ಗುರುವಾರ, ನವೆಂಬರ್ 8, 2012

ಅವನು ತುಂಬಾ ಒರಟ - ಒಮ್ಮೆ ಕಣ್ಣೀರಿಳಿಸಿ ಪ್ರೀತಿಸಿದ್ದ..! (ಭಾಗ-2)



" ಹೇ ಶಾಲೆಗೆ ಹೊರಟಿದ್ದೀಯೇನೋ?"
ಚಂದ್ರಿ ತಲೆ ಬಾಚುತ್ತಾ ಹೊರಗೆ ಅರಚುತ್ತಿದ್ದಾಳೆ. ಚೆಂದದ ಹುಡುಗಿ. ಸೊಂಟ ಮುಟ್ಟಿದ ಮುಡಿ. ಆರನೇ ಕ್ಲಾಸು. ಅವಳ ಮೂಗುತಿ ಬೊಟ್ಟು ಮಿನುಗುತ್ತಿದೆ..
" ಚಂದ್ರಕ್ಕ ಹೊರಡುತ್ತಿದ್ದೇನೆ "
ಅಹಾ..! ಇವತ್ತು ಶಾಲೆಯ ಬೆಳ್ಳಿ ಮಹೋತ್ಸವ... ನಾನು ಪಸ್ಟು ರ‍್ಯಾಂಕ್.ಚಡ್ಡಿಯ ಗುಂಡಿಯೊಂದು ಬಿಟ್ಟು ಹೋಗಿದೆ. ಅವರೆಲ್ಲರೂ ನೋಡಿದರೋ? ಅಂಗಿಯನ್ನು ಉದ್ದ ಬಿಡುತ್ತೇನೆ. ಚಂದ್ರಿಗೂ ಪ್ರಶಸ್ತಿ ಇದೆಅವಳು ಎರಡನೇ ರ‍್ಯಾಂಕ್.
ಏಳು ಮೈಲು ದೂರದ ದಾರಿಯಲ್ಲಿ ಸುಂಟಿಕೊಪ್ಪದ ಶಾಲೆಯೇ ಕಾಣುತ್ತಿದೆ. ಪಟ್ಟಣಕ್ಕೆ ಸಮೀಪಿಸುತ್ತಿದ್ದಂತೆ ಎಲ್ಲಿಯೋ ಸಿನೇಮಾ ಹಾಡು. ಹತ್ತಿಹತ್ತಿರ ಬರುತ್ತಿದ್ದಂತೆ ಇನ್ನಷ್ಟು ಸುಶ್ರಾವ್ಯ.ನಡೆಯುತ್ತಾ ಮನಸ್ಸು ಕುಣಿಯುತ್ತಿದೆ. ಹೌದು ! ಅದು ನನ್ನ ಶಾಲೆಯ ಹಾಡು... ಅಹಾ..! ಎಲ್ಲರೂ ಸೇರಿದ್ದಾರೆ... ಪ್ರಶಸ್ತಿ ಕೊಡುವವರು ಯಾರು? ನಾನು ಫಸ್ಟು ರ‍್ಯಾಂಕು. ಎಲ್ಲಿ ಕುಳಿತುಕೊಳ್ಳವುದು? ಜಾಗ ಹುಡುಕುತ್ತಿದೆ ಚಂದ್ರಿ,ರಾಧೆ,ಗಿರಿಜಾ, ರವಿ, ಚಂದ್ರರ ಹತ್ತಾರು ಕಣ್ಣುಗಳು....
ಅದೋ ಅಲ್ಲಿ ಮೂರು ಖಾಲಿ ಕುರ್ಚಿ... ಚಂದ್ರಿ ನನ್ನ ಕೈ ಬಿಡಲೇ ಇಲ್ಲ.... ಅವಳು ಮುಂದೆ.. ನಾನು ಹಿಂದೆ. ಹಿಡಿದ ಕೈ ಅವಳನ್ನು ಗಟ್ಟಿಯಾಗಿ ಬಿಡಲೇ ಇಲ್ಲ.
