ಸೋಮವಾರ, ಅಕ್ಟೋಬರ್ 8, 2012

ಹೊರನಾಡ ಕನ್ನಡಿಗರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳು !

(ನ್ಯೂ ಇಂಗ್ಲೇಂಡ್ (ಬಾಸ್ಟನ್) ಮಂದಾರ ರತ್ನ ಮಹೋತ್ಸದ "ದೀವಿಗೆ" ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
ಹಾಗಂತ, ಎದೆ ತಟ್ಟಿ ಹೇಳುವ ಮಾತಿದು. ಕನ್ನಡದ ನೆಲ ಸಂಸ್ಕೃತಿಯನ್ನು ಹೊತ್ತೊಯ್ಯುವ ನಡೆದಾಡುವ ಜಾಹೀರಾತುಗಳು. ಅದನ್ನು ಉದ್ಯೋಗಕ್ಕಾಗಿ ಜಗತ್ತಿಗೆ ಅಂಡಲೆದ ಕನ್ನಡಿಗರು ಮಾಡುತ್ತಿದ್ದಾರೆ. ಹುಬ್ಬೇರಿಸುವ ಪ್ರಶ್ನೆಯೂ ಅಲ್ಲ. ಹೊರನಾಡ ಕನ್ನಡಿಗರು ಕನ್ನಡ ನೆಲದ ರಾಯಭಾರಿಗಳು. ಜಗತ್ತಿನ ದಿಕ್ಕು ದಿಕ್ಕುಗಳಿಗೆ ಕನ್ನಡದ ಉಸಿರನ್ನು ಹೊತ್ತೊಯ್ದ ಇವರು, ನಾಡಿನ ಜಾನಪದ, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಆಚಾರ-ವಿಚಾರ, ಕ್ರೀಡೆಯ ಸಾರ್ವಭೌಮತ್ವವನ್ನು ನೆಲೆ ನಿಲ್ಲಿಸಿದರು. ಈ ರಾಯಭಾರತ್ವದ ಸವಿಯನ್ನು ಕರ್ನಾಟಕದ ಜನತೆ ಉಣ್ಣುತ್ತಿದೆ.

ಮನುಷ್ಯ ಮನಸ್ಸು ಮತ್ತು ಊರನ್ನು ಖಾಲಿ ಮಾಡಿಕೊಳ್ಳಬಾರದು. ಹೊರನಾಡ ಕನ್ನಡಿಗರ ಬಗ್ಗೆ ಒಂದಿಷ್ಟು ಬರೆಯಿರಿ ಅಂತ ಸಹೃದಯಿಗಳು ಹೇಳಿದರು. ಪ್ರಕೃತಿಯ ಸಿರಿ, ಕರ್ನಾಟಕದ ಸ್ವಿಟ್ಜರ್ಲ್ಯಾಂಡ್, ಕೊಡಗಿನಿಂದ ಅಂಡಲೆದು, ಕನ್ನಡದ ಈ ಮಾತನ್ನು ಆಫ್ರಿಕಾದ ಕ್ಯಾಮರೂನಿನಲ್ಲಿ ಕುಳಿತು ಬರೆಯುತ್ತಿದ್ದೇನೆ. ವ್ಯವಸ್ಥೆಯ ಬಂಧನದಲ್ಲಿ ನೆಲವನ್ನು ಬಿಟ್ಟು ಇನ್ನೊಂದು ನೆಲದಲ್ಲಿ ಮತ್ತೆ ಮತ್ತೆ ಕರೆಯುವ ಆ ನೆನಪುಗಳನ್ನು ಹೊರನಾಡಿನಲ್ಲಿದ್ದವನು ಮಾತ್ರ ಅರಗಿಸಿಕೊಳ್ಳಬಲ್ಲ. ಆ ನೆನಪಿನ ಕ್ಷಣಗಳ ನಿಟ್ಟುಸಿರು ಮನಸ್ಸನ್ನು ಇನ್ನಷ್ಟು ವಿಶಾಲಗೊಳಿಸುವುದು. ಎದೆ ತೆರೆದು ಜಗತ್ತಿಗೆ ನಿಂತು ರೆಪ್ಪೆ ಮಿಟುಕಿಸುವುದು.

ನೆಲದ ಸಂಸ್ಕೃತಿಯನ್ನು ಜಗತ್ತಿಗೆ ಹೊರನಾಡಿನಿಂದ ತೆರೆದು ತೋರಿಸಿದಾಗ  ಕನ್ನಡಿಗರು "ಬೇಷ್" ಅಂದರು. ಅದು ನಡೆದದ್ದೇ ಹೊರನಾಡಿನಿಂದ. ಹಿಂದೆಯೂ ಹೊರನಾಡಿಗರು ಮಾಡಿದರು, ಮುಂದೆಯೂ ಮಾಡುವರು, ನೆಲ ಬಿಟ್ಟವರು ಅಲ್ಲಿನ ಉಸಿರು ಬಿಡಲಾರರು ಅನ್ನೋದಕ್ಕೆ ಭಾಷ್ಯ ಬರೆದರು. ತನ್ನ ನೆಲದಲ್ಲಿ ರೂಢಿಸಿಕೊಂಡ ಕಲೆ,ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ದಿನ ನಿತ್ಯದ ಬದುಕಿನಂತೆ ಬದುಕಿಸಿದರು,ಬದುಕಿದರು. ಕನ್ನಡ ನಾಡು ಹೊಸ ಜಗತ್ತೊಂದನ್ನು ವಾಸ್ತವಕ್ಕೆ ತೆರೆಯಿತು. ಜಗತ್ತು ಕನ್ನಡದ ಕಣ್ತೆರೆಯಿತು. ನೆಲದ ಸಂಸ್ಕೃತಿ ವಿಶ್ವದ ಸಾಂಸ್ಕೃತಿಕ ಪರದೆಯಲ್ಲಿ ಸದಾ ಜೀವಂತವಾಗಿರುವಂತವು. ಕರ್ನಾಟಕದಿಂದ ಹೊತ್ತು ತಂದು ವಿಶ್ವದ ಪರದೆಯಲ್ಲಿ ಬಣ್ಣ ಹಚ್ಚಿ ತೋರಿಸಿದರು. ನೆಲದ ಪ್ರತಿಭಾ ಹಕ್ಕಿಗಳನ್ನು ಹಿಡಿದು ವಿದೇಶಿಗರ ಹೃದಯ ಮಂದಿರದಲಿ ಹಾರಲು ಬಿಟ್ಟರು. ಅಲ್ಲಿ ಕನ್ನಡದ ಸಂಸ್ಕೃತಿಗೆ ವಿದೇಶಿಗರು ಬೆರಗುಗೊಂಡರು.

ಆಶ್ಚರ್ಯವಾಗಬಹುದು. ತಂತ್ರಜ್ಞಾನಕ್ಕೆ ಭಾರತೀಯರಿಗೆ ತಲೆಬಾಗುವಷ್ಟು ಜಗತ್ತಿನ ರಾಷ್ಟ್ರಗಳು ಇನ್ಯಾವ ದೇಶಕ್ಕೂ ಮಂಡಿ ನೆಲಕ್ಕೆ ಮುಟ್ಟಿಸುವುದೇ ಇಲ್ಲ. ಅಷ್ಟೊಂದು ಅಗಾಧವಾಗಿದೆ ಭಾರತದ ಜ್ಞಾನ ಸಂಪತ್ತು. ಅದರಲ್ಲೂ ಭಾರತ ಅರ್ಧ ಜಗತ್ತಾಗಿದೆ. ವಿಶ್ವದ ಯಾವುದೇ ಭಾಷೆಗೆ ಸಡ್ಡು ಹೊಡೆಯುವ ನವೀರು ಭಾವಗಳನ್ನು ಕನ್ನಡದ ಅಕ್ಷರ ಪಡೆದುಕೊಂಡಿದೆ ಅಂತ ಹೆಮ್ಮೆ ಪಡುತ್ತೇವೆ. ಯಾಕೆ ಅಂತ ಪ್ರಶ್ನೆ. ಕನ್ನಡ ಹೃದಯದ ಭಾಷೆ. ಸುಲಲಿತವಾಗಿ, ಅಷ್ಟೇ ಬಲಿಷ್ಠ ಪದಪ್ರಯೋಗದಿಂದ ಪ್ರಸ್ತುತಪಡಿಸುವ ಪದ ಸ್ವಾರಸ್ಯದ ಮನಸ್ಸಿನ ಭಾಷೆ ಜಗತ್ತಿನಲ್ಲಿ ಇನೊಂದಿಲ್ಲ. ಊರು ಬಿಟ್ಟು ಖಾಲಿಯಾದ ಮನಸ್ಸನ್ನು ಅಷ್ಟೇ ಗಂಭೀರವಾಗಿ ಅವುಚಿಕೊಂಡಿದೆ. ನೋಡುವ ಭಾವಗಳಲ್ಲಿ ಸೂಕ್ಷ್ಮಗಳನ್ನು ಅತ್ಯಂತ ಸುಲಭವಾಗಿ ಕನ್ನಡದ ಚಿನ್ನದ ಪದಗಳಲ್ಲಿ ಮಾತನಾಡಿಸಬಹುದು. ಜಗತ್ತಿನ ಹೃದಯ ತೆರೆಯುವುದು ಕನ್ನಡದ ಪದಕ್ಕಿರುವ ಲಾಲಿತ್ಯ. ನೇರವಾಗಿ ಹೃದಯದಿಂದ ಹೃದಯಕ್ಕೆ ಹರಿಯುವ ಮನಸ್ಸು ಮಾತಾಡುವ ಭಾಷೆ. ಬೇಕಾದಷ್ಟು ಸಾಹಿತ್ಯಗಳು ಹೊರನಾಡಿನಿಂದ ಕನ್ನಡ ನಾಡಿಗೆ ಹರಿದು ಬಂದಿದೆ. ಫೇಸ್ಬುಕ್ಕು, ಟ್ವಿಟ್ಟರ‍್ ಸೇರಿದಂತೆ ಹಲವು ಸಾರ್ವಜನಿಕ ಅಂತರ್ಜಾಲ ತಾಣಗಳು ಕನ್ನಡವನ್ನು ಇನ್ನಷ್ಟು ಬಲಿಷ್ಠಗೊಳಿಸಿತು. ಇಂತಹ ಅಂತರ್ಜಾಲ ತಾಣಗಳಲ್ಲಿ ಕನ್ನಡವನ್ನು ಅಚ್ಚುಕಟ್ಟಾಗಿ ವಿಸ್ತಾರಗೊಳಿಸಿದ ಫೇಸ್ಬುಕ್ಕಿಗೆ ಅನಂತ ನಮನಗಳು ! ಹೊರನಾಡ ಕನ್ನಡಿಗರು ಧನ್ಯರಾದರು. !

ಬಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯಶಿವ... ಅಂತ ಸತ್ತಂತಿಹರನ್ನು ಬಡಿದೆಚ್ಚರಿಸುವ ತಾಕತ್ತು ಹರಿದು ಬಂತು, ಕುವೆಂಪು ತಂದ ನವಿರು ಗಾಳಿಯ ತಂಪು. ಸತ್ತಂತೇ ಬದುಕುವವರೆಲ್ಲರಲ್ಲೂ ಹೊಸ ಚೈತನ್ಯ ತುಂಬಿದ ರಾಗ ಜೀವ ಲಾಲಿತ್ಯವಿದು. ಅದು ಭಾರತ ಸಿಂಧು ರಶ್ಮಿಯ ಗೋಕಾಕರ ಪುಸ್ತಕದಲ್ಲಿ, ಮೌನಕ್ಕೆ ಒಗ್ಗಿಕೊಂಡ ನಾಕು ತಂತಿಯ ಬೇಂದ್ರೆಯಲ್ಲಿ, ಕನ್ನಡದ ಕನಸಿನಲ್ಲಿ ನಿದ್ದೆಗೆ ಜಾರಿದ ಕಾರಂತರ ಮೂಕಜ್ಜಿಯ ಕನಸುಗಳಲ್ಲಿ, ಕಾಡು ಕುದುರೆಯನ್ನು ಕಾಡಿನಿಂದ ನಾಡಿಗೆ ಅಟ್ಟಿದ ಕಂಬಾರರಲ್ಲಿ ಮಿಳಿತವಾಗಿತ್ತು. ಅನಂತ ಮೂರ್ತಿಯವರು ಕನ್ನಡದ ಅಸ್ತಿತ್ವವಿಲ್ಲದ ಭಾರತ ದೇಶದ ಇತರ ರಾಜ್ಯಗಳಲ್ಲಿ ಕನ್ನಡ ಸಾಹಿತ್ಯವನ್ನು ಹರವಿದ್ದಾರೆ. ಬದುಕು ನಾಟಕ ರಂಗ. ನಾವು ಅದರಲ್ಲಿ ಪಾತ್ರಧಾರಿಗಳು. ಅದನ್ನು ಗಿರೀಶ್ ಕಾರ್ನಾಡರು ಜೀವವಿದ್ದವರ ತಲೆಗೆ ದಂಡವಿದೆ ಎಂದು ತೆರೆದು ತೋರಿಸಿದರು. ಮಾಸ್ತಿ ಕನ್ನಡ ಆಸ್ತಿ ಎಂದು ಬಹಳ ಗೌರವಿಸುವರು ಕನ್ನಡದ ಜನತೆ.

ಭಾಷೆ ನಾಡಿನ ತಾಯಿಬೇರು. ಸಾಹಿತಿಗಳು ಮತ್ತು ಬರಹಗಾರರು ಅದರ ಪ್ರವಾದಿಗಳು. ಅದನ್ನು ಉಳಿಸುವವರು ಓದುಗರು ಮತ್ತು ಉತ್ತೇಜಕರು. ವಿದೇಶಕ್ಕೆ ಬಂದಾಕ್ಷಣ ನಮ್ಮನ್ನು ಬಾಧಿಸುವ ಮೊದಲ ದೌರ್ಬಲ್ಯ ಭಾಷೆ.  ಕೊಲ್ಲಿ ರಾಷ್ಟ್ರದಲ್ಲಿ ಮಲೆಯಾಳಂ,ಹಿಂದಿ, ಅರೆಬಿಕ್, ತಮಿಳು, ಆಂಗ್ಲ ಮಾಧ್ಯಮಕ್ಕೆ ಮುಖ ಮಾಡುವಾಗ ಒಂದಿಷ್ಟು ಕನ್ನಡದ ಪರದೆಯನ್ನು ಸರಿಸಿ ಕಂಪನ್ನು ಬೀರಿದವರು ಇದ್ದಾರೆ. ಅದು ವಿವಿಧ ಸಂಘಟನೆಗಳು ಮಾಡಿದರೂ, ಕೊಲ್ಲಿ ರಾಷ್ಟ್ರದ ಮತ್ತು ಕನ್ನಡಿಗರ ಸುದ್ದಿಗಳನ್ನು, ಕನ್ನಡ ಸಾಹಿತ್ಯವನ್ನು ನಾಡಿಗೆ ತೆರೆದು ತೋರಿಸಿದ್ದು ಕೆಲವರು ಮಾತ್ರ. ಅವರ ಸಾಹಿತ್ಯಕ್ಕೆ ನೀರೆರೆದವರು ಹಲವರು. ಕೊಲ್ಲಿ ರಾಷ್ಟ್ರದಲ್ಲಿ, ಆಫ್ರಿಕಾದ ನೈಜೀರಿಯಾ, ಸೌತ್ ಆಫ್ರಿಕಾದಲ್ಲಿ ಕನ್ನಡ ಸೊಗಸಾಗಿದೆ. ಇವು ಜಾತಿ-ಮತ-ಬೇಧ ಮರೆತ ಕನ್ನಡದ ನೆಲದಿಂದ ಹೊತ್ತು ತಂದಂತಹ ಸಾಂಸ್ಕೃತಿಕ ಚಿಲುಮೆಗಳು.

