ಶನಿವಾರ, ಜುಲೈ 2, 2011

ಕೋಟಿ ಕತ್ತಲೆಯೊಳಗೆ


ಎಲ್ಲಾ ಮನಸ್ಸುಗಳು ಇರುಳಿಗೇ ಕಾಯುತ್ತಿವೆ
ಹಗಲು ಸಾಯಲು ಸೂರ್ಯ ಮಲಗಬೇಕು
ಮನೆ ಸೇರಲು ಹಕ್ಕಿ ಕರೆಯಬೇಕು
ಎಲ್ಲರಿಗೂ ನೆಮ್ಮದಿ ಕೊಡು ಇರುಳೇ..!

ದಿನ ಚಕ್ರ ಉರುಳಲು ಎಷ್ಟೊಂದು ಹೋರಾಟ
ಅತಿಥಿ ಸತ್ಕಾರಕ್ಕೆ ಮೂಡಣದಿ ಕೆಂಬಣ್ಣ
ಹಗಲು-ರಾತ್ರಿಯ ನಡುವೆ ಗುದ್ದಾಟ
ಮನೆ-ಮನದಲ್ಲಿ ಉರಿಯುತ್ತಿದೆ ನಗೆಯ ಹಣತೆ

ಸೂರ್ಯನ ಮುಸುಕಿನೊಳಗೆ ಭೂಮಿ ಮೌನ
ನೆಲ ಸೀಳಿದ ಹಳ್ಳ-ನದಿ-ತೊರೆ
ನಿಂತ ನೀರು ಕೆರೆ- ತುಂಬಿದೆ ಸಾಗರದ ಒಡಲು
ಇರುಳೇ ಎಚ್ಚರಿಸಿದರು ಸಾಗುತ್ತಿರಲಿ ಸೃಷ್ಠಿ

ನಿದ್ದೆಯ ಹಬ್ಬಕ್ಕೆ ಇರುಳು ಮುಚ್ಚಿದೆ ಕಣ್ಣು
ಜೀವದ ಉಸಿರು ಗಡಿಯಾರದ ಗಂಟೆ ಮುಳ್ಳು
ನೊಗ ಹೊತ್ತ ಜೀವಕ್ಕಿಲ್ಲ ದೇಹದ ಪರಿಚಯ
ತೆರೆಯಬಹುದೇ ಬಾಗಿಲು ಭಾಗ್ಯದ ಬದುಕಿಗೆ?!

ಪ್ರಕೃತ್ತಿಯ ಮಜಲುಗಳು ಅರ್ಥವಾಗದ ಭಾಷೆ
ಸಾಗುತ್ತಿರಲಿ ಹೀಗೆ ಕತ್ತಲೆ-ಬೆಳಕಿನ ತೇರು
ಅನಂತ ಪಯಣಕೆ ಅಷ್ಠ ದಿಕ್ಕೇ ಸಾಗರ
ಕರಿದೊಯ್ಯುವ ಸಾವೇ ನೋಯದಿರಲಿ ಜೀವ

ಸುತ್ತಲೂ ಹಬ್ಬುತ್ತಿದೆ ಕತ್ತಲೆ ಬಳ್ಳಿಯ ಬೇರು
ಕೋಟಿ ಕತ್ತಲೆಯೊಳಗೆ ಸಣ್ಣ ಬೆಳಕೇ ಧನ್ಯ
ಇದು ಜಗದೊಡೆಯನ ನಿಯಮ
ಅವನ ಬೊಗಸೆಯಲಿ ಜೀವ ಸಂಕುಲ ಮೌನ..
---------------------------------------------------------------
-ರವಿ ಮೂರ್ನಾಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