ಮಂಗಳವಾರ, ಮೇ 15, 2012

ಮಡಿಕೇರಿಗೆ ಏಸುದಾಸ್‍ ಬರುತ್ತಾರಂತೆ ...!("ಸಂಗೀತ ಕಲಿಸಿ ಕೊಡಿ ಎಂದ ಬಾಲಕ’ ಮುಂದುವರೆದ ಭಾಗ-೨)
ಒಂದು ಶನಿವಾರ ಶಾಲೆಯಿಂದ ಬಂದವನು ಚುರುಗುಟ್ಟಿದ ಹೊಟ್ಟೆಯೊಳ ಗೊಂದು ಹಸಿವಿನ ತಾಳವನ್ನು ಗುರುತಿಸಿದ. ಸಂಗೀತ ಲೋಕದಲ್ಲಿ "ಸರಿಗಮಪದನಿಸ" ಹೇಳುವ ಧಾವಂತಕೆ ಭಿಕ್ಷೆಗೆ ನಿಂತಿವೆ ಏಳುಸ್ವರಗಳು . ಒಂದಕ್ಕೊಂದು ಮೇಳೈಸಿ ನರ್ತಿಸಿದವು.  ಎಲ್ಲಾ ಆದಿತಾಳಗಳ ಮೊದಲುಗಳು, ತಾವೆಂಬ ಮಿಗಿಲುಗಳ ದಾಟಿದಾಗ ಒಂದು ಸಮಾಗಮದ ಹಾಡು.  ಅಲ್ಲಿ ಯಾರಿಗೆ ಕೇಳಿತೋ ಕೇಳಿಯೂ ಕೇಳಿಸದ ರಾಗಸ್ವರ ....! ಒಂದು ಸಂಜೆ ಅವರು ಕರೆದರು.
" ರಾಮ ಮಂದಿರದಲಿ ಆ ದಿನ   ಹಾಡಿದ   ಹಾಡು ಇಲ್ಲಿ ಹಾಡು?"
ಹಾರ್ಮೋನಿಯಂ ಮೇಷ್ಟ್ರು ಚೌರೀರ ಬಾಬಣ್ಣ..! ಪಟ್ಟಣದ ರಾಮ ಮಂದಿರದ ಹಿಂಬದಿ ಕೋಣೆಯಲಿ ಶೃತಿ ಹಿಡಿಯುತ್ತಿದ್ದಾರೆ. "ಸ.......ರಿ.....ಗ.. ಸನಿದಪ..ಸನಿದಪ.."  ಕೋಣೆ ತುಂಬಾ ತೇಲುತ್ತಿವೆ ರಾಗಗಳು.. ನವೀರಾದ ಸ್ವರಗಳಿಗೆ ತಾಳ ಹಿಡಿದ ತಬಲ ಚಂದ್ರಣ್ಣ...! " ಥಕ ದಿಮಿ ...ಥಕ ದಿಮಿ....ದಿನ್ನಾ ತರಿಕಿಟಥಾ.... ದಿನ್ನಾ ತರಿಕಿಟಥಾ..." ಎದೆಯೊಳಗೆ ಬಡಿತಕ್ಕೆರಡರಂತೆ ಲಯ ಹುಡುಕುತ್ತಿದೆ. ಸುತ್ತ ಕುಳಿತ ನಾಲ್ಕಾರು ಮಂದಿ ... ಹಾಡು ಹೇಳುವವರೋ? ಸುಮ್ಮನಿದ್ದವ ಹಾಡಿಯೇ ಬಿಟ್ಟ...! . ಅವರೆಲ್ಲರೂ ತಮ್ಮ ತಮ್ಮೊಳಗೆ ಪಿಸುಪಿಸು ಮಾತಾಡಿಕೊಂಡರು. ಏನು... ಚೆನ್ನಾಗಿಲ್ಲವೇ ?
" ಚೆನ್ನಾಗಿದೆ...ಅಭ್ಯಾಸ ಮಾಡಬೇಕು....ಪ್ರತಿ ದಿನ ಸಂಜೆ ಬಾ.... ಸ್ವರ ಕೂರಿಸುತ್ತೇವೆ.... "
ತಾನೇ ಹಾಡುಗಾರನಾದ ಆ ಹುಡುಗನಿಗೆ ಮತ್ತೊಂದು ಕೇಳಿಸಿತು....