"ಚಂದ್ರಕ್ಕ... ಪ್ರಶಸ್ತಿ ಅಲ್ಲಿ ಕೊಡುತ್ತಾರಾ?"
"ಸುಮ್ಮನೆ ಕುಳಿತುಕೊಳ್ಳೋ"
ಮಾತಾಡಲಿಲ್ಲ... ಚಪ್ಪಲಿಯಿಲ್ಲದ ಕಾಲು ನೆಲಕ್ಕೆ ಮುಟ್ಟದೆ ಮೇಲೆಯೇ ನಡುಗುತ್ತಿದೆ. ದಾರಿಯಲ್ಲಿ ನಡೆದು ಬರುವಾಗ ಮಣ್ಣು ಮೆತ್ತಿಕೊಂಡಿದೆ. ತೊಳೆದಿದ್ದರೆ ಚೆನ್ನಾಗಿತ್ತು. ಪ್ರಶಸ್ತಿ ಸ್ವೀಕರಿಸುವಾಗ ಎಲ್ಲರೂ ನೋಡಿದರೋ? ವೇದಿಕೆಯಲ್ಲಿ ಹತ್ತಾರು ಮಂದಿ... ಅಹಾ ! ಐದನೆ ಕ್ಲಾಸು ಕಾವೇರಿ ಟೀಚರು ಮೈಕಲ್ಲಿ ಏನೇನೋ ಹೇಳುತ್ತಿದ್ದಾರೆ. ಕೆಲವರು ಎದ್ದು ಕೈ ಮುಗಿದು ಕುಳಿತುಕೊಳ್ಳುತ್ತಿದ್ದಾರೆ. ಕೆಲವರು ಹಾಡಿದರು. ಅದೋ ಹೆಡ್ ಮಾಸ್ಟರು....! ಕೈಯಲ್ಲಿದ್ದ ಬೆತ್ತವೆಲ್ಲಿಟ್ಟಿದ್ದಾರೋ? ದಪ್ಪ ಕೊಂಬಿನಂತ ಮೀಸೆಯ ಸೋಮಣ್ಣ ಮಾಸ್ಟರು... ಕೈಯಲ್ಲಿ ಹೂಗುಚ್ಚವಿಡಿದು ಮುಖ್ಯಮಂತ್ರಿ ಗುಂಡೂರಾಯರಿಗೆ ಕೊಡುತ್ತಿದ್ದಾರೆ. ಅದೋ ಕೈಮುಗಿದು ನಕ್ಕರು...ಮೀಸೆಯನ್ನೊಮ್ಮೆ ಸರಿಯಾಗಿ ತೀಡುತ್ತಿದ್ದಾರೆ. ನನ್ನ ಪ್ರಶಸ್ತಿ ಎಲ್ಲಿ ಇಟ್ಟಿದ್ದಾರೋ?
"ಚಂದ್ರಕ್ಕ ಪ್ರಶಸ್ತಿ ಯಾವಾಗ ಕೊಡುತ್ತಾರೆ?"
"ಸುಮ್ಮನೇ ಕುಳಿತುಕೊಳ್ಳೋ"
ಆಯಿತು... ಅದೋ ಗಂಗಮ್ಮ ಟೀಚರು....! ಎತ್ತರವಾಗಿದ್ದಾರೆ.... ಓಹೋ ಹೀಲ್ಡ್ ಚಪ್ಪಲು ಸ್ವಲ್ಪ ಎತ್ತರದಲ್ಲೇ ಇದೆ....ಅಹಾ...! ಹೆಸರು ಕರೆಯುತ್ತಿದ್ದಾರೆ....ಚಂದ್ರಕ್ಕನ ಹೆಸರು ಕರೆದರು...