ಕನ್ನಡದ ವಿಷಯದಲ್ಲಿ ಮನಸ್ಸಿನ ಮಾತಿಗೆ ಒಗ್ಗಿಸಿಕೊಂಡ ವಿಚಾರದಲ್ಲಿ ಕೊಲ್ಲಿ ರಾಷ್ಟ್ರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಗಲ್ಲಿಗಲ್ಲಿಗಳಲ್ಲಿ ಸಿಗುವ ಕನ್ನಡಿಗರು, ಅಂಗಡಿ ಮುಂಗಟ್ಟುಗಳಲ್ಲಿ  ನಕ್ಕವರು, ಹೋಟೆಲ್ ಉದ್ಯಮದಲ್ಲಿ ಕ್ಷೇಮ ವಿಚಾರಿಸಿದವರು, ಬ್ಯಾಂಕ್, ವಾಣಿಜ್ಯ ವಿನಿಮಯ ಕೇಂದ್ರಗಳಲ್ಲಿ ಕೈ ಕುಲುಕಿದ ಕನ್ನಡಿಗರು ಅಚ್ಚರಿಗೆ ಕಾರಣರಾಗುತ್ತಾರೆ. ಬಹ್ರೈನಿನಲ್ಲಿ ಐದು ತಿಂಗಳ ಕಾಲ ಹೊರನಾಡ ಕನ್ನಡಿಗನಾಗಿ ಅಲೆದಾಡಿದ ದಿನಗಳುಂಟು.  ಬಹುಮುಖ್ಯವಾಗಿ ಗಮನ ಸೆಳೆದದ್ದು, "ತುಳಸಿ ಗಿಡ". ಬಹ್ರೈನಿನ ಮನಾಮ, ಹೂರಾ, ಗುದಾಬಿಯಾ, ಸಲ್ಮಾನಿಯಾ ಗಲ್ಲಿಗಳಲ್ಲಿ ಸಂಚರಿಸಿದಾಗ ಕೆಲ ಹೊರನಾಡಿಗರ ವಸತಿಗೃಹದಲ್ಲಿ ಈ ಬಹುಮಾನ್ಯ ಭಕ್ತಿ ಭಾವಪ್ರಧಾನ ಗಿಡಗಳನ್ನು ಕಂಡು ಖುಷಿಪಟ್ಟ ಕ್ಷಣಗಳಿವೆ. ಆ ಗಿಡಗಳಲ್ಲಿ ಪೂಜೆ ಸಲ್ಲಿಸಿದ ಕುರುಹಾಗಿ ಊದುಬತ್ತಿಯ ಕಡ್ಡಿಗಳು, ಅದೀಗ ತಾನೆ ಗಿಡದ ಮಡಿಲಿಗೆ ಮಲಗಿದ ಹೂವುಗಳು ಈಗಲೂ ನೆನಪಿನ ಪರದೆಯಲ್ಲಿ ದಳಗಳರಳಿಸುತ್ತಿವೆ. ಈ ಅಪೂರ್ವ ಸನ್ನಿವೇಶಗಳನ್ನು, ಆಚರಣೆಯನ್ನು ಸಾವಿರಾರು ಮೈಲು ದೂರದ ಕೊಲ್ಲಿ ರಾಷ್ಟ್ರದಲ್ಲಿ ನೋಡುವಾಗ ಮನೆ ಕೈಗೆ ಬಂದಷ್ಟು ಅಳತೆಯಲ್ಲಿರುತ್ತದೆ. ಕನ್ನಡ ನಾಡಿನ ನಾಡಿ ಮಿಡಿಯುವ ಆಚಾರಕ್ಕೆ ಮನೆ-ಮನಗಳು ಅರಳುತ್ತವೆ .

ಅಂತರ್ಜಾಲ-ವೃತ್ತ ಪತ್ರಿಕೆಗಳು ಇಡೀ ಕೊಲ್ಲಿ ರಾಷ್ಟ್ರಗಳ ಜನತೆಯನ್ನು ಪದಗಳಲ್ಲಿ ಮಾತನಾಡಿಸಿದ್ದು ದೊಡ್ಡ ಉಪಕಾರವೇ ಸರಿ. ಅದರಲ್ಲಿ ಅಂತರ್ಜಾಲದ ಅಪ್ಪಟ ಕನ್ನಡದ ಸುದ್ದಿ ಮಾಧ್ಯಮ "ಗಲ್ಫ್ ಕನ್ನಡಿಗ". ದುಬೈ, ಒಮಾನ್, ಕುವೈತ್, ಕತಾರ್ ರಾಷ್ಟ್ರಗಳಲ್ಲಿ ತಮ್ಮದೇ ಆದ ಗುರುತರ ಜವಾಬ್ದಾರಿಗೆ ಕನ್ನಡದ ಸಮಾರಂಭಗಳನ್ನು ಆಯೋಜಿಸುವ ಅನಿವಾಸಿ ಕನ್ನಡಿಗರ ಮುತುವರ್ಜಿಗಳು ಸದಾ ನೆಲದ ನೆನಪನ್ನು ಹಚ್ಚ ಹಸಿರಾಗಿಸಿದೆ. ಕನ್ನಡದ ಹಲವು ಸಮೂದಾಯಗಳ ಒಕ್ಕೂಟ ತಮ್ಮದೇ ಆದ ಕಾರ್ಯ ಯೋಜನೆಗಳು, ತಮ್ಮ ನೆಲದಲ್ಲಿ ಕುಟುಂಬ ಬಾಂಧವರೊಂದಿಗಿನ ಕ್ಷಣಗಳ ನೆನಪುಗಳನ್ನು ಕೆದಕಿ ಕಳೆಯುತ್ತಿರುವುದನ್ನು ಕಾಣಬಹುದು. ಸಾಹಿತ್ಯ, ಕಲೆ, ಜಾನಪದ ಸೊಗಡುಗಳು ಇಲ್ಲಿ ಮೈನೆರೆಯುತ್ತವೆ. ಹೊರನಾಡ ಕನ್ನಡಿಗರು ಕರ್ನಾಟಕದ ಸಾಂಸ್ಕತಿಕ ರಾಯಭಾರಿಗಳು ಅನ್ನೋದಕ್ಕೆ ಅಪ್ಪಟ ಸಾಕ್ಷಿಗಳು..!

ಕನ್ನಡದ ಉಳಿವಿಗಾಗಿ, ಅದರ ಪ್ರಗತಿಯನ್ನು ಕೊಲ್ಲಿ ರಾಷ್ಟ್ರ ಮಾತ್ರವಲ್ಲ ಆಫ್ರಿಕಾ ಖಂಡದ ಸೌತ್ ಆಫ್ರಿಕಾ, ನೈಜೀರಿಯಾ ತಮ್ಮದೇ ಆದ ಕೊಡುಗೆ ಸಲ್ಲಿಸುತ್ತಿವೆ ಅಂತ ದಾಖಲೆ ಬರೆಯಬೇಕಾಗುವುದು. ಮೊದಲೇ ಕಗ್ಗತ್ತಲ ಖಂಡವೆಂಬ ಖ್ಯಾತಿ ಪಡೆದ ಆಫ್ರಿಕಾದಲ್ಲಿ ಈ ಎರಡು ರಾಷ್ಟ್ರಗಳಲ್ಲಿನ ಕನ್ನಡದ ಚಟುವಟಿಕೆ ಕೊಲ್ಲಿಯ ಮತ್ತು ವಿಶ್ವದ ಇತರ ರಾಷ್ಟ್ರಗಳಷ್ಟೇ ವಿಸ್ತಾರವನ್ನು ಪಡೆದಂತವು. ಅಲ್ಲಿ ವಾರಕ್ಕೊಮ್ಮೆ ಸಿಗುವ ಭಾನುವಾರವನ್ನು ಸಂಭ್ರಮದ ದಿನವನ್ನಾಗಿ ಆಚರಿಸುತ್ತಿರುವುದು ಕಗ್ಗತ್ತಲೆಯಲ್ಲಿ ಕನ್ನಡದ ಹಣತೆ ಬೆಳಗಿರುವುದಕ್ಕೆ ಸಾಕ್ಷಿ. ಇದರಲ್ಲಿ ಕನ್ನಡದ ಸಂಸ್ಕೃತಿ, ಜಾನಪದದ ಸೊಗಡನ್ನು ಅಚ್ಚುಕಟ್ಟಾಗಿ ಪಾಲಿಸುವ ನೈಜೀರಿಯಾದ ಕನ್ನಡದ ಸಂಘಗಳು ಮೇಲು ಪಂಕ್ತಿಯಲ್ಲಿ ನಿಲ್ಲುತ್ತವೆ. ಮುಕ್ತ ಮಾರುಕಟ್ಟೆಗೆ ಯಥೇಚ್ಛವಾಗಿ ಜಗತ್ತನ್ನು ತೆರೆದಿಟ್ಟಿರುವ ನೈಜೀರಿಯಾ ಮತ್ತು ಸೌತ್ ಆಫ್ರಿಕಾಗಳಲ್ಲಿ ಕನ್ನಡಿಗರ ಚಟುವಟಿಕೆ ಮತ್ತು ಸೌಹಾರ್ದ ಕೂಟ ಬೆಳಕಿಗೆ ಬಂದಿದೆ.
           
ಜಗತ್ತಿನ ಮೂಲೆ ಮೂಲೆಗಳಿಂದ ಉದಯೋನ್ಮುಖ ಸಾಹಿತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಕೊಲ್ಲಿ ರಾಷ್ಟ್ರಗಳಲ್ಲಿ ನಡೆದಿದೆ. ಆಶ್ಚರ್ಯವಾಗಬಹುದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಸ್ವಂತ ದುಡಿತದ ವೇತನದಲ್ಲಿ “ಗಲ್ಫ್ ಕನ್ನಡಿಗ" ಅಂತರ್ಜಾಲದ ಮೂಲಕ ಕನ್ನಡದ ಸವಿಯನ್ನು ಕರುಣಿಸುತ್ತಿರುವ, ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಂಪಾದಕರಾಗಿ, ಕನ್ನಡಾಭಿಮಾನ ಮೆರೆದವರು ಅಲ್ಲಿದ್ದಾರೆ. ಕತಾರಿನಲ್ಲಿರುವ ತಮ್ಮದೇ ಸಂಸ್ಥೆಯಲ್ಲಿ ಸುಮಾರು 200ಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿ ಬದುಕು ಕರುಣಿಸಿ ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಇತಿಹಾಸ ಬರೆದ ಯಕ್ಷಗಾನ ರಂಗ ಪ್ರದರ್ಶನವೇರ್ಪಡಿಸಿದ್ದ ಹಿರಿಮೆ ಗಳಿಸಿದವರೂ ಇದ್ದಾರೆ. ಇವರೊಂದಿಗೆ ಇನ್ನೋರ್ವ ಕನ್ನಡಿಗ ಹಿಂದಿ ಸಂಗೀತ ಮತ್ತು ಸುದ್ದಿ ಲೋಕದಲ್ಲಿ ಯುಎಇ ಸುತ್ತಮುತ್ತ ಮನೆ ಮಾತಾಗಿರುವ 105.4 ಎಫ್.ಎಂ.ರೇಡಿಯೋ ಸ್ಪೈಸ್ ಮೂಲಕ ಕನ್ನಡವನ್ನೂ ಬೆಳಗಿಸಿದರು. ವಾರದ ಪ್ರಮುಖ ಒಂದು ದಿನದ ಒಂದಿಷ್ಟು ಸಮಯವನ್ನು ಕನ್ನಡಕ್ಕಾಗಿ ಮೀಸಲಿಟ್ಟು ಕನ್ನಡ ಶ್ರೋತೃಗಳ ಕನ್ನಡದ ಹಸಿವನ್ನು ನೀಗಿಸುತ್ತಿದ್ದಾರೆ.

ಅಬುಧಾಬಿ ಕನ್ನಡ ಸಂಘ, ನಮ್ಮ ತುಳುವೆರೆ ಸಂಸ್ಥೆ, ಯುಎಇ ಕನ್ನಡ, ಬಹ್ರೈನ್ ಕನ್ನಡ ಸೇರಿದಂತೆ ಕರ್ನಾಟಕ ಸಂಘ ಶಾರ್ಜಾ, ಅಜ್ಮನ್ ಕರ್ನಾಟಕ ಸಂಘ, ಒಮಾನ್ ಕನ್ನಡಿಗರ ಸಂಘಗಳು ಕೊಲ್ಲಿ ರಾಷ್ಟ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇದು ಹೊರನಾಡ ಕನ್ನಡಿಗರು ನಡೆದ ಕನ್ನಡದ ಹಾದಿ. ಇದು ಕನ್ನಡಿಗರ ಎದೆಯಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿರಬಹುದು.

ಅಚ್ಚ ಕನ್ನಡ  ಅಂತರ್ಜಾಲ ಸಾಹಿತ್ಯ ಪುಟಗಳಾದ "ಕೆಂಡ ಸಂಪಿಗೆ",  "ಅವಧಿ ಮಾಗ್", "ನಿಲುಮೆ", ಕನ್ನಡ ಸಾಹಿತ್ಯ ಸಾರಕ್ಕೆಂದೇ ಕನ್ನಡಿಗರೇ ಒಗ್ಗಟ್ಟಾಗಿ ಹುಟ್ಟು ಹಾಕಿರುವ ಫೇಸ್ಬುಕ್ ಅಂತರ್ಜಾಲ ಸಮೂದಾಯ "ಕನ್ನಡ ಬ್ಲಾಗ್" , “ಕನ್ನಡ ಸಾಹಿತ್ಯ”,  “ಚುಟುಕು” ಸೇರಿದಂತೆ ಇನ್ನೂ ಹತ್ತು ಹಲವಾರು ತಾಣಗಳು ಅನಿರ್ವಚನೀಯ ಆನಂದವನ್ನು ಜಗತ್ತಿನಾದ್ಯಂತ ತೆರೆದಿದೆ. ಸಂಪೂರ್ಣತೆಯ ಕನ್ನಡದ ಸವಿಯೂಟವನ್ನು ಸಾಹಿತ್ಯಕ್ಕೆ, ಕನ್ನಡಿಗರಿಗೆ, ಹೊರನಾಡ ಕನ್ನಡಿಗರಿಗೆ ಕೊಡುಗೆಯನ್ನಾಗಿ ನೀಡುತ್ತಿದೆ ಎಂಬುದು ಹೊರನಾಡಿನಲ್ಲಿ ಕನ್ನಡದ ಇತಿಹಾಸ ಪುಟ ಮಗುಚಿದಷ್ಟೇ ಸತ್ಯ. ಜಗತ್ತಿನ ವಿವಿಧ ಭಾಗದಲ್ಲಿ ಬೇರು ಬಿಟ್ಟಿರುವ ಕನ್ನಡಿಗರನ್ನು ಸಾಹಿತ್ಯ ಸಾಗರಕ್ಕೆ ಧುಮುಕಿಸುತ್ತಿರುವುದು ಮಾತ್ರವಲ್ಲ, ಅದರ ಆನಂದವನ್ನು ದಿನನಿತ್ಯ ಉಣ ಬಡಿಸುತ್ತಿದೆ. ಅದು ಕಗ್ಗತ್ತಲೆ ಖಂಡ ಆಫ್ರಿಕಾದ ರಾಷ್ಟ್ರಗಳನ್ನೂ ಬಿಟ್ಟಿಲ್ಲ.

          ಹಾಗೆಯೇ, ನಾವು ಕನ್ನಡಿಗರು, ಕನ್ನಡಿಗರಂತೆ ಇತರರನ್ನೂ ಪ್ರೀತಿಸುವವರು, ವಿಶ್ವಕ್ಕೆ ಮಾನವತೆಯ ಸಾಂಸ್ಕೃತಿಕ ರಾಯಭಾರಿಗಳು.
-ರವಿ ಮೂರ್ನಾಡು, ಕ್ಯಾಮರೂನ್.

ಭಾನುವಾರ, ಅಕ್ಟೋಬರ್ 7, 2012

ಮಂಕು ತಿಮ್ಮನ ಕಗ್ಗ ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದರೆ..?!


-ರವಿ ಮೂರ್ನಾಡು
ಸೃಜನಶೀಲತೆ ಅಂದರೆ ಸೃಷ್ಟಿಯ ನಿಯಮದಲ್ಲಿ ಹೊಸತೊಂದು ಮಗುವನ್ನು ಹುಟ್ಟಿಸುವ ಚೇತನದಷ್ಟೇ ಸತ್ಯ. ಅದಿಲ್ಲದೆ ಹೊಸತನ ಅನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.  ಸುಖಾ ಸುಮ್ಮನೆ ಕುಳಿತವನನ್ನೂ ಕವಿತೆಯ ಜಾಗಟೆಗೆ ಎಚ್ಚರಿಸುವ ಪದ ವಿನ್ಯಾಸವನ್ನು ಎದೆಗೆ ಸುರಿದು ಹೋದರು ಕುವೆಂಪು. ಮಾಸ್ತಿ ಕನ್ನಡ ಆಸ್ತಿ, ಇದೊಂದು ಪ್ರಾಸಬದ್ಧ ಗೌರವಕ್ಕೆ ಸೀಮಿತಗೊಳಿಸುವ ಕನ್ನಡದ ಜನತೆ, ಮಾಸ್ತಿಯ ಸಾಹಿತ್ಯ ಸ್ಥಿತಿಯನ್ನು ವಿಸ್ತೃತಗೊಳಿಸಲಿಲ್ಲ ಅನ್ನುವ ಅನುಮಾನಗಳ ಹುತ್ತವನ್ನು ಕೆದಕತೊಡಕುತ್ತೇವೆ. ಕನ್ನಡದ ನೆಲದಲ್ಲಿ ಇದರ ಸಂಸ್ಕಾರಕ್ಕೆ ನೆಲೆ ಹುಡುಕುತ್ತಿದ್ದೇವೆ. ನಮ್ಮನ್ನು ನಾವು ತೆರೆಯುತ್ತಾ ಹೋದಂತೆ, ಅದರ ಮಾನವೀಯ ಮೌಲ್ಯಗಳಲಿ ಕೆಲವನ್ನು ಕಳೆದುಕೊಂಡಿದ್ದೇವೆ ಅನ್ನುತ್ತಲೇ ಅದರ ಒಂದಷ್ಟು ಬೆಲೆಗಳು ಅಭಿಮಾನದ ಸೆಲೆಗಳಲ್ಲಿ ಸುಳಿಯುತ್ತಿವೆ. ಅದು ನಡೆಯಲಿಲ್ಲ ಅಂತ ಬೊಟ್ಟು ಮಾಡುತ್ತೇವೆ.