 "ಮಕ್ಕಳ ಹಾಡುಗಳನ್ನೇ ಅಭ್ಯಾಸ ಮಾಡಬೇಕು"
"ಮಾಡುತ್ತೇನೆ"......
ಹಾಕಿದ್ದು ನಯಾ ಪೈಸೆ....ಸಿಕ್ಕಿದ್ದು ಚಿನ್ನ  ..! ಕಾಫಿ ಗಿಡಗಳ ಬುಡದಲ್ಲಿ ತಲೆಯಾಡಿಸಿದ ಆ ಎಲೆಗಳು ಅಲ್ಲೆಲ್ಲೋ ಬೀಸುತ್ತಿದ್ದ ಗಾಳಿಯನ್ನು ಬರಸೆಳೆದು ಎದೆಗೆ ನುಗ್ಗಿಸಿದವು.  ಕನಸು ನಿದ್ದೆಗಳಲ್ಲಿ... ಬೆಳಿಗ್ಗೆ- ಸಂಜೆಗಳಲ್ಲಿ ಮಾರ್ಧನಿಸಿ ಗುನುಗುಟ್ಟ ತೊಡಗಿದವು ಕಣ್ಣುಗಳ ತುಂಬಾ ತಬಲ.. ಅದೋ ಹಾರ್ಮೋನಿಯಂ....! ಇದೋ  ಗಿಟಾರ್...ಕೃಷ್ಣನ ಕೊಳಲು ....ಹೇಗೆ ನರ್ತಿಸುತ್ತಿವೆ..ರಾಗ ನರ್ತನಕೆ ?.ಅದಕ್ಕೊಂದಷ್ಟು ಏರಿಳಿದ ಸ್ವರ ಶೃಂಗಾರಗಳು..! ಪ್ರತೀ ದಿನಗಳ ಸಂಜೆ ಶಾಸ್ತ್ರೀಯ ಉಪಾಸನೆ ಗಾಯನಗಳು. " ಶಂಕರಾಭರಣಂ".... ಸ್ವಾತಿ ಮುತ್ಯಂ..... ಸಿಂದೂ ಭೈರವಿ..... ಮಲೆಯ ಮಾರುತ....  ಎದೆಯ ತುಂಬಾ ಸ್ವರಗಳ ಅಲೆಗಳು ... ತಾಳ ಹಿಡಿದ  ಎದೆಯ ಬಡಿತ ನಿಧಾನವಾಗಿ ಏರಿದವು..  ಪಾಠಗಳು ಎಂದಿನಂತೆ ಶಾಲೆಯಲ್ಲಿ ಓದಿದವು....
ರಾತ್ರಿ 9  ಗಂಟೆಯವರೆಗೆ ಅಂಗಡಿ ತೆರೆದಿಟ್ಟು ಬಟ್ಟೆ ಹೊಲಿಯುತ್ತಿದ್ದ ಮಾವ , ಒಮ್ಮೆ ಕೇಳಿ ಸುಮ್ಮನಾದರು. ಮತ್ತೊಂದು ದಿನ.. ಮತ್ತೆ ಮತ್ತೆ ಕೇಳಿ ತಾಳ್ಮೆ ಕಳೆದುಕೊಳ್ಳುತ್ತಿವೆ ಆ ರಾತ್ರಿಗಳು..! ಹುಬ್ಬುಗಂಟಿಕ್ಕಿದ ಮಾವನ ಬಟ್ಟೆ ಕತ್ತರಿಸುವ ಅಳತೆ " ಸ್ಕೇಲ್"  ಅವನನ್ನೂ ಅಳತೆ ಮಾಡತೊಡಗಿದವು... ಊರು ಬಿಟ್ಟ ಊರುಗಳಲ್ಲಿ ಸಂಗೀತ ಸಂಜೆಗಳು..... ಹಾರ್ಮೋನಿಯಂ ಪೆಟ್ಟಿಗೆ , ತಬಲ ಇತ್ತಲಿಂದ ಅತ್ತ ಇಡುವುದು.. ಅದಕ್ಕೆ ಪೌಡರ‍್ ಹಾಕಿ ತಾಳಕ್ಕೆ ಮೆತ್ತಗೆಗೊಳಿಸುವುದು.... ಮೈಕ್ ಎತ್ತರಿಸುತ್ತಿದ್ದ ಅವನು, ಒಂದು ದಿನ ಕೇಳಿಯೇ ಬಿಟ್ಟ
" ಬಾಬಣ್ಣ ನನಗೆ ಸಂಗೀತ ಕಲಿಸಿಕೊಡಿ"
"ಕಲಿಸುತ್ತೇನೆ"..... ಆ ದಿನಗಳಿಗೆ ಕಾಯುತ್ತಿದ್ದವನ ನಿದ್ದೆಗೆಡಿಸಿ ಮಾವನ ಪೆಟ್ಟುಗಳಿಗೆ ಮೈ ಸೆಟೆದುಕೊಳ್ಳುತ್ತಿವೆ. ! ಸ.ರಿ.ಗ.ಮ.ಪ.ದ.ನಿ.ಸ... ಏರಿಳಿತಕ್ಕೆ  ಉಬ್ಬೇರಿಸಿ ಆಲೋಚಿಸುತ್ತಾನೆ. ಇಲ್ಲಿಂದ ಓಡಿ ಹೋದರೋ...?
