ಯಾರೂ ಅಂತ ಗೊತ್ತಾಗುವುದಿಲ್ಲ. ಕಪ್ಪು ಜನರು, ಎಲ್ಲರೂ ಒಂದೇ ರೀತಿ ಕಾಣುತ್ತಿದ್ದರು. ಕಳ್ಳರ ಉಪಟಳವಿರುವುದರಿಂದ 100 ಮೀಟರ್ ಹೋಗಬೇಕಾದರೂ ಕಂಪೆನಿಯ ಕಾರಿನಲ್ಲಿ ಹೋಗುವುದೇ ಎಲ್ಲರೂ ರೂಢಿಸಿಕೊಂಡಿರುವ ವಾಡಿಕೆ. ಧಾಳಿ ಮಾಡಿದಾಗ ಎಲ್ಲರೂ ಮುಂಜಾಗ್ರತೆಯಾಗಿ  ಜೀವ ರಕ್ಷಿಸಿಕೊಳ್ಳಲು ಇಲ್ಲಿನ 10 ಸಾವಿರ  ಕ್ಯಾಮರೂನ್ ಫ್ರಾಂಕ್ (ಭಾರತದ 1000 ರೂ.) ಯಾವಾಗಲೂ ಇಟ್ಟಿರುತ್ತಾರೆ. ಹಾಗೇ ನಾನು ಇಟ್ಟಿದ್ದೆ. ಸಾಮಾನ್ಯವಾಗಿ ಮೊಬೈಲ್-ವಾಚುಗಳನ್ನು ಯಾರಿಗೂ ಗೋಚರಿಸಿದಂತೆ ಜೇಬಿನೊಳಗೇ ಇಟ್ಟು ಸಂಚರಿಸುವುದು. ನಡು ಮಧ್ಯಾಹ್ನ ಆಡಿಟರ್ ಕಚೇರಿಯಿಂದ  ಹೊರಬಿದ್ದು ನಮ್ಮ ಕಚೇರಿಗೆ ಬರುವ ತುರಾತುರಿಯಲ್ಲಿ  ಅ ಜನಜಂಗುಳಿ ರಸ್ತೆಯಲ್ಲಿ ನಡೆದೇ ಬರುತ್ತಿದ್ದೆ. . ಯಾರದೋ ಬ್ಯಾಂಕ್ ಅಧಿಕಾರಿಯ ಕರೆ ಬಂತು. ಮೊಬೈಲ್ ಹಿಡಿದು ಮಾತಾಡಿ, ಹಾಗೆಯೆ ಕೈಯಲ್ಲಿ ಹಿಡಿದಿದ್ದೆ. ಈ ರಸ್ತೆಗೆ ಮಧ್ಯೆ ಹಾದು ಹೋಗುವ ತಿರುವಿಗೆ ಬರುತ್ತಿದ್ದಂತೆ ,ಯಾರೋ ಸ್ಪರ್ಶಿದ ಅನುಭವಾಯಿತು. ತಿರುಗಿ ನೋಡಿದೆ. ವ್ಯಕ್ತಿಯೊಬ್ಬ ಓಡುತ್ತಿದ್ದಾನೆ. ನನ್ನ ಕೈ ನೋಡಿದೆ, ಮೊಬೈಲ್ ಇಲ್ಲದೆ ಖಾಲಿಯಾಗಿತ್ತು. ಅಷ್ಟು ನಾಜೂಕಾಗಿ ಅವನು ಕಿತ್ತಿದ್ದ. ಕಿರುಚಿದೆ...! ದಾರಿ ಹೋಕರು ನನ್ನನ್ನೇ ನೋಡುತ್ತಿದ್ದರು. ಕೆಲವರು ನಗುತ್ತಿದ್ದರು. ಮುಜುಗರ ಅನ್ನಿಸಿತು. ಆ ಕಳ್ಳ ಸರಕ್ಕನೇ ಪಕ್ಕದ ಗಲ್ಲಿಯಲ್ಲಿ  ನನ್ನ ಮೊಬೈಲ್‍ನೊಂದಿಗೆ ಮರೆಯಾದ.ಯಾರದೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅವರ ಪಾಡಿಗೆ ಅವರು ನನ್ನ ಪಕ್ಕದಲ್ಲೇ ನಡೆದು ಹೋಗುತ್ತಿದ್ದರು. ಹಾಡ ಹಗಲಲ್ಲೇ ಇಂತಹ ಕಸಿದುಕೊಳ್ಳುವ ಘಟನೆ ಇಲ್ಲಿ ಸರ್ವೇ ಸಾಮಾನ್ಯ.  ! ಹಾಗಾಗಿ, ಎಲ್ಲರೂ ಕಳ್ಳನನ್ನು ನೋಡುವ ಬದಲು ನನ್ನನ್ನೇ ನೋಡುತ್ತಿದ್ದರು.
          ಘಟನೆ ನಡೆದು ಮೂರು ದಿನಗಳಾಗಿಲ್ಲ.ಒಂದು ಬೆಳಿಗ್ಗೆ ಕಚೇರಿಗೆ ಕರೆ ಬಂತು. ನಮ್ಮ ಕಚೇರಿಯ ಕ್ಯಾಷಿಯರ್ ಸಂಜೆ 5.30 ಗಂಟೆಗೆ ಕೆಲಸ ಮುಗಿಸಿ ಟ್ಯಾಕ್ಸಿ ಕಾರಿನಿಂದ ಇಳಿದು ಸ್ವಲ್ಪ ದೂರದಲ್ಲೇ ಇರುವ ಮನೆಗೆ ನಡೆದು ಹೋಗುತ್ತಿದ್ದಳು. ಅವಳಲ್ಲಿ ತಿಂಗಳ ಸಂಬಳದ ಹಣವೂ ಇತ್ತು. ಮನೆ ಪಕ್ಕದಲ್ಲೇ ದಾಳಿಗಿಳಿದ ಲೂಟಿಗಾರರು ಹಣಕ್ಕೆ ಪೀಡಿಸಿದ್ದರು. ಈ ಹೆಂಗಸು ವಾಗ್ಯುದ್ದಕ್ಕೆ ನಿಂತಳು. ಬೊಬ್ಭೆ ಹಾಕುತ್ತಿದ್ದಂತೆ ಚಾಕು ತೆಗೆದು ಅವಳ ಮೂಗು ಮತ್ತು ಬಾಯಿಯನ್ನು ಸೀಳಿಯೇ ಬಿಟ್ಟರು. ರಕ್ತದ ಓಕುಳಿ..! ಹಣ-ಮೊಬೈಲ್‍ನೊಂದಿಗೆ ಪರಾರಿಯಾದರು. ಈ ಹೆಂಗಸು ಮಾರಕ ಚೂರಿ ಇರಿತದಿಂದ ಎರಡು ತಿಂಗಳು ಕಚೇರಿಗೇ ಬರಲಿಲ್ಲ. ಇಂತಹದ್ದು ಬೇಕಾದಷ್ಟು ನಮ್ಮ  200 ಕ್ಕಿಂತಲೂ ಅಧಿಕ  ಕೆಲಸದವರಿಂದ ತುಂಬಿರುವ ಕಂಪೆನಿಯ ದೈನಂದಿನ ಘಟನೆಗಳ ಮಾತುಗಳು. ಕೇಳಿ ಭಯಭೀತನಾಗಿದ್ದೆ. ಎಚ್ಚರವೂ ವಹಿಸಿದ್ದೆ. ನನಗೆ ಸಿಕ್ಕಿದ ಸಲಹೆ ಎಂದರೆ,ದಾಳಿ ನಡೆಸುವ ಸಂದರ್ಭ ಏನೂ ಮಾತಾಡಬಾರದು. ದಾಳಿಕೋರರು ಕೇಳಿದ್ದನ್ನು ಕೊಟ್ಟು ಬಿಡಬೇಕು. ವಾಗ್ಯುದ್ಧಕ್ಕೆ ನಿಂತರೆ ಖಂಡಿತಾ ಜೀವಕ್ಕೆ ಆಪತ್ತು. ಮನುಷ್ಯರನ್ನು ಮನುಷ್ಯರೇ  ಬೀಭತ್ಸವಾಗಿ ಹರಿತವಾದ ಚೂರಿಗಳಿಂದ ಕತ್ತರಿಸುವುದು. ಅಂದರೆ, ಮನುಷ್ಯರು ಮತ್ತು ಹರಕೆಗೆ ಕತ್ತು ಕುಯ್ಯುವ ಕೋಳಿ-ಕುರಿಗಳಿಗಗೂ ವ್ಯತ್ಯಾಸವಿಲ್ಲ ಅಂತ ಗೊತ್ತಾಯಿತು. ಇದು ಹಗಲು ಲೂಟಿ ಎಂಬ ನಡೆದಾಡುವ ಹೆಣಗಳ ನೈಜ ಸ್ಪಷ್ಟ ಜೀವನಗಾಥೆ.!
          ದಿನಗಳ ಸಂಜೆಗಳು ಇಲ್ಲಿ ಭಯಾನಕ..! ಅದು ಆರರ ನಂತರ ಹಗಲು ಲೂಟಿಗಳು ಸರ್ವೇ ಸಾಮಾನ್ಯ. ಕ್ಯಾಮರೂನಿನ ಡ್ವಾಲಾದಲ್ಲಿ ಮಾತ್ರ ಇದು ದೈನಂದಿನ ಚಟುವಟಿಕೆ. ಒಂದಂತೂ ಹೆಣ ರಸ್ತೆಯಲ್ಲಿ ಬೀಳುತ್ತವೆ. ದಿನಕ್ಕೆ ಹತ್ತಂತೂ ಮುಖ-ಕಾಲು-ಕೈಗಳು ಹಿಗ್ಗಾಮುಗ್ಗಾ ಕತ್ತರಿಸಿಕೊಂಡು ಹೆಣಗಳ ಕಪಾಟಿನಂತಿರುವ ಇಲ್ಲಿನ ಆಸ್ಪತ್ರೆಗಳಲ್ಲಿ  ಬಿದ್ದಿರುತ್ತವೆ.ಮುಟ್ಟಬೇಕಾದರೂ ಮುಟ್ಟಿದವರೆಲ್ಲರಿಗೂ ಕೈ ಬಿಸಿ ಮಾಡಬೇಕು. ಇಲ್ಲದಿದ್ದರೆ ಬದುಕುವ ಜೀವವೂ ಹೆಣವಾಗುತ್ತವೆ. ಅಂತಹ ಸಾಯುವವರ ಸಂಖ್ಯೆಗೆ ಇಲ್ಲಿ ದಾಖಲೆಯಿಲ್ಲ. ಇದು  ಲೂಟಿಗಾರ ಬದುಕಿನೊಂದಿಗೆ ಹಾಸುಹೊಕ್ಕಾಗಿರುವ  ಕ್ಯಾಮರೂನ್ ಜೀವನ ಪುಟ. ಫ್ರೇಂಚ್ ಭಾಷೆಯಲ್ಲಿ ಈ ಹಗಲು ಲೂಟಿಗಾರರ ಗುಂಪಿಗೆ " ನಗಾ ಬೋಕು" ಅನ್ನುತ್ತಾರೆ. ಕಳ್ಳನಿಗೆ " ಬಾಂದಿ " ಅನ್ನುತ್ತಾರೆ. ರಸ್ತೆಯ ಎಲ್ಲೆಂದರಲ್ಲಿ ಇವರ ಓಡಾಟ ನೊಣಗಳಂತೆ ಕಂಡು ಬರುತ್ತವೆ.ಸಂಜೆಯಾದಂತೆ ಚಟುವಟಿಕೆ ಮೈ ಸೆಟೆದುಕೊಳ್ಳುವೆ.
          ಸಾಮಾನ್ಯವಾಗಿ ಇಲ್ಲಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿ ನಡೆಯುತ್ತವೆ ಜಗಜ್ಜಾಹೀರು ಲೂಟಿ ಪ್ರಸಂಗ . ಕ್ರಿಸ್‍ಮಸ್‍ ಹಬ್ಬದ ಸಂಭ್ರಮದಲ್ಲಿ  ವ್ಯಾಪಾರ ವಹಿವಾಟುಗಳು ಹೆಚ್ಚು.ಜನರ ಓಡಾಟವೂ ಹೆಚ್ಚು. ದಾರಿ ಮಧ್ಯೆಯೂ ನಡು ಹಗಲಲ್ಲಿ  ನೇರವಾಗಿ ಹಣಕ್ಕಾಗಿ ದಾಳಿ ನಡೆಯುತ್ತದೆ. ಟ್ಯಾಕ್ಸಿ ಕಾರುಗಳಲ್ಲಿ ಸಹ ಪ್ರಯಾಣಿಕರೊಂದಿಗೆ ಹೋಗುವಾಗ ಯಾರು ಲೂಟಿಗಾರ ಎಂದೇ ತಿಳಿಯುವುದಿಲ್ಲ. ಕಾರಿನೊಳಗೆ ನೇರವಾಗಿ ಕುತ್ತಿಗೆಗೆ ಚಾಕು ಇಟ್ಟು ಬಿಡುತ್ತಾರೆ. ಜೊತೆಗೆ ಚಾಲಕನಿಗೂ. ಬೊಬ್ಬೆ ಹೊಡೆಯುವಂತಿಲ್ಲ, ಏನೂ ಮಾತಾಡುವಂತಿಲ್ಲ. ಕೈಯಲ್ಲಿರುವ ಏನೆಲ್ಲಾ ಬೆಲೆಬಾಳುವ ವಸ್ತುಗಳುಂಟೋ ಕೊಟ್ಟು ಬಿಟ್ಟರೆ, ಜೀವ ಬಿಟ್ಟು ಕಾರಿನಿಂದ ಇಳಿದು ಅಲ್ಲೇ ಇರುವ ಗಲ್ಲಿಯಲ್ಲಿ ಮರೆಯಾಗುತ್ತಾರೆ.
          ಟ್ಯಾಕ್ಸಿ ಕಾರುಗಳಿಗಿಂತ ಬೈಕ್ ಬಾಡಿಗೆದಾರರು ಕ್ಯಾಮರೂನಿನಲ್ಲಿ ಹೆಚ್ಚು. ಒಮ್ಮೆಗೇ ಮೂರು ಮಂದಿಯನ್ನೂ ಡ್ವಾಲಾದ ಎಲ್ಲೆಂದರಲ್ಲಿ ಹೊತ್ತು ಸಾಗುತ್ತಾರೆ. ಫ್ರೇಂಚ್‍ ಭಾಷೆಯಲ್ಲಿ " ಬೆನ್ಸ್ ಕಿನ್‍" ಅಂತ ಇವರುಗಳಿಗೆ ಹೆಸರು. ಹಗಲು ಲೂಟಿಗಾರರ ಗುಂಪಿನಲ್ಲಿ ನೇರ ಸಂಪರ್ಕ ಹೊಂದಿರುವವರು ಇವರೇ. ಅದೇ ರೀತಿ ಇವರೇ ಹೆಚ್ಚಿನ ಪಾಲು ಲೂಟಿಗಾರರಾಗಿದ್ದಾರೆ. ರಸ್ತೆ ಬದಿಯ ಪ್ರಯಾಣಿಕರನ್ನು ತಲಪಿಸುವ ಸ್ಥಳಕ್ಕೆ ಕೊಂಡೊಯ್ಯುವ ನಾಟಕವಾಡಿ ಜನನಿಬಿಡ ಪ್ರದೇಶಕ್ಕೆ ಕೊಂಡೊಯ್ಯುತ್ತಾರೆ. ಲೂಟಿ ಮಾಡಿ ಅಲ್ಲೇ ಪ್ರಯಾಣಿಕರನ್ನು ಬಿಟ್ಟು ಪರಾರಿಯಾಗುತ್ತಾರೆ. ಅಥವಾ ಲೂಟಿಗಾರ ಗುಂಪಿಗೆ ಸೂಚನೆ ಕೊಡುತ್ತಾರೆ. ಸ್ಥಳಕ್ಕೆ  ತಲಪಿದಂತೆ ,ಸೂಚಿಸಿದ ಲೂಟಿಗಾರರು ದಾಳಿ ಪ್ರಾರಂಭಿಸುವಾಗ  ಪರಾರಿಯಾಗುತ್ತಾರೆ. ಈ ಟ್ಯಾಕ್ಸಿ ಕಾರು ಲೂಟಿ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸುವವರು ರೂಪವತಿ ಯುವತಿಯರು ಮತ್ತು ಹೆಂಗಸರು. ಪ್ರಯಾಣಿಕರು ತುಂಬಿರುವ ಟ್ಯಾಕ್ಸಿ ಕಾರುಗಳನ್ನು ತಡೆದು ಜನನಿಬಿಡ ಪ್ರದೇಶದ ವಿಳಾಸ ಚಾಲಕನಿಗೆ ಕೊಟ್ಟು ಲೂಟಿಗಾರರೊಂದಿಗೆ ಕೈ ಜೋಡಿಸುತ್ತಾರೆ. ಅದೇ ರೀತಿ ಟ್ಯಾಕ್ಸಿ ಕಾರು ಚಾಲಕರು ಲೂಟಿ ಪ್ರಕರಣಗಳಲ್ಲಿ ಹಿಂದೆ ಉಳಿದಿಲ್ಲ. ಒಂದೊಕ್ಕೊಂದು ಸಂಪರ್ಕದೊಂದಿಗೆ ಕೈ ಜೋಡಿಸಿದ ಜೀವನ ಇವರದ್ದಾಗಿದೆ.

