ಸೋಮವಾರ, ಜನವರಿ 30, 2012

ಫೇಸ್ಬುಕ್‍ ಕವಿತೆಗಳು


ನಾನೊಂದು ಕವಿತೆ ಬರೆದಿದ್ದೇನೆ
ಅವರಿವರು ಬರೆದಾಗ ಗೀಚಿದ್ದು !

ಕವಿತಾಶಕ್ತಿ  ಕೇಜಿಗೆಷ್ಟು?
ಅಂಗಡಿಯಲಿ ಅಳೆದು ತೂಗಿದಾಗ
ಹುಚ್ಚು ಮನಸ್ಸಿನ ಸ್ಲೇಟು ಫೇಸ್ಬುಕ್ಕು !
ತೋಚಿದ್ದೆಲ್ಲ  ಹುಚ್ಚೆದ್ದು
ಮಾತುಗಳೆಲ್ಲಾ ಮೈಬಿಟ್ಟು
ಬರೆದದ್ದೆಲ್ಲ ಅಂಟಿಸಿ ಒದರುತ್ತೇನೆ
ಇದು ನನ್ನ ಕವಿತೆ..!

ನಿಜ ಕವಿತೆ ಓದಿ
ಪಡೆದದ್ದೆಲ್ಲಾ ಮಣ್ಣು  !
ಉದ್ದುದ್ದು ಮಾತುಗಳ
ಹರಟೆ-ತಮಾಷೆಗಳು !
ಅರೆಬರೆ ಕನಸುಗಳ
ತುಂಡರಿಸಿದ ವಾಕ್ಯಗಳ
ಇಟ್ಟಿಗೆ ಜೋಡಿಸಿದರೆ ಒಂದು ಕವಿತೆ !

ಲಯಕ್ಕೆ ಸಿಕ್ಕಿದ್ದು ಪದ್ಯ
ಮಾತಿನಾಚೆಯ ನಿಗೂಢ !
ಮಾತು ಗೆದ್ದಾಗ ಗದ್ಯ
ಓದಿದರೂ ಓದಿಸುವ ಗಾಢ !
ಲಯವಿಲ್ಲದ ಕವಿತೆ ಓದಿ
ಸಿಕ್ಕಿದು ತಾಳವಿಲ್ಲದ ಹಾಡು  !
ಹದ ತಪ್ಪಿ ಊಳಿಡುವ ನಾಯಿ ಪಾಡು  !

ಪ್ರೀಯ-ಪ್ರೇಯಸಿ ಪಟ್ಟಾಂಗದಲ್ಲಿ
ಕನವರಿಸಿ ಹೊದಿಕೆ ಸರಿಸುತ್ತವೆ
ಒಂದು ಹನಿಜೇನು ಸಾಲು..!
ಗಂಡ-ಹೆಂಡತಿ ಸಲ್ಲಾಪದೆಡೆಗೆ
ಇಣುಕಿದ ಜಗಳದ ಮಕ್ಕಳು
ಮನೆ ಗುಟ್ಟು ಬೀದಿಗೆ ಬಂದು
ಫೇಸ್ಬುಕ್ಕು ಇನ್ನೊಂದು ಮಗ್ಗಲು !

ಕಚೇರಿಗೆ ಕುಳಿತ ಮಾತಿಗೆ
ಮೈಚಳಿ ಬಿಸಿಯೇರಿ ಕನವರಿಕೆ !
ಪ್ರೀಯತಮೆ ಕಚಗುಳಿ ಸ್ವರಕೆ 
ಪಾರ್ಕುಗಳ ಪ್ಲಾಸ್ಟಿಕ್ ಹೂಗಳಿಗೆ
ಅಂಗಡಿ ಸುಗಂಧ ದ್ರವ್ಯಗಳ ತಳುಕು !
ಹೊಟೇಲ್‍ - ಗಲ್ಲಿಗಳಿಗೆ
ಆಸನಗಳದ್ದೇ ಚಿಂತೆ !
ಮಾತಿಗೆ ಮಾತುಗಳು ಉಜ್ಜಿ
ಗಂಡು- ಹೆಣ್ಣುಗಳ ಮಧ್ಯೆ
ತನ್ನಿಚ್ಚೆಗೆ ಬೆತ್ತಲಾಗುತ್ತಿದೆ ಫೇಸ್ಬುಕ್ಕು  !
ಮಿಕ್ಕುಳಿದ ಭಾವಗಳಿಗೆ ಭಿಕ್ಷೆಯ ಸಾಲು !