ಶಾಲೆಯಲ್ಲಿ ತರಗತಿಯೊಳಗೆ ವಾರಿಜ ಟೀಚರ್ ಬಂದರು.
" ಇಲ್ಲಿ ಯಾರೆಲ್ಲಾ ಹಾಡು ಹಾಡುತ್ತೀರಿ?"
" ಟೀಚರ್ ರವಿ ಹಾಡುತ್ತಾನೆ " ಹೆಸರು ಬರೆದುಕೊಂಡಿದ್ದಾರೆ.
" ಇಲ್ಲಿ ಯಾರೆಲ್ಲಾ ಸಾಮಾನ್ಯ ಜ್ಞಾನಸ್ಪರ್ಧೆಗೆ ಸಿದ್ಧರಿದ್ದೀರಾ?"
ಯಾರು ಯಾರು ಕೊಟ್ಟರೋ ಅವರ ಹೆಸರು ಬರೆದುಕೊಂಡ ಆ ಟೀಚರ್....
 " ನಿನ್ನ ಹೆಸರು ಬರೆದುಕೊಂಡಿದ್ದೇನೆ"
" ಇಲ್ಲ ಟೀಚರ್ .. ನನಗೆ ಗೊತ್ತಿಲ್ಲ"
" ಬರೆಯಬೇಕು... ಬರೆಯದಿದ್ದರೆ ಬಾಸುಂಡೆ ಬರಿಸುತ್ತೇನೆ  ಹುಷಾರ್.  "
ತುಟಿ ಎರಡಾಗಲಿಲ್ಲ...ಮಾವ ಶಾಲೆಗೆ ಬರುವುದು ಇಷ್ಟವಿರಲಿಲ್ಲ.... ಏನು ಕೇಳುವರೋ.. ಏನು ಬರೆಯುವುದು ?
ಹಾಡುಗಾರಿಕೆ ಮುಗಿಯಿತು.. ! " ನಿಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ನಿಮ್ಮ ರಾಷ್ಟ್ರದ ಪ್ರಧಾನ ಮಂತ್ರಿ ಯಾರು?. ಯಾರು, ಏನೆಂಬ 15  ಯಾರುಗಳಿಗೆ ಖಡಕ್ಕಾಗಿ ಉತ್ತರಿಸಿದ್ದ ... ಸಾಮಾನ್ಯ ಜ್ಞಾನ ಸ್ಪರ್ಧೆಯೂ ಮುಗಿಯಿತು.. ಶಾಲೆಯ ಮಕ್ಕಳೆಲ್ಲರೂ ಬಹುಮಾನಕ್ಕಾಗಿ ಸಭಾಂಗಣದಲ್ಲಿ ಕಾದಿದ್ದಾರೆ. ಆ ತಂಗಮ್ಮ ಟೀಚರ್ ಬಂದು ಹೇಳಿದರು...
" ಮಗು ನೀನು ಹಾಡು ಹಾಡುವುದನ್ನು ಬಿಡಬೇಡ"   
"ಇಲ್ಲ... ಬಿಡುವುದಿಲ್ಲ  ಏಕೆ?"  
ವೇದಿಕೆಯಲ್ಲಿ ಎರಡು ಪ್ರಶಸ್ತಿಗಾಗಿ ಎರೆಡೆರಡು ಬಾರಿ ಹೆಸರು ಕರೆಯುತ್ತಿದ್ದಾರೆ..