          ನನ್ನನ್ನು ಹೆಣ ಮಾಡಿದ ಪ್ರಸಂಗ ನೋಡಿ..!  ಅದು ಸಂಜೆ ಆರರ ಸಮಯ. 2009 ರ ಡಿಸೆಂಬರ್ ಭರ್ಜರಿ ಕ್ರಿಸ್‍ಮಸ್‍ ಸಡಗರ. ನಮ್ಮ ಕಚೇರಿ ಡ್ವಾಲಾದ ಅಕ್ವಾ ಅನ್ನುವ ಸ್ಥಳದಲ್ಲಿದೆ.ಇಲ್ಲಿಂದ  2 ಕೀ.ಮೀ.ದೂರದ ಬೊನಂಜೋ ಅನ್ನುವ  ಜಾಗಕ್ಕೆ ಔಷಧಿ ಖರೀದಿಸಲು ತಕ್ಷಣವೇ ಹೋಗಬೇಕಾಗಿತ್ತು.ನಮ್ಮ ಕಂಪೆನಿಯ ಬೈಕೊಂದರಲ್ಲಿ  ಸಹ ಉದ್ಯೋಗಿಯೊಂದಿಗೆ ಹೊರಟೆ. ಹಿಂಬದಿಗೆ ಕುಳಿತ ನಾನು, ಅವನು ಬೈಕ್‍ ಚಾಲಿಸುತ್ತಿದ್ದ.  ಅಕ್ವಾದಿಂದ  ಬೊನಂಜೋವರೆಗಿನ  ಅರ್ಧದಷ್ಟು ದಾರಿ ಸಂಪೂರ್ಣ ಜನಜಂಗುಳಿ. ಅದರ ನಂತರ ಸ್ವಲ್ಪ  ನಿರ್ಜನ ಪ್ರದೇಶ. ಅಲ್ಲೇ ಒಂದು ಬೃಹದಾಕಾರದ ವೃತ್ತವಿದೆ. ವಾಹನ ಓಡಾಟ ಭರ್ಜರಿಯಾಗಿ ನಡೆಯುತ್ತಿತ್ತು. ಅಂದಾಜು ಅಳತೆಯ ಜನರ ಚಲನೆಯೂ ಇತ್ತು. ಅವರ ನಡುವೆ ಕೊಲೆಗಡುಕ ಇದ್ದ ಅನ್ನುವ ಅನುಮಾನವೂ ನಮ್ಮಿಬ್ಬರಿಗೂ ಇರಲಿಲ್ಲ. ವೃತ್ತವನ್ನು ಆವರಿಸಿದ ರಸ್ತೆ ಸ್ವಲ್ಪ ಇಳಿಜಾರು. ಬೈಕನ್ನು ಈತ ನ್ಯೂಟ್ರೋಲ್‍ಗೆ ತಂದು ಚಾಲಿಸಿದ. ಪಕ್ಕದಲ್ಲೇ ನಾಲ್ವರು ಹೋಗುತ್ತಿದ್ದರು. ಈರ್ವರು ಹಿಂದೆ, ಇನ್ನೀರ್ವರು ಮುಂದೆ. ನಮ್ಮನ್ನು ಗಮನಿಸದಂತೆ ಹೋಗುತ್ತಿದ್ದರು. ತಕ್ಷಣ ಬೈಕನ್ನು ಮೊದಲ ಗೇರಿಗೆ ತರುವಷ್ಟರಲ್ಲಿ, ಅದು ಅಲ್ಲೇ ಸಿಕ್ಕಿಕೊಂಡಾಂತಾಗಿ ತಿರುವಿನ ಬದಿಯಲ್ಲೇ ನಿಂತು ಬಿಟ್ಟಿತು.
          ಆ ಕ್ಷಣದಲ್ಲೇ ಆ ನಾಲ್ವರಲ್ಲಿ ಓರ್ವ ಬೈಕಿನ ಹಿಂಬದಿಗೆ ಬಂದು ನನ್ನೆರಡು ಕೈಗಳನ್ನು ಮುರಿದು ಹಿಂಬದಿಗೆ ಹಿಡಿದ. ಮತ್ತೋರ್ವ ನನ್ನ ಸಹ ಉದ್ಯೋಗಿಯ ಎರಡು ಕೈಗಳನ್ನೂ ಅದೇ ರೀತಿ ಹಿಡಿದ. ಮತ್ತೀರ್ವರಲ್ಲಿ ಓರ್ವ ನನ್ನ ಕುತ್ತಿಗೆಗೆ ಕೈ ಹಾಕುತ್ತಿದ್ದಂತೆ ನಾನು ಕಿರುಚಿ ಮಾತಾಡಲೂ ಶುರು ಹಚ್ಚಿದೆ. ಇನ್ನೋರ್ವ ನೇರವಾಗಿ ನನ್ನ ಕುತ್ತಿಗೆಗೆ ಚಾಕು ಇಟ್ಟೇ ಬಿಟ್ಟ.! ನಾನು ಸ್ಥಬ್ಧನಾದೆ. ಚಾಕು ಇಟ್ಟವನು ನನ್ನ ಬಾಯಿಯನ್ನು  ತನ್ನ ಬಲಿಷ್ಠ ಇಷ್ಟಗಲದ ಕೈಗಳಿಂದ ಮುಚ್ಚಿದ. ಯಾವುದೋ " ಡ್ರಗ್ಸ್" ವಾಸನೆ ಅವನ ಕೈಗಳಿಂದ ಮೂಗಿಗೆ ಬಡಿಯಿತು. ನನ್ನ ಕಣ್ಣೆರಡು ಮಂಕಾದಂತೆ ಅನ್ನಿಸಿತು. ಮುಂಬದಿಯಲ್ಲಿ ಕೊಸರಾಡುತ್ತಿದ್ದ ನನ್ನ ಸಹೊದ್ಯೋಗಿಯ ಬಾಯಿ - ಗಂಟಲನ್ನು ಇನ್ನೋರ್ವ ಭದ್ರವಾಗಿ ಹಿಡಿದ. ಕುರಿ ಬಲಿಗೆ ಸಿದ್ಧವಾಯಿತು...! ಅನತಿ ದೂರದಲ್ಲಿ ಎರಡು ಹದ್ದುಗಳು ಅಗಸದಲ್ಲಿ ಸುತ್ತಿ ಸುತ್ತಿ ಹಾರಾಡುತ್ತಿದ್ದವು. ಹಕ್ಕಿಗಳ ಭಯಭೀತ ಕಲರವ ತಾರಕಕ್ಕೇರಿದ್ದು ಕೇಳಿಸುತ್ತಿತ್ತು.!
          ಇಷ್ಟೇಲ್ಲಾ ನಡೆಯುವಾಗ ಅಲ್ಲೇ ರಸ್ತೆಯಲ್ಲಿ ಓಡಾಡುತ್ತಿದ್ದ ಕಾರು-ಬೈಕುಗಳು ಅಲ್ಲಲ್ಲೇ ನಿಂತಿದ್ದವು. ಕೆಲವರು ಕೆಳಗಿಳಿದು ಮುಂದಿನದನ್ನು ಎದುರು ನೋಡುತ್ತಿದ್ದರು. ಲೂಟಿಗಾರರು ಅದ್ಯಾವುದರ ಪರಿವೇ ಇಲ್ಲದೆ ಕೋಳಿಯ ಕತ್ತು ಹಿಡಿದಂತೆ ನಮ್ಮನ್ನು ಹಿಡಿದಿದ್ದರು. ನನ್ನ ಜೇಬಿನಲ್ಲಿ ಔಷಧಿಗೆಂದು ಇಟ್ಟಿದ್ದ 50 ಸಾವಿರ ಕ್ಯಾಮರೂನ್ ಫ್ರಾಂಕ್,ಮೊಬೈಲ್ ಅನ್ನು ಅವರಲ್ಲಿ ಓರ್ವ ಮೊದಲು ತೆಗೆದಪ್ಯಾಂಟ್ ಜೇಬಿಗೆ ಕೈ ಹಾಕಿ ಅದರಲ್ಲಿದ್ದ 15  ಸಾವಿರ ಫ್ರಾಂಕ್‍ಗೆ ತಡಕಾಡುತ್ತಿದ್ದ. ಹೆಣವಾಗಿದ್ದ ನನ್ನ ದೇಹದ ಕುತ್ತಿಗೆಗೆ ಇಟ್ಟ ಚಾಕು, ಅಲ್ಪಸ್ವಲ್ಪ ಸುರಿದ ರಕ್ತದಿಂದ ಗೆರೆಗಳನ್ನು ಮೂಡಿಸ ತೊಡಗಿತ್ತು. ಮಲಗಿದ್ದ ಹೆಣಗಳ ಬಿಳಿ ಬಟ್ಟೆ ಸರಿಸಿದಾಗ ನನ್ನ ಮುಖ ಕಾಣತೊಡಗಿದವು. ನನ್ನ 4 ವರ್ಷದ ಮಗು ಮುಗ್ದವಾಗಿ ಕಣ್ಣಲ್ಲಿ ನಗುತ್ತಿದ್ದ. ಮುಖಮುಚ್ಚಿ ಕೂದಲು ಬಿಚ್ಚಿಟ್ಟು ಅಳುತ್ತಿದ್ದ ನನ್ನ ಪತ್ನಿಯ ಹಾದುಹೋದ ನೆರಳನ್ನು  ಅಲ್ಲಿ ಕಂಡೆ. ಅಲ್ಲೇಲ್ಲಾ ಜನರ ಮುಖದಲ್ಲಿ ಕಣ್ಣೀರ ಭಾಷ್ಪ ಹರಳುಗಟ್ಟುತ್ತಿದ್ದವು.
          ಮೊಬೈಲ್, ಹಣ,ಒಂದು ಚಿನ್ನದ ಉಂಗುರ ಎಲ್ಲವನ್ನೂ ಲೂಟಿ ಮಾಡಿ ಅಲ್ಲೇ ಪಕ್ಕದ ಕಾಲು ಗಲ್ಲಿಯಲ್ಲಿ ಸದ್ದಿಲ್ಲದೆ ಮರೆಯಾದರು. ಮತ್ತೇನೋ ಒಂದು ಉಳಿದ ಅನುಭವ ..! ಗಾಬರಿಯಿಂದ ವಿಚಲಿತಗೊಂಡ ಸಹೊದ್ಯೋಗಿಯ ಕಣ್ಣುಗಳಲ್ಲಿ ತೊಟ್ಟಿಕ್ಕಿದ ಹನಿಗಳು. ಹಿಡಿದ ರಭಸಕ್ಕೆ ಗಂಟಲು ಕಟ್ಟಿ  ಒಂದೇ ಉಸಿರಿಗೆ ಕೆಮ್ಮ ತೊಡಗಿದೆ. ಜೀವ ಇತ್ತು. ಮತ್ತೊಮ್ಮೆ  ಕೆಮ್ಮಿದೆ, ಸುತ್ತಲೂ ಅಲ್ಲೆಲ್ಲಾ ನಿಂತಿದ್ದ ಕಾರು-ಬೈಕುಗಳು ಒಂದೊಂದಾಗಿ ತೆರಳ ತೊಡಗಿದವು.ನಮ್ಮಿಬ್ಬರದೂ ಮಾತಿಲ್ಲದ ನೋಟ..! ಜಗ್ಗಾಟದಲ್ಲಿ ಕೆಳಗೆ ಬಿದ್ದಿದ್ದ ಬೈಕ್‍ನ "ಕೀ"ಯನ್ನು ಹೆಕ್ಕಿ  ಬೈಕ್ ಚಾಲಿಸಿದ.ಔಷಧಿಯಿಲ್ಲದೆ ಬರಿಗೈಯಲ್ಲಿ ಕಂಪೆನಿ ವಾಸಸ್ಥಾನಕೆ ತಲಪಿದೆವು.ಕೈ ಕಾಲೆಲ್ಲಾ ನಡುಗುತ್ತಿದ್ದವು.ಯಾರಿಗೂ ಹೇಳಿ ಪ್ರಯೋಜನವಿಲ್ಲ , ಯಾರಿಗೂ ಹೇಳದೆ ಹಾಗೇ ಮಲಗಿದ್ದೆವು.
          ಸಾವಿನ ಬಗ್ಗೆ ಸಾವಿರ ಮಾತಾಡಿದ್ದೆ. ಜೀವದ ಬಗ್ಗೆ ಬೇಕಾದಷ್ಟು  ಆಲೋಚಿಸಿದ್ದೆ. ಪ್ರಾಣ ಹೋಗುವ ಆ ಸಂದರ್ಭಗಳ ಕುರಿತು ಆಲೋಚಿಸಿರಲಿಲ್ಲ. ಎಷ್ಟೊಂದು ಕಠಿಣ ಸಂದರ್ಭ ಅದು ?.ತಮಗೆ ತಾವೇ ಆತ್ಮಹತ್ಯೆ ಮಾಡಿಕೊಳ್ಳುವವರ ಧೈರ್ಯದ ಬಗ್ಗೆ ಮುಟ್ಟಿ ನೋಡಕೊಳ್ಳಬೇಕೆನಿಸಿತು.ಮನಸ್ಸು ಶ್ರೇಷ್ಠ ಸಮುದ್ರ, ಅಲ್ಲಿ ನವೀರಾದ ಅಲೆಗಳು ಬಡಿಯುತ್ತವೆ... ಬಿರುಸಾದ ಬಿರುಗಾಳಿ ಬೀಸಿದಾಗ ದೋಣಿ ನಿಯಂತ್ರಣ ತಪ್ಪಿ ಮಗುಚುತ್ತದೆ...!
          ಈ ಘಟನೆ ಕಳೆದು  ಒಂದು ವಾರ ಕಳೆಯಿತು. ಒಂದು ಶನಿವಾರ ರಾತ್ರಿ 8.00 ಗಂಟೆಗೆ ಸುದ್ದಿ ಬಂತು. ನಮ್ಮ ಕಂಪೆನಿಯ  ಈರ್ವರನ್ನು ಲೂಟಿಗಾರರು ಧಾಳಿ ನಡೆಸಿ,ಅವರು ಚಾಲಿಸುತ್ತಿದ್ದ ಬೈಕ್‍ನೊಂದಿಗೆ ಪರಾರಿಯಾದರು ಅಂತ. ತಕ್ಷಣವೇ ಸ್ಥಳಕ್ಕೆ ಧಾವಿಸಿದೆವು. ಓರ್ವ ಚೂರಿ ಇರಿತಕ್ಕೆ ಹೊಟ್ಟೆ, ಎದೆ ತಲೆಯಿಂದ ಸುರಿಯುತ್ತಿದ್ದ ರಕ್ತದಲ್ಲಿ  ಬಿದ್ದಿದ್ದ.  ಇನ್ನೋರ್ವ ಮುಖ ದವಡೆ ಮುರಿದು, ಮುಂಭಾಗದ ಮೂರು ಹಲ್ಲುಗಳು ಕಿತ್ತು ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪಕ್ಕದಲ್ಲೇ ಒದ್ದಾಡುತ್ತಿದ್ದ. ಅವರುಗಳನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಬಂದೆವು. ಮುಂಜಾನೆ  ಆಸ್ಪತ್ರೆಗೆ ಧಾವಿಸಿ, ಮಂಚದಲ್ಲಿ ಮಲಗಿದ್ದ ಈರ್ವರ ಗಂಟಲಿನಿಂದ ಭಯ ಮಿಶ್ರಿತ ಸ್ವರ ಹೊರಟಾಗ ಸಮಾಧಾನವಾಯಿತು. ಅಬ್ಬಾ..! ಎಲ್ಲಕ್ಕಿಂತ ದೊಡ್ಡದು ಜೀವ. ಎದ್ದು ಮಾತಾಡುತ್ತಿದೆ. ಆಫ್ರೀಕಾದಲ್ಲಿ ಬದುಕುತ್ತೇವೆ ನಾವು.ಕುಟುಂಬ ಬಡತನದ ಭಾರ ಹೊತ್ತು. ನಾಲ್ಕಾರು ಜೀವಗಳು ಬದುಕಲಿ ಎಂಬ ಆಶಯಕ್ಕೆ ನಕ್ಕು..!
-ರವಿ ಮೂರ್ನಾಡು.

