ಅವಳು ಯಶೋಧರೆ
ನಾನು ಬುದ್ಧ
ಅರ್ಧ ರಾತ್ರಿಗೆ ಓಡಿಹೋದ ನಾನು
ಮತ್ತೆ ಬಂದಿದ್ದೇನೆ ಭಿಕ್ಷೆಗೆ ।
ಲೋಕದ ಆಸೆಗೆ ಬದ್ದ
ಮರಳಿ ಸಂಸಾರಿಯಾಗುತ್ತೇನೆ ಮನೆಗೆ ।
ತಪಸ್ಸಿಗೆ ಕುಳಿತ ಭೋದಿವೃಕ್ಷದ ಮೇಲೆ
ಕೊಂಬೆ ಕಡಿಯುತ್ತಿದ್ದ ಗಂಡಸರು-
ಹೇಳುತ್ತಿದ್ದರು |
ಇನ್ನೆರಡು ರೆಂಬೆ ಕಡಿದರೆ
ಅಲ್ಲೊಂದು ಕೊಳವೆ ಬಾವಿ ಎತ್ತಿ
ಇಲ್ಲೊಂದು ಮನೆ ಕಟ್ಟಿದರೆ
ಕಾರು -ಬಸ್ಸು ಸಲೀಸು ಡಾಂಬರು ರಸ್ತೆಗೆ |
ಮೊನ್ನೆ ...
ಸೌದೆಗೆ ಬಂದ ಹೆಂಗಸರು
ಎಲೆ-ಅಡಿಕೆ ಮೆಲ್ಲುತ್ತಾ ನುಡಿದರು |
ವ್ಯವಸ್ಥಾಪಕರ ಸಹಿ ಬಿದ್ದರೆ
ಬ್ಯಾಂಕು ಸಾಲ ಸೇರಿಸಿ
ಕೋಳಿ-ಕುರಿ -ಹಸು ಖರೀದಿಸಿ
ಇದೇ ಮರದ ಪಕ್ಕದಲ್ಲಿ
ಹಂದಿಗೆ ಗಂಜಿ ಹಾಕಬಹುದು |
ಪ್ರೀತಿಸುತ್ತಿದ್ದ ಆ ಗ್ರಾಮದ ಯುವತಿ
ಯುವಕನ ಮಡಿಲಿಗೆ ತಲೆಯಿಟ್ಟು
ಪಿಸುಗುಟ್ಟುತ್ತಿದ್ದಳು |
ನನ್ನದು ಮೇಲ್ಜಾತಿ
ನಿನ್ನದು ಕೆಳಜಾತಿ
ಮನೆಯಲಿ ಒಪ್ಪದಿದ್ದರೆ
ಇದೇ ಮರದ ಆ ಕೊಂಬೆಗೆ
ನೇಣು ಬಿಗಿದುಕೊಳ್ಳುವ ಎಂದಳು ।
ಅಬ್ಬಾ ! ಕಳೆದ ಆ ರಾತ್ರಿ
ಬೇಟೆಗೆ ಬಂದ ಗ್ರಾಮದವರು
ಪ್ರಾಣಿಯೊಂದರ ಚರ್ಮ ಸುಲಿದು
ಮರದ ಕೆಳಗಿದ್ದ ಕಾಡು ಕಲ್ಲಿಗೆ
ಕತ್ತಿ ಮಸೆಯುತ್ತಿದ್ದರು |
ಅಷ್ಟರಲ್ಲೇ ಹೆಣವೊಂದನ್ನು ಎತ್ತಿ
ಬುಡದಲ್ಲೇ ಮಣ್ಣು ಅಗೆದು
ನಾಲ್ವರು ಹೂತು ಹೋದರು |
ಹೆಣ್ಣೊಬ್ಬಳ ಕೈ-ಬಾಯಿ ಕಟ್ಟಿ
ಮರದ ಬುಡದ ಹಾಸಿಗೆ
ಬೆತ್ತಲೆ ನೋಡಿದ ಕೆಲವರು
ಹೆಣ ಬಿದ್ದ ಕುತ್ತಿಗೆಗೆ-
ಬಟ್ಟೆ ಬಿಗಿದು ಕೊಂಬೆಗೆ
ಹಣ್ಣಂತೆ ತೂಗಿದರು |
ಹೆಣದಂತೆ ನಡೆದರು |
ಅರೆರೆ ! ಆ ಕಪ್ಪು ಕನ್ನಡಕದವರು
ಗೂಟದ ಕಾರಿಂದ ಇಳಿದು
ಇದೇ ಮರದ ಕೆಳಗೆ ನಿಂತು
ದೊಡ್ಡ ಬಂಗಲೆ ನಕ್ಷೆ ಬಿಡಿಸಿದರು |
ನಗರದ ದೊಡ್ಡ ಲಾರಿಯೊಂದು
ಹಿಂಭಾಗ ಎತ್ತಿ ಕಸ ಸುರಿಯುವಾಗ
ಮೂಗು ಮುಚ್ಚಿ ಕಣ್ಣು ಬಿಟ್ಟು
ಬೆಳಕು ಹುಡುಕುತ್ತಾ ಕತ್ತಲೆಗೆ ಬಂದಿದ್ದೇನೆ |
ಭಿಕ್ಷೆಗೆ ಬಂದಿದ್ದೇನೆ ಯಶೋಧರೆ
ಮನೆಯೊಳಗೆ ಬರಬಹುದೇ ಪ್ರೀಯೆ ?!
-ರವಿ ಮೂರ್ನಾಡು
ಒಂದು ರೀತಿಯಲ್ಲಿ ನಮ್ಮ ಇಂದಿನ ಜೀವನ ಕ್ರಮವನ್ನು ಬಿಡಿಸಿಟ್ಟ ಕವನ.
ಪ್ರತ್ಯುತ್ತರಅಳಿಸಿಪಡೆದುಕೊಳ್ಳುವವರು ಮತ್ತು ಪಡೆದುಕೊಂಡು ಮರೆಯುವ ಎರಡು ವೈರುದ್ಧ್ಯ ವ್ಯಕ್ತಿತ್ವಗಳ ಚಿತ್ರಣ.
ಈ ನಡುವೆ ತನ್ನ ಪಾಡಿಗೆ ತಾನು ಎಲ್ಲವನೂ ಗಮನಿಸಿಯೂ ಗಮನಿಸದಂತಿರುವ ಬೋಧಿವೃಕ್ಷವು ಸಾಕ್ಷಿಯಾದದ್ದು ಸೋಜಿಗವೇ ಸರೀ.
ಒಮ್ಮೆಲೆ ಮನುಜನ ಬುದ್ಧಿಯ ಪಟ್ಯವೆಲ್ಲ ಇಲ್ಲಿ ಅಕ್ಷರಗೊಂಡಿದೆ.
ಒಂದು ಒಳ್ಳೆಯ ಕವನ. ಪ್ರಸ್ತುತವಾದ ವಿಷಯಗಳ ಅನಾವರಣವೂ ಇದೆ ಇಲ್ಲಿ. ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಚಿಂತನಾರ್ಹ ಕವಿತೆ..!!
ಪ್ರತ್ಯುತ್ತರಅಳಿಸಿಬದುಕಿನ ಹಲವು ಮಜಲುಗಳನ್ನು ಅನಾವರಣಗೊಳಿಸುವ ಕವಿತೆ.!