." ಹೌದು..! ಅದು ಅವನದೇ ಹೆಸರು"
ಎರಡೆರಡು ಬಾರಿ ಮೈ ಚಿವುಟಿಕೊಂಡ... ಈಗ ನಿರ್ಧರಿಸಿದ
" ನಾನು ಸಂಗೀತ ಕಲಿಯಬೇಕು ಟೀಚರ್ "
ಆ ದಿನ ಸಂಜೆಯೇ ಮನೆಗೆ ನುಗ್ಗಿದವವನಿಗೆ " ಶಂಕರಾ... ನಾದ ಶರೀರಾಪರ.... ವೇದ ವಿಹಾರ ಪರ....ಜೀವೇಶ್ವರ...!"  ಇದೇನು ಗಂಟಲು ಗೊತ್ತಿಲ್ಲದಂತೆ  ಸ್ವರ ಹೊರಡಿಸತೊಡಗಿದೆ?.
" ಮಡಿಕೇರಿಗೆ ಕೆ.ಜೆ.ಏಸುದಾಸ್‍ ಬರುತ್ತಾರಂತೆ "
" ಟಿಕೇಟು ಇದೆಯೇ ?"  
" 25  ರೂಪಾಯಿಯಿಂದ  5,000 ಸಾವಿರ ರೂಪಾಯಿವರೆಗೆ?" ತರಗತಿಯ ಹುಡುಗ ಸತ್ತಾರ‍್ ಹೇಳಿದ.
" ನೀನು ಬರುತ್ತೀಯ"
"ಬರುತ್ತೇನೆ"
" ಮೂರ್ನಾಡಿನಿಂದ ಮಡಿಕೇರಿಗೆ 15 ಕಿ.ಮೀ.ದೂರವಿದೆ. ಕಾರ್ಯಕ್ರಮ ರಾತ್ರಿ 9 ಗಂಟೆಗೆ. ಟಿಕೇಟು ಇಲ್ಲ.. ಬಸ್‍ಗೆ ದುಡ್ಡು ? "
" ಮನೆಯಲ್ಲಿ ಮಾವನಿಗೆ ಗೊತ್ತಾದರೆ ಹೊಡೆಯುತ್ತಾರೆ.."
ಸಂಜೆ 5.30 ಗಂಟೆಗೆ ರಾತ್ರಿಯ ಕಪ್ಪು ಕಾಣಿಸುತ್ತಿಲ್ಲ. ಡಾಂಬರು ಬಿಸಿ ಮುಟ್ಟುತ್ತಿಲ್ಲ. ಮಡಿಕೇರಿಗೆ ಪ್ರಯಾಣಿಸಿವೆ ಆ ನಾಲ್ಕು ಚಪ್ಪಲಿಯಿಲ್ಲದ ಬರಿಗಾಲುಗಳು. ಮನೆಯಲ್ಲಿ ಗೊತ್ತಾಗದಿದ್ದರೆ ಸಾಕು.  ಹಾಡು ಎದೆಯಲ್ಲಿ ಕೇಳುತ್ತಲೇ ಇರಲಿ "ಮರಿ ಮರಿ ನಿನ್ನೇ ... ಮುರಳಿದ..." 
ಮಡಿಕೇರಿ ಪೊಲೀಸ್‍ ಮೈದಾನದಲ್ಲಿ ಸಾಗರವೋ ಸಾಗರ.... ಸಾಸಿವೆ ಕೆಳ ಬೀಳದಷ್ಟು ಜನ ಸಾಗರ.. ಏಸುದಾಸ್ ಎಲ್ಲಿ ? . ಟಿಕೇಟು ಪಡೆದುಕೊಂಡವರು ಬಿದಿರಿನ ಬೇಲಿಯ ಆವರಣದೊಳಗೆ ಆಸೀನರಾಗಿದ್ದಾರೆ. ಬದಿಯಲ್ಲಿ ನಿಂತವರು ಎತ್ತರ ಎತ್ತರದ ಜನರು. ಕತ್ತು ಎತ್ತಿ ಎತ್ತಿ ಕಣ್ಣೆತ್ತಿ ತಿರುಗಿಸಿದರೂ ವೇದಿಕೆ ಕಾಣಿಸುತ್ತಿಲ್ಲ.  ಮುಗ್ಗರಿಸಿದರೂ ಮೇಲೇಳಲಾಗದಷ್ಟು  ಇಕ್ಕಟ್ಟಿನ ನಡುವೆ ನುಸುಳಿದ. ಬಿದಿರ ಬೇಲಿಯ ದಾಟಿ ಬದಿಯಲ್ಲಿ ನಿಂತುಕೊಂಡವನಿಗೆ ಏಸುದಾಸರು ಕಾಣಿಸುತ್ತಿಲ್ಲ. ಅದೋ ಬಿಳಿ ಪೈಜಾಮ ತೊಟ್ಟ ವ್ಯಕ್ತಿ ಹಾಡುತ್ತಿದ್ದಾರೆ " ಶಬರೀ... ಗಿರಿನಾಥ ... ದೇವ ....! ಅಭಯ ನೀಡಯ್ಯಪ್ಪಾ..... ದೇವ "
" ಅವರು ಏಸುದಾಸರ..?.. ಹೇ ಸತ್ತಾರು ಅವರು ಯಾರು?"
