ಭಾನುವಾರ, ನವೆಂಬರ್ 4, 2012

ಅವನು ತುಂಬಾ ಒರಟ - ಒಮ್ಮೆ ಕಣ್ಣೀರಿಳಿಸಿ ಪ್ರೀತಿಸಿದ್ದ..! (ಭಾಗ-1)


-ರವಿ ಮೂರ್ನಾಡು

ಗಾಢಾಂಧಕಾರದ ಕಾಡಲೊಬ್ಬ ರಾಕ್ಷಸ. ಗರಗರಸ ಹಿಡಿದು ಗಹಗಹಿಸಿ ನಗುತ್ತಾ ಸಿಂಹದ ಮೇಲೇರಿ ಬರುತ್ತಿದ್ದಾನೆ. ಹುಲಿ-ಚಿರತೆ-ಆನೆಗಳು ಚೆಲ್ಲಾಪಿಲ್ಲಿಯಾಗಿ ಓಡುತ್ತಿವೆ. ಅದೋ .. ಅದೋ ಹಕ್ಕಿಗಳು ದಿಕ್ಕಿಲ್ಲದೆ ಹಾರುತ್ತಿವೆ.. ಇದೋ ಮಂಗಗಳು ಮರದಿಂದ ಮರಕ್ಕೆ ನೆಗೆಯುತ್ತಿವೆ. ಅದರ ಮರಿಗಳು ಅದರ ಹೊಟ್ಟೆಗಂಟಿವೆ...ಉದ್ದುದ್ದ ಮರಗಳು ಒಂದಕ್ಕೊಂದು ತೀಡಿಸಿ ಕೆಲವಷ್ಟು ಮುರಿದು ಕೆಳಗೆ ಬೀಳುತ್ತಿವೆ.... ಸುತ್ತಲೂ ಅಟ್ಟಹಾಸಗಳು, ಕೆಲವು ಆರ್ತಸ್ವರಗಳು.ಆ ರಾಕ್ಷಸ ಹಸಿವು ಹಸಿವು ಎನುತ ಬರುವ ದಾರಿಯಲಿ ಜಿಂಕೆಯ ಹಿಂಡೊಂದಕ್ಕೆ ಕಣ್ಣಾಯಿಸಿದ. ದಿಕ್ಕೆಟ್ಟು ಓಡುತ್ತಿದ್ದ ಮರಿಯೊಂದನ್ನು ಹಿಡಿದು ಅದರ ಕುತ್ತಿಗೆಗೆ ಗರಗಸದಂತ ಹಲ್ಲು ಸಿಕ್ಕಿಸಿ ರಕ್ತ ಕುಡಿದು ಬಿಸಾಡಿದ. ಜಿಂಕೆ ಮರಿ ಕೈಕಾಲು ಅಲ್ಲಾಡಿಸದೆ ನೆಲಕ್ಕುರುಳಿತು.. ಬಾಯಲ್ಲಿ ಹುಲ್ಲು ಹಾಗೇ ನಾಲಗೆಗೆ ಕಚ್ಚಿ ಕುಳಿತಿದೆ. ರಾಕ್ಷಸ ಹೋದ ಮೇಲೆ ಅದರ ಅಮ್ಮ ಮರಿಯ ಸಮೀಪ ಬಂದು ಅತ್ತ ಇತ್ತ ಕತ್ತು ತಿರುಗಿಸಿ ಆಗಸ ನೋಡುತ್ತಿದೆ. ಬಿರುಸು ಗಾಳಿಯೊಂದು ಬೀಸಿ ನಿಟ್ಟುಸಿರಿಟ್ಟಿತು. ಮರಿಯ ಅಸ್ಥಿಪಂಜರ ಸ್ವಲ್ಪ ಅಲುಗಾಡಿತು. ಅಮ್ಮಾ.. ಎಂದು ಗಾಳಿ ಅಳುತ್ತಿರುವ ಸ್ವರ ಕೇಳುತ್ತಿದೆ.
ಪಕ್ಕನೇ ಮಗ್ಗುಲು ಮಗುಚಿದ. ಮತ್ತೊಮ್ಮೆ ಇತ್ತ...
"ಕನಸು ಬಿತ್ತೇನೋ?"

