ಭಾನುವಾರ, ಡಿಸೆಂಬರ್ 9, 2012

ದೇವರು ಪ್ರಳಯದ ಕವಿತೆ ಬರೆದರು !

ಚಿತ್ರಕೃಪೆ: ಅಂತರ್ಜಾಲ


ಹೊರಗೆ ಪ್ರಳಯವೆಂದು
ಅಳುತ್ತಿದ್ದರು ಜನರು;
ಕೊನೆಯಿರದ ನಿದ್ದೆಯ ಕಣ್ಣಿಗೆ 
ನನಗೊಂದು ಕನಸು ಬಿತ್ತು
ದೇವರು ಕವಿತೆ ಬರೆಯುತ್ತಿದ್ದರು |

ಹಸುಳೆ ಹಾಲ್ಕುಡಿವಾಗ
ಮಂದಿರ-ಮಸೀದಿ-ಚರ್ಚಿನಲಿ
ಪ್ರಾರ್ಥನೆ ನಡೆಯುತ್ತಿತ್ತು|
ಮಂದಿಯ ಅನ್ನದ ತಟ್ಟೆಗೆ
ಕೈ-ಕಣ್ಣುಗಳು ಓಡುತ್ತಿತ್ತು|

ಬೀದಿ ನಿದ್ದೆಯ ರಾತ್ರಿಗೆ 
ರಭಸದ ಬಾಂಬುಗಳ ಭಿತ್ತಿ
ಆರ್ತಸ್ವರಕೆ ಗುಂಡೊಡೆದವರು
ಹೆಣದ ಎದೆಯ ಮೇಲೆ ನಡೆದಾಗ
ಭೂಮಿ ಹೃದಯ ತಣ್ಣಗೆ ಕಂಪಿಸಿತ್ತು
ಆಗ ಪ್ರಳಯವಾಗಿತ್ತು !

ದೇವರು ಕವಿತೆ ಓದುತ್ತಿದ್ದರು ;

ಮನುಷ್ಯರೇ ರಣ ಹದ್ದಾಗಿ,
ಬೊಗಳುವ ನಾಯಿಗಳಾಗಿ
ಕಿರುಚಾಡುವ ಕಾಗೆಗಳಾಗಿ
ಹೊಲಸು ನೆಕ್ಕುವ ಹಂದಿಗಳಾಗಿದ್ದರು|
ಹುಲಿ-ಸಿಂಹ-ಚಿರತೆಗಳ ಹಲ್ಲು ಸಿಕ್ಕಿಸಿ
ನಾಡಿನಿಂದ ಮತ್ತೆ ಕಾಡಿಗೆ ಹೋದಾಗ
ಅಲ್ಲೆಲ್ಲಾ ಮರಳ ಕಣದ ಹೆಣಗಳು ತುಂಬಿ
ಬೆಟ್ಟದ ಎದೆಯಲಿ ಬೆಂಕಿ ಉಗುಳುತ್ತಿತ್ತು
ಆಗ ಪ್ರಳಯವಾಗಿತ್ತು |

ದೇವರು ಕವಿತೆ ಓದುತ್ತಿದ್ದರು;

ಅಂಕೆ ತಪ್ಪಿದ ಗಂಡಸರು
ನೀತಿ ತಪ್ಪಿದ ಹೆಂಗಸರು
ಮುಚ್ಚಳಿಕೆ ತೆರೆದು ದೇಹ ಮುಕ್ಕಳಿಸಿದಾಗ
ಕಸದ ತೊಟ್ಟಿಯಲಿ ಅವರದೇ ಮಗುವಿಗೆ
ಬಿಡುವಿಲ್ಲದೆ ನೊಣಗಳು ರಕ್ತ ನೆಕ್ಕುತ್ತಿತ್ತು |
ನೆಲ ಸಣ್ಣಗೆ ಬಿರುಕಿಟ್ಟಿತ್ತು
ಆಗ ಪ್ರಳಯವಾಗಿತ್ತು !

ಮನುಷ್ಯ ಮನುಷ್ಯನನ್ನೇ ಸಿಗಿದು
ಸಾವಿಲ್ಲದೆ ಜೀವಂತ ನರಳಿ
ತುಳಿದು ಎದ್ದವರ ಕೆಳಗೆ ರಕ್ತ ಹನಿಯುತ್ತಿತ್ತು|
ಅಲೆ ಅಲೆಯ ಆರ್ಭಟದ ಕಿಚ್ಚಿಗೆ 
ಸರೋವರ ಶವಸ್ನಾನಕೆ ನಿಂತು
ನೆಲ ಕುಸಿದು ಹೆಣಗಳಿಗೆ ಕಾದಿತ್ತು
ಆಗ ಪ್ರಳಯವಾಗಿತ್ತು !