" ಹೌದು"
ಇವರನ್ನೊಮ್ಮೆ ಮುಟ್ಟಿ ನೋಡಬೇಕು.....! " ಅವರೊಂದಿಗೆ ಹಾಡುತ್ತಿರುವ ಆ ಲಂಗ- ದಾವಣಿ ಹುಡುಗೀಯರು ಯಾರು?"
"ಗೊತ್ತಿಲ್ಲ"
ನಿರೂಪಕರು ಒಂದು ಹಾಡು ಮುಗಿದಂತೆ.. ಮಾತು ಮುಂದುವರೆಸಿದ್ದಾರೆ. 
"ಇದೀಗ  ಜನಪ್ರೀಯ ಗೀತೆ ವಿಷ್ಣುವರ್ಧನ್‍ ಅಭಿನಯದ "ಬಂಧನ" ಚಿತ್ರದಿಂದ . " ಗಾಯಕ ಏಸುದಾಸರೊಂದಿಗೆ ಗಾಯಕಿಯರಾದ ಕೆ.ಎಸ್‍. ಚಿತ್ರಾ ಮತ್ತು ಸುಜಾತ..."
ಇದು ಕೊನೆಯ ಹಾಡು....
 " ಸತ್ತಾರು ನನಗೆ ಅವರನ್ನು ಮುಟ್ಟಿ ನೋಡಬೇಕು"
" ಬಾ ನಡೆ"
ವೇದಿಕೆ ಹಿಂಬದಿಗೆ ಬಂದವರಿಗೆ ದಾರಿಯಿಲ್ಲ. ಪೋಲಿಸರು ಬಿಡುತ್ತಿಲ್ಲ.
" ಇಲ್ಲ ನನಗೆ ಏಸುದಾಸರ ಕೈ ಮುಟ್ಟಬೇಕು"
" ಅದೋ  ಅವರು ಅಲ್ಲಿದ್ದಾರೆ.... ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ...."
ಜನರ ಗುಂಪು ಬೇದಿಸಿ ನುಗ್ಗಿದವರಿಗೆ ಜನರು-ಪೋಲಿಸರು ಗೊತ್ತಾಗಲೇ ಇಲ್ಲ. ನೇರವಾಗಿ  ಫೊಟೋ ತೆಗೆಯುತ್ತಿದ್ದವರ ಮಧ್ಯದಲ್ಲೇ ಮುಗಿಬಿದ್ದ ಬಾಲಕ ಏಸುದಾಸರ ರೋಮ ತುಂಬಿದ ಸಂಗೀತದ ಕೈಗಳೆರಡನ್ನೂ ತಡವ ತೊಡಗಿದ. ಅಚಾನಕ್ ಸ್ಪರ್ಶಕೆ ಕೊಂಚ ಕತ್ತೆತ್ತಿ ನಗು ಮೊಗದಲ್ಲೇ ನೋಡುತ್ತಾರೆ ಏಸುದಾಸರು .
" ಬೆನ್ನು ತಡವಿದರು.. ಬಾಲಕ ಮೈನವಿರೇಳಿಸಿಕೊಂಡ..." 