"ಚಂದ್ರಕ್ಕ ಕರೆಯುತ್ತಿದ್ದಾರೆ"
ಲಗುಬಗೆನೆ ವೇದಿಕೆಯೆಡೆಗೆ ಓಡಿದ ಚಂದ್ರಕ್ಕ ಒಂದು ದೊಡ್ಡ ಪೊಟ್ಟಣ ಸ್ವೀಕರಿಸಿದಳು. ಅವಳ ಹಿಂದೆ ಮತ್ತೊಬ್ಬ ಹುಡುಗ, ಅವನ ಹಿಂದೆ ಮತ್ತೊಬ್ಬಳು.. ನನ್ನ ಹೆಸರೋ?
ವೇದಿಕೆಯಿಂದ ಬಂದ ಚಂದ್ರಕ್ಕನ ಕೈಯಲ್ಲಿದ್ದ ಪೊಟ್ಟಣವನ್ನೊಮ್ಮೆ ಸವರಿ ನೋಡುತ್ತೇನೆ. ಒಳಗೆ ಗಟ್ಟಿಯಿದೆ... ಪುಸ್ತಕವೋ ?
"ನಿನ್ನ ಹೆಸರು ಕರೆಯುತ್ತಿದ್ದಾರೆ.... ಬೇಗ ಹೋಗು "
ನನ್ನ ಮುಖದಲ್ಲಿದ್ದ ಬೆವರನ್ನೊಮ್ಮೆ ಚಂದ್ರಕ್ಕ ಒರೆಸಿದಳು.....ತಲೆಗೂದಲು ಸರಿಪಡಿಸಿ ಸವರಿ ವೇದಿಕೆಗೆ ಕಳುಹಿಸಿದಳು."ಮೆಲ್ಲೆಗೆ ಹೋಗು".  ಹೊರಗೆ ಇಣುಕುತ್ತಿದ್ದ ಗೊಣ್ಣೆಯನ್ನೊಮ್ಮೆ ಏರಿಸಿ ಕಾಲು ನಡುಗುತ್ತಲೇ ವೇದಿಕೆಗೆ ಓಡುತ್ತಿದೆ....ಒಂದು ದೊಡ್ಡ ಪೊಟ್ಟಣ ಕೈಗೆ ಸಿಕ್ಕಿತು...ನಿದ್ದೆಯಲ್ಲಿ ಕಾಣುತ್ತಿದ್ದ ಬಣ್ಣದ ಪೊಟ್ಟಣ ಇದೇ ಇರಬೇಕು..!
ಪೊಟ್ಟಣ ಹಿಡಿದು ಮೆಟ್ಟಿಲಿಳಿಯುತ್ತಿದ್ದೇನೆ... ನಾನು ಫಸ್ಟು ರ‍್ಯಾಂಕು..!.ವೇದಿಕೆಯಲ್ಲಿ ಯಾರೂ ಕಾಣುತ್ತಿಲ್ಲ. ಎದೆವರೆಗೆ ಬಂದ ಪೊಟ್ಟಣವೇ ಕಾಣುತ್ತಿದೆ. ಅಬ್ಬಾ...! ಇನ್ನು ಮಾಮ ಹೊಡೆಯಲಾರರು....ಇಪ್ಪತ್ತು ಮನೆ ಸರಿಯಾಗಿ ಹೇಳುತ್ತೇನೆ.... ಅಕ್ಷರವೋ? ...ಕೋಳಿ ಕಾಲು... ಸರಿಯಾಗಿ ಬರೆಯುತ್ತೇನೆ.... ಅಕ್ಷರ ಚೆನ್ನಾಗಿ ಬರೆದರೆ ಇನ್ನೊಂದು ಪ್ರಶಸ್ತಿ ಕೊಡಬಹುದೋ?

