ಕನ್ನಡದ ನೆಲದಲ್ಲೇ ಹಲವಾರು ಸೂಚನಾ ಫಲಕಗಳು ಕನ್ನಡದ ಅಪಭ್ರಂಶು ಅಕ್ಷರಗಳಲ್ಲಿ ತೂಗಾಡುತ್ತಿರುತ್ತಿರುವುದನ್ನು ಕಾಣುತ್ತೇವೆ.ಶಾಸ್ತೀಯ ಕನ್ನಡಕ್ಕೆ ಇದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ. ಕೆಲವಾರು ಸಂಸ್ಥೆಗಳಂತೂ ಕನ್ನಡಗರಿಂದಲೇ ವ್ಯವಹಾರ ಕುದುರಿಸಿಕೊಂಡಿದ್ದರೂ ಕನ್ನಡವನ್ನು ಕರುಣಿಸಲು ತಯಾರಿಲ್ಲ.ಮುನ್ಸಿಪಾಲಿಟಿಗಳು, ಪಂಚಾಯಿತಿ ಕಚೇರಿಗಳು,ಬಿಎಂಸಿ ಕಚೇರಿಗಳಲ್ಲಿ ಅಕ್ಷರಗಳನ್ನು ಅರ್ಧ ತಿಂದಾವಸ್ಥೆಯಲ್ಲಿ ಫಲಕಗಳು ತೂಗಿಸಿಕೊಂಡಿರುತ್ತವೆ. ಇದರ ಬಗ್ಗೆ ಕನ್ನಡ ಚಳವಳಿ ಸಂಸ್ಥೆಗಳು ಹೋರಾಟ ಮಾಡಿ ಬಾಯಿ ಹುಣ್ಣಾಗುವಂತೆ ಬೊಬ್ಬೆ ಹೊಡೆದು ಸುಮ್ಮನಾದ ಘಟನೆಗಳು ನಡೆಯುತ್ತಲೇ ಇದೆ.
ಇವೆಲ್ಲದರ ನಡುವೆ ಹೊರನಾಡಿನಲ್ಲಿ ಇದೊಂದು ಸೂಚನಾ ಫಲಕ ನೋಡಿ ! ಅದು ವಿದೇಶಿ ವಿಮಾನದಲ್ಲಿ. ಅಚ್ಚ ಕನ್ನಡದಲ್ಲಿ ಸ್ವಚ್ಛ ಮಾಹಿತಿ ನೀಡುವ ಈ ಫಲಕ ಸುದ್ದಿಗೆ ಮಹತ್ವವನ್ನೇ ಪಡೆದಿಲ್ಲ ಎಂದು ಕರ್ನಾಟಕ ರಾಜ್ಯದ ಜನತೆ ನಗಬಹುದು. ಆದರೆ ಹೊರನಾಡ ಕನ್ನಡಿಗರಿಗೆ ಇದು ಬಹಳ ಶ್ರೇಷ್ಠ .
"ಶೌಚಾಲಯವನ್ನು ಸ್ವಚ್ಛ ಮಾಡಲು ಬಟನ್ ಒತ್ತಿರಿ"
ಅನ್ನುವ ಈ ಮಾಹಿತಿಯನ್ನು ಪ್ರತಿಯೊಬ್ಬ ಹೊರನಾಡ ಕನ್ನಡಿಗ ದೋಹ-ದುಬೈ ನಡುವೆ ಹಾರಾಟ ನಡೆಸುವ ದುಬೈ ವಿಮಾನದಲ್ಲಿ ಕಾಣಬಹುದು. ಇದು ಕೇವಲ ವಿಮಾನದ ಒಳ ಭಾಗದಲ್ಲಿ ಪ್ರತಿಯೊಬ್ಬ ವ್ಯಕ್ತಿ ಶೌಚಾಲಯಕ್ಕೆ ಹೋಗುವಾಗ ಸ್ಪಷ್ಟವಾಗಿ ಮಾಹಿತಿ ನೀಡುವ ಅಚ್ಛ ಕನ್ನಡದ ಮಾಹಿತಿ ಫಲಕ. ಒಂದೇ ಒಂದು ಅಕ್ಷರದ ತಪ್ಪಿಲ್ಲದೆ ಕೊಲ್ಲಿ ರಾಷ್ಟ್ರದವರು ತೋರಿಸಿದ ಕನ್ನಡದ ಪ್ರೇಮ. ಅದರಲ್ಲೂ ದುಬೈ ಏರ್ ಲೈನ್ಸ್ ಕೊಟ್ಟ ಮಹತ್ವದ ಕನ್ನಡದ ಕಾಣಿಕೆ. ಹೊರನಾಡ ಕನ್ನಡಿಗರಿಗೆ ಕನ್ನಡದ ಅಕ್ಷರ ಕಂಡಾಗ ಕರ್ನಾಟಕ ರಾಜ್ಯ ಕಣ್ಣು ಮುಂದೆ ಕಾಣುವುದು. ಅದೇ ಅನುಭವ ಪ್ರತೀ ಭಾರಿ ಈ ವಿಮಾನದಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಕನ್ನಡಿಗನಿಗೆ ಸಿಗುವುದು. ಅಪ್ಪಟ ಹೊರನಾಡ ಕನ್ನಡಿಗ ಕಾಸರಗೋಡಿನ ಶ್ರೀಯುತ ರವಿಕಿಶನ್ ಮಡಂಗಲ್ಲು ಅವರು ದೋಹ-ದುಬೈ ವಿಮಾನ ಪ್ರಯಾಣ ಬೆಳೆಸಿದಾಗ ತಮ್ಮ ಕ್ಯಾಮರಾ ಕಣ್ಣಿಗೆ ಒತ್ತಿಕೊಂಡ ಕನ್ನಡದ ವಾಕ್ಯಗಳು ಇವು. ಅವರ ಆಶ್ಚರ್ಯಕ್ಕೆ ಸಿಕ್ಕಿದ್ದು, ಅಚ್ಛ ಸ್ವಚ್ಛ ಕನ್ನಡದ ಸ್ಪಷ್ಟ ಮಾಹಿತಿಗಳು.