New post on ನಿಲುಮೆ

ಅವನು ಕುತ್ತಿಗೆಗೆ ಚಾಕು ಇಟ್ಟ, ದೇಹ ಹೆಣವಾಗಿತ್ತು :ಆಫ್ರೀಕಾದ ಕ್ಯಾಮರೂನ್ ಲೂಟಿ ಪ್ರಸಂಗ !

by parupattedara
-ರವಿ ಮೂರ್ನಾಡು
 ಅಲ್ಲೆಲ್ಲೋ ಕೊಲೆಯಾದ ವ್ಯಕ್ತಿಯ ಬಂಧುಗಳು ನ್ಯಾಯಕ್ಕಾಗಿ ಗೋಗರೆಯುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ಕುಳಿತು ಅದು ಅರಿವಿಗೆ ಬಂದಿರಲಿಲ್ಲ. ಪುಸ್ತಕವೊಂದಕ್ಕೆ ಆಸ್ಪತ್ರೆಯ ಶವಾಗಾರದಲ್ಲಿ ಮಲಗಿದ ಹೆಣದ ಟಿಪ್ಪಣಿ ಮಾಡುವಾಗಲೂ ಅದು ಗೊತ್ತಿರಲಿಲ್ಲ. ನನ್ನ ಕುತ್ತಿಗೆಗೆ ಚಾಕು ಇಟ್ಟಾಗ ನಾನೇ ಹೆಣವಾಗಿದ್ದೆ. ಆಫ್ರೀಕಾದ ಕ್ಯಾಮರೂನಿನಲ್ಲಿ ಲೂಟಿಗಾರರು ಸುತ್ತುವರಿದು ವಾಚು-ಮೊಬೈಲು-ಹಣಕ್ಕಾಗಿ ತಡಕಾಡಿ ಮುಗಿಸುವವರೆಗೂ ಜೀವ ಅವರ ಕೈಯಲ್ಲೇ ಇತ್ತು. ಸತ್ತ ದೇಹ  ನನ್ನಲ್ಲಿತ್ತು.  ಕತ್ತಿನಿಂದ ಚಾಕು ತೆಗೆದದ್ದೇ ತಡ, ಸತ್ತವನು ಎದ್ದು ಕುಳಿತಿದ್ದೆ. ..!

ಭಾನುವಾರ, ಜನವರಿ 15, 2012

ಅದೊಂದು ಹುಟ್ಟುಹಬ್ಬ..!


ಅವಳ ಹುಟ್ಟುಹಬ್ಬದ ದಿನ
ಕೇಕ್‍ ಕತ್ತರಿಸಿದ ಚಾಕುವಿನಲಿ
ಮಚ್ಚು ಎತ್ತಿದ ಶತ್ರುವಿನ
ಕೈ ಬೆರಳ ಗುರುತು ಇತ್ತು..!
ಅಮ್ಮನ ಮೊಲೆ ಹಾಲಿನ ರುಚಿಗೆ ಬೆಳೆದ
ನನ್ನ ದೇಹದ ರಕ್ತದ ಕಲೆಯಿತ್ತು
ದುಃಖ್ಖದ ಸ್ಪರ್ಶವಿತ್ತು..!

ಸಂತೋಷ ಕೇಳಿದ ಆ ದಿನ
ಬೇಡವೆಂದರೂ ಕಣ್ಮುಚ್ಚಿತು ಹಗಲು
ಮಬ್ಬು ಮೆತ್ತಿಕೊಂಡಿತು ರಾತ್ರಿ..!

ಕೈಬೀಸಿ ಕರೆದ ಹೋಟೇಲಿನಲಿ
ಮುಖಕ್ಕೆ ಮುಖ-ಬಾಂಧವ್ಯದ ಸಂಭ್ರಮ
ಎದೆ ಭಾರವನ್ನೆತ್ತಿ ತಿಂದ ಐಸ್‍ಕ್ರೀಂ
ಎಲ್ಲಿಂದಲೋ ಬೀಸಿದ ಬಿಸಿಗಾಳಿಗೆ ನೀರಾಯಿತು
ತುಟಿ-ಕೈಬೆರಳ ಸಂಧುಗಳಲಿ ಕೊಸರಾಡಿ
ಹುಟ್ಟುಹಬ್ಬದ ಬಟ್ಟೆಗೆ
ನೆನಪು ಮೆತ್ತಿಕೊಂಡಿತು....!

ಅಕ್ಕಪಕ್ಕದಲ್ಲೆಲ್ಲಾ
ಮಿಣುಕು ಬೆಳಕಿನ ಕಣ್ಣುಗಳು
ಬೆಂಕಿ ಸುಡುವ ನೋಟಗಳು
ನಾಲಿಗೆ ಚಪ್ಪರಿಸುವ ಮಾತುಗಳು
ಪ್ರೀತಿ-ಪ್ರೇಮದ ಹಣತೆಗೆ
ಕಡ್ಡಿ ಗೀಚುವ ಬೆರಳುಗಳು
ತೂಕಡಿಸುವ ಮಂಪರು ಬೆಳಕಿನಲಿ
ಇರುಳನ್ನು ಭೋಗಿಸುವವರು
ಸಂಜೆಗತ್ತಲೆಯ ಹಾಸಿಗೆಯಲಿ
ಕಾಣದ ಕೈಗೆ ಮಾರಾಟವಾದರು. !

ಬದುಕು ಕೇಳಿದ ಹುಟ್ಟುಹಬ್ಬ
ಅಮ್ಮನ ಮಮತೆಗೆ ಬಣ್ಣ ಹಚ್ಚಿತು
ಈ ಕೇಕ್‍-ಐಸ್‍ಕ್ರೀಂ
ಅವನ ಮಚ್ಚಿನ ಮೇಲೆ ರಂಗೋಲಿ ಇಟ್ಟವು
ಹುಟ್ಟುಹಬ್ಬದ ಸುಖಕೆ
ಕವಿತೆ ಮೈ ಗೀಚಿತು..!
-ರವಿ ಮೂರ್ನಾಡು.


ಸೋಮವಾರ, ಜನವರಿ 9, 2012

ವಿಲಾಪ ...!


-------------
ಏಕಿಂತ ಕೋಪ ?
ಮುಗಿಯದ ಪ್ರಲಾಪ
ಮುಗಿಯದಿದ್ದರೆ ತಣಿಯದೀ
ವಿರಹ ತಾಪ !

ಮುಖ ತಿರುಗಿ ನಿಂತರೂ
ನಿನ್ನದೇ ಮುಖ !
ಗಟ್ಟಿ ಗೋಡೆ ಕಟ್ಟಿದರೂ
ನಿನ್ನ ಕಣ್ಣ ದೀಪ !
ಎದೆ ಪರದೆ ಮುಚ್ಚಿದರೂ
ನಗು ಚಿತ್ರರೂಪ  !

ನೀ ಸ್ವಾಭಿಮಾನಿ
ನಾ ನಿನ್ನ ಅಭಿಮಾನಿ
ನಮ್ಮೊಳಗೇ ತಪ್ಪು
ಹೊಂದಿಕೆಯೇ  ಒಪ್ಪು
ಮುಗಿಸಿ ಬಿಡು ಕಣ್ಣೀರು
ತೆರೆದು ಪ್ರೇಮ ಪ್ರಲಾಪ !

ಬಾ ಇಲ್ಲಿ ಹಚ್ಚು
ಪ್ರೇಮದಾ  ಕಿಚ್ಚು
ಓಡಿಸು ಕತ್ತಲೆ ಹುಚ್ಚು
ಜಗದ ತರಗತಿಯೊಳಗೆ
ಬದುಕು ಕಪ್ಪು ಹಲಗೆ
ವಿಧಿ ಬಳಪ ಅದಕೆ !

ಶುಕ್ರವಾರ, ಜನವರಿ 6, 2012

ಅಲೆಮಾರಿಯ ಕವಿತೆ



ನಾನೊಬ್ಬ ಕವಿ, ಭಾವದ ಹಕ್ಕಿ
ಲಯಗಳ ಹುಡುಕಿ, ಪದಗಳ ಹೆಕ್ಕಿ
ಕವಿತೆಗೆ ಮಗುವಾದೆ ನಾನು !

ಬೀದಿಗೇ ಕರೆದ ಅನ್ನದ ಕೂಗಿನ
ಭಾವದ ಭಿಕ್ಷೆಗೆ ತಟ್ಟೆಯಾದೆ !
ಹಸುಳೆಯ ಅಳುವಿನ ಹಾಲ್ದುಟಿ ಹಸಿವಿಗೆ
ತಾಯ್ತನದ ಹಾಲಿಗೆ ರಕ್ತವಾದೆ  !

ತಂದೆ-ತಾಯಿಯ ಹೆಜ್ಜೆಗಳ ದಾರಿಗೆ
ಅನಾಥ ಮಗುವಿಗೆ ಜೊತೆಯಾದೆ !
ಕಸದ ತೊಟ್ಟಿಲಿನ ಮಗುವಿನ ಆತ್ಮಕೆ
ನಾಯಿ-ಕಾಗೆಗೆ ದೇಹವಾದೆ !
ನಾನೊಬ್ಬ ಕವಿ, ಭಾವದ ಹಕ್ಕಿ !

ಕಣ್ಣಿದ್ದು ಕಾಣದ, ಮುಟ್ಟಿದ್ದು ತೋಚದ
ಅಂಧರ ಕಣ್ಣಿಗೆ ಹಣತೆಯಾದೆ !
ಬಡವರ ನ್ಯಾಯಕೆ , ಮೂಕರ ಹಾಡಿಗೆ
ಪದಗಳ ಬರೆಯುತಾ ಸ್ವರವಾದೆ  !

ಊರೆಲ್ಲಾ ತುಳುಕಿ, ನಕ್ಕು ಹೊರಚೆಲ್ಲಿದ್ದ
ಕನಸುಗಳ ಆಯುತ್ತ ತೃಪ್ತನಾದೆ !
ಸಾಲು ಸಂಸಾರದ ಬೀದಿ ಅಂಗಳಕೆ
ಮಕ್ಕಳ ಆಟದ ಆಟಿಕೆಯಾದೆ  !
ನಾನೊಬ್ಬ ಕವಿ, ಭಾವದ ಹಕ್ಕಿ

ಏನೇಲ್ಲಾ ಬರೆದರು, ಏನೇನೋ ಹೆಸರುಗಳು
ಅಲೆಮಾರಿ ಕವಿತೆಗೆ ದಿಕ್ಕು ಯಾರೋ ?
ಚಿಂದಿಯ ಹುಡುಗರು ಅನ್ನಕೆ ಬಿದ್ದರು
ಎಂಜಲೆಲೆಗೆ ನನ್ನದೇ ಮುಖಗಳಿತ್ತೋ ??
ಅಲ್ಲೆಲ್ಲಾ ನನ್ನದೇ ಭಾವವಿತ್ತೋ?!
-ರವಿ ಮೂರ್ನಾಡು.