ಪೊಟ್ಟಣವನ್ನು ಬಿಡಲೇ ಬಾರದು...ಮನೆಗೆ ಹೋಗಿ ಅಜ್ಜಿಗೆ ಕೊಡುತ್ತೇನೆ....ತೋಟದ ಕೆಲಸ ಮುಗಿಸಿ ಬಂದಿರಬಹುದು... ಅಯ್ಯೋ ಕೈ ಸೋಲುತ್ತಿದೆ....ಒಳಗೇ ಏನಿದೆಯೋ? ಗಟ್ಟಿಯಿದೆ....ಅಜ್ಜಿ ನಾನು ಫಸ್ಟು ರ‍್ಯಾಂಕ್....!
ಚಿಕ್ಕಮ್ಮ- ಅಜ್ಜಿ ಎಲ್ಲಿ? ಅಹಾ...! ಅಲ್ಲಿದ್ದಾರೋ.. ಅಡುಗೆ ಮನೆಗೆ ಓಡುತ್ತೇನೆ...ಅಜ್ಜಿ ಪೊಟ್ಟಣ ತೆರೆಯುತ್ತಿದ್ದಾಳೆ...ನನ್ನ ಕೈಗಳ ಬೆವರು ಪೊಟ್ಟಣದ ಮೇಲಿನ ಕಾಗದವನ್ನು ನೆನೆಸಿ ಬಿಟ್ಟಿದೆ.... ಒಳಗೇ ಏನಿದೆ ಅಜ್ಜಿ? ಎರಡನೇ ತರಗತಿಗೆ ಓದಲು ಬೇಕಾದ ಎಲ್ಲಾ ಪುಸ್ತಕಗಳು.. ಪೆನ್ನು, ಪೆನ್ಸಿಲು.. ರಬ್ಬರು... ಒಂದು ಕಂಪಾಸು...! ಅಜ್ಜಿಗೆ ಪುಸ್ತಕ ತೆಗೆಯುವ ಹಣದ ಖರ್ಚು ಉಳಿಯಿತು.... ಹಾಗೇ ತೆಗೆದು ಕಬ್ಬಿಣದ ಪೆಟ್ಟಿಗೆಗೆ ಇಡುತ್ತಿದ್ದಾಳೆ...ಹಿಂದೆ ಹಿಂದೆಯೇ ಸೆರಗಿಡಿದು ಓಡುತ್ತೇನೆ...
ಅಜ್ಜಿ ಮಾಮ ಬರುತ್ತಾರಾ?
ಹೌದು ಬರುತ್ತಾರೆ. ಅವರೀಗ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪೊಲೀಸು. ಕರಾಟೆ ಕಲಿತಿದ್ದಾರಂತೆ... ಕರಾಟೆ ಆಡುವಾಗ ತೊಡುವ ಬಿಳಿ ಬಟ್ಟೆಯಲ್ಲಿ ಒಂದು ಕಪ್ಪು ಪಟ್ಟಿ ಕಟ್ಟಿಕೊಳ್ಳುತ್ತಾರೆ.. ಕಳೆದ ವಾರ ಅಜ್ಜಿ ಬಟ್ಟೆ ಒಗೆಯುವಾಗ ನೋಡಿದ್ದೆ. ರೌಡಿಗಳನ್ನು ಒಬ್ಬರೇ ಹೊಡೆಯಬಹುದು.. ಗಿರಿಕನ್ಯೆ ಸಿನೇಮಾದಲ್ಲಿ ರಾಜ್ ಕುಮಾರ್ ಹೊಡೆದಂತೆ.. ಶಾಲೆಯಲ್ಲಿ ನಮ್ಮ ತರಗತಿಯ ಮಮ್ಮದು ದೊಡ್ಡವನು. ಎಲ್ಲರಿಗೂ ಹೊಡೆಯುತ್ತಾನೆ. ಅವನಿಗೆ ಮಾಮ ಕರಾಟೆ ಹೊಡೆಯಬೇಕು... ಹೆಡ್ ಮಾಸ್ಟರು ಯಾವಾಗಲೂ ಹೊಡೆಯುತ್ತಾರೆ... ಅವರಿಗೂ ಹೊಡೆಯಬೇಕು.. ನಾನು ದೊಡ್ಡವನಾಗಬೇಕು... ಕರಾಟೆ ಕಲಿಯಬೇಕು.....ಅಕ್ಷರ ಕೋಳಿ ಕಾಲು... ಮಾಮ ಹೊಡೆದರೋ?

