ಮಂಗಳವಾರ, ನವೆಂಬರ್ 27, 2012

ತಲೆಗೆ ಸುತ್ತಿ ನೆನಪು ರುಮಾಲು !

ಚಿತ್ರಕೃಪೆ: ಗೂಗಲ್ ಅಂತರ್ಜಾಲ

ಆ ಭೂಮಿ ನೋಡಿದ್ದೆ
ಗಿಡ-ಮರ ಮೈವೆತ್ತ ಕಾಡು
ಹೂ ಬಿಟ್ಟ ಹಣ್ಣಿಗೆ
ಹಕ್ಕಿ-ಅಳಿಲು ಸಿಪ್ಪೆ ಸುಲಿದು
ಮುಗಿಬಿದ್ದ ಇಲಿ-ಹೆಗ್ಗಣದ-
ಮಾಳಿಗೆ ನೆಲದ ಮಣ್ಣಿಗೆ ಗೆದ್ದಲು-
ಕಟ್ಟಿದ ಹುತ್ತದ ಹಾವು
ಬಿದ್ದ ಬಿಸಿಲಿಗೆ ಮೈ ಕಾಯಿಸಿ
ನಾಯಿ-ಬೆಕ್ಕು ತುಟಿ ಸವರಿ
ಉದ್ದುದ್ದ ನಾಲಗೆ ಇಳಿಸಿ 
ಹುಲ್ಲು ಕಚ್ಚುವ ದನ-ಕರು

ನೋಡಿದ್ದೆ ...
ಸೀಟಿ ಊದಿ ಗಾಳಿ
ಸತ್ತ ತರಗೆಲೆಗಳ ಪಕಳೆ ಜಾಡಿಸಿದಾಗ
ನೆರಳುಗಳ ಸುತ್ತಾ ಅಸ್ಪಷ್ಟ ಚೆಲ್ಲಾಟಗಳು

ಮತ್ತೊಮ್ಮೆ ಆ ಭೂಮಿ ನೋಡಿದ್ದೆ

ಕಾಡು ಕಡಿದು ಬೇರುಗಳ ಸಿಗಿದು
ಎದ್ದ ದಿಬ್ಬಗಳ ಅಗೆದು
ಗಟ್ಟಿ ಕುಳಿತ ಕಲ್ಲುಗಳ ಒಡೆದಾಗ
ನೆಲದ ಮೈಯೀಗ ಸಾಪು ಸಪಾಟು .

ಮಣ್ಣೊಳಗೆ ಇಲಿ-ಹೆಗ್ಗಣ
ಬುಸುಗುಟ್ಟಿದ ಹುತ್ತದ ಹಾವು ಓಡಿ
ಬಿದ್ದ ಮರಕೆ ಬೆದರಿದ ಹಕ್ಕಿ ಹಾರಿದಾಗ
ಅಲ್ಲೊಂದು ಮನೆಯ ನಕ್ಷೆ
ನೀಲಿಯಾಗಿ ಹರಡಿತ್ತು.

ಚೌಕಾಕೃತಿ ಗೀಟು ಎಳೆದು
ಗುದ್ದಲಿ-ಪಿಕಾಸಿ ಇಷ್ಟಿಷ್ಟು ಮಣ್ಣು ಕಿತ್ತು
ಇಟ್ಟಿಗೆ ಇಟ್ಟಿಗೆಗೆ ಕುಳಿತು
ಅಷ್ಟಿಷ್ಟು ಗಟ್ಟಿ ಸಿಮೆಂಟು ಸವರಿದಾಗ
ಗೋಡೆ ಆಗಸ ನೋಡುತಿತ್ತು
 
ಎದ್ದ ಗೋಡೆಯೊಳಗೆ
ಬಿದ್ದ ಸೂರ್ಯನ ಬೆಳಕಿಗೆ
ಮರ-ಮುಟ್ಟುಗಳ ತಡೆಯಿಟ್ಟು 
ಒಂದೊಂದೇ ಹೆಂಚುಗಳ ಮುಚ್ಚಿದಾಗ
ಸುತ್ತ ಈಗ ಕಣ್ ಬಿಡದ ಕತ್ತಲು

ಮತ್ತೆ ಆ ಮನೆ ನೋಡಿದ್ದೆ

ಅವಳ ಹಸಿರು ಬಳೆ ಕೈಗೆ
ಅಂಗಳದ ಬೊಗಸೆ ಬೆಳಕು ಸುರಿದು
ಬಾಗಿಲ ದೂಡಿ.. ಮತ್ತೆ ದೂಡಿ
ನೆಲದ ಎದೆಗೆ ಹೆಜ್ಜೆಯಿಟ್ಟಾಗ 
ಕೋಣೆ ತುಂಬಾ ಭಾರದ ಸದ್ದು

ಮತ್ತೆ ಒಳಗೆ ನೋಡಿದ್ದೆ ....