ಮಂಗಳವಾರ, ಜನವರಿ 3, 2012

ಮಾತು ಬರೆದ ಹಾಡು


ಎಲ್ಲೋ ತೇಲಿಸುತ್ತಿದೆ
ಗಾಳಿ ತಂದ ಹಾಡು
ಏನೋ ನೋವು
ದಿಗಿಲಿಗೆ ಬಿದ್ದಿದೆ ಎದೆಯು

ನಾನೇನು ಹೇಳಿದೆನೋ
ಅವರೇನು ತಿಳಿದರೋ
ಗೋಡೆಯಾಗಿದೆ ಮನವು

ಏನೋ ಹೇಳುತ್ತಿದೆ
ರಾಗ ಹಿಡಿದ ಮಾತು
ಉಸಿರಿಗೆ ಬಡಿದ ಸ್ವರವೂ

ನಡೆದ ಹೆಜ್ಜೆನ್ನಿಡಿದು
ಕಳೆದೆ ಹಾಜರಿ ನೆನೆದು
ಕರೆದಿದೆ ಎದೆಪುಟಗಳ ತೆರೆದು

ತಡೆಯಿತೋ ಸ್ವಾಭಿಮಾನ
ಮುಚ್ಚಿದರೂ ಮುಚ್ಚದ ಪ್ರೀತಿ
ಎಬ್ಬಿಸಿತೋ ಲೋಕದ ನೀತಿ

ನುಗ್ಗಲಿ ಗಾಳಿ ಹಾಡು
ಎದೆಗೂ ಕಿವಿ ಬಂದು ಗುನುಗಿ
ತೆರೆದಿದೆ ಮನ ಇದೋ ಕ್ಷಮಿಸಿ
-ರವಿ ಮೂರ್ನಾಡು.


ಸೋಮವಾರ, ಜನವರಿ 2, 2012

ರಸೀಯಾ ಅಕ್ಕ..!