ಅಜ್ಜಿಯನ್ನು  ಗಟ್ಟಿಯಾಗಿ ಅವುಚಿ ಹಿಡಿದುಕೊಂಡ. ರಾಕ್ಷಸ ಇನ್ನು ಬರಲಾರ !. ಅಜ್ಜಿ ಎದೆಗೆ ತಟ್ಟಿ ಮತ್ತೊಮ್ಮೆ ಮಲಗಿಸಿದರು. ಇಲ್ಲೆಲ್ಲಾ ಪ್ರೇತಗಳು ಓಡಾಡುತ್ತಿವೆ. ಲೈನ್ ಮನೆಯ ಚಂದ್ರಿ,ರವಿ,ಗಿರೀಜಾ ಹೇಳಿದ್ದರು. ಕಣ್ಣು ಬಲವಾಗಿ ಮುಚ್ಚಿದಂತೆ ನಿದ್ರೆ ಕಣ್ಣೊಳಗೆ ಇಳಿಯತೊಡಗಿತು.
" ಅದೋ ಯಾರೋ ಲೈನ್ ಮನೆಯ ವೆರಾಂಡದಲ್ಲಿ ಓಡುತ್ತಿರುವ ಶಬ್ದ, ಆಹಾ.. ನಿಂತರು.... ಕಿರುಚುತ್ತಿದ್ದಾರೆ.. ಅವರು ಹೇಳಿದ ಪ್ರೇತಗಳು... ಬಿಳಿ ಬಟ್ಟೆ..."
ಗಾಳಿ ರೂಯ್ಯನೇ ಕಾಫಿ ಗಿಡಗಳ ಸೀಳಿ ಓಡುತ್ತಿವೆ. ಪ್ರೇತಗಳಿಗೆ ಕಾಲುಗಳಿಲ್ಲ.. ಗಾಳಿಯಂತೆ ಮಾಯವಾದಂತಿದೆ. ಅಹಾ... ಹೌದು. ಎಲ್ಲವೂ ಹೋದವು...!

ಕಣ್ಣು ಬಿಟ್ಟಾಗ ಗೊತ್ತಾಯಿತು... ಇವತ್ತು ಭಾನುವಾರ... ದೊಡ್ಡ ಮಾವ ಬರುತ್ತಾರೆ....ರಾತ್ರಿ ಓಡಾಡಿದ ಪ್ರೇತವೊಂದು ದಿನದಲ್ಲಿ ಓಡಾಡಿತು.!
ಅವನನ್ನು ಕಂಡರೆ ಮನಸ್ಸು ಭಯದಲ್ಲಿ ಮುಳುಗೇಳುತ್ತಿತ್ತು. ಯಾವುದೋ ರಾಕ್ಷಸನ ಎದುರು ನಿಂತು ಪ್ರಶ್ನೆಗೆ ಉತ್ತರ ಹೇಳಬೇಕೆನ್ನುವಾಗ ಅಳುವೊಂದೆ ಬಾಕಿ. ಭಿಕ್ಕಿ ಅಳುವ ನಿಟ್ಟುಸಿರಿಗೂ ಮುಖ ಮೂತಿ ನೋಡದೆ ಹೊಡೆತ ಬೀಳುತ್ತಿತ್ತು. ಮೂಗಲ್ಲಿ ಸುರಿವ ಗೊಣ್ಣೆ ಒರೆಸುವ ಮುನ್ನವೇ ಮತ್ತೊಂದು. ಅವನು ಈ ದಿನ ಬರುತ್ತಾನೆ ಅನ್ನುವ ಸುದ್ಧಿ . ಬರುತ್ತಾನೆಯೇ?!
"ಅಜ್ಜಿ ಮಾಮ ಇವತ್ತು ಬರುತ್ತಾರಾ?"
ಹೌದು ಎನ್ನುತ್ತಿದ್ದಾರೆ. ಮುಗಿಯಿತು.. ಸಂತಸದಲ್ಲಿ ಕಳೆಯುವ ಶಾಲೆಯ ಈ ದಿನದ ರವಿವಾರದ ರಜೆಗೆ ನರಕದ ಕಳೆ ಕಟ್ಟುತ್ತಿದೆ.