ದೇವರು ಕವಿತೆ ಓದುತ್ತಿದ್ದರು;

ಆಸೆ ಆಗಸಕೆ ನೆಗೆದು 
ಕಾಡು ಕಡಿದು ಹಲ್ಲು ಕಚ್ಚಿ
ಭೂಮಿಗೆ ಬೆತ್ತಲೆ ಬಿಚ್ಚಿದಾಗ;
ಅತ್ಯಾಚಾರವೆಂದು ಅಳುತ್ತಿದ್ದ
ಮಹಿಳೆಯರು ಓಡುತ್ತಿದ್ದರು|
ಧೂಮಕಾಟದ ಭಾನಿನ ಎದೆಗೆ
ಅತ್ತು ಕರೆಯದ ಮೋಡದ ಕೊರಗು
ಆಗ ಪ್ರಳಯವಾಗಿತ್ತು |

ಹೊರಗೆ ಜನರು ಅಳುತ್ತಿದ್ದರು;
ಎಚ್ಚರವಾದಾಗ ನಾನು
ಕವಿತೆ ಓದುತ್ತಿದ್ದ ದೇವರು
ಗೋಡೆ ಚಿತ್ರದಲ್ಲಿ ಸುಮ್ಮನೆ ನಗುತ್ತಿದ್ದರು |

ಮಾಧ್ಯಮಗಳ ಪುಟ ತಿರುವಿದ್ದೇನೆ;

ಕಸದ ತೊಟ್ಟಿಯ ಮುಂದೆ
ನಾಯಿ-ಕಾಗೆ ಕೂಗಿಗೆ
ಮಗು ಸುಮ್ಮನೆ ಮಲಗಿತ್ತು;
ಅದರ ತಾಯಿಗೆ ಅತ್ಯಾಚಾರವಾಗಿತ್ತು;
ಹಾಜರಿ ಕೇಳಿದ ಆತ್ಮಹತ್ಯೆಗಳು
ಜಗದ ಗೈರಿಗೆ ಪ್ರಳಯವಾಗಿತ್ತು |

ಸುನಾಮಿ ಸರೋವರದಲಿ
ದಡ ಸೇರಲು ಈಜುತ್ತಿದ್ದ ಹೆಣಗಳು;
ರಾತೋರಾತ್ರಿ ಮಣ್ಣೊಳಗೆ ಹೂತ
ಆಗಸ ಕರೆವ ಕೈಗಳ ಚಿತ್ರಗಳು;
ಹಲವರು ಹಲವರನ್ನು ತಿಂದ
ಹಲವು ಚಿತ್ರ ಹತ್ಯೆ ಸುದ್ದಿಗಳು ;
ಆಗ ಪ್ರಳಯವಾಗಿತ್ತು |

ಹೊರಗೆ ಪ್ರಳಯವೆಂದ ಜನರು
ಅಳುತ್ತಲೇ ಇದ್ದರು |
-ರವಿ ಮೂರ್ನಾಡು

2 ಕಾಮೆಂಟ್‌ಗಳು:

 1. ಕೆಲವೇ ಸಾಲುಗಳಲ್ಲಿ ಆಧುನಿಕ ಮಾನವನ ಹುಂಬತನ ಮತ್ತು ಕ್ರೂರತೆಯನ್ನು ಚಿತ್ರಿಸಿಕೊಟ್ಟಿದ್ದೀರಿ.

  ಓದುತ್ತಾ ಹೋದಂತೆ ಕಟ್ಟಿಕೊಟ್ಟ ಚಿತ್ರಗಳ ಸಾದೃಶ್ಯತೆ ಅನಿರ್ವಚನೀಯ.

  ಪ್ರಳಯ ಆಗುತ್ತದೋ ಬಿಡುತ್ತದೋ, ಆದರೆ ಅದನ್ನೇ ಸರಕಾಗಿಸಿಕೊಂಡವರು ನಿಜವಾದ ಅಪರಾಧಿಗಳು.

  ಪ್ರತ್ಯುತ್ತರಅಳಿಸಿ
 2. ಚಿಂತನಾರ್ಹ ಕವನ ರವಿಯಣ್ಣ..
  ನಿಜ, ಎಲ್ಲೋ,ಯಾವಾಗೋ ಪ್ರಳಯ ಆಗುತ್ತೆ ಅಂತ ಹೆದರುತೀವಲ್ಲಾ, ದಿನನಿತ್ಯ ಪ್ರಳಯದಂತಹ ಭೀಭತ್ಸ ಘಟನೆಗಳು ನಡೆಯುತ್ತಲೇ ಇವೆ..!!
  ಅದ್ಭುತ ಚಿತ್ರಣ..!!

  ಪ್ರತ್ಯುತ್ತರಅಳಿಸಿ