ಹಲವು ವರ್ಷಗಳಿಂದ ಆಲೋಚಿಸುತ್ತಿದ್ದೆ. ಅಕ್ಕನನ್ನು ,ಅವಳ ಪುಟ್ಟ ಕಂದಮ್ಮನನ್ನು ಪುನಃ ಈ ಜಗತ್ತಿಗೆ ಕರೆ ತಂದು ಮಾತಾನಾಡಿಸಬೇಕೆಂದು. ಎದೆಯಲ್ಲಿ ಮಾತಾಡುತ್ತಾಳೆ, ಅವಳಿದ್ದಾಳೆ ಅನ್ನಿಸಿತು. ಕನಸುಗಳು ಇಲ್ಲೆ ಇವೆ, ಮಗುವಿನೊಂದಿಗೆ ಪಿಸುಗುಟ್ಟುತ್ತಿದ್ದಾಳೆ. ರಸೀಯಾ ಅಕ್ಕ....! ತೆಳ್ಳಗೆ-ಬೆಳ್ಳಗೆ ಇದ್ದವಳು ಮದುವೆಯ ದಿನ ನನಗೆ ಗೊತ್ತಿಲ್ಲದಂತೆ ಅಪ್ಪ ಹಂಸ ಕಾಕ , ತಾಯಿ ಬಿಪಾತುಮ್ಮ ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ವರ್ಷದ ನಂತರ ಸುದ್ದಿ ಬಂದದ್ದು. ಮಗುವಾದರೂ ಇರಬೇಕಿತ್ತು.
ಮನೆಯ ಒತ್ತಟ್ಟಿಯಲ್ಲೆ ಕುರಾನ್‍ ಪಠನೆಯ ಪ್ರಾರ್ಥನೆ  ಜೋಗುಳ ಹಾಡುತ್ತಿದ್ದವು. ಮಮತೆಯ ಸಾಂಗತ್ಯವನ್ನು ಬಿಪಾತುಮ್ಮ, ರಸೀಯಾ ಅಕ್ಕ, ಲತೀಫ ಬಿರಿಯಾನಿ ಕೊಟ್ಟು ತುಂಬಿಸಿದರು. ರಷೀಯಾ ಅಕ್ಕ ಪಕ್ಕನೇ ಎದುರಿನಲ್ಲಿ ಮಾತಾಡುತ್ತಾಳೆ. ಮೂರ್ನಾಡು ಪಟ್ಟಣದ ಅನತಿ ದೂರದಲ್ಲಿ ಹೊಲಿಗೆ ತರಬೇತಿ ಕೇಂದ್ರಕ್ಕೆ ಹೋಗಿ ಬಟ್ಟೆ ಹೊಲಿಯುವುದನ್ನು ಕಲಿತು, ನನಗೊಂದು  ಕೈಚೌಕ ಕೊಟ್ಟಿದ್ದಳು. ಹಲವು ವರ್ಷಗಳವರೆಗೆ ಅವಳಿಲ್ಲದ ಜಾಗದಲ್ಲಿ  ನೆನಪಿನ ಬೆವರು ಒರೆಸಿದ್ದೆ. ಶೀತವಾದಾಗ  ಗೊಣ್ಣೆಯನ್ನೂ ,ನಂತರದ ವರ್ಷಗಳಲ್ಲಿ ಅವಳಂತೆಯೇ ಅದು ಇಲ್ಲವಾಯಿತು.
ಒಂದು ರಂಝಾನ್‍ ದಿನ  ಚಿನ್ನದ  ಬಾರ್ಡರ‍್ ಇರುವ ಲಂಗ ದಾವಣಿಯೊಂದಿಗೆ ಅಂಗಳಕ್ಕೆ ಬಂದಿದ್ದಳು. ಮನೆ- ಅಂಗಳದಲ್ಲಿ ಚಿನ್ನದ ಬೆಳಕು ಸುರಿದು ಮಲ್ಲಿಗೆಯಾಗಿ ನಕ್ಕವಳು. ಮಲ್ಲಿಗೆ ಬಳ್ಳಿ  ಹಬ್ಬಿದಂತೆ ಸುತ್ತ ಪರಿಮಳ ಸುರಿದಿದ್ದಳು. ಹಾಗೆಯೇ ಇದೆ ಪರಿಮಳ ಉಸಿರಿನೊಂದಿಗೆ ಬೆರೆತಂತೆ. ಶ್ವೇತ ದಂತಗಳೆಡೆಯಲ್ಲಿನ ನಗು ಕಣ್ಣೆದುರಿನಲ್ಲೇ ಮಲ್ಲಿಗೆ ಮೊಗ್ಗುಗಳನ್ನು ನೋಡುವಾಗಲೆಲ್ಲಾ ಅರಳುತ್ತವೆ.
ಅವಳ ತಮ್ಮ ಲತೀಫನೊಂದಿಗೆ ಒಮ್ಮೆ ಜಗಳವಾಡಿದ್ದೆ.  ಲಗೋರಿಯಾಟದಲ್ಲಿ  ಚೆಂಡೆಸೆಯುವಾಗ ಮುಖಕ್ಕೆ ಬಿದ್ದದ್ದು.
"ನೀನೇನೋ ಚೆಂಡು ಮುಖಕ್ಕೆ ಎಸೆಯುತ್ತೀಯಾ?! ನೋಡು ಮೂಗಲ್ಲಿ ರಕ್ತ ಬರುತ್ತಿದೆ. ನಾನು ಸತ್ತು ಹೋಗುತ್ತೇನೆ" ಅಂತ ಹೇಳಿದ್ದ.
"ಸತ್ತು ಹೋದರೆ ಹೋಗು, ರಸೀಯಾ ಅಕ್ಕ ಇದ್ದಾಳೆ. ಅವಳೊಂದಿಗೆ ಚೆಂಡಾಡುತ್ತೇನೆ" ಅಂದಿದ್ದೆ.
ಇಬ್ಬರಿಗೂ ಜಗಳ
"ನೀನೇನೋ ನನ್ನನ್ನು ಸಾಯಲು ಹೇಳುತ್ತೀಯಾ?"
ನನ್ನ ಮುಸುಂಡಿಗೆ ಭಾರಿಸಿದ. ಹೊಡೆತ ಬಿದ್ದದ್ದು ಮೂಗಿಗೆ. ನನ್ನ ಮೂಗಲ್ಲೂ ರಕ್ತ.
"ನನ್ನ ಮೂಗಲ್ಲಿ ರಕ್ತ ಬರುತ್ತಿದೆ.. ನಾನು ಸತ್ತು ಹೋಗುತ್ತೇನೆ." ಅಂದಿದ್ದೆ.
ಪಕ್ಕದಲ್ಲೇ ಇದ್ದ ರಸೀಯಾ ಅಕ್ಕ ಅಳುತ್ತಿದ್ದಳು.
ನೋಡುತ್ತಲೇ ಇದ್ದ ಲತೀಫ.. ಅವನೂ ಅಳಲು ಪ್ರಾರಂಭಿಸಿದ. ಇವರಿಬ್ಬರನ್ನೂ ನೋಡಿ  ನಾನು ಪ್ರಾರಂಭಿಸಿದೆ. ಚೆಂಡಾಟ ಬಿಟ್ಟು ಅಳುವಾಟವನ್ನು ಕೇಳಿದ ಬಿಪಾತುಮ್ಮ  ಬಂದವರೇ ಮೂವರಿಗೂ ಭಾರಿಸಿದರು. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅವರೇ. ರಸೀಯಾ ಅಕ್ಕನೇ ನಮ್ಮಿಬ್ಬರ ಮೂಗಿಗೆ ಎರಡೂ ದಿನ  " ಡ್ರಾಪ್ಸ್" ಹಾಕಿದ್ದು. ಪಾಪ... ತಪ್ಪಿಲ್ಲದ ಅವಳಿಗೆ ಬಿಪಾತುಮ್ಮ  ಹೊಡೆದರು.
ಅವಳು, ಲತೀಫ ಮದ್ರಸಾಗೆ ಓದಲು ಹೋಗುತ್ತಿದ್ದರು. ಅಲ್ಲಿ ಅರಬ್ಬೀ ಕಲಿಸುತ್ತಾರೆ. ಮದ್ರಸಾದಲ್ಲಿ ಓದುವ ಪುಸ್ತಕವನ್ನು ಯಾರೂ ಮುಟ್ಟಬಾರದು, ಬಹಳ ಪವಿತ್ರವಾಗಿ ಓದಬೇಕೆಂದು ರಸೀಯಾ ಅಕ್ಕ ಹೇಳುತ್ತಿದ್ದಳು.ನಾನಂತೂ ಮುಟ್ಟಲೇ ಇಲ್ಲ.  ದಿನನಿತ್ಯ ಬೆಳಿಗ್ಗೆ ಐದೂವರೆ ಗಂಟೆಗೆ ಎದ್ದು ಅವಳು ಅರಬ್ಬೀ ಪಾಠ ಓದುವುದೇ ಚೆಂದ. ಅದೂ ಲಯಬದ್ಧವಾಗಿ. ಆಗಲೇ ಪಟ್ಟಣದ ರಾಮನ ದೇಗುಲದಲ್ಲಿ ಸುಪ್ರಭಾತ ಹಾಡು ಕೇಳುತ್ತಿತ್ತು. ಪ್ರತೀ ದಿನ ಅಕ್ಕ ಓದುವಾಗ  ಕಿವಿ ಕುರಾನ್‍ ಪಠಣದ ಲಯಬದ್ಧ ಗೀತೆ ವಾಚನವನ್ನು ಎದೆಯಲ್ಲಿ ತುಂಬಿಸಿಕೊಳ್ಳುತ್ತಿತ್ತು.
ಹಾಗೇ ಒಂದು ದಿನ  ಈ ಅರಬ್ಬೀ ಭಾಷೆಯಲ್ಲಿ ಏನು ಓದುತ್ತಿದ್ದೆ ಅಂತ ಕೇಳಿದ್ದೆ. ಅರಬ್ಭೀ ಲಿಪಿಯಲ್ಲಿರುವ ಮಲಯಾಳಂ ಮಾತುಗಳು ಅಲ್ಲಿರುತ್ತಿದ್ದವು. ದೇವರು ಒಬ್ಬನೇ. ಅವನನ್ನು ನಾವು ಅಲ್ಲಾ ಅನ್ನುತ್ತೇವೆ, ಶಿವ-ಕೃಷ್ಣ ಅನ್ನುತ್ತೇವೆ. ಚರ್ಚಿನಲ್ಲಿ  ಜೀಸಸ್ ಅನ್ನುತ್ತೇವೆ ಅಂದಿದ್ದಳು. ಇದೆಲ್ಲಾ ನಿನಗೆ ಹೇಗೆ ಗೊತ್ತು ಅನ್ನುವ ಪ್ರಶ್ನೆ ನನ್ನಲ್ಲಿ ಸಿದ್ಧವಾಗಿತ್ತು.