ಇವತ್ತು ಡಿವಿಜಿಯವರು ಬರೆದ ಮಂಕು ತಿಮ್ಮನ ಕಗ್ಗ ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದರೆ " ನೊಬೆಲ್ ಪ್ರಶಸ್ತಿ" ಅನ್ನುವ ಹಣೆಪಟ್ಟಿಯನ್ನು ಕಟ್ಟಿಕೊಳ್ಳುವ ಹಣೆಬರಹ ಕನ್ನಡಿಗರಾದ ನಮ್ಮಲ್ಲಿತ್ತು. ತಮ್ಮ ಮನೆಯಲ್ಲಿರುವ ಮನುಷ್ಯರ ಅಳಲನ್ನು ಆಲಿಸದ ಕನ್ನಡಿಗ ಸಮಾಜದಲ್ಲಿ ನಾಲ್ಕು ಜನರ ಚಪ್ಪಾಳೆಗೆ ಸಮಾರಂಭದಲ್ಲಿ ಭಾಗವಹಿಸಿ ಮುಖಬೆಲೆಯನ್ನು ಆಶಿಸುತ್ತಾನೆ. ಬಹಳ ದೊಡ್ಡ ಸಾಮಾಜಿಕ ದೌರ್ಬಲ್ಯದ ಈ ಸ್ಥಿತಿಯಲ್ಲಿ ಭಾರತದೊಳಗೇ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗದ ಮಂಕುತಿಮ್ಮನ ಕಗ್ಗ ಯಾವ ಮನಸ್ಸಿನ ಪ್ರಶಸ್ತಿಯನ್ನೂ ಮೀರಿ ನಿಂತ ಕಾವ್ಯ ಪ್ರತಿಮೆ. ಅದನ್ನು ಡಿವಿಜಿಯವರು ಅಪೇಕ್ಷಿಸಲಿಲ್ಲ ಅನ್ನುವಾಗ ಸಾಹಿತ್ಯದ ಯಾವುದೇ ಮುಖಬೆಲೆಗೆ ಮನುಷ್ಯ ಬದುಕುವುದಿಲ್ಲ ಅನ್ನಿಸಿತು. ಅದು ನಿಜವಾದ ಸಾಹಿತ್ಯದ ಸತ್ಯ. ಇಂತಹ ಸಾಹಿತ್ಯಗಳು ಈ ಭೂಮಿಯ ಅಂತ್ಯದವರೆಗೆ ಬದುಕುತ್ತವೆ ಮತ್ತು ಮನಸ್ಸಿದ್ದ ಮನುಷ್ಯರನ್ನು ಬದುಕಿಸುತ್ತವೆ.
         
ಇವತ್ತು ಹೇಳುವ ಸಾಹಿತ್ಯದ ಮಾತಿದು. ಸಾಹಿತ್ಯ ರಾಜಕೀಯಕ್ಕೆ ಒಗ್ಗಿಕೊಂಡಾಗ ಕ್ರಮೇಣ ನಶಿಸುತ್ತದೆ. ಬರಹ-ಸಾಹಿತ್ಯದದ ಆಳಕ್ಕೆ ಇಳಿಯದಿದ್ದರೆ, ಪ್ರಶಸ್ತಿಯ ಮಾನದಂಡಕ್ಕೆ ಗುಮಾನಿಗಳು ಹುಟ್ಟುತ್ತವೆ. ಕನ್ನಡ ಸಾಹಿತ್ಯ ವಿಶ್ವದ ನೊಬೆಲ್ ಪ್ರಶಸ್ತಿಯ ಅಡ್ಡಗೋಡೆಗೆ ಸವಾಲು. ಭಾಷೆಯ ತಳಪಾಯದಲ್ಲಿ ಮುಖ ತಿರುಗಿಸಿಕೊಂಡ ಇಂತಹ ಖ್ಯಾತ ಪ್ರಶಸ್ತಿಗಳು ಮಾನವೀಯ ಮೌಲ್ಯಗಳನ್ನು ಎಷ್ಟು ಎತ್ತಿ ಹಿಡಿಯಬಹುದು? ಸಾಹಿತ್ಯದ ಹೂರಣಕ್ಕೆ ಬಾಧ್ಯಸ್ಥವಾಗದ ಪ್ರಶಸ್ತಿಯ ಮಾನದಂಡ ಯಾವುದನ್ನೂ ಪ್ರತಿನಿಧಿಸುವುದೇ ಇಲ್ಲ. ಅದನ್ನು ಇಂದಿನ ಸಮಾಜ ಮಾಡಿತು. ಅದರಲ್ಲಿ ಕೆಲವು ಆಳದ ಹವಳದ ಸಾಹಿತ್ಯದ ಪ್ರಾಕಾರಗಳು ನಶಿಸಿದವು. ಡಿವಿಜಿಯ ಮಂಕು ತಿಮ್ಮನ ಕಗ್ಗ ,ಬಸವಣ್ಣ- ಅಕ್ಕಮಹಾದೇವಿಯ ವಚನಗಳು, ದಾಸರ ಪದಗಳು, ಸರ್ವಜ್ಞನ ವಾಕ್ಯಗಳು,ಶಿಶುನಾಳ ಷರೀಫರು, ಗುರುನಾನಕರ ವಾಕ್ಯಗಳಲ್ಲದೆ, ಹೆಸರಿನ ಮುಖಬೆಲೆಗೆ ಸಿಗದೆ ಪದ ಹಾಡಿದ ಕನ್ನಡದ ಜಾನಪದಗಳು ಪ್ರಶಸ್ತಿಯನ್ನು ಮೆಟ್ಟಿ ನಿಂತವು. ಕನ್ನಡದ ಜಾನಪದ ವಿಶ್ವವನ್ನು ಆಳುವಂತವು.ಅದನ್ನು ಕನ್ನಡದಲ್ಲಿ ನಾವು ಆಳಿಸಿಕೊಂಡಿದ್ದೇವೆ. ಅವುಗಳಿಗೆ ವಿಶ್ವದ ಯಾವುದೆ ಪ್ರಶಸ್ತಿಗಳು ಸರಿ ಸಾಟಿಯಲ್ಲ ಅನ್ನಿಸಿತು. ಹಾಗಾಗಿ ಯಾವುದೇ ಪ್ರಶಸ್ತಿಗಳು ಇವುಗಳ ಜವಾಬ್ದಾರಿಯನ್ನು ಪ್ರಶ್ನಿಸಲೇ ಇಲ್ಲ.

ಬಹಳಾ ಸಂತೋಷ. ವಿಶ್ವ ಮಾನ್ಯವಾಗಿರುವ ವಚನಗಳು ನೊಬೆಲ್ ಪ್ರಶಸ್ತಿ ಆಯ್ಕೆದಾರರ ಕಣ್ಣಿಗೆ ಕಾಣಲೇ ಇಲ್ಲ. ಡಿವಿಜಿಯ ಮಂಕು ತಿಮ್ಮನ ಕಗ್ಗ ಕಾಣಲೇ ಇಲ್ಲ. ಅದನ್ನು ಭಾರತೀಯರು,ವಿಶ್ವ ಪಂಡಿತರು ಮಾಡಲೇ ಇಲ್ಲ. ಎಂತಹ ಅಭಾಸ..!? ಇವತ್ತು ಅಮೇರಿಕಾದಲ್ಲಿ ಹುಟ್ಟಿದ ಕವಡೆ ಕಾಸಿನ ಬರವಣಿಗೆಗೆ ಸಿಕ್ಕಿದ ನೊಬೆಲ್ ಪ್ರಶಸ್ತಿಗೆ ವಿಶ್ವದ ಜನತೆ ಚಪ್ಪಾಳೆ ತಟ್ಟುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದೇವೆ. ಪ್ರಶಸ್ತಿಗಳು ಕನ್ನಡ ಸಾಹಿತ್ಯವನ್ನು ಬೆಳಸಲೇ ಇಲ್ಲ. ಅದರ ಅಗತ್ಯವೂ ಇಲ್ಲ. ಕನ್ನಡ ಸಾಹಿತ್ಯ ಇಡೀ ಮಾನವ ಜಗತ್ತಿಗೆ ಬದುಕಿನ ಭಾಷ್ಯ ಬರೆದವು.
         
ನಾವು ಅವಸರದ ಈ ತಂತ್ರಜ್ಞಾನದ ಯುಗದಲ್ಲಿ ಕೆಲವಷ್ಟನ್ನು ಮರೆತಿದ್ದೇವೆ. ಉಳಿಸಿಕೊಳ್ಳುವ ಭರದಲ್ಲಿ ಕೆಲವನ್ನು ನಾಶಪಡಿಸಿದ್ದೇವೆ. ಕೆಲವು ಯಾರಿಗೂ ಗೋಚರಿಸದೆ ಕಣ್ಮರೆಯಾಗಿವೆ. ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವ ಕಾಲ ಪರಿಜ್ಞಾನದಲ್ಲಿ ಕೆಲವಷ್ಟನ್ನು ಕಾರ್ಯಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಕರ್ನಾಟಕ ರಾಜ್ಯದಲ್ಲಿ ನಡೆಯುವ ಕನ್ನಡದ ಕಾರ್ಯಕ್ರಮ ನವೆಂಬರ್ ಒಂದು ತಿಂಗಳಲ್ಲಿ ಮರೆತು ಹೋಗುವಂತಹವು. ಕನ್ನಡ ಅನ್ನುತ ಇಂಗ್ಲೀಷ್-ಹಿಂದಿ-ತಮಿಳು ಪದ್ಯದ ಆವೇಶಕ್ಕೆ ಮೈ ಕುಲುಕಿಸುವವರಾಗಿದ್ದೇವೆ. ತಮ್ಮ ನೆಲದ ಜತನದಿಂದ ಬಂದ ಅಮೂಲ್ಯ ಸಂಸ್ಕೃತಿಗಳು ಎಲ್ಲಾ ಎಲ್ಲಗಳನ್ನು ಮೀರಿ ಅಚಲ ವಿಶ್ವಾಸಗಳ ಮೇಲೆ ಇವತ್ತು ವಿದೇಶದಲ್ಲಿ ಕನ್ನಡಿಗರು ಮತ್ತು ಭಾರತ ದೇಶದಲ್ಲಿ ಹೊರರಾಜ್ಯದಲ್ಲಿದ್ದು ಮಾಡುತ್ತಿದ್ದಾರೆ. ಹಾಗೇ ನಡೆಯುತ್ತಿದೆ ಅನ್ನುವಾಗ ಕನ್ನಡದ ನೆಲದಲ್ಲಿ ನಡೆಯುವ ಕನ್ನಡದ ಸಮಾರಂಭಗಳಿಗಿಂತ ಶ್ರೇಷ್ಠವೆನ್ನುತ್ತವೆ. ಕನ್ನಡದ ಅಭಿಮಾನಕ್ಕೆ ಸಲ್ಲಿಕೆಯಾಗುವ ನಿಸ್ವಾರ್ಥ ಸೇವೆ ಇದು. ಆತ್ಮಾವಲೋಕನ ಮಾಡಿಕೊಳ್ಳುವ ಕಾಲದ ಮಾತಿದು.

ಸೋಮವಾರ, ಸೆಪ್ಟೆಂಬರ್ 24, 2012

ಕವಿತೆ ಹೀಗೆ ಇರುವುದು !

ಕವಿತೆ ಹೇಗೆ ಹುಟ್ಟುವುದು
ನವಜಾತ ಶಿಶು ಉತ್ತರವಾಗುವುದು
ಕಣ್ಣಿದ್ದೆಡೆ ಬೆರಗು ತೆರೆದು
ಲೋಕ ಓದುವುದು !

ಕೈಯಿದ್ದೆಡೆ ಕಾಲಿದ್ದರೆ 
ಹೇಗೆ ನಡೆವುದು ?
ಮೂಗಿದ್ದೆಡೆ ಗಾಳಿ ಹೃದಯಕೆ
ಲಯ ಸುರಿವುದು !

ಕವಿತೆ ಹೀಗೇ ಇರುವುದು
ಅರಿವಿಗೆ ಜಾರುವುದು

ಗ೦ಟಲಿದ್ದೆಡೆ ಸ್ವರ ಸಿಡಿದರೆ  
ಅಮ್ಮಾ ಎನುವುದು !
ಉದರವಿದ್ದೆಡೆ ಹಸಿವಿದ್ದರೆ 
ಹಾಲು ಕುಡಿವುದು !

ದ್ವಾರವಿದ್ದೆಡೆ ಕರಗಿ ಕೆಳಮುಖ
ಅಮೇಧ್ಯ ಪಲ್ಲಟವಾಗುವುದು !
ಅರಿವಿಲ್ಲದೆಡೆ ಉಕ್ಕಿ ಮೇಲ್ಮುಖ
ನಾಲಗೆ ನಾರುವುದು !

ಕವಿತೆ ಹೀಗೇ ಇರುವುದು
ಬದುಕಿಗೆ ಓಡುವುದು

ತೆವಳುತ್ತಿದ್ದೆಡೆ ಎಡವಿ ನಡೆದರೆ
ಓಟ ಕಲಿವುದು !
ಕನಸು ಕರೆದೆಡೆ ಓಡುತ್ತಿದ್ದರೆ  
ಗುರಿ ಜಗವಾಗುವುದು !

ಹೃದಯವಿದ್ದೆಡೆ ಮನಸ್ಸಿದ್ದರೆ 
ತುಟಿ ಮಲ್ಲಿಗೆ ನಗುವುದು !
ಅಳುತ್ತಿದ್ದೆಡೆ ಹೃದಯ ಬಿಂದಿಗೆ
ಕಣ್ಣ ಬಾಯಿಗೆ ತುಳುಕುವುದು !

ಕವಿತೆ ಹೀಗೇ ಇರುವುದು...

ಮು೦ಡವಿದ್ದೆಡೆ ರು೦ಡವಿದ್ದರೆ  
ಪ್ರತಿಮೆ ನೇರ ನಿಲುವುದು !
ಓದುತ್ತಿದ್ದೆಡೆ ನಡೆವುದು !
-ರವಿ ಮುರ್ನಾಡು

ಭಾನುವಾರ, ಸೆಪ್ಟೆಂಬರ್ 16, 2012

ನಮ್ಮ ಕವಿತೆ !

ಹಲವು ಜನರ ಮೂಲ ಹುಡುಕಿ
ಅರಿವು ಪಡೆದೆವು!
ನಮ್ಮ ಮೂಲ ಹುಡುಕುವಲ್ಲಿ
ಎಡವಿ ಬಿದ್ದೆವು !

ಹೆತ್ತ ತಾಯಿ ದೇವರೆಂದು
ಮಕ್ಕಳಾದೆವು  !
ಗುಡಿ-ಮಸೀದಿ-ಚರ್ಚು ನುಗ್ಗಿ
ಭಕ್ತರಾದೆವು !

ದೇಹದೊಳಗೆ ಮನವ ಬಿಗಿದು
ಚರ್ಮವಾದೆವು !
ಬೀದಿ ನಡೆಗೆ ಬಣ್ಣ ಬಳಿದು
ಬೆತ್ತಲಾದೆವು !

ಊರು ತಪ್ಪು ನೂರು ಮಾಡಿ
ಜಗಳ ಕಾದೆವು !
ಮನೆಗೆ ಹರಿವ ಕೊಚ್ಚೆ ನೊಣಕೆ
ಎಂಜಲಾದೆವು !

ತಪ್ಪ ಒಪ್ಪಿ ನೆಂಟನೆಂದು
ಮೆಚ್ಚಿಕೊಂಡೆವು !
ನಮ್ಮ ನಮ್ಮ ತಪ್ಪುಗಳನು
ಮುಚ್ಚಿಕೊಂಡೆವು !

ನಮ್ಮವರ ಕತ್ತಲೆಗಳಿಗೆ
ದೀಪವಾದೆವು !
ನಮ್ಮ ಮನದ ಕೋಣೆಯಲ್ಲಿ
ಕತ್ತಲಾದೆವು !

ಹಲವು ಜನರ ಯಾತ್ರೆಯನ್ನು
ನೋಡುತ್ತಿದ್ದೆವು !
ನಮ್ಮ ಯಾತ್ರೆಯನ್ನು ನಾವೇ
ಕಾಣದಾದೆವು !
-ರವಿ ಮುರ್ನಾಡು

ಶುಕ್ರವಾರ, ಸೆಪ್ಟೆಂಬರ್ 14, 2012

ಬೂದಿಯಾಗಲಿ ಕೆಂಡ

ಉರಿ ಬೆಂಕಿ ಉಸಿರ
ಮನದಲ್ಲೇಕೆ ಸಿಲುಕುವಿರೋ
ಸರಿದು ರಕ್ಶಿಸಿಕೊಳ್ಳಿರೋ
ಧಗ ಧಗನೆ ಉರಿದು ಬೆಂಕಿ
ಸುಮ್ಮನಾಗಲಿ !
 