ಮುಚ್ಚಿದ ಕಣ್ಣಿಗೆ ತೈಲವಿಟ್ಟು
ಕಡ್ಡಿ ಗೀರಿದಾಗ
ರೆಪ್ಪೆ ತೆರೆದ ಮನೆಯ 
ಹೆಂಚುಗಳ ಸಂದುಗಳಲಿ ಸಾವಿರ ಕಣ್ಣು

ಪಾತ್ರೆಗಳ ಶೂನ್ಯಕೆ ತುಂಬಿ ನೀರು
ಗೆಜ್ಜೆಗೆ ನಾಚಿ ಬಳೆಗಳ ಸದ್ದಿಗೆ
ಹಸಿವು ಹಚ್ಚಿದ ಘಮಘಮ ಸಾರು
ತುಂಬಿದ ತಟ್ಟೆಗೆ ಅನ್ನದ ಮಲ್ಲಿಗೆ ಅರಳು

ಮತ್ತೆ ಹೊರಗೆ ನೋಡಿದ್ದೆ..

ಬಾಗಿಲಿಗೆ ದೇವರ ಹೂವು
ಅವಳ ಹಣೆಗೆ ಕುಂಕುಮ ಚಂದ್ರನ ಚೂರು
ಮನೆಯ ತಲೆಗೆ ನೆನಪು ಸುತ್ತಿ ರು-ಮಾಲು

ರಾತ್ರಿ ಹಾಸಿದ ನಿದ್ದೆಯಲಿ
ಹೊರಗೆ ಆಗಸದ ಹಸಿರು ಮಳೆಗೆ 
ಮನೆ ಸುತ್ತಾ ಸೂರ್ಯನ ಕೊಡೆ
ನದಿ-ತೊರೆ ಹರಿದು ಮುಂಜಾನೆ
ಹಕ್ಕಿ ಚಿಲಿಪಿಲಿಗೆ ತೆನೆ ಬಿದ್ದು
ತೊಟ್ಟಿಲು ತೂಗುತಿತ್ತು ಮೆಲ್ಲನೆ
ಅಲ್ಲೇ ತಂಗಾಳಿಗೆ ಎದೆಯೊಡ್ಡಿ
ಅಂಬೆಗಾಲಿಕ್ಕಿದ ಮಗುವಿನ ನಗು

ಮತ್ತೆ ಒಳಗೆ ನೋಡಿದ್ದೆ  ....

ಬೆಳೆಯುತ್ತಾ ಮಗು
ಮತ್ತೆ ಮತ್ತೆ ಕನ್ನಡಿ ನೋಡುವ ಅವಳು
ಒಂದು ಎಳೆ ನೆರೆಗೂದಲ ಕಿತ್ತು 
ಅಂಗಳಕ್ಕೆಸೆದಾಗ
ಮನೆ ಕಟ್ಟಿದವನನ್ನೇ ಹುಡುಕುತ್ತಿತ್ತು
ಮನೆ ಮುಚ್ಚಿದ ಹೆಂಚು

ಗೋಡೆ ಮೈಗೆ ಬಣ್ಣ ಬಳಿದು
ಅಂಗಳಕೆ ಚಪ್ಪರ ಹಾಕಿ
ಮದುಮಗನ ಕೋಣೆಗೆ ಇಣುಕಿ
ಮೂಲೆಯ ಖುರ್ಚಿಗೆ ಬಾಗಿ
ಬಂದ ಜನರ ನೋಡುತ್ತಲೇ ಇದ್ದ ಅವನು

ನಾನು ನೋಡಿದ್ದೆ
ಮನೆ ಅವನನ್ನೇ ನೋಡುತ್ತಿತ್ತು.
-ರವಿ ಮೂರ್ನಾಡು

1 ಕಾಮೆಂಟ್‌:

  1. ಹಂತ ಹಂತವಾಗಿ ತೆರೆಯುತ್ತಾ ಹೋದ ಅಂತಃಚಕ್ಷುವಿನ ಪದ ಲಾಸ್ಯ ಈ ಕವನ.

    "ನಾನು ನೋಡಿದ್ದೆ
    ಮನೆ ಅವನನ್ನೇ ನೋಡುತ್ತಿತ್ತು"

    ಎನ್ನುವಲ್ಲಿ ನಾನೇ ನೆನಪಿಗೆ ಬಂದೆ. ಮೊದಲು ಕಷ್ಟಪಟ್ಟು ಹತ್ತಿದ ಆ ಮಾಳಿಗೆಯ ಮೆಟ್ಟಿಲು ಈಗ ಸಲೀಸಾಗಿ ಏರಿದಾಗ, ನನ್ನ ಬಾಲ್ಯ ನೆನಪಾಯಿತು.

    ನನಗೆ ಮನಸ್ಸಿಗೆ ನಾಟಿದ ಕವನ ಇದು.

    ಪ್ರತ್ಯುತ್ತರಅಳಿಸಿ