"ಕಳೆದ ವರ್ಷ ರಾಮ ಮಂದಿರದಲ್ಲಿ ಹರಿಕಥೆ ದಾಸರು ಹೇಳಿದ್ದು ನನಗೆ ನೆನಪಿದೆ" ಅಂದಿದ್ದಳು.
ಪ್ರತೀ ವಾರ್ಷಿಕ ರಾಮನವಮಿ ಹಬ್ಬಕ್ಕೆ ಹತ್ತು ದಿನಗಳ ಕಾಲ ನಡೆಯುವ ದೇವರ ಉತ್ಸವದಲ್ಲಿ ಹರಿಕಥಾ ದಾಸರು ಕಥಾ ಪ್ರಸಂಗ ನೀಡಿದ್ದನ್ನು ಗಮನವಿಟ್ಟು ಆಲಿಸುತ್ತಾಳೆ ಅಂತ ಗೊತ್ತಾಯಿತು. ದೇವರ ಬಗ್ಗೆ ತುಂಬಾ ಅಗಾಧವಾದ ನಂಬಿಕೆ ಹೊತ್ತ ಜೀವ ಅಂತ ಅವಳ ಮಾತು ಕೇಳುವಾಗ ಅನ್ನಿಸುತ್ತಿತ್ತು. ಒಳ್ಳೆ ಜ್ಞಾನವಂತ ಅಕ್ಕ  !
ಒಂದು ಗುರುವಾರ ಸಂಜೆ ಶಾಲೆ ಬಿಟ್ಟು ಬಂದಿದ್ದೆ. ಕಾಫಿ ಕುಡಿಯುತ್ತಿದ್ದಾಗ ಒಂದು ದಯಾನೀಯಾ ಆರ್ತಸ್ವರ . ಹೌದು..! ಅದು ರಸೀಯಾ ಅಕ್ಕ. ಕುಡಿಯುವ ಕಾಫಿಯನ್ನು ಅರ್ಧದಲ್ಲಿ ಬಿಟ್ಟು ಅಂಗಳಕ್ಕೆ ಹಾರಿ ಬಂದಿದ್ದೆ. ಅವರ ಮನೆಯ ಬಾಗಿಲು ಮುಚ್ಚಿತ್ತು. ಮತ್ತೊಮ್ಮೆ ಒಳ ಓಡಿ ಬಂದೆ.
"ನಿಜ ಹೇಳು ಯಾರು ಅವನು?" ತಂದೆ ಹಂಸ ಕಾಕನ ಚಾಕುವಿನಂತ ಮಾತು.
"ನನಗೆ ಗೊತ್ತಿಲ್ಲ ಅಪ್ಪ... ನನಗೆ ಗೊತ್ತಿಲ್ಲ.."  ಅಕ್ಕನ  ಅಂಗಲಾಚುವ ಮಾತು
ಬೆವತು ಬಿಟ್ಟಿದ್ದೆ. ಹಂಸ ಕಾಕನ ಮೇಲೆ  ಇನ್ನಿಲ್ಲದ ಕೋಪ  ಬಂದಿತು. ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಹೊಡೆಯುವುದನ್ನು ತಡೆಯಬೇಕೆನ್ನಿಸಿತು. ಪಾಪ..! ರಸೀಯಾ ಅಕ್ಕ ಹೆಚ್ಚು ಮೌನದಲ್ಲೆ , ತುಟಿಯಂಚಿನಲ್ಲೇ ನಗುವವಳು. ಪೆಟ್ಟನ್ನು ಹೇಗೆ ಸಹಿಸಿಕೊಳ್ಳುವಳೋ ಅಂತ ದಿಗಿಲು.  ಒಂದು ದಿನವೂ ಗಹಗಹಿಸಿ ನಕ್ಕಿದ್ದನ್ನು ಕೇಳಲಿಲ್ಲ. ಕೋಪದಲ್ಲಿ ಯಾರೊಂದಿಗೂ ಎಗರಾಡಿದ್ದು ಕಾಣಲಿಲ್ಲ. ಯಾರಾದರೂ ಹೆಚ್ಚು ಸ್ವರ ವಹಿಸಿ ಮಾತಾಡಿದರೂ  ಅವಳ ಕಣ್ಣಂಚಿನಲ್ಲಿ ಹನಿ ಗಟ್ಟುತ್ತಿದ್ದವು. ಮನೆಯ ಪಾತ್ರೆಗಳನ್ನು ತೊಳೆಯುವಾಗಲೂ  ಶಬ್ಧಗಳು ಕೇಳುತ್ತಿರಲಿಲ್ಲ. ಅಷ್ಟೋಂದು ಸದ್ದು ಗದ್ದಲ ಬಯಸದ ಮೃದು ಭಾವದ ಮಲ್ಲಿಗೆ ಮನಸ್ಸಿನವಳು ರಸೀಯಾ ಅಕ್ಕ. ಅವಳ ಅಳುವಿನ ಸ್ವರ ಕಣ್ಣನ್ನು ಒದ್ದೆ ಮಾಡಿತ್ತು.
ಸ್ವಲ್ಪ ಸಮಯದ ಬಳಿಕ ಎಲ್ಲವೂ ನಿಶ್ಯಬ್ಧ...! ಅಂದು ಅವಳು ಹೊರಗೆ ಬರಲೇ ಇಲ್ಲ. ಬೆಳಿಗ್ಗೆ ಶಾಲೆಗೆ ಹೊರಡುವಾಗ ಅಂಗಳಕ್ಕೆ ಬಂದೆ. ರಸೀಯಾ ಅಕ್ಕನ ಮುಖದಲ್ಲಿ ಆತ್ಮವಿಶ್ವಾಸ ಇರಲಿಲ್ಲ.
"ಏಕೆ ಹೊಡೆದರು ಅಕ್ಕ ?" ತಗ್ಗಿದ ದ್ವನಿಯಲ್ಲಿ ಕೇಳಿದ್ದೆ.  ಏನು ಮಾತಾಡಲಿಲ್ಲ.
"ಶಾಲೆಗೆ ಹೋಗಿ ಬರುತ್ತೇನೆ. ಸಂಜೆ ಹೇಳು" ಅಂದೆ.
"ಇಲ್ಲ, ಇಂದಿನಿಂದ ನಾನು ಹೊಲಿಗೆ ಕಲಿಯಲು ಹೋಗುವುದಿಲ್ಲ. ಅಪ್ಪ ಹೋಗಬೇಡ ಅಂದರು"
ಒಂದು ಸಂತೋಷವನ್ನು ಕಿತ್ತುಕೊಂಡ ಭಾವ ಮುಖದಲ್ಲಿ ಗೋಚರಿಸಿತು. ಈ ಮನೆಯ ನಾಲ್ಕು ಗೋಡೆಯಲ್ಲಿ  ಅರಳಿದ ಕನಸುಗಳು ಜಗತ್ತು ನೋಡುವ ಭಾಗ್ಯವನ್ನು ಕೆಳೆದುಕೊಂಡಿತು. ಅಪ್ಪ ಹಂಸ ಕಾಕ ಕಾರಣರಲ್ಲ. ಈ ಜಗತ್ತು. ಈ ಜಗತ್ತಿನ ಕಣ್ಣುಗಳು. ಮನೆಯ ಮಾನ ಕಾಪಾಡುವ ಹೆಣ್ಣು ಹೆತ್ತವರ ಧರ್ಮಕ್ಕೆ ,ಸಮಾಜದ ಹಾಳಾದ ಗೊಜಲುಗಳನ್ನು ಎಳೆ ಮನಸ್ಸು ಎತ್ತರಕ್ಕೆ ಅಲೋಚಿಸಿರಲಿಲ್ಲ.    
ಸಂಜೆ ಅವಳು ಅಂಗಳಕ್ಕೆ ಬರಲಿಲ್ಲ. ಲತೀಪ ಹೇಳಿದ, ಹೊಲಿಗೆ  ಕೇಂದ್ರದಲ್ಲಿ ಯಾರೋ ಹುಡುಗ ಪುಸ್ತಕದೊಳಗೆ ಪ್ರೇಮ ಪತ್ರ ಇಟ್ಟಿದ್ದ ಅಂತ. ಅದು ಅಪ್ಪ  ಹಂಸ ಕಾಕನಿಗೆ ಸಿಕ್ಕಿತು. ತುಂಬಾ ಕಟ್ಟುನಿಟ್ಟಿನ ಮನುಷ್ಯ. ಸಧ್ಯ, ಆ ಪತ್ರದಲ್ಲಿ ಯಾರ ಹೆಸರೂ ಇರಲಿಲ್ಲ.  ವಿಷಯ ಅಲ್ಲಿಗೇ ಗಪ್‍ಚಿಪ್ ಆಯಿತು.
ಅಂದಿನಿಂದ ರಸೀಯಾ ಅಕ್ಕ ನಮ್ಮೊಂದಿಗೆ ಚೆಂಡಾಡುವುದು ನಿಂತಿತು. ಸಂತೆಯಿಂದ ತಂದ ಪ್ಲಾಸ್ಟಿಕ್ ಲಾರಿ, ಬಸ್ಸುಗಳ ಓಡಾಡ ಅಂಗಳದಲ್ಲಿ ಬಂದ್ ಆಗಿತ್ತು. ಲತೀಫ ಮಾತ್ರ ನನ್ನೊಂದಿಗೆ ಆಡುತ್ತಿದ್ದ. ಅಕ್ಕ ರಸೀಯಾ ಬಾಗಿಲ ಮರೆಯಲ್ಲಿ ನಿಂತು ನಮ್ಮ ಸಂತಸಗಳಿಗೆ ಮುಖ ಅರಳಿಸಿಕೊಳ್ಳುವುದನ್ನು ಗಮನಿಸಿದ್ದೆ. ನಮ್ಮ ಕೇಕೆ, ಕುಣಿತಗಳಿಗೆ ಸ್ವರ ಆನಿಸಿ ದುಖ್ಖಿಃಸುವುದು ದಿನಗಳಾಯಿತು. ನನ್ನ ಎಳೆ ಮನಸ್ಸು ಒಮ್ಮೊಮ್ಮೆ ಏನೋ ಕಳೆದುಕೊಂಡಿದ್ದು ಹುಡುಕುತ್ತಿತ್ತು. ಅಪ್ಪ- ಅಮ್ಮನ ಹಾರೈಕೆಯ ಕೊರತೆಗೆ ಅದು ದಿನ ಕಳೆದಂತೆ ಮಾಸ ತೊಡಗಿತು.