ಎಷ್ಟು ಫೋಟೋಗಳಲ್ಲಿ ಸಿಕ್ಕಿಸಿಕೊಂಡರೋ ಗೊತ್ತಿಲ್ಲ... ಪಕ್ಕದಲ್ಲಿ ಗಾಯಕಿಯರಾದ ಚಿತ್ರಾ.... ಸುಜಾತ....  ಒಂದೈದು ನಿಮಿಷ  ಮಾತ್ರ..! ಜನಸಾಗರದಿಂದ ಕಣ್ಮರೆಯಾಗುತ್ತಿದ್ದಾರೆ ಏಸುದಾಸರು...! ಕಾರು ಹತ್ತಿ ಹೋಗುವವರೆಗೆ ನೆಟ್ಟಿದ್ದ ಕಣ್ಣು ಹಿಂದಕ್ಕೆಳೆದುಕೊಳ್ಳಲು ಕೊಂಚ ಆಲೋಚಿಸಿದ... ಮತ್ತೊಮ್ಮೆ ಹಾಡು ಕೇಳುತ್ತಿದೆ " ಎಲ್ಲೆಲ್ಲೂ ಸಂಗೀತವೇ..... ಕೇಳುವ ಕಿವಿ ಇರಲು... ನೋಡುವ ಕಣ್ಣಿರಲು.. ಎಲ್ಲೆಲ್ಲೂ ಸಂಗೀತವೇ..."
15 ಕಿ. ಮೀ. ದೂರದ ಮೂರ್ನಾಡು ಏಸುದಾಸರು ಹೋಗುವವರೆಗೆ ನೆನಪಾಗಲಿಲ್ಲ. ರಾತ್ರಿ 12  ಗಂಟೆಯ ಕಗ್ಗತ್ತಲು.... ಹಿಂದೆ ಹಿಂದೆಯೇ ಬೆನ್ನು ಹತ್ತಿದವನಿಗೆ
" ಸತ್ತಾರು ಹೋಗುವ?"
" ಅಹಾ..! ಹೋಗುವ... ರಾತ್ರಿ ಕಣೋ..ನನಗೆ ದೆವ್ವಗಳ ಹೆದರಿಕೆ."
’ ಮಾವ ಹೊಡೆಯುತ್ತಾರೆ.... ದಾರಿಯಲ್ಲಿ ವಿದ್ಯುತ್‍ ಕಂಬದ ದೀಪವಿದೆ. "
ಶುರುವಾಗುತ್ತಿದೆ ಕಗ್ಗತ್ತಲೆಯಲ್ಲಿ ಸಂಗೀತದ ಓಟಗಳು. ಕೆಲವೊಮ್ಮೆ ಬಿರುಸಾಗಿ .. ಒಂದಷ್ಟು ಓಡಿ.. ಮತ್ತೊಮ್ಮೆ ಕುಳಿತು..ಇನ್ನೊಂದಷ್ಟು ನಡೆದು ನಿಧಾನವಾಗಿ.. ನಟ್ಟ ನಡುರಾತ್ರಿಯ ಮಸಣದಂತ  ಮೂರ್ನಾಡು ಪಟ್ಟಣಕೆ ಬಂದವರಿಗೆ ಕಗ್ಗತ್ತಲೆಯಲ್ಲಿ ದಿಕ್ಕಿಲ್ಲದೆ ಮನೆಯವರ ಭಯದ ಕತ್ತಲೆ ಆವರಿಸಿದೆ. ಅವನು ಅವನ ಮನೆಗೆ ನಡೆದ. ಏಟು ಸಿಗುವುದು ಖಾತ್ರಿಯಾಯಿತು.  ಮೆಲ್ಲನೇ ಅಂಗಡಿಯ ಕದ ತೆರೆದು ಒಳ ನುಗ್ಗಿದ. ಚಿಲಕ ತೆರೆದೇ ಇತ್ತು. ಗೊತ್ತಿತ್ತು , ಚಿಲಕ ತೆರೆದೇ ಇಟ್ಟಿದ್ದರು... ! ಇದು ಹೊಸತಲ್ಲ....! ಒಳಗೆ ಬಂದಾಕ್ಷಣ ಅಲ್ಲಿಯವರೆಗೆ ನೆನಪಿರದ  ಹೊಟ್ಟೆ ಹಸಿಯುತ್ತಿದೆ..ಅಡುಗೆ ಮನೆಗೆ ಹೆಜ್ಜೆಯಿಕ್ಕಿ ಅನ್ನದ ಪಾತ್ರೆಯ ಮುಚ್ಚಳ ತೆಗೆದ.
" ಎಲ್ಲಿಗೆ ಹೋಗಿದ್ದೆ ?"