ಮೂಗು ಹಿಂಡಿ ಗೊಣ್ಣೆಯನ್ನು ಹೊರತೆಗೆಯುತ್ತಿದ್ದಾಳೆ ಅಜ್ಜಿ. ಮುಖದಲ್ಲಿದ್ದ ಬೆವರು ಒರೆಸಿ ಕೇಳುತ್ತಾಳೆ.... ಕೈಕಾಲು ತೊಳೆದಿದ್ದೀಯಾ ಮಗು ? ದೇವರ ಮುಂದೆ ಕೈ ಮುಗಿದು ಹೇಳಿದಳು...
"ನಿನ್ನನ್ನು ಮಾಮ ನಾಪೋಕ್ಲು ಶಾಲೆ ಹಾಸ್ಟೆಲ್ ಗೆ ಸೇರಿಸುತ್ತಾನಂತೆ"
ಅಯ್ಯೋ...ಮೂಗಲ್ಲಿ ಸುರಿಯುವ ಗೊಣ್ಣೆ ತೆಗೆಯುವವರು ಯಾರು? ಮುಖದ ಬೆವರು ಒರೆಸುವವರು.... ಹೊರಗೆ ಬೊಗ್ಗಿ  ನಾಯಿ ಬೊಗಳುತ್ತಿದೆ....ಮರಿಗಳು ದೊಡ್ಡದಾಗಿವೆ...ಮೊಟ್ಟೆಯೊಡೆದ ಮರಿಗಳು ಕೋಳಿಗಳಾಗಿವೆ. ಒಂದು ವಾರದಲ್ಲಿ ಮೊಟ್ಟೆಯಿಡಬಹುದು...!
ಚಂದ್ರಕ್ಕ ನಾನು ದೂರದ ಊರಿಗೆ ಹೋಗುತ್ತೇನೆ...ಚಂದ್ರ,ರವಿ, ಮುರಳಿ,ಗಿರಿಜಾ,ರಾಧೆ....ಅದೋ ಸಂಜೆಯಾಗುತ್ತಿದೆ. ಮುಳುಗುತ್ತಿದ್ದ ಸೂರ್ಯ ಮೋಡಗಳಿಗೆ ಬಣ್ಣ ಬಳಿಯುತ್ತಿದ್ದಾನೆ.. ಮರದ ಪೊಟರೆಗಳಲ್ಲಿ ಮರಿಗಳು ಅಳುತ್ತಿವೆ. ಹಕ್ಕಿಗಳು  ಒಂದೊಂದಾಗಿ ಗೂಡು ಸೇರುತ್ತಿವೆ. ಮರಿಗಳು ಅಳು ನಿಲ್ಲಿಸುತ್ತಿವೆ...ಛೆ...! ಹಗಲಲ್ಲಿ ಬಿಸಿಯಿದ್ದ ಗಾಳಿ, ತಣ್ಣಗೆ ಬೀಸಿ. ಮರಗಳೆಡೆಗೆ ನುಸುಳಿ ಸೀಟಿ ಊದುತ್ತಿವೆ....! ಶಾಲೆ ಚೀಲ ತೆರೆದು  ಮಗ್ಗಿ ಪುಸ್ತಕ ಮಗುಚುತ್ತೇನೆ. ಕಣ್ಣು ಮುಚ್ಚಿಯೇ ಇದ್ದ ನವಿಲುಗರಿ ಕಣ್ಣು ಮೆಲ್ಲೆಗೆ ತೆರೆಯುತ್ತಿದೆ. ಗಾಳಿಗೆ ಒಂದು ಎಳೆ ಗರಿ ಸಣ್ಣಗೆ ಅದುರಿತು...ಮತ್ತೆ ಪುಸ್ತಕ ಮುಚ್ಚುತ್ತೇನೆ.. ನವಿಲುಗರಿ ಮತ್ತೆ ಕಣ್ಣು ಮುಚ್ಚಿರಬಹುದು..!