ಉ೦ಡ ಹಿಡಿ ಅನ್ನಕೆ
ಉದರಾಗ್ನಿ ಉಕ್ಕಿ
ಉರಿ ಗಂಟಲ ತಿಕ್ಕಿ
ತುಪ್ಪವಾಗಿ ಎಂಜಲು ನಾಲಗೆಯಲಿ !
ಉಗಿದು ತೃಪ್ತಿಗೆ ಹಿಗ್ಗಿ
ತುಟಿಯೊರೆಸಿ ಮತ್ತೆ ಉಗಿದು ಸುಗ್ಗಿ
ಓಡಿ ತಪ್ಪಿಸಿಕೊಳ್ಳಿರೋ
ಬೂದಿಯೊಳಗಿನ ಕೆಂಡ ಬೂದಿಯಾಗಲಿ !
 
ಹಸಿ ಕೆ೦ಡದ ಹಸಿವು 
ಉಣ್ಣುವ ಕರಗಳ ಮುರುಟಿ
ತಾಳದ ನಡೆ ತಪ್ಪಿ ತರಗುಟ್ಟದಿರಲಿ !
ಚರ್ಮ ಸುಟ್ಟರೆ ಸುಡಲಿ
ಕಸಿ ಮಾಡಿ ಮುಖ ಮುಚ್ಚಿ
ಹೇಗಾದರೂ ತಪ್ಪಿಸಿಕೊಳ್ಳಿರೋ
ಕಣ್ಣೀರು ಬೆಂಕಿಗೆ ನದಿ
ಗಂಗೆ ತಾಯಿ ಭಾರತಿ ಪುತ್ರಿ !
-ರವಿ ಮುರ್ನಾಡು

ಬುಧವಾರ, ಸೆಪ್ಟೆಂಬರ್ 12, 2012

ಹಕ್ಕಿ ಹಾರುತ್ತಲಿದೆ ...!


ಅದೋ ಹಕ್ಕಿ ಹಾರುತ್ತಲೇ ಇದೆ
ರೆಕ್ಕೆ ಸೋತಾಗ ಹಸಿದು
ಹಣ್ಣಿರುವ ಮರದಿ ಕೂರಬಹುದು !
ಬೀದಿ ಕಾಳನು ಹೆಕ್ಕಿ
ಸಂಜೆ ಗೂಡಿಗೆ ಮರಳಬಹುದು  !

ಹದ್ದಾದರೋ.. !?
ವರ್ತಮಾನಗಳ ಸುತ್ತಾ ಹಿಗ್ಗಿ
ಸತ್ತವರ ಹೆಣದ ಹುತ್ತ ಕೆದಕಬಹುದು !
ಹ್ಞೂಂ...ಕರಿಸಬಹುದು
ಭಯ ಉಕ್ಕಿ ಗೂಬೆ
ಶುಭ ಶಕುನದ ಹಕ್ಕಿಗಳು
ಸಂಜೆಗೆ ಮರಳಬಹುದು !
ಕೊಕ್ಕಿಗೆ ಹಲ್ಲಿ ಲೊಚಗುಟ್ಟಬಹುದು !

ಕಾಗೆಯಾದರೋ ...!?
ಕಪ್ಪೆ೦ದು ಬಿಳಿ ಕನಸಿರಬಹುದು
ಅವರಿವರ ಕಣ್ಣೀರ ಕೊಳದಲಿ
ಸ್ನಾನಕ್ಕಿಳಿಯಬಹುದು !
ಓಡುವ ಇಲಿ- ಕತ್ತೆತ್ತುವ ಮರಿ ಕೋಳಿ
ಕಾಲಡಿ ಸರಿವ ಉರಗಗಳ
ಉದರ ತುಂಬಿಸಿ ತೇಗಬಹುದು
ಸಂಜೆಗೆ ಅವುಗಳೂ ಮರಳಬಹುದು !

ನಾನೀಗ ಕೋಗಿಲೆಯಾಗುತ್ತೇನೆ...
ಶ್....ಸುಮ್ಮನಿರಿ
ಮಾಮರದ ಚಿಗುರೆಲೆ ಮೋಹಿಸಿ
ತತ್ತಿಯಿಡುತ್ತೇನೆ...ಗೂಡಿಗೆ
ಕಾಗೆ ಬರುವುದರೊಳಗೆ ಹಾರಿ !

ಇದೋ ಇದೋ ಮಾಮರ
ಅರೆ...! ಮತ್ತೊಂದಿದೆ ಕೋಗಿಲೆ
ಯಾವ ಕಾಗೆ ಗೂಡಿನ ತ್ತತ್ತಿಯೋ ?!
ಜೊತೆ ಸೇರಿ ಕುಹೂ ಸ್ವರ ಸೇರುತ್ತೇನೆ !
-ರವಿ ಮೂರ್ನಾಡು

ಭಾನುವಾರ, ಸೆಪ್ಟೆಂಬರ್ 9, 2012

ಹೀಗೊಂದು ಕನ್ನಡ ರಾಜ್ಯೋತ್ಸವ ನುಡಿ ಪ್ರಶಸ್ತಿ !



ಜಗದಗಲದ ಯಾವುದೋ ಮೂಲೆಯಲ್ಲಿ ಕುಳಿತು ಸದ್ದಿಲ್ಲದೆ ಯಾರೋ ಕವಿತೆ-ಕಥೆ ಬರೆದರು. ತಮ್ಮದೇ ಅನುಭವದ ವಿಶಿಷ್ಟ ಬರಹದ ಸಾಹಿತ್ಯ ಬರೆದು ಪ್ರಕಟಣೆಗೆ ದಿಕ್ಕಿಲ್ಲದೆ ಹತಾಶಾರಾದರು. ಅಂತಹವರ ಸಂಖ್ಯೆ ಸಾವಿರಾರು. ತಾವು ಬರೆದದ್ದು ಸಾಹಿತ್ಯವೇ? ಅಥವ ಪ್ರಕಟಣೆಗೆ ಯೋಗ್ಯವೇ, ಯಾರಾದರೂ ಓದುವರೇ ಅಂತ ಮುಜುಗರ ಪಟ್ಟವರು ಹಲವರು. ಅಂತಹ ಬರಹಗಳನ್ನು ಹುಡುಕಿ ಪ್ರಕಟಿಸಿ "ನಿಮ್ಮ ಬರಹ ಶ್ರೇಷ್ಠವಾದುದು" ಎಂದು ಜಗತ್ತಿನ ಕನ್ನಡಿಗರಿಗೆ ತೋರಿಸಿಕೊಟ್ಟ "ಅವಧಿ ಮಾಗ್", "ಕೆಂಡಸಂಪಿಗೆ" ಅಚ್ಚ ಕನ್ನಡ ಸೃಜನಶೀಲ ಸಾಹಿತ್ಯ ತಾಣಗಳಿಗೆ , ಹೊರನಾಡ ಕನ್ನಡಿಗರ ಅಭಿಮಾನ ’ಗಲ್ಫ್ ಕನ್ನಡಿಗ" ಅಂತರ್ಜಾಲ ಸುದ್ದಿ ಮನೆಗೆ ಕನ್ನಡ ರಾಜ್ಯೋತ್ಸವದ ಸಾವಿರ ಅಭಿನಂದನೆಯ  ಚಪ್ಪಾಳೆಗಳು. ಆ ಮೂಲಕ ಮುಂಬರುವ ರಾಜ್ಯೋತ್ಸವದ ನುಡಿ ಪ್ರಶಸ್ತಿಯನ್ನು ಅಭಿಮಾನ ಪೂರ್ವಕವಾಗಿ ಹೊರನಾಡ ಕನ್ನಡಿಗರು ವಿಶ್ವಕ್ಕೆ ಹಂಚಿಕೊಳ್ಳುತ್ತೇವೆ.

ನವೆಂಬರ್ ಒಂದು ತಿಂಗಳ ಕನ್ನಡದ ಆವೇಶದಲ್ಲಿ ಇಡೀ ಒಂದು ವರ್ಷದ ತಾಕತ್ತು ಪಡೆದುಕೊಳ್ಳುವ ದೌರ್ಬಲ್ಯ ಕನ್ನಡಿಗರದ್ದು. ಅದಕ್ಕಾಗಿ ನಿಜದ ಮುಖವಾಡಗಳನ್ನು ಕಳಚಿ ಛದ್ಮವೇಷದ ಮೇಕಪ್ ಮೆತ್ತಿಕೊಳ್ಳುತ್ತೇವೆ. ಜೀವವಿಲ್ಲದ ಕವೆಡೆ ಕಾಸಿನ ಸಮಾರಂಭಗಳಷ್ಟೋ. ಒಂದೆರಡು ಗಂಟೆಗಳ ನಾಯಕರ ಭಾಷಣದಲ್ಲಿ ಅಭಿಮಾನದ ಪುಣ್ಯ ಕಟ್ಟಿಕೊಂಡವರೆಷ್ಟೋ, ನೆಲದ ಕನ್ನಡಿಗರನ್ನೇ ಬಡವರನ್ನಾಗಿಸಿ, ಕನ್ನಡವನ್ನೇ ಬಂಡವಾಳವಾಗಿಸಿ ಜೀವನ ವ್ಯಾಪಾರ-ವರ್ಚಸ್ಸು ಕುದುರಿಸಿದವರೆಷ್ಟೋ. ಕನ್ನಡ ಕುಸಿಯುತ್ತಿದೆ ಅನ್ನುವ ಅನುಮಾನ ಕಾಡುವಾಗ ಹೋರಾಟ ನಡೆಸಿದ್ದೇವೆ. ಅಲ್ಲಲ್ಲಿ ಭುಗಿಲೆದ್ದ ಕಾರಣಗಳ ವಿರುದ್ದ ದ್ವನಿಯೆತ್ತಿ ಅಸ್ತಿತ್ವಕ್ಕಾಗಿ ಜಗಳಕ್ಕೆ ನಿಂತಿದ್ದೇವೆ. ಇಂತಹ ವ್ಯವಸ್ಥೆಯಲ್ಲಿ ಸಾಹಿತ್ಯವನ್ನು ನೆಲದ ತಾಯಿ ಭಾಷೆಯಲ್ಲಿ ಓದಿ ಆನಂದಪಟ್ಟಿದ್ದೇವೆ. ನೆಲ ಬಿಟ್ಟು ನೆಲದಲ್ಲಿ ಕನ್ನಡವನ್ನು ಆಸ್ವಾಧಿಸಿದ್ದೇವೆ. ಇದು ಲಕ್ಷಾಂತರ ಹೊರನಾಡ ಕನ್ನಡಿಗರ ಎದೆಯಾಳದ ಮಾತು. ಕನ್ನಡದ ಚಿನ್ನದ ಅಕ್ಷರಗಳ ಮಮತೆಯನ್ನು ದುಬೈಯ ಅಪ್ಪಟ ಕನ್ನಡ ಪ್ರೇಮಿ ಬಿ.ಜಿ. ಮೋಹನ್ ದಾಸ್ ಬೀಜೂರು ಕಟ್ಟಿದ "ಗಲ್ಪ್ ಕನ್ನಡಿಗ", ಕಥೆಗಾರ-ಕವಿ ಜಿ.ಎನ್. ಮೋಹನ್ ಸಾರಥ್ಯದ "ಅವಧಿ ಮಾಗ್", ಸೃಜನಶೀಲ ಕಥೆಗಾರ ಅಬ್ದುಲ್ ರಶೀದ್ ಧಾರೆಯೆರೆಯುತ್ತಿರುವ "ಕೆಂಡ ಸಂಪಿಗೆ’ಯ ಅಂತರ್ಜಾಲಗಳನ್ನು ಮತ್ತೆ ಮತ್ತೆ ತೆರೆದು ನಾಡಿನ ಬರಹಗಾರರ ಸಾಹಿತ್ಯ ಮತ್ತು ಸುದ್ಧಿ ಆಸ್ವಾಧನೆಯ ಹಸಿವನ್ನು ಇಂಗಿಸಿಕೊಂಡಿದ್ದು ಸತ್ಯ.

ಬಹುಷಃ ಕನ್ನಡ ನಾಡಿನ ನೆಲ ರಾಜ್ಯೋತ್ಸವದ ಸಂಭ್ರಮದ ಖುಷಿಯಲ್ಲಿ ಕೆಲವಷ್ಟನ್ನು ಮರೆಯಬಹುದು. ಈ ಒಂದು ವಿಶ್ವಮಾನ್ಯ ಕನ್ನಡ ಹಬ್ಬವನ್ನು ಆಚರಿಸಿ ಮನೆ-ಮನದಲ್ಲಿ ಅಭಿಮಾನದ ಹಣತೆ ಹಚ್ಚಿ ಸಂಭ್ರಮಿಸುತ್ತೇವೆ. ಹಾಗಂತ, ಪಟಾಕಿ ಸಿಡಿಸಿ, ಭಾವುಟ ಹಾರಿಸಿ, ಕೆಲವಷ್ಟನ್ನು ಒಂದೆರಡು ದಿನದ ಸಮಾರಂಭಗಳಲ್ಲಿ ಕಳೆದುಕೊಳ್ಳುತ್ತಿದ್ದೇವೆ. ನಿರಂತರ ಕನ್ನಡ ಸೇವೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗಳ ಮುಖಾಮುಖಿಯಲ್ಲಿ ಉತ್ತರಕ್ಕಾಗಿ ಹುಡುಕಾಡುವ ಕಾಲ ಇನ್ನೂ ಬಂದಿಲ್ಲ. ಅದರ ಕಾರ್ಯ ಯಾವುದೇ ಚಿಂತೆಯಿಲ್ಲದೆ ನಡೆಯುತ್ತಿದೆ. ಸಂಪೂರ್ಣ ರಾಜಕೀಯಕ್ಕೆ,ಜಾತಿ-ಪಂಥಗಳಿಗೆ, ಎಡಪಂಥೀಯ ನಕರಾತ್ಮಕ ಚಿಂತನೆಗೆ ಬಲಿಯಾಗಿರುವ ಇಂದಿನ ಅವ್ಯವಸ್ಥೆಯಲ್ಲಿ ಕೆಲವಷ್ಟನ್ನು ಅನುಭವದ ಆಳಕ್ಕೆ ಕನ್ನಡದ ನೆಲ ತೆಗೆದುಕೊಳ್ಳಲಿಲ್ಲ. ಅದಕ್ಕಾಗಿ ಜಗದಗಲದ ಕನ್ನಡ ಓದುಗರ ಪರವಾಗಿ ಈ ನುಡಿ ಪ್ರಶಸ್ತಿ. ಕನ್ನಡ ಜನ ಮಾನಸದಲ್ಲಿ "ಗಲ್ಫ್ ಕನ್ನಡಿಗ", "ಅವಧಿ ಮಾಗ್ " ಮತ್ತು "ಕೆಂಡ ಸಂಪಿಗೆ" ತಾಣಗಳ ಅಭಿಮಾನ ಸದಾ ಆಶಾಭಾವನೆ ಚಿಮ್ಮಿಸುವ ಫಲಕವಾಗಿ ನಿಲ್ಲಲಿ.

ಈ ಹಿಂದಿನ ಕನ್ನಡದ ಸ್ಥಿತಿಗಿಂತ ಪ್ರಸಕ್ತ ಸ್ಥಿತಿಯನ್ನು ಈ ಮೂರು ಅಂತರ್ಜಾಲ ತಾಣಗಳು ಸಾಹಿತ್ಯಕ ಅಭಿಮಾನದಲ್ಲಿ ಜಗತ್ತಿನಾದ್ಯಂತ ಬಲಿಷ್ಠಗೊಳಿಸಿರಬಹುದು. ಅದನ್ನು ವಿಶ್ವದ ಕನ್ನಡಿಗರು ಅಂದಾಜಿಗೆ ತೆಗೆದುಕೊಂಡಿದ್ದಾರೆ. ಕನ್ನಡ ನಾಡಿನ ಪತ್ರಿಕಾ ಸಮೂದಾಯಗಳು ಅದಕ್ಕೆ ಬೆಂಬಲ ನೀಡಿದವು. ಸೃಜನಶೀಲ ಸಾಹಿತ್ಯದ ಕನ್ನಡದ ಸವಿ ಯೆತೇಚ್ಚವಾಗಿ ಬೆಳೆದಿರುವುದು ದಿಟವಾಗಿದೆ. ಫೇಸ್ಬುಕ್ಕು ಕನ್ನಡವನ್ನು ಬಲಿಷ್ಠಗೊಳಿಸಿದ್ದು ಇನ್ನೊಂದು ಸಂತಸದ ಸುದ್ಧಿ. ಸಾಹಿತ್ಯವನ್ನು ಹುಡುಕಿ ಗುರುತಿಸಿ ಸದ್ದಿಲ್ಲದೆ ಬೆಳೆಸುವ ಈ ಅಂತರ್ಜಾಲ ತಾಣಗಳ ಕನ್ನಡ ಸೇವೆಗೆ ಹೊರನಾಡ ಕನ್ನಡಿಗರು ಸದಾ ಅಭಾರಿಯಾಗಿದ್ದೇವೆ. ಕಳುಹಿಸಿದ ಬರಹ ಪ್ರಕಟವಾದ ನಂತರ ಅಲ್ಲಿ ಬರಹಗಾರ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾನೆ. ಅದರ ಅಡಿಪಾಯ ಕಾಣುವುದೇ ಇಲ್ಲ. ಆ ಸ್ಥಿತಿ ಈ ಮೂರು ಅಂತರ್ಜಾಲ ಸಾಹಿತ್ಯದ ಚಿನ್ನದ ತಟ್ಟೆಗಳದ್ದು. ಅಂತರ್ಜಾಲ ವ್ಯವಸ್ಥೆಗಳಲ್ಲಿ ಕನ್ನಡ ಸಾಹಿತ್ಯದ ರಸದೌತಣವನ್ನು ನೆಲದವರಿಗೆ ಮತ್ತು ಹೊರನಾಡ ಕನ್ನಡಿಗರಿಗೆ ಹೊಟ್ಟೆ ತುಂಬುವಷ್ಟು ಬಡಿಸಿಕೊಟ್ಟಿತು.