ತಿರುಗಿ ನೋಡಿದ. ನಡುಗುತ್ತಲೇ ಮಾವನ ಮುಂದೆ ನಿಂತಿದ್ದಾನೆ. ಮುಖ ಕಾಣದ ಮಾವನ ಕೈಗೆಳೆರಡು ಕೆನ್ನೆಗೆ ಅಪ್ಪಳಿಸಿದವು. ಕೈಯಲ್ಲಿದ್ದ ಅನ್ನ ತುಂಬಿದ ತಟ್ಟೆ ಕೆಳಗೆ ಬಿದ್ದು ಚೆಲ್ಲಾಪಿಲ್ಲಿಯಾಯಿತು. ಅದು ರಾತ್ರಿಯಂತಹ ರಾತ್ರಿ 3 ಗಂಟೆಗೆ.
" ಹಾಳಾಗಿ ಹೋದವನೇ . ಸಂಗೀತ.. ಸಂಗೀತ.... "
ಬೆಳಿಗ್ಗೆ ಎದ್ದವನಿಗೆ ಅಲ್ಲಲ್ಲಿ ಕೈಕಾಲು ನೋವು... ಮುಟ್ಟಿ ನೋಡಿದ. ಆಹಾ ! ಬಾಸುಂಡೆಗಳು. ರಾತ್ರಿ ಏಸುದಾಸರ ಕೈ ಸ್ಪರ್ಶ ನೆನಪಾದವು.
 " ನಾನು ಸಂಗೀತ ಕಲಿಯಬೇಕು... ಇಲ್ಲಿಂದ ಓಡಿ ಹೋದರೋ ?"
ಒಂದು ಸಂಜೆ " ಪ್ರಜಾವಾಣಿ" ಪತ್ರಿಕೆ ತಿರುವುತ್ತಿದ್ದಾನೆ. "ಧರ್ಮಸ್ಥಳ ಹೆಗ್ಗಡೆಯವರಿಂದ ಸಂಗೀತ ಆರಾಧಕರಿಗೆ ಸನ್ಮಾನ" ಸುದ್ದಿ..! . ವಿಳಾಸಕ್ಕಾಗಿ ಅತ್ತಿತ್ತ ಪರದಾಡಿದ. ಸಿಕ್ಕಿತು..! ಒಂದು ವಿದಾಯದ ಕ್ಷಣಗಳು ನಿಧಾನವಾಗಿ ತೆರೆದುಕೊಳ್ಳಲು ಹವಣಿಸಿದವು.."ಮನೆ ಬಿಟ್ಟು ಓಡಿ ಹೋಗುತ್ತಿದ್ದೇನೆ..." .. ಎದೆಯವರೆಗೆ ಗುರಿಯೊಂದು ಕೂಗಿ ಕರೆಯಿತು...  ಸಂಗೀತ ಕಲಿಯಬೇಕು ! ಅಂದೇ ಒಂದು " ಕಾರ್ಡು"  ಬರೆದ ನೇರವಾಗಿ ವೀರೇಂದ್ರ ಹೆಗ್ಗಡೆಯವರಿಗೆ..
" ನಾನು ಧರ್ಮಸ್ಥಳಕ್ಕೆ ಬರುತ್ತೇನೆ. 6 ನೇ ತರಗತಿಗೆ ಪಾಸಾಗಿದ್ದೇನೆ. ನನಗೆ ಸಂಗೀತ ಕಲಿಸಿಕೊಡಿ"
ಬೆಳಿಗ್ಗೆ-ಸಂಜೆಗಳ ಓಟಗಳಿಗೆ ಹೆಜ್ಜೆಗೊಂದು ಹಾಡು ಗುನುಗುತ್ತಲೇ ಅಂಚೆ ಕಚೇರಿಗೆ ಭೇಟಿಯಿತ್ತ... ಅಲ್ಲೆ ಬದಿಯ ಹೋಟೆಲಿನಲ್ಲಿ ರೇಡಿಯೋಂದು ದೇವರನ್ನು ಹೊಗಳುತ್ತಾ ಹಾಡು ಹಾಡುತ್ತಿದೆ.
ಮನೆಗೆ ಬಂದವನು ಅದೇ ಹಾಡನ್ನು ಗುನುಗ ತೊಡಗಿದ...." ನಟವರ ಗಂಗಾಧರ... ಉಮಾ ಶಂಕರ... ನಾದ... ವಿನೋದ.."