ಕರ್ನಾಟಕ ರಾಜ್ಯದಲ್ಲಿ ಇಂತಹ ಸೂಚನೆಗಳನ್ನು "ಇದ್ದಿಲಿನಿಂದಲೋ, ರಸ್ತೆಗೆ ಹಾಕುವ "ಟಾರ್"ನಿಂದಲೋ ಸಾರ್ವಜನಿಕ ಶೌಚಾಲಯಗಳಲ್ಲಿ ಬರೆದಿರುವುದನ್ನು ಕಾಣಬಹುದು. ಬರೆದ ಕೆಲವು ದಿನಗಳ ನಂತರ ಸೂಚನೆ ಮಾಹಿತಿ ತಲೆ ಕೆಳಗಾಗಿರುತ್ತವೆ. ಒಂದೋ ಅರ್ಧ ಅಳಿಸಿ ಹೋಗಿರುತ್ತವೆ. ಇಲ್ಲದಿದ್ದರೆ, "ಮೂತ್ರಾಲಯ" ಅನ್ನುವ ಶಬ್ಧಕ್ಕೆ ಕೊಂಚ ತಿದ್ದುಪಡಿ ಮಾಡಿ ಇನ್ನೊಂದಕ್ಕೆ ದಾರಿ ತೋರಿಸಿದ ಉದಾಹರಣೆ ಬೇಕಾದಷ್ಟಿದೆ.
ಭಾರತ ದೇಶದೊಳಗೆ ಬೇಕಾದಷ್ಟು ವಿಮಾನಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹಾರಾಡುತ್ತಿರುತ್ತವೆ. ಅಲ್ಲಿ ಏರ್ ಲೈನ್ಸ್ ಗಳು ಹಲವು ರಾಜ್ಯಗಳ ಭಾಷೆಗಳಲ್ಲಿ ಇಂತಹ ಸೂಚನಾ ಫಲಕ ಹಾಕಿವೆ. ಅಲ್ಲಿ ಎಲ್ಲಿಯೂ ಇಂತಹ ಕನ್ನಡದ ಮಾತು ಕಂಡ ಉದಾಹರಣೆಯಿಲ್ಲ. ಸಣ್ಣ ಉದಾಹರಣೆಯಂತೆ ಬೆಂಗಳೂರಿನಿಂದ ಮಂಗಳೂರಿಗೆ ಹಾರಾಡುವ ವಿಮಾನದಲ್ಲಿಯೂ ಕನ್ನಡದ ಸೂಚನಾ ಫಲಕ ಕಾಣ ಸಿಗುವುದಿಲ್ಲ. ಭಾರತ ದೇಶದೊಳಗೇ ಇಂತಹ ಪರಿಸ್ಥಿತಿ ಇರುವಾಗ ಕರ್ನಾಟಕ ರಾಜ್ಯದೊಳಗೇ ಹಾರಾಡುವ ವಿಮಾನಗಳ ಕನ್ನಡದ ಸೇವೆ ಏನು ಎಂದು ಪ್ರಶ್ನೆ ಬರುತ್ತವೆ.
