ಬುಧವಾರ, ನವೆಂಬರ್ 21, 2012

ತುಂಬಿಕೊಳ್ಳದ ನೀನು..!


ಚಿತ್ರ ಕೃಪೆ: ಅಂತರ್ಜಾಲ
ಉರಿವ ಬೆಂಕಿಯೇ ನಾನು
ಬುಸುಗುಡುವ ಗಾಳಿ ನೀನು
ಮನಸ್ಸು ಸುಟ್ಟಿದೆ !
ಮಾತಾದೆವೋ ಬೆಳೆದು
ಕರಗಿಕೊಂಡೆವು ಉರಿದು
ಮೌನ ಮೆಚ್ಚಿದೆ !

ಬಿಡದ ಅಹಂಕಾರಿ ನಾನು
ಒಪ್ಪದ ಹಠಮಾರಿ ನೀನು
ಅಹಂ ಎದ್ದಿದೆ !
ಗೋಡೆ ಬೆಳೆದಿದೆ ನಡುವೆ
ಮುಖವ ಕಾಣದ ಮನಕೆ
ಪ್ರೀತಿ ಮುಚ್ಚಿದೆ !

ಮಿತಿ ಮೀರಿ ಒಲುಮೆ ಜೇನು
ಗತಿ ತಿರುಗಿ ಹುಳಿ ಹಾಲು
ಅರಿತುಕೊಳ್ಳದೆ !
ಸೆಳೆದುಕೊಳ್ಳದೇ ಕಾಂತೆ
ಸೆಟೆದುಕೊಳ್ಳದಾ ಕಾಂತ
ನಮ್ಮ ನಡುವಿದೆ!

ನಿನ್ನ ತುಂಬುವ ಕನ್ನಡಿಗೆ
ನನ್ನ ತುಂಬುವ ಕಣ್ಣಿದೆ
ಒಂಟಿಯಾಗದೆ !
ಚಳಿಗೆ ಉಬ್ಬಿದ ಸ್ಪರ್ಶಕೆ
ಹಣೆಗೆ ತಬ್ಬುವ ಬಿಂಧಿಗೆ
ಬೆರಳ ನನಪಿದೆ !

ನಂಬಿ ತುಂಬದ ಮಾತು
ಬದುಕ ಮೌನವೇ ನಮಗೆ
ಶಬ್ಧ ಚೆಲ್ಲಿದೆ !
ತುಂಬಿಕೊಳ್ಳದ ನೀನು
ತುಂಬಲಾಗದ ನಾನು
ಅರ್ಧವಾಗಿದೆ !
-ರವಿ ಮೂರ್ನಾಡು.

1 ಕಾಮೆಂಟ್‌:

  1. ತೀವ್ರ ವಿಷಾದದ ಛಾಯೆ ಆವರಿಸುವ ಕಾವ್ಯ ಪ್ರತಿಮೆ. ತುಂಬಲಾರದ ಅವನ, ತುಂಬಿಕೊಳ್ಳದ ಅವನ ನಡುವೆ ಕಂದರ ಅಗಾಧವಾಗುತ್ತಾ ಹೋಗುತ್ತದೆ.

    ಮನದಲ್ಲಿ ಹೆಪ್ಪುಗಟ್ಟುವ ಕೆನೆಯನ್ನು ಕಾವ್ಯದಲ್ಲಿ ತರುವುದು ಅಷ್ಟು ಸುಲಭವಲ್ಲ, ಅದು ಇಲ್ಲಿ ಸರಿಯಾಗಿ ಮೂಡಿ ಬಂದಿದೆ.

    ಪ್ರತ್ಯುತ್ತರಅಳಿಸಿ