ಮಾವಂದಿರಿಗೆ ಅಷ್ಟೊಂದು ಅಧಿಕಾರವೇ?.ನಾನು ದೊಡ್ಡವನಾಗಬೇಕು....ಅಹಾ...! ಆ ಕೈಯಿಂದಲ್ಲವೇ ಹೊಡೆಯುವುದು?. ಕೈ ಎತ್ತುವಾಗ ಅದನ್ನು ಹಿಡಿಯಬೇಕು...!
ಅವನು ಹೊಡೆಯುವ ಬಲದ ಕೈಯಲ್ಲಿ ಒಂದು ಉಂಗುರವಿದೆ..ನನ್ನ ಬೆರಳಿಗೂ ಅಂತಹದ್ದೊಂದು ಉಂಗುರ ಬೇಕು....! ಮನೆಯ ಗೋಡೆಯಲಿ ಅವನ ಭಾವಚಿತ್ರಗಳಿವೆ. ಸುಂಟಿಕೊಪ್ಪದ ಫೋಟೊ ತೆಗೆಯುವ ಅಂಗಡಿಯಲ್ಲಿ  ತೆಗೆದಿದ್ದು.  ಅದರ ಪಕ್ಕದಲ್ಲಿ ನನ್ನದೂ ಒಂದು ಭಾವಚಿತ್ರವಿರಬೇಕು..! ಅವನಿಗೆ ದೊಡ್ಡ ಮೀಸೆ ಇದೆ..ಅವನ ಹಾಗೆಯೇ ನಾನು ದೊಡ್ಡ ಮೀಸೆ ಬಿಡಬೇಕು...! ಎಲ್ಲಿದೇ ಆ ಕೋಲು ? ಅದನ್ನು ಇವತ್ತು ಅಡಗಿಸಿಡುತ್ತೇನೆ . ಅವನಿಗೆ ಸಿಗಲೇ ಬಾರದು. ಸ್ಕೇಲಂತೂ ಮುರಿದು ಹಾಕಿದ್ದೇನೆ... ಸ್ಲೇಟಲ್ಲಿ ಹೊಡೆದರೋ?!
ದೊಡ್ಡ ಮಾವ ಯಾಕೆ ಹೀಗೆ ಅಜ್ಜಿ ?

ಆ ತೋಟದ ಲೈನ್ ಮನೆಯ ಹಿತ್ತಲ ಕಾಫಿ ತೋಟದಲ್ಲಿ ಒಂಟಿಯಾಗಿ ಆಲೋಚಿಸುತ್ತೇನೆ. ಅವನು ಬಂದ ದಿನ ಕಾಫಿ ತೋಟದಲ್ಲಿ ಸುಮ್ಮನೆ ಕುಳಿತು ಸಂಜೆಯ ದೀರ್ಘ ಸಮಯವನ್ನು ತಡರಾತ್ರಿಯವರೆಗೆ ಕಳೆದು ಮನೆಗೆ ಬರುತ್ತೇನೆ. ತಡರಾತ್ರಿ ಮಾಡಿದ್ದಕ್ಕೂ ಹೊಡೆಯುತ್ತಾನೆ. ಯಾರೂ  ಅವನನ್ನು ತಡೆಯುವುದೇ ಇಲ್ಲ. ಯಾರಿಗೂ ನನ್ನ ಅಳು ಕೇಳುವುದಿಲ್ಲ. ಅಜ್ಜಿ , ಚಿಕ್ಕಮ್ಮನ ಹಿಂದೆ ಹಿಂದೆ ಹೋಗಿ ಅಳುತ್ತೇನೆ. ದೇವರಿಗೆ ಕೈ ಮುಗಿಯುತ್ತಿದ್ದ ಅಜ್ಜಿಯ ಸೆರೆಗಿಡಿದು ಮೊರೆಯಿಡುತ್ತೇನೆ....
" ಅಜ್ಜಿ.... ಮಾಮನಿಗೆ ಹೇಳು, ಇವತ್ತು ಹೊಡೆಯ ಬೇಡವೆಂದು"
ದೇವರಿಗೆ ಕೈ ಮುಗಿದು ವಿಭೂತಿ ನನ್ನ ಹಣೆಗಿಟ್ಟು ಹೇಳಿದಳು
"ಎಲ್ಲ ನಿನ್ನ ಒಳ್ಳೆಯದಕ್ಕಲ್ಲವೇ ಹೊಡೆಯುವುದು ಮಗು ".