ಏಳನೇ ತರಗತಿ ಮುಗಿಸಿ ಪಕ್ಕದ ನಾಪೋಕ್ಲು ಹೈಸ್ಕೂಲಿನ ಸರಕಾರಿ ಹಾಸ್ಟೆಲ್‍ಗೆ ಸೇರಿದ್ದೆ. ಶಾಲೆ ಬಿಟ್ಟು ಹಾಸ್ಟೇಲಿನ ಕೋಣೆಗೆ ನುಗ್ಗುವಾಗ ನೆನಪುಗಳು ಬಿಚ್ಚಿಕೊಳ್ಳುತ್ತಿದ್ದವು. ವಾರಕ್ಕೊಮ್ಮೆ ಮೂರ್ನಾಡಿನ ಮನೆಗೆ ಬರುವಾಗಲೆಲ್ಲಾ ಆ ದಿನಗಳ ಮಾತುಗಳು ರಸೀಯಾ ಅಕ್ಕನನ್ನು ಹುಡುಕುತ್ತಿದ್ದವು. ಲತೀಫನೊಂದಿಗೆ ಆಟಗಳು ಮೇಳೈಸುತ್ತಿದ್ದವು. ದಿನಗಳು ಓಡುತ್ತಿದ್ದಂತೆ , ಮನಸ್ಸು ಬೆಳೆಯುತ್ತಾ ಒಂಟಿ ಕ್ಷಣಗಳಿಗೆ  ಒಗ್ಗಿಕೊಳ್ಳುತ್ತಿದ್ದವು.
ಒಂದು ಶನಿವಾರ ಮನೆಗೆ ಬಂದಾಗ, ರಸೀಯಾ ಅಕ್ಕನ ಮನೆಯಲ್ಲಿ ಯಾರೂ ಇರಲಿಲ್ಲ. ಅಜ್ಜಿ ಹೇಳಿದಳು ರಸೀಯಾ ಅಕ್ಕ, ಅವರೆಲ್ಲರೂ ಕೇರಳಕ್ಕೆ ಹೋದರು. ಅವಳಿಗೆ ಮದುವೆಯಾಗಿದೆ ಅಂದರು. ಮನಸ್ಸು ಬಿಗಿಯಾಗಲಿಲ್ಲ. ಒಂದು ಬಂಧನದಿಂದ ಇನ್ನೊಂದು ಬಂಧನಕ್ಕೆ ಹೋದ  ಹಕ್ಕಿಗೆ ಸ್ವರವಿಲ್ಲ. ಮೂಕವಾಗಿ ಅಳುತ್ತಿರುವುದು ಎಲ್ಲೋ ಮೂಲೆಯಲ್ಲಿ ಕೇಳುತ್ತಿತ್ತು. ಅಪ್ಪ ಹಂಸ ಕಾಕನ ಏಟಿಗೆ ಅಳುತ್ತಿದ್ದ ಆ ಜರ್ಜರಿತ ಧ್ವನಿ ಹಾಗೇ ಹಾದು ಹೋದವು. ಅವಳು ಪುನಃ ಬರಬಹುದೇ ?. ಅಂಗಳಕ್ಕೆ ಬಂದು ಅವರ ಮುಚ್ಚಿದ ಮನೆಯ ಬಾಗಿಲನ್ನು ಕೇಳಿತು ಮನಸ್ಸು..!!!
ಹೌದು... ಅವಳು ಬಂದಳು.  ನಾನು ಒಂಭತ್ತನೇ ತರಗತಿಯ ಶಾಲೆಗೆ ಸೇರುವ  ಒಂದು ವಾರಕ್ಕೆ ಮೊದಲು.  ಅವರ ಮನೆಯಲ್ಲಿ ಸಂಭ್ರಮದ ಗದ್ದಲವೋ ಗದ್ದಲ. ಮಗು ಅಳುತ್ತಿರುವುದು ಕೇಳಿಸಿತು. ಓಡಿ ಅವರ ಮನೆಯ ಒಳ ಹೊಕ್ಕೇ ಬಿಟ್ಟೆ. ರಸೀಯಾ ಅಕ್ಕ.....! ಮಗುವನ್ನು ಮಡಿಲಲ್ಲಿಟ್ಟು ನನ್ನನ್ನು ಪಕ್ಕಕ್ಕೆ ಕರೆದಳು... ದೊಡ್ಡ ಹೆಂಗಸಾಗಿದ್ದಾಳೆ. ಸ್ವರದಲ್ಲಿಯೂ ಅನುಭವವಿತ್ತು.
"ರವಿ... ಮಗು  ಹೇಗಿದ್ದೀಯಾನೀನು ದೊಡ್ಡವನಾಗಿದ್ದೀಯಾ..."
ಸಂತೋಷ.. ತುಂಬಾ ಸಂತೋಷ ಅಂತ ತಲೆಯಾಡಿಸಿದೆ. ಮಾತು ಗಂಟಲೊಳಗೆ ಸಿಕ್ಕಿಕೊಂಡಿತು. ಪಕ್ಕನೇ ಮಗುವನ್ನು ಎತ್ತಿಕೊಂಡೆ . ಅವಳಂತೆಯೆ ಇದೆ ಗಂಡು ಮಗು. ಅವಳ ಮಡಿಲಲ್ಲಿ ಹಾಲಿಗಾಗಿ ಅಳುತ್ತಿದ್ದ ಮಗು ನನ್ನ ಬೊಗಸೆಯಲ್ಲಿ ನನ್ನನ್ನೇ ಸುಮ್ಮನೇ ನೋಡುತ್ತಿತ್ತು. ಮತ್ತೆ ಅವಳ ಕೈಗೆ ಮಗುವನ್ನು ನೀಡಿದೆ.
ನೋಡಲು ಹಾತೊರೆಯುತ್ತಿದ್ದ ಕಣ್ಣುಗಳು ರಸೀಯಾ ಅಕ್ಕನನ್ನು ನೋಡಿ ತೇವಗೊಂಡಂತೆ ,ಕೈ ಬೆರೆಳು ಮುಖ ಮುಚ್ಚಿ ಸ್ವಚ್ಚಗೊಳಿಸಿತು. ಅಂದು ಸಂಜೆಯೇ ನಾನು ಹಾಸ್ಟೇಲಿಗೆ ವಾಪಾಸ್ಸು ಬಂದು ಬಿಟ್ಟೆ.
ಎರಡು ತಿಂಗಳು ಕಳೆದು ಮಳೆಗಾಲದ ರೆಜೆಗೆ ಮನೆಗೆ ಬಂದಾಗ ಅಲ್ಲಿ ಅವಳಿರಲಿಲ್ಲ. ಅಪ್ಪ ಹಂಸ ಕಾಕ- ತಾಯಿ ಬೀಪಾತುಮ್ಮ ಇರಲಿಲ್ಲ, ಲತೀಫನೂ ಇಲ್ಲ.
ಮಾವನ ಟೈಲರ್ ಅಂಗಡಿಯಲ್ಲಿ ಕುಳಿತಿದ್ದೆ. ಪಕ್ಕದ ಅಂಗಡಿಯ ಯೂಸುಫ್‍ನೊಂದಿಗೆ ಅವರು ಮಾತಿಗಿಳಿದಿದ್ದರು.
"ಅಲ್ಲ ಡೌರಿಗಾಗಿ ಹೀಗೆ ಮಾಡುವುದಾ? ಕೇಸು ಹಾಕಿದ್ದು ಒಳ್ಳೆಯದಾಯಿತು"
"ಅಲ್ಲ ವಿಶ್ವನಾಥ, ನಿನ್ನೆ ಎಲ್ಲಾ ಪೇಪರಿನಲ್ಲಿ  ಸುದ್ಧಿ ಬಂದಿದೆ. ಮಲೆಯಾಳಂ ಮನೋರಮಾದಲ್ಲೂ ಬಂದಿದೆ. ಅವರು ಮನುಷ್ಯರೋ ಪ್ರಾಣಿಗಳೋ?.ಮದುವೆಗೆ ಹತ್ತು ಪವನ್ ಚಿನ್ನ ಹಾಕಿದ್ದಾರೆ. ಅದನ್ನೆಲ್ಲಾ ಮಾರಿದ್ದಾರಂತೆ. ಒಟ್ಟಾರೆ ಅವಳ ಅತ್ತೆ-ಮಾವ ರಾಕ್ಷಸರು. ಅವರನ್ನು ಸುಮ್ಮನೆ ಬಿಡಬಾರದು. ಒಂದು ಲಕ್ಷ ಹಣ ಬರುವ ತಿಂಗಳು ಕೊಡುತ್ತೇನೆಂದು ಹಂಸ ಹೇಳಿದ್ದನಂತೆ. ಮತ್ತೆ ಅಂಗಡಿ ತೆರೆಯಲು ಹಣ ಬೇಕೆಂದು ಕೇಳಿದ್ದು. ಸ್ವಲ್ಪ ಕಷ್ಟವಾಗುತ್ತದೆ ಅಂದಾಗ ಜಗಳವಾಗಿ ಕೆನ್ನೆಗೆ ಹೊಡೆದಾಗ ತೀರಿ ಹೋಗಿದ್ದಂತೆ ಮಾರಾಯ. ಅವಳ ಕೈಯಲ್ಲಿದ್ದ ಸಣ್ಣ ಮಗುವೂ ಕೈಯಿಂದ ನೆಲಕ್ಕೆ ಬಿದ್ದು ಸತ್ತಿದೆ.ಗೊತ್ತಿಲ್ಲದಂತೆ ಬಾವಿಗೆ ಎಸೆದು ಆತ್ಮ ಹತ್ಯೆ ಅಂತ ಅವರು ಕೇಸು ಹಾಕಿದ್ದಾರಂತೆ." ರೋಷದಲ್ಲಿ ಅವರು ಮಾತನಾಡುತ್ತಿದ್ದರು.
ಸ್ವಲ್ಪ ಕುತೂಹಲ ಅನ್ನಿಸಿತು. ಹಿಂದಿನ ದಿನದ ಪತ್ರಿಕೆಗಳನ್ನು ಹುಡುಕಲು ಶುರು ಹಚ್ಚಿದ್ದೆ. ಪತ್ರಿಕೆ ಸಿಕ್ಕಿತು. ಕೋಣೆಗೆ ನುಗ್ಗಿ   ಅವಳ ಸ್ಮಶಾನದ ಮನೆಯ ಕಡೆಗೆ ಕಿವಿ ನೆಟ್ಟಿತು. ಮತ್ತೊಮ್ಮೆ ಎದ್ದು ಅಂಗಳಕ್ಕೆ ಬಂದೆ. ಅವರ ಮನೆಯ ಹಿಂಬದಿಯ ಬಾಗಿಲು ಮುಚ್ಚಿತು.
ಎಲ್ಲೋ ಓದಿದ್ದ ಸಾಲು ಮನೆಯ ಬಾಗಿಲಲ್ಲಿ ಬರೆದಂತೆ ಕಂಡಿತು.
"ದೇವರು ಎಲ್ಲರಿಗೂ ನೆಮ್ಮದಿ ಕೊಡಲಾರ. ಒಳ್ಳೆಯವರನ್ನು ಹೆಚ್ಚು ಕಾಲ ಇರಲು ಬಿಡಲಾರ" ಪಾಪಿ ಜಗತ್ತು ಮುಷ್ಠಿಯಷ್ಟು ಸುಖಕ್ಕೆ ಬೆಟ್ಟದಷ್ಟು ದುಖ್ಖಃ ಚೆಲ್ಲುತ್ತದೆ.
ಮನೆ ಒಳಗೆ ಬಂದೆ. ಅಜ್ಜಿ ಹೇಳಿದರು. " ರಸೀಯಾ ಹೋಗುವಾಗ ನಿನ್ನನ್ನು ತುಂಬಾ ಕೇಳಿದ್ದಳು. "
-ರವಿ ಮೂರ್ನಾಡು.