ದಡಕ್ಕನೇ ಎಚ್ಚರವಾಗುತ್ತೇನೆ...ಯಾರೂ ಕಾಣುತ್ತಿಲ್ಲ.. ಕಣ್ಣು ಬಿಡಲಾಗುತ್ತಿಲ್ಲ... ಅಯ್ಯೋ ನೋವು..! ಮೈಯೆಲ್ಲ ಬಿಸಿ.
ಯಾರೋ ಕೋಣೆಗೆ ನಡೆದು ಬರುತ್ತಿದ್ದಾರೆ... ಯಾರದು? ಅದೋ ಹತ್ತಿರ ಬಂದರು... ಪಕ್ಕದಲ್ಲಿ ನಿಂತರು...ಹಣೆಗೆ ಕೈಯಿಟ್ಟರು...
" ತುಂಬಾ ಜ್ವರವಿದೆ ಹುಡುಗನಿಗೆ... ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಎರಡು ದಿನ ಮಾತ್ರೆ ಕೊಡಿ"

ಈ ಎಲ್ಲವೂ ಎಲ್ಲಿಗೆ ಹೋಗುತ್ತಿದೆ...? ಅದೋ ಬಸ್ಸು, ಕಾರು, ಮರಗಳು ನಿಂತಲ್ಲೇ ಓಡುತ್ತಿವೆ... ನಡೆವ ಜನರು ಹಿಂದೆ ಹೋಗುತ್ತಿದ್ದಾರೆ....ಚಂದ್ರಿ,ರವಿ,ಗಿರಿಜಾ, ನನ್ನ ಶಾಲೆ, ಅದೋ ಕುಳ್ಳಿ ಗಂಗಮ್ಮ ಟೀಚರು..! ತರಗತಿಯ ಮಕ್ಕಳೆಲ್ಲರೂ ಮಗ್ಗಿ ಮರೆಯುತ್ತಿದ್ದಾರೆ.!
"ಇವರಿಗೆ ಮಗ್ಗಿ ಹೇಳಿಕೊಡು ಮಗು"

ಅಬ್ಬಾ...! ಏನೊಂದು ಬೆವರು..ಚೆನ್ನಾಗಿ ನೀರು ಕುಡಿಯಬೇಕು... ಜ್ವರ ತಲೆಗೆ ಬಂದಿದೆ....ನೆನೆಸಿದ ಬಟ್ಟೆಯೊಂದು ಹಣೆಗೆ ಮಲಗಿ ಒಣಗುತ್ತಿದೆ... ಅಹಾ.... ನಿದ್ದೆ !
ಇಲ್ಲೇ ಯಾರೋ ಪಕ್ಕದಲ್ಲೇ ಕುಳಿತಿದ್ದಾರೆ...ಕೈ ಕಾಲು, ಎದೆ, ಹೊಟ್ಟೆಗೆ ಬೆರಳುಗಳು ಉಜ್ಜುತ್ತಿದೆ... ಅಮೃಂಜನ ಸುವಾಸನೆ.. ಶೀತವಿದೆಯೋ?
ಅದೋ ಬೆರಳುಗಳು ಹಣೆಗೆ ತಿಕ್ಕಿ- ಕೂದಲು ಸವರುತ್ತಿದೆ. ಇದೇನಿದು ಬಿಸಿ ಬಿಸಿ?!. ಹನಿ ನೀರು ಕೆನ್ನೆಗೆ ಜಾರುತ್ತಿದೆ. 
ಯಾರಿದು? ಅಮ್ಮನೋ, ಅಜ್ಜಿಯೋ ? ಕಣ್ಣು ಬಿಡಲಾಗುತ್ತಿಲ್ಲ. ! ಒಮ್ಮೆ ತೆರೆಯಬಾರದೆ? ಅಷ್ಟೊಂದು ಜ್ವರವೇ?
ಅಬ್ಬಾ..! ಗಟ್ಟಿ ಎದೆ.... ಅಮ್ಮ ತಬ್ಬಿದಷ್ಟೇ ವಾತ್ಸಲ್ಯ ಸುಖ... ಗಟ್ಟಿಯಾಗಿ ತಬ್ಬಿದ್ದಾರೆ.. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ...ಹಣೆಗೆ ಮುತ್ತಿಕ್ಕಿದೆ ಅವರ ಗಡಸು ಮೀಸೆ ಮುಚ್ಚಿದ ತುಟಿ..!.
ಸಣ್ಣಗೆ ಕಣ್ಣು ಬಿಡುತ್ತೇನೆ.... ಮಾಮಾ.....!
ಮತ್ತಷ್ಟೂ ರೆಪ್ಪೆ ಅಗಲಿಸಿ ಕಣ್ಣು ಬಿಡುತ್ತೇನೆ....ತುಂಬಿಕೊಂಡ ಕಣ್ಣು ಮಬ್ಬು ಮಬ್ಬು.. ಒರೆಸುತ್ತಿದ್ದಾರೋ?.. ತನ್ನ ಕಣ್ಣನ್ನು ತಾನೇ ಒರೆಸಿಕೊಳ್ಳುತ್ತಿದ್ದಾರೆ..!
ಮತ್ತೆ ನಾಲ್ಕು ಬೆರಳುಗಳು ಹಣೆಗೆ ಬಿಸಿ ಮುಟ್ಟಿಸುತ್ತಿತ್ತು. .ಮತ್ತೆ ಕಣ್ಣು ರೆಪ್ಪೆ ಅಗಲಿಸಿ ಎಚ್ಚರವಾಗುತ್ತೇನೆ....
"ಜ್ವರ ವಾಸಿ ಆಗಿದೆ ಮಾಮಾ"
ಒಳ್ಳೆಯದು.. ನಾಳೆ ಹಾಸ್ಟೆಲ್ ಗೆ ಹೋಗು.
ಚೀಲ ಹೆಗಲಿಗೇರಿಸಿ ಬಾಗಿಲಿಗೆ ಮತ್ತೆ ಮತ್ತೆ ನೋಡುತ್ತಲೇ ಇದ್ದೆ... ಮಗ್ಗಿ ಹೇಳುವಾಗ ತಡವರಿಸುತ್ತಿದೆ ಬಿಕ್ಕಳಿಕೆ ನಾಲಗೆ... ಹೊಡೆಯಲಾರದ ಕರಾಟೆ ಕೈಗಳು ಮತ್ತೆ ತಬ್ಬಿಕೊಳ್ಳಲು ಹವಣಿಸಿದವು.. ಗಾಳಿ ರಭಸವಾಗಿ ತಲೆ ಗೂದಲು ಮೆಲ್ಲೆನೆ ಸವರ ತೊಡಗಿತು..
"ಮಾಮ ನಾನು ಫಸ್ಟು ರ‍್ಯಾಂಕ್"
-ರವಿ ಮೂರ್ನಾಡು