ಅಧುನಿಕ ವ್ಯವಹಾರಿಕ ಬದುಕಿನಲ್ಲಿ ಜಾಹೀರಾತುಗಳೇ ಪತ್ರಿಕೆಗಳ ಜೀವನಾಧಾರ. ದಿನ ಬೆಳಗಾದಲ್ಲಿ ಪತ್ರಿಕೆಗಳು ರವಾನಿಸುವ ಸುದ್ದಿಗಳಿಗಿಂತ ಅಂತರ್ಜಾಲಗಳು ಭಿತ್ತರಿಸಿ ಓದುಗರಿಗೆ ತಲಪಿಸುತ್ತವೆ. ಅದರಲ್ಲಿ ಫೇಸ್ಬುಕ್ಕು-ಟ್ವಿಟ್ಟರ‍್ ಜಾಲಗಳಿಗೆ ಮೊದಲ ಸ್ಥಾನ. ಆದಾಗ್ಯೂ ಅಂತರ್ಜಾಲದ ಪ್ರಭಲ ಸ್ಪರ್ಧೆಯ ನಡುವೆ ಪತ್ರಿಕೆಗಳ ಅಭಿಮಾನ ಕಡಿಮೆಯಾಗಿಲ್ಲ. ಸಾಹಿತ್ಯ ಅಭಿವೃದ್ಧಿಯಲ್ಲಿ ಹಲವು ಕನ್ನಡ ಪತ್ರಿಕೆಗಳ ಹಲವು ಸಾಹಿತ್ಯ ಪುಟಗಳು ಎದೆಯೊಳಗೆ ಪಿಸುಮಾತಿಗಿಳಿದಿವೆ. ಇದರ ಇನ್ನೊಂದು ಮಗ್ಗುಲಿನಲ್ಲಿ ಹೊಸ ಅಂದಾಜಿನ ಸಾಹಿತ್ಯ ಅಭಿರುಚಿಯ ಅಂತರ್ಜಾಲ ತಾಣಗಳನ್ನು ಕಾಣುತ್ತಿದ್ದೇವೆ. ಯಾವುದೇ ವಾಣಿಜ್ಯಕರಣಕ್ಕೆ ಸೊಪ್ಪು ಹಾಕದೆ ಕನ್ನಡವನ್ನು ಬೆಳೆಸುವ ಪರಿ ಹುಬ್ಬೇರಿಸುವಂತಹದ್ದು. ಅದನ್ನು "ಅವಧಿ ಮಾಗ್", "ಗಲ್ಫ್ ಕನ್ನಡಿಗ" ಮತ್ತು " ಕೆಂಡ ಸಂಪಿಗೆ" ಮುಂತಾದ ಮಾಹಿತಿಗೆ ಸಿಗದ ಸಾಹಿತ್ಯ ತಾಣಗಳು ಮಾಡುತ್ತಿವೆ. ಅವರ ಕನ್ನಡ ಸೇವೆಗೆ ಸಾಹಿತ್ಯ ಅಭಿಮಾನಿಗಳ ಅಸಂಖ್ಯ ಸಲಾಮು...! ಅರ್ಥಗರ್ಭೀತ ವಿಶ್ವಮಾನ್ಯ ಕನ್ನಡ ರಾಜ್ಯೋತ್ಸವದ ಸಂಭ್ರಮಕೆ ಈ ಮೂಲಕ ಸಾಹಿತ್ಯದ ಮಾನ್ಯತೆ ಓದುಗರ ಮನದಲ್ಲಿ ಶಾಶ್ವತವಾಗಲಿ.
-ರವಿ ಮೂರ್ನಾಡು, ಕ್ಯಾಮರೂನ್, ಮಧ್ಯ ಆಫ್ರೀಕಾ.

ಅಂತರ್ಜಾಲ ಸಾಹಿತ್ಯ ಪುಟಗಳ ಕೊಂಡಿಗಳು:
ಅವಧಿ ಮಾಗ್ : http://avadhimag.com/
ಗಲ್ಫ್ ಕನ್ನಡಿಗ : http://gulfkannadiga.com/  
ಕೆಂಡ ಸಂಪಿಗೆ : http://www.kendasampige.com/

ಶುಕ್ರವಾರ, ಸೆಪ್ಟೆಂಬರ್ 7, 2012

ಸಾಹಿತ್ಯ ಬರವಣಿಗೆಗೆ ಯಾವುದೇ ಶಾಲೆ-ಕಾಲೇಜು ಡಿಗ್ರಿ ಕೋರ್ಸುಗಳಿಲ್ಲ


ಸಾಹಿತ್ಯದಲ್ಲಿ ಯಾವುದೇ ಬಡ್ತಿ, ಮಾನ್ಯತೆ ಇಲ್ಲ. ಒಂದು ಕವಿತೆ-ಕಥೆ- ಕಾದಂಬರಿ- ಸೃಜನಶೀಲ ಬರಹ ಬರೆದು ಉದ್ಯೋಗ ಗಿಟ್ಟಿಸುವ ಯಾವುದೇ ಸರ್ಟಿಫಿಕೇಟಿನ ಭರವಸೆಯೂ ಇಲ್ಲ. ಕುಂಚ ಹಿಡಿದು ಚಿತ್ರ ಬರೆಯುವುದಕ್ಕೆ , ತಾಳಕ್ಕೆ ಹೆಜ್ಜೆ ಹಾಕಿ ನೃತ್ಯ ಮಾಡುವ ತರಗತಿಗಳಿವೆ, ರಾಗಕ್ಕೆ ಲಯ ಸೇರಿಸುವ ಸಂಗೀತ ಪಾಠ ಶಾಲೆಗಳಿವೆ. ನಟ-ನಟಿಯರಾಗಲು ಡಿಪ್ಲೋಮಾ ಕೋರ್ಸುಗಳಿವೆ. ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ತಿನ್ನುವ ಅನ್ನದ ಕೃಷಿ ಕ್ಷೇತ್ರಕ್ಕೆ,ಆರೋಗ್ಯ ಕ್ಷೇತ್ರಕ್ಕೆ, ಕ್ರೀಡೆಗಳಿಗೆ, ಸುದ್ದಿ ಮುಟ್ಟಿಸುವ  ಸುದ್ದಿ ಮಾಧ್ಯಮದ ವಿವಿಧ ಮುಖಗಳಿಗೆ, ಮನುಷ್ಯ ದೌರ್ಬಲ್ಯಗಳನ್ನು ಬಂಡವಾಳವಾಗಿಸಿ ಕೊಂಡ ವಾಣಿಜ್ಯಕರಣದ ಹಲವು ಮನೋ ವಿಕಲ್ಪಗಳಿಗೆ ಇವತ್ತು ಒಂದು ತಿಂಗಳಿನಿಂದ ಹಿಡಿದು ಹಲವು ವರ್ಷಗಳವರೆಗಿನ ಪ್ರವಚನ ನೀಡಿ ಕೈಗೊಂದು ಸರ್ಟಿಫಿಕೇಟು ಕೊಡುವ ಸಂಸ್ಥೆಗಳಿವೆ.
ಹಾಗೇ ಎಲ್ಲೆಂದರಲ್ಲಿ ಕಣ್ಣು ಹಾಯಿಸಿದಾಗ ಈ ವ್ಯವಹಾರಿಕ ಪ್ರಪಂಚದಲ್ಲಿ ಎಲ್ಲಾ ಕಲೆಗಳಿಗೂ, ನೈಪುಣ್ಯತೆಗಳಿಗೆ ಒಂದೊಂದು ತರಗತಿ ಪಾಠಶಾಲೆ, ಕಾಲೇಜುಗಳ ಡಿಗ್ರಿ ಸರ್ಟಿಪಿಕೇಟುಗಳು ಸಿಗುತ್ತವೆ. ಆದರೆ, ಸಾಹಿತ್ಯಕ್ಕೆ ಇಲ್ಲ. ಹಾಗಾದರೆ, ಓರ್ವ ಬರಹಗಾರ ಸಾಹಿತ್ಯ ಪ್ರಪಂಚಕ್ಕೆ ಹೇಗೆ ಮತ್ತು ಏಕೆ ಪ್ರವೇಶಿಸುತ್ತಾನೆ ಅನ್ನೋದು ಪ್ರಶ್ನೆ.

ಜನಮಾನಸವನ್ನು ಅತ್ಯಂತ ವೇಗವಾಗಿ ಸೆಳೆಯುವ ಸ್ಪರ್ಧೆಯೆಂದರೆ ಒಂದು ನೃತ್ಯ, ಇನ್ನೊಂದು ಸಂಗೀತ-ಸಿನೇಮಾ. ಇಂದಿನ ಮಾಧ್ಯಮ ವ್ಯವಸ್ಥೆಯಲ್ಲಿ ಇದರ ಅನುಭವವನ್ನು ಕಂಡುಕೊಂಡಿದ್ದೇವೆ. ನಿರಂತರ ಅಭ್ಯಾಸದ ತಾಲೀಮಿನಿಂದ, ದೃಢ ಮನಸ್ಸಿನಿಂದ ಇಂತಹ ಕಲೆಗಳನ್ನು ಸಾಧಿಸಬಹುದು. ಹಾಗಾದರೆ, ಸಾಹಿತ್ಯದ ಗುರಿ ಹೇಗೆ ಮತ್ತು ಎಲ್ಲಿಗೆ? ಇದಕ್ಕೊಂದು ಅಭ್ಯಾಸ ಮತ್ತು ತಾಲೀಮು ಒದಗಿಸಿ ಭರ್ಜರಿ ಪ್ರಚಾರ ಕೊಡುವ ಟೀವಿ ಮಾಧ್ಯಮಗಳ ಕೊಡುಗೆ ಇದೆಯೇ?

"ನಿಮಗೆ ಸಾಹಿತ್ಯದ ರಚನೆಗೆ ಆಸಕ್ತಿ ಇದೆಯೇ.. ಹಾಗಾದರೆ ಬನ್ನಿ ಒಂದು ತಿಂಗಳ ಕೋರ್ಸಿನಲ್ಲಿ ನೀವೊಂದು ಕವಿತೆ-ಕಥೆ ಬರೆಯಬಹುದು" ಎನ್ನುವ ಜಾಹೀರಾತನ್ನು ಎಲ್ಲಾದರೂ ಗಮನಿಸಿದ್ದೀರಾ?, ಇಂತಿಷ್ಟು ತಿಂಗಳ ಹಣ ಸಂಗ್ರಹಿಸಿ ತರಬೇತಿ ಕೊಡುವ ಸಂಸ್ಥೆಗಳನ್ನು ನೋಡಿದ್ದೀರಾ? ಸಿನೇಮಾಗಳಿಗೆ ಸಾಹಿತ್ಯ ಬೇಕು, ಕತೆ ಬೇಕು. ನಟ-ನಟಿಗೆ ಸಿಗುವ ಸಂಭಾವನೆಯಲ್ಲಿ ಸಿನೇಮಾ ಸಾಹಿತ್ಯದ ಕತೆಗಾರ, ಕವಿಗೆ ಕವಡೆ ಕಾಸಿನ ಸಂಭಾವನೆಯೂ ಸಿಗುವುದಿಲ್ಲ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಇಂಡಿಯನ್ ಐಡಿಯಾಲ್ ಅನ್ನುವ ಸ್ಪರ್ಧಾ ಕಣದಂತಹ ವೇದಿಕೆಯನ್ನು ಸಾಹಿತ್ಯಕ್ಕಾಗಿ ಯಾರಾದರೂ ಮಾಡಿದ್ದಾರೆಯೇ? ಏಕಿಲ್ಲ ಅನ್ನೋದು ಸಾವಿರ ಪ್ರಶ್ನೆ. ! . ಸಾಹಿತ್ಯವೂ ಒಂದು ಕಲೆ....ನೃತ್ಯ, ಸಂಗೀತ,ಬದುಕಿನ ನಾಟಕದ ನಟನೆ ಇದರಲ್ಲಿ ಮಿಳಿತವಾಗಿದೆ. ಹಾಗಾದರೆ ಸಾಹಿತ್ಯ ಏಕೆ ಓರ್ವ ಮನುಷ್ಯನನ್ನು ಆರ್ಥಿಕವಾಗಿ ಮೇಲೆತ್ತುವುದಿಲ್ಲ ಅನ್ನೋದು ಅನುಮಾನವನ್ನು ಕಾಡಿದೆ.

ಯಾವುದೋ ಮೂಲೆಯಲ್ಲಿ ಸಾಹಿತ್ಯ ಸ್ಪರ್ಧೆ ನಡೆಯುತ್ತಿದೆ. ಎಲ್ಲೋ ಮೂಲೆಯಲ್ಲಿ ಅತ್ಯಲ್ಪ ಪ್ರೇಕ್ಷಕರನ್ನು ಸೆಳೆದು ಕವಿಗೋಷ್ಟಿ, ಕಾವ್ಯಕಮ್ಮಟ, ಸಾಹಿತ್ಯ ಸಮಾರಂಭ ನಡೆಯುತ್ತಿದೆ. ಏಕಾಗಿ ನಡೆಯುತ್ತಿದೆ ಅಂದರೆ  ಉತ್ತರ ಶೂನ್ಯ.! ಓರ್ವ ಬರಹಗಾರ, ಸಾಹಿತಿ ತನ್ನ ಜೀವಮಾನ ಪೂರ್ತಿ ಬರೆದ ಸಾಹಿತ್ಯಕ್ಕೆ  ಇವತ್ತು ಭಾರತ ಸರಕಾರ ಕೊಡುವ ಜ್ಞಾನಪೀಠವೆಂಬ ಪ್ರಶಸ್ತಿಯ ಮೌಲ್ಯ  ಐದು ಲಕ್ಷ ರೂಪಾಯಿಯನ್ನು ದಾಟುವುದಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಒಂದು ಕವನ ಸಂಕಲನಕ್ಕೆ, ಕಥಾಸಂಕಲನಕ್ಕೆ, ಇನ್ನಿತರ ಸೃಜನಶೀಲ ಸಾಹಿತ್ಯ ಪ್ರಾಕಾರದ ಪುಸ್ತಕಗಳಿಗೆ ಕೆಲ ದಿನಗಳ ನಂತರ ತುಕ್ಕು ಹಿಡಿಯವ ಸ್ಮರಣಿಕೆ, ಹತ್ತು ಸಾವಿರ ದಾಟದ ಪ್ರಶಸ್ತಿ ಮೊತ್ತವನ್ನು ಕೊಟ್ಟು ಕೈತೊಳೆದುಕೊಳ್ಳುತ್ತವೆ. ಇದು ಸಾಹಿತಿಯ ಜೀವಮಾನದ ಸಾಧನೆಗೆ ಕಟ್ಟಿದ ಬೆಲೆ. ಅದೇ ಇಂಡಿಯನ್ ಐಡಿಯಲ್, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲಿ ವಿಜೇತರಾದರೆ ಪ್ರಶಸ್ತಿಯ ಮೊತ್ತ ಕೇವಲ ಒಂದು ವರ್ಷದ ಪ್ರದರ್ಶನದಲ್ಲಿ ಒಂದು ಕೋಟಿ ರೂಪಾಯಿಯನ್ನು ದಾಟುತ್ತದೆ. ಭೌತಿಕವಾಗಿ, ತಾಂತ್ರಿಕವಾಗಿ,ವೈಜ್ಞಾನಿಕವಾಗಿ ಮುಂದುವರೆದ ಸಮಾಜದಲ್ಲಿ ಇಂತಹ ಬೇಧವೇಕೆ ಬಂತು? ಹಾಗಾದರೆ ವಾಣಿಜ್ಯಕರಣದ ಪ್ರಭಲ ಪ್ರಲೋಭನೆಯ ಈ ಜಗತ್ತಿನಲ್ಲಿ ಸಾಹಿತ್ಯಕ್ಕೆ ಏಕೆ ಓರ್ವ ಮನುಷ್ಯ ಜೀವನವನ್ನು ಕೊಡುತ್ತಾನೆ ಮತ್ತು ಏಕೆ ಮುಡಿಪಾಗಿ ಇಡುತ್ತಾನೆ ಅನ್ನೋದು ಪ್ರಶ್ನೆ.