ಒಂದು ಹಿಡಿ ಶಾಪ ಹಾಕಿ, ಇನ್ನಷ್ಟು ಅಳುತ್ತಿದ್ದ. ಅಲ್ಲಿರುವ ಮನೆಯ ಗೋಡೆಗಳು ಜೊತೆ ಸೇರುತ್ತಿವೆ. ಅವನನ್ನು ನೆನೆದಾಕ್ಷಣ ಅಲ್ಲಲ್ಲಿ ಹೊಲಿಗೆ ಬಾಯ್ಬಿಟ್ಟ ಶಾಲೆಯ ಪುಸ್ತಕದ ಚೀಲವನ್ನು ತೆರೆದು ನೋಡುತ್ತೇನೆ. ಹೌದು, ಎಲ್ಲವೂ ಸರಿಯಾಗಿದೆ. ಬರೆದ ಕಾಫಿ ರೈಟಿಂಗ್ ಮುಗಿಸಿದ್ದೇನೆ. ಮಗ್ಗಿ ಹೇಳುವಾಗ ತಡವರಿಸುತ್ತಿದೆ. ಇಪ್ಪತ್ತು ಮನೆ ಮಗ್ಗಿ  ಒಂದು ವಾರದಲ್ಲಿ ಕಲಿತು ಹೇಳಬೇಕೆಂದು ತಾಕೀತು ಮಾಡಿದ್ದ. ಒಂದನೇ ತರಗತಿ ಓದುವ ಯಾರೂ ಐದು ಮನೆಯವರೆಗೆ ಮಗ್ಗಿ ಸಲೀಸಾಗಿ ಹೇಳುವುದಿಲ್ಲ. ತರಗತಿ ಮಕ್ಕಳಿಗೆ ಮಗ್ಗಿ ಕಲಿಸಲು ಟೀಚರ್ ನನಗೆ ಹೇಳುತ್ತಾರೆ.. ನಾನೇ ಗಟ್ಟಿಗ.. ನಾನೇ ತರಗತಿಯ ನಾಯಕ.  ಮತ್ತೆ ಮಾವ ಯಾಕೆ ಹೊಡೆಯುತ್ತಾನೆಕೋಪ ಉಕ್ಕಿ ಬರುತ್ತಿದೆ...!