2 ಕಾಮೆಂಟ್‌ಗಳು:

  1. ಚಂದ್ರಿಯ ಚಿತ್ರಣ ನನಗೆ ನನ್ನ ಬಾಲ್ಯದ ಗೆಳತಿ ಮೀನಾಕ್ಷಿ ನೆನಪಿಸಿತು.

    ಚಪ್ಪಲಿಯಿಲ್ಲದ ಕಾಲು ಆ ಬಡತನದ ದಿನಗಳನ್ನು ತೆರೆದಿಟ್ಟಿತು.

    ಬಾಲ್ಯದಲ್ಲಿ ಸಿಗುವ ಪ್ರಶಸ್ತಿಗಲ ನೆನಪೇ ಹಸಿರು.

    ಈ ತರಹ ಮಕ್ಕಳಿಗೆ ಉಪಯೋಗವಾಗುವ ಗಿಫ್ಟ್ ಕೋದಬೇಕು.

    ಹಾಸ್ಟೆಲ್ ವಾಸದ ಬಗೆಗೆ ತಿಳಿದುಕೊಳ್ಳುವ ಕುತೂಹಲವಿದೆ. ಏಕೆಂದರೆ ನಾನೂ ಆರನೇ ತರಗತಿಯಿಂದ ಕಡೆಯವರೆಗೂ ಹಾಸ್ಟೆಲುಗಳ ವಾಸಿಯೇ.

    ಪ್ರತ್ಯುತ್ತರಅಳಿಸಿ
  2. ಇಷ್ಟರಲ್ಲೇ ಎಷ್ಟೊಂದು ನೆನಪುಗಳು ಸರ್... ಕಣ್ಣು ಒದ್ದೆಯಾಗುವಷ್ಟು.... ಸೊಗಸಾಗಿದೆ ಸರ್ ನಿಮ್ಮ ಬರಹ.....ಧನ್ಯವಾದ...

    ಪ್ರತ್ಯುತ್ತರಅಳಿಸಿ