ಸಾಹಿತ್ಯ ಮನಸ್ಸಿನ ಕಲೆ, ಹಾಗಾಗಿ ಅದಕ್ಕೆ ತಯಾರಾಗಲು ತನಗೆ ತಾನೇ ಓರ್ವ ಮನುಷ್ಯ ಸಿದ್ದವಾಗಬೇಕಾಗುತ್ತದೆ. ಈ ಸಮಾಜದ ದೌರ್ಬಲ್ಯಗಳ ಸಂತೆಯಲ್ಲಿ ಅವನೇ ವ್ಯಾಪಾರಿ, ದಲ್ಲಾಳಿ ಮತ್ತು ಗ್ರಾಹಕ. ತನಗೇ ತಾನೇ ಓರ್ವ ಬರಹಗಾರ ಸರ್ಟಿಫಿಕೇಟು ಗಿಟ್ಟಿಸುವ ಏಕೈಕ ಕಲೆ ಎಂದರೆ ಮನಸ್ಸಿನ ಸ್ವಯಂ ನಿರ್ದೇಶಿತ ಸಾಹಿತ್ಯ ಬರಹದ ಭಾಷೆ. ಇವತ್ತು ಈ ಸಾಹಿತ್ಯ ಎಲ್ಲೆಂದರಲ್ಲಿ ಅನಾದಿ ಕಾಲದಿಂದ ತನ್ನ ಛಾಪನ್ನು ಮೂಡಿಸಿರಬಹುದು. ಈ ರೋಗಗ್ರಸ್ತ ಸಮಾಜವನ್ನು ತನ್ನ ಒಂದು ಬರಹದಿಂದ ತಿದ್ದಲು ಸಾಧ್ಯವಿಲ್ಲವೆಂದು ಬರಹಗಾರನಿಗೆ ಗೊತ್ತಿದೆ. ಅಡ್ಡಾದಿಡ್ಡಿಯಾಗಿ ಚಲಿಸುವ ಎಲ್ಲೋ ಯಾವುದೋ ಒಂದು ಮನಸ್ಸಿಗೆ ತನ್ನ ಮಾತು ಕೇಳಬಹುದು ಎಂದು ಅರಿತುಕೊಳ್ಳುತ್ತಾನೆ. ಅದರಂತೆ ಬರೆದು ತಲುಪಿಸುತ್ತಾನೆ. ತನ್ನ ಬರಹ ಅಂತಹ ಎದೆಗೆ ನಾಟುತ್ತದೆ ಎಂಬ ಒಂದೇ ಒಂದು ಆಶಾಭಾವನೆ ಓರ್ವ ಮನುಷ್ಯನನ್ನು ಸಾಹಿತ್ಯ ಪ್ರಪಂಚಕ್ಕೆ ಎಳೆದು ತರುತ್ತದೆ. ಆಗ ಸಮಾಜದ ಮನಸ್ಸುಗಳು ಮತ್ತು ಸಾಹಿತ್ಯ ಬರಹಗಾರ ಮಾತಾಡುತ್ತಾರೆ. ಇದು ಸಾಹಿತ್ಯ. ಇದನ್ನು ಸೂಕ್ತ ರೀತಿಯಲ್ಲಿ ತಲಪಿಸುವ ಕಾರ್ಯವನ್ನು ಸಾಹಿತ್ಯ ವೇದಿಕೆಗಳು ಮಾಡಿದವು. ಇಲ್ಲಿ ಸಾಹಿತಿ ಮತ್ತು ಸಾಹಿತ್ಯ ಪ್ರೇಮಿಗಳು ಭಾಷೆಯ ಕಾರ್ಯದಲ್ಲಿ ಮೇಲ್ಪಂಕ್ತಿಯಲ್ಲಿ ನಿಂತರು. ಹಾಗಾಗಿ, ಓರ್ವ ಮನುಷ್ಯ ತನಗೇ ತಾನೇ ಕಲಿತು,ವಿಶಿಷ್ಟ ರೀತಿಯಲ್ಲಿ ಪದಗಳ ನಿರೂಪಣೆಯನ್ನು ರೂಢಿಸಿಕೊಂಡ ಫಲವಾಗಿ ತನಗೇ ತಾನೇ ಸಾಹಿತ್ಯದ ಒಂದು ಸರ್ಟಿಫಿಕೇಟು ಗಿಟ್ಟಿಸಿಕೊಳ್ಳುತ್ತಾನೆ.ಆಗ ಓರ್ವ ಬರಹಗಾರ ಹುಟ್ಟಿಕೊಳ್ಳುತ್ತಾನೆ ಮತ್ತು ಹುಟ್ಟಿಸಿಕೊಳ್ಳುತ್ತಾನೆ.

ಮನುಷ್ಯನನ್ನು ಅವನ ಕನಸುಗಳು, ಆಸೆಗಳು ಗುರಿಯೆಡೆಗೆ ತಲಪಿಸುತ್ತವೆ. ಆದಿಲ್ಲದೆ ಮನಸ್ಸಿಗೊಂದು ಅರ್ಥವಿಲ್ಲ. ತನ್ನ ಈ ಜೀವಮಾನದಲ್ಲಿ ತನ್ನ ಕಾಲದ ನಂತರ ಇನ್ನೊಂದು ಜೀವನ ಇದೇ ಎನ್ನುವ ಕಲ್ಪನೆಯನ್ನು ಅಳವಡಿಸಿಕೊಂಡವನು ಮತ್ತೊಂದು ಜೀವ ಜೀವನ ಮೌಲ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳಬಹುದು. ಹಾಗಂತ, ಎಲ್ಲರಿಗೂ ಒಂದೇ ಜೀವನ, ಇದೇ ಒಂದು ಜೀವನದ ವರ್ತುಲದಲ್ಲಿ ಸಂತಸವನ್ನು ಕಂಡುಕೊಳ್ಳುವುದು ಅವನ ಮೂಲಧ್ಯೇಯವಾಗಿದೆ ಎಂದು ಸಾಹಿತ್ಯದಲ್ಲಿ ಅವನು ಪ್ರತಿಪಾದಿಸುತ್ತಾನೆ. ಅಲ್ಲಿ ಕನಸುಗಳು ಮಾತಾಡುತ್ತವೆ, ಆಸೆಗಳು ಏನನ್ನೋ ಹೇಳಲು ಉದ್ಯುಕ್ತವಾಗುತ್ತವೆ. ಮನಸ್ಸಿನ ನ್ಯಾಯ ಕಮ್ಮಟದಲ್ಲಿ  ಪ್ರತಿಪಾದಿಸುವ ಪ್ರತಿಯೊಂದು ಮಾತನ್ನು ನವೀನ ಭಾಷಾ ವೈಖರಿಯಲ್ಲಿ ಸಾಹಿತಿ ವಿವರಿಸುತ್ತಾನೆ. ಅದನ್ನು ಜಗತ್ತಿನ ನಾವು ಓದಿದ ಎಲ್ಲಾ ಸಾಹಿತ್ಯ ಪ್ರಾಕಾರಗಳಲ್ಲಿ ಕಾಣಬಹುದು. ಕನ್ನಡದಲ್ಲಿ ನಮಗೆ ಪರಿಚಯವಿರುವ ಪಂಪನಿಂದ ಹಿಡಿದು ನಮ್ಮ ನೆನಪಿನಲ್ಲಿರುವ ಈಗಿನ ತಲೆಮಾರಿನ ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ,ಬಸವಣ್ಣ, ಅಕ್ಕ, ಸರ್ವಜ್ಞ, ದಾಸ ಸಾಹಿತ್ಯ, ಜಾನಪದಗಳು ಅಜರಾಮರವಾಗಿವೆ. ಇಂತಹ ಸಾಹಿತ್ಯ ಹುಟ್ಟಿಕೊಂಡಿದ್ದೆ  ಅವರ ಕಾಲಕ್ಕೆ ಮತ್ತು ನಂತರದ ಬದುಕಿಗೆ. ಇಲ್ಲವಾದ ಪರಿಕಲ್ಪನೆಯಲ್ಲಿ  ಮತ್ತೊಮ್ಮೆ ಇರುವಂತೆಯೇ. ಅವರು ಕಟ್ಟಿದ ಕಟ್ಟು ಕಥೆಯೇ ಇರಬಹುದು. ಅದು ವಾಸ್ತವ ಪ್ರಪಂಚಕ್ಕೆ ಮತ್ತೆ ಮತ್ತೆ ಎಡತಾಕುತ್ತವೆ. ಇಲ್ಲಿ ಎಲ್ಲವೂ ಸತ್ಯವಾಗಿದೆ. ಕವಿ ಕಲ್ಪನೆ ನಿಜ ಬದುಕಿನಲ್ಲಿ ಹೊಸ ಅಂದಾಜನ್ನು ಹೊರ ಹಾಕಿವೆ. ಹಾಗಾಗಿ, ಸಾಹಿತ್ಯಕ್ಕೆಂದೇ ಬರೆದುಕೊಂಡ ಸತ್ಯಗಳು ಇತಿಹಾಸದ ಮಜಲನ್ನು ದಾಟಿ ನಮ್ಮ ಈಗಿನ ಸಮಾಜದ ಮನುಷ್ಯರೊಂದಿಗೆ ಮಾತಾಡುತ್ತಿವೆ.ಅದು ಈಗಿನ ಸಾಹಿತಿಗಳ ಬರಹಗಳು ಮುಂದಿನ ಪೀಳಿಗೆಯಲ್ಲಿ ಸಂಭವಿಸುತ್ತವೆ.

ಉತ್ಕೃಷ್ಟ ಸಾಹಿತ್ಯ  ಹುಟ್ಟುವುದೇ ಹುಲ್ಲು ಗುಡಿಸಲ ಜೋಪಡಿಯಲ್ಲಿ, ನೋವು-ನಲಿವಿನ ಅನುಭವದಲ್ಲಿ, ಮಾನವೀಯತೆ ಅಂತಃಕರಣದಲ್ಲಿ, ಮನುಷ್ಯ ಜೀವನದ ಸಕಲ ದಿಕ್ಕುಗಳ ಅನುಭವವಿಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ. ಪ್ರೀತಿಯ ನೋವು ಮತ್ತು ನಲಿವು ಅರಿಯದ ಮನಸ್ಸು ಯಾರೊಂದಿಗೂ ಪ್ರೀತಿಯನ್ನು ವಿವರಿಸಲು ಸಾಧ್ಯವಿಲ್ಲ, ಮಾನವೀಯತೆಯೇ  ಇಲ್ಲದ ಮನಸ್ಸಿನಿಂದ ಹುಟ್ಟಿದ ನಾಟಕೀಯ  ಪದಗಳು ಬದುಕುವುದೇ ಇಲ್ಲ.ಆದ್ದರಿಂದ ಬರಹಗಾರ ಮಿಕ್ಕೆಲ್ಲ ಕಲೆಯ ಶ್ರೀಮಂತಿಕೆಯಿಂದ ಬಡವನಾಗಿ ಉಳಿದಿದ್ದಾನೆ. ಸಕಲ ನಲಿವಿನ ಭೋಗಗಳು ಕನಸುಗಳು ಮಾತ್ರ ಅವನ ಪಿಸುಮಾತಾಗಿರುತ್ತವೆ..ಆದ್ದರಿಂದ ಅವನಿಂದ ತನ್ನ ಪೀಳಿಗೆ ಮಾತ್ರವಲ್ಲ  ಮುಂದಿನ ಪೀಳಿಗೆಗೂ ಉಳಿಯುವ ಬರಹದ ಮಾತುಗಳು ಉಳಿಯುತ್ತವೆ. ಸಾಹಿತ್ಯ ಜಗತ್ತಿನ ಎಲ್ಲಾ ಕಲೆಗಳ ಅನುಭವದ ಪಟ್ಟಿ. ಅದು ಅವನ ಮನಸ್ಸಿನ ಭಾಷೆಯ ಅಳೆತೆಗೋಲು. ಅದಕ್ಕೆ ಯಾವುದೇ ಸಮ್ಮಾನವೂ ಸರಿಸಮಾನವಲ್ಲ. ಮನಸ್ಸಿನ ಅಸ್ತವ್ಯಸ್ತ ಭಾರಗಳು ಇಂದು ಮತ್ತು ನಾಳೆಗಳಿಗೆ ಬದುಕುವ ಪಾತ್ರಗಳು ಸಾಹಿತ್ಯವಾಗುತ್ತವೆ.
-ರವಿ ಮೂರ್ನಾಡು.

ಶನಿವಾರ, ಆಗಸ್ಟ್ 25, 2012

ಬಾಗಿಲು.....!

ಎಂ. ಎಸ್. ಮೂರ್ತಿ 
ಆ ಬಾಗಿಲೊಳಗೆ
ಯಾರೋ ಕಟ್ಟಿದರು
ಅರಿಯದ ಜಗತ್ತು
ಹೊರಗೆ ಮತ್ತೊಂದು !

ಹೊರ ಬರುವ ಧಾವಂತಕೆ ನಾನು
ಒದ್ದಾಟಕೆ ಕದ ತೆರೆದ ಅವ್ವ
ಅಳುತ್ತಿದ್ದೆವು ಆ ಶುಭದಿನ !
ಕರುಳ ಬಳ್ಳಿಗೆ ಕತ್ತರಿ ಸಿಕ್ಕಿಸಿ
ಸ್ವಾಗತವೆಂದು ನಕ್ಕರು ಜನ !

ಬೆಳಕು ಬೊಗಸೆ ಬಿಚ್ಚಿದಾಗ
ತೆರದಿದ್ದೇನೆ ಹಣತೆ ಕಣ್ಣು
ಓಡಿಸುತ್ತಾ ಕತ್ತಲು !
ನನಗಿಟ್ಟ ಹೆಸರಿನ ಚೌಕಟ್ಟಿನೊಳಗೆ
ಉರುಳಿದಂತೆ ನನ್ನ ಜಗತ್ತು !


ಮೊಲೆ ಹಾಲು ಕಲಿಸಿದ ಹಸಿವಿಗೆ
ನಡೆದು ಎಡವಿ ಓಡಿದ್ದೇನೆ ಬೆವತು
ಬಾಯಾರಿ ಕುಡಿದು ನೀರು
ಚಳಿಯೆಂದು ಬಡಬಡಿಸಿ
ಬಿಸಿಯೇರಿ ತಂಗಾಳಿಗೆ ತೆರೆದು !

ಕತ್ತಲೆಯಂತೆ ಬೆತ್ತಲೆ ನಾನು
ಜ್ಞಾನದ ಬೆಳಕಿನ ಭಿಕಾರಿ
ಹೂವಾಗಿ ಮೋಹಕೆ ಅರಳಿ
ಬಿದ್ದ ಬೀಜಕೆ ಬೇರಾಗಿ-
ಕಟ್ಟಿದ್ದೇನೆ ಮನೆ-ಸಂಸಾರ-ಅಧಿಕಾರ
ಸುಕ್ಕು ಕಾಲುವೆಗೆ ಅನುಭವಗಳ ಸುರಿದು !

ಈ ಬಾಗಿಲ ಹೊರಗೆ
ನಾನೇ ಕಟ್ಟಿದ ಜಗತ್ತು
ಒಳಗೆ ಗೊತ್ತಿಲ್ಲದ ಮತ್ತೊಂದು !

ಈಗ ದಣಿದಿದ್ದೇನೆ...

ಹೋಗಲಾರದ ನೋವಿಗೆ ನಾನು
ಹೆಣಭಾರಕೆ ಗರ್ಭ ತೆರೆದ ಮಣ್ಣು
ಮೌನವಾದೆವು ಆ ದುಃಖ್ಖ ದಿನ !
ಮೂರಡಿ ಮಣ್ಣಿಗೆ ಹೂಗಳ ಚೆಲ್ಲಿ
ಶ್ರಾದ್ದವೆಂದು ಕೈತೊಳೆದರು ಜನ !
-ರವಿ ಮೂರ್ನಾಡು.

ಭಾನುವಾರ, ಆಗಸ್ಟ್ 19, 2012

ಅವರಿಬ್ಬರೂ-ನಾನು-ನೀನು

ಚಿತ್ರ ಕೃಪೆ: ಗೂಗಲ್

ಅವರಿಬ್ಬರೂ ಕಾಯುತ್ತಿದ್ದರು
ಒಬ್ಬ ಅಂಗಡಿಯಲಿ ದಿನಸಿ ಕಟ್ಟುತ್ತಾ
ಇನ್ನೊಬ್ಬ ಕ್ಯಾಲಿಫೋರ್ನಿಯಾದ ಗೋಪುರದಲಿ
ಬಾವಲಿಯಾಗುತ್ತಾ
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು !

ಗಿರಾಕಿಗಳು ಬರುತ್ತಿದ್ದರು
ದಿನಸಿ ಖಾಲಿಯಾಗುತ್ತಿತ್ತು !
ಮಂದಿ ಮರೆಯಾಗುತ್ತಿದ್ದರು
ಹಗಲು ಸಾಯುತ್ತಿತ್ತು !

ನೀನು ಬರಲಿಲ್ಲವೆಂದು
ಅವನು ಅಂಗಡಿ ಬಾಗಿಲು ಮುಚ್ಚಿ
ಹೊರಟು ಹೋದ !
ಇವನು ಗೋಪುರದಲಿ ಮುಖ ಮುಚ್ಚಿ ಮಲಗಿದ !
ಅವರಿಗೆ ರಾತ್ರಿಯಾಗಿತ್ತು
ಆ ಶುಭದಿನದಂದು !

ನಾನೊಬ್ಬ ಇಲ್ಲಿ ಕಾಯುತ್ತಿದ್ದೆ
ಒಂಟಿ ಕೋಣೆಯಲಿ ನೀನು ನನ್ನವಳೆಂದು !
ಶಬ್ದಗಳ ತಿಕ್ಕಾಟದಲಿ ಕವಿತೆಯೆಂದು
ಆ ನಿನ್ನ ಹುಟ್ಟುಹಬ್ಬದ ಶುಭದಿನದಂದು !