ದೂರದ ಯಾವುದೋ ಹೋಟೆಲಿನಲ್ಲಿ  ಅವನು ಕೆಲಸಕ್ಕಿದ್ದಾನೆ. ಶಾಲೆಯ ರಜಾ ದಿನದಲ್ಲೇ ಸುಂಟಿಕೊಪ್ಪ ಕಾಫಿ ತೋಟದ ಲೈನ್ ಮನೆಗೆ ಒಕ್ಕರಿಸುವುದು.. ಬರುವಾಗ ಬ್ಯಾಗು ತುಂಬಾ ತಿಂಡಿ . ಅವನ ಹೊಡೆತವೋ ಅಬ್ಬಾ!.....ಅವನ ತಿಂಡಿಯೂ ಬೇಡ. ಅಜ್ಜಿಯೊಂದಿಗೆ ಅಡುಗೆ ಕೋಣೆಯಲ್ಲೇ ಕಳೆಯುತ್ತೇನೆ. ಬರುವಾಗ ಪ್ರಜಾವಾಣಿ, ಸುಧಾ ಪತ್ರಿಕೆಗಳನ್ನು ಲೈನ್ ಮನೆಯ ವೆರಾಂಡದಲ್ಲಿ ಕುಳಿತು ಓದುತ್ತಿರುತ್ತಾನೆ.  ಅವನು ಹೋದ ಮೇಲೆ ಅದರ ಒಂದೊಂದೇ ಪುಟ ತೆರೆದು ಓದಬೇಕು.ಅಲ್ಲಿ ಒಳ್ಳೊಳ್ಳೆ ಚಿತ್ರಗಳಿರುತ್ತವೆ..  ಅವನು ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದನಂತೆ. ಅಜ್ಜಿ ಹೇಳಿದ್ದು.

ಅದೋ ಕತ್ತಲಾವರಿಸುತ್ತಿದೆ....ಎತ್ತರೆತ್ತರದ ಮರಗಳೆಡೆಯಲ್ಲಿ ರೆಂಬೆ-ಕೊಂಬೆಗಳು ಗಾಳಿಗೆ ಪಿಸುಮಾತಿಗಿಳಿಯುತ್ತಿವೆ. ಹಕ್ಕಿಗಳೋ...?. ಸದ್ದಿಲ್ಲ.. ಮರಿಗಳು ಚಿಲಿಪಿಲಿಗುಟ್ಟುತ್ತಿವೆ.
ಅವನು ಅಲ್ಲಿ ಮಂಚದಲಿ ಕುಳಿತಿದ್ದಾನೆ...
"ಮಗ್ಗಿ ಕಲಿತಿದ್ದೀಯೇನೋ?"
ಸದ್ದಿಲ್ಲ...
"ನಿನ್ನನ್ನೇ ಕೇಳುತ್ತಿರುವುದು.. ಹನ್ನೆರಡನೇ ಮನೆ ಮಗ್ಗಿ ಹೇಳು"
ದಡಬಡನೇ ಎದುರಿಗೆ ಕೈ ಕಟ್ಟಿ ನಿಂತಾಗ ಗಂಟಲು ಮಗ್ಗಿ ಹಾಡತೊಡಗಿತು.
"ಹನ್ನೆರಡೊಂದ್ಲಿ ಹನ್ನೆರಡಾ... ಹನ್ನೆರಡೆರಡ್ಲಿ ಇಪ್ಪಾ...ತ್ನಾಲ್ಕಾ .."
"ಹುಂ.. ಸರಿ..."
ಅಬ್ಬಾ...! ಅಜ್ಜಿ ದೇವರಿಗೆ ಕೈ ಮುಗಿದು ವಿಭೂತಿ ಇಟ್ಟಿದ್ದು ಒಳ್ಳೆಯದಾಯಿತು. ಬದುಕಿದೆ...ಹೊಟ್ಟೆ ಹಸಿಯುತ್ತಿದೆ... ಮೂಗಲ್ಲಿ ಗೊಣ್ಣೆ ಸುರಿಯುವುದು ನಿಂತಿದೆ...ಮೆಲ್ಲೆಗೆ ಕನ್ನಡ ಮಗ್ಗಿ ಪುಸ್ತಕದ ಮಧ್ಯದ ಪುಟ ತೆರೆದು ನೋಡಿದೆ.
" ಎರಡು ತಿಂಗಳಿನಿಂದ ನವಿಲುಗರಿ ಮರಿ ಹಾಕಿರಲೇ ಇಲ್ಲ"