ಪ್ರಕಟಿಸಿದ್ದೇನೆ ಕವಿತೆ, ಕಾದಿದ್ದೇನೆ ಮೆಚ್ಚುಗೆ
ಬರದಿದ್ದರೆ  ದಿಗಿಲು !
ತಾನೇ ಮೆಚ್ಚಿದಾಗ ಸ್ಖಲನ ತೃಪ್ತಿ  !
ಒದರುತ್ತೇನೆ ನನ್ನದೇ ಕವಿತೆ !
ನನ್ನಿಷ್ಟದ ಸ್ಲೇಟು ಫೇಸ್ಬುಕ್ಕು  !

ಹೆಣ್ಣಾದರೆ ಖಾಲಿಯಾಗುವುದು
ದೌರ್ಬಲ್ಯಗಳ ಮೇಕೆಪ್ ಸೆಟ್ಟು  !
ಕನ್ನಡಿಗೂ ಮುಖರತಿಯ ಸೊಕ್ಕು !
ಮಾತಿಗೆ ಒಪ್ಪಿದ ಕವಿತೆಗೆ ಮದುವೆ
ಲಯಕ್ಕೆ ವಿಚ್ಚೇಧನದ ಕೊರಗು !
-ರವಿ ಮೂರ್ನಾಡು

5 ಕಾಮೆಂಟ್‌ಗಳು:

 1. ಬರೆದ ವಿಷಯ ಅರ್ಥವಾಗಿದೆ.. ಹೋಲಿಕೆ ಮತ್ತು ಪದ ಪ್ರಯೋಗಗಳ ಒಂದು ಬಗೆಯ ಆಲೋಚನೆ ಮೂಡಿದೆ.. ಸಾಲುಗಳ ಜೋಡಿಸಿದ ರೀತಿಯು.. ಹಾಗು ಪ್ರಾಸಗಳ ಪ್ರಯೋಗ ಇಲ್ಲದೇ ಯಾವ ರೀತಿ ಬರೆಯಬಹುದು ಎಂಬುದರ ಪರಿಚಯ ಇಲ್ಲಿ ಸಿಕ್ಕಂತೆ ಆಯಿತು.. ಎಲ್ಲಾ ವಿಚಾರ ಅರ್ಥವಾದರೂ ಸಹ ಕವಿತೆಯ ಕೊನೆಯ ಚರಣ ತಿಳಿಯುತ್ತಿಲ್ಲ.. ಆ ಮೂರು ಸಾಲುಗಳು.. ಅಂದರೆ.. *ಕನ್ನಡಿಗೂ ಮುಖರತಿಯ ಸೊಕ್ಕು.. ಮಾತಿಗೆ ಒಪ್ಪಿದ ಕವಿತೆಗೆ ಮದುವೆ.. ಲಯಕ್ಕೆ ವಿಚ್ಚೇಧನದ ಕೊರಗು* ಇದು ನಮ್ಮ ಗ್ರಹಿಕೆಗೂ ಮೀರಿದ ಅರ್ಥವನ್ನು ಹೊಂದಿದಂತಿದೆ.. ಒಟ್ಟಾರೆ.. ಒಂದು ಸಂದೇಶ ಹೇಳಬಯಸಿದ್ದೀರಾ.. ಅದನ್ನು ಅರ್ಥ ಮಾಡಿಕೊಂಡರೆ ತುಂಬಾನೇ ಸೊಗಸು.. :)

  ಪ್ರತ್ಯುತ್ತರಅಳಿಸಿ
 2. ಕವಿತೆ ಮತ್ತು ಅದರಾಚೆಗಿನ ಪಜೀತಿಗಳ ಸವಿವರ ವಿವರಣೆ ಈ ಕವಿತೆ.

  ಫೇಸ್ ಬುಕ್ಕಿನಿಂದ ಮತ್ತು ಕನ್ನಡ ಬ್ಲಾಗಿನ ದೆಸೆಯಿಂದ ಕವಿಗಳಾಗಿ ಬೆಳಕಿಗೆ ಬಂದವರೆಷ್ಟೋ ಮತ್ತು ಹಳೆ ಕವಿಗಳು ತಾಲೀಮಿಗೆ ಸಿಕ್ಕು ಸಿಕ್ಕು ಫಳ ಫಲನೆ ಮಿಂಚತೊಡಗಿದ್ದೂ ಫೇಸ್ ಬುಕ್ಕಿನಲ್ಲೇ.