ಹಲ್ಲಿ ಲೊಚಗುಟ್ಟಿತು-ಕತ್ತಲೆಯ ತಬ್ಬಿತು
ರಾತ್ರಿ ಹನ್ನೆರಡಾಯಿತು ಕತ್ತಲೆಯ ಕರೆಯಿತು
ನೀನು ಬೆಳಕು ತರುವೆಯೆಂದು
ನಿನ್ನೆ ಹಗಲನ್ನು ನುಂಗಿದ ರಾತ್ರಿಯ ದೂರಲಿಲ್ಲ !
ತೊಲಗಾಚೆಯೆಂದು
ಇಂದಿನ ರಾತ್ರಿಯ ಹೊರದೂಡಲೂ ಇಲ್ಲ !
ನನಗೆ ರಾತ್ರಿ ಬೇಕಿತ್ತು
ಆ ಶುಭದಿನದಂದು !

ಈಗ.. ನಿನ್ನಲ್ಲಿ ಪ್ರಶ್ನೆ ಗೆಳತಿ
ಆ ದಿನ ನೀನು
ರಾತ್ರಿಯೆಂದು ಮಲಗಿದವರಿಗೆ
ಮರಗುವ ಹೃದಯವೋ ?
ಬದುಕುವ ಹಗಲೋ ?
ಆ ರಾತ್ರಿ ಭಾರಿಸಿ ಮರೆಯಾದ
ಗಂಟೆಯ ಶಬ್ದವೋ
ನನ್ನ ರಾತ್ರಿಯೋ ?!
-ರವಿ ಮೂರ್ನಾಡು.

ಬುಧವಾರ, ಆಗಸ್ಟ್ 1, 2012

ಎರಡು ಚಿತ್ರಗಳು-ಎರಡು ಕವಿತೆ



ರೇಖಾ ಚಿತ್ರ:ಎಂ.ಎಸ್.ಮೂರ್ತಿ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !

ಕಣ್ಣು ಬಂತು ಚಳಿಬಿಸಿಗೆ
ಆಕಳಿಸಿ ಮುಲುಕುಗಳು
ತೊಟ್ಟಿಕ್ಕಿದ ಹನಿಯಲ್ಲೂ
ತಿಕ್ಕಿ ಸಿಲುಕುಗಳು !
ಶ್ರಾವಣ ಬಂತೆಂದರೆ..
ಮುಚ್ಚಳಿಕೆಯೊಳಗೂ…
ಚಳಿಯನರಸುವ ಬಿಸಿ !

ಖಂಡ ಖಂಡವೂ ಅವನು
ಮಂಜುಗೆಡ್ಡೆ… ಹಗುರ
ಅವಳ ಖಂಡದ ಕೆಂಡಕೆ
ಕರಗಿ ಕಳೆವ ಭಾರ !

ಗಂಡೊಂದು ಅರ್ಧ
ಬಂದಾಗ….
ಇನ್ನರ್ಧ ಹೆಣ್ಣು ಕರಗಿದಾಗ
ಭೂಮಿ ದುಂಡಗಿದೆ
ಅರ್ಧಗಳು ಒಂದಾದಾಗ !

ಇಗೋ ಇಲ್ಲಿ ಭುವಿ
ಮೇಲೆ ಭಾನು
ಝಣ ಝಣ ಬಿಸಿಲು
ಜಿಟಿ ಜಿಟಿ ಮಳೆಗೆ
ತೊರೆ-ನೆರೆಯೆದ್ದ ನದಿ
ಹರಿದು ಜೀವದ ಹಸಿರು
ಎಲೆಗೆ ಹನಿ ಬೆವರು !
ತೊಟ್ಟಿಕ್ಕಿ ತೆನೆ ಪೈರು
ಗಾಳಿ ತೀಡಿ ಮುಂಗುರುಳು !

ಈಗ….
ತುಟಿಯಿಟ್ಟ ಮಗುವಿಗೆ
ಬಿಸಿ ಬಿಡದಷ್ಟು ಮಡಿಲ ಪ್ರೀತಿ !
-ರವಿ ಮುರ್ನಾಡು

ನಮ್ಮ ಹೆಸರು ಹಸಿರಿಲ್ಲದ ಬೆತ್ತಲು..!
ಬದುಕಲಾರೆ ದೊರೆಯೇ
(ಚಿತ್ರ ಕೃಪೆ:ಅವಧಿ ಮಾಗ್)
ನೀರಿದ್ದರೂ ಕುಡಿಯಲಾರೆ
ಹಸಿವಿದ್ದರೂ ನುಂಗಲಾರೆ
ಎದೆಯ ಕೆಳಗೆ !

ದಯೆಯಿದ್ದರೆ ಕೊಡಲಿಯಲಿ
ಕತ್ತರಿಸಿ ಬಿಡು
ನನ್ನ ಗಂಟಲು !

ಕೆಲಕ್ಕುರುಳಿದ ಮೇಲೆ
ಬಾಯ್ತೆರೆಯಲಾರೆ
ತೆರೆದರೆ...
ಸುರಿಸಿ ಬಿಡು
ಕೊಡಲಿ ನೆಕ್ಕಿದ ನೆತ್ತರು !

ಅಷ್ಟಷ್ಟು ಕಣ್ಬಿಟ್ಟ
ಮಾನದ ಪಕಳೆಗಳು
ಹಸಿರಿಲ್ಲದೆ ಸತ್ತಿವೆ
ನಮ್ಮ ಮಸಣದ ಹೆಣಕ್ಕೂ
ಹೆಸರು ಬೆತ್ತಲು !
-ರವಿ ಮೂರ್ನಾಡು,

ಭಾನುವಾರ, ಜುಲೈ 29, 2012

ಮಗುವಿನ ನಾಮಾಂಕಿತವೂ, ಹೆಸರುಗಳ ಹುಚ್ಚಾಟವು !


-ರವಿ ಮೂರ್ನಾಡು
ಒಂದು ಸುದ್ದಿ ಓದುತ್ತಿದ್ದೆ. ಅಬುಧಾಭಿಯಲ್ಲಿ ಅನಿವಾಸಿ ಸಿರಿಯಾ ದೇಶದ ದಂಪತಿ ತಮ್ಮ ಹೆಣ್ಣು ಮಗುವಿಗೆ "ಎಮಿರೇಟ್" ಅಂತ ನಾಮಕರಣ ಮಾಡಿದ್ದಾರೆ . ಇವರಿಗೇನು ಬೇರೆ ಹೆಸರೇ ಸಿಗಲಿಲ್ಲವೇ ಅಂತ ತಲೆ ಕೆರೆದುಕೊಳ್ಳುತ್ತೇವೆ. ಆಶ್ಚರ್ಯವೆಂದರೆ, ಈ ರೀತಿ ಹೆಸರಿಡಲು ಎಮಿರೇಟ್ ದೇಶದ ಮೇಲಿನ ಅತೀವ ಪ್ರೇಮವೇ ಕಾರಣವಂತೆ. ಅದರ ಹಿಂದೆ ಪ್ರಚಾರದ ಹಂಗು ಇತ್ತು ಅನ್ನೋದು ಇನ್ನೊಂದು ಮಾತು. ಅಂತೂ ಈ ದಂಪತಿ ಮತ್ತು ಎಮಿರೇಟ್ ಎಂಬ ಮಗು ಈಗ ಹೆಚ್ಚು ಪ್ರಚಾರಕ್ಕೆ ಸಿಕ್ಕಿದೆ. ಅಂದ ಹಾಗೆ ಎಲ್ಲರಿಗೂ ರಾಷ್ಟ್ರದ ಮೇಲೆ ಪ್ರೇಮ ಹೆಚ್ಚಾಗಿ ಇಡೀ ದೇಶದ ಹೆಸರು ಒಂದು ಮಗುವಿಗೆ ಇಡುವುದಾದರೆ ಇದಕ್ಕೊಂದು ಕಾನೂನು ಬರಬಹುದೇ ? ಏಕೆಂದರೆ, ರಾತ್ರಿ ಒಂದು ಕಾನೂನು, ಮರುದಿನ ಬೆಳಿಗ್ಗೆ ಇನ್ನೊಂದು ಕಾನೂನು ಎಮಿರೇಟ್ ರಾಷ್ಟ್ರದಲ್ಲಿದೆ. ದೇಶದ ಮೇಲಿನ ಅಭಿಮಾನಕ್ಕೆ ಎಲ್ಲರೂ ತಾವು ವಾಸಿಸುತ್ತಿರುವ ನಗರ-ಪಟ್ಟಣ, ಗಲ್ಲಿಗಳು, ಮತ್ತೆ ಇನ್ನೊಂದಷ್ಟು "ಎಮಿರೇಟ್" ಎಂಬ ಹೆಸರುಗಳು ಮಕ್ಕಳಿಗೆ ಇಡುತ್ತಾ ಹೋದರೆ ದೇಶವನ್ನು ಮತ್ತು ಅಲ್ಲಿರುವ ಪ್ರಜೆಗಳನ್ನು ಮುಂದೆ ಗುರುತಿಸುವುದಾದರೂ ಹೇಗೆ ಎಂಬ ಪ್ರಶ್ನೆ ಬಂತು.

ಭಾರತದಲ್ಲಿ ಇಂತಹದ್ದು ಕೇಳಿಲ್ಲ ಅನ್ನಿಸುತ್ತದೆ. ತಾಯಿಯನ್ನು ಪೂಜಿಸುವ ಪ್ರತೀಕವಾಗಿ ಹೆಣ್ಣು ಮಕ್ಕಳಿಗೆ ಭಾರತಿ ಅಂತ ಹೆಸರು ಇದೆ. ಭಾರತ ಅಂತ ತಂದೆಯ ಪ್ರತೀಮೆಗಳು ಬಂದಿಲ್ಲ. ಅದಕ್ಕಿಂತ ಹೆಚ್ಚಾಗಿ ಭಾರತದ ಶಾಸ್ತ್ರಬದ್ಧತೆ ನಾಮಕರಣಕ್ಕೆ ಹುಟ್ಟಿದ ನಕ್ಷತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದನ್ನು ಮೀರಿ ಕೆಲವು ಚಲನಚಿತ್ರ ನಟ-ನಟಿಯರು ಮತ್ತು ಕ್ರಿಕೇಟ್ ಆಟಗಾರರು ಅಭಿಮಾನಕ್ಕೆ ಹೆಸರುಗಳಾಗಿ ಗುರುತಿಸಿಕೊಂಡಿವೆ ಅಂದುಕೊಳ್ಳುತ್ತೇವೆ.  ಅಂತೂ ಶಾಸ್ತ್ರಬದ್ಧ ನಕ್ಷತ್ರಗಳು ಭಾರತವನ್ನು ಅಡ್ಡಾದಿಡ್ಡಿ ಅಭಿಮಾನಕ್ಕೆ ಅವಕಾಶ ಕೊಡಲಿಲ್ಲ. ನಾಮಾಂಕಿತ ಮನುಷ್ಯನ ಶ್ರೇಷ್ಠತೆಯಲ್ಲಿ ಒಂದು. ಅದು ಅವನ ಹುಟ್ಟನ್ನು ಪ್ರತಿನಿಧಿಸುತ್ತವೆ ಮತ್ತು ಅವನ ಬದುಕನ್ನು. ಈ ಹೆಸರುಗಳ ಬಗ್ಗೆ  ತುಂಬಾ  ಕಾಡಿದ ಪ್ರಶ್ನೆ ಎಂದರೆ ಈ ಹೆಸರೇ ಮನುಷ್ಯರಿಗೆ ಇಲ್ಲದಿದ್ದರೆ ಗತಿ ಏನು?

ಇವತ್ತಿನ ಜಾಯಮಾನದಲ್ಲಿ ಮನೆಯ ನಾಯಿಗೆ, ಬೆಕ್ಕಿಗೆ , ಹಸು-ದನಗಳಿಗೆ ಹೆಸರಿಟ್ಟು ಪುಣ್ಯ ಕಟ್ಟಿಕೊಂಡಿದ್ದೇವೆ ನಾವು. ಹೆಸರಿಡಿದು ಕರೆದಾಗ ಅವುಗಳು ಮಾನ್ಯ ಮಾಡಿ ನಮ್ಮ ಬಳಿ ಬರುವುದಂತೂ ಇದ್ದೇ ಇದೆ.ಒಂದು ಪಕ್ಷ ಮನೆಯಲ್ಲಿರುವ ಮಂದಿಗೂ ಈ ಪ್ರಾಣಿಗಳಿಗೂ ಒಂದೇ ಹೆಸರಿದ್ದರೆ, ಕರೆಯುವಾಗ ಎಚ್ಚರಿಕೆಯಿಂದ ಇರಬೇಕಾಗಬಹುದು. ಹೆಸರಿಡಿದು ಕರೆದಾಗ ನಾಯಿ ಎದುರಿನಲ್ಲಿ ಬಾಲ ಅಲ್ಲಾಡಿಸುತ್ತಲೋ, ಬೆಕ್ಕು "ಮಿಯಾಂ" ಅಂದರೆ ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಹೆಚ್ಚು ಪ್ರೀತಿ. ನಾಯಿ ತುಂಬಾ ನಿಯತ್ತಿನ ಪ್ರಾಣಿ,ಮನುಷ್ಯನ ಮನಸ್ಸಿಗೆ ಒಗ್ಗಿಕೊಂಡು ಹೋಗುವ ಪ್ರಾಣಿ. ಅದಕ್ಕೊಂದು ಮನುಷ್ಯನ ಹೆಸರಿಡಿದು ಕರೆಯುವುದರಲ್ಲಿ ಅರ್ಥವಿದೆ ಅನ್ನಿಸುತ್ತದೆ. ಕೆಲವೊಮ್ಮೆ ನಾಯಿ-ನಾಯಿಗೆ, ಬೆಕ್ಕು ಬೆಕ್ಕಿಗೆ ಮದುವೆ ಮಾಡಿ ನಾಯಿ-ಬೆಕ್ಕು ಸಮಾರಂಭದ ಊಟ ಮಾಡಿದ  ಮನುಷ್ಯರ ವಿಶ್ವ ದಾಖಲೆ ಇದೆ. ಈ ನಾಯಿ-ಬೆಕ್ಕುಗಳು ಪತಿ- ಪತ್ನಿಯರಂತೆ ಬದುಕಿದರೆ ಒಳ್ಳೆಯದು. ಅದಲ್ಲದೆ ಅದರ ಬುದ್ದಿ ಅದು ತೋರಿಸಿದರೆ ಅದರ ಮದುವೆ ಊಟ ಮಾಡಿದವರಿಗೆ ವಾಂತಿ ಬರುವುದಂತೂ ಸತ್ಯ.

ಸಾಮಾನ್ಯವಾಗಿ ಮಗು ಹುಟ್ಟಿದಾಕ್ಷಣ ಅದಕ್ಕೊಂದು ಹೆಸರಿಡಲು ಹರ ಸಾಹಸ ಪಡುವವರಿದ್ದಾರೆ. ಅದಕ್ಕೆಂದೇ ಇದನ್ನೇ ವ್ಯಾಪಾರಕ್ಕೆ ತಿರುಗಿಸಿ ಮಗುವಿನ ಹೆಸರುಗಳನ್ನು ಉಲ್ಲೇಖಿಸುವ ಪುಸ್ತಕಗಳೂ ಮಾರುಕಟ್ಟೆಯಲ್ಲಿ ಸಿಗುತ್ತವೆ. ದೇಗುಲ,ಮಸೀದಿ,ಚರ್ಚುಗಳ ಮುಖ್ಯಸ್ಥರಿಗಂತೂ ಈ ಕೆಲಸ ಇದ್ದೇ ಇದೆ. ನಮ್ಮ ಭಾರತ ದೇಶದಲ್ಲಂತೂ ಇದಕ್ಕೆಂದೇ ಕಂದಾಚಾರ, ಶಾಸ್ತ್ರಗಳು, ನಕ್ಷತ್ರಗಳು ಒಂದರ ಮೇಲೊಂದು ಬರುವುದುಂಟು. ಎಷ್ಟೋ ಮಂದಿ ಮಗು ಹುಟ್ಟುವುದಕ್ಕೆ ಮೊದಲು ಹೆಸರು ಹುಡುಕುವ ಪರದಾಟವನ್ನು ಕಾಣಬಹುದು.  ಕೆಲವು ತಿಂಗಳ ಹಿಂದೆ ಹಾಗೇ ಆಯಿತು. ಕ್ಯಾಮರೂನಿನಲ್ಲಿ ಭಾರತೀಯನೋರ್ವ ನಮ್ಮ ಕಂಪೆನಿಯಲ್ಲಿ ಇದ್ದಾರೆ. ಅವರ ಹೆಂಡತಿ ತುಂಬು ಏಳು ತಿಂಗಳ ಗರ್ಭೀಣಿ. ಇವನಿಗೆ ಹುಟ್ಟುವ ಮಗುವಿಗೆ ಹೆಸರು ಹುಡುಕುವ ಕೆಲಸ ಕಳೆದ ಮೂರು ತಿಂಗಳಿಂದ ನಡೆಸಿದ್ದಾನೆ. ಕೆಲವರಂತೂ ನಕ್ಕಿದ್ದೇ ನಕ್ಕಿದ್ದು. ಮಗು ಹೆಣ್ಣೋ ಗಂಡೋ ಅದು ಗೊತ್ತಿಲ್ಲ. ಇದ್ದ ಬದ್ದ ಅಂತರ್ಜಾಲ ಸೈಟುಗಳನ್ನು ಹುಡುಕುವುದೇ ಕೆಲಸ. ಮಗುವಿನ ಹೆಸರುಗಳ ಪುಸ್ತಕಗಳನ್ನು ಕೂರಿಯರ್ ಮೂಲಕ ತರಿಸಿಕೊಂಡಿದ್ದ. ಹೆಂಡತಿಗೆ ಮಗುವಿನ ಸುರಕ್ಷಿತ ಹೆರಿಗೆ ಕನಸು.ಈತನಿಗೆ ಹೆಸರು ಹುಡುಕುವ ಕೆಲಸ. ಅಂತೂ ಮಗು ಹುಟ್ಟಿದೆ. ಎಲ್ಲವನ್ನೂ ಬಿಟ್ಟು ಕಡೆಗೆ ನಕ್ಷತ್ರದ ಆಧಾರದಲ್ಲಿ ಹೆಸರು ಇಟ್ಟಿದ್ದಾನೆ. ಮಗು ನಕ್ಷತ್ರದ ಹಾಗೇ ಇದೆ.