ಬೆಳಿಗ್ಗೆ ಚಂದ್ರಿ ಹೇಳುತ್ತಾಳೆ. ಇವತ್ತು  ಏಪ್ರಿಲ್ 10 ನೇ ತಾರೀಖು.ಪಾಸ್ ಫೈಲು. ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತುಕೊಂಡಾಗಲೇ ಗಂಗಮ್ಮ ಟೀಚರು ಪಾಸಾದವರ ಹೆಸರು ಹೇಳತೊಡಗಿದ್ದು. ನನ್ನದು ಮೊದಲು ಹೇಳಿದರು. ನಾನು ಪಾಸು... ಎರಡನೇ ಕ್ಲಾಸು. ತರಗತಿ ಮುಗಿದ ನಂತರ ಎಲ್ಲರಿಗೂ ಒಂದೊಂದು ಆಹ್ವಾನ ಪತ್ರ ಹಂಚುತ್ತಿದ್ದಾರೆ. ಶಾಲೆಯ ಬೆಳ್ಳಿ ಮಹೋತ್ಸದ ಸಮಾರಂಭದ ಪತ್ರ.
"ಹೇ ಹುಡುಗ ಇಲ್ಲಿ ಬಾ"
ನನ್ನ ಬೆಂಚಿನಲ್ಲಿ ಮೂವರು ಹುಡುಗರಿದ್ದೇವೆ. ನನ್ನನ್ನೇ ಕರೆಯುತ್ತಿದ್ದಾರೋ ? ಮೂಗಿಗಿಣುಕುತ್ತಿದ್ದ ಗೊಣ್ಣೆಯನ್ನು ಏರಿಸಿ ಒಳಗೆಳೆದುಕೊಳ್ಳುತ್ತೇನೆ. ಹೌದು..ಟೀಚರು ನನ್ನನ್ನೇ ನೋಡಿ ಕರೆಯುತ್ತಿದ್ದಾರೆ.
ಕುಳ್ಳಿ ಗಂಗಮ್ಮ ಟೀಚರು. ಎತ್ತರ ಕಾಣಲು ಎತ್ತರದ ಹೀಲ್ಡ್ ಚಪ್ಪಲು ಹಾಕಿ ನನ್ನಷ್ಟೇ ಎತ್ತರದಲ್ಲಿ ಹೇಳುತ್ತಾರೆ.
" ನೀನು ಒಂದನೇ ತರಗತಿಯಲ್ಲಿ ಫಸ್ಟು ರ‍್ಯಾಂಕ್. ಮಗ್ಗಿ ತಪ್ಪಿಲ್ಲದೆ ಬರೆದಿದ್ದೀಯಾ"
’ಮಾಮ".... ಶಾಲೆಯಲ್ಲಿ ನಿಂತಿದ್ದಾರೋ? ಒಂದೊಂದೇ ಹೊಡೆತ ಮಗ್ಗಿ ಹೇಳುತ್ತಿದೆ. ಎರಡು ತೋಳುಗಳನ್ನು ಮುಟ್ಟಿ ನೋಡುತ್ತೇನೆ. ಉಹುಂ ! ರೆಕ್ಕೆ ಇಲ್ಲ.
ಶಾಲೆಯಿಂದ ಮನೆಗೆ ಬರುವ ಏಳು ಮೈಲು ದೂರದ ದಾರಿಯಲಿ ಅಲ್ಲಲ್ಲಿ ಕಾಫಿ ತೋಟದ ಬೇಲಿಗೆ ಹೂ ಅರಳುತ್ತಿದೆ. ಹಳದಿ ಬಣ್ಣಕೆ ಕಣ್ಣು ಬಿಟ್ಟ ಕಿತ್ತಳೆ ಹಣ್ಣುಗಳು ಗಿಡದಿಂದ ಬಾಗಿ ತಿನ್ನು ಎನ್ನುತ್ತಿದೆ. ಚಂದ್ರಿ,ಚಂದ್ರ,ರವಿ, ಮುರಳಿ, ರಾಧೆಯ ಮುಖ ನೋಡಿದೆ.
"ನಾನು ಪಸ್ಟು ರ‍್ಯಾಂಕ್ "