  ರುಚಿ ಇರದ ಅಡುಗೆ, ಟಾರೇ ಇಲ್ಲದ ರಸ್ತೆ, ಇರುಳ ಚಂದ್ರಮಗೆ ಮೋಡ ಮುಚ್ಚು ಮರೆ ಅಥವಾ ಎಳೇ ಕಂದನ ಮೂಗಿನ ರಸಾಯನ ಹೀಗೆ ಸತ್ವವಿಲ್ಲದ ಕವನಗಳು ಹೇಗೆ ಮನಸ್ಸಿಗೆ ನಾಟುವುದಿಲ್ಲ ಎನ್ನುವುದನ್ನು ಇಲ್ಲಿ ಬರೆದಿದ್ದೀರ.

  ಬಹಳ ಮೆಚ್ಚುಗೆಯಾಯಿತು.

  ಪ್ರತ್ಯುತ್ತರಅಳಿಸಿ
 3. ಹ್ಹಿ ಹ್ಹಿ ಹ್ಹಿ... ಕವಿತೆ ಚೆನ್ನಾಗಿದೆ. ಅಳಿದುಳಿದ, ಅತ್ತಲಿತ್ತಲಿಂದ ಎಳೆದೆಳೆದು ಮಾಡಿಕೊಟ್ಟ ಹೊಸಾ ಬೇಕರಿ ಐಟಂ!!

  ಪ್ರತ್ಯುತ್ತರಅಳಿಸಿ
 4. ಕವಿತೆ ಹೇಗೆ ಅರಳಬೇಕು ಎಂಬುದನ್ನು ಪರಿ ಪಕ್ವವಾದ ಕವಿಮನಸ್ಸೊಂದು ತಿದ್ದಿ ಹೇಳಿದಂತಿದೆ ರವಿಯಣ್ಣ.. ’ಫೇಸ್ಬುಕ್ ಕವಿತೆ’ ಎಂಬುದೂ ಒಂದು ವಿಷಯವಾಗಬಲ್ಲುದೇ ಎಂದು ಸೋಜಿಗಪಟ್ಟಿದ್ದೆ.. ಆದರೆ ಸತ್ಯವಾದ ವಿಷಯವೆಂದರೆ ಒಬ್ಬ ಪ್ರಬುದ್ಧ ಕವಿಗೆ ಚಿಟಿಕೆ ಧೂಳೂ ಸಾಕು ಕವಿತೆಯಾಗಲು ಎಂದೆನಿಸಿತು ಈ ಕವಿತೆಯನ್ನು ನೋಡಲು.. ಕವಿತೆಯನ್ನು ಕಟ್ಟುವಾಗಿನ ಸೃಜನಶೀಲತೆಯ ಬಗ್ಗೆ ಕವಿಮನ ಗಮನದಲ್ಲಿಡಲೇಬೇಕಾದ ವಿಷಯಗಳನ್ನು ಬಹು ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದೀರಿ.. ಎಂದಿನಂತೆ ಕವಿತೆಯಲ್ಲಿ ಒಂದು ಹರಿತವಿದೆ, ಅಷ್ಟಲ್ಲದೆ ಇರುತ್ತದೆಯೇ ಹಿಡಿದದ್ದು ಲೇಖನಿಯಲ್ಲ, ಕತ್ತಿ.. ಸ್ವಪ ಹೊರಳಿದರೂ ಕತ್ತರಿಸುತ್ತದೆ..
  ಹೆಣ್ಣಾದರೆ ಖಾಲಿಯಾಗುವುದು
  ದೌರ್ಬಲ್ಯಗಳ ಮೇಕೆಪ್ ಸೆಟ್ಟು !
  ಕನ್ನಡಿಗೂ ಮುಖರತಿಯ ಸೊಕ್ಕು !
  ಮಾತಿಗೆ ಒಪ್ಪಿದ ಕವಿತೆಗೆ ಮದುವೆ
  ಲಯಕ್ಕೆ ವಿಚ್ಚೇಧನದ ಕೊರಗು !
  ಈ ಸಾಲುಗಳಂತೂ ತುಂಬಾ ಹಿಡಿಸಿತು.. ಅದ್ಭುತವಾದ ಕವಿತೆ ರವಿಯಣ್ಣ, ತುಂಬಾ ಹಿಡಿಸಿತು..:)))

  ಪ್ರತ್ಯುತ್ತರಅಳಿಸಿ