ಮಗುವಿಗೊಂದು ಹೆಸರಿಡುವ ಸಮಾರಂಭವೂ ಬಹಳ ಸಂತೋಷವಾಗಿ ನಡೆಯುತ್ತವೆ. ಅಂದ ಹಾಗೆ ಈ ಜಗತ್ತಿನಲ್ಲಿ ಹುಟ್ಟಿದಾಗ ಅದನ್ನು ಪ್ರತಿನಿಧಿಸುವ ಹೆಜ್ಜೆ ಗುರುತು ಈ ಹೆಸರು. ದೇಹ ತ್ಯಾಗ ಮಾಡಿದವರನ್ನು ಈ ಹೆಸರುಗಳು ಇತಿಹಾಸದುದ್ದಕ್ಕೂ, ನೆನಪಿನುದ್ದಕ್ಕೂ ಪ್ರತಿನಿಧಿಸುವ ತಾಕತ್ತನ್ನು ಹೊಂದಿರುವ ಈ ಹೆಸರು, ಅವರ ನಂತರವೂ ಅವರ ಬದುಕನ್ನು ಈ ಜಗತ್ತಿನಲ್ಲಿ ಪ್ರತಿನಿಧಿಸುತ್ತವೆ. ಹೆಸರಿನ ಬಗ್ಗೆ ಬೇಕಾದಷ್ಟು ಗೊಂದಲಗಳಾಗುವುದುಂಟು, ಅದರಂತೆ ಅಪಹಾಸ್ಯಕ್ಕೂ ದಾರಿಗಳಿವೆ. ಹೆಸರಿಗೆ ತಕ್ಕ ಹಾಗೇ ಅವನ ಅಥವ ಅವಳ ಚಟುವಟಿಕೆ,ಸ್ವಭಾವಗಳು ವಿರುದ್ಧವಾಗಿರುತ್ತವೆ. ತಂದೆ-ತಾಯಿ ಇಟ್ಟ ಹೆಸರು ಒಂದಾದರೆ ಇನ್ನೊಂದು ಹೆಸರು ಅವರ ಸ್ವಭಾವವನ್ನು ಹಣೆಪಟ್ಟಿಯನ್ನಾಗಿಸುತ್ತದೆ.  ಫೇಸ್ಬುಕ್ಕು-ಟ್ವಿಟ್ಟರ್ ಅಂತರ್ಜಾಲಗಳಲ್ಲಿ ಇದು ಸಾಧ್ಯವಾದಷ್ಟು ತಲೆಕೆಳಗೆ ಮಾಡುವ ಹೆಸರುಗಳನ್ನು ಕಾಣುತ್ತೇವೆ. ಕೆಲವು ಹೆಸರುಗಳಂತೂ "ನಾನು ನನ್ನಿಷ್ಟ" , "ನಿಮ್ಮಿಷ್ಟ ನನ್ನಿಷ್ಟ", "ನಾನು ನಿಮ್ಮ ಸ್ವೇಹಿತ" ಇಂತಹ ಹೆಸರುಗಳು ಅವರಿಷ್ಟದ ವಿಕೃತ್ತ ಜಗತ್ತನ್ನು ಪ್ರತಿನಿಧಿಸುತ್ತವೆ. ಇನ್ನೂ ಕೆಲವು ಗಂಡು ಹೆಣ್ಣಾಗಿ ಬರುವುದು, ಇನ್ನೂ ಕೆಲವು ಹೆಣ್ಣು ಗಂಡಾಗಿ ಬರುವುದು. ಮುಖ-ಮುಖವೇ ಕಾಣದ ಅವರದ್ದೇ ಆದ ವಿಚಿತ್ರ ಜಗತ್ತಿನಲ್ಲಿ ಇಂತಹ ನಪುಂಸಕತ್ವಗಳು ಬೆತ್ತಲೆ ಹೆಸರುಗಳಾಗಿ ಬಟ್ಟೆಯಿಲ್ಲದೆ ಸಂಚರಿಸುತ್ತಿರುತ್ತವೆ. ಇದು ಅಧುನಿಕ ಶಿಲಾಯುಗದ ಜನರ ಇನ್ನೊಂದು ಮುಖ. ಕಡಿವಾಣವಿಲ್ಲದೆ ನಾಡಿನ ಸಂಸ್ಕೃತಿಯನ್ನು ವಿನಾಶದಂಚಿಗೆ ತಳ್ಳಿದ ಫ್ಯಾಶನ್ ಲೋಕದ ಕೊಡುಗೆ. ಅದರಲ್ಲಿಯೂ ಟೀವಿ ಮಾಧ್ಯಮ, ಅರೆಬೆತ್ತಲೆ ಸಿನೇಮಾಗಳು ಯುವ ಜನತೆಯನ್ನು ಕನಸು-ಬದುಕನ್ನು ಎತ್ತಲೋ ಕೊಂಡೊಯ್ಯುವುದರ ಅಶುಭ ಸೂಚನೆಗಳು. ಕೆಲವೊಮ್ಮೆ ಗಂಡು-ಹೆಣ್ಣು ನಾಲ್ಕು ಗೋಡೆಯಲ್ಲಿ ಸುತ್ತಾಡುವ ಅರೆಬೆತ್ತಲೆಗಳು ಸಾರ್ವಜನಿಕವಾಗಿ ತೆರೆದು ನಡೆಯುತ್ತಿರುತ್ತವೆ. ಅವರ ಹೆಸರು ಸುಂದರವಾಗಿರುತ್ತವೆ. ಆದರೆ ಬೀದಿಯಲ್ಲಿ ನಡೆಯುವುದೂ ಮಾತ್ರ ಇನ್ನೊಂದಾಗಿರುತ್ತವೆ. ಅದೇ ರೀತಿ ಸಿನೇಮಾ ನಟಿಯರೂ. ಇತ್ತೀಚೆಗೆ ಸುದ್ದಿಯಾದ ಸ್ವಾಮಿ ನಿತ್ಯಾನಂದನ ಭಾವಚಿತ್ರ ನೋಡಿ, ಸದಾ ನಗುತ್ತಿರುತ್ತದೆ. ಕೆಲಸ ಮಾತ್ರ ಹುಬ್ಬುಗಂಟಿಕ್ಕುವ ರೀತಿಯಲ್ಲಿದೆ. ಇದು ಹೆಸರು ಮತ್ತು ವ್ಯಕ್ತಿಗಳ ನಡುವೆ ಇರುವ ವ್ಯವಹಾರಗಳು.

         ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಕೆಲವೆಡೆ ತರಕಾರಿಗಳ ಹೆಸರು, ಅಡುಗೆ ಸಾಮಾಗ್ರಿಗಳು ಮನುಷ್ಯರನ್ನು ಪ್ರತಿನಿಧಿಸುತ್ತಿರುವುದನ್ನು ಕಾಣುತ್ತೇವೆ. ಬೆಳ್ಳುಳ್ಳಿ, ಈರುಳ್ಳಿ,ಬೆಂಡೆ,ಸಂಬಾರ, ಮೆಣಸಿನಕಾಯಿ, ಬೆಲ್ಲ,ಸೌತೆ ಏಲಕ್ಕಿ ಇತ್ಯಾದಿ. ಇದು ಹೇಗೆ ಬಂತು ಅಂತ ಇಟ್ಟವರನ್ನೇ ಕೇಳಬೇಕು. ಕಗ್ಗತ್ತಲೇ ಖಂಡ ಆಫ್ರೀಕಾದಲ್ಲಿ ಇದರ ಜಾಡು ಹುಡುಕಿದರೆ ನಗುವೇ ಬರುವುದು. ನಮ್ಮ ಕಂಪೆನಿಯಲ್ಲಿ ಉದ್ಯೋಗಿಗಳಿಗೆ ಅಡುಗೆ ಮಾಡಿ ಕೊಡುವ ಕೆಲಸದವನಿದ್ದಾನೆ. ಅವನ  ಹೆಸರು " ಸಂಡೇ" ಅಂತ. ಇದರ ಬಗ್ಗೆ ಕುತೂಹಲಕ್ಕಾಗಿ ಅವನಲ್ಲಿ ಪ್ರಶ್ನೆಗಳನ್ನು ಕೇಳಿದ್ದೆ. ನಂತರ ಬಂದದ್ದೇ ಬೇರೆ. ಅವನು ಹುಟ್ಟಿದ್ದು ಭಾನುವಾರ ದಿನವಂತೆ. ಅವನ ತಮ್ಮ ಹುಟ್ಟಿದ್ದು ಶುಕ್ರವಾರವಂತೆ, ಅದಕ್ಕೆ"ಫ್ರ್ಯ್ ಡೆ" ಅವನ ಹೆಸರಂತೆ. ಕ್ಯಾಮರೂನಿನಲ್ಲಿ ಇಂತಹ ಬೇಕಾದಷ್ಟು ವಾರದ ದಿನಗಳ ಹೆಸರುಳ್ಳ ಮಂದಿ ಸಿಕ್ಕಿದರು. ಅದೇ ರೀತಿ ವರ್ಷದ ಹನ್ನೇರಡು ತಿಂಗಳುಗಳ ಜನವರಿ, ಫೆಬ್ರವರಿ, ಮಾರ್ಚ್ ಅಂತ ಹೆಸರುಳ್ಳವರು. ಅದರಲ್ಲೂ ಮೇ ತಿಂಗಳು ತುಂಬಾ ಇವೆ. ಅಲ್ಲದೆ, ಅಂಗ್ಲ ಅಕ್ಷರಗಳ ಎಬಿಸಿಡಿ ಹೀಗೆ ಪ್ರತಿನಿಧಿಸುವ ಹೆಸರುಗಳು, ಸಂಖ್ಯೆಗಳನ್ನು ಪ್ರತಿನಿಧಿಸುವ "ಒನ್, ಟು, ತ್ರೀ... ಹೀಗೆ  ಆಂಗ್ಲ ಅಕ್ಷರಗಳಲ್ಲಿ ಬರುವ ಸಂಭೋದನೆಗಳು ಇಲ್ಲಿ ಚಾಲ್ತಿಯಲ್ಲಿವೆ. ಅದು ನೈಜೀರಿಯಾ, ಇಥಿಯೋಪಿಯಾ, ಉಗಾಂಡ, ಛಾಡ್, ಸೆಂಟ್ರಲ್ ಆಫ್ರೀಕಾ, ಮೊಜಾಂಭಿಕ್, ಕಾಂಗೋ ಮುಂತಾದ ಆಫ್ರೀಕಾದ ರಾಷ್ಟ್ರಗಳಲ್ಲಿ ಇವೆ.  ಕೆಲವರು ಅವರವರ ರಾಷ್ಟ್ರದ ಹೆಸರನ್ನು ಇಟ್ಟುಕೊಂಡಿದ್ದಾರೆ. ಕೆಲವರಿಗೆ " ಕಾಫಿ" ಸೇರಿದಂತೆ ಪ್ರಚಲಿತವಿರುವ ಕೋಕಾ, ಕೋಲ, ಮುಂತಾದ ಪಾನೀಯಗಳ ಹೆಸರುಗಳೂ ಇವೆ.

ಆದರೆ ಹೆಸರುಗಳು ಮತ್ತು ಹೆಸರಿನ ಮಹತ್ವಗಳು ವ್ಯಕ್ತಿಯಲ್ಲಿ ಕಾಣುವುದೇ ಇಲ್ಲ. ಭಾರತದಲ್ಲಿ ಬೇಕಾದಷ್ಟು ಇಂತಹ ಹೆಸರುಗಳನ್ನು ಕಾಣುತ್ತೇವೆ. ನಮ್ಮ ಕೈಯಳತೆಯ ಕರ್ನಾಟಕದಲ್ಲಿಯೂ ಇಲ್ಲ ಅಂತ ಹೇಳುವುದೇ ಇಲ್ಲ.ಸಿನೇಮಾ ಹುಚ್ಚುಗಳು ಮಗುವಿನ ಮೇಲೆ ಬರುವುದುಂಟು. ಕ್ರಿಕೇಟ್ ಹುಚ್ಚುಗಳು ಅಭಿಮಾನದ ಪ್ರತೀಕವಾಗಿ ಬರುವುದುಂಟು. ಅದೆಲ್ಲಾ ನಮ್ಮ ಮಗುವೂ ಅವರಂತೆ ಹೆಸರು ಪಡೆಯಲಿ ಅನ್ನುವ ಭಾವವೋ ಏನೋ. ಶ್ರಮವಿಲ್ಲದೆ ಸಮಾಜ ಗುರುತಿಸುವುದಾದರೂ ಹೇಗೆ?

ದೇವ-ದೇವತೆಗಳ ಹೆಸರಿಟ್ಟುಕೊಂಡವರು ದೇವರನ್ನೇ ನಂಬುವುದಿಲ್ಲ. ಸೌಂದರ್ಯ,ಸಂಸ್ಕಾರ, ಅಚಾರವನ್ನು ಪ್ರತಿನಿಧಿಸುವ ಹೆಸರುಟ್ಟುಕೊಂಡವರು ಅದರ ಗಂಧ ಗಾಳಿಯೇ ಸುಳಿಯದ ವ್ಯಕ್ತಿತ್ವಗಳೂ ಉಂಟು. ಮಾನವೀಯತೆಯನ್ನು ಪ್ರತಿನಿಧಿಸುವ ವ್ಯಕ್ತಿಗಳ ಹೆಸರುಗಳು ಇವತ್ತು ಪೊಲೀಸ್ ಠಾಣೆ, ಕೋರ್ಟು ಕಚೇರಿಗಳಲ್ಲಿ, "ವಾಂಟೆಡ್" ಪಟ್ಟಿಯಲ್ಲಿ ರಾರಾಜಿಸುತ್ತಿರುತ್ತವೆ. ದೇವರ ಹೆಸರಿಟ್ಟುಕೊಂಡವನ ಹೆಸರು ಅತ್ಯಾಚಾರದ ಸುದ್ದಿಯಲ್ಲಿರುತ್ತವೆ. ಭೃಷ್ಟಾಚಾರದ, ಲಂಚ ಪ್ರಕರಣಗಳಲ್ಲಿ ಕಾಣುತ್ತಿರುತ್ತೇವೆ. ತಂದೆ-ತಾಯಂದಿರಿಗೆ ಹೆಸರಿಡುವಾಗ ಇಂತಹದ್ದು ಸಂಭವಿಸುತ್ತದೆ ಅಂತ ಗೊತ್ತಿರುವುದೂ ಇಲ್ಲ. ಅಂತೂ ಹೆಸರುಗಳು ಮತ್ತು ವ್ಯಕ್ತಿಯ ವ್ಯಕ್ತಿತ್ವಕ್ಕೆ ಅಜಗಜಾಂತರ ವ್ಯತಾಸವಿರುತ್ತವೆ. ರಾಷ್ಟ್ರ ಮತ್ತು ರಾಜ್ಯಗಳ ಹೆಸರುಟ್ಟುಕೊಂಡವರಿಗೆ ಅಲ್ಲಿಯ ಚೌಕಟ್ಟಿನ ಕಾನೂನು ನಿಯಮಗಳೇ ಉತ್ತರ ನೀಡಬೇಕು. ಸಂಸ್ಥೆಗಳು, ಸಂಗೀತ, ಕಲೆ,ಸಾಹಿತ್ಯಕ್ಕೆ, ಉತ್ಪಾದನ ವಸ್ತುಗಳಿಗೆ "ಪೇಟೆಂಟ್" ಪಡೆದುಕೊಂಡಂತೆ ಪ್ರತಿಷ್ಠಿತ ವ್ಯಕ್ತಿಗಳು ತಮ್ಮ ಹೆಸರಿಗೆ, ರಾಷ್ಟ್ರಗಳು, ರಾಜ್ಯಗಳು ಪಡೆದುಕೊಂಡ ವಿಚಾರ ಇದುವರೆಗೆ ಕೇಳಿಲ್ಲ. ಪಡೆದುಕೊಳ್ಳುವ ಕಾಲ ಬರಬಹುದೇನೋ?