ಮಗ್ಗಿ ಪುಸ್ತಕ ತೆರೆದು 20 ಮನೆವರೆಗಿನ ಪುಟಗಳನ್ನು ಮಗುಚ ತೊಡಗಿತು ಬೆರಳು. ಬೆನ್ನು ತಟ್ಟುತ್ತಿದ್ದ ಮಾಮನ ಕೈ ಮತ್ತೊಮ್ಮೆ ರಭಸವಾಗಿ ಬೀಸಿದವು.
"ಅಕ್ಷರ ಕೋಳಿ ಕಾಲು, ಕಾಫಿ ರೈಟಿಂಗ್ ಬರೆಯೋ"
ದಡಕ್ಕನೇ ಎಚ್ಚರವಾಯಿತು. ಬೆಳಿಗ್ಗೆ ಆರು ಗಂಟೆ.. ಕೋಳಿ ಗೂಡಿನಲ್ಲಿ ಹತ್ತು ಮೊಟ್ಟೆಗಳನ್ನು ಅಜ್ಜಿ ಇಟ್ಟಿದ್ದರು.ಇವತ್ತು ಮರಿ ಒಡೆದಿರಬಹುದು. ಮೊನ್ನೆ ತಾನೆ ಆರು ಮರಿ ಹಾಕಿದ ಬೊಗ್ಗಿ ನಾಯಿ ಮರಿಗಳಿಗಾಗಿ ಬೊಗಳುತ್ತಿದೆ. ಮರಿಗಳು "ಕುಂಯ್ ಕುಂಯ್" ನಾಲಗೆ ಇಳಿಸಿ ತುಟಿ ನೆಕ್ಕುತ್ತಿರಬಹುದು. ತಾ ಮುಂದು ನಾ ಮುಂದು ಎಂದು ಹತ್ತು ಮೊಲೆಗಳಿಗೆ ಗುದ್ದಾಡುತ್ತಿರಬಹುದು. ಇವತ್ತು ಸ್ವಲ್ಪ ಹೆಚ್ಚು ಗಂಜಿ ನೀರು ಕೊಡುತ್ತೇನೆ. ಗಂಜಿ ಕುಡಿಯುವುದೇ ಚೆಂದ !. ಮರಿಗಳಿಗೆ ಹಾಲು ಹೆಚ್ಚೇ ಕೊಡಬಹುದು.
(ಮುಂದುವರೆಯುವುದು ಭಾಗ-2)

4 ಕಾಮೆಂಟ್‌ಗಳು:

 1. ರವಿ ಸರ್, ಸತ್ಯ.... ನಿಮ್ಮ ಈ ಕಥೆ ಓದಿ ನನ್ನ ಮಾವನ ನೆನಪಾಯಿತು, ನಮ್ಮ ಮನೆಯ ಮಕ್ಕಳಲ್ಲಿ ಅವರ ಹೊಡೆತ ತಿನ್ನದವರು ಯಾರೂ ಇಲ್ಲ, exact same character ನಿಮ್ಮ ಲೇಖನಿಯಿಂದ ಹೊರ ಬಂದಿದೆ.

  ಪ್ರತ್ಯುತ್ತರಅಳಿಸಿ
 2. ಬೇಡದ ಬಂಧುಗಳ ಆಗಮನ ನರಕ ದರ್ಶನ. ಯಾಕಾದರೂ ಬರುತ್ತಾರೋ?

  ಚಿಕ್ಕ ವಯಸ್ಸಿನಲ್ಲಿ ಹೊಡೆಸಿಕೊಳ್ಳುವಾಗ ಇರುವ ಸಿಟ್ಟಿದೆಯಲಾ ಅದು ದೊಡ್ಡವರಾದ ಮೇಳೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ, ಹಳೇ ಗಯದ ಕಲೆಯ ಹಾಗೆ!