------------------------------------------------------------------------------------------
CLICK BELLOW (  ಮುಂದುವರೆದ  ಭಾಗ-3  )
Part-3 ಅಜ್ಜಿ ...ನಾನು ಸಂಗೀತ ಕಲಿಯಲು ಹೋಗುತ್ತಿದ್ದೇನೆ ..! http://ravimurnad.blogspot.com/2012/05/blog-post_29.html
Part-1 “ಸಂಗೀತ ಕಲಿಸಿಕೊಡಿ” ಎಂದ ಬಾಲಕ ಧರ್ಮಸ್ಥಳ ಹೆಗ್ಗಡೆಯವರಿಗೆ ...
Part-4 "ದಣಿಗಳೇ ನಾಳೆ ಮನೆಗೆ ಹೋಗಿ ಬರುತ್ತೇನೆ"

3 ಕಾಮೆಂಟ್‌ಗಳು:

 1. ನಿಮ್ಮ ಬರವಣಿಗೆಯ ಆಳದೊಳಕ್ಕೆ ಇಳಿಯಬೇಕು ಅನಿಸುತ್ತಿದೆ, ಕಲಿಯಬೇಕು ನಿಮ್ಮಿಂದ.
  ಭಾಗ ಎರಡು ನನ್ನನ್ನು ಭಾವುಕನನ್ನಾಗಿಸಿತು.

  ಪ್ರತ್ಯುತ್ತರಅಳಿಸಿ
 2. ಸಾರ್,

  ಒಂದು ಸಂಕೀರ್ಣ ಜಾಯಮಾನದ ಬರಹ ಬರೆಯುವಾಗ, ಓದುಗನನ್ನು ಹಿಡಿದು ಕೂರಿಸಿ ಓದಿಸಿಕೊಂಡು ಮತ್ತೆ ಮತ್ತೆ ಅದನ್ನೆ ಮೆಲಕು ಹಾಕುವುದು ಹೇಗೆ ಎನ್ನುವುದನ್ನು ನಿಮ್ಮ ಬರಹಗಳಿಂದ ಕಲಿಯಬೇಕಿದೆ. ಕಾವ್ಯಮಯವಾಗಿ ಲೇಖನವನ್ನು ಬರೆದಾಗ ಎಂತಹವರೂ ಕೂತು ಓದುತ್ತಾರೆ. ಅಂತ ಸಿದ್ಧಿ ನಿಮ್ಮದು.

  ಕೆಲ ಹಾಡುಗಳನ್ನು ನೀವು ಹಾಡಿ ಕಂಪ್ಯೂಟರಿನಲ್ಲಿ ರೆಕಾರ್ಡ್ ಮಾಡಿ ನಮಗಾಗಿ ಏಕೆ ಬ್ಲಾಗಿನಲ್ಲಿ ಹಾಕಬಾರದು ಅಂತ ನಮ್ಮ ಬಿನ್ನಹ. ಕೇಳಿ ಸಂತಸಪಡುತ್ತೇವೆ.

  ಮೂರ್ನಾಡಿನಿಂದ ಮಡಕೇರಿಗೆ ೧೫ ಕಿಮಿ ಕಾಲ್ನಡಿಗೆ ಅದೂ ಹೋಗಿ ಬರುವುದು? ಪಾಪ ಆ ಎಳವೆ ಕಾಲುಗಳಿಗೆ ಅದೆಷ್ಟು ತ್ರಾಸವೋ? ಮತ್ತೆ ಮನೆಯಲ್ಲಿ ಬಿದ್ದ ಒದೆಗಳ ನೋವು. ರಾಮರಾಮ!

  ಅಂತೂಏಸು ದಾಸರ ಗಾಯನಕ್ಕೆ ಅವೆಲ್ಲ ನೋವುಗಳನ್ನು ಮರೆಸುವ ಔಷಧಿ ಗುಣವಿದ್ದೀತು.

  ನಿಮ್ಮ ಸಂಗೀತ ಯಾತ್ರಾ ಕಥನ ಮುಂದುವರೆಯಲಿ.

  ಪ್ರತ್ಯುತ್ತರಅಳಿಸಿ
 3. ತೇಟ್ ಹೃದಯದಿಂದ ಬಂದ ಬರಹ .......ರವಿ ಸರ್ ...ಬೇಗ ಮುಂದುವರಿಸಿ.....

  ಪ್ರತ್ಯುತ್ತರಅಳಿಸಿ