ಭಾನುವಾರ, ಡಿಸೆಂಬರ್ 30, 2012

ಬುದ್ಧ ಬಂದ.. ಬುದ್ಧ ಬಂದ...!



ಬುದ್ಧ ಬಂದ.. ಬುದ್ಧ ಬಂದ...
ಮುಂಜಾನೆ ಹಾಡಿದವು
ಯಶೋಧರೆಯ ಹಕ್ಕಿಗಳು |

ಹಣತೆ ಕಣ್ಣಿಗೆ ಬೆಳಗಿ
ಮುಡಿಗೆ ಮಲ್ಲಿಗೆ ಬೆಳೆಸಿ
ಮನೆಗೆ ಸುಳಿದವು ಸಂತಸಗಳು |

ಬಾಗಿಲು ತೆರೆದೇ ಇದ್ದವು
ವರುಷಗಳೆಷ್ಟು ಕಾದವು ?
ದಣಿದ ಕಣ್ಣೆರಡಗಲಿಸಿ
ಮತ್ತೆ ರೆಪ್ಪೆ ಮಿಟುಕಿದಳು |

ಆಸೆ ತುಂಬಿ ಬೊಗಸೆ ಪಾತ್ರೆ
ಅಗಲಿದರೂ ಬತ್ತದ ಎದೆ
ತೆರೆದ ಅಂಗಳದಿ ಹೂಗಳ ಚೆಲ್ಲಿ
ಬುದ್ಧ ಬಂದ.. ಬುದ್ಧ ಬಂದ
ರೆಕ್ಕೆ ಬಡಿದವು ಗಾಳಿಗೆ ಹಕ್ಕಿಗಳು |

ಮಾತು ತುಟಿಗೆ ಒಣಗಿದವು
ಸೆರಗೊದ್ದು ಕೈಗಳು ಮಡಚಿ
ನಿಲ್ಲಿ ಲೋಕದ ಸ್ವಾಮಿ |
ಪುಣ್ಯದ ಪಾದಕೆ ನಮಿಸಿ-
ಬಾಗಿಲು ಸರಿದಳು ಲೋಕದ ತಾಯಿ !

ಕತ್ತಲು ರೇಖೆಯ ದಾಟಿ
ಒಳ ಬಂದ ಜ್ಞಾನಿ ಬುದ್ಧ |
ಅಪ್ಪ ಬಂದ.. ಅಪ್ಪ ಬಂದ
ಕುಪ್ಪಳಿಸಿ ಹಾಡಿದವು ಮಕ್ಕಳು |

ಇದೋ ನಿಮ್ಮದೇ ಬಟ್ಟೆ
ಬಿಸಿ ಬಿಡದ ಸ್ನಾನದ ನೀರು
ನಮ್ಮದೇ ದೇವರ ಹಣತೆ
ನೀವಿಟ್ಟ ಸಿಂಧೂರವೇ ಹಣೆಗೆ
ಬೇಲಿಸಿ ಬದುಕಿದ ಗಾಲಿಗಳು |

ನಿಮ್ಮದೇ ಊಟದ ತಟ್ಟೆ
ಮೆಚ್ಚಿದ ಅನ್ನ ಸಾರು ಮಜ್ಜಿಗೆ
ತಿಂದಷ್ಟು ನೆನಪಿಸಿದೆ ಮನೆಗೆ
ಇನ್ನಷ್ಟು ಬಡಿಸಲೇ ಸ್ವಾಮಿ |
ತುತ್ತು ಕಾದಿವೆ ಮಕ್ಕಳು
ಕಾದಿದ್ದೇನೆ,ಉಳಿದರೆ ಅನ್ನದ ಅಗಳು |

ಕೋಣೆಗೆ ಬಂದ ಬುದ್ಧನ-
ಹಿಂದಿಂದೆ ಯಶೋಧರೆ ಮಕ್ಕಳು
ನಕ್ಕ ಹಣತೆ ಕೆಳಗೆ
ಮುದುಡಿ ನಾಚಿದವು ನೆರಳು |

ಬುದ್ದ ಬಂದ.. ಬುದ್ದ ಬಂದ
ಹೊರಗೆ...ಹಾಡಿದವು
ಯಶೋಧರೆಯ ಹಕ್ಕಿಗಳು  |
ಅಪ್ಪ ಬಂದ.. ಅಪ್ಪ ಬಂದ
ಒಳಗೆ....ಕನವರಿಸಿದವು
ನಿದ್ದೆಗೆ ಮಕ್ಕಳು |

-ರವಿ ಮೂರ್ನಾಡು.
ಚಿತ್ರಕೃಪೆ: ಗೂಗಲ್ ಅಂತರ್ಜಾಲ

2 ಕಾಮೆಂಟ್‌ಗಳು:

  1. ಪರಿವರ್ತನಾ ನಂತರದ ಕ್ಲಿಷೆಯ ಅತ್ಯುತ್ತಮ ನಿರೂಪಣೆ.

    ಸರಳ ಬಾಷಾ ಬಳಕೆಯಲ್ಲಿ ಸಂಕೀರ್ಣ ಕಥಾ ಹಂದರವನ್ನು ರೂಪಿಸಿದ ಪರಿ ಮೆಚ್ಚುಗೆಯಾಯ್ತು.

    "ಕತ್ತಲು ರೇಖೆಯ ದಾಟಿ
    ಒಳ ಬಂದ ಜ್ಞಾನಿ ಬುದ್ಧ"

    ಎನ್ನುವಲ್ಲಿ ಬುದ್ಧನಿಗೂ ಆಚೆ ನಮ್ಮೊಳಗಿನ ಕತ್ತಲೆಯ ಪರಿಕಲ್ಪನೆ ಮತ್ತು ಅದನ್ನು ಹೋಗಲಾಡಿಸುವ ನಿಮ್ಮ ಕಳಕಳಿ ಅನನ್ಯ.

    ಪ್ರತ್ಯುತ್ತರಅಳಿಸಿ
  2. ಕತ್ತಲು ಮತ್ತು ಬೆಳಕಿನ ನಡುವೆ ಗೊಂದಲಗಳಂತೂ ಸ್ಪಷ್ಟವೇ ಅಲ್ವಾ ರವಿಸರ್ . ಬೆಳಕು ಮೂಲವನ್ನಾ ಬೆಳಗಿಸಿ ಹೊರಟರೆ ಚೆಂದ .ಇಷ್ಟವಾಗುವ ಆಶಯ .ಕವಿತೆ

    ಪ್ರತ್ಯುತ್ತರಅಳಿಸಿ