  ಬರುವಾಗ ಅತಿ ರುಚಿಯ ಪದಾರ್ಥಗಳು ತಂಡರೇನು? ಇದ್ದಾಗ ನಡೆದುಕೊಳ್ಳುವ ಅಮಾನವೀಯತೆಯೇ ನೆನಪಿನಲ್ಲಿರುತ್ತದೆ.

  ಈ ನವಿಲು ಗರಿ ನಮ್ಮ ಬಾಲ್ಯ ಒತ್ತೊಟ್ಟಿಗಿರುತ್ತವೆ.

  ನನಗಂತೂ ಈ ಫಸ್ಟ್ ರ್ಯಾಂಕಿನ ಕನಸ್ಸೇ ಇರಲಿಲ್ಲ ಬಿಡಿ.

  ಮನೋಜ್ಞವಾಗಿದೆ ಮುಂದುವರೆಸಿರಿ...

  ಪ್ರತ್ಯುತ್ತರಅಳಿಸಿ
 3. ಬಾಲ್ಯದ ಸುಂದರ ಕ್ಷಣಗಳನ್ನು ತುಂಬಾ ಸುಂದರವಾಗಿ ಬರೆದ್ದಿದ್ದೀರಾ ರವಿಯಣ್ಣ ,ನಮ್ಮಜ್ಜ ಒಂದೊಂದು ಸಲ ಕೋಣ ಕಟ್ಟುವ ಹಗ್ಗದಲ್ಲೇ ಪೆಟ್ಟು ಬಿಡುತ್ತಿದ್ದರು .ಬಾಲ್ಯದಲ್ಲಿ ಓದು ,ಬರಹಕ್ಕಾಗಿಯೂ ,ನಮ್ಮ ಕೀಟಲೆಗಳನ್ನು ನಿಲ್ಲಿಸಲು ಪೆಟ್ಟು ಬೀಳುವುದು ಸಾಮಾನ್ಯ .ಒಂದು ವೇಳೆ ಪೆಟ್ಟು ಬೀಳದಿದ್ದರೆ ನಮ್ಮ ಬುದ್ಧಿ ಹೆಂಗಾಗುತ್ತಿತ್ತೋ ,ಯಾರಿಗೊತ್ತು

  ಪ್ರತ್ಯುತ್ತರಅಳಿಸಿ
 4. ಮಗುವಿನ ಮುಗ್ದ ಸ್ವಭಾವ ಮತ್ತು ಆ ಮಗುವಿನ ವಯಸ್ಸಿನಲ್ಲಿ ಉಂಟಾಗುವ ಅನೇಕ ಆಲೋಚನೆ ಜೊತೆಯಲ್ಲಿ ನಡೆಯುವ ಘಟನೆಗಳಿಂದ ಜೀವನದಲ್ಲಿ ಬರುವಂತಹಾ ಬದಲಾವಣೆ ಮತ್ತು ಕೆಲವು ನಿರ್ಧಾರಗಳ ಚಿಂತನೆಯಲ್ಲಿ ಉದ್ಬವಿಸಬಹುದಾದ ಸೂಕ್ಷ್ಮ ಅಂಶಗಳ ಕಲ್ಪನೆಯಲ್ಲಿ ಅತೀ ಸೊಗಸಾಗಿ ಮತ್ತು ನಿಮ್ಮ ವಿಶೇಷ ನಿರೂಪಣೆಯಲ್ಲಿ ಅಸಕ್ತಿಕರವಾಗಿಯೂ ಈ ಕಥೆಯು ರೂಪಗೊಂಡಿದೆ.. ಕೆಲವು ಸಾಲುಗಳ ಕಲ್ಪನೆಯಲ್ಲಿ ವಿಭಿನ್ನ ಬಗೆಯ ಹೊಸತನದ ಚಿತ್ರಣ ಕಂಡುಬರುತ್ತಿದೆ .. ತುಂಬಾ ಹಿಡಿಸಿತು ಸರ್ ಈ ಕಥೆಯು .. :)

  ಪ್ರತ್ಯುತ್ತರಅಳಿಸಿ