ಭಾನುವಾರ, ಜನವರಿ 1, 2012

ರಸ್ತೆ..!


ಆ ರಸ್ತೆಗೆ ಗಾಢ ನಿದ್ದೆ
ಡಾಂಬರು ಹೊದಿಕೆಯೊಳಗೆ
ಬಿಟ್ಟ ಕಣ್ಣು ಬಿಟ್ಟಂತೆ
ಬೆಳಕಿನ ನಾಲಗೆ ಇಳಿಸಿವೆ
ಕಾವಲು ನಾಯಿ ವಿದ್ಯುತ್‍ ಕಂಬಗಳು
ತುಟಿಗೆ ಎಂಜಲು ತಿಕ್ಕಿ
ಬೆರಳಾಡಿಸುತ್ತಿದೆ ಗಾಳಿ
ಕಾಲದ ದಿನಚರಿ ಹಾಳೆಗಳು..!

ಇಲ್ಲೆಲ್ಲಾ ಬೆಳಕು ಕಣ್ಬಿಡದ ಕಾಡು
ಹತ್ತು ಆನೆಬಲದ ಡೈನೋಸಾರಸ್‍
ಹೆಜ್ಜೆಯಿಟ್ಟಲ್ಲೆಲ್ಲಾ ಹಳ್ಳ-ಕಣಿವೆ
ಇಟ್ಟ ಸಗಣಿಗೆ ಬೆಳೆದಿದೆ ಬೆಟ್ಟ
ನಡುವೆ ಸೀಳಿದ ನದಿಗೆ
ಅಡ್ಡಲಾಗಿ ಎಲುಬಿನ ಸೇತುವೆ ಹುಟ್ಟಿ
ಈ ರಸ್ತೆಗೆ ದಾರಿ ಬೆಳೆದಿದೆ..!

ಆ‍ಡಂ ಮತ್ತು ಈವ್‌ರ
ನಾಲ್ಕು ಹೆಜ್ಜೆ ಈ ರಸ್ತೆಗೆ
ಇಲ್ಲೆಲ್ಲಾ ನಡೆದು, ಕಾಡು ಕಡಿದು
ಕಟ್ಟಿ ಎಲೆ ಮುಚ್ಚಿದ ಗುಡಿಸಿಲು
ಅವರಿಗೊಂದಷ್ಟು ಮಕ್ಕಳು
ಹೊಸ್ತಿಲಿನಿಂದ ಅಂಬೆಗಾಲಿಕ್ಕಿ
ಅವರದೂ ಸಾವಿರ ಹೆಜ್ಜೆಗಳು !
ಕಲ್ಲುಗಳ ಕುಟ್ಟಿ-ಮರಗಳ ಸಿಗಿದು
ಆನೆ-ಹುಲಿ-ಚಿರತೆಗಳ ಎಲುಬಿನಿಂದ
ಈ ದಾರಿಗೆ ಮಣ್ಣು ಅಗೆದರು
ಹಾಗೆಂದು, ರಸ್ತೆ ದಿನಚರಿ ಬರೆದಿದೆ  !

ಅವರೇ ನಿರ್ಮಿಸಿದ್ದು,
ಹರಪ್ಪ- ಮೊಹಂಜದಾರೋ
ಕಲ್ಲರಳಿದ ಗುಹೆಯ ಚಿತ್ರಗಳು
ಸುದೀರ್ಘ ನಿದ್ದೆಗೆ ಮಲಗಿ
ಪಿರಮಿಡ್ಡಿನೊಳಗೆ ಮಮ್ಮಿಗಳಾದರು
ಅವರಿವರು ನೆಲ ಕೆರೆದಾಗ
ಅಳುತ್ತಿವೆ ಮಾಸ್ತಿ ಕಲ್ಲುಗಳು
ನೀರಾಡಿಸಿದಾಗ ಸಿಗುತ್ತಿವೆ
ಕೆರೆಗೆ ಹಾರವಾದವರ ಕರಿಮಣಿ ಸರಗಳು..!

ನೋಡಿ ಇಕ್ಕೆಲಗಳಲ್ಲಿದೆ,
ಏಸು ಶಿಲುಬೆಗೆ ನಿಂತಾಗ
ಬೈಬಲ್ ಬರೆದವರ ಚರ್ಚು
ಪೈಗಂಬರರು ನಮಾಜು ಮುಗಿಸಿ
ಕುರಾನ್ ಬರೆದ ಮೆಕ್ಕಾ-ಮದೀನ-ಮಸೀದಿ
ರಸ್ತೆಯ ಉದ್ದಗಲಕ್ಕೆ ಕಿರೀಟ ಧರಿಸಿವೆ
ಏಕದೇವ ಮುಕ್ಕೋಟಿ ದೇವರಾಗಿ
ಗೀತೆ ಬರೆದ ಮಂದಿರಗಳು
ಹಾಗೆಂದು ಈ ರಸ್ತೆ
ವ್ಯಾಸ-ವಾಲ್ಮೀಕಿಗೆ ಗರ್ಭ ಧರಿಸಿ
ರಾಮಾಯಾಣದ ಮೈಲುಗಲ್ಲುಗಳಿಗೆ
ಮಹಾಭಾರತದ ಹೆಸರು ಬರೆದಿದೆ..!

ಇಲ್ಲೆಲ್ಲಾ ಕಾಲಾಳುಗಳು-ಆನೆ-ಕುದುರೆ
ರಥದಲ್ಲಿ ಖಡ್ಗ ಹಿಡಿದ ರಾಜರು
ರುಂಡಗಳ ಚೆಂಡಾಡಿದಾಗ
ಅಲ್ಲೊಂದು ರಕ್ತದ ಹಳ್ಳ..!
ಮುಸಲೋನಿ-ಹಿಟ್ಲರ್
ಮಹಾಯುದ್ಧಕ್ಕೆ ಬೆತ್ತಲೆಯಾಗಿ
ಹಿಂಬದಿಗೆ ಬಂದ ನೆಪೋಲಿಯನ್  !
ರುಂಡವಿಲ್ಲದ ಹಿರೋಷಿಮಾ,ಮುಂಡವಿಲ್ಲದ ನಾಗಸಾಕಿ
ರಕ್ತಕ್ಕೆ ಬಾಯ್ತೆರೆದ ಈದಿ ಅಮೀನ್
ಸದ್ದಿಲ್ಲದೆ ಬೂದಿ ಮುಚ್ಚಿದೆ
ಇರಾಕಿನ ದೊರೆಸಾನಿಯ ದುಖಃ
ಹಾಗೆಂದು, ಹಾಳೆಯಲ್ಲಿ ಕಣ್ಣೀರ ಕಲೆಗಳಿವೆ...!

ಈ  ರಸ್ತೆಯುದ್ದಕ್ಕೂ ಧರ್ಮಗಳ ಭಾವುಟ
ಮನೆ-ಮನಗಳಲ್ಲಿ ಮತಾಂಧರ ಸಪ್ಪಳಕ್ಕೆ
ಬೆಚ್ಚಿ ಹಾಲಿಲ್ಲದೆ ಸತ್ತಿವೆ ಮಕ್ಕಳು
ಬಾಂಬುಗಳ ಭಿತ್ತಿ ಬೆಳೆದ ವಿಷದ ಹಣ್ಣು
ಬಿಟ್ಟಿವೆ ಫಲವತ್ತಾದ ದ್ವೇಷದ ಕಣ್ಣು
ಈ ರಸ್ತೆಯ ಅನತಿಯಲ್ಲಿದೆ
ಜಾತಿಗೊಂದು ಚಿರನಿದ್ರೆಯ ಮಸಣ
ಹೆಣಗಳ ಸುಡುವಾಗ
ಧುಮ್ಮಿಕ್ಕಿದ ಕಣ್ಣೀರ ಜಲಪಾತ
ನದಿ ಈಗಲೂ ಕೆಂಪಾಗಿ ಹರಿಯುತ್ತಿದೆ !

ಆಗಸ ದಿಟ್ಟಿಸಿದ ಹದ್ದಿನ ರೆಕ್ಕೆಗೆ
ಹಾರಿದವು ಉಕ್ಕಿನ ಹಕ್ಕಿಗಳು  !
ನದಿಗೆ ಕಡಲು ಸೇರುವ ಉಮ್ಮಸ್ಸು
ರೈಲು-ಕಾರು-ಬಸ್ಸುಗಳು ಸ್ಪರ್ಧಿಸಿದವು !
ಈಜುವ ಮತ್ಸ್ಯಗಳ ಕಂಡು
ಹಡಗು-ದೋಣಿಗಳು ತೇಲಿದವು !
ಅದ ನೋಡುತ್ತಾ ನಿಂತಿವೆ
ಗಗನ ಚುಂಬಿ ಕಟ್ಟಡಗಳು !
ಪತಿ, ಬಾಗಿಲು ತೆರೆದು ಕಚೇರಿಗೆ
ಮಕ್ಕಳು ಶಾಲೆಗೆ
ತುಟಿಯಿಟ್ಟ ಹಸುಳೆ ಮೊಲೆ ಹಾಲಿಗೆ
ಕಾಪಿಟ್ಟ ಪತ್ನಿಯ ತುಂಬು ಸಂಸಾರಕ್ಕೆ 
ಈ ರಸ್ತೆ ಹಾಜರಿ ಬರೆದಿವೆ ಕನಸುಗಳಿಗೆ !

ಮಲಗಿದೆ ಸುಮ್ಮನೆ
ಸುನಾಮಿ ಅಬ್ಬರ !
ಗುಡುಗಿ ಬಾಯ್ಬಿಟ್ಟ ಭೂಮಿಗೆ
ಸುಕ್ಕು ಚರಂಡಿ-ಗಟಾರ !
ಲೆಕ್ಕವಿಲ್ಲದ ಹೆಜ್ಜೆಗಳಿಗೆ
ಮನಸ್ಸು-ಎದೆ ಭಾರ !
ನಿನ್ನೆ ರಾತ್ರಿಯಷ್ಟೆ
ಕಾರಿನ ಮುಖಕ್ಕೆ ಗುದ್ದಿದ ಲಾರಿ
ಬಿದ್ದಿವೆ ನೆಲಕ್ಕೆ ನಾಲ್ಕಾರು ಹೆಣ
ಬಿದ್ದ ರಕ್ತ ಡಾಂಬರು ಹೊದಿಕೆಗೆ
ಈಗಷ್ಟೆ ಬಿಸಿಲಿಗೆ ಒಣಗಿ-
ಅಲ್ಲೇ ಇವೆ ಇರುವೆಗಳು
ಹಾಗೆಂದು ಹಾಳೆಯಲಿ ನಿಟ್ಟುಸಿರಿದೆ..!

ಅದೋ ಅಲ್ಲೊಂದು ತಳ್ಳುಗಾಡಿ
ಬೆಳಗಾಯಿತೆಂದು ಬರುತ್ತಿದೆ !
ಹಾಳೆ ಒಂದಷ್ಟು  ಖಾಲಿಯಿದೆ ನಾಳೆಗೆ ..!
-----------------------------------------------------------------------
-ರವಿ ಮೂರ್ನಾಡು.