ಕನ್ನಡ ಭಾಷೆ ಎಷ್ಟರ ಮಟ್ಟಿಗೆ ತನ್ನತನವನ್ನು ಗುರುತಿಸಿಕೊಂಡಿದೆ ಮತ್ತು ಕನ್ನಡಿಗರು ಎಷ್ಟರ ಮಟ್ಟಿಗೆ ಹಿಂದುಳಿದಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಇನ್ನೊಂದಿಲ್ಲ. ಅದು ಸಾಮಾಜಿಕವಾಗಿ ಮತ್ತು ಮಾನಸೀಕವಾಗಿ ಅನ್ನೋ ವಿಷಯವೂ ಸೇರಿದೆ. ಅಭಿವೃದ್ದಿಯಲ್ಲಿ ಶೂನ್ಯ ಅನ್ನುತ್ತಲೇ ಕನ್ನಡಿಗರು ತಮ್ಮತಮ್ಮೊಳಗೆ ಹೊಡೆದಾಡುವುದು ಸರ್ವೇ ಸಾಮಾನ್ಯವಾಗಿರುವಾಗ, ಅವರ ಸಂಕುಚಿತ ಮನೋಭಾವಗಳು ಕನ್ನಡವನ್ನು ಕುಂಠಿತಗೊಳಿಸುತ್ತಿವೆ. ಕನ್ನಡವನ್ನು ಕನ್ನಡಿಗರೇ ನಾಶ ಮಾಡುತ್ತಿದ್ದಾರೆ. ತಾವು ಬೆಳೆಸುವುದೂ ಇಲ್ಲ, ಬೆಳೆಸುವವರನ್ನು ಬಿಡುವುದೂ ಇಲ್ಲ.
ಇವೆಲ್ಲಾ ಸಂಕುಚಿತ ದೌರ್ಬಲ್ಯಗಳ ನಡುವೆ ವಿದೇಶದ ಅಂತರ ರಾಷ್ಟ್ರೀಯ ವಿಮಾನಗಳಲ್ಲಿ ಇಂತಹ ಕನ್ನಡದ ಪದಗಳು ಮೇರು ಮಟ್ಟದಲ್ಲಿ ನಿಲ್ಲುತ್ತವೆ. ಅದೇ ರೀತಿಯಲ್ಲಿ ಕನ್ನಡದ ನೆಲದಲ್ಲಿ ಕನ್ನಡಕ್ಕಾಗಿ ಹೋರಾಡುವ ಸಂಘಟನೆಗಳು ತಮ್ಮ ನಾಡಿನಲ್ಲೇ ಹಾರಾಡುವ ವಿಮಾನಗಳಲ್ಲಿ ಇಂತಹ ಅಚ್ಚ ಕನ್ನಡದ ಮಾಹಿತಿಯನ್ನು ಕಂಡಿದ್ದಾರೋ ಅನ್ನುವುದು ಪ್ರಶ್ನೆ. ಭಾಷೆಯನ್ನು ಸಮಾಜದ ಮುಖವಾಣಿಗೆ ಉಪಯೋಗಿಸಿಕೊಂಡಿರುವವರು ಇದರ ಬಗ್ಗೆ ಆಲೋಚಿಸಬೇಕು. ಭಾರತದಲ್ಲಿ ಕನ್ನಡ ಶಾಸ್ತ್ರೀಯ ಸ್ಥಾನ ಮಾನ್ಯತೆಯನ್ನು ಪಡೆದುಕೊಂಡಿದೆ. ಎಲ್ಲಾ ಏರ್ ಲೈನ್ಸ್ ಗಳು ತಮಗೆ ಇಷ್ಟ ಬಂದ ಭಾಷೆಯಲ್ಲಿ ಮಾಹಿತಿಯನ್ನು ಸೂಚನಾ ಫಲಕಗಳಲ್ಲಿ ತೂಗಿಸುತ್ತಿವೆ. ಎಷ್ಟು ವಿಮಾನಗಳಲ್ಲಿ ಕನ್ನಡದ ಅಕ್ಷರಗಳಿವೆ ಅನ್ನೋದು ಇದುವರೆಗೆ ಯಾವ ಕನ್ನಡ ಸಂಘಟನೆಗಳು ಪತ್ತೆ ಹಚ್ಚಿಲ್ಲ.
-ರವಿ ಮೂರ್ನಾಡು
ತುಂಬಾ ಖುಷಿಯಾಯ್ತು. ಇಲ್ಲಿ ನಮ್ಮ ಕನ್ನಡ ನೆಲದಲ್ಲೇ ಕನ್ನಡ ನಾಮ ಫಲಕಗಳು ಕಾಣೆಯಾಗುತ್ತಿರುವಾಗ. ವಿಮಾನದಲ್ಲಿ ಕನ್ನಡ ಮೆಚ್ಚುಗೆಯಾಯ್ತು.
ಪ್ರತ್ಯುತ್ತರಅಳಿಸಿಹೀಗೆಯೇ ಕನ್ನಡ ಲಿಪಿ ಜನಜನಿತವಾಗಲಿ. "ಯಾವುದಪ್ಪಾ ಇಷ್ಟು ಮುದ್ದಾದ ಲಿಪಿ? ಲಿಪಿಯೇ ಇಷ್ಟು ಮುದ್ದಾಗಿದ್ದರೆ, ಭಾಷೆ ಇನ್ನೆಷ್ಟು ಮುದ್ದಾಗಿರಬಹುದು" ಎನ್ನುವಂತೆ ಅನ್ಯ ಭಾಷೀಯರು ಕನ್ನಡ ಕಲಿಯುವಂತೆ ಆಗಲಿ. ಮುಖ್ಯವಾಗಿ ನಾವು ಕನ್ನಡಿಗರೂ.